ಕೆ ನಲ್ಲತಂಬಿ ಸರಣಿ- ಎವರೆಸ್ಟ್ ಎಂಬ ಒಬ್ಬ ಅಧಿಕಾರಿ..!

ಮೂಲ: ಎಸ್ ರಾಮಕೃಷ್ಣ 

ಕನ್ನಡಕ್ಕೆ: ಕೆ.ನಲ್ಲತಂಬಿ 

2

ಭೂಮಾಪನ ಕೆಲಸಕ್ಕಾಗಿ ‘ಥಿಯೋಡಲೈಟ್’ (Theodolite) ಎಂಬ ಸಮಾನಾಂತರ ಹಾಗೂ ಲಂಬ ಕೋನಗಳನ್ನು ಅಳೆಯುವ ಉಪಕರಣವನ್ನು ಇಂಗ್ಲೆಂಡಿನಿಂದ ಹಡಗಿನಲ್ಲಿ ಕೊಂಡು ತರಲಾಯಿತು. ಅದನ್ನು ಬಳಸಲು, ಸಮರ್ಥ ಎಂಜಿನಿಯರುಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು. ಮಾಪನದ ಕೆಲಸಗಳನ್ನು ಪ್ರಾರಂಭಿಸಲು ಬೆಟ್ಟದ ತುದಿಗಳನ್ನು ಹತ್ತಬೇಕು. ಆಗ ಅಳತೆ ಮಾಡುವ ಕಾರ್ಮಿಕರು ಹಲವರು ಗಾಯಗೊಂಡರು.  ಕೆಲಸದ ಸಮಯದಲ್ಲಿ ಒಮ್ಮೆ ಥಿಯೋಡಲೈಟ್ ಉಪಕರಣ ಜಾರಿ ಬಿದ್ದು ಒಡೆದುಹೋಯಿತು. ಭಾರತವನ್ನು ಅಳೆಯುವುದು ಅವರು ಎನಿಸಿದಂತೆ ಅಷ್ಟು ಸುಲಭವಾಗಿರಲಿಲ್ಲ. 

ವಿಲಿಯಮ್ ಲಾಂಬ್ಟನ್, (William Lambton) ಒಬ್ಬ ಸೇನಾಧಿಕಾರಿ. ಆದರೆ ಭೂಗೋಳದ ಸೂಕ್ಷ್ಮತೆಗಳನ್ನು ಅರಿತುಕೊಳ್ಳಲು ಬಹಳ    ಆಸಕ್ತಿ ಹೊಂದಿದ್ದರು. ಗಣಿತ ತಜ್ಞರೂ ಸಹ. ಅವರಿಂದ ಈ ಭೂಮಾಪನವನ್ನು ಉತ್ತಮವಾಗಿ ಮಾಡಲಾಯಿತು. ಭಾರತವನ್ನು ಅಳೆದು ಮುಗಿಸಲು 40 ವರ್ಷಗಳಿಗೂ ಹೆಚ್ಚಾಯಿತು. ಅಷ್ಟರಲ್ಲಿ ಸಾಕಷ್ಟು ಸಮಸ್ಯೆಗಳು. ಹೊಸ ಹೊಸ ಗೊಂದಲಗಳು. 

1808ನೇಯ ವರ್ಷ ತಂಜಾವೂರಿನಲ್ಲಿ ಭೂಮಾಪನ ಕೆಲಸ ನಡೆಯಿತು. ದೇವಸ್ಥಾನದ ಗೋಪುರದ ತುದಿಗೆ ಥಿಯೋಡಲೈಟ್ ಉಪಕರಣವನ್ನು ಹೊತ್ತುಕೊಂಡು ಹೋಗುವಾಗ ಅದು ಕೈಜಾರಿ ಕೆಳಗೆ ಬಿದ್ದು ಒಡೆದುಹೋಯಿತು. ಮತ್ತೊಂದು ಉಪಕರಣ ಬರುವವರೆಗೆ ಲಾಂಬ್ಟನ್ ಕಾಯುತ್ತಿದ್ದರು. 

ಚೆನ್ನೈಯಲ್ಲಿ ಕಾರ್ಯ ನಿರತವಾಗಿದ್ದ ಭೂಮಾಪನ ಇಲಾಖೆಯನ್ನು ಕಲ್ಕತ್ತಾದಲ್ಲಿ ಇದ್ದ ರಾಷ್ಟ್ರೀಯ ಭೂಮಾಪನ ಯೋಜನೆಯೊಂದಿಗೆ ಸೇರಿಸುವಾಗ ಉಂಟಾದ ನಿರ್ವಹಣೆಯ ಸಮಸ್ಯೆ ಮತ್ತು ಆರ್ಥಿಕ ಬಿಕ್ಕಟ್ಟು,  ಪ್ರಯಾಣಗಳ ಗೊಂದಲಗಳು ಮುಂತಾದುವುಗಳಿಂದ  ಲಾಂಬ್ಟನ್ ಬಹಳ ದೊಡ್ಡ ಹೋರಾಟವನ್ನೇ ಮಾಡಬೇಕಾಯಿತು. 

ಈ ಕೆಲಸಕ್ಕೆ ನೆರವಾಗಿರಲು 1818ನೇಯ ಇಸವಿಯಲ್ಲಿ ಜಾರ್ಜ್ ಎವರೆಸ್ಟ್ (George Everest) ಎಂಬ ಎಂಜಿನಿಯರನ್ನು ನೇಮಕ ಮಾಡಲಾಯಿತು. ಮಧ್ಯ ಭಾರತದವರೆಗೆ ಕೆಲಸ ಮುಗಿದಿತ್ತು. ಆಗ ಲಾಂಬ್ಟನ್ ನಿಧನರಾದರು. ಆಗ ಅವರಿಗೆ ವಯಸ್ಸು 70. ಅದರ ನಂತರ ಸಂಪೂರ್ಣ ಜವಾಬ್ಧಾರಿಯನ್ನು ಜಾರ್ಜ್ ಎವರೆಸ್ಟ್ ಬಳಿ ನೀಡಲಾಯಿತು. ಅವರು ಲಾಂಬ್ಟನ್ ಅವರ ಸರ್ವೇ ಕೆಲಸವನ್ನು ಮುಂದುವರೆಸಿದರು. 1830ನೇಯ ಇಸವಿಯಲ್ಲಿ ಅವರಿಗೆ  ಸರ್ವೇಯರ್ ಆಫ್ ಜನರಲ್ ಪದವಿ ನೀಡಲಾಯಿತು. ಎವೆರಸ್ಟ್, ಇಂಗ್ಲೆಂಡಿಗೆ ಹೋಗಿ ಹೊಸ ಉಪಕರಣಗಳನ್ನು ತಂದು ಬಹಳ ನಿಖರವಾಗಿ ಒಂದು ಭೂಮಾಪನದ ಕೆಲಸವನ್ನು ಕೈಗೊಂಡರು. 

ಹಲವು ಸಮಯಗಳಲ್ಲಿ ಜಾಗ  ಬದಲಾಯಿಸುವ ಭೂಮಾಪನದ ಗುಂಪನ್ನು ದರೋಡೆಗಾರರು ದಾಳಿ ಮಾಡಿ ವಸ್ತುಗಳನ್ನು ದೋಚಿಕೊಂಡು ಹೋಗುತ್ತಿದ್ದರು. ಒಂದು ಜಾಗದಲ್ಲಿ ಅವರ ಬಳಿ ಇದ್ದ ಟೆಲೆಸ್ಕೋಪ್ (Telescope) ಬಗ್ಗೆ ತಪ್ಪಾದ ಒಂದು ಕಟ್ಟುಕಥೆ ಹಬ್ಬಿತು. ಆ ದುರ್ಬೀನಿನ ಮೂಲಕ ನೋಡಿದರೆ ಹೆಂಗಸರು ಬೆತ್ತಲೆಯಾಗಿ ಕಾಣಿಸುತ್ತಾರೆ ಎಂದು ಅಂದುಕೊಂಡ ಒಬ್ಬ ವ್ಯಾಪಾರಿ ತನ್ನ ಆಳುಗಳನ್ನು ಕಳುಹಿಸಿ   ಭೂಮಾಪನ ಮಾಡುವವರನ್ನು ಥಳಿಸಿ, ದುರ್ಬೀನುಗಳನ್ನು ಅಪಹರಿಸಿಕೊಂಡು ಬಂದನು.  

ಕೆಲವು ಜಾಗಗಳಲ್ಲಿ ಅವರ ಉಪಕರಣಗಳಿಂದ ಭೂಮಿಯ ಅಡಿಯಲ್ಲಿ ಹುದುಗಿರುವ ನಿಧಿಯನ್ನು ಕಂಡು ಹಿಡಿಯಬಹುದು ಎಂದು ಕಳ್ಳರ ಗುಂಪು ಅಂದುಕೊಂಡಿತು. ಆದ್ದರಿಂದ, ಭೂಮಾಪನ ಕಾರ್ಮಿಕರನ್ನು ಹಿಡಿದು ವಾರಗಟ್ಟಲೇ ಭೂಮಿಯನ್ನು ಅಗೆಸಿದರು. ನಿಧಿ ದೊರಕಲಿಲ್ಲ ಎಂದು ತಿಳಿದಕೂಡಲೇ ಉಪಕರಣಗಳನ್ನು ಒಡೆದು ಸುಟ್ಟುಹಾಕಿದ್ದು ಅಲ್ಲದೆ, ಕಾರ್ಮಿಕರ ಕೈಕಾಲುಗಳನ್ನು ಮುರಿದು ಹಾಕಿದರು. ನಂತರ, ಭೂಮಾಪನ ಕಾರ್ಮಿಕರ ರಕ್ಷಣೆಗಾಗಿ ಸೈನ್ಯ ಒಂದನ್ನೂ ಜತೆಯಾಗಿ ಕಳುಹಿಸಲಾಯಿತು. 

ಲಾಂಬ್ಟನಿನ ಸರ್ವೇ ವಿವರಗಳಲ್ಲಿ ಸ್ವಲ್ಪ ಭಿನ್ನತೆ ಕಂಡರೂ, ಎವರೆಸ್ಟ್ ಮತ್ತೊಮ್ಮೆ ಅಳತೆ ಮಾಡಿಸುತ್ತಿದ್ದರು.  ಅವರು ಹಿಮಾಲಯ ಪರ್ವತದಲ್ಲಿ ಇರುವ ಶಿಖರಗಳನ್ನು ಅಳೆಯಲು ಕಟುವಾಗಿ ಶ್ರಮಿಸಿದರು. ಆದರೂ ಶ್ರೇಣಿಗಳ ಎತ್ತರವನ್ನು ನಿಖರವಾಗಿ ಅಳೆಯಲು ಸಾಧ್ಯವಾಗಲಿಲ್ಲ. 

1843ನೇಯ ಇಸವಿ ಅವರು ಕಲ್ಕತ್ತಾದಿಂದ ನಿವೃತ್ತಿ ಪಡೆದುಕೊಂಡು ಇಂಗ್ಲೆಂಡಿಗೆ ಹಿಂತಿರುಗಿದರು. ಅವರಿಗೆ 1861ರಲ್ಲಿ ಬ್ರಿಟೀಷ್ ಸರಕಾರದ ‘ನೈಟ್’ (Knight) ಬಿರುದು ನೀಡಲಾಯಿತು. 

ಅದರ ನಂತರ ಆಂಡ್ರೂ ಸ್ಕಾಟ್ ವಾಗ್ (Andrew Scott Waugh) ಎಂಬ ಅಧಿಕಾರಿ ಭೂಮಾಪನ ನೇತೃತ್ವದ   ಜವಾಬ್ಧಾರಿಯನ್ನು ವಹಿಸಿಕೊಂಡರು. ಅವರ ಮಾರ್ಗದರ್ಶನದಲ್ಲಿ ಶಿಖರಗಳನ್ನು ಅಳೆಯಲಾಯಿತು. ಅದು ಬಹಳ ದೊಡ್ಡ ಸವಾಲಾಗಿತ್ತು. ನೇಪಾಳದ ಗಡಿಗೆ ಹೋದ ಭೂಮಾಪನದ ಗುಂಪನ್ನು ಒಳಗೆ ಅನುಮತಿಸಲು ನೇಪಾಳದ ಸರಕಾರ ನಿರಾಕರಿಸಿತು.

ದಕ್ಷಿಣ ನೇಪಾಳದ ಮಾರ್ಗವಾಗಿ ಮಾಪನದ ಕೆಲಸವನ್ನು ಮುಂದುವರಿಸಬಹುದೆಂದು ಬ್ರಿಟೀಷ್ ಸರಕಾರ ನಿರ್ಧರಿಸಿದಾಗ, ಅಲ್ಲಿ ಎಡೆಬಿಡದೆ ಮಳೆ. ಅದರ ಕಾರಣ ಮಲೇರಿಯಾ ಜ್ವರ ಬಂದು ಭೂಮಾಪನ ಕಾರ್ಮಿಕರು ಅವಸ್ಥೆಗೊಳಗಾದರು. ಜಾನ್ ಆರಂಸ್ಟ್ರಾಂಗ್ (John Armstrong) ಎಂಬ ಅಧಿಕಾರಿ ಕೊರೆಯುವ ಚಳಿಯನ್ನು ಲೆಕ್ಕಿಸದೆ ಥಿಯೊಡಲೈಟ್  ಉಪಕರಣಗಳನ್ನು, ಆಳುಗಳು ಹೊತ್ತುಕೊಂಡು ಬರುವಂತೆ ಮಾಡಿ, ಹಿಮಾಲಯ ಪರ್ವತದ ಶ್ರೇಣಿಗಳನ್ನು ಅಳತೆ  ಮಾಡಲು ತೊಡಗಿದನು. ಆಗಲೇ, ಬಹಳ ಎತ್ತರವಾದ ಶ್ರೇಣಿ ‘ಕಾಂಚನ್ ಜಂಗಾ’ ಎಂಬುದನ್ನು ಕಂಡುಹಿಡಿಯಲಾಯಿತು. 

ಜಾರ್ಜ್ ಎವರೆಸ್ಟ್ ಅವರ ವೃತ್ತಿ ಸಮಯದಲ್ಲಿ ರಾಧಾನಾಥ್ ಸಿಕ್ದಾರ್ ಎಂಬ ಬಂಗಾಲಿ ಯುವಕ ಗಣಿತದಲ್ಲಿ ನಿಪುಣತೆ ಪಡೆದಿದ್ದನು. ಅವನು ಬಹಳ ಉತ್ಸಾಹದಿಂದಲೂ ಕೆಲಸ ಮಾಡುತ್ತಿದ್ದ. ಅವನನ್ನು ಡೆಹರಾದೂನ್ ಅಧ್ಯಯನ ಕೇಂದ್ರದಲ್ಲಿ ಕೆಲಸ ಮಾಡಲು ಕರೆಸಿಕೊಂಡರು. ಆ ಯುವಕ ಭೂಮಾಪನವನ್ನು ನಿಖರವಾಗಿ ಗಣಿಸಲು ಒಂದು ಹೊಸ ಪದ್ಧತಿಯನ್ನು ಸೃಷ್ಟಿಸಿದ. ಅವನಿಂದ ಯಾವ ಸ್ಥಳವನ್ನೂ ನಿಖರವಾಗಿ ಮಾಪನ ಮಾಡಬಹುದಾಗಿತ್ತು. 

ಡಾರ್ಜಲಿಂಗ್-ನಿಂದ ಹಿಮಾಲಯದ ಶ್ರೇಣಿಗಳನ್ನು ಆರು ಕೋನಗಳಿಂದ ನಿಖರವಾಗಿ ಅಳೆದು, ಕೊನೆಗೆ 1852ರಲ್ಲಿ, ರಾಧಾನಾಥ್ ಸಿಕ್ದಾರ್  ಹಿಮಾಲಯದ ಅತಿ ಎತ್ತರವಾದ ಶ್ರೇಣಿಯಾಗಿ ಹಿಮಾಲಯದ 15ನೇಯ ಶಿಖರ ಇದೆ ಎಂಬುದನ್ನೂ ಕಂಡು ಅರಿತು ಹೇಳಿದನು. ಹಾಗೆ ಅವನು ಕಂಡು ಹಿಡಿದ ಶ್ರೇಣಿ 29,002 ಅಡಿ ಎತ್ತರವಾದದ್ದು. 

ತನ್ನ ಹಿಂದಿನ ಸರ್ವೇ ಜನರಲ್ ಸ್ಮರಣಾರ್ಥಾವಾಗಿ ಆಂಡ್ರೂ ಸ್ಕಾಟ್ ವಾಗ್, ಜಗತ್ತಿನ  ಬಹಳ ಎತ್ತರವಾದ ಆ ಶ್ರೇಣಿಗೆ ‘ಜಾರ್ಜ್ ಎವರೆಸ್ಟ್’ ಅವರ ಹೆಸರನ್ನು ನಾಮಕರಣ ಮಾಡಿದನು. ಈ ರೀತಿಯಲ್ಲಿ ನೇಪಾಳಿಗಳ ‘ಕ್ಯುಮೋಲುಂಗ್ಮ’ (Qomolangma) ಶಿಖರಕ್ಕೆ, ಎವರೆಸ್ಟ್ ಎಂದು ಹೆಸರಿಡಲಾಯಿತು. ಅದನ್ನು ಎವರೆಸ್ಟ್ ಒಪ್ಪಿಕೊಳ್ಳಲು ನಿರಾಕರಿಸಿದರು. ಅದಕ್ಕೆ ಅವರು ಹೇಳಿದ ಕಾರಣ… ಭಾರತೀಯರಿಂದ ಅವರ ಹೆಸರನ್ನು ಸರಿಯಾಗಿ ಉಚ್ಚರಿಸಲೋ ಬರೆಯಲೋ ಸಾಧ್ಯವಿಲ್ಲ ಎಂದು ಹೇಳಿದರು. ಆದರೆ, ಆಂಡ್ರೂ ಸ್ಕಾಟ್ ವಾಗ್ ಅದನ್ನು ಒಪ್ಪಿಕೊಳ್ಳಲಿಲ್ಲ. ಜಗತ್ತಿನ ಅತಿ ಎತ್ತರವಾದ ಶಿಖರಕ್ಕೆ ಮೌಂಟ್ ಎವರೆಸ್ಟ್ (Mount Everest) ಎಂದೇ ಹೆಸರಿಟ್ಟನು. 

ಇದನ್ನು, ರಾಯಲ್ ಜಿಯೋಗ್ರಾಪಿಕಲ್ ಸೊಸೈಟಿ 1857ರಲ್ಲಿ ಅಂಗೀಕರಿಸಿತು. ಆದರೇ, ಇಂದಿಗೂ ಚೀನಿಯರು ಆ ಶಿಖರವನ್ನು ‘ಶೆಂಗ್ ಮೂ ಪೆಂಗ್’ ಎಂದೇ ಕರೆಯುತ್ತಾರೆ. ಆ ಹೆಸರಿಗೆ ‘ಪವಿತ್ರ ತಾಯಿ’ ಎಂದು ಅರ್ಥ. ಬ್ರಿಟೀಷರು ಕಂಡು ಹಿಡಿಯುವುದಕ್ಕೆ ಹಲವು ಶತಮಾನಗಳ ಹಿಂದೆಯೇ, ಆ ಪರ್ವತದ ಶ್ರೇಣಿಯನ್ನು ನೇಪಾಳಿಗಳು ಗುರುತಿಸಿ  ಅದಕ್ಕೆ ‘ಕ್ಯುಮೋಲುಂಗ್ಮ’ ಎಂದು ಹೆಸರಿಟ್ಟಿದ್ದರು.

ನೇಪಾಳದಲ್ಲಿ ವಾಸಿಸುವ ಶೆರ್ಪಾಗಳು ಆ ಪರ್ವತದ ತುದಿಯಲ್ಲಿ ತಮ್ಮ ಕುಲದೇವತೆ ವಾಸಿಸುವುದಾಗಿ ನಂಬುತ್ತಾರೆ. ಹಾಗೆ ಪುರಾತನ ಕಾಲದಿಂದ ಜನಗಳು ಕೊಂಡಾಡಿದ ಶಿಖರಕ್ಕೆ, ಬ್ರಿಟೀಷ್ ಅಧಿಕಾರಿಯಾದ ಎವರೆಸ್ಟ್ ಅವರ ಹೆಸರನ್ನಿಟ್ಟು ಬ್ರಿಟಿಷ್ ಅಧಿಕಾರ ಜಗತ್ತು  ಅಂಗೀಕರಿಸುವಂತೆ ಮಾಡಿತು. 

ಹಿಮಾಲಯದ ಶ್ರೇಣಿಗಳನ್ನು ನಿಖರವಾಗಿ ಕಂಡುಹಿಡಿದ ರಾಧಾನಾಥ್ ಸಿಕ್ದಾರನ ಹೆಸರು ಇತಿಹಾಸದಲ್ಲಿ ಎಲ್ಲೂ ಉಲ್ಲೇಖವಿಲ್ಲ. ಆದರೆ, ತನ್ನ ಕೆಲಸಕ್ಕೆ ಮುಂಚೂನಿಯಲ್ಲಿ ಇದ್ದರು ಎಂಬುದಕ್ಕಾಗಿ ಅಂಡ್ರೂ ಸ್ಕಾಟ್ ವಾಗ್  ಜಾರ್ಜ್ ಎವರೆಸ್ಟ್ ಅವರ ಹೆಸರನ್ನು ನಾಮಕರಣ ಮಾಡಿ ಹೆಮ್ಮೆ ಪಟ್ಟುಕೊಂಡನು. ಅದನ್ನು, ಅಂದಿನ ವಸಾಹತುಶಾಹಿ ಸರಕಾರವೂ ಒಪ್ಪಿಕೊಂಡಿತು. 

ಎವರೆಸ್ಟ್ ಎಂಬುದು ಒಂದು ಗಂಡಿನ ಹೆಸರು. ಅವರು ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡಿದ ಒಬ್ಬ ಸರ್ವೇ ಅಧಿಕಾರಿ. ಅವರ ಕಾರ್ಯಾಚರಣೆ ಬ್ರಿಟೀಷ್ ಸರಕಾರವನ್ನು ಬಲಿಷ್ಟಗೊಳಿಸುವುದಕ್ಕಾಗಿ ಸಹಾಯವಾಯಿತು ಎಂಬುದು ನಮ್ಮ ಪಠ್ಯ ಪುಸ್ತಕಗಳಲ್ಲಿ ಎಲ್ಲೂ ಯಾವ ಉಲ್ಲೇಖವೂ ಇಲ್ಲ. ಹಿಮಾಲಯದ ಆ ಉತ್ತುಂಗ ಶ್ರೇಣಿಯ ಹೆಸರು ಸಾವಿರಾರು ವರ್ಷಗಳಿಂದಲೂ ‘ಎವರೆಸ್ಟ್’ ಎಂಬಂತೇಯೆ ನಂಬಿಸಲಾಗಿದೆ. 

ಬುಡಕಟ್ಟಿನ ಜನಗಳ ಭೂಮಿಗಳನ್ನು ಆಕ್ರಮಿಸಿಕೊಂಡು ಹೊಸ ದೇಶಗಳನ್ನು ಕಂಡುಹಿಡಿದಿರುವುದಾಗಿ ಹೆಸರಿಟ್ಟು ಸಂತೋಷಪಡುವುದು ಪರಂಗೀಯರು ಅನೇಕ ಕಾಲದಿಂದ ಮಾಡುತ್ತಾ ಬಂದಿರುವ ಮೋಸ. ಅಮೆರಿಕಾ, ವೆಸ್ಟ್ ಇಂಡೀಸ್ ಮುಂತಾದ ದ್ವೀಪಗಳು ಹೆಸರು ಬದಲಾಗಿ ತಮ್ಮ ಸ್ವಂತಿಕೆಯನ್ನು ಕಳೆದುಕೊಂಡದ್ದನ್ನೂ, ಬುಡಕಟ್ಟಿನ ಜನಗಳನ್ನು ಅಳಿಸಿದ್ದನ್ನೂ, ಚರಿತ್ರೆಯನ್ನು ಎಚ್ಚರಿಕೆಯಿಂದ ಓದುವವರಿಂದ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. 

ಹಿಮಾಲಯದಲ್ಲಿರುವ ಯಾವ ಶಿಖರವನ್ನೂ ಶೆರ್ಪಾ ಎಂದು ಕರೆಯುವ ಜನಾಂಗದ ಜನಗಳು ಸುಲಭವಾಗಿ ಹತ್ತಿಬಿಡುತ್ತಾರೆ. ಹಿಲ್ಲರಿಯೂ, ಟೆನ್ಜಿಂಗ್  ಎವರೆಸ್ಟ್ ಶಿಖರವನ್ನು ಹತ್ತುವಾಗ ಅವರ ಹೊರೆಗಳನ್ನು ಹೊತ್ತುಕೊಂಡು ಪರ್ವತದ ತುದಿಯವರೆಗೆ ಹೋದವರು ಶೆರ್ಪಾಗಳು! 

ನೋರ್ಗೆ ಎಂಬ ಶೆರ್ಪಾ ಅವರ ಮಾರ್ಗದರ್ಶಿ. ಶೆರ್ಪಾಗಳು ದೃಢಗಾತ್ರವಾದ ದೇಹವುಳ್ಳವರು. ಹೆಚ್ಚು  ಹೊರೆಗಳನ್ನು ತಮ್ಮ ಬೆನ್ನುಗಳ ಮೇಲೆ ಹೊತ್ತುಕೊಂಡು ಪರ್ವತವನ್ನು ಹತ್ತಬಲ್ಲವರು. ಹಿಮದ ಹಾದಿಗಳನ್ನು ಕಂಡು ಹಿಡಿದು ಮುಂದೆ ಸಾಗುವುದರಲ್ಲಿ ಅವರಿಗೆ ಸಾಟಿ ಭಾರತದಲ್ಲಿ ಯಾರೂ ಇಲ್ಲ. ಆದ್ದರಿಂದ ಇಂದಿನವರೆಗೆ ಯಾವ ಪರ್ವತ ಹತ್ತುವ ಗುಂಪೂ, ಹಿಮಾಲಯಕ್ಕೆ ಹೋದರೆ ಶೆರ್ಪಾಗಳನ್ನೇ ಮಾರ್ಗದರ್ಶಿಗಳಾಗಿ ಇಟ್ಟುಕೊಳ್ಳುತ್ತಾರೆ. 

ಪೂರ್ವ ನೇಪಾಳದ ಭಾಗದಲ್ಲಿ ವಾಸಿಸುವ ಈ ಶೆರ್ಪಾಗಳ ಇತಿಹಾಸವನ್ನು ಕಾಲ ಮರೆತುಹೋಗಿದೆ. ಜಗತ್ತಿನ ಅದ್ಭುತಗಳಲ್ಲಿ ಒಂದಾದ ಎವರೆಸ್ಟ್-ನ ತುದಿಯವರೆಗೆ ಹತ್ತಲು ಸಾಧ್ಯವಾದ ಅವರ ಜೀವನ ಗುಣಮಟ್ಟ ಅತಲ ಪಾತಾಳದಲ್ಲಿ ಬಿದ್ದಿದೆ. 100 ವರ್ಷಗಳಿಂದ ಬಡತನ  ಕಷ್ಟಗಳು ಮಾತ್ರವೇ ಅವರ ಬಳಿ ಉಳಿದಿವೆ. ರೈತ ಕೂಲಿಗಳಂತೆಯೇ ಇವರೂ ಪರ್ವತಗಳ ಮೇಲೆ ಹೊರೆಯನ್ನು ಹೊತ್ತುಹೋಗುವುದಕ್ಕೆ ಕೂಲಿಯನ್ನು  ಕೊಡಲಾಗುತ್ತದೆ. 

ಶೆರ್ಪಾ ಎಂಬ ಪದಕ್ಕೆ ಪೂರ್ವದಲ್ಲಿ ವಾಸವಿರುವವರು ಎಂದು ಅರ್ಥ. ಪರ್ವತ ಹತ್ತುವ ಮೊದಲು ಅದರ ಮುಂದೆ ಮಂಡಿಯೂರಿ ನಮಸ್ಕರಿಸಿ ಅನುಮತಿ ಕೇಳುತ್ತಾರೆ. ಭಾರತದ ಸುತ್ತ ರಕ್ಷಣೆಗಾಗಿ ಪ್ರಕೃತಿ ಸೃಷ್ಟಿಸಿದ ಕಾಡೇ ಹಿಮಾಲಯ ಪರ್ವತ. ಇನ್ನೂ ಸಂಪೂರ್ಣವಾಗಿ ಅಧ್ಯಯನ ಮಾಡಲಾಗದ ಈ  ಕಾಡು ಮಂಜಿನಿಂದ ಮುಚ್ಚಿದೆ. ಮೇಘಗಳು ಮೈಸವರುವ ಸುಂದರವಾದ ಸ್ಥಳ. ‘ಹಿಂ’ ಎಂದರೆ ಮಂಜು, ‘ಆಲಯ’ ಎಂದರೆ ದೇವಸ್ಥಾನ. ಹಿಮದೇವತೆ ಹೆಪ್ಪುಗಟ್ಟಿದ ಜಾಗ ಎಂಬ ಹಿಮಾಲಯವನ್ನು ಭಗವಂತನ ಮನೆ ಎಂದು ಹಿಂದುಗಳು ನಂಬುತ್ತಾರೆ. ಬೌದ್ಧರೂ ಅದನ್ನು ಬುದ್ಧನ ವಾಸಸ್ಥಳ ಎಂದು ಪೂಜಿಸುತ್ತಾರೆ. 

ಒಂದು ಕಾಲದಲ್ಲಿ ಎವೆರೆಸ್ಟಿನ ತುದಿಯನ್ನು ತಲುಪುವುದು ಬಹಳ ದೊಡ್ಡ ಸವಾಲಾಗಿತ್ತು. ಮೊಟ್ಟಮೊದಲು 1953ರ ಮೇ ತಿಂಗಳು 29ನೇಯ ತಾರೀಕು ಎಡ್ಮಂಡ್ ಹಿಲ್ಲೆರಿ (Edmond Hillary) ಎಂಬ ನ್ಯೂಜಿಲ್ಯಾಂಡಿನ ಶೂರನೂ, ಡಾರ್ಜಲಿಂಗ್ ವಾಸಿಯಾದ ನೇಪಾಳಿ ಟೆನ್ಜಿಂಗ್ ನಾರ್ಗೆ (Tenzing Norgay) ಎಂಬುವನೂ ಎವೆರೆಸ್ಟಿನ ಶ್ರೇಣಿಯನ್ನು ತಲುಪಿ ಸಾಧನೆ ಮಾಡಿದರು. ಈ 70 ವರ್ಷಗಳಲ್ಲಿ ಎವೆರೆಸ್ಟಿನ ತುದಿಯನ್ನು 1200ಕ್ಕೂ ಹೆಚ್ಚಿನವರು ತಲುಪಿದ್ದಾರೆ. ಇದರಲ್ಲಿ ‘ಶೆರ್ಪಾ ಅಪ್ಪ’ ಎಂಬ ನೇಪಾಳಿ ಆಕ್ಸಿಜನ್ ನೆರವಿಲ್ಲದೆ ಎವರೆಸ್ಟ್ ಪಯಣವನ್ನು ಮಾಡಿ ತುದಿಯನ್ನು ತಲುಪಿದ್ದಾನೆ. ಅದಲ್ಲದೆ, 13 ವರ್ಷಗಳಲ್ಲಿ 12 ಸಲ ಎವರೆಸ್ಟ್ ಶ್ರೇಣಿಯನ್ನು ತಲುಪಿದ ವೀರನೂ ಇವರೊಬ್ಬನೇ! 

ಮೊದಲ ಎವರೆಸ್ಟ್ ಪಯಣದಲ್ಲಿ ಅದರ ತುದಿಯನ್ನು ತಲುಪಿದ ಟೆನ್ಜಿಂಗ್, ತನ್ನ ಮಗಳು ನೀಮ ಕೊಟ್ಟುಕಳುಹಿಸಿದ ನೀಲಿ ಬಣ್ಣದ ಪೆನ್ ಒಂದನ್ನೂ ಸ್ವಲ್ಪ ಸಿಹಿಯನ್ನೂ ಎವರೆಸ್ಟ್ ಶಿಖರದ ತುದಿಯಲ್ಲಿ ಹೂತು ಬಂದರು. ಜಗತ್ತಿನ ಅತಿ ಎತ್ತರದ ಶಿಖರ ಒಂದರಲ್ಲಿ ಒಂದು ಲೇಖನಿ ಹೂತುಹೋಗಿದೆ ಎಂಬುದು ‘ಲಿಪಿಯೂ ದೈವ, ಲೇಖನಿಯೂ ದೈವ’ ಎಂಬ ಭಾರತಿಯಾರಿನ ಮಾತುಗಳನ್ನು ನೆನಪಿಗೆ ತರುತ್ತದೆ. 

ಮುಂದಿನ ಸಲ ಭಾರತದ ಭೂಪಟವನ್ನು ನೋಡುವಾಗ ಅದರ ಹಿಂದೆ ಅಸಂಖ್ಯಾತ ಮನುಷ್ಯರ ದುಡಿಮೆಯೂ ಹೋರಾಟವೂ ಅಡಗಿರುವುದನ್ನು ನೆನಪು ಮಾಡಿಕೊಳ್ಳಿ. ಅದೇ ಸಮಯ ದಬ್ಬಾಳಿಕೆಗೆ ಒಳಗಾದ ಒಂದು ದೇಶದ ಪರ್ವತವೊಂದು ತನ್ನ ಹೆಸರನ್ನೂ ಸಹಾ ಕಳೆದುಕೊಂಡಿತು ಎಂಬುದನ್ನೂ ಮರೆತು ಹೋಗದಿರಿ.  

‍ಲೇಖಕರು Admin

July 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: