ಕುಸುಮ ಪಟೇಲ್
ಎಮ್ ಆರ್ ಕಮಲಾ ಅವರ ಅನುವಾದಿತ ಕವಿತೆ “ತತ್ ಕ್ಷಣಗಳು” ಅನ್ನು ಓದಿದ ಮೇಲೆ ನಾನು ಕೆಲ ಹಿಂದೆ ಬರೆದ “ಬದುಕ ಬಾಳ ಸೀರೆ” ಕವಿತೆ ಇಲ್ಲಿದೆ.
ಬದುಕ ಬಾಳ ಸೀರೆ
ಎಲ್ಲಾ ಎಳೆ ಬಿಚ್ಚಿ ಬಿಡಿಸಿ
ಮತ್ತೆ ನೇಯುವಂತಾದರೆ –
ನೇಯಬಹುದು ಎಲ್ಲಾ –
ನೆಟ್ಟ ನೇರ ಸಪೂರ…
ನೇಯಬಹುದು
ರಾಶಿ ನಕ್ಷತ್ರಗಳ ಹೆಕ್ಕಿ
ಸೆರಗ ತುಂಬ
ಹಾಲು ಬೆಳದಿಂಗಳ
ಸುಂದರ ಬಿಂಬ
ಉಡುಜರಿಗೆಗೂ ತುಂಬಬಹುದು
ಅದರದೇ ಢಂಬ !
ನೇಯಬಹುದು ಅಂಚಿನುದ್ದಗಲಕ್ಕೂ
ಪ್ರೇಮರಾಗಗಳ ತಂಪು
ಮಾರ್ದನಿಯ ಕಂಪು

ನೇಯಬಹುದು ಏನೆಲ್ಲ
ಆದರೆ ವಿಧಿ ಬಲ್ಲ
ಬದುಕು ಬೇವು ಬೆಲ್ಲ
ಇದು ಅವನದೇ ಆಟ
ಬದುಕ ನೇಯ್ಗೆಯಲಿ ಅವನದೇ ಮೇಲಾಟ !!
ಒಬ್ಬೊಬ್ಬರಿಗೆ ಒಂದೊಂದೇ ಸೀರೆ
ಬಣ್ಣ ಯಾವುದಾದರೂ ಸರಿಯೆ
ಉಡಬಹುದು ನೀ ಸೀರೆ
ನೆರಿಗೆ ಈಚೆ ಆಚೆ
ಸೆರಗು ಜಾರದ ಹಾಗೆ
ಮಾನ ಮುಚ್ಚುವ ಹಾಗೆ
ಇದು ಬದುಕ ಬಾಳ ಸೀರೆ
ಅದಕೇ ಇದಕೆ ಎಲ್ಲಿಲ್ಲದೆ ಭಿಡೆ
ನನಗೆ ಸಣ್ಣ ಹುಡುಗಿಯ ಹಾಗೆ-…
ಒಂದು ಸಣ್ಣ ಆಸೆ..
ಮತ್ತೆ ಬಾಳಸೀರೆ
ನೇಯುವಂತಾದರೆ ….!!!!






Thank You Avadhi