ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ: ಬದುಕ ಬುಗುರಿ ತಿರುಗಲು ಇಂಗ್ಲೀಷು ಚಾಟಿಯೇ ಬೇಕೆ?

ಒಮಾಬಾ ಬಂದೂ ಆಯ್ತು ಹೋಗೂ ಆಯ್ತು, ಮನ್ ಕೀ ಬಾತ್ ಆಡಿಯೂ ಆಯ್ತು. ಕುಂತ್ಕಳಿ, ಒಸಿ ಭಾ಼ಷಾ ಕಿ ಬಾತ್ ಮಾತಾಡುವ
ಜಗಲೀಲ್ ಕುಂತ್ಕಂಡು, ಪೇಪರ್ ಹಿಡ್ಕಂಡು, ಸಾಹಿತ್ಯ ಸಮ್ಮೆಳನದ ಉದ್ಘಾಟನೆಯ ಅಧ್ದೂರಿ ವರದಿ ಓದ್ತಿದ್ದೆ. ಅತ್ತಿಗೆಮ್ಮ ಬೀದೀಲಿ ಕೊಂಟು ಹಾಕೊಂಡು, ಸೌದೆಗಳನ್ನ ಒಲೆ ಒಟ್ಟಲು ಸುಲಭವಾಗುವಂತೆ ಮಚ್ಚಿನಲ್ಲಿ ಕತ್ತರಿಸಿಕೊಳ್ತಿದ್ದಳು. ಪಕ್ಕದಲ್ಲೆ ಹುಡಗ ಬುಗರಿ ಬಿಡ್ತಿದ್ದ. ಪ್ಲಾಸ್ಟಿಕ್ಕು ಬುಗರಿ ಬೀಸಿದಾಗ ಆಡಿದ್ದಕ್ಕಿಂತ, ಪಲ್ಟಿ ಹೊಡೆದಿದ್ದೇ ಹೆಚ್ಚು. ಮರದ ಬುಗುರಿಯಾದರೆ ಸರಿ. ಮಣ್ಣಿನ ಮೇಲೆ ತಿರುಗಿ ಗುಳಿ ಮಾಡುತ್ತದೆ. “ಎಷ್ಟನೇ ಕ್ಲಾಸೋ?” ಆಡುತ್ತಿದ್ದ ಹುಡುಗನ ಕೇಳಿದೆ. “ಪಸ್ಟ್ ಸ್ಟಾಂಡರ್ಡ್ “ ಅಂದ. ಸೌದೆ ಸೀಳ್ತಿದ್ದವರು ಬಾಯಿ ಹಾಕಿದರು, “ಅಯ್ಯೋ ಅವರ ಮೇಡಮ್ಮದೀರೆಲ್ಲ ಯೋಳ್ತರ, ಚೆಂದಾಗ್ ಓದುತ್ತ ನಿಮ್ ಗಂಡು. ಕನ್ನಡವೇ ಬರಲ್ಲ. ಇಂಗ್ಲೀಸ್ನೇ ಚೆಂದಾಗ್ ಕಲಿತನ ಅಂದ್ರು. ಓದಲಿ ಅಂತ್ಲೆ ಅಲ್ವಾ ಆಪಾಟಿ ಖರ್ಚು ಮಾಡಿ ಕಾರ್ಮೆಂಟಿಗ್ ಸೇರ್ಸಿರದು?” ಅಂತ ನನ್ನನ್ನೇ ಕೇಳಿ, ಸೌದೆ ಜೋಡಿಸಿಕೊಂಡು ಒಳಗೆ ಹೋದರು.ಕನ್ನಡವೇ ಬರಲ್ಲ ಅನ್ನುವಾಗ ಆಗುತ್ತಿದ್ದ ಖುಷಿ, ಅವರ ಮುಖದ ಮೇಲೆ ಕಾಣ್ತಿತ್ತು.
ನಮ್ಮೂರಲ್ಲಿ ಇರೋದು ಸರಕಾರೀ ಪ್ರಾಥಮಿಕ ಶಾಲೆ. ಆಮೇಲೆ ಪಕ್ಕದೂರಿಗೆ ಹೋಗಬೇಕು. ಈ ನಡುವೆ, ಮಕ್ಕಳು ಪ್ರಾಥಮಿಕ ಶಾಲೆಗೇ ಬೇರೆ ಊರಿಗೆ ಹೋಗ್ತಿವೆ. ವ್ಯಾನು ಬಂದು ಕರ್ಕೊಂಡು ಹೋಗತ್ತೆ. ಊರಲ್ಲಿ ಸ್ಕೂಲಿರೋವಾಗ ಅಷ್ಟು ಪುಟ್ಟ ಮಕ್ಕಳು ಬೇರೆ ಊರಿಗೆ ಯಾಕೆ ಹೋಗಬೇಕು ಅಂದರೆ, ಅಲ್ಲಿ ಕಾರ್ಮೆಂಟಿದೆ!! ಸರಿ ಕಾನ್ವೆಂಟಿಗೆ ಯಾಕೆ ಹೋಗಬೇಕು? ಯಾಕಂದರೆ ಅಲ್ಲಿ ಇಂಗ್ಲೀಷ್ ಹೇಳಿಕೊಡುತ್ತಾರೆ. ಇಂಗ್ಲೀಷ್ ಯಾಕೆ ಬೇಕು? ಯಾಕೆಂದರೆ ಇಂಗ್ಲೀಷ್ ಬರದಿದ್ದರೆ ಬದುಕೋಕಾಗಲ್ಲ. ಅಯ್ಯೋ ಸಿವನೆ, ಆಮ್ಲಜನಕ ಇರೊದು ಗಾಳೀಲೋ ಇಂಗ್ಲೀಷಲ್ಲೋ?
