ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಬಿಟ್ಟೆನೆಂದರೂ ಬಿಡದ ಮಾಯೆ

ನಾವು ಫ್ರೆಂಡ್ಸ್.. ನಮಗೆ ಜಾತಿಗಿಂತ ಸ್ನೇಹವೇ ಮುಖ್ಯ, ಥೂ ಈ ಹಾಳು ಜಾತಿ ಅದ್ಯಾರು ಮಾಡಿದರೋ. ನಮ್ಮ ಹಿರಿಯರು ಇದೆಲ್ಲ ಮಾಡಿಕೊಳ್ಳಿ. ನಮ್ಮ ಕಾಲಕ್ಕೆ ಇದೆಲ್ಲ ಇರಲ್ಲ. ನಾವು ವಿದ್ಯಾವಂತರು. ನಾವು ಜಾತಿ ಬೇದ ಮಾಡಲ್ಲ. ಕೆಟ್ಟ ರಾಜಕಾರಣಿಗಳನ್ನು ಬೈಯುತ್ತೇವೆ, ಭ್ರಷ್ಟಾಚಾರ ವಿರೋಧಿಸುತ್ತೇವೆ. ನಾವೆಲ್ಲ ದೊಡ್ಡವರಾದಾಗ ಸುಂದರ ಸಮಾಜವಿರುತ್ತದೆ. ಯಾಕೆಂದರೆ ನಾವೆಲ್ಲ ವಿದ್ಯಾವಂತರಾಗಿರುತ್ತೇವಲ್ಲ, ಅಂದುಕೊಳ್ಳುತ್ತಿದ್ದೆ. ಮಡಿ, ಪೂಜೆ, ಆಚಾರ. ಈಗೇನೋ ಇವರು ಮಾಡುತ್ತಾರೆ. ಮುಂದೆ ಯಾರು ಇದನ್ನೆಲ್ಲ ಅನುಸರಿಸ್ತಾರೆ? ಅನುಮಾನವ. ಅಯ್ಯೋ.. ಮದುವೆಗೆ ಎಷ್ಟೊಂದು ಶಾಸ್ತ್ರಗಳು ಈ ಪೂಜಾರಿಕೆ, ಬಾಗಿನ, ಗೌರೀಪೂಜೆ. ಇದನ್ನೆಲ್ಲ ಈಗ ದೊಡ್ಡವರು ಮಾಡ್ತಾರೆ ಮುಂದಿನವರು ಮಾಡ್ತಾರಾ? ಹೇಗೆ ಗೊತ್ತಿರತ್ತೆ? ಯಾವುದಕ್ಕೂ ಅಮ್ಮನ್ನ ಕೇಳಿ ಎಲ್ಲಾದ್ರೂ ಬರೆದಿಟ್ಟುಕೋಬೇಕು ಅಂದುಕೊಳ್ತಿದ್ದೆ.
ಮಠಗಳಿಗೆ ಹೋದಾಗಲೂ.. ಈ ಸ್ವಾಮಿಗಳ ನಂತರ ಇನ್ಯಾರು ಬರುತ್ತಾರೆ? ಇವರೇನೋ ಆಕಾಲದಲ್ಲಿ ಸ್ವಾಮಿಗಳಾದರು. ಮುಂದೆ? ಸ್ವಾಮಿಯಾಗೋಕೆ ಯಾವ ಹುಡುಗ ಬರ್ತಾನಪ್ಪ? ಅದು ಹೋಗಲಿ ಮಠಕ್ಯಾರು ಬರ್ತಾರೆ? ಎಲ್ಲರೂ ಫಾರ್ವರ್ಡ್(!) ಆಗಿರ್ತಾರೆ. ಇನ್ನು ಈ ಜಾತ್ರೆಗಳು. ಥೂ.. ಆಧೂಳು ಗಲೀಜು. ಅಲ್ಲಿ ಹೋಗಿ ಮಾಡೋದೇನಿದೆ? ನಮ್ಮ ಕಾಲಕ್ಕೆ ಜಾತ್ರೆ ಯಾರು ಮಾಡ್ತಾರೆ? ಅಂದುಕೊಳ್ತಿದ್ದೆ. ರೈಟು ಲೆಫ್ಟುಗಳು ಗೊತ್ತಿರದ ಮುಗದ ಕಾಲವದು. ಈಗಿರುವ ಅದೆಷ್ಟೋ ಮುಂದೆ ಇರುವುದಿಲ್ಲ ಎಂಬ ಕಲ್ಪನೆ. ಕೆಲವು ಇರಬೇಕೆಂಬ ಆಶಯ. ಮತ್ತು ಕೆಲವು ಇರುವುದಿಲ್ಲವೆಂಬ ನಂಬಿಕೆ. ಆದದ್ದೇನು ಗೊತ್ತಾ? ಹೇಳ್ತೀನ್ ಕೇಳಿ.
ಹೆಸರುಬೇಳೆ., ಮೆಣಸಿನಕಾಯಿ, ಉಪ್ಪು, ನಿಂಬೆಹಣ್ಣು, ಸೌತೇಕಾಯಿ, ಅರಿಶಿನ ಕುಂಕುಮ, ಕರ್ಪೂರ, ಕಾಯಿ, ಬಾಳೆಹಣ್ಣು , ಮಡಿಬಟ್ಟೆಗಳು, ಹಾಸಲು ಹೊದೆಯಲು ಬೆಡ್ಶೀಟುಗಳು, ಮತ್ತು ಮರೆಯದೇ ಕ್ಯಾಂಡಲು, ಇನ್ನೂ ಏನೇನೋ ಎಲ್ಲವನೂ ಪೊಟ್ಟಣ ಕಟ್ಟಿಕೊಂಡು, ನಮ್ಮಂತ ಚಿಳ್ಳೆಪಿಳ್ಳೆಗಳನ್ನೂ ಎಳಕೊಂಡು ಅಕ್ಕತಂಗೀರು ಒಬ್ಬೊಬ್ಬರೂ ಒಂದೊಂದು ಹಳ್ಳಿಯಿಂದ ಹೊರಟು ಮಧ್ಯಾಹ್ನದ ಹೊತ್ತಿಗೆ ಟಿ. ನರಸೀಪುರ ತಲುಪಿಕೊಳ್ಳೋದು. ಅಲ್ಲಿ ಎಲ್ಲರೂ ಒಟ್ಟಿಗೇ ಸೇರಿ ಮತ್ತೊಂದು ಬಸ್ಸು ಹಿಡಿದು, ಸಂಜೆ ಹೊತ್ತಿಗೆ ಮುಡುಕುತೊರೆ ತಲುಪೋದು. ಮೊಬೈಲಿರಲಿಲ್ಲ, ಲ್ಯಾಂಡ್ ಲೈನೂ ಅಷ್ಟಾಗಿ ಬಂದಿರಲಿಲ್ಲ. ಆದರೂ ಗಿಜಿಗುಡುವ ನರಸೀಪುರದ ಬಸ್ಟಾಂಡಿನಲಿ ಅದು ಹೇಗೆ ಅವರು ಪಕ್ಕಾ ಭೇಟಿಯಾಗುತ್ತಿದ್ದರು ಅಂತ ಆಶ್ಚರ್ಯವಾಗುತ್ತದೆ.
ಜಾತ್ರೆಗೆ ಸ್ವಲ್ಪ ದೂರದವರು ಬಸ್ಸಿಗೆ ಬರುತ್ತಿದ್ದರೆ ಸುತ್ತಲ ರವರು, ಎತ್ತಿನಗಾಡೀಲಿ ಬರ್ತಾರೆ. ಆಹಾ, ಎಂತೆಂತ ರಾಸುಗಳು ಅಂತೀರಿ,? ನೋಡೋಕೊಂದಾನಂದ. ಚಿಕ್ಕಂದಿನಲ್ಲಿ ಸತ್ತು ಸತ್ತು ಹುಟ್ಟಿದ, ಹೆಗ್ಗಣದ ಬಣ್ಣದ ನನಗೆ ನನ್ನಮ್ಮ ಕಟ್ಟಿಕೊಂಡ ಹತ್ತಾರು ಹರಕೆಗಳಲ್ಲಿ ಮುಡುಕುತೊರೆ ಪಾರ್ವತಮ್ಮ, ಮಲ್ಲಿಕಾರ್ಜುನರದೂ ಒಂದು. ಸುಮಾರು ಹತ್ತು ವರ್ಷ ಪ್ರತಿವರ್ಷ ಹೋಗೋದು ನಡೆದಿತ್ತು.
ಹಿಂದಿನ ದಿನ ಮುಡುಕುತೊರೆ ತಲುಪಿದರೆ, ನೆಂಟರಿದ್ದವರು ಅವರ ಮನೆಗಳಿಗೆ ಹೋಗ್ತಿದ್ದರು. ಆಪಾಟಿ ಜನ, ಯಾವ ಮನೆ ಸಾಕಾದೀತು? ಉಳಿದಂತೆ, ಅಲ್ಲಿ ಒಂದಷ್ಟು ಕಲ್ಲಿನ ಮಂಟಪಗಳಿವೆ, ಫಸ್ಟ್ ಕಮ್ ಫಸ್ಟ್ ಅನ್ನೋ ರೂಲ್ಸಿನ ಪ್ರಕಾರ, ಆಯಕಟ್ಟಿನ ಮಂಟಪಗಳನ್ನ ಹಿಡಿದುಕೊಳ್ತಿದ್ದರು. ಒಂದು ರೌಂಡು ಜಾತ್ರೆ ಸುತ್ತಿ, ಕತ್ತಲಾಗುತ್ತಲೇ ಬುತ್ತಿ ಬಿಚ್ಚಿ ತಿಂದು, ಮಕ್ಕಳನ್ನ ಮಲಗಿಸಿ, ಅವರೆಲ್ಲ ಪೂಜೆಗೆ, ಕೋಸಂಬರಿಗೆ ರೆಡಿಮಾಡಲು ಕೂರುತ್ತಿದ್ದರು, ಒಲೆಕಲ್ಲುಗಳ ಹಾಗೆ ಕೂತುಕೊಂಡು ಮೂರೂ ಅಕ್ಕತಂಗೀರೂ, ಅವರವರ ಗಂಡನ ಮನೆಗಳ, ಊರುಗಳ ಸುದ್ದಿಗಳನ್ನು ಸುರಿಯುತ್ತಿದ್ದರು. ಬೆಳಗಿನ ಜಾವ ಮೂರ್ನಾಲ್ಕು ಗಂಟೆ ವೇಳೆಗೆ ಎಬ್ಬಿಸುತ್ತಿದ್ದರು. ಚಳಿಗೆ ಹಾಳು ಮಂಟಪದಲ್ಲೂ ಸಕ್ಕರೆನಿದ್ದೆ. ಬಡಿದೆಬ್ಬಿಸುತ್ತಿದ್ರು,, ಮಂಟಪದ ಸಾಮಾನು ಕಾಯಲು ಗಂಡು ಮಕ್ಕಳ ಪೈಕಿ ಯಾರನ್ನಾದ್ರೂ ಇರಿಸಿ, ಉಳಿದವರೆಲ್ಲ ಹೊಳೆದಂಡೆಗೆ ಹೋಗ್ತಿದ್ದೆವು.
ಹೊಳೆ ಹಾದಿಯ ಊದ್ದಕ್ಕೂ ಜನವೋ ಜನ. ಸ್ನಾನ ಮಾಡಿ, ಮಡಿಯುಟ್ಟು ಹರಿವ ನೀರಿಗೆ ಪೂಜೆ ಮಾಡಿ, ದಂಡೆಯಲ್ಲಿ ಬೆಳ್ಳಗೆ ಪಂಚೆ ಹಾಸಿ, ಪೂಜೆ ಸಾಮಾನು ಜೋಡಿಸಿಕೊಂಡು ಸಿಕ್ಕ ಮುತ್ತೈದೆಯರನ್ನು ಕೂಗಿ ಕರೆಯುವುದು. ಐವರನ್ನು ನಿಲ್ಲಿಸಿ, ಅವರ ಪಾದಗಳಿಗೆ ವಿಭೂತಿ ಬಳಿದು, ಗಂಧ, ಅರಿಶಿನ ಕುಂಕುಮ ಮೆತ್ತಿ, ಹೂ ಇಟ್ಟು, ಗಂಧದಕಡ್ಡಿ ಹಚ್ಚಿ , ಅಡಿಕೆ ಬಾಳೆಹಣ್ಣು, ಒಂದು ದೊನ್ನೆ ಕೋಸಂಬರಿ ಕೊಟ್ಟು ನಮಸ್ಕಾರ ಮಾಡೋದು, ಮತ್ತು ಇವರೂ ಹೋಗಿ ಬೇರೆಯವರ ಕೈಲಿ ಪೂಜೆ ಮಾಡಿಸಿಕೊಂಡು ದೊನ್ನೆ , ಬಾಳೆಹಣ್ಣು ಹಿಡಕೊಂಡು ಬರೋದು. ಒಬ್ಬೊಬ್ಬರ ಹತ್ತಿರವೂ ಒಂದು ಚೀಲ ಬಾಳೆಹಣ್ಣು, ದೊಡ್ಡ ಪಾತ್ರೆಯ ಕೋಸಂಬರಿಯಾಗುತ್ತಿತ್ತು.

ಅಷ್ಟರಲ್ಲಿ ಏಳೋ ಎಂಟೋ ಗಂಟೆಯಾಗುತ್ತಿತ್ತು. ಮಂಟಪಕ್ಕೆ ಹೋಗಿ ರಸಾಯನ ಮಾಡಿ, ಕೋಸಂಬರಿ ತಿಂದು. ಬೆಟ್ಟದ ಮೇಲೆ ಕುಂತ ಪಾರ್ವತಮ್ಮ ಮಲ್ಲಣ್ಣೋರ ದರ್ಶನಕ್ಕೆ ಅಣಿಯಾಗೋದು. ಬೆಟ್ಟ ಹತ್ತಿ ಇಳಿದು, ಮಂಟಪದಲ್ಲಿ ಹುಳಿಯನ್ನ ಸಿದ್ದಮಾಡೋದು. ಮಂಟಪ ಸಿಗದವರು ಮೂರು ಕಲ್ಲಿಟ್ಟು ಜಾತ್ರೆಮಾಳದ ಸಿಕ್ಕ ಜಾಗದಲ್ಲಿ ಬೇಸುತ್ತಿದ್ದರು. ಜಾತ್ರೇಲಿ ಸಿಗುತ್ತಿದ್ದ ನೆಂಟರೋ ನೂರಾರು ಜನ. ಅದರಲ್ಲಿ ಹತ್ತಾರು ಜನರಾದರೂ ತಂದಿದ್ದ ಬುತ್ತಿಗಳನ್ನ ಹಂಚಿಕೊಳ್ಳುತ್ತಿದ್ದರು. ಎತ್ತುಗಳಿಗಂತು ಬಾಳೆಹಣ್ಣ ಸಿಪ್ಪೆ ತಿಂದೇ ತೇಗುಬರುತ್ತಿತ್ತು. ಕಡೆಗೆ ಮಂಟಪಕ್ಕೆ ಬಂದು ಲಗೇಟು ಕಟ್ಟಿಟ್ಟು, ಜಾತ್ರೆ ಸುತ್ತಿ , ಬೇಕಾದ್ದು ಬೇಡವಾದ್ದು ಕೊಂಡು. ಆಪಾಟಿ ರಶ್ಶಿನ ಪ್ರೈವೇಟ್ ಬಸ್ಸಲ್ಲಿ ಹೈರಾಣಾಗುತ್ತಾ ನರಸೀಪುಕ್ಕೆ ಬಂದು, ಅಲ್ಲಿಂದ ಮತ್ತೆ ಅವರವರ ಹಳ್ಳಿಗಳ ಸೇರಿಕೊಳ್ಳೋದು.
ಹಳೇ ಕಥೆಯಿದು. ಈಗ ನಾನು ಮುತ್ತೈದೆ. ನನ್ನ ತಲೆಮಾರಿದು, ನಾನಂತೂ ಯಾವ ಹರಕೇನೂ ಹೊತ್ತಿಲ್ಲ. ಮುತ್ತೈದೆಯರ ಪಾದಪೂಜೆ ಬಗ್ಗೆ ಆಸಕ್ತಿಯೂ ಇಲ್ಲ. ನಮ್ಮೂರ ನನ್ನಂತ ವಯಸಿನ ಹುಡುಗಿಯರಿಗೂ ಟಿವಿ, ಸಿನೆಮಾ, ಸಿಟಿ,ಮಾಲ್. ಇವುಗಳದೇ ಆಕರ್ಷಣೆ. ಜಾಗತೀಕರಣ, ಆಧುನೀಕರಣ ನಮ್ಮನ್ನು ಬದಲಿಸುತ್ತಿರುವ ದಿನಮಾನವಿದು. ಈಗ ಮುಡುಕುತೊರೆಲಿ ಮುತ್ತೈದೆಯರ ಪೂಜೆ ನಡೆಯುತ್ತಾ? ಸಂಖ್ಯೆಯೆಷ್ಟು? ನಿಮ್ಮ ಲೆಕ್ಕಾಚಾರ. ತಪ್ಪು ಸ್ವಾಮೀ ತಪ್ಪು. ಸಂಖ್ಯೆ ಇಳಿದಿಲ್ಲ. ಒಂದಕ್ಕೆ ನಾಲ್ಕಾಗಿದೆ. ಹೊಳೆದಂಡೇಲಿ ಪಂಚೆಹಾಸಲಿಕ್ಕಿಷ್ಟು ಜಾಗವೂ ಸಿಗೊಲ್ಲವಂತೆ. ಬೆಟ್ಟದ ಮೆಟ್ಟಿಲ ಮೇಲೆ ಕಾಲಿಡಲೂ ಜಾಗವಿಲ್ಲವಂತೆ. ಎತ್ತುಗಳ ಜಾಗದಲ್ಲರ್ಧ ಕಾರುಗಳು ಬಂದು ನಿಲ್ಲುತ್ತವೆ,ಜೊತೆಗೆ ಊರೂರಲ್ಲೂ ಇರೋ ಆಟೋಗಳು. ಜಾತ್ರೆ ಸದ್ದಿಗೆ ಮೊಬೈಲಿನ ರಿಂಗೂ ಸೇರಿದೆ. ಮಂಟಪಗಳ ಜೊತೆಗೀಗ ಉಳಿಯಲು ಲಾಡ್ಜುಗಳು ಬಂದಿವೆ. ರೆಸಾರ್ಟುಗಳೂ ತಲೆಎತ್ತಿವೆ.
ಅಲ್ಲಿ ಅದೇ ನಾನು ಓದಿದ ಸಂತೆಮರಳ್ಳಿಯ ಆ ಹೈಸ್ಕೂಲಿನ ಪಕ್ಕದಲ್ಲೆ ಮಲೆಮಾದೇಶ್ವರನ ಒಂದು ದೇವಸ್ಥಾನ . ಅತ್ತ ಸರಕಾರೀ ಶಾಲೆ, ಇತ್ತ ಪ್ರೈವೇಟು ಶಾಲೆ. ಮಧ್ಯೆ ಈ ದೇವಸ್ಥಾನ ಮುಂದೆ ದೊಡ್ಡದಾದ ಬಯಲು. ಗರ್ಭಗುಡಿ ಬಿಟ್ಟು, ದೇವಸ್ಥಾನದ ಉಳಿದ ಭಾಗವೆಲ್ಲ ಶಿಥಲಾವಸ್ಥೆ ತಲುಪಾಗಿತ್ತು. ಕೊಳ್ಳೆಗಾಲ ದಾಟಿ ಮಾದೇಶ್ವರನ ಬೆಟ್ಟಕ್ಕೆ ಹೋಗಿ ಉಘೇ ಉಘೇ ಅಂದುಕೊಂಡು ಬರ್ತಿದ್ದ ಜನ ಪಾಪ ಈ ಬ್ರಾಂಚ್ ಮಾದೇಶ್ವರನನ್ನ ಯಾಕೋ ನಿರ್ಲಕ್ಷ್ಯ ಮಾಡಿದ್ದರು. ಬರುತ್ತಿದ್ದ ಜನವೂ ಅಷ್ಟಕ್ಕಷ್ಟೆ. ಆದರೆ ಅದೇನೋ ಇತ್ತೀಚೆಗೆ ಜನ ಮಾದಪ್ಪನಿಗೆ ಒಲಿದರೋ, ಮಾದಪ್ಪನೇ ಜನಕ್ಕೆ ಒಲಿದನೋ ಕಾಣೆ. ದೇವಸ್ಥಾನ ಜೀರ್ಣೋಧ್ದಾರವಾಗಿ, ನಿತ್ಯನೂರಾರು ಜನ ಬರುವಂತಾಗಿದೆ. ಅಮಾವಾಸೆಗಳಲ್ಲಂತು ಜೋರು ಜನ.ಮೊನ್ನೆ ಭೀಮನ ಅಮಾವಾಸೆಯಲ್ಲಿ ದೇವನೂರು, ಉಮ್ಮತ್ತೂರು,ತಗಡೂರಿಂದೆಲ್ಲ ಜನ ಬಂದು. ಆಬಯಲಿನ ತುಂಬ ಜನ, ಮತ್ತು ದೊಡ್ಡ ಜಾತ್ರೆ.
ಇನ್ನು ನಮ್ಮ ಆಯರಳ್ಳಿ ಪಕ್ಕದ ಬಿಳಿಕೆರೆ ಮಾದಪ್ಪನ ಸ್ಥಿತಿಯೂ ಇದೆ. ಯಾರೂ ಕೇಳೋರೇ ದಿಕ್ಕಿಲ್ಲದ ಮಾದಪ್ಪನಿಗೆ ಈಗ ಜನ ಒಲಕೊಂಡು ಕುಂತವರೆ. ನಿತ್ಯ ಪೂಜೆ ನಡೆಯುತ್ತೆ. ನಾಕಾರು ಊರುಗಳ ಮಧ್ಯೆ ಯಾವ ಊರಿಗೂ ಸೇರದಂತೆ ಇರೋದರಿಂದ. ಸುತ್ತಲ ಒಂದೊಂದು ಊರವರೂ ಒಂದೊಂದು ಅಮಾವಾಸೇಲಿ, ಪೂಜೆ ಅನ್ನದಾನ ಮಾಡ್ತಾರೆ. ಇದು ಟಿವಿ ಜ್ಯೋತಿಷಿಗಳ ಮಾತಿನ ಪರಿಣಾಮವಂತೂ ಅಲ್ಲ. ಯಾಕಂದರೆ ಯಾವ ಟಿವಿ ಜ್ಯೋತಿಷಿಯೂ ಮಾದೇಸ್ವರನ ಬಗ್ಗೆ ಹೇಳಿಲ್ಲ. ಜಾತ್ರೆ ಮಾಡಿ ಅಂದಿಲ್ಲ.
ನಾವು ಮುತ್ತೈದೆಯರಾದ ಹಾಗೆ, ನಮ್ಮ ಓರಗೆಯ ಹುಡುಗರೂ ಗಂಡನೂ, ಅಪ್ಪನೂ ಆಗಿದ್ದಾರೆ. ಯುವಭಾರತವಾಗಿದ್ದಾರೆನ್ಯೂಸ್ ಚಾನಲೊಂದಕ್ಕೆ ಸುದ್ದಿ ಮಾಡಲು ವಿಧಾನಸೌಧಕ್ಕೆ ಹೋದಾಗ ಕಾರಿಡಾರಿನಲಿ ಸಿಕ್ಕ ಸಂಬಂಧೀ ಹುಡುಗ. ಮಿನಿಸ್ಟರ ಪಿ.ಎ ಆಗಿದ್ದ. ಅಂತವರೇ ಹತ್ತಾರು ಯುವಕರು ಸೇರಿ ಊರಲ್ಲಿ ಪಾರ್ಟಿ ಬೆಳೆಸುತ್ತಾರಂತೆ. ಮುಂದೆ ಎಂಎಲ್ಎ ಆಗುವ ಕನಸು ಅವನದು. “ಜಾತಿರಾಜಕಾರಣ”ದ ಪಾಠ ನನಗೂ ಹೇಳಿದ. ನಾವು ಒಗ್ಗಟ್ಟಾಗದಿದ್ದರೆ ಬೇರೆಯವರು ತುಳೀತಾರೆ ಅಂತೆಲ್ಲ ಥೇಟು ರಾಜಕಾರಣಿಯಂತೆ ಭಾಷಣ ಮಾಡಿದ. ಬೆಂಗಳೂರಿನ ಮಾಲ್ ಸಂಸ್ಕ್ರತಿ ಮೈಸೂರು, ಮಂಡ್ಯ, ಹುಬ್ಬಳ್ಳಿ, ದಾವಣಗೆರೆಗಳಿಗೂ ಹರಿಯುತ್ತದೆ. ಜನರೂ ಹರಿಯುತ್ತಿದ್ದಾರೆ. ಮೊನ್ನೆ ಮಠವೊಂದಕ್ಕೆ ಎಂಜಿನಿಯರಿಂಗ್ ಓದಿದವರೊಬ್ಬರು ಸ್ವಾಮ್ಗಳಾಗಿ ಸೇರಿದ್ದಾರೆ. ಇನ್ನೊಂದು ಮಠಕ್ಕಂತೂ ವಿದೇಶದಲ್ಲಿ ಕಲಿತುಬಂದ ಹುಡುಗ ಪಟ್ಟು ಬಿಡದೇ ಪಟ್ಟ ಏರಿದ್ದಾನೆ.
ಕವಿಗೋಷ್ಠಿಗೆ ಹೋದರೆ ಸಿಗುವ ಕಾಲೇಜ್ಮೇಟ್ ಪದ್ಯದಲ್ಲೆ ಕತ್ತಿ ಝಳಪಿಸುತ್ತಾನೆ. ಪುರೋಹಿತಶಾಹಿಗೆ ಧಿಕ್ಕಾರ ಹೇಳುತ್ತಾನೆ. ಆರು ತಿಂಗಳಿಗೋ ಮೂರು ತಿಂಗಳಿಗೋ ಫೋನು ಮಾಡಿ ನನಗೆ ಯಾವುದಾದರೂ ಕೆಲಸ ಕೊಡಿಸು, ಮಗೂನ ಸಾಕೊಂಡು ಬದುಕ್ತೀನಿ ಅನ್ನುವ ಕ್ಲಾಸ್ಮೇಟು 8 ವರ್ಷಗಳಿಂದ ಹೊಸಿಲು ದಾಟಿಲ್ಲ. “ಮೊನ್ನೆ ಪೆಪರಲ್ಲಿ ಎಷ್ಟ್ ಚೆಂದ ಆರ್ಟಿಕಲ್ ಬರೆದಿದೀ ಮಾರಾಯ್ತಿ.. ಹೀಗೇ ಬರೆದು ಚೂರು ಹೆಸರು ಮಾಡು. ನಮ್ಮ ಪಕ್ಷದಲ್ಲಿ ನಿಮ್ಮ ಜಿಲ್ಲೆಗೇ ಸೀಟು ಕೊಡಿಸ್ತೀನಿ” ಅಂತಾನೊಬ್ಬ. ಕೆ, ಆರ್ ಪೇಟೆಯ ಯಾವುದೋ ಕಾಲೇಜಲ್ಲಿ ಕನ್ನಡ ಪಾಠ ಮಾಡೋ ಮತ್ತೊಬ್ಬ ಫೋನು ಮಾಡುತ್ತಾನೆ. ನೀನೂ ಬಂದುಬಿಡು, ನಾನೂ ಬಂದುಬಿಡುತ್ತೇನೆ ಮತ್ತೆ ಹಳ್ಳಿ ಸೇರಿ ಕೃಷಿಮಾಡೋಣ. “ನೀನಾಸಂ” ಥರದ್ದೇನಾದರೂ ಕಟ್ಟೋಣ ಅಂತ ಹೊಸ ಕನಸಿನ ಬೀಜ ಬಿತ್ತುತ್ತಾನೆ.
ಎಲ್ಲ ಕಾಲದಲ್ಲೂ ಎಲ್ಲ ಥರದವರೂ ಇರುತ್ತಾರೆ ಅನ್ನುವ ಸತ್ಯ ಗೋಚರಿಸಿದೆ. ಆದರೂ ಅಂದುಕೊಳ್ಳುತ್ತೇನೆ, ನಾಕು ವರ್ಷದ ನನ್ನ ಮಗನಿಗೆ ಮಗುವಾಗುವ ವೇಳೆಗೆ ಎಲ್ಲವೂ ಇನ್ನಷ್ಟು ಸಾಫ್ಟ್ವೇರ್ ಮಯವಾಗಿರತ್ತೆ, ಬದಲಾಗುತ್ತದೆ. ಆದರೆ ಆ ಬದಲಿಂದ ಒಳಿತಾಗುತ್ತದಾ? ಅಥವ ಯಾವ ವೇರು ಬಂದರೂ ಅವರವರೇ ಹುಟ್ಟಿ, ಅದದೇ ವಾದಗಳು ಬೆಳೆಯುತ್ತವಾ? ಗೊತ್ತಿಲ್ಲ. ಮೊಮ್ಮಗುವಾದ ಮೇಲೆ ಮತ್ತೆ ಬರೆಯುತ್ತೇನೆ ಈ ಬಗ್ಗೆ. ಸಧ್ಯಕ್ಕೆ ತಲೆಬಿಸಿ ಬಿಟ್ಟು ಜಾತ್ರೆಯ ಬತ್ತಾಸು ತಿನ್ನೋಣ ಬನ್ನಿ.
 

‍ಲೇಖಕರು G

July 29, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

  1. VidyaShankar

    Yes, It continues as it is. Well written and balanced article. Many reporters who worked Lankesh patrike, have become exactly opposite of what they wrote. They have become utter religious and some even into astrology. May be because modern thinking does not offer a life style to common men.

    ಪ್ರತಿಕ್ರಿಯೆ
  2. Swarna

    ಎಲ್ಲ ಕಾಲದಲ್ಲೂ ಎಲ್ಲ ಥರದವರೂ ಇರುತ್ತಾರೆ ನಿಜ ಕುಸುಮಾ, ಎಲ್ಲಾ ಕಡೆನೂ ಜಾತ್ರೆಗಳು , ಪೂಜೆಗಳು ಜಾಸ್ತಿಯಾಗಿವೆ. ಟಿ.ವಿ. ಜ್ಯೋತಿಷಿಗಳದ್ದು ಸ್ವಲ್ಪ ಪಾಲಿದ್ದರೂ ಒಂದು ಪೀಳಿಗೆ ಮತ್ತೆ ಬೇರಿನ ಹುಡುಕಾಟದಲ್ಲಿದೆ. ಚೆನ್ನಾಗಿದೆ.

    ಪ್ರತಿಕ್ರಿಯೆ
  3. M S Krishna Murthy

    ಬಹಳ ಇಷ್ಟವಾಯಿತು ಕುಸುಮ.. ಆ ಜಾತ್ರೆಯ ಲೋಕಕ್ಕೆ ಹೋಗಿ ಬಂದ ಹಾಗಾಯ್ತು.. ನಿಜ ಇನ್ನು ಮುಂದಿನ ಬದಲಾವಣೆಗಳು ನಮ್ಮ ನಿರೀಕ್ಷೆಗೆ ತಕ್ಕ ಹಾಗೆ ಇರುವುದಿಲ್ಲ.

    ಪ್ರತಿಕ್ರಿಯೆ
  4. amardeep.p.s.

    ಹಿಂದಿನ ದಿನಗಳ ಜಾತ್ರಾ ವಿಶೇಷದ ಲಗತ್ತುಗಳ ಬಗ್ಗೆ,ಈಗಿನ ಜಮಾನದ ಗೈರತ್ತುಗಳು ಹೇಗೆ ಪ್ರಭಾವ ಬೀರುತ್ತವೆ ಎನ್ನುವುದನ್ನು ಚೆನ್ನಾಗಿ ಹೇಳಿದ್ದೀರಿ.ಇಷ್ಟವಾಯ್ತು ನಿಮ್ ಲೇಖನ.

    ಪ್ರತಿಕ್ರಿಯೆ
  5. chaithta

    Last pyara history repeats annodanna nenapisutte…! Last pyara ishta aytu. Naavu arathi ukkadadalli koli bali kottu aduge maadida namma baalyada dinagalu nenapdvu, muduku tore jaatreli hannu jaana esesiddu, baban purada matadalli somavara uta maaduttiddaddu Ella nenapaitu..!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: