ಕೃಷ್ಣಾ ಕೌಲಗಿ
ಬಡತನವಿದ್ದರೂ
ಅದಕು, ಇದಕು, ಎದಕೂ
ಒಲವನ್ನೇ ಬಳಸಿಕೊಳ್ಳುವದು…
ಒಬ್ಬರಿಗೊಬ್ಬರು
ವೀಣೆ- ತಂತಿಯ ಹಾಗೆ
ಅನ್ಯೋನ್ಯವಾಗಿರುವದು…
ನಗುನಗುತ್ತ ಪುಟ್ನಂಜಿ
ಉಪ್ಗಂಜಿ ಕುಡಿಸಿದರೂ
ಅದೇ ಪ್ರಪಂಚ ಎಂದು ಸುಖಿಸುವದು..
ಒಬ್ಬರು ಬಳಿಯಿರದಿದ್ದರೂ
ಮತ್ತದೇ ಬೇಸರ, ಅದೇಸಂಜೆ,
ಅದೇ ಏಕಾಂತವೆಂದು ಬೇಸರಿಸುವದು.
ಇಬ್ಬರೂ ಜೊತೆಯಿದ್ದರೆ ,
ಗಗನವು ಎಲ್ಲೋ ಭೂಮಿಯು ಎಲ್ಲೋ?-
ಎಂದು ಅರಿವಾಗದಿರುವದು…

ಒಬ್ಬರು ಅಳು ನುಂಗಿ,
ಒಮ್ಮೆ ನಕ್ಕರೂ ಇನ್ನೊಬ್ಬರು
ಮುಖವರಳಿಸಿ ನಗುವದು…
ಮೆಲ್ಲುಸಿರೇ ಸವಿಗಾನವೆನಿಸಿ
ಎದೆ ಝಲ್ಲೆನೆ ಹೂವಿನ ಬಾಣ
ತಾಗಿದಹಾಗೆ ‘ ನಲುಗುವದು’…
ಹೊನ್ನಗಿಂಡಿಯ ಹಿಡಿದು ಕೈಯಲಿ
ಹೇಮವಾರಿಯ ಚಿಮುಕಿಸುತ್ತ
ಭಾವಲೋಕದಲ್ಲಿಯೇ ಯಕ್ಷಲೋಕ
ರಚಿಸುವದು…
ಆಕಾಶವೇ ಬೀಳಲಿ ಮೇಲೇ,
ಭುಮಿಯೇ ಬಾಯ್ಬಿಡಲಿ ಅಲ್ಲೇ,
ಒಬ್ಬರಿಗೊಬ್ಬರು ಕೈ-ಬಿಡದಿರುವದು…
ಕನ್ಯೆ- ಕೆನ್ನೆ, ತುಟಿ- ಕಟಿಗಳ ಇಂದ್ರಲೋಕದಿಂದ
ಆಗಾಗ ಭೂಮಿಗೂ ಇಳಿದು ಬರುವದು…
ಕವಿ- ಕಾವ್ಯ ಲೋಕದ ಕಣ್ಣಿನಲ್ಲಿ,
ಹೇಳಿದ್ದು ಒಂದು, ಎದೆಯಲ್ಲಿ
ಇದ್ದದ್ದು ಮುನ್ನೂರ ಒಂದು…
ಎಂಬುದನ್ನು ಅರಿಯುವದು…






0 Comments