ಕುಸುಮಬಾಲೆ ಕಾಲಂ : Wherever we go ಭೂತಗಳು follows…

ನಮ್ಮೂರ ಹುಡುಗ! ಅವನ ಮನೆ ಇಲ್ಲೇ ಬೆಂಗಳೂರಿನ ಜಯನಗರದಲ್ಲಿ. ಬಾಡಿಗೇದಲ್ಲ, ಸ್ವಂತದ್ದು. ಆಗಲೇ ಎರಡು ಮೂರು ಸಲ ಫಾರಿನ್ ಟ್ರಿಪ್ ಮುಗಿಸಿದಾನೆ. ಅವನ ಹೆಂಡತಿ ಕೂಡ ಸಾಪ್ಟ್ವೇರ್ ಎಂಜಿನಿಯರು. ಮನೆಯ ಇಂಟೀರಿಯರ್ ನೋಡಬೇಕು ನೀವು. ಅಬ್ಬಾ!! ಹಳ್ಳಿಯ ಸರಕಾರೀ ಸ್ಕೂಲಲ್ಲಿ ಓದಿ ಹಿಂಗೆ ದೊಡ್ಡ ಹುದ್ದೇಲಿರೋರ ಬಗ್ಗೆ, ದೊಡ್ಡ ಸಂಬಳ ತಗೊಳೋರ ಬಗ್ಗೆ ಒಂಥರಾ ಹೆಮ್ಮೆ ನನಗೆ. Yes.. we are ಸಗಣಿ to ಸೈಬರ್. ಅಂತ. ಯಾವಾಗಾದರೂ ಮನೆಗೆ ಹೋಗ್ತೀವಿ, ಹೋಟೆಲಿಗೆ ಒಟ್ಟಿಗೇ ಹೋಗ್ತೀವಿ. ಕೆಲವೊಮ್ಮೆ ಅವನದೇ ಕಾರಲ್ಲಿ ಊರಿಗೂ. ಬೆಂಗಳೂರಿನ ಓಡಾಟ. ಜೊತೆಯಲ್ಲಿ ಮಾಡೋ ಶಾಪಿಂಗ್. ನೋಡುವ ಸಿನೆಮಾ. ಮನೆಗಳಲ್ಲಿ ಕೂತು ಮಾಡುವ ಚರ್ಚೆ. ಎಲ್ಲವೂ ಹಿತಕರ. ಮೈಸೂರು ರಸ್ತೆಯಲಿ ನಡುದಾರಿಯ ಕಾಫಿವರೆಗೂ ,ನಂತರ ಮೈಸೂರು ದಾಟಿಕೊಂಡು ಊರಿನ ಹತ್ತಿರತ್ತಿರದವರೆಗೂ ನಾವದೆಷ್ಟು ಹತ್ತಿರ ಹತ್ತಿರ ಮತ್ತು ಮಾತುಗಳಿಗೆ ಅದೆಷ್ಟು ಸಮಾನ ವಿಷಯಗಳು. ಆದರೆ ಆಮೇಲೆ? ಊರು ಸಿಕ್ಕ ಮೇಲೆ? ಊರೊಂದೇ ಆದರೂ ನಮ್ಮ ದಾರಿಗಳು ಬೇರೆ. ಬೀದಿಗಳು ಬೇರೆ. ಕೇರಿಗಳು ಬೇರೆ . ಮನೆತನ ಬೇರೆ .ಹಿನ್ನೆಲೆ ಬೇರೆ. ಎಷ್ಟೆಷ್ಟೊಂದು ಬೇರೆ ಬೇರೆ ಬೇರೆಗಳು.
ಬೇಕಾದಷ್ಟು ಸಲ ಸೂಕ್ಷ್ಮವಾಗಿ ಗಮನಿಸಿದ್ದೇನೆ.ಆ ದೊಡ್ಡ ಸಂಬಳದ ಹುಡುಗ, ಬೆಂಗಳೂರಲ್ಲಿ ಕಾರು ಚಲಾಯಿಸುವಾಗ, ದೊಡ್ಡ ದೊಡ್ಡ ಮಾಲ್ ಗಳಲ್ಲಿ, ಆಫೀಸಿನಲ್ಲಿ, ಅಲ್ಲಿ ಇಲ್ಲಿ ಓಡಾಡುವಾಗ ಇರುವ ಕಾನ್ಫಿಡೆಂಟ್ ಮಾತು, ನಡಿಗೆ, ಊರಲ್ಲಿ ಅಡ್ಡಾಡುವಾಗ ಇರೋದಿಲ್ಲ. ಮಾಮೂಲಿನಂತೆ ಇರುವ ಹಾಗೆ ತೋರಿಸಿಕೊಂಡರೂ ಅದ್ಯಾವುದೋ ಒಂದು ನೆರಳು ಅವನನ್ನೇ ಹಿಂಬಾಲಿಸಿರುವಂತೆ, ಇವನು ಹೋದ ಕಡೆಎಲ್ಲಾ ಅಟ್ಟಿಸಿಕೊಂಡು ಬರುವಂತೆ, ಅವನು ಅದಕ್ಕೆ ಹೆದರಿದಂತೆ. ಒಮ್ಮೊಮ್ಮೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ. ಕಾರಣ ಇಷ್ಟೆ. ಈ ದೊಡ್ಡ ನಗರರಲ್ಲಿ ಅವನ ಗುರುತು, ಮೊದಲಿಗೆ ಅವನ ಹಣ. ಉಳಿದದ್ದು ಆಮೇಲೆ. ಅಥವಾ ಉಳಿದದ್ದು ನಗಣ್ಯ. ಆದರೆ ಊರಲ್ಲಿ? ಮೊದಲು ನೆರಳು ಉಳಿದದ್ದು ಅಮೆಲೆ.
ಪ್ರತಿ ಸಲ ಆ ಭೂತ ಊರ ಬಾಗಿಲಲ್ಲೇ ಕಾದು ಕೂತಿರುತ್ತದೆ. ಊರೊಳಗೆ ಹೋಗುತ್ತಿದ್ದಂತೆಯೇ ಗಬಕ್ ಅಂತ ಅಂಟಿಕೊಂಡುಬಿಡ್ತದೆ. ಇನ್ಯಾವ ಜಾಹೀರಾತಿನ ಅಂಟುಗಳೂ ಇಲ್ಲ ಅದರ ಮುಂದೆ. ಮತ್ತೆ ಊರು ಬಿಟ್ಟು ಬರುವಾಗ ಊರು ಹಿಂದಕ್ಕೆ ಹೋದಂತೆ ಭೂತವೂ ದೂರದಲ್ಲಿ ನಿಂತು ನಗುತ್ತದೆ. ಕಾರು ಮುಂದೆ ಸಾಗುತ್ತಾ , ಭೂತದ ಆಕಾರ ಕಿರಿದಾಗುತ್ತಾ ಆಗುತ್ತಾ ಇವನ ಮಾತು ಸಹಜವಾಗುತ್ತದೆ.
ಯಾವುದದು ಭೂತ?? ನಂಗೊತ್ತು ಜಾತಿಯೆಂದು ಲೆಕ್ಕ ಹಾಕಿರುತ್ತೀರಿ ನೀವು. ಲೆಕ್ಕಾಚಾರ ಸರಿಯೇ. ಆದರೆ ಅದೊಂದೇ ಅಲ್ಲ. ಬಡತನ. ಕುಟುಂಬದ ಹಿನ್ನೆಲೆ. ಅವರ ಪೂರ್ವಿಕರ ಪಾಪ, ಪುಣ್ಯ. ಇನ್ನೊಂದು ಮತ್ತೊಂದು ಎಲ್ಲ ಸೇರಿದೆ ಇಲ್ಲಿ. ನಗರಕ್ಕೂ ಹಳ್ಳಿಗೂ ಹೋಲಿಕೆ ಮಾಡುವಾಗೆಲ್ಲ ನನಗೆ ಕಾಣುವ ಮುಖ್ಯ ವ್ಯತ್ಯಾಸ ಇತಿಹಾಸದ್ದು. ಇಲ್ಲಿ ನೀವು ನಿಮ್ಮ ಇತಿಹಾಸವನ್ನ ಬೇಕಾದ ಹಾಗೆ ಬರಕೊಳ್ಳಬಹುದು. ಪ್ರತಿಷ್ಟಿತ ಏರಿಯಾಗಳಲ್ಲೋ, ಮಂತ್ರಿ, ಸ್ಟರ್ಲಿಂಗ್, ಪೂರ್ವಾಂಕರ ದಂತಹ ದುಬಾರೀ ಫ್ಲಾಟ್ಗಳಲ್ಲೋ ವಾಸಿಸುವವರು. ಯಾವ ಹಳ್ಳಿಯ ಯಾವ ಹಿನ್ನೆಲೆಯಿಂದಾದರೂ ಬಂದಿರಲಿ, ಇಲ್ಲಿ ಸರೀಕರ ಹಾಗೆಯೇ ಹೈ ಫೈ ಆಗಿ ಬದುಕುತ್ತಿದ್ದರೆ ಆಯ್ತು, ನಮ್ಮ ತಂದೆ ಎಂ, ಎಲ್ ಎ ಆಗಿದ್ದರು ಅಂದರೂ ನಂಬುತ್ತಾರೆ. ನಮ್ಮ ಇಡೀ ಜಿಲ್ಲೆಗೇ ನಾವೇ ದೊಡ್ಡ ಜಮೀನುದಾರರು. ದೊಡ್ಡ ಮನೆತನದವರು ಅಂದರೂ. ಹೌದಾ ಅಂತ ಹಲ್ಕಿರಿಯುತ್ತಾರೆ. ಮತ್ತು ಅವರು ಹೇಳಿದ್ದನ್ನೂ ನೀವು ನಂಬಬೇಕು. ಆದರೆ ಹಳ್ಳಿಯಲಿ ಹಾಗಲ್ಲ. ನಿಮ್ಮ ತಲೆಮಾರುಗಳ ಇತಿಹಾಸ ಎಲ್ಲರಿಗೂ ಗೊತ್ತಿರುತ್ತದೆ. ಮನೆ ಮನೆಯ ಕಥೆಯೂ ಮನೆ ಮನೆಯಲೂ ಕಥೆಯಾಗಿ ಹರಡಿರುತ್ತದೆ.
ಇತಿಹಾಸ ಮುಖ್ಯ. ದೇಶಕ್ಕೂ ಮನೆಗೂ. ಮನುಷ್ಯನಿಗೂ. ಆದರೆ ಈ ಇತಿಹಾಸ ನಮ್ಮ ಹೆಮ್ಮೆಯಾದರೆ ಸರಿ. ಕಿರೀಟದಂತೆ ಹೊತ್ತುಕೊಂಡು ಓಡಾಡಬಹುದು. ನಮಗೂ ಖುಷಿ. ನೋಡೋರಿಗೂ ಖುಷಿ. ಅದೇ ಇತಿಹಾಸ ನಮ್ಮ ಕೀಳರಿಮೆಯಾದರೆ? ಕಾಡುವ ಭೂತವಾದರೆ? ಕುಗ್ಗಿಸಿದರೆ? ಅದೇ ಆ ಹುಡುಗನಿಗೆ ಪ್ರತಿ ಸಲ ಆಗುವುದು. ಅವನಿಗೆ ಅಂತಲ್ಲ, ತುಂಬ ಜನರಿಗೆ. ಈ ಜನರೇಕೆ ಹೀಗೆ? ಹಿಂದೆ ಬಾಳಿ ಬದುಕಿದ ಮನೆಗಳ ಎಷ್ಟೋ ಹುಡುಗರು ಅಯೋಗ್ಯರಾಗಿದಾರೆ. ಜಗಲಿ ಮೇಲಣ ಮೀಟಿಂಗುಗಳಲಿ ಜನ ಅವರನ್ನೂ ಆಡುತ್ತಾರೆ ಹೌದು. “ನೋಡಯ್ಯಾ, ಎಂತಾ ಅಪ್ಪನ ಹೊಟ್ಟಲಿ ಎಂತಾ ಮಗ ಉಟ್ಬುಟ್ಟ” ಅಂತ . ಆದರೂ ಅವರನ್ನ ಅವರ ಫ್ಯಾಮಿಲಿಯ ಇತಿಹಾಸವನ್ನ ಗಮನದಲ್ಲಿಟ್ಟುಕೊಂಡು ನಿಂದನೆ ತೀಕ್ಷ್ಣಗೊಳಿಸುವುದಿಲ್ಲ. ಒಂದೊಂದ್ಸಲ ಕೆಟ್ಟುಕೂತಿರೋ ಇವನನ್ನ ಬೈಯೋದಕ್ಕಿಂತ ಸತ್ತು ಮಣ್ಣು ಸೇರಿರೋ ಅವರ ತಾತ ಮುತ್ತಾತರನ್ನ ಹೊಗಳಿದ್ದೇ ಹೆಚ್ಚಿರುತ್ತದೆ. ಯಾವಳೋ ವೇಶ್ಯೆಯ ಮಗನೋ. ಚಮ್ಮಾರನ ಮಗನೋ. ಹಿಂದೆ ಕೂಲಿ ಮಾಡುತ್ತಿದ್ದ ಮನೆತನದ ಮಕ್ಕಳೋ ಸಾಧನೆ ಮಾಡಿದರೆ “ಎಂತೆಂತವರ ಹೊಟ್ಟಲಿ ಎಂತೆಂತವರ್ ಹುಟ್ಟರ ನೋಡಿ, ಕಲಿಗಾಲ ಏನ್ಮಾಡಿರಿ? ನಾವ್ ಕಂಡಂಗೇ ಅವರಪ್ಪ ನಮ್ಮಟ್ಟಿಗೇ ಏಡ್ ರೂಪಾಯಿಗ್ ಕೂಲಿಗ್ ಬತ್ತಿದ್ದ. ಈಗ ಮಗ ಕಾರ್ ತಕಂಡ್ ತಿರುಗಾಡ್ತನ.” ಅಂತ ಶುರುವಾಗಿ, ಮಕ್ಕಳ ಸಾಧನೆಯ ಹಾದಿ ಮಂಕಾಗಿ, ಅವರ ಕುಟುಂಬದ ಬಡತನದ, ಜಾತಿ, ಕಸುಬಿನ ಹಿನ್ನೆಲೆ ವಿಜೃಂಭಿಸುತ್ತದೆ.

ಯಾವನೋ ಅವರಪ್ಪನ ಆಸ್ತಿ ಮಾರಿಕೊಂಡು ಬಡ್ಡಿ ಎಣಿಸ್ಕೊಂಡು, ಇಸ್ಪೀಟಾಡಿಕೊಂಡು ಕೂತಿರೋ ದೊಡ್ಡ ಮನೆತನದ ಹುಡುಗನಿಗಿಂತ. ಕೂಲಿಮಾಡುವ ಅಪ್ಪಅಮ್ಮನನ್ನ ಕಾಸೇ ಕೇಳದೇ ಅವರಿವರ ಪುಸ್ತಕ ಈಸ್ಕೊಂಡು ,ಕಾಲೇಜು ದಿನಗಳಲ್ಲಿ ಲೈಬ್ರರಿಯ ಪುಸ್ತಕಗಳನ್ನ ಎಂಟಾಣೆಗೆ ಸೀಮೆಣ್ಣೆ ಝೆರಾಕ್ಸ್ ಮಾಡಿಸಿಕೊಂಡು ಓದಿ ಈಗ ಎಸಿ ಚೇಂಬರಿನಲ್ಲಿ ಕೂತು ಬಾಸ್ ಆಗಿರುವವನು ಗ್ರೇಟ್ ತಾನೇ? ಇಲ್ಲಿ ಇಷ್ಟೆಲ್ಲಾ ಗೌರವ ಇರುವವನು, ಊರಿಗೆ ಹೋದಾಗ, ಅವರಪ್ಪನದೋ ತಾತನದೋ ಮನೆತನದ , ಕಸುಬಿನ ಹೆಸರಲೋ ಕರೆದರೆ ಸುಮ್ಮನಿರುತ್ತಾನೆ. ಯಾಕೆ ಸುಮ್ಮನಾಗುತ್ತಾನೆ? ಉಲ್ಟಾ ಮಾತಾಡುವ ಶಕ್ತಿ ಇಲ್ಲವೆಂದಲ್ಲ. ಮಾತಾಡಿದರೆ ಇತಿಹಾಸ ಸುಳ್ಳಾಗುವುದಿಲ್ಲ ಅನ್ನುವ ಸತ್ಯ ಗೊತ್ತಿರುವುದರಿಂದ. ಇಷ್ಟಕ್ಕೂ ಅವರೇನೂ ಬೈಯುವುದೂ ಇಲ್ಲವಲ್ಲ. “ಏನೋ ಬುಡಪ್ಪ. ನಿಮ್ ತಾತ ಪಾಯಿ ಅಷ್ಟ್ ಗಾತ್ರ ಕಷ್ಟ್ಪಡ್ತಿದ್ದ. ಅವನುದ್ದ ಬರೀ ಕೂಲಿಯೇ. ನಿಮ್ಮವ್ವ ಒಸಿ ಕಷ್ಟ ಬಿದ್ದಿದಳಾ? ಉಟ್ಕತ್ತೀನಿ ಅಂದ್ರ ಒಂದ್ ಸೀರ ಇರ್ನಿಲ್ಲ. ನಾವೇ ಹಳೇವು ಮೊಳೇವು ಕೊಡ್ತಿದ್ದೋ ಈಗ ಹೆಂಗೋ ಸುಖ ಕಂಡ್ಕಂಡ್ರು” ಅಂತ ಕರುಣಾಜನಕವಾಗಿ ಕಥೆ ಹೊಡೆಯೋದು. ಉದ್ದೇಶಪೂರ್ವಕವೋ, ಪೆದ್ದುತನವೋ ಆದರೆ ಮನಸು ನೋಯುವುದೂ, ಕೀಳರಿಮೆ ಕಾಡುವುದು ಮಾತ್ರ ಸುಳ್ಳಲ್ಲ. ಅದೇ ಹಿಂದೆ ದೊಡ್ಡ ಒಕ್ಕಲಾಗಿದ್ದವರ ಮಕ್ಕಳು ಸಾದಾರಣ ಓದಿ, ಯಾವುದೋ ಕಮ್ಮಿ ಸಂಬಳದ ಕೆಲಸಕ್ಕೆ ಹೋದರೂ ಎದೆಯುಬ್ಬಿಸಿಕೊಂಡೇ ಓಡಾಡುತ್ತಾರೆ. ಬ್ಯಾಕ್ರೌಂಡು ಕಾಪಾಡಿಬಿಡುತ್ತದೆ. ಮುಜುಗರ ಅನುಭವಿಸೋ ಪ್ರಸಂಗಗಳು ಯಾವತ್ತೂ ಬರುವುದಿಲ್ಲ. “ ಈ ಭೂತದಿಂದ ತಪ್ಪಿಸಿಕೊಳ್ಳಬೇಕಾದರೆ ಊರು ಬಿಡಬೇಕು. ಹೆಸರು, ವಿಧ್ಯಾಭ್ಯಾಸ. ಬ್ಯಾಂಕ್ ಬ್ಯಾಲೆನ್ಸ್ ಗಳನು ಮಾತ್ರವೇ ಪರಿಗಣಿಸುವ ಊರಿಗೆ ಓಡಿಹೋಗಬೇಕು.” ಅಂತ ಅನಿಸಿದರೆ ತಪ್ಪನ್ನುತ್ತೀರಾ?
ನಮ್ಮೂರ ಪಕ್ಕ ಬಿಳಿಕೆರೆ ಮಾದಪ್ಪನ ದೇವಸ್ಥಾನವೊಂದಿದೆ. ಜಮೀನುಗಳ ಮಧ್ಯೆ. ಹಿಂದೆ ಬರೆದಿದ್ದೆ ಆ ಬಗ್ಗೆ. ಹೋದವಾರ ದೀಪಾವಳೀಲಿ ಅಮ್ಮ ಅಲ್ಲಿಗೆ ಅಬಿಷೇಕ ಮಾಡಿಸಬೇಕು ಅಂತ ಕರಕೊಂಡು ಹೋಗಿದ್ದರು. ಜಾತಿಬೇದವಿಲ್ಲದೇ ಸುತ್ತಲ ಊರುಗಳ ಎಲ್ಲರೂ ಅಲ್ಲಿ ಬರುತ್ತಾರೆ. ಅವತ್ತು ಯಾರೋ ಪಕ್ಕದೂರಿನವರು ಹೊಸದಾಗಿ ಕಾರು ಕೊಂಡು ಪೂಜೆಗೆ ಬಂದಿದ್ದರು. ಹೆಚ್ಚು ಜನವಿರಲಿಲ್ಲ. ಆ ಕಾರು ಕೊಂಡವನ ಮೂರೂವರೆ ವರ್ಷದ ಮಗ, ನನ್ನ ಮಗ ಆಡುತ್ತಿದ್ದರು. ಒಬ್ಬ ಆಸಾಮಿ ಆ ಪೋರನನ್ನ “ಏಯ್ ಎಷ್ಟ್ಲಾ ಮೂದವಿ ಗಲಾಟಿ ಮಾಡದೂ. ಸೀಕಲು ರೊಟ್ಟಿ. ಕುಂತ್ಕಲಾ ಸುಮ್ನ” ಅಂದ. ಈ ಚೋಟು “ಏನಲೇ ಪಿತೂರಿ ಸಿದ್ದ. ನೀನ್ ಸುಮ್ಮಗ್ ಕುಂತ್ಕಲಾ” ಅಂತು. ಆಸಾಮಿಗೆ ಅವಮಾನವಾಯ್ತು. ಸಿಟ್ಟು ಬಂತು. ಮಗೂನ ಹಿಡಿಯಲು ಹೋಗ್ತಿದ್ದ. ನಾನೂ ಬೈದೆ. ನೀವು ನೆಟ್ಟಗೆ ಮಾತಾಡಿದ್ರೆ ಆ ಮಗೂನೂ ಮಾತಾಡ್ತಿತ್ತು. ನೀವು ಅಡ್ಡಹೆಸರಲಿ ಕೂಗಿದ್ರಿ ಅವನೂ ಅಂದ. ಶಬಾಸ್ ಕಣೋ ರಾಜಾ. ಅಂದೆ ಅ ಹುಡುಗನಿಗೆ. ನಿಜಕ್ಕೂ ಆ ಮಗುವಿನ ಸೆಡವು ನನಗೆ ಖುಷಿಕೊಡ್ತು. . ಆಸಾಮಿ ಉರುಕೊಂಡ. “ಕಾಲಿಟ್ಟ ಕಡೆ ಎಲ್ಲ ಇದೇ ಆಯ್ತು” ಅಂತ ನಮ್ಮಮ್ಮನೂ ತುಟಿಕಚ್ಚಿರಬೇಕು. ನಿಧಾನಕ್ಕೆ ವಿಚಾರಿಸಲಾಗಿ, ಆ ಪೋರನ ತಾತ ಊಟಕ್ಕೆ ಗತಿಯಿಲ್ಲದೇ ಯಾರದೋ ಮನೇಲಿ ಸೀದುಹೋದ ರೊಟ್ಟಿ ಕೊಟ್ಟದ್ದಕ್ಕೆ ಒಂದಿಡೀ ದಿನ ಕೂಲಿ ಮಾಡಿದ್ದನಂತೆ. ಹಾಗಾಗಿ ಅವರ ತಾತನ ಅಥವಾ ಮನೆತನದ ಹೆಸರು “ಸೀಕಲು ರೊಟ್ಟಿ.”. ಇನ್ನಿವನು, ಬರಿಯ ಚಾಡಿಕೋರ. ಆಗದಿದ್ದವರ ಮನೆಯ ಹುಲ್ಲಿನ ಮೆದೆಗೆ ಬೆಂಕಿ ಇಡ್ತಿದ್ದನಂತೆ. ಅದಕ್ಕೇ ಅವನ ಹೆಸರಿಗೆ “ಪಿತೂರಿ” ಅಂಟಿಕೊಂಡಿದೆ. ಅವನ ಹೆಸರು ಪಿತೂರಿ ಆದದ್ದು ನ್ಯಾಯ. ಆದರೆ ಸೀಕಲು ರೊಟ್ಟಿ ಅಂತ ನಾಮಕರಣವಾಗಬೇಕಾದ್ದು ಅದನ್ನು ಕೊಟ್ಟ ಮನೆಗೆ. ತಿಂದಬಡವನಿಗಲ್ಲ. ಹೌದು ತಾನೇ? ಅದು ಬಿಡಿ, ಈಗ ಕಾರುಕೊಂಡವನ ಮೆಚ್ಚಿ ಮಾತಾಡಬೇಕೋ? ಇನ್ನೂ ಸೀಕಲು ರೊಟ್ಟಿ ಅಂದು ಚುಚ್ಚಬೇಕೋ?
ಹಾಗಂತ ಎಲ್ಲ ಬಿಟ್ಟು ಸಿಟಿಗೆ ಬಂದು ಪೂರ್ತಿ ತಪ್ಪಿಸಿಕೊಂಡು ಬಿಡಲು ಸಾಧ್ಯವಿಲ್ಲ. ಹೆಚ್ಚೆಂದರೆ ಬಡತನದ ಹಿನ್ನೆಲೆಯನೋ. ಮತ್ತೇನೋ ಕುಟುಂಬದ ಹಳೆಯ ಕೆಟ್ಟಕಥೆಗಳನೋ ಮುಚ್ಚಿಕೊಳ್ಳಬಹುದು. ಆದರೆ ಜಾತಿ??? ಅದರಲ್ಲೂ ನೀವು ದೊಡ್ಡ ಹೆಸರು ಮಾಡಲು ಶುರು ಮಾಡಿದರೆ ನಿಮ್ಮ ಜಾತಿ, ಹಿನ್ನೆಲೆಗಳ ಹಿಡಿಯಲಿಕ್ಕೆಂದೇ ಒಂದು ಪಡೆ ಸಿಧ್ದವಾಗುತ್ತದೆ. ಚಿತ್ರನಟಿ ರಮ್ಯಾ ಚುನಾವಣೆಗೆ ನಿಂತಾಗ ನೋಡಿದಿರಲ್ಲ, ಚಾನೆಲುಗಳಲಿ ಅವಳ ಅಪ್ಪ ಅಂತ ಹೇಳಿಕೊಂಡು ಬಂದ ವ್ಯಕ್ತಿಯನ್ನ ಕೂರಿಸಿಕೊಂಡು ಗಂಟೆಗಟ್ಟಲೆ ಕಷ್ಟ ಸುಖ ಕೇಳಿದ್ದು? ಯಾವನು ಹುಟ್ಟಿಸಿದರೇನು, ಯಾವಳು ಹೆತ್ತರೇನು? ವ್ಯಕ್ತಿ ಸ್ವತಂತ್ರ ವ್ಯಕ್ತಿಯಾಗಿರಲು ಯಾಕೆ ಬಿಡುವುದಿಲ್ಲ ನೀವು? ಅದೆಲ್ಲೋ ಕೇಳಿದ್ದೆ ಅಥವಾ ಓದಿದ್ದೆ. ಇಂತಿಂತವರೇ ನನ್ನ ತಂದೆ ತಾಯಿ ಆಗಬೇಕೆಂಬುದು ಆತ್ಮದ ಆಯ್ಕೆ ಅಂತೆ. ಯಾವ ಆತ್ಮವಾದರೂ ಬಡವನ, ದಲಿತನ ಮನೆಯ ಮಗುವಾಗಬೇಕು ಅಂತ ಬಯಸೋ ಸ್ಥಿತಿ ಇದೆಯಾ?
ಮೊನ್ನೆ ಒಂದು ಕಾರ್ಯಾಗಾರದಲ್ಲಿ ಹಿರಿಯ ಪತ್ರಕರ್ತರೊಬ್ಬರು ಮಾತಾಡ್ತಿದ್ದರು. ಗೌಡರು, ಬ್ರಾಹ್ಮಣರು. ಲಿಂಗಾಯತರು, ಹಿಂದುಳಿದವರು ಹೀಗೆ ಇಡಿಯ ಪತ್ರಕರ್ತ ಸಮೂಹ ಜಾತಿ ಹೆಸರಲ್ಲಿ ವಿಭಾಗವಾಗಿಬಿಟ್ಟಿದೆ.ಅವರವರ ಜಾತಿಯ ಯಾರ ಮೇಲೇ ಆಪಾದನೆ ಬಂದರೂ ಈ ಗುಂಪುಗಳು ರಕ್ಷಣೆಗೆ ಮತ್ತು ತೇಜೋವಧೆಗೆ ನಿಲ್ಲುತ್ತವೆ .ಒಟ್ಟಾರೆ ಪತ್ರಿಕಾಧರ್ಮ ಅನ್ನುವುದು ಒಂದಿಲ್ಲ ಅನ್ನುತ್ತಿದ್ದರು. ಇನ್ಯಾರೋ ಜಾತಿವ್ಯವಸ್ತೆ ಬಗ್ಗೆ ಮಾತಾಡ್ರೀ ಅಂತ ಕರೆದರೆ. “ನಮ್ಮಲ್ಲಿ ಜಾತಿ ವ್ಯವಸ್ಥೆಎಷ್ಟು ಕೆಟ್ಟದಾಗಿದೆಯೆಂದರೆ ಹಿರಿಯ ಪೋಲೀಸ್ ಅಧಿಕಾರಿಯೊಬ್ಬರು ತನ್ನ ದಲಿತ ಹಿನ್ನೆಲೆ ಮುಚ್ಚಿಡಲು ಹೆಸರಿಗೆ ಸಿಂಗ್ ಅಂಟಿಸಿಕೊಂಡಿದಾರೆ” ಅಂತ ಹೇಳಿ, “ಜಾತಿ ವ್ಯವಸ್ಥೆ” ಯ ಬಗೆಗಿನ ಭಾಷಣ ಮುಗಿಸಿದರು. ಆ ಭಾಷಣಕಾರರಿಗೆ ಆ ಪೋಲೀಸ್ ಅಫಿಸರರ ನಿಜದ ಜಾತಿ ಹೇಳಬೇಕಿತ್ತಷ್ಟೆ. ಏನ್ ಕರ್ಮಾರೀ ತಿಳಿದವರದು? ನಿಜಕ್ಕೂ ಆ ಆಫಿಸರ್ ಮತ್ತು ಅವರ ಹಾಗೆ ಎಷ್ಟೋ ಜನ ಸಿಟಿಗೆ ಬಂದು ಹೆಸರು ಬದಲಿಸಿಕೊಳ್ಳೋದು ಭೂತವನ್ನೂ, ಆ ನೆರಳನ್ನೂ ಕಿತ್ತೊಗೆಯಲಿಕ್ಕಾ? ಅದೆಷ್ಟು ಕಾಟ ಕೊಟ್ಟಿರಬಹುದು ಆ ಭೂತ, ಬೆಂಬಿಡದೇ. ಎಷ್ಟೆಲ್ಲಾ ನೋಯಿಸಿರಬಹುದು. ? ಪೋಲೀಸ್ ಆಫಿಸರನ್ನೂ ಬಿಡಲಿಲ್ಲ.!
ಹಿಂದೆ ಒಂದು ಜಾಹೀರಾತು ಬರುತ್ತಿತ್ತು. Wherever you goes huch follows” ಅಂತ. ಹಾಗೆ ಈ ಬಡತನ , ಕೌಟುಂಬಿಕ ಹಿನ್ನೆಲೆ, ಜಾತಿ ಇತ್ಯಾದಿ ಇತ್ಯಾದಿಗಳು wherever we goes ಹಿಂದೇನೇ ಈ ಭೂತಗಳು follows” . ನೆಟ್ವರ್ಕೇ ಇರದ ಜಾಗಕೆ ಹೋಗಿಬಿಡಬೇಕು. ಎಲ್ಲಿದೆ ಹೇಳಿ ಅಂತ ಜಾಗ?
 

‍ಲೇಖಕರು G

October 28, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

17 ಪ್ರತಿಕ್ರಿಯೆಗಳು

  1. Anil Talikoti

    ಈ ಭೂತಗಳ ಬಾಧೆ ತೊಲಗಲು ಆ ಮಗು ಹೇಳಿದಂತೆ ‘ನೀನ್ ಸುಮ್ಮಗ್ ಕುಂತ್ಕಲಾ’ ಅಂದೆ ಅಂತವೆ ಮುಂದಿನ ಪೀಳಿಗೆಗಳು. ಅಷ್ಟಾದರೆ ಸಾಕು – ಈ ಪೀಡೆ ತಾನೆ ತಾನಾಗಿ ತೊಲಗುತ್ತದೆ.
    ‘ಆ ಭಾಷಣಕಾರರಿಗೆ ಆ ಪೋಲೀಸ್ ಅಫಿಸರರ ನಿಜದ ಜಾತಿ ಹೇಳಬೇಕಿತ್ತಷ್ಟೆ’ -ಇಂಥಹ ಕಾಲೆಳೆಯುವವರನ್ನು ಸಾರ್ವಜನಿಕವಾಗಿ ಹೇಗೆ ಮಣಿಸುವದು?
    -ಅನಿಲ

    ಪ್ರತಿಕ್ರಿಯೆ
  2. shammi

    ellaadru hudukkobeku kane…nangantu yaavaaglu nani nelakke seridavalu anta annisode illa….i bhutagalu kathe kattidde jaasti nijakkinta!!

    ಪ್ರತಿಕ್ರಿಯೆ
  3. bharathi b v

    ಚೆನ್ನಾಗಿ ಬರ್ದಿದೀ ಕುಸುಮಾ … ಹೌದು, ನೆಟ್ವರ್ಕೇ ಇಲ್ಲದ ಜಾಗ ಎಲ್ಲರೂ ಹುಡುಕಕ್ಕೆ ಶುರು ಮಾಡ್ತೀವಿ ಒಂದಲ್ಲಾ ಒಂದಿನ ….

    ಪ್ರತಿಕ್ರಿಯೆ
  4. Pradeep

    Abba.. istu sookshmavaagi adu hege observe maadtheeri 🙂 nam tale olginda namge gottilde irodu tekkotta haage aaithu.. Great 🙂 keep writing.

    ಪ್ರತಿಕ್ರಿಯೆ
  5. Basavaraj

    ಒಬ್ಬ ಮೇಲು ಜಾತಿಯವನ ಮಗ ತಂದೆಯ ಆಸ್ತಿಯ ಮಾರಿ ಬಂದ ಹಣದಲ್ಲೆ ಜೀವನಾ ಕಾರು ಬೈಕು ಅಂತಾ ನಡಿತಾ ಇದೆ.ಇನ್ನೊಬ್ಬ ಒಬ್ರ ಮನೆಯ ಮಾದಿಗನ ಮಗ ಎಂ ಪಿ ಎಲೆಕ್ಕನ್ ಗೆ ನಿಂತಿದ್ದ. ಅವನು ನ್ಯಾಯವಾಗಿ ಗಳಿಸಿದನಾ ಅನ್ಯಾಯವಾಗಿ ಗಳಿಸಿದ್ನಾ ಅಂತಾ ಬರಿತಾ ಹೋದರೆ ನೀವ ಹೇಳದಂಗೆ ಒಂದ ಲೇಖನಾ ಆಗುತ್ತೆ.ಇಗಾ ಸಮಯಾನು ಇಲ್ಲ ಪಾರಿನ್ನಲ್ಲಿ ಬಿಳಿಯರು ಸಮಯಕ್ಕೆ ಸರಿಯಾಗಿ ಕೆಲಸಾ ಮಾಡಿ ಇದು ಇಂಡಿಯಾ ಅಲ್ಲ ಅಂತಾರೆ ಬರತೀನಿ ಮೇಡಂ ……………ಆದ್ರೆ ಇಬ್ಬರು ಕಾರ್ನಾ ಒಂದೆಕಡೆಪಾರ್ಕ ಮಾಡಿರತಾರೆ ಉರಿಗೆ ಹೊದಾಗ ನೊಡತಿರತಿನಿ………

    ಪ್ರತಿಕ್ರಿಯೆ
  6. ಅಕ್ಕಿಮಂಗಲ ಮಂಜುನಾಥ

    ನೀವು ಹೇಳಿರೋದು ಪೂರ್ಣ ಸತ್ಯ. ಸರಳವಾಗಿ ಮನಮುಟ್ಟುವಂತೆ ಹೇಳಿದ್ದೀರಿ. ಅಭಿನಂದನೆಗಳು.

    ಪ್ರತಿಕ್ರಿಯೆ
  7. sindhu

    Kusum,
    tumba hrudyavaada baraha.
    ಯಾವನೋ ಅವರಪ್ಪನ ಆಸ್ತಿ ಮಾರಿಕೊಂಡು ಬಡ್ಡಿ ಎಣಿಸ್ಕೊಂಡು, ಇಸ್ಪೀಟಾಡಿಕೊಂಡು ಕೂತಿರೋ ದೊಡ್ಡ ಮನೆತನದ ಹುಡುಗನಿಗಿಂತ. ಕೂಲಿಮಾಡುವ ಅಪ್ಪಅಮ್ಮನನ್ನ ಕಾಸೇ ಕೇಳದೇ ಅವರಿವರ ಪುಸ್ತಕ ಈಸ್ಕೊಂಡು ,ಕಾಲೇಜು ದಿನಗಳಲ್ಲಿ ಲೈಬ್ರರಿಯ ಪುಸ್ತಕಗಳನ್ನ ಎಂಟಾಣೆಗೆ ಸೀಮೆಣ್ಣೆ ಝೆರಾಕ್ಸ್ ಮಾಡಿಸಿಕೊಂಡು ಓದಿ ಈಗ ಎಸಿ ಚೇಂಬರಿನಲ್ಲಿ ಕೂತು ಬಾಸ್ ಆಗಿರುವವನು ಗ್ರೇಟ್ ತಾನೇ? and
    ಈ ಭೂತದಿಂದ ತಪ್ಪಿಸಿಕೊಳ್ಳಬೇಕಾದರೆ ಊರು ಬಿಡಬೇಕು. ಹೆಸರು, ವಿಧ್ಯಾಭ್ಯಾಸ. ಬ್ಯಾಂಕ್ ಬ್ಯಾಲೆನ್ಸ್ ಗಳನು ಮಾತ್ರವೇ ಪರಿಗಣಿಸುವ ಊರಿಗೆ ಓಡಿಹೋಗಬೇಕು.” ಅಂತ ಅನಿಸಿದರೆ ತಪ್ಪನ್ನುತ್ತೀರಾ?.. so true!

    ಪ್ರತಿಕ್ರಿಯೆ
  8. ಡಾ.ಶಿವಾನಂದ ಕುಬಸದ

    ಅತೀ ಸೂಕ್ಷ್ಮವಾದ ವಿಷಯವನ್ನು ಸುಲಲಿತವಾಗಿ ಮಂಡಿಸಿದ್ದೀರಿ… ಬಹುಶ: ಒಂದಾದರೂ ‘ನೆಟ್ ವರ್ಕ್’ ಜೀವನಪರ್ಯಂತ ಬೆಂಬತ್ತುವುದು ಮಾತ್ರ ಖಂಡಿತ..ಅದು ಜಾತಿಯದೋ ಅಂತಸ್ತಿನದೋ ಮತ್ತೇನೋ ಆಗಿರಬಹುದು…ಆಂತರ್ಯದ ಈ ಅಳುಕಿಗೆ ನೀವಿತ್ತ ಹೆಸರು (ನೆಟ್ ವರ್ಕ್)ಕೂಡ ಇಷ್ಟವಾಯಿತು….

    ಪ್ರತಿಕ್ರಿಯೆ
  9. ವಿಕಾಸ ನೇಗಿಲೋಣಿ

    ಕುಸುಮಬಾಲೆ ಅವರ ಬರಹಗಳು ಎಷ್ಟು ಚೆನ್ನಾಗಿರುತ್ತವೆ ಅನ್ನೋದಕ್ಕೆ ಇದೊಂದು ಮಾಸ್ಟರ್ ಪೀಸ್. ಭಾಷೆ ಬಗ್ಗೆ ಈ ಹಿಂದೆ ಬರೆದ ಲೇಖನದ ನಂತರ ನನಗೆ ತುಂಬ ಇಷ್ಟವಾದ ಲೇಖನ ಇದು.. ಥ್ಯಾಂಕ್ಸ್‌ ಮೇಡಮ್‌

    ಪ್ರತಿಕ್ರಿಯೆ
  10. ಕುಸುಮಬಾಲೆ

    ನಿಮ್ಮ ಕಮೆಂಟ್ ನೋಡಿ ತುಂಬಾ ಖುಷಿಯಾಯಿತು ಮಣಿಕಾಂತ್ ಸರ್. ಧನ್ಯವಾದ. ಓದಿದ ಪ್ರತಿಯೊಬ್ಬರಿಗೂ ಧನ್ಯವಾದ

    ಪ್ರತಿಕ್ರಿಯೆ
  11. vidyashankar

    ಜಾತಿ ಕಾರಣದಿಂದಾಗಿ ಲಭಿಸುವ ಲಾಭಗಳನ್ನು ತ್ಯಾಗ ಮಾಡುವ ಗುಣ ಬಂದಾಗ, ಜಾತಿಯನ್ನು ಬಿಟ್ಟಿದ್ದಾರೆ ಎನ್ನಬಹುದು… ಜಾತಿ ಬಿಟ್ಟ ಕುವೆಂಪು, ತೆಜಸ್ವಿಯರನ್ನು ಒಕ್ಕಲಿಗರು ಅಮರಿಕೊಂಡಿಲ್ಲವೇ… ಕಷ್ಟ ಕಷ್ಟ

    ಪ್ರತಿಕ್ರಿಯೆ
  12. Suguna mahesh

    ಬೆಂಬಿಡದ ಸೂಕ್ಶ್ಮವಾದ ವಿಚಾರ. ತುಂಬಾ ಚೆನ್ನಾಗಿ ಬರೆದಿದ್ದೀರಿ ಮನಸ್ಸಿಗೆ ನಾಟುವಂತೆ ಕುಸುಮಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: