ಬಿರು ಬಿಸಿಲು. ಮಳೆಹನಿ ಸೋಕಿಯೇ ನೂರಾರು ವರ್ಷವಾಯ್ತೇನೋ ಅನಿಸುವಷ್ಟು ಬರಡಾದ ಭೂಮಿ. ಅದರ ತುಂಬಾ ದೊಡ್ಡ ದೊಡ್ಡ ಬಿರುಕುಗಳು ಹಾಗೇ ನೋಡುತ್ತಾ ಬಂದರೆ ಅಲ್ಲಿ 60 ರ ಆಸುಪಾಸಿನ ಮನುಷ್ಯನಿಂತಿದ್ದಾನೆ. ಕಪ್ಪು ಬಣ್ಣ, ಮುಖದಲಿ ಸಾವಿರ ಸುಕ್ಕುಗಳು , ಬಟ್ಟೆಯದು ಮಣ್ಣಿನ ಬಣ್ಣ. ಆ ತಡಿಕೆಯಂತ ದೇಹ ಸ್ನಾನ ಕಂಡು ಕನಿಷ್ಟ ತಿಂಗಳಾಗಿರಬೇಕು…ತಲೆಎತ್ತಿ ನೋಡುತ್ತಿದ್ದಾನೆ. ಬಿಸಿಲಿನ ಝಳಕ್ಕೆ ಕೈಯನ್ನು ಹಣೆ ಮೇಲೆ ಅಡ್ಡಲಾಗಿ ಇಟ್ಟುಕೊಂಡಿದ್ದಾನೆ..ಒಣಗಿದ ತುಟಿಯಲಿ ಹಿಂದೆ ಎಂದಾದರೂ ನಕ್ಕಿರಬಹುದಾದ ಗುರುತು ಸಹ ಇಲ್ಲ. ರೈತ ಅವನು. ಹಾಗೆಂದು ಪೇಪರು ಮತ್ತು ಟಿವಿಯಲಿ ತೋರಿಸಿ ತೋರಿಸಿ ತೋರಿಸಿ ನಂಬಿಸಲಾಗಿದೆ.
ಮೈಸೂರು ಆಕಾಶವಾಣಿಯವರು ಸಂಘಟಿಸಿದ್ದ ಕಾರ್ಯಕ್ರಮ ಅದು. “ಮುಂದಿನ ಜನರೇಷನ್‍ಗೆ ಕೃಷಿ ಬಗ್ಗೆ ಆಸಕ್ತಿ ಬರುವಂತೆ ಮಾಡಬೇಕು. ಅದಕ್ಕಾಗಿ ಶಿಕ್ಷಣದಲ್ಲಿ ಕೃಷಿ ವಿಷಯ ಅಳವಡಿಸಬೇಕು”. ಇದು ಡಿಸ್ಕಷನ್ನು. ವೇದಿಕೆಯಲ್ಲಿ ಮಾತಾಡುತ್ತಿದ್ದ ಒಬ್ಬರಂದರು “ಇಂತಾ ಕಾರ್ಯಕ್ರಮಕ್ಕೆ ರೈತರನ್ನೂ ಆಹ್ವಾನಿಸಬೇಕಿತ್ತು. ಅವರೂ ಬಂದಿದ್ದರೆ ಚೆನ್ನಾಗಿರ್ತಿತ್ತು” ಆಕಾಶವಾಣಿಯ ಕೇಶವಮೂರ್ತಿಗಳು ತಕ್ಷಣ ಮೈಕು ತಗೊಂಡು “ಇಲ್ಲಿ ಎಷ್ಟ್ ಜನ ರೈತರಿದೀರಿ ಸ್ವಲ್ಪ ಕೈ ಎತ್ರಪ್ಪ” ಅಂದ್ರು…. ಎಷ್ಟೊಂದು ಕೈಗಳೆದ್ದವು. ಆದರೆ ವೇದಿಕೆ ಮೇಲಿದ್ದವರಿಗೆ ಇಲ್ಲಿ ರೈತರಿಲ್ಲ ಅನ್ನೋ ಅನುಮಾನ ಯಾಕೆ ಹುಟ್ಟಿತ್ತೆಂದರೆ, ಅವರ್ಯಾರೂ ಪಂಜೆ ಉಟ್ಟಿರಲಿಲ್ಲ. ಹಾಕಿದ್ದ ಬಟ್ಟೆ ಕೊಳಕಾಗಿರಲಿಲ್ಲ. ಮುಖ ಒರಟು ಒರಟಾಗಿ, ಉರುಟು ಉರುಟಾಗಿ ಇರಲಿಲ್ಲ. ಜೀನ್ಸು ಗೀನ್ಸು ಹಾಕೊಂಡು, ಸೆಂಟು ಗಿಂಟು ಹೊಡ್ಕೊಂಡು, ಬೈಕು ಕಾರುಗಳಲಿ ಬಂದಿದ್ರು ಹಾಗಾಗಿ ವೇದಿಕೇಲಿದ್ದೋರಿಗೆ ರೈತರ ಗುರುತು ಸಿಗೋದೇ ಕಷ್ಟವಾಯ್ತು ಪಾಪ!!
ನ್ಯೂ ಜನರೇಷನ್ನೋರು ನೀವು ಹೀಗೆ ಲುಕ್ಕು ಬದಲಿಸಿಕೊಂಡುಬಿಟ್ರೆ, ಅವರ ಬದುಕಿನ ದಿಕ್ಕು ಬದಲಾಗ್ತದೆ ಅಂದ್ಕೊಂಡ್ರಾ? ಇಲ್ಲ ಕೂಡಲಸಂಗಮದೇವಾ..ಬೇರೇದ್ ಬಿಡಿ, ಅರಿಷಡ್ವರ್ಗಗಳನೂ ಹತ್ತಿಕ್ಕಿಕೊಳ್ಳಬೇಕೆಂದರೆ ಹೇಗೆ ಒಡೆಯಾ? ಅಯ್ಯೋ.. ಅವರ ಪಾಡುಗಳನಿಲ್ಲಿ ಒಸಿ ಯೋಳ್ತೀನ್ ಕೇಳಿ.
“ಯಾವ್ ಗಂಡು ಬಂದ್ ನೋಡ್ಕಂಡ್ ಹೋದ್ರೂ ಒಪ್ಪಲ್ಲ.ಅಂತಾ ದೊಡ್ ಮನೆಗ್ ಎಣ್ ಕೊಡಕ್ ಪುಣ್ಯ ಮಾಡಿರ್ಬೇಕು. ಬ್ಯಾಡ ಅಂತರಲ್ಲ ನೋಡಿ ಮತ್ತೆ?” ನಾಗರಾಜ ಒಪ್ಪಿಸುತ್ತಿದ್ದ. “ಐ ಅವರಪ್ಪ ಅವ್ವ ಒಂದ್ ಪಕ್ಷ ಒಪ್ಕಂಡ್ರೂ ಆ ಹೆಣ್ಣೇ ಒಪ್ಪಲ್ವಂತ. ಅದೇನೋ ಕೆಲ್ಸದ ಮೇಲಿರವನೇ ಆಗಬೇಕಂತ” ಅಂತ ರೇಣುಕ ಪರಿಸ್ಥಿತಿ ವಿವರಿಸದಳು. “ ಏನೇನೂ ಇಲ್ದೆ ಇದ್ದೋರೇ ಕೆಲಸದಲ್ಲಿರವನ್ನೇ ಕರ್ಕಂಡ್ ಬನ್ನಿ, ಎಂಗ್ ಕ್ಯೋಳ್ತರ ಅಂಗ್ ಮದ್ವ ಮಾಡ್ಕೊಡ್ತೀವಿ ಅಂತರ, ಇನ್ನು ಅವರ್ ಕ್ಯೋಳದ್ರಲ್ಲಿ ತಪ್ಪೇನಿದ್ದದ್ದು? ಆವೆಣ್ಣು ಪಿಯುಸಿ ಓದದ , ಅಪ್ಪನಗ್ ಬೇಕಾದಂಗ್ ಆಸ್ತಿ ಅದ. ಕೆಲ್ಸದವ್ನನೇ ಕ್ಯೋಳ್ತಳ ಕಣಪ್ಪ. ನೀನು ಗಂಡ್ ಕರ್ಕಂಡ್ ಬರಕ್ ಮುಂಚೆ ಯೋಚ್ನ ಮಾಡ್ಬೇಕು.” ಅಂತ ಎಲ್ರೂ ಸೇರಿ ಗಂಡು ಕರ್ಕೊಂಡ್ ಬಂದ ನಾಗರಾಜನನ್ನೇ ಪೇಜಿಗೆ ಸಿಲುಕಿಸಿದರು. “ಸಿಟಿಲ್ ಏನೇನಿದ್ದು ಅದೆಲ್ಲ ಸೌಲಭ್ಯ ಉಂಟು ಅವರ್ ಮನೆಲಿ. ಮೂವತ್ತೆಕರ ತೆಂಗಿನ್ ತ್ವಾಟ. ವರ್ಷಕ್ಕ ಕಾಯಿ ಎಷ್ಟ್ ಬೀಳ್ತವ ಗೊತ್ತಾ?” ಅಂದ ನಾಗರಾಜ. “ಮೂವತ್ ಎಕರ ಇರೋನ್ನೂ ರೈತ ಅಂತ್ಲೇ ಅ್ನನದು. ಮೂರೆಕರೆ ಇರೋನ್ನೂ ರೈತ ಅಂತ್ಲೇ ಅನ್ನದು. ಎದ್ದೋಗು , ಯಾವನಾರೂ ಕೆಲ್ಸದ್ ಮೇಲಿರಾ ಗಂಡಿದ್ರ ಕರ್ಕಂಡ್ ಬಾ ಇಲ್ದೆ ಇದ್ರ ಸುಮ್ನಿರು” ಅಂದು ನಾಗರಾಜನ ಬಾಯಿಬಂದ್ ಮಾಡಿದರು. “ಹಿಂದಕ್ಕ, ಕೊಟ್ಟಿಗಲಿರಾ ದನಗಳ್ ನೋಡಿ, ತಿಪ್ಪೆಲಿರಾ ಸಗಣಿ ನೋಡಿ ಹೆಣ್ ಕೊಡ್ತಿದ್ರಂತ. ಈಗ ಅದಲು ಬದಲು. ನಾಕ್ ಮನೆ ಹಳ್ಳೀ ಮೂಲೆಗೋದ್ರೂ ನಮಗ್ ಕೆಲಸದ್ ಮೆಲಿರವ್ನೇ ಬೇಕು ಅಂತಾರ. ಏನ್ ತಾನೇ ಮಾಡಕಾದ್ದು?” ನಾಗರಾಜ ಪ್ರಶ್ನಾರ್ಥಕ ಚಿಹ್ನೆ ಹಾಕಿದ. ಒಟ್ಟಿನಲಿ ,ಅವರು ಕೊಟ್ರು ಅಂತ ಇವರು, ಇವರು ಕೊಟ್ರು ಅಂತ ಅವರು. ಎಲ್ಲರೂ ಸಂಬಳದವನಿಗೇ ಹೆಣ್ಣು ಕೊಡಬೇಕು. ಗೊಣಗುತ್ತಾ ಎದ್ದು ಹೋದ.
ಬೆಳಗ್ಗೆ ರತ್ನಿ ಸಿಕ್ಕಿ, ಸಂಘದಲಿ ಈ ಸತಿ ಭಾಗ್ಯ ಸಾಲ ತಕ್ಕಂಡಳಂತ. ಮದ್ವ ಗೊತ್ತಾಯ್ತು ಅವಳಿಗೆ” ಅಂದಿದ್ದಳು “ಕೆಲಸದ ಮೇಲಿದ್ದನಂತ ಅಳಿ ಗಂಡು” ಅಂತಲೂ ಅಂದಿದ್ದಳು. ಯಾವ ಕೆಲಸ? ಅಂತ ಕೇಳಿದರೆ ಗೊತ್ತಿಲ್ಲ ಅವಳ್ನೇ ಕ್ಯೋಳ್ಕಳಿ ಅಂದು ಹೋಗಿಬಿಟ್ಟಿದ್ದಳು. ಸಂಜೆ ಜಗಲೀಲಿ ಕೂತಿದ್ದಾಗ ಗಂಧದ ಕಡ್ಡಿ ಉಜ್ಜುವ ಕೆಲಸ ಮುಗಿಸಿದ ಭಾಗ್ಯ ಹೆಂಗಸರ ಗುಂಪಿನ ಜೊತೆ ಹೋಗ್ತಿದ್ದಳು. ಅವರ ಮೈಗಳಿಂದಲೂ ಘಂ ಅಂತ ಗಂಧದಕಡ್ಡಿ ಪರಿಮಳ. “ಏನೇ ಭಾಗ್ಯ ಮದ್ವೆ ಅಂತೆ ನಿನಗೆ?” ಕೇಳಿದೆ . “ಹ್ಞೂ ಅಳಿ, ನಮ್ಮಣ್ಣ ಕೆಲಸದವನಿಗೇ ಕೊಡಬೇಕು ಅನ್ಕಂಡು ಯಾರ್ ಬಂದ್ರೂ ಒಪ್ತಿರ್ನಿಲ್ಲ ಅಳಿ, ಈಗ ಒಪ್ಕಂಡ” ಅಂದ್ಲು “ಏನ್ ಕೆಲಸವೇ ಹುಡುಗನಿಗೆ?” ಕೇಳಿದೆ. “ಐ ಟೈಲರ್ ಕೆಲ್ಸ ಅಳಿ. ಪ್ಯಾಗಟ್ರೀಲಿ. ಬೆಂಗಳೂರ್ ದಂಡ್ ದಂಡೇಲೇ ಇದ್ದುದಂತ” ಅಂತ ನಾಚಿದಳು. “ಇನ್ನೇನಮ್ಮೀ, ಬೆಂಗಳೂರ್ ಸೇರ್ಕತ್ತಿದ್ದೈ ಕಣ್ ಬುಡು.ಸಂಬಳದ್ ಗಂಡ್ ಇನ್ನೇನವ್ವ ನಿನಗ? ನಮ್ಮನೂ ಕರ್ಕಂಡೋಗವ್ವ ಒಂಜಿನ” ಅಂತ ಉಳಿದವರು ರೇಗಿಸಿದರು. ಅವಳು ತನ್ನ ಟೈಲರ್ ಕೆಲಸದಲ್ಲಿರೋ ಭಾವೀ ಗಂಡನನೂ ತನ್ನ ಪೇಟೆ ಬದುಕನೂ ನೆನೆನೆನೆದು ನಾಚಿದಳು.
ಊರಲ್ಲಿ ಅಪ್ಪ ಹಾಕಿದ ಹುಣಿಸೇಮರಕ್ಕೆ ಗೊಬ್ಬರ ಹಾಕೋನಿಗೆ ಯಾರು ಬೆಲೆ ಕೊಡ್ತಾರೆ? ದಿನಾ ಒಂದು ನಿರ್ಧಿಷ್ಟ ಟೈಮಿಗೆ ರೆಡಿಯಾಗಿ, ಇನ್‍ಶರ್ಟು ಮಾಡಿ, ಬೈಕು ಹತ್ತಿಕೊಂಡು ಹೋಗುತ್ತಾನಲ್ಲ ಅವನು ಊರವರ ಕಣ್ಣಲ್ಲಿ ತುಸು ಗೌರವಾನ್ವಿತ. ಬೇರೆ ಊರಿಗೆ ಹೋಗಿ ಕೆಲಸ ಮಾಡ್ತಾ , ಆಗೀಗ ಊರಿಗೆ ಬರೋನಾದರಂತು ಗೌರವ ಒಂದು ತೂಕ ಹೆಚ್ಚೇ. ಕೃಷಿ ಮಾಡೋನ ಆದಾಯ ತಿಂಗಳಿಗೆ ನಲವತ್ತು ಸಾವಿರವಿರಲಿ, ಆ ಇನ್‍ಶರ್ಟಿನವನದು ನಾಕು ಸಾವಿರವಿರಲಿ, ಅದನ್ನು ಯಾರೂ ಕೇಳಲ್ಲ. ಒಟ್ನಲ್ಲಿ ತಿಂಗಳ ಸಂಬಳದ ಕೆಲಸಕ್ಕೆ ಹೋಗಬೇಕು ಅಷ್ಟೆ. ಊರಲ್ಲಿ ಹುಟ್ಟಿದವರೂ ತಿಂಗಳ ಸಂಬಳದವರಾಬೇಕು. ಊರಿಗೆ ಬರೋ ಅಳಿಯಂದಿರೂ ತಿಂಗಳ ಸಂಬಳದವರಾಗಬೇಕು. ರೈತನಿಗೆ ರೈತರೇ ಹೆಣ್ಣು ಕೊಡುತ್ತಿಲ್ಲ. ರೈತನ ಮಗಳೇ ರೈತನನ್ನು ಮದುವೆಯಾಗಲು ಬಯಸುತ್ತಿಲ್ಲ. ಹೀಗಿರುವಾಗ , ರೈತನಿಗೆ ಹೆಣ್ಯಾರು ಕೊಡುತ್ತಾರೆ ಮತ್ತೆ?
ಶಿವಮೊಗ್ಗ, ಉತ್ತರಕನ್ನಡ ಮುಂತಾದ ಭಾಗಗಳಲ್ಲಿ ರೈತರು ಜಾತಿಯಾವುದಾದ್ರೂ ಪರವಾಗಿಲ್ಲ ಹೆಣ್ಣು ಸಿಕ್ರೆ ಸಾಕು ಅನ್ನೋ ಸ್ಥಿತಿಗೆ ಬಂದಿ ನಿಂತಿದ್ದಾರೆ. ವಿಜಯವಾಣಿ ಅಂಕಣಕಾರ ರಮಾನಂದ ಐನಕೈ ಹೇಳುತ್ತಾರೆ , ಅವರ ಕಡೆ ಕೃಷಿಕರಾದ ತಪ್ಪಿಗೆ ಹೆಣ್ಣು ಸಿಗದ ಹುಡುಗರು ಪ್ರತಿ ಹಳ್ಳಿಯಲ್ಲೂ ಗುಂಪುಗಟ್ಟಲೆ ಇದ್ದಾರಂತೆ.ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಟ್ಟದ್ದೇ ತಪ್ಪಾಗೋಯ್ತಾ? ಓದಿದ ಹೆಣ್ಣುಮಕ್ಕಳು ಹಳ್ಳಿಲಿರೋಕೆ ಇಷ್ಟಪಡ್ತಿಲ್ಲ. ಅವರಿಗೆ ನಗರದ ಕನಸು. ಸಂಬಳದವನ ಕನಸು. ಇಲ್ಲಿದೆಯಾ ಸಮಸ್ಯೆಯ ಮೂಲ?
ಸಮಸ್ಯೆಯ ಇನ್ನೊಂದು ಮಗ್ಗುಲು ಹೀಗಿದೆ:
ಯಾಕ್ರೀ ಮದುವೆಯಾಗಬೇಕು ರೈತನನ್ನ? ನಮ್ಮ ಭಾಗ್ಯ ಮದುವೆಯಾಗೋ ಟೈಲರ್ ಕೆಲಸದ ಹುಡಗನಿಗಾದ್ರೂ ತಿಂಗಳಿಗಿಷ್ಟು ಅಂತ ಫಿಕ್ಸ್ ಆದಾಯವಿದೆ. ರೈತನಿಗೇನಿದೆ? “ಒಂದು ಟನ್ ಕಬ್ಬಿಗೆ ಎರಡೂವರೆಸಾವಿರ.. ಅಬ್ಬಾ, ಎರಕರೆಗೆ ಕನಿಷ್ಟ 60 ಟನ್ ಬಿದ್ರೂ ಒಂದೈದೆಕರೆ ಕಬ್ಬುಹಾಕಿದ್ರೆ ಎಷ್ಟಾಯ್ತು ದುಡ್ಡೂ? ಮತ್ತಿನ್ನೇನ್ರೀ ಧಾಡೀ ನಮ್ಮ ರೈತರಿಗೆ? ಅಂತ ಕೇಳುತ್ತಿದ್ದ ಒಬ್ಬ ದಡ್ಡ ಎಂ, ಎಲ್ ಎ. ಒಂದು ಟನ್ ಕಬ್ಬು ಕತ್ತರಿಸೋಕೆ 800 ರೂಪಾಯಿ. ಗೊಬ್ಬರ ಎಲ್ಲ ಸಾವಿರ ದಾಟಾಯ್ತು. ಬಾರಪ್ಪ ಕೂತ್ಕೋ ಒಸಿ ಲೆಕ್ಕ ಹೇಳ್ತೀನಿ ಬರ್ಕೋ. ಅನ್ನೋಷ್ಟು ಕೋಪ ಬಂದಿತ್ತು. ಇಂತಾ ಆರ್ಥಿಕ ಅಭದ್ರತೆಯ ಬದುಕಿಕೆ ಯಾವ ತಂದೆ ತಾಯಿ ಮಕ್ಕಳನ್ನ ದೂಡೋಕೆ ಇಷ್ಟಪಡ್ತಾರೆ? ಯಾವ ಹೆಣ್ಣುಮಗಳು ಮದುವೆಯಾಗೋಕೆ ಇಷ್ಟಪಡ್ತಾಳೆ?

ದುಡ್ಡಿನ ಸಮಾಚಾರ ಬಿಡಿ, ಆಯ್ತಪ್ಪ ನೀವು ಸಂಬಳದವರ ಹತ್ತು ಪಟ್ಟು ಹೆಚ್ಚೇ ಸಂಪಾದಿಸುತ್ತೀರಿ ಅಂತಲೇ ಇಟ್ಟುಕೊಳ್ಳೋಣ. ಗೌರವ? ಕಷ್ಟವೋ , ಸುಖವೋ, ಮಳೆಯೋ ಬಿಸಲೋ, ಈ ವರ್ಷ ಹೆಚ್ಚೋ, ಮುಂದಿನ ವರ್ಷ ಕಮ್ಮಿಯೋ, ಹೇಗೋ ಅತಂತ್ರದ ಬದುಕು ಬದುಕುತ್ತಾ ಮೂರೊತ್ತೂ ನಿಮ್ಮ ಹೊಟ್ಟೆಗಳು ಚಂಡೆಮದ್ದಳೆ ಆಡದಂತೆ ನೋಡಿಕೊಳ್ತಿರೋ ನಮಗೆ, ಹುಟ್ಟಿದ ಹಳ್ಳಿಯಿಂದ ದೂರದ ಡೆಲ್ಲಿವರೆಗೆ ಎಲ್ಲಿ ಹೋದರೂ ಗೌರವವವಿಲ್ಲ. ಬಹುತೇಕ ಜನರ ಕಣ್ಣುಗಳಲ್ಲಿ ರೈತ ಎಂದರೆ ಎಂತಾ ಕಲ್ಪನೆ ಇದೆ ಎಂಬುದಕ್ಕೇ ಮೊದಲೊಂದು ಉದಾಹರಣೆ ಕೊಟ್ಟದ್ದು ನಾನು. ಡಾಕ್ಟರ್, ಎಂಜಿನಿಯರ್, ಸಾಹಿತಿ, ಬ್ಯುಸಿನೆಸ್ಮನ್, ಪತ್ರಕರ್ತ, ಮ್ಯಾನೇಜರ್..ನಟ.. ಹ್ಞಾ.. ನೋಡಿ, ನೋಡಿ, ಆ ಹೆಸರು ಹೇಳುತ್ತಿದ್ದಂತೆ ನಿಮ್ಮ ಮನಸಿನೊಳಗೆ ಮೂಡುವ ಭಾವನೆ ಗಮನಿಸಿ, ನಾನು ಇಂತದಾಗಿದ್ದೇನೆ ಅಂದಾಗ ಸಮಾಜದ ರಿಯಾಕ್ಷನ್ ಗಮನಿಸಿ. ಎಷ್ಟೊಂದು ಗೌರವ. ಅದೇ ರೈತ ಅಂದುನೋಡಿ, ಅದರಲ್ಲೂ ಸಣ್ಣರೈತ ಅಂದುನೋಡಿ, ಒಂದೋ ನಿರ್ಲಕ್ಷ್ಯ, ಇಲ್ಲವೇ ಕರುಣಾರಸ. ರೈತನನ್ನ “ಸಾರ್” ಅಂತ ಮಾತಾಡಿಸೋರು ಎಷ್ಟ್ ಜನ ಇದಾರೆ? ರೈತರೆಂದರೆ ಸಮಾಜದ ಇತರ ವರ್ಗದವರ ಕೂಲಿ ಆಳುಗಳಲ್ಲ.
ಕೂಲಿಗಾರ ಮಕ್ಕಳನ್ನು ಯಾಕೆ ಕಷ್ಟಪಟ್ಟು ಓದಿಸುತ್ತಾನೆ ಹೇಳಿ? ನಾನು ಪಟ್ಟ ಕಷ್ಟ ನನ್ನ ಮಕ್ಕಳು ಪಡಬಾರದು ಅಂತ. ಹೌದು ತಾನೇ? ಹಾಗೇ ಪ್ರತಿ ರೈತನೂ ನಾವು ಅನುಭವಿಸಿದ ಈ ಅತಂತ್ರವೂ, ಅಗೌರವವೂ ನಮ್ಮ ಮಕ್ಕಳ ಪಾಲಿಗಿರದಿರಲಿ ಅಂತ ಬಯಸಿದರೆ ತಪ್ಪೇನು?
ಟಿವಿ, ಜಾಗತೀಕರಣ. ಇನ್ನೊಂದು ಮತ್ತೊಂದು ಎಷ್ಟೊಂದು ಸಂಗತಿಗಳು ಈಗಾಗಲೇ ಹಳ್ಳಿಗಳ ದಾರಿತಪ್ಪಿಸುತ್ತಿವೆ. ಉಳುವವನನ್ನು ಊರುಬಿಡಿಸಲು ಕಾದುನಿಂತಿವೆ. ಸಂಚುರೂಪಿಸಿವೆ. ಈ ಷಡ್ಯಂತ್ರದ ಮಧ್ಯೆಯೂ, ಅದುಹೇಗೋ ದೇಶದ ಜನರ ಹೊಟ್ಟೆಗಿಷ್ಟು ಅನ್ನ ಬೀಳುತ್ತಿದೆ. ಒಬ್ಬ ರೈತ ನೇಣುಹಾಕಿಕೊಂಡರೂ ಉಳಿದವನು ಬೆಳೆದುಕೊಡುತ್ತಿದ್ದಾನೆ. ಸೆಲ್ಯೂಟ್ ಹೊಡೆಯಬೇಕು ರೈತನಿಗೆ. ಅವನು ಬಂದ ದಾರಿಗೆ ರೆಡ್ ಕಾರ್ಪೆಟ್ಟು ಹಾಸಬೇಕು. ಅಂತದರಲ್ಲಿ ಕಡೇಪಕ್ಷ ಗೌರವವನ್ನೂ ಕೊಡದೇ ನಿಕೃಷ್ಟವಾಗಿ, ಕೀಳಾಗಿ ನೋಡಿದರೆ ಯಾವ ನವಯುವಕ ರೈತನಾಗಲು ಬಯಸುತ್ತಾನೆ? ಯಾವ ಹಳ್ಳಿ ಹೆಣ್ಣುಮಗಳು ತಾನೆ “ಮಗನೇ ದೊಡ್ಡವನಾಧ ಮೇಲೆ ರೈತನಾಗಪ್ಪಾ” ಅನ್ನುತ್ತಾಳೆ?
“ನಾನು ಸಮಾಜ ಗೌರವ ನೀಡದ ರೈತನನ್ನು ಮದುವೆಯಾಗಲ್ಲ. ಅಪ್ಪಿತಪ್ಪಿ ಆಗಿಹೋದೆನಾ? ನ್ನನ ಮಗುವನ್ನಂತೂ ರೈತನಾಗಿಸೊಲ್ಲ” ಇದೀಗ ಹಳ್ಳಿ ಹುಡುಗೀರ ಕಟ್ಟ ಕಡೇ ತೀರ್ಮಾನ. ಎಷ್ಟೆಲ್ಲ ತಾಪತ್ರಯ ರೈತನಾಗ ಹೊರಟ ಹುಡುಗನಿಗೆ, ನೀರು, ಕರೆಂಟು, ಸಮಾಜದ ಗೌರವ, ಸರಕಾರದ ಸೌಲಭ್ಯ, ಆರ್ಥಿಕ ಭದ್ರತೆ ಯಾವುದೂ ಸಿಗುತ್ತಿಲ್ಲ ಹೇಗೋ ನಿಭಾಯಿಸ್ತಾನೆ. ಕಡೇ ಪಕ್ಷ ಸಂಸಾರ ಮಾಡೋಕೊಬ್ಬಳು ಹೆಂಡತಿಯೂ ಸಿಗದಿದ್ರೆ ಹೇಗೆ? ರೈತ ಆಗಬೆಕಾದ್ರೆ ಸಂನ್ಯಾಸ ