ಕುಸುಮಬಾಲೆ ಕಾಲಂ : ಸರ್ವೆ ನಂಬರ್ ೯೪/೧ರ ಉಳಿದ ಕಥೆ

ಸರ್ವೆ ನಂಬರ್ 94/1 ಆದ ನಾನು, ಕಳೆದ ವಾರ ಅರ್ಧಕ್ಕೇ ನಿಲ್ಲಿಸಿದ ನನ್ನ ಆತ್ಮ ಕಥೆಯನೀಗ ಮುಂದುವರೆಸುತ್ತಾ…..
ಯಾವಾಗ ಚನ್ನಬಸಪ್ಪನೋರು ತೀರಿಕೊಂಡರೋ..ಮಾದಪ್ಪ ಹುಲಿವೇಷ ಹಾಕಿಕೂತ. ನಿಜವೆಂದರೆ, ತಮ್ಮಂದಿರಿಗೆ ಹೋಲಿಸಿದರೆ ಮಾದಪ್ಪನ ಫಿಸಿಕಲ್ ಪರ್ಸನಾಲಿಟಿ ಚಿಕ್ಕದೇ, ಆದರೆ ಅವನ ಮಾತು, ಆರ್ಭಟಗಳು ಮಾತ್ರ ಹತ್ತುಜನಗಳ ಗರಡಿಯ ಪೈಲ್ವಾನನೂ ಆಡಲಾರದಂತವು.ಈ ಆಸ್ತಿ ಜಗಳಗಳ ಮಧ್ಯೆ ನಡುಕಲವನ ಹೆಂಡತಿಗೆ ವಿಚಿತ್ರ ರೋಗ ಬಂದುಬಿಟ್ಟಿತ್ತು.ಮೂಲೆಮಠದ ಐನೋರೆಂದರೆ ಮಾದಪ್ಪನ ತಾಯಿಗೆ ಇನ್ನಿಲ್ಲದ ಭಕ್ತಿ.ಸ್ವಾಮ್ಗಳು ಮಾದಪ್ಪನ ತಾಯಿಯೂ ಒಂದೇ ಊರಿನವರು, ಜೊತೇಲಿ ಆಡಿ ಬೆಳೆದವರು.ಮಠದ ಹಿರಿಯ ಸ್ವಾಮ್ಗಳ ಕಾಲಾನಂತರ ಇವರನ್ನ ಉತ್ತರಾಧಿಕಾರಿ ಮಾಡಲಾಗಿತ್ತು.ಹಾಗಾಗಿ, ಅವರು ಈ ಸೀಮೆಗೆ ಬಂದಾಗೆಲ್ಲ ಬಂದು ಉಳಿಯುತ್ತಿದ್ದುದು, ಮಾದಪ್ಪನ ತಾಯಿ ರಾಜಮ್ಮನ ಮನೆಯಲ್ಲೆ.ಅವರು ಮನೆಗೆ ಬಂದರೆ ಸೊಸೆಯ ಖಾಯಿಲೆಗೂ ಮದ್ದು ಸಿಗಬೋದು.ಮಕ್ಕಳ ಕಿತ್ತಾಟವೂ ನಿಲ್ಲಬೋದು ಅಂತ ಎಣಿಸಿದಳು.ಐನೋರೂ ಕರೆದ ಕೂಡಲೇ ಚಿತ್ತೈಸಿದರು. ಅವರ ಪಾದಪೂಜೆ ಮಾಡಿ ಕಾಲು ತೊಳೆದು, ಬಂದ “ಪಾದತೀರ್ಥ”ವನ್ನು ಕುಡಿಸಿದರೂ ಖಾಯಿಲೆ ಕ್ಯಾರೇ ಅನ್ನಲಿಲ್ಲ. ದಿನದಿನಕ್ಕೆ ನವೆದು ನಾರಾಗಿಹೋದ ಸೊಸೆ ಕೊನೆಗೊಂದು ದಿನ ಮೂರು ಹೆಣ್ಣುಮಕ್ಕಳನು ತಬ್ಬಲಿಗಳಾಗಿಸಿ, ಪ್ರಾಣಬಿಟ್ಟಳು.