ಆದರೂ ಅವರಂದದ್ದು ಒಂದರ್ಥದಲ್ಲಿ ನಿಜವೇ. ಗೌರ್ಮೆಂಟ್ ಸ್ಕೂಲಿನಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ, ಮತ್ತು ಇಂಗ್ಲೀಷ್ ಬಾರದ ಮಕ್ಕಳಿಗೆ ಸಿಗುವ ಅವಕಾಶಕ್ಕೂ, ಇಂಗ್ಲೀಷು ಬಲ್ಲ ಮಕ್ಕಳಿಗೆ ಸಿಗುವ ಅವಕಾಶಗಳಿಗೂ, ಸಾಕಷ್ಟು ವ್ಯತ್ಯಾಸವಿದೆ. ಕನ್ನಡದಲ್ಲಿ ಶಾಲೆ ಕಲಿವ ಮಕ್ಕಳಗೆ ಕಾಲೇಜಿನಲ್ಲಿ ಇಂಗ್ಲೀಷು ಕಷ್ಟವಾಗುತ್ತದೆ. ಸಾಮಾನ್ಯವಾಗಿ ಅವರು ಆರ್ಟ್ಸ್ಸ್ ತೆಗುದುಕೊಳ್ತಾರೆ. ಬಿ.ಎ ಡಿಗ್ರಿ ಮುಗೀತು ಅಂದುಕೊಳ್ಳಿ, ಇಂಗ್ಲೀಷ್ ಬಾರದ ಕನ್ನಡ ಡಿಗ್ರಿಗೆ ಯಾವ ಬೆಲೆ ಇದೆ ಇವತ್ತು>? ಒಂದೊಳ್ಳೆ ಸಂಬಳದ ಕೆಲ್ಸ ಸಿಗತ್ತಾ? ಇಲ್ಲ.ಹೆಚ್ಚೆಂದರೆ, ಬಿ, ಎಡ್, ಡಿ, ಎಡ್ ಮಾಡಿಕೊಂಡು ಮೀಸಲಾತಿ, ಪ್ರಭಾವ ಇದೆಲ್ಲದರ ಜೊತೆ ಬಡಿದಾಡಿ ಮೇಷ್ಟರಾಗಬೇಕು. ಅಥವಾ ಇನ್ಯಾವುದೋ ಕಡಿಮೆ ಸಂಬಳದ ಹುದ್ದೆ ಹಿಡಿಯಬೇಕು. ಹಾಗಿದ್ದರೆ 10 ವರ್ಷ ಶಾಲೆ, ಐದು ವರ್ಷ ಕಾಲೇಜಿಗೆ ಮಣ್ಣು ಹೊತ್ತದ್ದಕ್ಕೆ ಏನು ಬಂತು ಭಾಗ್ಯ?
ಈ ಬುಗುರಿ ಹುಡುಗನಿದ್ದಾನಲ್ಲ, ಅವನ ಅಮ್ಮ ನಿಗೆ ಗಂಡನಿಲ್ಲ, ಇನ್ನೂ 25ರ ಆಸುಪಾಸಿನವಳು. ಮನೆಯಲ್ಲಿ ಬಡತನ . ಕನ್ನಡ ಮೀಡಿಯಮ್ಮಿನ ಡಿಗ್ರಿಧಾರಿಣಿ. ಎಲ್ಲಾದರೂ ಕೆಲಸ ಮಾಡಿ ದುಡಿಯೋಣವೆಂದು ಹೋದರೆ, ಸಣ್ಣ ಪುಟ್ಟ ಕಡೆಯೂ ಕಂಪ್ಯೂಟರ್ ಗೊತ್ತಾ? ಇಂಗ್ಲೀಷ್ ಗೊತ್ತಾ ಕೇಳ್ತಾರೆ. ಕಂಪ್ಯೂಟರ್ ಬಳಸುವಷ್ಟೂ ಇಂಗ್ಲೀಷು ಅವಳಿಗೆ ಬಾರದು, ಎಬಿಸಿಡಿ ಕಲಿತದ್ದೇ ಐದನೇ ಕ್ಲಾಸಿನಲ್ಲಿ. ಇಂಗ್ಲೀಷಿಲ್ಲ. ಕಂಪ್ಯೂಟರು ಗೊತ್ತಿಲ್ಲ ಅಂದರೆ, ಗಂಧದ ಕಡ್ಡಿ ಉಜ್ಜಬೇಕು. ಪ್ರಿಂಟಿಂಗ್ ಪ್ರೆಸ್ಸೋ ಗಾರ್ಮೆಂಟೋ ಸೇರಬೇಕು. ಅಷ್ಟೆ.
ಮತ್ತೊಬ್ಬಳಿದ್ದಾಳೆ, ಒಟ್ಟು ಐದು ಮಂದಿ ಹೆಣ್ಣುಮಕ್ಕಳವರು. ಈ ಹುಡುಗಿ ಬಲು ಚೂಟಿ. ನರ್ಸಿಂಗ್ ಕೋರ್ಸಿಗೆ ಸೇರಿದರೆ, ಕೆಲಸ ಬೇಗ ಸಿಗ್ತದೆ ಸಂಬಳವೂ ಚೆನ್ನಾಗಿರ್ತದೆ ಅಂತ, ಅವರಪ್ಪನ ಕೈಲಿ ಸಾಲ ಸೋಲ ಮಾಡಿಸಿ ಸೇರಿದಳು. 12 ಸಬ್ಜೆಕ್ಟು ಮೆಡಿಕಲ್ ಇಂಗ್ಲೀಷು. ಆರು ತಿಂಗಳೂ ನೀಸಲಾರದೇ ಕಣ್ಣೀರು ಹಾಕಿಕೊಂಡು. ಟೆನ್‍ಷನ್ನಿಗೆ ಆರೋಗ್ಯ ಕೆಡಿಸಿಕೊಂಡು ಬಂದಳು. ಹುಡಗರ ಕಥೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಹೇಳಿದರೆ ನಮ್ಮೂರಲ್ಲೆ ನೂರಾರು ಸಿಕ್ತವೆ.

ಹೀಗೆ ಇಂಗ್ಲೀಷಿಂದ ನೊಂದವರೆಲ್ಲ ತಮ್ಮ ಮಕ್ಕಳನ್ನ ಕನ್ನಡ ಮಾಧ್ಯಮಕ್ಕೆ ಸೇರಿಸುವುದಿಲ್ಲ. ಇಂಗ್ಲೀಷು ಕಲಿಸದೆ ಬಿಡುವುದಿಲ್ಲ. ಈ ಮಕ್ಕಳೆಲ್ಲ ಕಾನ್ವೆಂಟಿನಲಿ ಓದಿ, ಮುಂದೆ ಇಡೀ ಊರಿಗೂರೇ ಇಂಗ್ಲೀಷಲೇ ಮಾತಾಡಲಿ, ಅನ್ನುವ ಕಲ್ಪನೆಯೇನೂ ಅವರಿಗಿಲ್ಲ. ಕನ್ನಡ ವೆಂಬುದು ಅನ್ನದ ಭಾಷೆಯಲ್ಲ ಅನ್ನುವ ಕಹಿ ಸತ್ಯ ಗೊತ್ತಾಗಿದೆ. ಇಂಗ್ಲೀಷಿನಲ್ಲಿ ಕಲಿತರೆ ಹೆಚ್ಚಿನ ಸಂಬಳವೂ ಅವಕಾಶವೂ, ಸ್ಥಾನಮಾನವೂ ಸಿಗುತ್ತದೆ ಅನ್ನುವುದಾದರೆ, ಮಕ್ಕಳಿಗೆ ಅದನ್ನು ತಪ್ಪಿಸಲು ತಂದೆ ತಾಯಿಗಳು ಯಾಕೆ ಇಷ್ಟಪಡುತ್ತಾರೆ? ಬನ್ನಿ, ಖುದ್ದು ತೋರಿಸುತ್ತೇನೆ. ಕೂಲಿಗಾರರೂ ಸಹ , ಉಚಿತ ಸರಕಾರೀ ಶಾಲೆ ಬಿಟ್ಟು, ಬಡ್ಡಿ ಸಾಲ ಮಾಡಿ ತಮ್ಮ ಮಕ್ಕಳನ್ನ ಕಾನ್ವೆಂಟಿಗೆ ಸೇರಿಸಿದ್ದಾರೆ. ನಾಕು ಸಾಲು ಇಂಗ್ಲೀಷು ಬಂದರೆ “ಅನ್ನ ಹುಟ್ಟಿಸಿಕೊಳ್ಳಬಲ್ಲ” ಅನ್ನುವ ವಿಶ್ವಾಸವಿಟ್ಟಿದ್ದಾರೆ. ಕನ್ನಡದ ಮೇಲೆ ಅವರಿಗೆ ಆ ವಿಶ್ವಾಸವಿಲ್ಲ. ಹಸಿದವರಿಗೆ ಅಭಿಮಾನಕ್ಕಿಂತಲೂ ಅನ್ನವೇ ದೊಡ್ಡದು.!
ಗೆಳತಿಯೊಬ್ಬಳಿದ್ದಾಳೆ. ಕನ್ನಡದಲ್ಲೇ ಎಂ, ಎ. ಸಾಹಿತ್ಯವೇ ಉಸಿರೆಂಬಂತೆ ಬದುಕು. ಮಗನನ್ನು ಇಂಗ್ಲೀಷ್ ಶಾಲೆಗೆ ಸೇರಿಸಿದ್ದಾಳೆ. ಕಾರಣ ಇಷ್ಟೆ. ನಾಳೆ ಅವನು, ಇಂಗ್ಲೀಷು ಬಾರದ ಕಾರಣಕ್ಕೆ ಯಾವುದೋ ಅವಕಾಶ ಕಳಕೊಂಡು ನನ್ನನ್ನ ದೂರಿದರೆ? ಭಯ ಅವಳಿಗೆ. ಇಂಗ್ಲೀಷು ನನಗೆ ಬರಲ್ಲ ಸ್ಕೂಲಲ್ಲಿ ಕಲೀಲಿ . ಕನ್ನಡ ನಾನೆ ಹೇಳಿಕೊಡ್ತೀನಿ. ಅನ್ನುತ್ತಾಳೆ, ಅಭಿಮಾನವಿದ್ದರೂ. ಕನ್ನಡದಲ್ಲೇ ಓದಿಸೋ ಆಸೆಯಿದ್ದರೂ, ಎಷ್ಟೋ ಜನ ತಮ್ಮ ಮಕ್ಕಳನ್ನ ಇಂಗ್ಲೀಷ್ ಶಾಲೆಗೆ ಸೇರಿಸೋದು ಈ ಭಯದ ಕಾರಣದಿಂದಲೇ. ಎಲ್ಲ ತಂದೆತಾಯಿಗಳೂ ತಮ್ಮ ಮಕ್ಕಳ ವಿಚಾರದಲ್ಲಿ ಮಹತ್ವಾಕಾಂಕ್ಷಿಗಳೇ. ದೊಡ್ಡ ಅವಕಾಶ, ದೊಡ್ಡ ಹುದ್ದೆ. ದೊಡ್ಡ ಸ್ಥಾನ ತಮ್ಮ ಮಕ್ಕಳಿಗೆ ಸಿಗಬೇಕಾದರೆ “ದೊಡ್ಡಣ್ಣನ” ಭಾಷೆ ಬೇಕೇ ಬೇಕೆಂಬುದು ವ್ಯವಸ್ಥೆ ಅವರಿಗೆ ತಲುಪಿಸಿರುವ ಸಂದೇಶ.
ಕೃಷಿ, ಶಿಕ್ಷಣ ಎಲ್ಲವೂ ಈಗ ಕೈಗಾರಿಕೆಯ ರೂಪ ತಾಳಿಬಿಟ್ಟಿವೆ. ಮಗುವಿನ ಮೇಲೆ ಎಷ್ಟು ಬಂಡವಾಳ ಸುರೀತೀರೋ ಅಷ್ಟು ಲಾಭ ಅನ್ನುವಂತ ಲೆಕ್ಕಾಚಾರ. ಕಾನ್ವೆಂಟಿನಲ್ಲಿ ಓದಿಯೂ ಫೇಲಾದ ಮಕ್ಕಳಿದ್ದಾರೆ. ಸರಕಾರೀ ಶಾಲೇಲಿ ಓದಿಯೂ ಐ ಎ ಎಸ್ ಆಫೀಸರರಾದವರಿದ್ದಾರೆ. ಸಿಗುತ್ತಾರೆ. ಉದಾಹರಣೆಗಾಗುವಷ್ಟು ಜನ. ಅವರನ್ನಿಟ್ಟುಕೊಂಡು ಅಳತೆ ಪಟ್ಟಿ ಹಚ್ಚಲಾಗದು. ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಸರಕಾರಿ ಅಥವಾ ಕನ್ನಡ ಮಾಧ್ಯಮದಲ್ಲಿ ಓದಿ ಬಂದ ಮಕ್ಕಳಷ್ಟೂ ಜನ ಏನೇನಾದರು? ಕಾನ್ವೆಂಟುಗಳಲಿ ಓದಿದವರೇನೇನಾದರು ಅಂತ ಗಣತಿಸಿದರೆ, ಸಿಕ್ಕುವುದು ನಿಜ ಲೆಕ್ಕ.
ಇಂಗ್ಲೀಷು ಬರಲ್ಲವೆಂಬುದು ಹುಟ್ಟು ಹಾಕುವ ಕೀಳರಿಮೆಗಳ ಕಥೆಗಳ ಪಟ್ಟಿಯೂ ಉದ್ದವಿದೆ. ಕನ್ನಡ ಮಾಧ್ಯಮದಿಂದ ಓದಿಕೊಂಡು ಕಾಲೇಜಿನಲ್ಲಿ ಸೈನ್ಸ್ ತೆಗೆದುಕೊಳ್ಳುವವರು ಮೊದಲಿಗೆ ಪಾಠಗಳು ಅರ್ಥವಾಗದೇ ಕೀಳರಿಮೆ ಕುಕ್ಕುತ್ತದೆ. ಕನ್ನಡ ಬಾವುಟ ಹಿಡಿದು ಹಾಡಿ ಕುಣಿದು, ಕೂರುವ ಇಂಗ್ಲೀಷು ಬಾರದ ಕನ್ನಡದ ಹೀರೋ ಒಬ್ಬ, ಪಕ್ಕದಲಿ ಕೂತ ಕನ್ನಡ ಬಾರದ ಹೀರೋಯಿನ್ನಿನೆದುರು ಸಂಕೋಚ ಅನುಭವಿಸಿದ. ಕೀಳರಿಮೆ ಅವನ ಆತ್ಮ ವಿಶ್ವಾಸವನ್ನೇ ಕುಸಿಯುವಂತೆ ಮಾಡಿತ್ತು. ಐ ಎ ಎಸ್ ಆಫೀಸರೊಬ್ಬರ ಹೆಂಡತಿ ಆಕೆ. ಉಳಿದ ಆಫೀಸರರ ಹೆಂಡತಿಯರು ಬಂದರೆ ಕಂಗಾಲಾಗುತ್ತಿದ್ದರು. ಇಂಗ್ಲೀಷಿಗೆ ಹೆದರಿ ಯಾವ ಕಾಯಕ್ರಮಕ್ಕೂ ಹೋಗುತ್ತಿರಲಿಲ್ಲ.ಕೆಲವೊಮ್ಮೆ ಎಷ್ಟೇ ಜ್ಞಾನವಿದ್ದರೂ ಎದುರುಗಿದ್ದವರು ಮೂರ್ಖರೇ ಆದರೂ, ನಾಕು ಇಂಗ್ಲೀಷು ಲೈನು ಮಾತಾಡಿದರೆ ಸಾಕು, ಅವರೇ ಹೆಚ್ಚು ಬುದ್ದಿವಂತರೆನಿಸಿಬಿಡುತ್ತಾರೆ. ಇಂತ ಕತೆಗಳಿಗೆ ಕೊನೆ ಮೊದಲಿಲ್ಲ. ಅದೇನೂ ಅಪರಾಧವಲ್ಲ . ಆದರೂ ಇಂಗ್ಲೀಷ್ ಬರಲ್ಲ ಎಂಬುದು, ದೇಹದ ಯಾವುದೋ ಅಂಗ ಕೆಲಸ ಮಾಡ್ತಿಲ್ಲ ಅನ್ನುವುದಕಿಂತಲೂ ದೊಡ್ಡ ಊನವೆಂಬಂತೆ ನೋಡುವ, ಹೀಯಾಳಿಸುವ ಮಂದಿ, ಮತ್ತು ವ್ಯವಸ್ಥೆಯ ನಡುವೆ ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಟ್ಟು ಹರುಷಕ್ಕಿರುವುದೆಂತು?
ನಮ್ಮಂತೆ ಈ ದೇಶದಲ್ಲಿ ಬೇರೆ ಬೇರೆ ರಾಜ್ಯಗಳಿಗೆ ಬೇರೆ ಬೇರೆ ಭಾಷೆಗಳು. ನಾವು ಇಡೀ ದೆಶದ ಜನ ಮಾತಾಡಿಕೊಳ್ಳೋಕೆ ಒಂದು ಭಾಷೆ ಬೇಕಲ್ಲ.? ಅದು ಇಂಗ್ಲೀಷಾಗಿದೆ. ರಾಷ್ಟ್ರಭಾಷೆ ಹಿಂದಿಯಾದರೂ, ನಮ್ಮ ಗಡಿ ನಂತರದ ಸಂವಹನಕ್ಕೆ ಕೆಲಸಕ್ಕೆ ಬರೋದು ಇಂಗ್ಲೀಷೇ. ಅಲ್ಲೀವರೆಗೆ ಯಾಕೆ ಹೋಗಬೇಕು? ನಮ್ಮ ಎಲ್ಲ ಬೋರ್ಡುಗಳೂ ಇಂಗ್ಲೀಷಿನಲ್ಲಿ. ಮೊಬೈಲಿನ ಭಾಷೆ ಇಂಗ್ಲೀಷು. ಈಗ ನಾನೀ ಲೇಖನ ಕುಟ್ಟುತ್ತಿರುವ ಕೀಬೋರ್ಡು ಕೂಡ ಎಬಿಸಿಡಿಯದ್ದೇ. ಇಂಗ್ಲೀಷು ನಮ್ಮ ಚರ್ಮಕ್ಕಂಟಿದ್ದರೆ ಕೊಡವಿಕೊಳ್ಳಬಹುದಿತ್ತು. ಆದರದು ಹೊಟ್ಟೆಯೊಳಗಿಳಿದಾಗಿದೆ. ಇಂಗ್ಲೀಷಮ್ಮನ ಬೆರಳು ಹಿಡಿದು ನಾವು ವಾಪಾಸು ಬರಲಾರದಷ್ಟು ದೂರ ನಡೆದೂ ಆಗಿದೆ. ಈಗ ಇಂಗ್ಲೀಷನ್ನು ಬೇರ್ಪಡಿಸಲಾಗುವುದಿಲ್ಲ. ದೂಷಿಸಿ, ದ್ವೇಷಿಸಿ ಪ್ರಯೋಜನ ಲಾಭ ಯಾವುದೂ ಆಗುವುದಿಲ್ಲ. ಅದೂ ನಮ್ಮಂತ ಗಣರಾಜ್ಯದಲ್ಲಿ!
ಭೇದವೇ ಈ ಎಲ್ಲ ವ್ಯಾದಿಗೆ ಕಾರಣ! ಇಡೀ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದ ಪಠ್ಯ ಎಲ್ಲರದೂ ಒಂದೇ ಆದರೆ, ಮೊದಲು ಕನ್ನಡ ಆಮೇಲೆ ಇಂಗ್ಲೀಷು ಅಂತಲೋ, ಅಥವಾ ಯಾವ ಯಾವ ತರಗತಿಗೆ ಎಷ್ಟೆಷ್ಟು ಇಂಗ್ಲೀಷು ಕಲಿಸಬೇಕು ಅಂತಲೋ ತಜ್ಞರಿಂದ ನಿರ್ಧರಿತವಾದ ಏಕರೂಪ ಶಿಕ್ಷಣವಾದರೆ, ಯಾವ ಸಮಸ್ಯೆಯೂ ಇರುವುದಿಲ್ಲ. ಆ ಶಾಲೇಲಿ ಓದಿದರೆ ಒಳ್ಳೆ ಭವಿಷ್ಯವಿದೆ. ಇಲ್ಲಿ ಓದಿದರೆ ಇಲ್ಲ ಅನ್ನುವ ಪ್ರಶ್ನೆಯೇ ಏಳುವುದಿಲ್ಲ.ಆಗ ಮಕ್ಕಳ ಮೇಲೆ ಬಂಡವಾಳ ಹೂಡೋ ಸಂಕಷ್ಟವೂ ಇರುವುದಿಲ್ಲ.
ಶಿಕ್ಷಣದಲ್ಲಿ ಕನ್ನಡವನ್ನು ತಂದ ಮಾತ್ರಕ್ಕೇ ಕನ್ನಡ ಉಧ್ದಾರವಾಗುವುದಿಲ್ಲ ಎಂಬ ವಾದವೂ ಇದೆ. ಆದರೆ ಎಲ್ಲ ಮಕ್ಕಳಿಗೂ ಒಂದೇ ಶಿಕ್ಷಣವಾದರೆ ಬೇಕಾದಷ್ಟು ಬದಲಾವಣೆಗಳಿಗೂ ಅವಕಾಶವಿದೆ. ಈ ಶಾಲೆಯ ಎರಡನೇ ತರಗತಿಯ ಪಾಠವನ್ನು ಆ ಶಾಲೆಯ ಎಂಟನೇ ತರಗತಿ ಮಗು ಓದಲಾಗುವುದಿಲ್ಲ ಅಂದರೆ, ಮಕ್ಕಳಿಗೆ ಸಮಾನ ನ್ಯಾಯವನ್ನೆಲ್ಲಿ ಒದಗಿಸಿದಂತಾಯ್ತು?
ಜಾಗತೀಕರಣದ ಹೊತ್ತಲ್ಲಿ ಕನ್ನಡ ಮಾತ್ರವೇ ಅನ್ನದ ಪ್ರಶ್ನೆಯಾಗುವ ಮಾತು ಅಸಾಧ್ಯ. ಅಭಿಮಾನವಾದರೂ ಇರಲೇಬೇಕು. ಇಲ್ಲದಿದ್ದರೆ ಉಳಿಗಾಲವಿಲ್ಲ. ಕನ್ನಡದ ಕಟ್ಟಾಳುಗಳು, ಕೆಲ ಸಾಹಿತಿಗಳೂ “ಕನ್ನಡ ಮಾತ್ರ” ದು ಕೂಗೋ ಮಂದಿಯ ಮಕ್ಕಳೂ ಚೆಂದ ಓದಿ ಇಲ್ಲೂ, ವಿದೇಶದಲ್ಲೂ ಒಳ್ಳೆಯ ಕೆಲಸದಲ್ಲಿದ್ದಾರೆ. “ಕನ್ನಡ ಮಾತ್ರ” ಬರುವಂತಿದ್ದರೆ ಅವರೂ ಈಗೇನಾಗಿದ್ದಾರೋ ಅದಾಗುತ್ತಿರಲಿಲ್ಲ.
ಬದುಕ ಬುಗುರಿ ತಿರುಗಲು ಇಂಗ್ಲೀಷು ಚಾಟಿಯೇ ಬೇಕೆಂದೇನಿಲ್ಲ. ಆದರೆ ರೈಲ್ವೆ ಹಳಿಯನ್ನಂತು ನಿರ್ಮಿಸಿಕೊಳ್ಳಬೇಕು. ಪಯಣಿಗನಿಗೆ ಬೇರೆ ದಾರಿ ಏನಿದೆ?
 

‍ಲೇಖಕರು G

3 February, 2015

ನಿಮಗೆ ಇವೂ ಇಷ್ಟವಾಗಬಹುದು…

16 Comments

  1. ಮಮತ

    Excellent..ಬೇರೆ ಕಮೆಂಟೇ ಬೇಕಿಲ್ಲ. ಖಂಡಿತಾ ಆಮ್ಲಜನಕ ಇರೋದು ಇಂಗ್ಲೀಷಲ್ಲೇ.. !!! ಈ ಲೇಖನಕ್ಕೋಸ್ಕರ ಲವ್ ಯು !!!

  2. Kiran Kumar

    ಪ್ರಸ್ತುತ ಸ0ಸಂದರ್ಭದಲ್ಲಿ ಅತ್ಯಗತ್ಯ ವಾಗಿ ಓದಲೇ ಬೇಕಾದ ಲೇಖನ..

  3. chethan

    thumbha chinthanegolapadisuva baraha…… naanu kuda puc science Togondu fail aadaaga…naanyak english kalililla antha tolakaadiddu idhe…

  4. ಅಮರದೀಪ್.ಪಿ.ಎಸ್.

    ಒಂದ್ ಕಡೆ ಓದಿದ್ದು ನೆನಪು. ಲಂಕೇಶ್ ಹೇಳ್ತಾ ಇದ್ದರಂತೆ… ಒಳ್ಳೆಯ ಕನ್ನಡ ಕಲಿಸುವ ಇಂಗ್ಲೀಷು ಮೀಡಿಯಮ್ ಶಾಲೆಗಳೂ ಒಳ್ಳೆಯ ಇಂಗ್ಲೀಷು ಕಲಿಸುವ ಕನ್ನಡ ಮಿಡಿಯಮ್ಮಿನ ಶಾಲೆಗಳ ಅಗತ್ಯ ನಮಗಿದೆ ಅಂತ…… ಇದನ್ನು ರವಿ ಬೆಳಗೆರೆ ತಮ್ಮ ಪ್ರಾರ್ಥನಾ ಶಾಲೆಯ ಆರಂಭಿಸುವ ಹಂತದಲ್ಲಿ ನೆನಪಿಸಿಕೊಂಡಿದ್ದರು…

  5. Anonymous

    nice n true kusuma…mahesh devashetty

  6. Anonymous

    madam baraha chennagide. adre madam kannnada madaymadlli odhi geddavru tumba janariddare. yako yeno avaru janra kannige sadakaragi kanalla. manushya pritiyannu nijakku aswdisuva jeevagalige inglishuuu ondu lekkane allla. adre adu jeevant manushyarige arta agta illa. matin madye nalku anglanudi udurisi impress madidakshan avrannu buddivantru andukollok agalla. paristi hegide nodi: master degree disintionalli pass madid nange, nim apyayaman barahakke anisike abipraya tilisodakke kannadalli type madi heloku barall.tantradynyanada avantara, viparyasa andre idena? madam ji.

  7. Uday Itagi

    ಕುಸುಮಬಾಲೆಯವರಿಗೆ ನಮಸ್ಕಾರ,
    ನಾನು ಮೊನ್ನೆ ತಾನೆ ಅವಧಿಯಲ್ಲಿ ಸಿದ್ಧಲಿಂಗಯ್ಯನವರ ಭಾಷಣಕ್ಕೆ ಹೀಗೆ ಪ್ರತಿಕ್ರಿಯಿಸಿದ್ದೆ. ಅದನ್ನೇ ಈಗ ಮತ್ತೊಮ್ಮೆ ಹಾಕುತ್ತಿದ್ದೇನೆ. ಇಂಗ್ಲೀಷ್ Vs ಕನ್ನಡ ಭಾಷೆ ಕುರಿತಂತೆ ನಿಮ್ಮ ವಿಶ್ಲೇಷಣೆ ತುಂಬಾ ಚನ್ನಾಗಿ ಮೂಡಿಬಂದಿದೆ. ಮತ್ತು ಈಗಲಾದರೂ ನಾವೆಲ್ಲರೂ ಇದರತ್ತ ಗಮನಹರಿಸಬೇಕಿದೆ.
    “ಕನ್ನಡ ಶಿಕ್ಷಣದ ಮಾಧ್ಯಮವಾಗಬೇಕು” ಇದು ನಾವು ಪ್ರತಿ ವರ್ಷ ಎಲ್ಲ ಅಧ್ಯಕ್ಷರಿಂದ ಕೇಳುವ ಮಾತು. ಈ ಸಾರಿಯೂ ಸಮ್ಮೇಳನದ ಅಧ್ಯಕ್ಷರಾದ ಸಿದ್ಧಲಿಂಗಯ್ಯನವರು ಹೀಗೆಂದು ಕರೆಕೊಟ್ತಿದ್ದಾರೆ. ನಾನು ಈ ಸಮ್ಮೇಳನಳದ ಅಧ್ಯಕ್ಷರು ಏನು ಹೇಳುಬಹುದು ಎಂದು ಮೊದಲೇ ಯೋಚಿಸಿರುತ್ತೇನೆ. ಅವರು ಹಾಗೇ ಹೇಳಿರುತ್ತಾರೆ. ಇದನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ಬಹುತೇಕ ಎಲ್ಲಾ ಸಾಹಿತಿಗಳು ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು ಎಂದು ಹೇಳುತ್ತಲೇ ಇರುತ್ತಾರೆ. ಅವರು ಭಾಷೆಯ ವಿಷಯ ಬಂದಾಗ ಭಾವುಕರಾಗಿ ಯೋಚಿಸುತ್ತಾರೆ ಹೊರತು ವಾಸ್ತವಿಕವಾಗಿ ಪ್ರತಿಕ್ರಿಯಿಸುವದಿಲ್ಲ. ಕನ್ನಡ ಎಲ್ಲಿಯವರೆಗೆ ಅನ್ನದ ಭಾಷೆಯಾಗುವದಿಲ್ಲವೋ ಅಲ್ಲಿಯವರೆಗೆ ಅದು ಮಾಧ್ಯಮವಾಗಲು ಸಾಧ್ಯವಾಗುವದಿಲ್ಲ. ಅಷ್ಟಕ್ಕೂ ಕನ್ನಡ ಕಲಿತವರೆಲ್ಲರಿಗೂ (ಕೇಂದ್ರ ಸರಕಾರದ ಕೆಲಸವನ್ನೂ ಸೇರಿಸಿ) ಸರಕಾರಿ ಕೆಲಸ ಸಿಗುತ್ತದೆಯೇ? ಸಿಗಲು ಸಾಧ್ಯವೇ? ಒಂದು ವೇಳೆ ಸಿಗದೆ ಹೋದರೆ? ಆತ ಏನು ಮಾಡಬೇಕು? ಈ ಪ್ರಶ್ನೆಗಳಿಗೆ ಸಾಹಿತಿಗಳು ಮೊದಲು ಉತ್ತರ ಕಂಡುಕೊಳ್ಳಬೇಕು.
    26 ದೇಶಗಳಲ್ಲಿ ಅರೇಬಿಕ್ ಮಾತನಾಡುವ ಈಗಿನ ತಲೆಮಾರಿನ ತಂದೆ-ತಾಯಿಂದರೇ ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗಳಲ್ಲಿ ಓದಿಸಲು ಉತ್ಸುಕರಾಗಿರುತ್ತಾರೆ. ಅದಕ್ಕೆಉದಾಹರಣೆ ನನ್ನ ಜೋರ್ಡಾನಿಯನ್, ಈಜಿಪ್ಸಿಯನ್, ಸುಡಾನಿ ಸಹೋದ್ಯೋಗಿಗಳು. ಅವರ ಪ್ರಕಾರ ಇಂಗ್ಲೀಷ್ ಕಲಿತರೆ ಒಳ್ಳೆಯ ಭವಿಷ್ಯವಿದೆ ಎನ್ನುವದು. ಇನ್ನು ಬಹುಭಾಷೆಗಳಿರುವ ಭಾರತದ ತಂದೆ-ತಾಯಿಂದರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗಳಲ್ಲಿ ಓದಿಸುವದು ತಪ್ಪಲ್ಲ ಬಿಡಿ. ಅಷ್ಟಕ್ಕೂ ಉದಾರಿಕರಣಗೊಂಡ ಭಾರತದಲ್ಲಿ ಕನ್ನಡ ಭಾಷೆಯೊಂದರಿಂದಲೇ ಹೊಟ್ಟೆ ಹೊರೆದುಕೊಳ್ಳಬಹುದೇ? ಅದು ಸಾಧ್ಯವೇ? ಸಾಹಿತಿಗಳೆಲ್ಲಾ ಮೊದಲು ಇದರ ಬಗ್ಗೆ ಯೋಚಿಸಲಿ. ನಂತರ ಕನ್ನಡ ಶಿಕ್ಷಣ ಮಾಧ್ಯಮವಾಗುವದರ ಬಗ್ಗೆ ಗಮನಕೊಡಲಿ.
    ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮ ಕೊಡಿಸಬೇಕೋ, ಕನ್ನಡ ಮಾಧ್ಯಮ ಕೊಡಿಸಬೇಕೋ ಎನ್ನುವದು ಪೋಷಕರಿಗೆ ಬಿಟ್ಟ ವಿಷಯ. ಹಾಗಂತಾ ಸುಪ್ರೀಂ ಕೋರ್ಟೇ ತೀರ್ಮಾನ ಕೊಟ್ಟ ಮೇಲೆ ಅದರ ಅನುಷ್ಟಾನಕ್ಕಾಗಿ ಇನ್ನೂ ಹೋರಾಡುವದೇಕೆ? ಅಷ್ಟಕ್ಕೂ ಬಹುತೇಕ ಸಾಹಿತಿಗಳು ಕನ್ನಡ ಕನ್ನಡ ಎಂದು ಹೇಳುತ್ತಲೇ ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗಳಿಗೆ ದಬ್ಬಿದ್ದುಂಟು. ಕನ್ನಡದ ಖ್ಯಾತ ಕವಿಯೊಬ್ಬರ ಮಗಳು ಬೆಂಗಳೂರಿನ ಕಾಲೇಜೊಂದರಲ್ಲಿ ನನ್ನ ವಿದ್ಯಾರ್ಥಿನಿಯಾಗಿದ್ದಳು. ಆಕೆ ನನ್ನ ಜೊತೆ ಹೋಗಲಿ ಕನ್ನಡ ಅಧ್ಯಾಪಕರ ಜೊತೆಯೂ ಬರೀ ಇಂಗ್ಲೀಷಿನಲ್ಲಿಯೇ ಮಾತನಾಡುತ್ತಿದ್ದಳು. ಆಕೆ ಕನ್ನಡದಲ್ಲಿ ಮಾತನಾಡುವದೇ ಅಸಹ್ಯಕರ ಎಂದು ಭಾವಿಸಿದ್ದಳು. ಜೊತೆಗೆ ಆಕೆ ಪದವಿಯಲ್ಲಿ ಕನ್ನಡದ ಬದಲಾಗಿ “Additional English” ತೆಗೆದುಕೊಂಡಿದ್ದಳು ಮತ್ತು ಆ ವಿಷಯವನ್ನು ನಾನವಳಿಗೆ ಬೋಧಿಸಿದ್ದೆ.
    ತಮಗೊಂದು ನ್ಯಾಯ ಬೇರೆಯವರಿಗೊಂದು ನ್ಯಾಯ ಎಂದು ಭಾವಿಸದೆ ಸಾಹಿತಿಗಳು ಭಾಷೆಯ ವಿಷಯದಲ್ಲಿ practical ಆಗಿ ಯೋಚಿಸಲಿ. ಈ ವಿಷಯದಲ್ಲಿ ನಾನು ಜೋಗಿಯವರನ್ನು ಮೆಚ್ಚುತ್ತೇನೆ. ಅವರು ಹಿಂದೊಮ್ಮೆ ಮೂಡಿಗೇರಿಯ ನುಡಿಸಿರಿ ಸಮ್ಮೇಳನದಲ್ಲಿ “ನಾನು ಕನ್ನಡದಲ್ಲಿ ಬರೆಯಬಹುದು. ಆದರೆ ನನ್ನ ಮಗಳನ್ನು ಅವಳ ಭವಿಷ್ಯದ ದೃಷ್ಟಿಯಿಂದ ಇಂಗ್ಲೀಷ್ ಮೀಡಿಯಂ ಶಾಲೆಗೆ ಹಾಕಿದ್ದೇನೆ.” ಎಂದು ಹೇಳಿದ್ದರು. ನಮ್ಮ ವಿಚಾರಗಳನ್ನು ನಮ್ಮ ಮಕ್ಕಳ ಮೇಲೆ ಹೇರಬಾರದಲ್ಲವೇ?
    ಇನ್ನಾದರು ಸಮ್ಮೇಳನದ ಅಧ್ಯಕ್ಷರು ವಾಸ್ತವಕ್ಕೆ ದೂರವಾದ ಇಂಥ ಹೇಳಿಕೆಗಳನ್ನು ಕೊಡುವದನ್ನು ನಿಲ್ಲಿಸಿ ಕನ್ನಡ ನಾಡನ್ನು ಉದಾರಿಕರಣದ ಉಪಕರಣಗಳನ್ನು ಉಪಯೋಗಿಸಿಕೊಂಡು ಹೇಗೆ ಮುಂದೆ ತರಬಹುದು ಎನ್ನುವದರತ್ತ ಗಮನ ಹರಿಸಲಿ.

  8. Anil Talikoti

    ಕನ್ನಡ ವೆಂಬುದು ಅನ್ನದ ಭಾಷೆಯಲ್ಲ ಅನ್ನುವ ಕಹಿ ಸತ್ಯ ಗೊತ್ತಾಗಿದೆ. ಹಸಿದವರಿಗೆ ಅಭಿಮಾನಕ್ಕಿಂತಲೂ ಅನ್ನವೇ ದೊಡ್ಡದು.! ಇದಕ್ಕಿಂತ ದೊಡ್ಡ ಸತ್ಯ ಬೇರೆ ಯಾವದು ಇಲ್ಲಾ .

  9. bharathi b v

    . ಹಸಿದವರಿಗೆ ಅಭಿಮಾನಕ್ಕಿಂತಲೂ ಅನ್ನವೇ ದೊಡ್ಡದು … Konegashte allva ellavoo?

  10. ಶೇಷಗಿರಿ ಜೋಡಿದಾರ್

    ಅಯ್ಯೋ ಸಿವನೆ, ಆಮ್ಲಜನಕ ಇರೊದು ಗಾಳೀಲೋ ಇಂಗ್ಲೀಷಲ್ಲೋ?
    ಹಸಿದವರಿಗೆ ಅಭಿಮಾನಕ್ಕಿಂತಲೂ ಅನ್ನವೇ ದೊಡ್ಡದು.!
    ಬದುಕ ಬುಗುರಿ ತಿರುಗಲು ಇಂಗ್ಲೀಷು ಚಾಟಿಯೇ ಬೇಕೆಂದೇನಿಲ್ಲ. kusuma….well balanced…impartial and unattached matured write up…reflects the reality of the kannada people dilemma……
    ಮನೆಯಲ್ಲಿ ಕನ್ನಡ ವಾತಾವರಣ ಎಲ್ಲರ ಮನೆಯಲ್ಲೂ ಸೃಷ್ಟಿಸಬೇಕು, ಕೇವಲ ವೇದಿಕೆಯ ಮೇಲಿಂದ, ಘೋಷಣೆಗಳಿಂದ, ಕನ್ನಡ ತನ್ನ ಗೌರವವನ್ನು ಕಳೆದುಕೊಳ್ಳುತ್ತೆ…..ಮತ್ತೆ… ನಮ್ಮ ಕನ್ನಡ ಅಭಿಮಾನ, ಬೇರೆ ಭಾಷೆಕಲಿಯಲು ಶಕ್ತರಲ್ಲ ಎಂಬಕಾರಣಕ್ಕಾಗಿ ಮಾತ್ರ ಆಗಿದ್ದರೆ ಒಳ್ಳೆಯದಲ್ಲ……. ಬದುಕಿಗೆ ವ್ಯವಹಾರಿಕ ಭಾಷೆ ಅತಿಅವಶ್ಯಕ…ಅದನ್ನು ಕಲಿತು ಕನ್ನಡ ಮರೆಯುವುದಾಗಲಿ, ಅಥವ ಆ ಭಾಷೇ ಬಾರದವರನ್ನು ಕೆಳದೃಷ್ಟಿಯಿಂದ ನೋಡುವುದಾಗಲಿ…..ಒಳ್ಳೆಯದಲ್ಲ… ನನ್ನ ಮಟ್ಟಿಗೆ ಹೇಳುವುದಾದರೆ…..ಕನ್ನಡ ತನ್ನ ಶ್ರೀಮಂತಿಕೆಯಿಂದಲೇ ಜೀವಂತವಾಗಿರುತ್ತದೆ… ಭಾಷೆ ಜ್ಞಾನಕ್ಕೆ ಮಾರ್ಗವಾದುದರಿಂದ ನಮ್ಮ ಭಾಷೆ ಹೆಚ್ಚು ವಿಕಾಸಹೊಂದುವ ಸಂಭಾವನೆ ಹೆಚ್ಚು ನಂಬಿರುವ ಆಶಾವಾದಿ ನಾನು…. ಕನ್ನಡ ಅಳಿಯುವುದಿಲ್ಲ…ಎಂದಿಗೂ….
    ಕುಸುಮ…ಚೆನ್ನಾಗಿದೆ ಲೇಖನ…

  11. vidyashankar

    ಅನ್ನತೋ ಪ್ರಾಣಂ ಪ್ರಾಣತೋ ಪರಾಕ್ರಮಂ!

  12. sindhu

    ಕುಸುಂ
    ಎಂಥ ಪ್ರಖರ ಆಲೋಚನಾ ಸರಣಿ!.
    ಇಡೀ ಲೇಖನ ಉಧ್ಧರಿಸಬಹುದಾದ ಸಾಲುಗಳಿಂದಲೇ ತುಂಬಿದೆ. ಎಲ್ಲ ಸಾಲುಗಳಲ್ಲೂ ಸತ್ಯವೇ ಅಚ್ಚೊತ್ತಿದೆ ಕೂಡ.
    “ಕನ್ನಡದಲ್ಲೇ ಓದಿಸೋ ಆಸೆಯಿದ್ದರೂ, ಎಷ್ಟೋ ಜನ ತಮ್ಮ ಮಕ್ಕಳನ್ನ ಇಂಗ್ಲೀಷ್ ಶಾಲೆಗೆ ಸೇರಿಸೋದು ಈ ಭಯದ ಕಾರಣದಿಂದಲೇ. ಎಲ್ಲ ತಂದೆತಾಯಿಗಳೂ ತಮ್ಮ ಮಕ್ಕಳ ವಿಚಾರದಲ್ಲಿ ಮಹತ್ವಾಕಾಂಕ್ಷಿಗಳೇ. ದೊಡ್ಡ ಅವಕಾಶ, ದೊಡ್ಡ ಹುದ್ದೆ. ದೊಡ್ಡ ಸ್ಥಾನ ತಮ್ಮ ಮಕ್ಕಳಿಗೆ ಸಿಗಬೇಕಾದರೆ “ದೊಡ್ಡಣ್ಣನ” ಭಾಷೆ ಬೇಕೇ ಬೇಕೆಂಬುದು ವ್ಯವಸ್ಥೆ ಅವರಿಗೆ ತಲುಪಿಸಿರುವ ಸಂದೇಶ.”
    ನೀವು ಬರೆದಿರುವ ಸಮಾನ ಶಿಕ್ಷಣ ಎಲ್ಲ ಶಾಲೆಗಳಲ್ಲೂ ಎಂಬುದು ಕನ್ನಡ ಮಾಧ್ಯಮದ ಶಿಕ್ಷಣಕ್ಕಿಂತ ಹೆಚ್ಚು ಪ್ರಾಯೋಗಿಕ ಮತ್ತು ಪ್ರಯೋಜನಶಾಲಿ ಅನ್ಸುತ್ತೆ. ಮತ್ತು ಸ್ಥಳೀಯ ಭಾಷೆಯ ಕಲಿಕೆ (ಒಂದು ಭಾಷೆಯಾಗಿ) ಕಡ್ಡಾಯ ಮಾಡಬೇಕು ಅಂತಲೂ ಅನ್ಸುತ್ತೆ.
    ಇದೆಲ್ಲ ಅನ್ನಿಸುವ ನಾವು ಎಷ್ಟೊಂದು ಜನರಿದ್ದೀವಿ ಆದರೆ ಯಾರೂ ಯಾವ ಬದಲಾವಣೆಗೂ ಕೈಜೋಡಿಸದವರು.. 🙁 ಬರಿಯ ಯೋಚಿಸುವವರು.

  13. ಕುಸುಮಬಾಲೆ

    ಓದಿದ, ಪ್ರತಿಕ್ರಿಯಿಸಿದ, ಎಲ್ಲರಿಗೂ ಧನ್ಯವಾದಗಳು.

  14. anonymous

    Hundred percent true. After coming to US I faced few problems because of English.

  15. Ravi Kulkarni

    *ಅಯ್ಯೋ ಸಿವನೆ, ಆಮ್ಲಜನಕ ಇರೊದು ಗಾಳೀಲೋ ಇಂಗ್ಲೀಷಲ್ಲೋ?
    *ಹಸಿದವರಿಗೆ ಅಭಿಮಾನಕ್ಕಿಂತಲೂ ಅನ್ನವೇ ದೊಡ್ಡದು.!
    *ಬದುಕ ಬುಗುರಿ ತಿರುಗಲು ಇಂಗ್ಲೀಷು ಚಾಟಿಯೇ ಬೇಕೆಂದೇನಿಲ್ಲ. ಆದರೆ ರೈಲ್ವೆ ಹಳಿಯನ್ನಂತು ನಿರ್ಮಿಸಿಕೊಳ್ಳಬೇಕು. ಪಯಣಿಗನಿಗೆ ಬೇರೆ ದಾರಿ ಏನಿದೆ?
    ನಿಮ್ಮ ಈ ಮಾತುಗಳು ಅಕ್ಷರಶಃ ನಿಜ…!!

  16. Anonymous

    badukige english beke beku, bhaavakke kannada irale beku
    Very good article Kusuma

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading