ಕೆ ಎನ್ ಗಣೇಶಯ್ಯ ಕಂಡಂತೆ ’ಮಾಯೆ’

ಆಶಾ ರಘು ಅವರ ಹೊಸ ಕಾದಂಬರಿ ‘ಮಾಯೆ’ಅಕ್ಟೋಬರ್ ಎರಡರಂದು ಬಿಡುಗಡೆಯಾಗುತ್ತಿದೆ.

ಈ ಕೃತಿಗೆ ಕೆ ಎನ್ ಗಣೇಶಯ್ಯ ಅವರು ಬರೆದ ಬೆನ್ನುಡಿ ಹಾಗೂ ಆಶಾ ಅವರ ಮಾತುಗಳು ಇಲ್ಲಿವೆ-

ಆಶಾ ರಘು

’ಮಾಯೆ’ ಕಾದಂಬರಿಯ ವಸ್ತು ಅಲ್ಲಮನ ವಚನದಿಂದ ಪ್ರೇರಿತವಾದದ್ದು.

ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ

ಈ ವಚನದಂತೆಯೇ, ಒಬ್ಬ ವ್ಯಕ್ತಿ ಹೊನ್ನು, ಹೆಣ್ಣು, ಮಣ್ಣುಗಳ ಆಸೆಗೆ ಬಿದ್ದು ದಕ್ಕಿಸಿಕೊಳ್ಳಲು ಹೊರಟು ಅತೀವವಾದ ಘಾಸಿಗೆ ಒಳಗಾಗಿ, ಕಡೆಗೆ ಈ ಮೂರನ್ನೂ ಪಡೆಯುವ ಹಿಂದೆ ತನಗಿದ್ದ ಅಪಾರವಾದ ಆಸೆಯೇ ಕಾರಣ ಎಂದು ಕಂಡುಕೊಳ್ಳುವಂತೆ ಕಾದಂಬರಿಯೊಂದನ್ನು ಯಾಕೆ ರಚಿಸಬಾರದು ಎನ್ನಿಸಿತು. ನಂತರ ಆ ದಿಕ್ಕಿನಲ್ಲಿಯೇ ಒಂದು ಕಲ್ಪಿತ ಕಥೆಯನ್ನು ಹೆಣೆಯತೊಡಗಿದೆ.

ಕಾದಂಬರಿಯ ಕಾಲ ಸುಮಾರು ಹನ್ನೆರಡನೆಯ ಶತಮಾನ ಎಂದುಕೊಂಡೆ. ನಿಧಿಶೋಧದ ವಿಸ್ತಾರವಾದ ಕಥಾ ಎಳೆಯು ಇದ್ದುದ್ದರಿಂದ ಅದು ರಾಜಮನೆತನಗಳ ವಿವರಗಳ ಆಸರೆ ಬೇಡುತ್ತಿದ್ದರಿಂದ, ನಿಜದಲ್ಲಿ ಇದ್ದಂತಹ ಸಾಮ್ರಾಜ್ಯಗಳ ಹೆಸರುಗಳನ್ನು ತೆಗೆದುಕೊಂಡರೆ ಅಪಚಾರವಾಗಬಹುದು ಎಂದು ಮನಗಂಡು, ಪೂರಕವಾಗಿ ಕಲ್ಪಿತ ಸ್ಥಳಗಳನ್ನೂ ರಾಜಮನೆತನಗಳ ವಿವರಗಳನ್ನೂ ಸೃಷ್ಟಿಸಿದೆ. ಆದರೆ ಕಲ್ಪಿತ ಸ್ಥಳಗಳಾದರೂ, ಒಟ್ಟಾರೆ ಅದು ಕನ್ನಡ ನುಡಿಯನಾಡುವ ನಾಡು ಎಂದು ಭಾವಿಸಿದೆ. ಹೀಗೆ ಕಲ್ಪಿತ ನಕ್ಷೆಯೊಳಗೆ ಕಾದಂಬರಿಯ ಕಥೆ ಹುಟ್ಟಿತು.

ಕಾದಂಬರಿಯ ನಾಯಕ ಪರಸ್ತ್ರೀಯನ್ನು ತನ್ನವಳನ್ನಾಗಿಸಿಕೊಳ್ಳಲು ಇನ್ನಿಲ್ಲದ ಹಾಗೆ ಯತ್ನಿಸಿ ಅತೀವ ದುಃಖಕ್ಕೆ ಒಳಗಾಗುತ್ತಾನೆ. ಪರರ ಭೂಮಿಯನ್ನು ಆಕ್ರಮಿಸಿಕೊಳ್ಳುವ ಪ್ರಯತ್ನದಲ್ಲಿ ರಕ್ತಪಾತಕ್ಕೆ ಕಾರಣವಾಗಿ ಸೆರೆವಾಸ ಅನುಭವಿಸುತ್ತಾನೆ. ನಿಧಿಶೋಧದ ಬೆನ್ನು ಹತ್ತಿ ಊರೂರು ಸಂಚರಿಸಿ, ನಾನಾ ರೀತಿಯ ಅಕೃತ್ಯಗಳನ್ನು ಎಸಗಿ ಇನ್ನೇನು ನಿಧಿ ದಕ್ಕಿತು ಎನ್ನುವುದರಲ್ಲಿ ಪ್ರಾಣಕ್ಕೇ ಕುತ್ತು ತಂದುಕೊಳ್ಳುತ್ತಾನೆ. ಈ ಮೂರಕ್ಕೂ ಒಂದಕ್ಕೊಂದು ಸಂಬಂಧವಿದೆಯೇ? ಅಥವಾ ಮೂರರ ಸಮಾನ ಅಂಶ ಯಾವುದು ಎಂದು ಚಿಂತಿಸುವಾಗ ಅವನಿಗೆ ಆಸೆ ಎನ್ನುವ ಉತ್ತರ ಗೋಚರಿಸುತ್ತದೆ! ಆಸೆಯನ್ನು ಮೀರುವ ಪ್ರಯತ್ನವೂ, ಸರಳವಾದ ಬದುಕನ್ನು ಕಟ್ಟಿಕೊಳ್ಳುವ ಪರಿಯೂ ಅದರ ಮುಂದಿನ ಕಥೆ.

ಜಯಕೀರ್ತಿಯ ಸುದೀರ್ಘ ನಿಧಿಶೋಧ ಕಾರ್ಯ, ಮದನನ ಜನ್ಮರಹಸ್ಯ, ವೈಶಾಲಿಯ ಪಾಡು, ವೇಶ್ಯೆ ಸನಕವ್ವನ ಅಂತರಂಗ, ಮಂಗಳೆಯ ತವರಿನ ಹಿನ್ನೆಲೆ, ಹೆಣ್ಣೊಬ್ಬಳ ಸಹಗಮನದ ಚಿತ್ರಣ ಮೊದಲಾದ ವಿವರಗಳು ಓದುಗರಿಗೆ ಆಸಕ್ತಿದಾಯಕವಾಗಬಹುದು ಎಂದು ಭಾವಿಸುತ್ತೇನೆ.

ಈ ಕಾದಂಬರಿಗೆ ಡಾ.ಕೆ.ಎನ್.ಗಣೇಶಯ್ಯನವರು ಬೆನ್ನುಡಿ ಬರೆದುಕೊಟ್ಟಿದ್ದಾರೆ. ಅವರಿಗೆ ನಾನು ಆಭಾರಿ. ಸುಂದರ ಮುಖಪುಟ ವಿನ್ಯಾಸ ಮಾಡಿರುವ ಶ್ರೀ ಚಂದ್ರನಾಥ ಆಚಾರ್ಯ ಅವರಿಗೂ, ಪ್ರಕಟ ಮಾಡುತ್ತಾ ಇರುವ ಸಾಹಿತ್ಯಲೋಕ ಪಬ್ಲಿಕೇಶನ್ಸ್ ನ ಶ್ರೀ ರಘುವೀರ್ ಅವರಿಗೂ, ಅಚ್ಚುಕಟ್ಟಾಗಿ ಮುದ್ರಿಸುತ್ತಿರುವ ಲಕ್ಷೀ ಮುದ್ರಣಾಲಯದ ಸಿಬ್ಬಂದಿಗೂ, ಸಲಹೆ ಸಹಕಾರವನ್ನು ನೀಡಿದ ನನ್ನ ಪತಿ ಶ್ರೀ ಕೆ.ಸಿ.ರಘು ಅವರಿಗೂ ಮತ್ತು ಪ್ರೀತಿಯ ಓದುಗರಾದ ತಮ್ಮೆಲ್ಲರಿಗೂ ನಾನು ಕೃತಜ್ಞಳು.
-ಆಶಾ ರಘು

ಕೆ ಎನ್ ಗಣೇಶಯ್ಯ

ಸುಖ ಪಡೆಯಲೆಂದು ಹೆಣ್ಣು, ಹೊನ್ನು ಮತ್ತು ಮಣ್ಣುಗಳ ಹಿಂದೆ ಬಿದ್ದ ಜೀವಕ್ಕೆ ಆ ಸುಖವು ಎಂದೂ ಮರೀಚಿಕೆಯಾಗಿಯೇ ಉಳಿಯುತ್ತದೆ ಎನ್ನುವುದು ಚಿರಪರಿಚಿತ ಬೋಧನೆಯಷ್ಟೇ ಅಲ್ಲದೆ, ಮಾನವನ ಚರಿತ್ರೆಯುದ್ದಕ್ಕೂ ಪುನರಾವರ್ತಿತವಾಗಿ ಗೋಚರಿಸುವ ಸತ್ಯ ಕೂಡ. ಇದರ ಇನ್ನೊಂದು ಮಗ್ಗುಲಾಗಿ ನೆಲೆಯಾಗಿರುವ ಮತ್ತೊಂದು ಸತ್ಯವೆಂದರೆ ಆ ಮೂರೂ ಆಸೆಗಳನ್ನು ತೊರೆದ ಜೀವಕ್ಕೆ ಆಹ್ಲಾದಕರ ಆನಂದದ ಜೊತೆಗೆ ಪಾರಮಾರ್ಥಿಕ ಸುಖವೂ ದೊರೆಯುತ್ತದೆ ಎನ್ನುವುದು. ಈ ಎರಡೂ ಸತ್ಯಗಳನ್ನು ನಿರೂಪಿಸಲೆಂದೆ ಆಶಾ ರಘು ಅವರು ಈ ಕಾದಂಬರಿಯನ್ನು ಕಟ್ಟಿಕೊಟ್ಟಿದ್ದಾರೆಯೇ ಎಂಬ ಅನಿಸಿಕೆ ಓದುಗರಲ್ಲಿ ಮೂಡುವುದು ಖಂಡಿತ. ಅಷ್ಟರಮಟ್ಟಿಗೆ ಈ ಕಾದಂಬರಿಯ ರಚನೆ ಮತ್ತು ಉದ್ದೇಶ ಸಫ಼ಲಗೊಂಡಿದೆ ಎನ್ನುವುದೂ ಖಚಿತ.

ಒಂದು ಚಾರಿತ್ರಿಕ ಹಿನ್ನೆಲೆಯಲ್ಲಿ ಬೆಳೆಯುವ ಕಥಾಹಂದರವು, ಅದರ ಪಾತ್ರಗಳ ನೆನಪುಗಳ ಸರಮಾಲೆಯಾಗಿಯೇ ಓದುಗನಿಗೆ ತೆರೆದುಕೊಳ್ಳುವುದು ಈ ಕಾದಂಬರಿಯ ಒಂದು ವಿಶೇಷ. ಬಲವಂತದಲ್ಲಿ ಪ್ರೀತಿಯನ್ನು ಪಡೆಯುವ ಛಲ, ನಿಧಿಯ ಬೇಟೆ, ಆಸ್ತಿಯ ಆಸೆ, ಸಿಂಹಾಸನದ ಉತ್ತರಾಧಿಕಾರಿಯ ಜನ್ಮ ರಹತ್ಯ ಮುಂತಾದ ಹೆಗ್ಗುರುತುಗಳಿಗೆ ಓದುಗನನ್ನು ಕಟ್ಟಿಹಾಕಿ, ಆ ಹೆಗ್ಗುರುತುಗಳ ನಕ್ಷೆಯೊಳಗೆ ಕತೆಯನ್ನು ಬೆಳೆಸುತ್ತಾರೆ ಆಶಾ.

ಕಥಾನಾಯಕ ಅತಿಯಾಗಿ ಪ್ರೀತಿಸಿದ್ದ ಬಾಲ್ಯದ ಪ್ರೇಯಸಿಯು ವಿಧಿಯ ಕೈಚಳಕದಿಂದ ದೂರವಾದ ನಂತರ, ಆಕೆಯ ಸ್ಥಾನದಲ್ಲಿ ನೆಲೆಯಾದ ಮತ್ತೊಂದು ಹೆಣ್ಣು ಅವನ ನೈತಿಕ ಸಮತೋಲನವನ್ನು ಸಂಪೂರ್ಣವಾಗಿ ಕದಡಿ ಅವನಲ್ಲಿ ’ಮಾನವ ಸಹಜ’ ದುರಾಸೆಗಳನ್ನು ಆಳವಾಗಿ ಬಿತ್ತಿ ಬೆಳೆಸುತ್ತಾಳೆ; ಪರಿಣಾಮವಾಗಿ, ತನ್ನದಲ್ಲದ ಮಣ್ಣನ್ನು ಕಬಳಿಸಿ, ಪರರ ಹೊನ್ನಿಗೆ, ಹೆಣ್ಣಿಗೆ ಕೈ ಚಾಚಿದ ಅವನ ಜೀವನ ಕೊನೆಗೆ ಸುಂಟರಗಾಳಿಗೆ ಸಿಕ್ಕ ತರಗೆಲೆಯಂತಾಗುತ್ತದೆ. ಈತನ ಅಮಾನವೀಯ ಕೃತ್ಯಗಳಿಗೆ ಕನ್ನಡಿ ಹಿಡಿಯುವಂತೆ ಸೃಷ್ಟಿಸಲಾಗಿರುವ ಮತ್ತೊಂದು ಪಾತ್ರದ ಅಮಾಯಕ ವ್ಯಕ್ತಿ, ತಾನು ವಾರಸುದಾರನಾಗಿದ್ದ ಹೊನ್ನನ್ನೂ, ಅಧಿಕಾರವನ್ನೂ ದೂರ ತಳ್ಳಿ, ಸ್ನೇಹಕ್ಕೆ ಸತ್ಯಕ್ಕೆ ಜೋತುಬಿದ್ದ ಕಾರಣ, ಸರಳವಾದರೂ ಸುಂದರ ಹಾಗೂ ಆನಂದಮಯ ಜೀವನ ಸಾಗಿಸುತ್ತಾನೆ.

ಒಟ್ಟಿನಲ್ಲಿ, ಸುಖವು ಸುತ್ತಲೂ ಇದ್ದರೂ ಅದನ್ನು ಗ್ರಹಿಸದೆ, ಮತ್ತೆಲ್ಲೋ ಅದು ಸಿಗುತ್ತದೆ ಎಂಬ ಭ್ರಮೆಯ ’ದೂರ ತೀರ’ಕೆ ಕರೆದೊಯ್ಯುವ ’ಮೋಹನ (ದ) ಮುರಳಿ’ಯ ಕರೆಗೆ ಬಲಿಯಾಗುವ ಎಲ್ಲ ಮನಸುಗಳಿಗೆ ಎಚ್ಚರಿಕೆಯ ಕರೆಘಂಟೆಯಂತೆ ಆಶಾ ಅವರ ಈ ಕಾದಂಬರಿ ಮೂಡಿ ಬಂದಿದೆ.

‍ಲೇಖಕರು Admin

September 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kavitha

    The quote is meaningful – Novel seems to be interesting and may it leeds humans towards humanity… All the best

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: