ಕೆ ನಲ್ಲತಂಬಿ ಅನುವಾದ ಸರಣಿ- ಮೆಕಾಲೆಯ ಪಲ್ಲಕ್ಕಿ

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

17

ಭೂಮಿಯನ್ನು ಕಳೆದುಕೊಂಡರೆ ಮತ್ತೆ ಪಡೆದುಕೊಳ್ಳಬಹುದು, ಭಾಷೆಯನ್ನು ಕಳೆದುಕೊಂಡರೇ… ಮರಳಿ ಪಡೆಯಲು ಸಾಧ್ಯವೇ ಇಲ್ಲ ಎಂಬುದನ್ನು ಭಾರತೀಯ ಇತಿಹಾಸ ಮತ್ತೆ ಮತ್ತೆ ನೆನಪಿಸುತ್ತಲೇ ಇದೆ. 

ಭಾರತವನ್ನು ಗುಪ್ತರು ಆಳಿದರು. ಖಿಲ್ಜಿ ವಂಶದವರು ಆಳಿದರು. ಮೊಗಲರು ಆಳಿದರು. ಹೀಗೆ ಚಕ್ರವರ್ತಿಗಳ ಆಳ್ವಿಕೆಗೆ ಒಳಗಾದಾಗ ಭಾರತದಲ್ಲಿ  ಅವರು ಯಾರೂ ತಮ್ಮ ಭಾಷೆಯನ್ನು ಭಾರತದ ಎಲ್ಲಾ ಪ್ರಜೆಗಳೂ ಕಡ್ಡಾಯವಾಗಿ ಮಾತನಾಡಬೇಕೆಂದು ಕಡ್ಡಾಯ ಮಾಡಲಿಲ್ಲ. ನಮ್ಮ ಮೇಲೆ ಹೇರಲೂ ಇಲ್ಲ. 

ಉರ್ದು ಅರೇಬಿಕ್ ಆಡಳಿತ ಭಾಷೆಯಾಗಿದ್ದ ಕಾಲದಲ್ಲಿ, ಸಂಸ್ಕೃತವನ್ನೂ ಅಂಗೀಕರಿಸಲಾಗಿತ್ತು. ಪಾಲಿ, ಪ್ರಾಕೃತ ಬಂದಾಗ, ತಮಿಳು ಭಾಷೆಯನ್ನು ಅಳಿಸಿ ಹಾಕಲಿಲ್ಲ. ಆದರೆ ಬ್ರಿಟೀಷರು ನಮ್ಮನ್ನು ಆಳಿದ 300 ವರ್ಷಗಳಲ್ಲಿ ನಮ್ಮ ಮಾತೃಭಾಷೆಯನ್ನು ಮರೆಸಿ, ಅವರ ಇಂಗ್ಲಿಷ್ ನ್ನು ನಮ್ಮ ಭಾಷೆಯನ್ನಾಗಿಸಿಕೊಂಡದ್ದು ಮಾತ್ರ ನಡೆದುಹೋಯಿತು. 

ಇತಿಹಾಸದ ದೊಡ್ಡ ಅಪರಾಧಗಳಲ್ಲಿ ಇದೂ ಸಹ ಒಂದು. ಇಂಗ್ಲಿಷ್ ನಮಗೆ ಬೇಕಾಗಿಲ್ಲ ಎಂದು ಹೇಳುತ್ತಿಲ್ಲ. ಮಾತೃಭಾಷೆಯನ್ನು ತೊರೆದು ಯಾಕೆ ಇಂಗ್ಲಿಷ್ ನ್ನು ನಮ್ಮ ಭಾಷೆಯನ್ನಾಗಿಸಿಕೊಂಡೆವು? ಕರ್ನಾಟಕದಲ್ಲಿ ಕನ್ನಡ ಮಾತನಾಡುವುದು ಯಾಕೆ ಅವಮಾನ? ಚರಿತ್ರೆಯ ಈ ಪ್ರಶ್ನೆಗೆ ನಮ್ಮ ಉತ್ತರ ಮೌನ ಮಾತ್ರವೇ! 

ಈ ಇತಿಹಾಸದ ಬದಲಾವಣೆಗೆ ಮೊದಲು ಕಾರಣವಾದವನು ಮೆಕಾಲೆ (Macaulay). ಅವನು ರೂಪಿಸಿದ ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿ. ಆ ಶಿಕ್ಷಣ ಪದ್ಧತಿಯಲ್ಲಿ ಕಲಿತು ಸರಕಾರದ ನೌಕರರಾಗಿ ದುಡಿದದವರು ನಾವು. ಅವರ ವಂಶಾವಳಿಗಳು, ಆ ವಿದ್ಯೆಯನ್ನು ಇಂದಿಗೂ ಹಾಗೆಯೇ  ಕಾರ್ಯಾಚರಣೆಯಲ್ಲಿಟ್ಟುಕೊಂಡಿರುವ ಸರಕಾರಗಳು, ವಿದ್ಯೆಯನ್ನು ವ್ಯಾಪಾರವಾಗಿಸಿದ ಸಂಸ್ಥೆಗಳು, ಇಂಗ್ಲೀಷ್ ಕಲಿಕೆ ಮಾತ್ರವೇ ಉತ್ತಮವಾದದ್ದು ಎಂದು ನಂಬುವ ವಿದ್ಯಾ ಸಂಸ್ಥೆಗಳು, ಆ ಸಿದ್ಧಾಂತವನ್ನು ಒಪ್ಪಿಕೊಳ್ಳುವ ಸಾಮಾನ್ಯರು… ಹೀಗೆ ಸಕಲರಿಗೂ ಈ ವಂಚನೆಯಲ್ಲಿ ಪಾಲಿದೆ. 

ಮಾತೃಭಾಷೆಯಲ್ಲಿ ಮಾತನಾಡುವುದು, ಬರೆಯುವುದು, ಆಲೋಚಿಸುವುದು ಅವಮಾನವಾಗಿರುವ ಸಮಕಾಲೀನ ಪರಿಸರದಲ್ಲಿ, ಈ ಅನ್ಯಾಯ ಹೇಗೆ ರೂಪುಗೊಂಡಿತು ಎಂಬುದನ್ನು ನಾವು ಅರಿತುಕೊಳ್ಳದಿರುವುದು ನಾಚಿಕೆಪಡಬೇಕಾದ ಸತ್ಯ. 

1834ನೇ ಇಸವಿ ಜೂನ್ ತಿಂಗಳು 10ನೇ ತಾರೀಕು ಭಾರತದ ಸುಪ್ರೀಂ ಕೌನ್ಸಿಲ್ ಸದಸ್ಯನಾಗಿ, ಮೆಕಾಲೇ ಇಂಗ್ಲೆಂಡಿನಿಂದ ಸಮುದ್ರ ಪ್ರಯಾಣ ಮಾಡಿ ಮದರಾಸಿಗೆ ಬಂದಿಳಿದನು. ಆಗ ವಿಲಿಯಮ್ ಬೆಂಟಿಂಕ್ (William Bentinck) ಗವರ್ನರಾಗಿದ್ದರು. ಕಡಲ ತೀರದಲ್ಲಿ 15 ಗುಂಡುಗಳನ್ನು ಮೊಳಗಿಸಿ ಮೆಕಾಲೆಗೆ ಸ್ವಾಗತ ನೀಡಲಾಯಿತು. ಗವರ್ನರ್ ವಿಲಿಯಮ್ ಬೆಂಟಿಂಕ್ ಬೇಸಿಗೆ ಕಾಲದ ವಿರಾಮಕ್ಕಾಗಿ ಊಟಿಯಲ್ಲಿ ತಂಗಿದ್ದರು. ಆದ್ದರಿಂದ ಅವರನ್ನು ಬೇಟಿಯಾಗಲು ಮೆಕಾಲೆ ಊಟಿಗೆ ಹೊರಟನು. 

ಮೆಕಾಲೆಯನ್ನು ಒಂದು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ನಾಲ್ಕು ಜನ 400 ಮೈಲಿಗಳು, ಬೆಂಗಳೂರು, ಮೈಸೂರು ಹಾದಿಯಲ್ಲಿ 11 ದಿನಗಳು ನಡೆದು ಊಟಿ ತಲುಪಿದರು. ಅಂದು ಮೆಕಾಲೆಯನ್ನು ಹೊತ್ತುಕೊಂಡು ಹೋದ ನಾವು, ಇಂದಿನವರೆಗೆ ಅವನನ್ನು ಇಳಿಸಲೇ ಇಲ್ಲ. ಪ್ರತಿಯೊಬ್ಬ ಭಾರತೀಯನ ಭುಜದ ಮೇಲೂ ಮೆಕಾಲೆ ಕುಳಿತೇ ಇದ್ದಾನೆ. ನಾವೂ ಸಹ ಬೇತಾಳವನ್ನು ಹೊರುವ ವಿಕ್ರಮಾಧಿತ್ಯನಂತೆ, ಮೆಕಾಲೆ ಶಿಕ್ಷಣ ಪದ್ಧತಿಯನ್ನು ಹೊತ್ತುಕೊಂಡು ಪರದಾಡುತ್ತಿದ್ದೇವೆ. 

ಮದರಾಸಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ, ಭಾರತದ ವಿಜಯ ಹೇಗಿತ್ತು ಎಂದು ಕೇಳಿದಾಗ, ‘ಭಾರತದ ಮರಗಳಿಂದ ಬೀಸುವ ಗಾಳಿಯೂ ಸಹ ನನಗೆ ಹಿತವಾಗಿಲ್ಲ. ಒಂದೇ ಶೆಕೆ. ಎಲ್ಲಿ ನೋಡಿದರೂ ಕಪ್ಪು ಮನುಷ್ಯರು. ಗುಡಿಸಲುಗಳು, ಕಡುಬಿಸಿಲು. ಭಾರತ ನನಗೆ ಉಸಿರು ಕಟ್ಟಿಸುತ್ತದೆ’ ಎಂದನು. 

ಯಾರು ಈ ಮೆಕಾಲೆ? ಅವನು ಯಾಕೆ ಭಾರತಕ್ಕೆ ಬಂದ? ಈ ಎರಡು ಪ್ರಶ್ನೆಗಳ ಹಿನ್ನೆಲೆಯಲ್ಲಿ ವಸಾಹತ್ತುಶಾಹಿಯ ಆಡಳಿತದ ಇತಿಹಾಸ ಅಡಗಿದೆ. 

ಥಾಮಸ್ ಬೇಬಿಂಗ್ಟನ್ ಮೆಕಾಲೆ (Thomas Babington Macaulay), 1800ರಲ್ಲಿ ಇಂಗ್ಲೆಂಡಿನಲ್ಲಿ ಹುಟ್ಟಿದವನು. ಅವನ ತಂದೆಯೂ ಸಹ ಸರಕಾರದ ಪ್ರತಿನಿಧಿಯಾಗಿ ಪಶ್ಚಿಮ ಭಾರತದ ದ್ವೀಪಗಳಲ್ಲಿ ಕೆಲಸ ಮಾಡಿದವನು. ಸ್ವಲ್ಪ ಸಮಯ ವ್ಯಾಪಾರವನ್ನೂ ಮಾಡಿದ್ದ. ಮೆಕಾಲೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾನೂನು ಕಲಿತವನು. ಅವನಿಗೆ ಇಬ್ಬರು ಸೋದರಿಯರು. ಬ್ರಿಟೀಷ್ ಸರಕಾರದ ಹೌಸ್ ಆಫ್ ಕಾಮನ್ ಸದಸ್ಯನಾಗಿ ಎರಡು ಬಾರಿ ಸೇವೆ ಸಲ್ಲಿಸಿದವನು. ವಸಾಹತ್ತುಶಾಹಿಯ ವಿಶ್ವಾಸಿಗಳಲ್ಲಿ ಮುಂಚೂಣಿಯಲ್ಲಿ ಇದ್ದವನು. ಅದಕ್ಕಾಗಿ, ಭಾರತದಲ್ಲಿ ವಸಾಹತುಶಾಹಿ ಆಡಳಿತವನ್ನು ಬಲಿಷ್ಠಗೊಳಿಸುವ ಯೋಜನೆಗೆ ಬ್ರಿಟಿಷ್ ಸರಕಾರ, ಮೆಕಾಲೆಯನ್ನು ನೇಮಕ ಮಾಡಿತು. 

ಭಾರತ ಛಿಧ್ರವಾಗಿದೆ. ಏಕ ಕಾನೂನು ಕಾರ್ಯಾಚರಣೆಯಲ್ಲಿ ಇಲ್ಲ. ಆಂತರಿಕ ಸಂಘರ್ಷಗಳಿಂದ ತುಂಬಿದೆ. ಪ್ರಜೆಗಳೋ ಇರುವುದರಲ್ಲಿ ನೆಮ್ಮದಿಯಾಗಿ ಬದುಕಲು ಅಕ್ಕರೆ ತೋರಿಸುತ್ತಾರೆ. ಆದ್ದರಿಂದ ಅಧಿಕಾರವನ್ನು ಮತ್ತಷ್ಟು ಬಲಗೊಳಿಸಿದರೆ ಭಾರತವನ್ನು ಸುಲಭವಾಗಿ ಆಳಬಹುದು ಎಂಬ ವಿಚಾರವನ್ನು ಮೆಕಾಲೆ ಮುಂದಿಡುತ್ತಾನೆ. 

ವಿಶೇಷವಾಗಿ, ನಿರ್ವಹಣೆಯ ಪದ್ಧತಿಗಳನ್ನು ಸುಧಾರಿಸಲು ನಮಗೆ ಸಮರ್ಥವಾದ ಗುಲಾಮರು ಬೇಕು. ಅವರು ನಾವು ಹೇಳುವುದನ್ನು ಚಾಚೂ ತಪ್ಪದೆ ಕಾರ್ಯಾಚರಣೆಗೆ ತರುವ ವಿಶ್ವಾಸಿಗಳಾಗಿ ಇರಬೇಕು. ಅಂತಹವರನ್ನು ನಾವೇ ರೂಪಿಸಬೇಕು. ನಾವು ಕೈಗೊಳ್ಳಬೇಕಾಗಿರುವುದು ಶಿಕ್ಷಣದಲ್ಲಿ ಬದಲಾವಣೆ. ಇಂಗ್ಲಿಷ್ ಶಿಕ್ಷಣವನ್ನು ಪರಿಚಯಿಸಿ ಆ ಶಿಕ್ಷಣ ಕಲಿತವರನ್ನು ನಾವೇ ಕೆಲಸಕ್ಕೆ ಇಟ್ಟುಕೊಂಡರೆ ನಮಗೆ ವಿಶ್ವಾಸದಿಂದ ಇರುತ್ತಾರೆ. 

ಬ್ರಿಟಿಷ್ ರ ಕೈಕೆಳಗೆ ಕೆಲಸ ಮಾಡುವುದು ಗೌರವವೆಂದು ಅಂದುಕೊಳ್ಳುವವರು ಭಾರತೀಯರು. ಆ ಬಲಹೀನತೆಯನ್ನು ಬ್ರಿಟಿಷ್ ಸರಕಾರ ಸರಿಯಾಗಿ ಬಳಸಿಕೊಳ್ಳಬೇಕೆಂಬುದೇ ಮೆಕಾಲೆಯ ಯೋಜನೆಯಾಗಿತ್ತು. 

ಮತ್ತೊಂದು ಕಡೆ ಮೆಕಾಲೆಯ ತಂದೆಯ ವ್ಯಾಪಾರ ಪ್ರಯತ್ನಗಳು ವಿಫಲವಾಗಿ, ಕುಟುಂಬ ಸಾಲದಲ್ಲಿ ಮುಳುಗಿತು. ಆದ್ದರಿಂದ ಭಾರತಕ್ಕೆ ಬಂದು ಕೆಲಸ ಮಾಡುವುದರ ಮೂಲಕ, ತನ್ನ ಸ್ವಂತ ಸಾಲವನ್ನು ತೀರಿಸಿ ಕುಟುಂಬದ ವಸತಿ ಸೌಕರ್ಯಗಳನ್ನು ಹೆಚ್ಚಿಸಿಕೊಳ್ಳಬಹುದು ಎಂದು ಮೆಕಾಲೆ ನಿರ್ಧರಿಸುತ್ತಾನೆ. ಭಾರತೀಯರನ್ನು ಕತ್ತಲಿನೊಳಗೆ ನೂಕಿ, ಅದರ ಮೂಲಕ ದೊರೆತ ಆದಾಯದಿಂದ ತನ್ನ ಸ್ವಂತ ಸಾಲವನ್ನು ಮೆಕಾಲೆ ತೀರಿಸುತ್ತಾನೆ. ಅವನ 12,000 ಪೌಂಡ್ ಜೀತಕ್ಕಾಗಿ ಭಾರತದ ಶಿಕ್ಷಣವನ್ನು ಮಾರಲಾಯಿತು. 

‘ಭಾರತದ ಕಲೆಗಳೂ, ವಿಜ್ಞಾನವೂ, ಸಾಹಿತ್ಯವೂ ಅರ್ಥವಿಲ್ಲದವು. ಅವುಗಳನ್ನು ಒಟ್ಟಾಗಿ ಒಂದು ಕಡೆಯೂ, ಆಂಗ್ಲ ಸಾಹಿತ್ಯದ ಪ್ರಮುಖವಾದ 100 ಪುಸ್ತಕಗಳನ್ನು ಮತ್ತೊಂದು ಕಡೆಯೂ ಇಟ್ಟರೆ, ಭಾರತೀಯ ಸಾಹಿತ್ಯಕ್ಕೆ  ಒಂದು ಬಿಡುಗಾಸಿನ ಬೆಲೆಯೂ ಇಲ್ಲ. ಭಾರತದ ಯಾವ ಭಾಷೆಯೂ ಶಿಕ್ಷಣಕ್ಕೆ ತಕ್ಕ ಭಾಷೆಯಲ್ಲ. ಆಂಗ್ಲ ಭಾಷೆ  ಒಂದೇ ಶಿಕ್ಷಣಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಭಾಷೆಯಾಗಿದೆ. ಆದ್ದರಿಂದ, ಭಾರತ ಪೂರ್ತಿಯಾಗಿ ಇಂಗ್ಲಿಷ್ ಶಿಕ್ಷಣವನ್ನು ತಕ್ಷಣ ಜಾರಿಗೆ ತರುವುದು ಅಗತ್ಯ ಎಂದು ಮೆಕಾಲೆ ಒಂದು ಟಿಪ್ಪಣಿಯನ್ನು ಬ್ರಿಟಿಷ್ ಸರಕಾರಕ್ಕೆ ಕಳುಹಿಸಿದ. 

“ನಾನು ಕ್ರೈಸ್ತನಾಗಿ ಹುಟ್ಟಿದ್ದರೂ ತಾರತಮ್ಯ ತೋರದೆ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂದು ಹೇಳಿಕೊಂಡ ಮೆಕಾಲೆ, ತನ್ನ ಸಮಾನ ನ್ಯಾಯದ ಸಾಕ್ಷಿಯಾಗಿ ಮಾಡಿದ ಕೆಲಸ ಏನು ಗೊತ್ತೇ? ಅಲ್ಲಿಯವರೆಗೆ ನಡೆದುಕೊಂಡು ಬಂದ ಅರಬಿಕ್ ಮತ್ತು ಸಂಸ್ಕೃತ ಶಾಲೆಗಳನ್ನು ಮುಚ್ಚಿಬಿಡುವಂತೆ ಆಜ್ಞೆ ನೀಡಿದ್ದು. ಕಲ್ಕತ್ತಾದಲ್ಲಿ ಚಾಲನೆಯಲ್ಲಿದ್ದ ಮದರಾಸಗಳಿಗೂ, ಸಂಸ್ಕೃತ ಶಿಕ್ಷಣ ಸಂಸ್ಥೆಗಳಿಗೂ ನೀಡುತ್ತಿದ್ದ ಸಹಾಯ ಧನಗಳನ್ನು ತಕ್ಷಣ ರದ್ದುಗೊಳಿಸಿದ್ದು. ಅದೇ ಅವನ ಭಾಷೆಯಲ್ಲಿ ತಟಸ್ಥ ನೀತಿ! 

ಭಾರತದ ಪ್ರಜೆಗಳ ಮೂರ್ಖತನಕ್ಕೆ, ಅವರ ಮತವೇ ಪ್ರಮುಖ ಕಾರಣ. ಆದ್ದರಿಂದ ಅದನ್ನು ಬಿಡಿಸಲು ಕ್ರೈಸ್ತ ಮತದ ಪ್ರಚಾರ ಅನಿವಾರ್ಯ ಎಂದು ಬಹಿರಂಗವಾಗಿ ಹೇಳಿದವನು ಮೆಕಾಲೆ. ಅವನ ವಿಚಾರವನ್ನು ಬ್ರಿಟಿಷ್ ಸರಕಾರವೂ ಬೆಂಬಲಿಸಿತು! 

‘ಭಾರತೀಯ ಪ್ರಜೆಗಳಲ್ಲಿ ಬುದ್ಧಿವಂತರು ಬಹಳಷ್ಟು ಮಂದಿ ಇದ್ದಾರೆ. ಖಗೋಳ ಶಾಸ್ತ್ರ, ಮೂಲಭೂತ ವಿಜ್ಞಾನ, ಗಣಿತ ಶಾಸ್ತ್ರ ಮುಂತಾದುವುಗಳಲ್ಲಿ ಭಾರತೀಯರಿಗೆ ವಿಶೇಷ ಸಾಮರ್ಥ್ಯವಿದೆ. ಅದನ್ನು ನಾವು ಬಳಸಿಕೊಳ್ಳಬೇಕಾದರೆ ಅವರನ್ನು ನಮ್ಮ ಶಿಕ್ಷಣ ಪದ್ಧತಿಯೊಳಗೆ ತರಬೇಕು. ಇಂಗ್ಲಿಷ್ ಶಿಕ್ಷಣವಿಲ್ಲದ ಭಾರತೀಯರ ಜ್ಞಾನ ಬಲಹೀನವಾದದ್ದು. ಅದನ್ನು ತಿದ್ದಿ ಅವರನ್ನು ಇಂಗ್ಲಿಷ್ ಕಲಿತ ಭಾರತೀಯರನ್ನಾಗಿ ರೂಪಿಸುವುದೇ ತನ್ನ ಕೆಲಸ’ ಎಂದು ಮೆಕಾಲೆ ತನ್ನ ಶಿಕ್ಷಣ ನೀತಿಯನ್ನು ಬ್ರಿಟಿಷ್ ಸರಕಾರಕ್ಕೆ ಮಂಡಿಸಿದನು. 

1834ನೇ ಇಸವಿ ಜೂಲೈ 10ರ ಅವನ ಭಾಷಣದ ಮುಖ್ಯವಾದ ಅಂಶ, ‘ಅಧಿಕಾರದಲ್ಲಿ ಭಾರತೀಯರು ಭಾಗವಹಿಸಬೇಕು ಎಂದರೆ, ಭಾರತೀಯರು ಇಂಗ್ಲಿಷ್ ನ್ನು ಪ್ರಥಮ ಭಾಷೆಯಾಗಿ ಕಲಿಯಬೇಕು. ಭಾರತ ತನ್ನನ್ನು ತಾನು ಆಡಳಿತ ಮಾಡಿಕೊಳ್ಳಲು ಸಾಮರ್ಥ್ಯವಿಲ್ಲದ್ದು. ಅದನ್ನು ನಿರ್ವಹಿಸಲು ಬ್ರಿಟಿಷ್ ಸರಕಾರಕ್ಕೆ ಮಾತ್ರ ಸಾಧ್ಯ ಇದೆ. ನಿರ್ವಹಣೆ, ಸೇನೆ, ಸರಕಾರಿ ಇಲಾಖೆ ಮುಂತಾದುವುಗಳಲ್ಲಿ ಕೆಲಸ ಮಾಡಲು ಬಯಸುವ ಭಾರತೀಯರನ್ನು ನಾವು ತಯಾರಿ ಮಾಡಬೇಕು’ ಎನ್ನುತ್ತಾನೆ. ಈ ಅಹಂಕಾರದ ದನಿ ಕೇಳಿ ತಕ್ಷಣ ಭಾರತೀಯ ಪತ್ರಿಕೆಗಳಲ್ಲಿ ವಿರೋಧ ವ್ಯಕ್ತವಾಗುತ್ತದೆ. ಮರುಕ್ಷಣವೇ ಭಾರತೀಯ ಪತ್ರಿಕೆಗಳು ಮೆಕಾಲೆಯನ್ನು ನಿಂಧಿಸುತ್ತವೆ. 

ಜಗತ್ತಿನ ಇತಿಹಾಸದಲ್ಲಿ ಭಾರತದಲ್ಲಿ ಮಾತ್ರವೇ ಅದರ ಅಪರಾಧ ಶಾಸ್ತ್ರದ ಕಾನೂನು ಎಂಬ IPC – ಯನ್ನೂ ಭಾರತೀಯ ಶಿಕ್ಷಣ ಪದ್ಧತಿಯನ್ನೂ ಒಬ್ಬನೇ ವ್ಯಕ್ತಿ ರೂಪಿಸಿರುವುದು. ಮೆಕಾಲೆ ಒಬ್ಬನೇ ಭಾರತೀಯ ಕಾನೂನು ಪದ್ಧತಿಯನ್ನೂ ಶಿಕ್ಷಣ ಪದ್ಧತಿಯನ್ನೂ ರೂಪಿಸುತ್ತಾನೆ. ಬಹುಶಃ ಎರಡೂ ಒಂದೇ ಎಂದು ಅಂದೇ ತೀರ್ಮಾನ ಮಾಡಿದನೋ?! 

ಆದ್ದರಿಂದ ಭಾರತೀಯ ಶಿಕ್ಷಣ ಶಾಲೆಗಳನ್ನು ಶಿಕ್ಷೆಯ ಶಾಲೆಗಳಾಗಿ ಮಾರ್ಪಡಿಸಿದ ಹೆಮ್ಮೆ ಮೆಕಾಲೆಗೆ ಸೇರುತ್ತದೆ. 1835 ಫೆಬ್ರವರಿ 2ನೇಯ ತಾರೀಕು ಅವನು ತನ್ನ ಶಿಕ್ಷಣ ನೀತಿಯನ್ನು ಸಮರ್ಪಿಸುತ್ತಾನೆ. ‘ಇನ್ನು ಮುಂದೆ, ಭಾರತೀಯರ ಮಾತೃಭಾಷೆಯಾಗಿ ಇಂಗ್ಲಿಷ್ ರೂಪುಗೊಳ್ಳುತ್ತದೆ’ ಎಂದು ಮೆಕಾಲೆ ಅಂದು ಮಾತನಾಡಿದ ಮಾತುಗಳು ಇಂದು ವಾಸ್ತವವಾಗಿದೆ. 

ಭಾರತೀಯರಿಗೆ ಇಂಗ್ಲಿಷ್ ಕಲಿಸಿಕೊಡಲು ಇಂಗ್ಲೆಂಡಿನಿಂದ ಅಧ್ಯಾಪಕರುಗಳನ್ನು ಕರೆಸಿಕೊಳ್ಳಲಾಯಿತು. ‘ಭಾರತದ  – ಇಂಗ್ಲಿಷ್’ ಎಂಬ ಪ್ರತ್ಯೇಕ ರೂಪವೊಂದು ಅಂದೇ  ಹುಟ್ಟಿಕೊಂಡಿತು. 

ಇಂಗ್ಲಿಷ್ ಉಚ್ಚರಣೆಯ ಸಮಸ್ಯೆಯನ್ನು ಬ್ರಿಟಿಷ್ ರು ಗೇಲಿಮಾಡಿ ಸಂತೋಷಪಟ್ಟರು. ಇಂಗ್ಲಿಷ್ ಪಾಂಡಿತ್ಯ ಪಡೆದ ಮೇಲ್ವರ್ಗದ ಭಾರತೀಯರು, ತಾವೂ ಇಂಗ್ಲೆಂಡ್ ವಾಸಿಗಳಿಗೆ ಸಮನಾದವರು ಎಂದು ಲಂಡನಿಗೆ ಓದಲು ಹೋದರು. ಐ.ಸಿ.ಎಸ್. ಪದವಿ ಪಡೆದರು. ಅಧಿಕಾರಿಗಳಾಗಿ ಪದವಿ ವಹಿಸಿ, ಸ್ವಂತ ಪ್ರಜೆಗಳನ್ನೇ ಹಿಂಸಿಸಲು ತೊಡಗಿದರು. ಅವರ ಒಂದೇ ಆಸ್ತಿ ಇಂಗ್ಲಿಷ್ ಆಗಿತ್ತು. ಭಾರತ ಸಮಾಜ ತನ್ನ ಸ್ವಂತ ಭಾಷೆಗಳನ್ನು ನಿರಾಕರಿಸಿದ ಇತಿಹಾಸ ಹೀಗೆ ಪ್ರಾರಂಭವಾಯಿತು. 

ಮೆಕಾಲೆ ಹೇಳಿದ ಹಾಗೆ ಪುರಾತನ ಭಾರತದಲ್ಲಿ ಶಿಕ್ಷಣ ಹಾಳಾಗಿತ್ತೇ? ವಿಜ್ಞಾನವನ್ನೂ ಸಾಹಿತ್ಯವನ್ನೂ ಕ್ರಮವಾಗಿ ಕಲಿಸಲಿಲ್ಲವೇ? ಈ ಪ್ರಶ್ನೆಗಳಿಗೆ ನಾವು ಉತ್ತರ  ಕಂಡು ಕೊಳ್ಳಬೇಕಾಗಿರುವುದು ಇಂದಿನ ಅಗತ್ಯ.

| ಇನ್ನೂ ನಾಳೆಗೆ |

‍ಲೇಖಕರು Admin

August 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: