ಕೆ ನಲ್ಲತಂಬಿ ಅನುವಾದ ಸರಣಿ- ಷಹಜಹಾನನ ಮಗಳು

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

11

ಮೊಗಲರ ಇತಿಹಾಸದಲ್ಲಿ ಹೆಚ್ಚಾಗಿ ಮಾತನಾಡಲ್ಪಟ್ಟ ಹೆಣ್ಣು ಮುಮ್ತಾಜ್. ಜಗವೆಲ್ಲಾ ತಾಜ್ಮಹಲ್ ಮೂಲಕ ಅವಳನ್ನು ನೆನಪುಮಾಡಿ ಕೊಳ್ಳುತ್ತದೆ. ಆದರೆ, ಹಾಗೆ ಪ್ರಾಬಲ್ಯಕ್ಕೆ  ಬರದ ಇಬ್ಬರು ಮಹಿಳೆಯರಿದ್ದಾರೆ, ಒಬ್ಬಳು.. ಷಹಜಹಾನಿನ ಹಿರಿಯ ಮಗಳು, ಮದುವೆ ಮಾಡಿಕೊಳ್ಳದೆ ಆಡಳಿತದಲ್ಲಿ ರಾಜನಿಗೆ ಜತೆಯಾಗಿ ನಿಂತವಳೂ, ವಿದ್ವಾಂಸಳೂ, ಸೂಫಿ ಜ್ಞಾನ ಪಂಥವನ್ನು ಹಿಂಬಾಲಿಸಿದವಳೂ ಆದ ಜಹಾನಾರ ಬೇಗಂ. ಮತ್ತೊಬ್ಬಳು… ಔರಂಜೀಬನ ಮಗಳೂ ತತ್ವ ಪದಗಳನ್ನು ಬರೆಯುವ ಕವಿಯೂ ಆದ ಜೆಬ್ ಉನ್ನೀಸಾ. ಈ ಇಬ್ಬರು ಮಹಿಳೆಯರು ಚರಿತ್ರೆಯ ಬಾನಿನಲ್ಲಿ ಮಿನುಗುವ ದ್ವಿತಾರೆಗಳು. 

ಇಂದು ತಾಜ್ಮಹಾಲನ್ನು ನೋಡಲು ಹೋಗುವ ಎಷ್ಟು ಜನಕ್ಕೆ ಮುಮ್ತಾಜಿನ ಹುಟ್ಟುಹೆಸರು ಅರ್ಸುಮಂತ್ ಭಾನು ಬೇಗಂ, ಅವಳು 13 ಮಕ್ಕಳ ತಾಯಿ, ತನ್ನ 14 ನೇಯ ಹೆರಿಗೆಯಲ್ಲಿ ತೀರಿಕೊಂಡಳು ಎಂಬುದು ಗೊತ್ತು. 14 ಮಕ್ಕಳನ್ನು ಹೆತ್ತ ಮುಮ್ತಾಜಿನ ನೆನಪಾಗಿ, ತಾಜ್ಮಹಾಲ್ ಕಟ್ಟಲಾಗಿದೆ, ಎಂದರೆ ಅದನ್ನು ತಾಯ್ತನದ ಗುರುತು, ಶ್ರೇಷ್ಠ ಪತ್ನಿಯ ನೆನಪಿನ ಚಿನ್ಹೆ ಎಂದಲ್ಲವೇ ಕರೆಯಬೇಕು? 

ಜಹಾನಾರ ಬೇಗಂ, ಗುರಾಲ್ನಿಶಾ, ತಾರಾ ಶುಕೋ, ಮಹಮ್ಮದ್ ಸುಲ್ತಾನ್ ಷಾ, ರೋಷನಾರಾ, ಔರಂಗಜೀಬ್, ಉಮಿದ್ ಭಕ್ಷಿ, ಸುರೈಯಾ ಭಾನು, ಸುಲ್ತಾನ್ ಮುರಾದ್, ಗೌಹರಾ ಎಂಬ ಮುಮ್ತಾಜಿನ ಮಕ್ಕಳ ಹೆಸರುಗಳೂ ಸಹ ತಾಜ್ಮಹಾಲ್ ಒಳಗೆ ಹೋಗುವವರಿಗೆ ತಿಳಿದಿಲ್ಲ ಎಂಬುದೇ ನಿಜ. ಷಹಜಹಾನಿನ ಮೂರನೇಯ ಮಡದಿ ಮುಮ್ತಾಜ್. 1612 ನೇಯ ಇಸವಿ ಮೇ ತಿಂಗಳು 10 ನೇಯ ತಾರೀಕು ಅವಳ ಮದುವೆ ನಡೆಯಿತು. ಆಗ ಅವಳ ವಯಸ್ಸು 19. ಮುಮ್ತಾಜ್ ಸತ್ತದ್ದು 1631, ಜೂನ್ 17ನೇ ತಾರೀಕು. ಆಗ ಅವಳಿಗೆ ವಯಸ್ಸು 38. ಅಂದರೆ 19 ವರ್ಷದಲ್ಲಿ 14 ಮಕ್ಕಳ ಹೆತ್ತಿದ್ದಳು. ಬಿಡುವಿಲ್ಲದ ಹೆರಿಗೆಗಳಿಂದ ದೇಹ ಬಲಹೀನವಾಗಿ ಮರಣ ಹೊಂದಿದಳು. 

ಹೆರಿಗೆಯ ನೋವಿನಲ್ಲಿ ಅವಳು ಸುರಿಸಿದ ಕಣ್ಣೀರಿನ ಆಕ್ರಂದದ ದನಿ ತಾಜ್ಮಹಾಲ್ ಒಳಗೆ ಕೇಳಿಸುತ್ತದೆಯೇನು? ವೈಯಕ್ತಿಕ ನೋವೂ ದುಃಖವೂ ಕಾಲದ ಮುಂದೆ ದೊಡ್ಡದಾಗಿ ಕಾಣಿಸುವುದೇ ಇಲ್ಲ. ಕಾಲ ಎಲ್ಲವನ್ನೂ ಬದಲಾಯಿಸಿಬಿಡುತ್ತದೆ. ಅವಳ ಮರಣದ ಸಮಯ ಜಹನಾರಳಿಗೆ 17 ವರ್ಷ ವಯಸ್ಸು. ಹೆಂಡತಿಯನ್ನು ಕಳೆದುಕೊಂಡ ದುಃಖದಲ್ಲಿ ನೊಂದು ಬಳಲುತ್ತಿದ್ದ ತಂದೆಗೆ ಜಹಾನಾರ ನೆರವಾಗಿ ನಿಂತಳು. ಒಂಟಿಯಾಗಿ ದುಃಖದಲ್ಲಿ ಷಹಜಹಾನ್ ಬಳಲುತ್ತಿದ್ದ ಕಾರಣ, ಆಡಳಿತ ಸ್ಥಗಿತಗೊಂಡಿತ್ತು. ಅದನ್ನು ಸರಿಮಾಡಲು ತಾನೇ ಸರಕಾರಿ ಆಜ್ಞೆಗಳನ್ನು ಹೊರಡಿಸಲು, ರಾಜನೊಂದಿಗೆ ಸಮಾಲೋಚನೆಯ ಹೆಸರಿನಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು, ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸಲು ಜಹಾನಾರ ಮುಂದಾದಳು. 

ದೇಶದ ಮೊದಲ ಮಹಿಳೆ ಎಂಬ ಅಂತಸ್ತನ್ನು ಜಹನಾರಳಿಗೆ ನೀಡಿದನು ಷಹಜಹಾನ್. ಅದು ಅವನ ಉಳಿದ ಎರಡು ಪತ್ನಿಯರಿಗೂ, ಜಹನಾರಾಳ ಸಹೋದರಿಗಳಿಗೂ ಅಸೂಯೆ ಉಂಟುಮಾಡಿತು. ತಂದೆಯನ್ನು ನೋಡಿಕೊಳ್ಳಬೇಕೆಂಬುದಕ್ಕಾಗಿಯೇ ಅವಳು ಮದುವೆ ಮಾಡಿಕೊಳ್ಳಲಿಲ್ಲ. ಔರಂಗಜೀಬನಿಂದ  ಗೃಹ ಬಂಧನದಲ್ಲಿ ಇಡಲಾದ ತಂದೆಗೆ ತನ್ನ ಹೊರತು ಬೇರೆ ನೆರವಿಲ್ಲ ಎಂಬುದರಿಂದ, ತನ್ನ ಜೀವನವನ್ನು ಅಪ್ಪನ ಒಳಿತಿಗಾಗಿ ಮುಡಿಪಿಟ್ಟಳು. 

ಮುಮ್ತಾಜ್ ನಿಧನದನಂತರ ಜಹಾನಾರಾಳಿಗೆ ಒಂದು ಪ್ರಮುಖ ಕರ್ತವ್ಯ ಇತ್ತು. ತನ್ನ ಸಹೋದರ ತಾರಾಶೂಗೋವಿಗೆ ನದೀರಾಭಾನುವಿನ ಜತೆಯಲ್ಲಿ ನಿಶ್ಚಯವಾದ ಮದುವೆಯನ್ನು ನಡೆಸಬೇಕು. ಅದು ಅಮ್ಮನ ಕೊನೆಯ ಆಸೆ. ಆದ್ದರಿಂದ, ಅದನ್ನು ಮಾಡಲು ತೀವ್ರವಾಗಿ ಪ್ರಯತ್ನಿಸಿದಳು. ತಾರಾವಿಗೂ ಅವಳಿಗೂ ಇದ್ದ ಸಹೋದರ ವಾತ್ಸಲ್ಯ ಅಪಾರ. ಅವಳು ತಾರಾ ಆಡಳಿತಕ್ಕೆ ಬರಬೇಕೆಂದು ಬಯಸಿದಳು. ಅದು ಔರಂಗಜೀಬನಿಗೆ ಕೋಪವನ್ನುಂಟುಮಾಡಿತು. ಅವಳನ್ನು ತನ್ನ ದಿನಚರಿಯಲ್ಲಿ ‘ಬಿಳಿಯ ಹಾವು’ ಎಂದು ಔರಂಗಜೀಬ್ ಉಲ್ಲೇಖಿಸುತ್ತಾನೆ. ಆ ಕೋಪ ಜಹನಾರಾಳಿಗಿಂತಲೂ, ಮೂರು ವರ್ಷ ಕಿರಿಯಳಾದ ತಂಗಿ ರೋಷನಾಳಿಗೆ ಇತ್ತು. ಅವಳು ನೇರವಾಗಿಯೇ ಜಹನಾರಾಳ ಬಳಿ ತನ್ನ ದ್ವೇಷವನ್ನು ತೋರಿಸಿದಳು. ಔರಂಗಜೀಬನೊಂದಿಗೆ ಸೇರಿಕೊಂಡು ಜಹನಾರಾಳ ಅಧಿಕಾರವನ್ನು ಅಪಹರಿಸಲು ಸಂಚು ಹೂಡಿದಳು. 

ಆದರೆ, ರಾಜನ ಅಚ್ಚುಮೆಚ್ಚಿನ ಮಗಳು ಎಂಬುದರಿಂದ, ಜಹನಾರಾಳ ಅಧಿಕಾರವನ್ನು ಯಾರಿಂದಲೂ ಕಸಿದುಕೊಳ್ಳಲು ಆಗಲಿಲ್ಲ. ಷಹಜಾಹಾನ್ ಆಡಳಿತ ಕಾಲದಲ್ಲಿ ರಾಜ್ಯದ ವಾರ್ಷಿಕ ಆಧಾಯ 60 ಲಕ್ಷ ರೂಪಾಯಿಗಳು. ಆದರೆ ಖರ್ಚು 1 ಕೋಟಿಗೂ ಹೆಚ್ಚು! ಆದ್ದರಿಂದ ಆ ಕೊರತೆಯನ್ನು ತುಂಬಲು ಷಹಜಹಾನ್ ಅನೇಕ ಯೋಜನೆಗಳನ್ನು ಹಾಕಿಕೊಂಡು ರಾಜ್ಯದ ಆಧಾಯವನ್ನು ಒಂದೂವರೆ ಕೋಟಿಗೆ ಹೆಚ್ಚಿಸಿದನು. ಖರ್ಚುಗಳನ್ನು ಕಡಿಮೆ ಮಾಡಿದನು. ಈ ಕಾರ್ಯಗಳಿಂದ ಅವನಿಗೆ ಅರಮನೆಯೊಳಗೆ ಬಹಳ ಕಟುವಾದ ವಿರೋಧಗಳು ಎದುರಾದವು. ಅದನ್ನು ಸಮಾಳಿಸುವುದು ಜಹಾನಾರಾಳ ಮುಖ್ಯ ಕೆಲಸವಾಯಿತು. 

ಮತ್ತೊಂದು ಕಡೆ ಶಹಜಹಾನಿನ ನಂತರ ಆಡಳಿತಕ್ಕೆ ಬರುವವರು ಯಾರು ಎಂಬುದರಲ್ಲಿ ತಾರಾನಿಗೂ ಔರಂಗಜೀಬನಿಗೂ ತೀವ್ರವಾದ ಪೈಪೋಟಿ ಬೆಳದಿತ್ತು. ತಾರಾ ಬಲಹೀನವಾದವನು. ಅವನಿಂದ ರಾಜ್ಯಭಾರ ನಡೆಸಲು ಸಾಧ್ಯವಿಲ್ಲ ಎಂದು ಔರಂಗಜೀಬ್ ವಿರೋಧ ವ್ಯಕ್ತಪಡಿಸಿದ್ದೂ ಅಲ್ಲದೆ, ತನಗೆ ಬೇಕಾದವರನ್ನು ಒಂದುಗೂಡಿಸಿ ಆಡಳಿತವನ್ನು ಅಪಹರಿಸುವ ಸಂಚು ಹಾಕಿದನು. ಆದರೆ, ತಾರಾನಿಗೆ ಪದವಿ ಸಿಗಬೇಕೆಂದು ಜಹಾನಾರ ದೃಢವಾಗಿದ್ದಳು. ಗದ್ಡುಗೆಯ  ಜಗಳ ಕುಟುಂಬದೊಳಗೆ ತಿಕ್ಕಾಟಗಳನ್ನು ಉಂಟುಮಾಡಿತು. 

ತಾರಾ, ಲಾಹೋರಿನ ಪ್ರಸಿದ್ಧವಾದ ಸೂಫಿ ಜ್ಞಾನಿಯಾದ ಮೈಯನ್ಮಿರಿನ  ಶಿಷ್ಯ. ಹಿಂದು ಧರ್ಮಕ್ಕೂ ಇಸ್ಲಾಂ ಮತಕ್ಕೂ ಮಧ್ಯೆ ಹೊಂದಾಣಿಕೆಯನ್ನು ಉಂಟುಮಾಡಲು, ಇಸ್ಲಾಂ ವಿದ್ವಾಂಸರು ಓದಲು ಉಪನಿಷತ್ತುಗಳನ್ನು ಪರ್ಷಿಯನ್ ಭಾಷೆಗೆ ಅನುವಾಧಿಸಿದ್ದಾನೆ. ಅವನ ಶ್ರೇಷ್ಟ ಗ್ರಂಥವಾದ ಮಜ್ಮಾಉಲ್ ಬಹ್ರೆಯಿನ್ ಎಂಬ ಎರಡು ಕಡಲುಗಳ ಸಂಗಮವಾದ ಸೂಫಿ ಇಸಂಗೂ ಹಿಂದು ಸಿದ್ಧಾಂತಗಳಿಗೂ ಇರುವ ಹೊಲಿಕೆಯನ್ನು ಹೇಳುತ್ತದೆ. 

ಸರ್ಮತ್ ಎಂಬ ಜ್ಞಾನಿಯನ್ನು ತಾರಾ ಅನುಸರಿಸಿದನು. ಸರ್ಮತ್ ಹುಟ್ಟು ಯಹೂದಿ. ಆದರೆ ಇಸ್ಲಾಂ ಮತವನ್ನು ಒಪ್ಪಿಕೊಂಡವರು. ಅದಲ್ಲದೆ, ರಾಮ ಲಕ್ಷ್ಮಣರ ಭಕ್ತರು. ಅವರ ಶಿಷ್ಯನಾಗಿ ತಾರಾ ಇರುವುದನ್ನು ಔರಂಗಜೀಬನಿಂದ ಒಪ್ಪಿಕೊಳ್ಳಲಾಲಾಗಲಿಲ್ಲ. ಅದನ್ನು ಮತ ವಿರೋಧ ಕಾರ್ಯವೆಂದು ಖಂಡಿಸಿದನು. ಈ ಸೋದರರ ಜಗಳದ ನಡುವೆ ಜಹಾನಾರ ಸಿಕ್ಕಿಹಾಕಿಕೊಂಡು ಒದ್ಡಾಡಿದಳು. 

ಈಗಿರುವ ಹಳೆಯ ದೆಹಲಿಯನ್ನು ಅಂದು ‘ಷಹಜಹಾನಾಬಾದ್’ ಎಂದು ಕರೆಯಲಾಗುತ್ತಿತ್ತು. ಆ ನಗರವನ್ನು ನಿರ್ಮಾಣಿಸುವಾಗ ಜಹಾನಾರಾ ಐದು ಪ್ರಮುಖ ಸ್ಥಳಗಳನ್ನು ತಾನೇ ಮುಂದೆ ನಿಂತು ವಿನ್ಯಾಸ ಮಾಡಿದಳು. ಹಾಗೆ ರೂಪತಾಳಿದ್ದೇ ಚಾಂದಿನಿ ಚೌಕ್. 

1644 ಮಾರ್ಚ್ 29ನೇಯ ತಾರೀಕು ತಾರಾನ ಮದುವೆಯ ಏರ್ಪಾಡುಗಳನ್ನು ಮಾಡುತ್ತಿರುವಾಗ ಜಹಾನಾರಾಳ ನುಣ್ಣನೆಯ ರೇಷ್ಮೆ ದುಪ್ಪಟದಲ್ಲಿ ಬೆಂಕಿ ಹತ್ತಿಕೊಂಡು ಅವಳ ಗಲ್ಲದಲ್ಲೂ, ಕುತ್ತಿಗೆಯ ಹಿಂಭಾಗದಲ್ಲೂ  ಬೆಂಕಿಯ ಗಾಯಗಳು ಉಂಟಾದವು. ಅವಳ ಸುಂದರವಾದ ಮುಖ ಹಾಳಾದದ್ದನ್ನು ಷಹಜಹಾನನಿಂದ ಸಹಿಸಿಕೊಳ್ಳಲು ಆಗಲಿಲ್ಲ. ಚಿಕಿತ್ಸೆಗಾಗಿ ಹಲವು ದೇಶಗಳಿಂದ ವೈದ್ಯರನ್ನು ಕರತಂದನು. ಆದರೂ ರಾಜಕುಮಾರಿಯ ವಿರೂಪಗೊಂಡ ಮುಖವನ್ನು ಮೊದಲಿನಂತೆ ಹೊಳಪುಗೊಳಿಸಲಾಗಲಿಲ್ಲ. 

ನಾಲ್ಕು ತಿಂಗಳು ನಿರಂತರವಾಗಿ ಚಿಕಿತ್ಸೆ ನಡೆಯಿತು. ಆ ದಿನಗಳಲ್ಲಿ, ತನ್ನ ಮಗಳ ಆರೋಗ್ಯ ಸುಧಾರಿಸಬೇಕೆಂದು ದಿನವೂ 1,000 ಬೆಳ್ಳಿ ನಾಣ್ಯಗಳನ್ನು ಬಡವರಿಗೆ ಧಾನ ನೀಡಿದ್ದು ಅಲ್ಲದೆ ಸನ್ಯಾಸಿಗಳನ್ನೂ ಜ್ಞಾನಿಗಳನ್ನು ಬರಮಾಡಿಕೊಂಡು ಪ್ರಾರ್ಥನೆ ಮಾಡಿದನು. ಷಹಜಹಾನ್ ಅನೇಕ ದಿನಗಳು ಮಗಳ ಪಕ್ಕದಲ್ಲಿ ಕುಳಿತುಕೊಂಡು ವ್ಯಥೆಯಿಂದ ಕಣ್ಣೀರು ಸುರಿಸುತ್ತಿದ್ದನು ಎಂದು ಚರಿತ್ರೆಯ ಟಿಪ್ಪಣಿಗಳು ಹೇಳುತ್ತವೆ. 

ಎಂಟು ತಿಂಗಳು ಚಿಕಿತ್ಸೆ ಮುಂದುವರೆಯಿತು. ಇರಾನಿನ ವೈದ್ಯರ ಪ್ರಯತ್ನದಿಂದ ಗುಣಮುಖಳಾದಳೆಂದೂ , ಬ್ರಿಟೀಷ್ ವೈದ್ಯರೊಬ್ಬರ ನೆರವಿನಿಂದ ಜಹಾನಾರ ಗುಣಮುಖಳಾದಳು ಎಂದೂ ಎರಡು ಬಗೆಯ ಮಾಹಿತಿಗಳು ಇವೆ. ಎರಡನ್ನೂ ದೃಡೀಕರಿಸುವ ಆಧಾರಗಳು ಯಾವುದೂ ಇಲ್ಲ. ಅವಳು ಆರೋಗ್ಯವಾದ ಸಂತೋಷದಲ್ಲಿ 80,000  ರೂಪಾಯಿಗಳನ್ನು ಧಾನವಾಗಿ ಖರ್ಚು ಮಾಡಿದನು ಎಂದೂ, ಚಕ್ರವರ್ತಿ ತನ್ನ ಮಗಳಿಗೆ 139 ಬಗೆಯ ಅಪರೂಪದ ಮುತ್ತುಗಳನ್ನೂ, ವಜ್ರ ಒಂದನ್ನೂ ಬಹುಮಾನವಾಗಿ ನೀಡಿದನೆಂದು ಹೇಳಲಾಗುತ್ತದೆ. ಈ ಮಾಹಿತಿಗಳೊಂದಿಗೆ ಸೂರತ್ ಬಂದರಿನ ಸಂಪೂರ್ಣ ತೆರಿಗೆ ವಸೂಲಿಯನ್ನು ಅವಳ ಆಧಾಯದ ಕೆಳಗೆ ತರಲಾಯಿತು ಎಂಬ ಉಪ ಮಾಹಿತಿಯೊಂದು ಸಹ ಕಾಣಲು ದೊರಕುತ್ತದೆ. 

| ಇನ್ನು ನಾಳೆಗೆ |

‍ಲೇಖಕರು Admin

August 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: