ಕೆ ನೀಲಾ
ಹೀಗೆ ನೆನಪಾದೆ ಬಸವ;
ನೀಲಮ್ಮಗೆ ಶಿಶುವಾಗಿ,
ಮಡದಿ ಎಂಬ ಶಬ್ದ ನಿಶ್ಯಬ್ದವಾಗಿಸಿ ನೆನಪಾದೆ.
ಎನ್ನಪ್ಪನ ಕರದೊಳರಳಿದ
ಚೆಮ್ಮಾವುಗೆಯ ಶಿರಕೆ ಧರಿಸಿ
ಎದೆಗೆ ಬಿಗಿದಪ್ಪಿ ಕಣ್ಣೀರಾಗಿ ನೆನಪಾದೆ
ಅವ್ವನಂತೆ ಬಸವನೆ.
ಮತ್ತೂ ನೆನಪಾದೆ
ಎಲೆ ಬಸವ ಬಸವಣ್ಣ ಬಸವಪ್ಪನೆ
ಶರಣರಿಗೆ ತೋರಲು ಪ್ರತಿಯಿಲ್ಲವೆಂದವನೆ
ಆಪತ್ತು ಸುಖ ದುಃಖಗಳಿಗೆ
ಶರಣ ಸ್ಥಲದಲೂ
ನೆಲೆ ಸಿಗದೆ ಸಂಕಟದಿ
ಬೆಂದವನೆ ನೊಂದವನೆ
ಮತ್ತೂ ಅಲ್ಲಮನೆಂಬ ಪಣತಿಗೆ
ತೈಲವಾಗಿ ಲೋಕವನೇ ನಚ್ಚಿದವನೆ
ಹೀಗೆ ನೆನಪಾದೆ.

ವೇದಾಗಮ ಶಾಸ್ತ್ರ ಪುರಾಣಗಳ
ಕುಟ್ಟಿ ಕೆಡಹುತಲೇ
ಲೋಕಕಧಿಕ ಮಾದಾರ ಕುಲದ
ಹೆಮ್ಮೆಯ ಕೂಸಾಗಿ ನೆನಪಾದೆ.
ದೇಹ ದೇವಾಲಯದೊಳಗೆ
ಬೆವರ ಹನಿಯೇ ದೇವರಾಗಿ
ಅಲ್ಲಿಂದ ಉದ್ಭವಿಸಿದ
ಅರಿವಿಂಗೆ ಗುರುವಾಗಿಸಿ
ಅಟ್ಟೆಯ ಮೊನೆಯಲಿ ಪ್ರತ್ಯಕ್ಷನಾದ
ಶಿವನೆಂಬೊ ಶಿವನ
ರಜತ ಬೆಟ್ಟಕ್ಕೆ ಅಟ್ಟುವ ಧೂಳಯ್ಯನ
ಪಾದದರಿವಿಗೆ ಜಗವೇ
ಹಣೆ ಮಣಿಯುವಂತಾಗಿಸಿದವನೆ
ಹೀಗೆ ನೆನಪಾದೆ.
ಕಟ್ಟಿದ ಜಾತಿ ಗೋಡೆಯ ಒಂದೇ ಏಟಿಗೆ
ಟೊಳ್ಳೆಂಬುದ ರುಜುಗೊಳಿಸಿ,
ಸಂಕವ್ವೆ ಸತ್ಯಕ್ಕ ಕಾಳವ್ವೆಯರ
ಹೃದಯ ಹಾಡಲ್ಲಿ
ಜಗವ ಜೀಕಿದವನೆ
ಉಳ್ಳವರು ನುಡಿದಂತೆ ನಡೆಯದವರು

ಉರಿದುರಿದು ಕೆಡಹಿದರು
ಕಾಪಿಟ್ಟ
ಪಣತಿಯ ಒಡೆದು
ತೈಲ ಚೆಲ್ಲಿ
ಬತ್ತಿ ಆರಿದರೂ
ಹರಿವ ನೀರಲ್ಲಿ
ಸುಳಿವ ಗಾಳಿಯಲಿ
ಅಷ್ಟಕೂ ಉಸಿರ ತಿದಿಯಾಗಿ
ರಕ್ತ ಕಣವಾಗಿ
ಎಂದೂ ನಂದದ
ಕಣ್ಣ ಬೆಳಕಾಗಿ ನೀನಿರುವೆ ಬಸವನೆ
ಸಮತೆಯ ಕನಸುಣಿ
ಎಮ್ಮಯ ಕಾಮ್ರೇಡ್ ಬಸವನೆ.






0 Comments