ತಾಯಿಯಿಲ್ಲದ ಮಕ್ಕಳನು ಅಜ್ಜಿ ದೊಡ್ಡಮ್ಮ , ಚಿಕ್ಕಮ್ಮ ನೋಡಿಕೊಂಡರೂ, ಸಿದ್ದಪ್ಪನಿಗೆ ಸಮಾಧಾನವೇ ಇರಲಿಲ್ಲ. ಹೆಂಡತಿ ಕಳೆದುಕೊಂಡು ಹುಚ್ಚನಂತಾಗಿದ್ದ. ಸತ್ತವಳ ತಿಥಿ ಖರ್ಚು ಮಾದಪ್ಪನೇ ಮಾಡಿದ್ದ. ಒಂದು ವರ್ಷ ತುಂಬುವವರೆಗೂ ಸಿದ್ದಪ್ಪ ಹೆಂಡತಿಯ ಮಣ್ಣುಮಾಡಿದ್ದ ಜಮೀನ ಕಡೆ ಮುಖ ಮಾಡಲಿಲ್ಲ. ಅವನನ್ನೂ ಅವನ ಮೂರು ಮಕ್ಕಳನೂ ಮಾದಪ್ಪನೇ ಒಂದು ವರ್ಷ ಸಾಕಿದ. ವರ್ಷದ ತಿಥಿ ಮಾಡಬೇಕು ಅಂತ ತಾನೇ ಖುದ್ದು ಓಡಾಡಿದ. ಸಿದ್ದಪ್ಪನ ಅತ್ತೆ ಮನೆಯವರು. ಅಂದರೆ ತೀರಿಕೊಂಡವಳ ಅವ್ವ ತಮ್ಮಂದಿರು ಬಂದು ಸೇರಿದರು. ತಿಥಿಯ ರಾತ್ರಿ ಮಾದಪ್ಪ ಸಿದ್ದಪ್ಪನ ಅತ್ತೆ,ಮಾವ ಬಾಮೈದುನರನ್ನ ಕೂರಿಸಿಕೊಂಡು ಒಂದು ಪ್ರಸ್ತಾಪ ಮಾಡಿದ, “ಹೇಗೂನಿಮ್ಮನೇಲಿ ಇಬ್ಬರು ಗಂಡುಮಕ್ಕಳಿಗೂ ಮದುವೆ ಮಾಡಬೇಕು, ಸತ್ತಿರೋಳಿಗೂ ಮೂರು ಹೆಣ್ಣುಮಕ್ಕಳು. ಅದರಲ್ಲಿ ಇಬ್ಬರನು ನೀವು ಅಣ್ಣತಮ್ಮದೀರೇ ಮದ್ವ ಮಾಡ್ಕಳಿ, ಅಕ್ಕನ ಮಕ್ಕಳು, ತಪ್ಪೇನೂ ಇಲ್ಲ. ಆ ತಬ್ಬಲಿ ಮಕ್ಕಳೂ ಸುಖವಾಗಿರ್ತವೆ.” ಅಂದ. ಅವನ ಸಲಹೆ ಎಲ್ಲರಿಗೂ ಹಿಡಿಸಿತಾದರೂ.ವಯಸಿನಲಿ ಈ ಹುಡುಗರಿಗೂ ಆಹುಡುಗಿಯರಿಗೂ ದೊಡ್ಡ ಅಂತರವೇ ಇತ್ತು.ಮಾದಪ್ಪ ತನ್ನ ಚತುರಮಾತಿನಿಂದ ಎಲ್ಲರ ಅನುಮಾನಗಳಿಗೂ, ಪ್ರಶ್ನೆಗಳಿಗೂ ತರ್ಕಬಧ್ದ ಉತ್ತರ ಕೊಡುತ್ತಾ, ಕಡೆಗೂ ಮದುವೆ ಗೊತ್ತು ಮಾಡಿದ.
ಇಬ್ಬರು ಹೆಣ್ಣುಮಕ್ಕಳನೂ ಮದುವೆ ಮಾಡೋ ಖರ್ಚು ಕೂಡ ತಾನೆ ಮಾಡಿದ ಮಾದಪ್ಪ. ಕಡೆಗೆ ತನ್ನಪಾಲಿನ ಮೂವತ್ತರಲ್ಲಿ 15 ಎಕರೆ ಜಮೀನನ್ನ ಮಾರುತ್ತೇನೆ ಯಾರಾಧರೂ ತಗೊಳೋರಿದ್ರೆ ಬೆಲೆ ಹೇಳಿ ಅಂತ ಸುದ್ದಿ ಹರಡಿದ, ಅದರ ಹಿಂದೆ, ತಾನು ತಮ್ಮನ ಹೆಂಡತಿಯ ತಿಥಿ, ಅವನಮಕ್ಕಳ ಮದುವೆ ಅಂತ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದೇನೆ. ಅದನ್ನ ತೀರಿಸೋಕೆ ಇದೆಲ್ಲ ಮಾರದೇ ವಿಧಿಯಿಲ್ಲ. ಅಂತಲೂ ಸುದ್ದಿಬಿಟ್ಟ. ಗಾಳಿ ಈ ಸುದ್ದಿಯನ್ನ ಸಿದ್ದಪ್ಪನ ಕಿವಿಗೂ ತಾಕಿಸಿತು, ಸಿದ್ದಪ್ಪ ಅಣ್ಣನ ಬಳಿಗೆ ಓಡಿಬಂದುನನ್ನ ಸಂಸಾರದ ಸಲುವಾಗಿ ನೀ ಆಸ್ತಿ ಮಾರಿಕೊಳಾದ್ ಬ್ಯಾಡ. ಇಬ್ಬರು ಹೆಣ್ನಮಕ್ಕಳೂ ಮದ್ವೆಯಾಧ್ರು ಅಲ್ಲೂ ಬೇಕಾದಷ್ಟು ತುಂಬದೆ. ಇಲ್ಲಿರೋ ನನ್ ಆಸ್ತಿಯೆಲ್ಲ ನಿಂದೇ.ನಿನ್ ಸಾಲಕ್ ಬೇಕಾರ್ ನನ್ ಆಸ್ತಿ ಮಾರು.ಅಂದ. ಮಾದಪ್ಪ. “ತ್ಯಾಗ ನಟಿಸಿ.ಕಡೆಗೆ ಒಪ್ಪಿದ. ಅದಾಗಲೇ ಮದುವೆಯಾಗಿದ್ದ ಮಾದಪ್ಪನ ಹಿರಿಯ ಮಗ ಸೋಮೇಶನ ಮಾವ, ಈ ಆಸ್ತೀನ ನಾನೇ ನನ್ ಅಳಿಯನಿಗೆ ಕೊಂಡುಕೊಡ್ತೀನಿ.ನಿಮ್ ನಿಮ್ ಆಸ್ತಿ ನಿಮ್ಮ ತಾವೇ ಉಳ್ಕಳ್ಳಿ ಅಂದರು.

ನಿಜವೆಂದರೆ, ಅಪ್ಪನ ತದ್ರೂಪು ಗುಣಗಳನೇ ಹೊತ್ತುಕೊಂಡು ಧರೆಗೆ ಬಂದಿರೋ ಸೋಮೇಶಿ, ಅಪ್ಪ ಮಾದಪ್ಪ ಇಬ್ಬರೂ ಸೇರಿ ಸಿದ್ದಪ್ಪನ ಆಸ್ತಿಗಾಗಿ ವರ್ಷಗಟ್ಟಲೆ ಷಡ್ಯಂತ್ರ ಹೂಡಿ,ಕಡೆಗೂ ಸಫಲರಾಗಿದ್ದರು. ಅವರ ನಾಟಕದಲಿ ಮಾವನಿಗೂ ಒಂದು ಪಾತ್ರ ಕೊಟ್ಟಿದ್ದರು.ಜನ ತಮ್ಮನ ಆಸ್ತಿ ಕಿತ್ಕೊಂಡ ಅಂತ ಆಡಿಕೋಬಾರದು ಅಂತ ಮಾವ ಕೊಂಡುಕೊಟ್ಟ ಹಾಗೆ ಮಾಡಿದರು. ಉಳಿದ ಮೂರನೆ ಹುಡುಗೀನ ಮಾದಪ್ಪ ತನ್ನ ಹೆಂಡತಿಯ ತಮ್ಮನಿಗೇ ಕಟ್ಟಿ, ಆ ಆಸ್ತಿಯನೂ ಹೇಗೋ ದಕ್ಕಿಸಿಕೊಂಡ. ಒಟ್ಟಿನಲಿ ಮೊದಲ ತಮ್ಮನ ಆಸ್ತಿ ಸಂಪೂರ್ಣ ಸ್ವಾಹಾ ಮಾಡಿದ ಮಾದಪ್ಪ.ಆದರೂ ಅವನ ಕಣ್ಣು ಸರ್ವೆ ನಂಬರ್ 94/1 ಆದ ನನ್ನ ಮೇಲೆಯೇ ಇತ್ತು.
ನಾನು ಚಿಕ್ಕವನ ಭಾಗದಲ್ಲಿದ್ದೆ.ಅವನಿಗಾಗ ಬಿತ್ತಿಬೆಳೆವ ಚಿಂತೆ ಇರಲಿಲ್ಲ.ವಯಸು ಮೂವತ್ತು ಮೀರುತ್ತಿತ್ತು.ಮದುವೆಯಾಗಬೇಕಿತ್ತು.ಅಪ್ಪ ತೀರಿಕೊಂಡಿದ್ದ. ಅಣ್ಣ ಮಾದಪ್ಪ, ಅವನಿಗೆ ಬೇಕಂತಲೇ ಹೆಣ್ಣು ನೋಡಲು ಹೋಗುತ್ತಿರಲಿಲ್ಲ. ರಾಜಮ್ಮ ಕೇಳಿದರೆ, “ಆ ಕಪಿಬಡ್ಡೆತ್ತದಕ ಮದ್ವ ಬೇರೆ ಕೇಡು” ಅಂದುಬಿಡುತ್ತಿದ್ದ. ಎರಡನೆ ಅಣ್ಣ, ಸಿಧ್ದಗಂಗೆ ಮಠದ ಸೇವೆಗೆತನ್ನ ಉಳಿದಜೀವನ ಕೊಟ್ಟುಬಿಟ್ಟಿದ್ದ.ಒಬ್ಬನೇ ಪರದೇಸಿ ಹಾಗೆ ಹೋದರೆ ಮನೆತನಸ್ಥರು ಯಾರು ತಾನೇ ಹೆಣ್ಣು ಕೊಟ್ಟಾರು>? ಕಡೆಗೆ ರಾಜಮ್ಮ ಹೇಗೋ ಸ್ವಾಮ್ಗಳ ಮೂಲಕವೇ, ಒಂದು ಪಡುವಲ ಸೀಮೆಯ ಬಡವರ ಮನೆಯ ಹೆಣ್ಣು ನೋಡಿದಳು. ಹೆಣ್ಣಿನ ಮದುವೆಯ ದಿನ ಸರ್ವೆ ನಂಬರ್ 94/1 ಎಂಬ ಹೆಸರಿನ ನನ್ನ ನಾಕೆಕರೆ ಮಣ್ಣಿಗಾಗಿ ಒಂದು ದೊಡ್ಡ ಹೈಡ್ರಾಮಾವೇ ನಡೆದುಹೋಯ್ತು.
ಹುಡುಗಿ ಮನೆಯವರು ತೀರಾ ಬಡವರಾದ್ದರಿಂದ ಅಷ್ಟೋ ಇಷ್ಟೋ ಕೊಡ್ತೀವಿ, ನಮ್ಮಲ್ಲಿ ನಿಂತು ಮಾಡುವವರಿಲ್ಲ. ಮದ್ವ ನಿಮ್ಮಲ್ಲೇ ಆಗಲಿ ಅಂದಿದ್ದರು. ಹಾಗಾಗಿ ಮದುವೆ ಗಂಡಿನ ಊರಲ್ಲೆ ನಡೀತು.ಸ್ವಾಮಿಗಳೂ ಬಂದಿದ್ದರು.ಮದುವೆ ಮನೆಯಲ್ಲಿ ಸದರೀ ಮಾದಪ್ಪನ ಅತ್ತೆ, ದ್ಯಾವಮ್ಮನೇ ಶ್ರೀಮಂತಿಕೆಯ ಗತ್ತುಳ್ಳ ಹೆಂಗಸು. “ಏನವಾ, ಏನೂ ಕೊಟ್ಟಿಲ್ವಾ ನಿಮ್ಮಪ್ಪನ ಮನೆಯವರೂ. ” ಅಂತ ಮದುವೆ ಹೆಣ್ಣಿಗೆ ಕೇಳಿ, “ಎಂಗೋ ಬುಡವ್ವ, ಇಲ್ ಸುಖವಾಗಿರೋವಂತೆ” ಅಂತಲೂ ಹೇಳಿ. ಕೂಸು ಚಿವುಟಿ..ತೊಟ್ಟಿಲನೂ ತೂಗೋ ಕೆಲ ಮಾಡಿದರು.ಆಮೇಲೆ “ಅಯ್ಯೋ ಕತ್ತು ಬರ್ದೇ ಅದಲ್ಲವ್ವ” ಅಂತ ಲೊಚಗುಟ್ಟಿ,, “ಏಯ್ ಬಾರಮ್ಮೀ ಇಲ್ಲಿ.” ಅಂತ ಮಗಳನ್ನ ಕರೆದು, ಅವಳ ಕುತ್ತಿಗೆಯ ನೆಕ್ಲೇಸು ತೆಗೆದು ಮದುಮಗಳಿಗೆ ಏರಿಸಿದರು. ಮದುವೆ ಮುಗಿದ ದಿನ ಆ ಹುಡುಗಿ ತೆಗೆದು ಕೊಡಲು ಹೋದರೆ, “ಅಯ್ಯಯ್ಯೋ ಇವತ್ ತಾನೇ ಮದ್ ಆಗಿದ್ದೈ, ತಗೀಬ್ಯಾಡ ಆಕೋ ಕೂಸು.ನೀ ಬ್ಯಾರೆ ನನ್ ಮಗಳು ಬ್ಯಾರೆಯವ್ವಾ?“ ಅಂತ ಅವಳ ಕೈ ತಡೆದರು.
ಸೋಬಾನ ಮರುದಿನವಿದ್ದದ್ದರಿಂದ ರಾತ್ರಿ ಇತರೆ ಹೆಂಗಸರೊಡನೆ, ತೊಟ್ಟಿಮನೆಯ ದೊಡ್ಡ ಹಜಾರದಲ್ಲಿ ಮಲಗಿದ್ದ ಮದುಮಗಳು, ಎದ್ದಕೂಡಲೇ ಜೋರುಧನಿಯಲಿ ಅರಚಿಕೊಂಡಳು.ಅವಳ ಕುತ್ತಿಗೆಯ ನೆಕ್ಲೇಸು ಮಾಯವಾಗಿತ್ತು.ಜನ ತುಂಬಿಕೊಂಡರು.“ಗತಿಗೆಟ್ಟವರ ಹಟ್ಟಿ ಸಂಬಂದ ಮಾಡುದ್ರ ಹಿಂಗೆ ಕಣ್ ಬಡ್ಡೀ ಆಗದೂ.” ಅಂತ ಮಾದಪ್ಪ ತಾಯಿಗೆ ಚುಚ್ಚಿದ. “ಚಿನ್ನ ಆಕಬೇಕಾರ ಚಿನ್ನದಂತಾ ಬುದ್ದಿ ಇರಬೇಕು ಕಣವ್ವ. ಒಸಿ ಜ್ವಾಪಾನವಾಗ್ ನೋಡ್ಕಬ್ಯಾಡ್ವ ಕೂಸು” ಅಳುತ್ತಾ ಮುದುಡಿಹೋಗಿದ್ದ ಮದುಮಗಳಿಗೆ ಗುಂಪಿನ ಹೆಂಗಸೊಬ್ಬಳು ಹೇಳಿದಳು. ಅವಳು ಇನ್ನಷ್ಟು ಬಿಕ್ಕಿದಳು.ನೆಕ್ಲೇಸಿನೊಡತಿ ದ್ಯಾವಮ್ಮ ಓಡೋಡಿ ಬಂದಳು. “ಹೋಯ್ತಲ್ಲವ್ವಾ… ಯಾರೆತ್ಕಂಡ್ರ್ಯವ್ವಾ? ಅಯ್ಯೋ ಅದು ನಮ್ ಮುತ್ತಜ್ಜಿ ನಮ್ಮಜ್ಜಿಗ್ ಕೊಟ್ಟಿದ್ದು , ಅವಳು ನನಗ್ ಕೊಟ್ಟಿದ್ದು. 6-7 ತಲೆಯಿಂದ ಬದಿರಾ ನೆಕ್ಲೇಸು ಕಣವ್ವಾ, ಹೋಯ್ತಾ? ಎತ್ಕಂಡವರ ಕೈಗ ಕರಿನಾಗರಹಾವು ಕಡಿಯಾ, ಅವರಗ ಆಪತ್ ಬಂದು ಚಾಪಲ್ ಸುತ್ಕಂಡೋಗ. ಅದರ ಮುತ್ತು , ಹವಳ, ಬಾತುಕೋಳಿ ಡಿಜನ್ನೂ ಕಣ್ಮುಂದೇ ಬತ್ತಾದಲ್ಲವ್ವ. ಬೆಲಕಟ್ಟಕ್ಕಾದ್ದವ್ವಾ..” ಅಂತೆಲ್ಲಾ ರಾಗವಾಗಿ ಅಳುತ್ತಾ , ಎರಡೂ ಕೈಗಳಿಂದ ಹಜಾರ ತಾರಿಸುತ್ತಾ, ಎದೆಬಡಿದುಕೊಂಡಳು. ಕಳೆದುಹಾಕಿದ ಮಧುಮಗಳಂತೂ ಬಿಕ್ಕಳಿಸಿದಳು.“ಅವ್ವಾ ನನ್ ಮಗಳು ಮಾಡಿದ್ದು ತಪ್ಪು.ಅದಕೇನ್ ದಂಡ ಕಟ್ಬೇಕು ಯೋಳಿ ಕಟ್ಟೋದಾಗ್ಲಿ.” ಹುಡುಗಿಯ ಅಪ್ಪ ಹೇಳಿದ. “ದಂಡ ಕಟ್ಟೋ ದಂಡನಾಯಕ ನೀನಾಗಿದ್ರ ನಿನ್ ಮಗಳ ಕತ್ತಿಗೆ ನಾನ್ಯಾಕಯ್ಯ ನನ್ ಚಿನ್ನ ಆಕಬೇಕಾಗಿತ್ತು?ದಂಡ ಏನ್ ಕಟ್ಟಿಯೇ? ನಿನ್ ಹೊಲ, ಹಟ್ಟಿ ಎಲ್ಲ ಮಾರುದ್ರೂ ಅದರಲ್ಲಿದ್ದ ಬಾತುಕೋಳಿ ಡಿಜನ್ನಿಗ್ ಬೆಲ ಕಟ್ಟಕಾಗಲ್ಲ. ಮುತ್ತು ಹವಳ ಯಾವ್ ಕಾಲ್ದವು ಎಷ್ಟ್ ಬೆಲೆಯವು ಗೊತ್ತಾ, ಯಾವತ್ತಾದ್ರೂ ಮುತ್ತು ಹವಳ ನೋಡಿ ಗೊತ್ತಾ ನಿನಗ? “ ಅಂತ ಅವನ ಮುಖದ ಮೇಲೆ ನೀರಿಳಿಸಿದಳು.ಆಯ್ತು “ಬುಡಿ. ಈಗದೆಲ್ಲ ಯಾಕ್ ಮಾತು?ಮುಂದ್ಕೇನ್ ಮಾಡಬೇಕು ಅದ್ ಯೋಳಿ’ ಅಂತ ಹಿರಿಯನೊಬ್ಬ ಹೇಳಿದ. “ಮುಂದ್ಕೇನ ಅಂತ ನಾ ಏನ್ ತಯೋಳದು.ನೀವ್ ಯೋಳಿ ಹತ್ತೂ ಸಮಸ್ತರು” ಅಂದಳು ದ್ಯಾವಮ್ಮ. ಏನು ಹೇಳುವುದು?ಏನು ಮಾಡುವುದು ತೋಚದೇ ಅಲ್ಲಲ್ಲಿ ಎಲ್ಲರೂ ಗುಂಪಲಿ ಗುಸುಗುಸುಗುಟ್ಟಿಕೊಂಡರು.ಮಧುಮಗ ಪುಟ್ಟಸ್ವಾಮಿ ಎದ್ದು ನಿಂತ. “ಸರ ತೀರ್ಸಾಕಿರವಳು ನನ್ ಹೆಂಡತಿ. ಈಗ ದಂಡ ಕಟ್ಟಬೇಕಾಗಿರವನೂ ನಾನೇ ಕಟ್ತೀನಿ ಬುಡಿ” ಅಂದ. ದ್ಯಾವಮ್ಮ “ ಎಷ್ಟ್ ಕಟ್ಟೀಯೇ? ಏನ್ ಕಟ್ಟೀಯೇ..? ಬಾತುಕೋಳಿ ಡಿಜನ್ನು.ಮುತ್ತು. ಹವಳ, ಲೊಳ್ಳೆ ಲೊಸಕು ….. ಅಂತ ಮತ್ತೆ ಕಥೆ ಹೊಡೆಯೋಕೆ ಶುರುಮಾಡಿದ್ಲು. ಪುಟ್ಟಸ್ವಾಮಿ “ಅದರ ಬೆಲೆ ನಮಗೂ ಗೊತ್ತಿಲ್ಲ ನಿಮಗೂ ಗೊತ್ತಿಲ್ಲ. ಬನ್ನಿ ನನ್ ಆಸ್ತೀನೆಲ್ಲ ಹೆಬ್ಬಟ್ಟೊತ್ತೀನಿ.ಅದರ್ ಮ್ಯಾಲ್ ನಂತಾವು ಏನೂ ಇಲ್ಲ” ಅಂದ. ಇಷ್ಟೊತ್ತೂ ಸುಮ್ಮನಿದ್ದ ಮಾದಪ್ಪ ಎದ್ದು ಅತ್ತೆ ಮುಂದೆ ಬಂದ “ಈಗ ಮಾಡಿರ ತಪ್ಗ ಇನ್ನೇನ್ ತಾನೆ ಮಾಡಕಾದ್ದು? ಅಷ್ಟಾಯ್ತಿತು ಇಷ್ಟಾಯ್ತಿತು ಅನ್ನೋ ಮಾತ್ ಬುಟ್ಟಾಕಿ.ನನ್ ಮಾತಿಗ್ ಬೆಲೆ ಕೊಡಿ.ಅದೇನ ಬರ್ಕೊಡ್ತೀನಿ ಅಂದ್ನಲ್ಲ. ಬರಿಸ್ಕಂಡ್ ಓಗಿ.ಅಷ್ಟೀಯೇ.ನಮಗ ಮಾನ ಮುಖ್ಯ ಆಸ್ತಿ ಅಲ್ಲ” ಅಂತ ತಮ್ಮನ ಮಾತು ಅನುಮೋದಿಸಿದ. ಎಲ್ಲರೂ ದ್ಯಾವಮ್ಮನನ್ನು ಒಪ್ಪಿಸಿದರು.ಅವಳೂ ಹ್ಞೂ ಅಂದಳು.ಮಧುಮಗಳ ತಾಯಿ ಓಡೋಡಿ ಬಂದು ದ್ಯಾಮ್ಮನ ಕಾಲು ಹಿಡಕೊಂಡಳು.“ಬ್ಯಾಡಿ, ಒಂದೈದೆಕರೆನಾರೂ ಬುಡಿ.ಎಂಗೋ ಜಿವನಕಾದ್ರೂ ಆಗ್ಲಿ.ನನ್ ಮಗಳು ಮಾಡಿದ್ ತಪ್ಗೆ ನಾ ಬೇಕಾರೆ ನಿಮ್ಮಟ್ಟೀಲಿ ಸಾಯೋವರೆಗೂ ಜೀತ ಮಾಡ್ತೀನಿ” ಅಂತ ಅಂಗಲಾಚಿದಳು.“ನಿಮ್ಮೂರ್ಲಿ ಮಾಡಾ ಕೂಲಿ ನಮ್ಮೂರ್ಲಿ ನೀ ಬಂದು ಮಾಡುದ್ರ ನನಗೇನು ಬಂತು ಭಾಗ್ಯ? ಯೋಳಮ್ಮ ಮೇಲುಕ್ಕ” ಅಂದುಬಿಟ್ಟಳು ಮುದುಕಿ ದ್ಯಾವಮ್ಮ.ಮಾತು ಮಂಥನ, ಕಣ್ಣೀರು, ಎಲ್ಲದರ ನಡುವೆಯೂ ಇಡಿಯ ಮೂವತ್ತೆಕರೆಯನೂ ದ್ಯಾವಮ್ಮ ತನ್ನ ಮಗಳೂ ಆಮನೆಯ ಹಿರಿಸೊಸೆಯೂ ಆದ ಗೌರಮ್ಮನ ಹೆಸರಿಗೆ ಮಾಡಿಸಿದಳು. ಬೀಗಿತ್ತಿಯ ಅಟ್ಟಹಾಸವನೆಲ್ಲ ನೋಡುತ್ತಿದ್ದ ರಾಜಮ್ಮ ಕಡೆಗೂ ಒಂದು ತೀರ್ಮಾನಕ್ಕೆ ಬಂದಳು.
ಬೀಗತ್ತಿ ದ್ಯಾವಮ್ಮ ಊರಿಗೆ ಹೊರಟ ಒಂದು ವಾರದ ನಂತರ ರಾಜಮ್ಮ ಸೊಸೇರಿಬ್ಬರನ್ನೂ ಕರಕೊಂಡು ಮಠಕ್ಕೆ ಹೊಂಟಳು.ಅಲ್ಲಿಂದ ಸ್ವಾಮ್ಗಳ ಆಶೀರ್ವಾದ ಪಡಕೊಂಡು, ಅವರು ಕೊಟ್ಟ ಗಂಟು ಇಸಕೊಂಡು ಹೊರಟಳು.ಇಷ್ಟಕ್ಕೆಲ್ಲ ಕಾರಣಳೆಂಬ ಕೆಟ್ಟ ಕೆಸರು ಹೊತ್ತ ಕಿರಿ ಸೊಸೆ ಸರೋಜಿ, ಅತ್ತೆ ರಾಜಮ್ಮ, ಓರಗಿತ್ತಿ ಗೌರಿ ಏನು ನಡೆಸಿದ್ದಾರೆ?ಎಲ್ಲಿಗೆ ಕರಕೊಂಡು ಹೋಗುತ್ತಿದ್ದಾರೆ ತಿಳಿಯದೆಯೇ ಹಿಂಬಾಲಿಸಿದಳು.ಹೊಳೆದಾಟಿ ರಾಜಮ್ಮ ಬೀಗತ್ತಿ ದ್ಯಾವಮ್ಮನ ಮನೆ ಹೊಕ್ಕಳು.ಗಂಟು ಬಿಚ್ಚಿ ಎಣಿಸಿಕೋ ನಿನ್ನ ನೆಕ್ಲೇಸಿನ ಕಾಸು.“ ಅಂದಳು. ದ್ಯಾವಮ್ಮ ಮತ್ತೆ ಶುರುಮಾಡಿದಳು.ಈಗ ಗೌರಮ್ಮ ಕಚ್ಚೆ ಕಟ್ಟಿನಿಂತಳು.“ಈಗ ಆಸ್ತಿ ಪತ್ರ ಇರಾದು ನನ್ ಹೆಸರಲ್ಲಿ.ಯಾವ್ ದೊಣ್ಣೆನಾಯಕನ ಅಪ್ಪಣೇನೂ ಕೇಳದೇ ಹೋಗಿ ಬೆಟ್ಟೊತ್ತಿ ಬರಬೋದು.ಅತ್ತೆಗೂ ಅದ್ನೇ ಯೋಳದೆ.ಅವರು ಕೇಳ್ಳಿಲ್ಲ.ಮನ್ಷ ಬದುಕದು ಮಾನಕ್ಕ, ಅನ್ಕಂಡು ಕರಕಂಡು ಬಂದ್ರು. ಈಗ ಈ ಕಾಸು ನೀ ಮಡಿಕಂಡ್ರೂ ಬ್ಯಾಡ ಅಂದ್ರೂ ನಾ ಹೋಗ್ ಬೆಟ್ಟೊತ್ತೋಳೆ. ಅದೇನ್ ಮಾಡಿಯೇ ಯೋಳು ?” ಅಂದಳು. ಮರುಮಾತಿಲ್ಲದೇ ದ್ಯಾವಮ್ಮ ಕಾಸು ಎಣಿಸಿಕೊಂಡಳು.ಒಂದು ತುತ್ತು ಅನ್ನವನ್ನೂ ಉಣ್ಣದೇ ವಾಪಾಸು ಮಠಕ್ಕೇ ಗಾಡಿ ಹೊಡೆಸಿದಳು.
ಸಂಜೆ ಸೂರ್ಯ ಮುಳುಗುವ ಹೊತ್ತಲ್ಲಿ, ಪ್ರಶಾಂತವಾಗಿ ಹರಿವ ಕಪಿಲೆಯ ದಡದಲ್ಲಿ ಸೊಸೇರಿಬ್ಬರನೂ ಕೂರಿಸಿಕೊಂಡು ಸತ್ಯದ ಬುತ್ತಿ ಬಿಚ್ಚಿದಳು. “ಯಾವ ತಾಯಿ ಹೊಟ್ಟೇಲಿ ಹುಟ್ಟಿದರೂ ನೀವು ಬಂದಿರಾದು ನನ್ನ ಮನೆ ಬೆಳಕು ಮಾಡಾಕೇ.ನಾನೂ ನಿಮ್ಮಂಗೇ ಬಂದವಳು. ನನಗೂ ಮುಂಚೆ, ಅಂದರೆ ನಮ್ಮತ್ತೆ ಬಂದಾಗ ಇವರಿಗಿದ್ದದ್ದು ಬರೀ ನಾಕೇ ಎಕರೆ ಜಮೀನಂತೆ. ಅದೇ ಆ ಈಶಾನ್ಯ ದಿಕ್ಕಿನದು.(ಅಂದರೆ ನಾನು ಸರ್ವೆ ನಂಬರ್ 94/1) ಆಮೇಲೆ ಉಳಿದ 96 ಎಕರೆ ಹೆಚ್ಚಿಸಿಕೊಳ್ಳಲು ಇವರು ಆಡಿದ್ದು ಒಂದೆರಡು ಆಟವಲ್ಲ. ಜೂಜು ಆಡಿ ಗೆದ್ದದ್ದು. ಬಡ್ಡಿ ಎಣಿಸಿದ್ದು.ಕಿತಾಪತಿ ಮಾಡಿ ಕಿತ್ತದ್ದು, ಕಡೆಗೆ ಊರ ಗೌಡನ ಹೆಂಡತಿಯ ಬಾಣಂತನದ ವೇಳೆ, ರಾತ್ರಿ ಅತ್ತೆಯ ಕಳಿಸಿ , ಬರೆಸಿಕೊಂಡದ್ದು. ಎಲ್ಲ ಸೇರಿ ಈ 96 ಆಗಿದ್ದು.ಇದು ನಿಲ್ಲುವುದಲ್ಲ.ಅತ್ತೆಯ ಶಾಪವಿದೆ.ಬಂದದ್ದು ಬಂದ ಹಾಗೇ ಹೋಗುತ್ತದೆ.ಈಶಾನ್ಯ ದಿಕ್ಕಿನ ಭೂಮಿ ಜೋಪಾನ ಮಾಡಿ.ಅದು ನಮ್ಮ ಪೂರ್ವಿಕರದು.ಆ ಮಣ್ಣು ನಮ್ಮ ದೈವ.” ಅನ್ನುತ್ತಾ ಸೆರಗ ತುದಿಯಲಿ ಕಣ್ಣೀರು ಒರೆಸಿಕೊಂಡಳು. ತನ್ನ ಅತ್ತೆಯ ಮಾತ ಸೊಸೆಯರಿಗೆ ರವಾನಿಸಿ ನಿಟ್ಟುಸಿರಾದಳು. “ನಾಳೆ ನಾನು ಬರುವುದಿಲ್ಲ. ಇನ್ನೀ ಮಠವೇ ನನ್ನ ಮನೆ.ದ್ಯಾವಮ್ಮನಿಗೆ ಕೊಟ್ಟದ್ದು ಮಠದ ಸ್ವಾಮ್ಗಳ ಕಾಸು.ಋಣ ಕಳೆಯಬೇಕು”. ಅಂತ ಹೇಳಿ , ಎದ್ದು ಹೋಗಿ ಕಪಿಲೆಗೆ ಮೂರು ಮುಳುಗು ಹಾಕಿ ಎದ್ದಳು.ಮರುದಿನ ಗಾಡಿಯಲಿ ಬಂದ ಪುಟ್ಟಸ್ವಾಮಿಗೆ ಅತ್ತಿಗೆ ಆಸ್ತಿ ಬರಕೊಟ್ಟಳು. ಈಗ್ಗೆ ಹತ್ತು ವರ್ಷಗಳ ಹಿಂದಿನವರೆಗೂ ರಾಜಮ್ಮ ಮಠದಲಿ ಅಡುಗೆ ಮಾಡಿಕೊಂಡಿದ್ದಳೆಂದು ಸುದ್ದಿ.
ಮಾದಪ್ಪ ಕ್ಯಾನ್ಸರ್ ಖಾಯಿಲೆಯಿಂದ ತೀರಿಕೊಂಡ. ಅವನ ಐದೂ ಮಕ್ಕಳು ಅರವತ್ತೆಕರೆ ಭಾಗ ಮಾಡಿಕೊಳ್ಳುವಾಗ ಆರಾರು ಸಲ ಜೈಲು ಹತ್ತಿಬಂದರು. ಕಡೆಗೆ ಒಬ್ನ ಮೇಲೊಬ್ಬ ಕತ್ತಿ ಮಸೆಯುತ್ತಾ ಎಲ್ಲರೂ ಎಲ್ಲ ಆಸ್ತಿಯನೂ ಕಳಕೊಂಡು ಬರಿಗೈ ಆದರು. ಪುಟ್ಟಸ್ವಾಮಿಯ ಹೆಂಡತಿ ಸರೋಜಿ ಎರಡು ಹೆಣ್ಣು ಒಂದು ಗಂಡು ಹೆತ್ತಳು. ಎಡು ಹೆಣ್ಣುಕ್ಕಳಿಗೂ ಮದುವೆ ಮಾಡಿದರು.ಹೆಣ್ಣುಮಕ್ಕಳಿಗೆ ಸಮಾನ ಕೊಡುತ್ತೇನೆಂದು ಮುಂಚೆಯೇ ತೀರ್ಮಾನಿಸಿದ್ದ ಪುಟ್ಟಸ್ವಾಮಿ. ಹಾಗಾಗಿ ,ಮೂವತ್ತೆಕರೆ ಮೂರು ಭಾಗವಾಯಿತು. ಸರೋಜಿ ಅತ್ತೆಯ ಮಾತನ್ನು ಗಂಡನೆದುರು ಆಡಲಿಲ್ಲ. ಆದರೆ ಹಠಕ್ಕೆ ಬಿದ್ದು.ಸರ್ವೆ ನಂಬರ್ 94/1 ಆದ ನನ್ನನ್ನು ಮಗ ಸಿದ್ದಲಿಂಗೇಶನಿಗೇ ಸಿಗುವಂತೆ ಮಾಡಿದಳು.
ಆಗಿನ್ನೂ ಬರಿಯ ಸರ್ವೆ ನಂಬರ್ 94, ಹತ್ತು ಎಕರೆ ವಿಸ್ತೀರ್ಣ ಇದ್ದ ನಾನು.ಸಿದ್ದಲಿಂಗೇಶನ ಕೈಗೆ ಸಿಕ್ಕು ಆರೆಕರೆ ಕಳಕೊಂಡು 94/1 ಆದೆ. ಅವನು ಬಾರ್ ನಲ್ಲೇ ಆರೆಕರೆ ಕಳೆದ ನನಗೆ ಬಾರ್(/) ಸೇರಿಸಿದ.
ಆ ಬಾತುಕೋಳಿಯ ನೆಕ್ಲೇಸು ದ್ಯಾವಮ್ಮನ ಮರಿಮೊಮ್ಮಗಳು ಹಾಕಿಕೊಂಡು ಓಡಾಡುತ್ತಾಳೆ . ಬೆಂಗಳೂರು ಪಟ್ಟಣದಲ್ಲಿದ್ದಾಳೆ ತನ್ನ ಮುತ್ತಜ್ಜಿ ಕೊಟ್ಟದ್ದು ಆಂಟಿಕ್ ಪೀಸು..ಅನ್ನುತ್ತಾ ಕಿಟ್ಟಿಪಾರ್ಟಿಯ ಹೆಂಗಸರ ಮುಂದೆ ಬೀಗುತ್ತಾಳೆ.
ಇದೆಲ್ಲ ಸುಮಾರು 1970ರ ಆಸುಪಾಸಿಗೆ ಮುಗಿದ ನನ್ನ ಆತ್ಮಕಥೆ.ಅದಕ್ಕೂ ಮುಂದುವರೆದು ಈಗಿನ 2014ರವರೆಗೂ ಸರ್ವೆ ನಂಬರ್ 94/1 ಆದ ನನಗಾಗಿ ಕಿತ್ತಾಟಗಳು ನಡೆದೇ ಇವೆ. ಸಬ್ರಿಜಿಸ್ಟರಾರ್ ಆಫೀಸಿನಲ್ಲಿ ಈ ನಂಬರಿನ ಮೇಲೆ ಗುದ್ದಿಸಿಕೊಂಡ ಸೀಲುಗಳದೆಷ್ಟೋ, ಬದಲಾದ ಅಧಿಕಾರಿಗಳೆಷ್ಟೋ. ಮತ್ತು 1970ರ ನಂತರದ ಈವರೆಗಿನ ನನ್ನ ಕಥೆ ಸದರೀ ನಿಮ್ಮ ಕಾಲ ಘಟ್ಟದ್ದೇ. ಕೇಳುವ ಇಚ್ಚೆ ನಿಮಗಿದ್ದರೆ ಮಾತ್ರ ಮುಂದುವರೆಸುತ್ತೇನೆ.ಇಲ್ಲವಾದರೆ ಸರ್ವೆ ನಂಬರ್ 94/1 ಆದ ನಾನು ಪುಟ್ಟಸ್ವಾಮಿಯ ಮಗ ಸಿದ್ದಲಿಂಗೆಶನ ಸೇರಿಕೊಂಡೆ.ಎಂಬಲ್ಲಿಗೆ ನನ್ನೀ ಆತ್ಮಕಥೆಯನ್ನ ಮುಗಿಸುತ್ತೇನೆ.ನಿಮ್ಮ ಉತ್ತರಕ್ಕೆ ಕಾಯುತ್ತಾ.
— ಸರ್ವೆ ನಂಬರ್ 94/1
 

‍ಲೇಖಕರು G

November 25, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. vidyashankar

    It is the story social change and value system… Reminds me of Leo Tolstoy’s story.

    ಪ್ರತಿಕ್ರಿಯೆ
  2. ಅಕ್ಕಿಮಂಗಲ ಮಂಜುನಾಥ

    ಎರಡೂ ಕಾಲಮ್ಮನ್ನೂ ಒಂದೇ ಉಸಿರಿಗೆ ಓದಿದೆ. ಇದ್ದದ್ದೇ ಹಳ್ಳಿಗಳ ಮನೆ ಮನೆ ಕತೆ.ಒಂದು ರೀತಿಯ ಮುಗಿಯದ ಯುದ್ಧ. ಮುಂದುವರೆಸಿ ಗೊತ್ತಿಲ್ಲದವರು ಅರಿಯಲಿ ಮತ್ತು ನಮ್ಮಂಥವರು ನಮ್ಮದೇ ಗೋಜಲುಗಳ ನೆನೆಸಿಕೊಂಡು ನಿಟ್ಟುಸಿರಾಗುತ್ತೇವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: