ಪ್ರತಿಭಾ ನಂದಕುಮಾರ್ ಅಂಕಣ- ಹೈದರ್ ಮತ್ತು ಮಾತೃ ಭಕ್ತಿ

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.

ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.

ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ವಾನಿಯಂಬಾಡಿ ಮತ್ತು ಆಂಬೂರಿನ ಮೇಲಿನ ಧಾಳಿಯ ಸಂದರ್ಭದಲ್ಲಿ ಹೈದರಾಲಿ ಸಂಪೂರ್ಣವಾಗಿ ಯುದ್ಧದಲ್ಲಿ ಮುಳುಗಿಹೋಗಿದ್ದಾಗ ಆತನ ತಾಯಿ ಅವನನ್ನು ಭೇಟಿ ಮಾಡಲು ಬಂದ  ಸಂದರ್ಭವನ್ನು  ದೇ ಲ ತೂರ್ ತುಂಬಾ ಸುಂದರವಾಗಿ ವರ್ಣಿಸಿದ್ದಾನೆ. ಅವನ ಮಾತಿನಲ್ಲೇ ಓದಿ:

‘ಹೈದರಾಲಿ ತನ್ನ ಕುಟುಂಬದ ಜೊತೆ ಇರಿಸಿಕೊಂಡಿದ್ದ ಸಂಬಂಧ ಮತ್ತು ತನ್ನ ಸಂಬಂಧಿಕರ ಜೊತೆ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದ ರೀತಿಯನ್ನು ತಿಳಿಸಲು, ಇಂತಹ ಪರಿಸ್ಥಿತಿಯಲ್ಲಿ ಹೈದರಾಲಿ ತನ್ನ ತಾಯಿಯನ್ನು ಭೇಟಿ ಮಾಡಿದ ಸಂದರ್ಭವನ್ನು ವಿವರಿಸುವುದು ಅನುಚಿತವಾಗದು ಎಂದು ಭಾವಿಸುತ್ತೇನೆ.

ಈ ಹೆಂಗಸು, ಅರಮನೆಯಲ್ಲಿ ಅಧಿಕಾರವನ್ನು ಚಲಾಯಿಸುವ ಹಕ್ಕುಳ್ಳ ರಾಜಮಾತೆ, ತನ್ನ ಮಗನಿಗೆ ಯುದ್ಧದಲ್ಲಿ ಸ್ವಲ್ಪ ಹಿಂಜರಿತ ಉಂಟಾಗಿದೆ ಎನ್ನುವ ಸುದ್ಧಿ ತಿಳಿದು, ಅದು ಇದ್ದದ್ದಕ್ಕಿಂತ ಹೆಚ್ಚು ಗಂಭೀರವಾದದ್ದು ಎಂದು ಭಾವಿಸಿ, ಹೈದರ್ ನಗರದಿಂದ ಮಗನನ್ನು ನೋಡುವ ತವಕದಿಂದ ಹೊರಟಳು. ಅದು ಭೀಕರ ಮಳೆಗಾಲವಾಗಿತ್ತು.

ನೂರಾ ಐವತ್ತು ಗಾವುದ ದೂರ ಪ್ರಯಾಣಿಸಬೇಕಿತ್ತು. ಅದರ ಸಂಕಷ್ಟಗಳನ್ನು ಲೆಕ್ಕಿಸದೇ ಎಲ್ಲೂ ನಿಲ್ಲದೆ ಕೆಲವೇ ದಿನಗಳಲ್ಲಿ ಹೈದರ್ ಇದ್ದ ಸ್ಥಳವನ್ನು ಬಂದು ತಲುಪಿದಳು. ತಾಯಿಯ ಬರುವಿಕೆಯ ಸುದ್ದಿ ಮೊದಲೇ ಗೊತ್ತಿದ್ದ ಹೈದರ್ ಆಕೆ ಇನ್ನೂ ಹತ್ತಿರ ಬಂದಿದ್ದಾಳೆ ಎಂದು ತಿಳಿದ ತಕ್ಷಣ ತಾಯಿಯನ್ನು ಎದುರುಗೊಳ್ಳಲು ತನ್ನ ಸೇನೆ ಸಹಿತ ಸವಾರಿ ಹೊರಟ.

ಸೇನೆಯ ಠಿಕಾಣಿ ಸ್ಥಳದಿಂದ ಗಾವುದ ದೂರದಲ್ಲಿ ಸೇನೆ ರಾಜಮಾತೆಯನ್ನು ಎದುರುಗೊಂಡಿತು. ಅಲ್ಲಿಂದ ಮುಂದೆ ಹೈದರ್ ಮತ್ತು ಆತನ ಮಕ್ಕಳು ಕುದುರೆಯ ಮೇಲೆ ಮುನ್ನಡೆದರು. ಮಸ್ಲಿನ್ ಬಟ್ಟೆಯಿಂದ ಮುಚ್ಚಲಾಗಿದ್ದ ತಾಯಿ ಇದ್ದ ಪಲ್ಲಕ್ಕಿಯ ಬಳಿಗೆ ತಲುಪಿ ಅದರ ಎಡ  ಮತ್ತು ಬಲಗಳಲ್ಲಿ ತಮ್ಮ ಕುದುರೆಗಳ ಮೇಲೇ ಸಾಧ್ಯವಾದಷ್ಟೂ ಬಾಗಿ ಕಾವಲಾಗಿ ಸಾಗಿದರು. ಮಗ ಮತ್ತು ಮೊಮ್ಮಕ್ಕಳ ಕಾವಲಿನಲ್ಲಿ ಹೈದರನ ತಾಯಿ ಪ್ರಯಾಣ ಮುಂದುವರೆಸಿದಳು.  ಹೈದರನ ಸೇನೆಯ ಮಧ್ಯದಿಂದ ಸಾಗುವಾಗ ಆಕೆಯೇ ರಾಜಳೇನೋ ಎನ್ನುವಂತೆ ಎಲ್ಲರು ಸಲಾಮು ಮಾಡಿದರು. 

ಹೈದರನ ತಾಯಿಯ ಪರವಾರದಲ್ಲಿ- ಇನ್ನೂರು ಮಹಿಳೆಯರು ಕುದುರೆ ಸವಾರಿ ಮಾಡುತ್ತಿದ್ದರು. ಅವರು ಸಂಪೂರ್ಣ ಮಸ್ಲಿನ್ ಬಟ್ಟೆಯನ್ನು ಹೊದ್ದುಕೊಂಡು ಅವರ ಉಡುಪಾಗಲಿ ಮೈಯಾಗಲಿ ಒಂದಿಂಚೂ ಕಾಣದಂತೆ ಮುಚ್ಚಿಕೊಂಡಿದ್ದರು. ರಾಜಮಾತೆಯ ಪಲ್ಲಕ್ಕಿಯ ಮುಂದುಗಡೆ ಅವರು ಸವಾರಿ ಮಾಡುತ್ತಿದ್ದರು. ಪಲ್ಲಕ್ಕಿಯ ಹಿಂದೆ ಎಂಟು ಗಾಡಿಗಳು ಸಂಪೂರ್ಣ ಕೆಂಪು ಬಟ್ಟೆಯಿಂದ ಆವೃತವಾಗಿದ್ದು ಬೃಹತ್ ಪರ್ಷಿಯನ್ ಎತ್ತುಗಳಿಂದ ಹೂಡಿದ್ದು ಹಿಂಬಾಲಿಸುತ್ತಿದ್ದವು. 

ಜೊತೆಗೆ ಹತ್ತು ಆನೆಗಳು, ಲೆಕ್ಕವಿಲ್ಲದಷ್ಟು ಒಂಟೆಗಳು ಮತ್ತು ಹೊರೆ ಹೊರುವ ಪ್ರಾಣಿಗಳು ಇದ್ದವು. ಮಹಿಳಾ ಸವಾರರ ಮುಂದೆ ಕೆಲವು ಯುರೋಪಿಯನ್ ಕುದುರೆ ಸವಾರರು ಇದ್ದರು. ಎಲ್ಲ ಪರಿವಾರದ ಸುತ್ತ ಆರು ನೂರು ಭರ್ಜಿ ಹಿಡಿದ ಯೋಧರು ಇದ್ದರು. ಅವರ ಭರ್ಜಿಗಳಿಗೆ ಪುಕ್ಕಗಳು ಮತ್ತು ಗೆಜ್ಜೆಗಳನ್ನು ಕಟ್ಟಲಾಗಿತ್ತು. ಎಲ್ಲಕ್ಕಿಂತ ಹಿಂದೆ ನಾನೂರು ಕುದುರೆ ಸವಾರರು ಕಾವಲಾಗಿ ಸಾಗುತ್ತಿದ್ದರು.

ಸವಾರಿ ಮುಗಿದಾಗ ಹೈದರನ ತಾಯಿಯನ್ನು ಹೈದರನ ಡೇರೆಯೊಳಗೆ ಸ್ವಾಗತಿಸಲಾಯಿತು. ‘ಅಷ್ಟು ದೂರ ಪ್ರಯಾಣವನ್ನ ಮಾಡಿ, ಅದರಲ್ಲೂ ಭೀಕರ ಮಳೆಯಲ್ಲಿ ರಸ್ತೆ ಅನುಕೂಲವಿಲ್ಲದಿರುವಾಗ, ಬರುವ ಕಾರಣವನ್ನು ಹೈದರ್ ತಾಯಿಗೆ ವಿಚಾರಿಸಿದ. ಅದಕ್ಕೆ ಆಕೆ ಕೊಟ್ಟ ಉತ್ತರ ‘ನಿನಗೆ ಒದಗಿಬಂದ ದುರದೃಷ್ಟವನ್ನು ನೀನು ಹೇಗೆ ತಾಳಿಕೊಂಡಿರುವೆ ಎನ್ನುವುದನ್ನು ನಾನು ನೋಡಬೇಕಿತ್ತು ಮಗನೇ’ ಎಂದಳು. 

ಅದಕ್ಕೆ ಹೈದರ್ ‘ದೇವರು ಇನ್ನೂ ದೊಡ್ಡ ಆಪತ್ತು ಎದುರಾಗಿಸಿದರೂ ಅದನ್ನು ನಿಭಾಯಿಸಲು ತನಗೆ ಶಕ್ತಿ ಇದೆ’ ಎಂದು ಉತ್ತರಿಸಿದ. 

ಅದಕ್ಕೆ ತಾಯಿ ‘ಹೌದಾ? ಹಾಗಾದರೆ ನಾನು ದೇವರಿಗೆ ಕೃತಜ್ಞತೆ ಅರ್ಪಿಸಿ ತಕ್ಷಣ ಹೊರಡುತ್ತೇನೆ, ನಿನ್ನ ಕೆಲಸಗಳಿಗೆ ಅಡ್ಡಿ ಬರದಂತೆ’ ಎಂದು ಹೇಳಿದಳು. ಎರಡು ದಿನಗಳವರೆಗೆ ಆಕೆಯನ್ನು ಇರಿಸಿಕೊಂಡು ಹೈದರ್ ಆಕೆಯನ್ನು ಕಳಿಸಿಕೊಟ್ಟ. ಹೈದರ್ ಮತ್ತು ಅವನ ಮಕ್ಕಳು ಮತ್ತೆ ಕುದುರೆ ಸವಾರರಾಗಿ ಆಕೆಯನ್ನು ಭೇಟಿ ಮಾಡಿದ ಸ್ಥಳದವರೆಗೆ ಜೊತೆಗೆ ಬಂದು ಬೀಳ್ಕೊಟ್ಟರು.  

ತಾಯಿ ಹೋದ ಎರಡನೇ ದಿನ ಹೈದರ್ ಸೈನ್ಯ ವಾನಿಯಂಬಾಡಿ ಕಡೆಗೆ ಸಾಗಿತು. ಆ ಮಳೆಯ ಪ್ರವಾಹದಲ್ಲೇ ಸ್ವಲ್ಪ ಎತ್ತರವಿದ್ದ ಗುಡ್ಡದ ಮೇಲೆ ಹನ್ನೆರಡು ತೋಪುಗಳನ್ನು ಜೋಡಿಸಲಾಯಿತು. ಅಲ್ಲಿಂದ ವೆಲ್ಲೂರಿಗೆ ಹೋಗುವ ಕಣಿವೆ ಮುಕ್ಕಾಲು ಗಾವುದ ಮಾತ್ರವಿದ್ದುದರಿಂದ ಒಂದು ಸಶಸ್ತ್ರ ಪಡೆಯನ್ನು ಮುಂಗಾವಲಾಗಿ ಕಳಿಸಲಾಯಿತು. ಯುರೋಪಿಯನ್ ಪಡೆಯ ಕಮಾಂಡರ್ ಗೆ ಸ್ವಲ್ಪ ಗಾಯವಾಗಿದ್ದರಿಂದ ಹೈದರ್ ಅವನಿಗೆ ರಾತ್ರಿ ಕೆಲಸ ಮಾಡದಂತೆ ತಡೆದು ವಿಶ್ರಾಂತಿಪಡೆಯಲು ಕಳಿಸಿ ತಾನೇ ಖುದ್ದಾಗಿ ಸೈನಿಕರ ಕಾರ್ಯಾಚರಣೆಯ ಉಸ್ತುವಾರಿ ನಡೆಸಿದ. ಸೇನೆಯ ಜೊತೆಗೇ ರಾತ್ರಿಯಿಡೀ, ಮರದ ಕೆಳಗೆ ಚಳಿ ಗಾಳಿ ಮಳೆಗೆ ಮೈಯೊಡ್ಡಿ, ತನ್ನ ಸೈನಿಕರನ್ನು ಹುರಿದುಂಬಿಸುತ್ತಾ ಕಳೆದ.  

ಮುಂಜಾನೆ ಆರು ಗಂಟೆಯ ಹೊತ್ತಿಗೆ ಬ್ರಿಟಿಷರ ಬಂದೂಕುಗಳು ಸಡ್ಡು ಮಾಡತೊಡಗಿದವು. ಮಳೆಯಿಂದಾಗಿ ಹೈದರನ ಫಿರಂಗಿಗಳು ಕೆಲಸ ಮಾಡಲು ಸ್ವಲ್ಪ ತಡವಾದರೂ ಬೇಗನೆ ಇಂಗ್ಲಿಷರ ಬಂದೂಕುಗಳನ್ನು ಸುಮ್ಮನಾಗಿಸಲಾಯಿತು. ಬ್ರಿಟಿಷರ ಕಮಾಂಡರ್ ಬಿಳಿ ಬಾವುಟ ತೋರಿಸಿದ. ತನ್ನ ಕೈಕೆಳಗಿನ ಅಧಿಕಾರಿಯನ್ನು ಸಂಧಾನಕ್ಕೆ ಕಳಿಸಿದ. ಆತ ಹೈದರನ ಯುರೋಪಿಯನ್ ಕಮಾಂಡೆಂಟನ್ನು ಭೇಟಿ ಮಾಡಿದ. ಆತನ ಸಂಧಾನ ಪ್ರಸ್ತಾವವನ್ನು ಒಪ್ಪದೇ ಸ್ವಲ್ಪ ಹೊತ್ತು ತಕರಾರು ನಡೆದು ಕೊನೆಗೆ ಅಲ್ಲಿಯ ಕಮಾಂಡರ್, ಯುರೋಪಿಯನ್ ಸೈನಿಕರು ಮತ್ತು ಅಧಿಕಾರಿಗಳು ಒಂದು ವರ್ಷದವರೆಗೆ ಹೈದರನಿಗೆ ವಿರುದ್ಧವಾಗಿ ಯಾವ ಕ್ರಮವನ್ನೂ ತೆಗೆದುಕೊಳ್ಳಬಾರದಾಗಿ ಸಂಧಾನವಾಯಿತು. 

ಅಸಮಾಧಾನವಾಗಿದ್ದರೂ ಬ್ರಿಟಿಷ್ ಕಮಾಂಡರ್ ಒಪ್ಪಂದಕ್ಕೆ ಹೈದರ್ ತನ್ನ ಮೊಹರೆಯನ್ನು ಒತ್ತಬೇಕೆಂದು ಒತ್ತಾಯಮಾಡಿದ. ಇಲ್ಲದಿದ್ದರೆ ಹಿಂದಿರುಗುವೆನೆಂದ. ಮತ್ತೆ ಸಂಧಾನ ಮುರಿದುಬೀಳುತ್ತದೆಂದು ತಿಳಿದ ಹೈದರ್ ಮುಂದೆ ಬಂದು ಫಿರಂಗಿಯ ಮೇಲೆ ಕೂತು ಅಧಿಕಾರಿಯನ್ನು ಉದ್ದೇಶಿಸಿ ‘ನಾನು ಮುತ್ತಿಗೆಯ ಕಮಾಂಡರ್ ಅಲ್ಲ. ನೀನು ನನ್ನ ಅಧಿಕೃತ ಮೊಹರೆ ಕೇಳುತ್ತಿರುವೆ. ನನ್ನ ಬಳಿ ರಾಜಮುದ್ರೆ ಇಲ್ಲ, ಇರುವುದು ಈ ಚಿಕ್ಕ ಮುದ್ರೆ. ಇದನ್ನೇ ನನ್ನ ಅಧಿಕಾರಿಯ ಕೈಗೆ ಕೊಡುತ್ತೇನೆ’ ಎಂದು ಹೇಳಿ ತನ್ನ ಉಂಗುರದ ಮುದ್ರೆಯನ್ನು ತೆಗೆದು ತನ್ನ ಅಧಿಕಾರಿಗೆ ನೀಡಿ ‘ನಿನಗೆ ಸರಿ ಕಂಡಂತೆ ಇದನ್ನು ಬಳಸಿಕೊ’ ಎಂದ. ಆತ ಒಪ್ಪಂದ ಪತ್ರದ ಮೇಲೆ ಈ ಮುದ್ರೆ ಒತ್ತಿ ಪೂರ್ಣಗೊಳಿಸಿದ.’

‘ಹೀಗೆ ಸ್ವ ಪ್ರತಿಷ್ಠೆಯ ವಿವಾದವೊಂದು ಹೈದರನ ವಿವೇಕದಿಂದಾಗಿ ಸುಲಭವಾಗಿ ಬಗೆಹರಿಯಿತು.’ ಇಲ್ಲಿನ ಮುಂದೆ ಆಂಬೂರಿನ ಯುದ್ಧದ ವಿವರಗಳನ್ನು ಅತ್ಯಂತ ಸೂಕ್ಷ್ಮ ಸಂಗತಿಗಳ ಸಹಿತ ರೋಮಾಂಚನಕಾರಿಯಾಗಿ ದಾಖಲಿಸಲಾಗಿದೆ. ಇದನ್ನು ಸಂಪೂರ್ಣವಾಗಿ ಅನುವಾದಿಸದಿದ್ದರೆ ಅನ್ಯಾಯವಾಗುತ್ತದೆ. ದೀರ್ಘವಾದುದರಿಂದ ಇಲ್ಲಿ ಕೈಬಿಟ್ಟಿದ್ದೇನೆ.

ಈ ಭೇಟಿಯ ಮಹತ್ವ ಏನೆಂದರೆ- ಹೈದರನ ತಂದೆ ಫತೇ ಮೊಹಮ್ಮದ್ ತೀರಿಕೊಂಡ ನಂತರ ಆತನ ಹೆಂಡತಿ ಮತ್ತು ಮಕ್ಕಳಿಗೆ ಇನ್ನಿಲ್ಲದಷ್ಟು ಕಷ್ಟ ಎದುರಾಯಿತು.  ವೈರಿ ಅಬ್ಬಾಸ್ ಕುಲಿ ಖಾನ್, ಫತೇ ಮೊಹಮ್ಮದನ ಆಸ್ತಿ, ಮನೆ, ಒಡವೆಗಳನ್ನೆಲ್ಲಾ ಕಿತ್ತುಕೊಂಡು ಆತನ ಕುಟುಂಬವನ್ನು ಮನೆಯಿಂದ ಹೊರಗೆ ಹಾಕಿದ. ಆಗಲೇ ಚಿಕ್ಕ ಬಾಲಕರಾಗಿದ್ದ ಹೈದರ್ ಮತ್ತು ಅವನ ಅಣ್ಣ ಶಾಬಾಜ್ ನನ್ನು ನಗಾರಿಯೊಳಗೆ ಹಾಕಿ ಜೋರಾಗಿ ಬಡಿದು ಕಿವುಡಾಗುವಂತೆ ಚಿತ್ರಹಿಂಸೆ ಕೊಟ್ಟಿದ್ದರು. ಆಗ ಅವರ ತಾಯಿ ಹೇಗೋ ಗಂಡನ ಅಣ್ಣನ ಮಗ ಶ್ರೀರಂಗಪಟ್ಟಣದಲ್ಲಿದ್ದ ಹೈದುರ್ ಸಾಹಿಬ್ ಗೆ ಸುದ್ದಿ ತಿಳಿಸಿ ಅವನು ಮೈಸೂರಿನ ಪಾಳೇಯಗಾರನಿಗೆ ಬೇಡಿಕೊಂಡು ಅವನು ಸಿರಾ ಪಾಳೇಯಗಾರನಿಗೆ ಪತ್ರ ಬರೆದು ತಾಯಿ ಮಕ್ಕಳನ್ನು ಬಿಡಿಸಿ ಶ್ರೀರಂಗಪಟ್ಟಣಕ್ಕೆ ಕಳಿಸುವ ಏರ್ಪಾಡು ಮಾಡಿದ. ಫತೇ ಮೊಹಮ್ಮದ್ ತೀರಿಸ ಬೇಕಾದ ಸಾಲವನ್ನು ಅವನೇ ತೀರಿಸಿದ. ಶ್ರೀರಂಗಪಟ್ಟಣದಲ್ಲಿ ತಾಯಿ ಮಕ್ಕಳನ್ನು ಚೆನ್ನಾಗಿ ನೋಡಿಕೊಂಡ.

ದೊಡ್ಡ ಮಗ ಶಾಬಾಜ್ ವಯಸ್ಸಿಗೆ ಬಂದಾಗ ಅವನಿಗೆ ಮೈಸೂರು ಸೈನ್ಯದಲ್ಲಿ ಕೆಲಸ ಕೊಡಿಸಿದ. ನಂತರ ಹೈದರನೂ ಸೇನೆ ಸೇರಿಕೊಂಡ. ಶಾಬಾಜ್ ಒಂದು ಯುದ್ಧದಲ್ಲಿ ಮೃತನಾದಾಗ ಅವರ ತಾಯಿಗೆ ಹೈದರನೇ ಸರ್ವಸ್ವ ಆಗಿದ್ದ. ಹಾಗಾಗಿ ತಾಯಿ ಮಗ ಪರಸ್ಪರರ ಮಾನಸಿಕ ಆಧಾರವಾಗಿದ್ದರು.  ಯುದ್ಧದ ನಡುವೆ ಮಗನಿಗೆ ತೊಂದರೆ ಆಗಿದೆ ಎಂದು ತಾಯಿ ನೋಡಲು ಬರುವುದು, ಅವಳನ್ನು ಸಮಾಧಾನಪಡಿಸಿ ಎರಡು ದಿನ ಇಟ್ಟುಕೊಂಡು ಕಳಿಸಿ ನಂತರ ಹೈದರ್ ತನ್ನ ಯುದ್ಧವನ್ನು ಮುಂದುವರಿಸುವುದು ಒಂಥರಾ ಹೃದಯಂಗಮವಾಗಿದೆ.

ಕಾನ್ಸ್ಟಂಟಿನ್ ಎನ್ನುವ ಒಬ್ಬ ಯುರೋಪಿಯನ್ ಅಧಿಕಾರಿ 1754ರಲ್ಲಿ ಭಾರತಕ್ಕೆ ಬಂದು, ಪೋರ್ಚುಗೀಸ್ ಮಹಿಳೆಯೊಬ್ಬಳನ್ನು ಮದುವೆಯಾದ. ಅವನಿಗೆ ಅತಿ ಸುಂದರಳಾದ  ಮಗಳೊಬ್ಬಳಿದ್ದಳು.  ಆತ ಹೈದರನ ಸೈನ್ಯಾಧಿಕಾರಿಯಾಗಿದ್ದ ಎಂ ಹ್ಯುಗೆಲ್ ಪಡೆಯಲ್ಲಿ ಸಾರ್ಜೆಂಟ್ ಆಗಿದ್ದ. ಕೆಲವು ಅಧಿಕಾರಿಗಳಿಗೆ ಕಾನ್ಸ್ಟಂಟಿನ್ ಮತ್ತು ಅವನ ಹೆಂಡತಿ ತಮ್ಮ ಮಗಳನ್ನು ನವಾಬನಿಗೆ ಮಾರಲಿದ್ದಾರೆ ಎಂದು ತಿಳಿಯಿತು. ಇಂತಹ ಸಂಗತಿಯಿಂದ ಸೇನೆಯ ಎಲ್ಲಾ ಯುರೋಪಿಯನ್ನರ ಹೆಸರು ಕೆಡುತ್ತದೆ ಎಂದು ಅವರು ಭಾವಿಸಿದರು. ಹ್ಯುಗೆಲ್ ಅವರಿಗೆ ಹೇಳಿಕಳಿಸಿದ. ವಿಚಾರಿಸಿದಲ್ಲಿ ಆತ ಅದೆಲ್ಲ ಸುಳ್ಳು ಎಂದು ತನ್ನನ್ನು ಕಾಪಾಡಿಕೊಂಡು ಬಿಟ್ಟ.

ಆಗ ಪಡೆಯ ಒಬ್ಬ ಯುವ ಅಧಿಕಾರಿ ಅವಳನ್ನು ತಾನು ಮದುವೆಯಾಗುವುದಾಗಿ ಮುಂದೆ ಬಂದ. ಅದನ್ನು ಕೇಳಿ ತಂದೆ ತುಂಬಾ ಕೃತಜ್ಞತೆಯಿಂದ ಅವನಿಗೆ ಧನ್ಯವಾದ ಹೇಳಿದ. ಆಗ ಹ್ಯುಗೆಲ್ ಕಾನ್ಸ್ಟಂಟಿನ್ ಗೆ ಭಡ್ತಿಯನ್ನೂ ನೀಡಿದ. ಆದರೆ ಅದೇ ರಾತ್ರಿ ಕಾನ್ಸ್ಟಂಟಿನ್ ತನ್ನ ಮಗಳನ್ನು ಹೈದರಾಲಿಗೆ ಐವತ್ತು ಸಾವಿರ ವರಹಗಳಿಗೆ ಮಾರಿಬಿಟ್ಟ. ಹೈದರ್ ತಕ್ಷಣ ಅವರನ್ನು ಬೆಂಗಳೂರಿಗೆ ಕಳಿಸಿಬಿಟ್ಟ. ಆಮೇಲೂ ಕಾನ್ಸ್ಟಂಟಿನ್ ಸೇನೆಯಿಂದ ದೂರದೂರವೇ ಇದ್ದ.  ಹೈದರನ ಸೇನೆ ಕೃಷ್ಣಗಿರಿಗೆ ಧಾಳಿ ಇಟ್ಟಾಗ ಜನರೆಲ್ಲಾ ಭಯಬಿದ್ದು ತಮ್ಮ ಅಮೂಲ್ಯ ವಸ್ತುಗಳನ್ನೆಲ್ಲಾ ಎತ್ತಿಕೊಂಡು ಬಂದು ಕೋಟೆಯ ಕಾವಲಿನಲ್ಲಿ ಭದ್ರವಾಗಿಟ್ಟಿದ್ದರು. 

ಕಾನ್ಸ್ಟಂಟಿನ್ ಆ ರಾಶಿ ಪೆಟ್ಟಿಗೆಗಳನ್ನು ತೆರೆದು ತನಗೆ ಬೇಕಾದಷ್ಟು ಹಣ ಒಡವೆಗಳನ್ನು ದೋಚಿಕೊಂಡು ರಾತ್ರೋರಾತ್ರಿ ಹೆಂಡತಿಯೊಡನೆ ಗೋವಾಗೆ ಓಡಿಹೋದ. ಅಲ್ಲಿಂದ ಬಾಂಬೆಗೆ ಹೋಗಿ ಅಲ್ಲಿಂದ ಯುರೋಪಿಗೆ ಪಲಾಯನ ಮಾಡಿದ. ಹೈದರನ ಫ್ರೆಂಚ್ ವೈದ್ಯರು ಸಾಕ್ಷಿ ಹೇಳಿದಂತೆ ಆ ಹುಡುಗಿ ಅವರ ಬಳಿ ‘ಸಧ್ಯ ತನ್ನನ್ನು ತಂದೆ ತಾಯಿ ಹೈದರನಿಗೆ ಮಾರಿದ್ದು ತನ್ನ ಅದೃಷ್ಟ ಇಲ್ಲದಿದ್ದರೆ ಅವರು ತನ್ನನ್ನು ವೇಶ್ಯೆ ಮಾಡಿಬಿಡುತ್ತಿದ್ದರು, ಹೈದರ್ ನಾಯಕನ ಜೊತೆ ಮರ್ಯಾದೆಯಾಗಿ ಬಾಳುತ್ತಿದ್ದೇನೆ’ ಎಂದು ಹೇಳಿದಳಂತೆ.

‍ಲೇಖಕರು Admin

July 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: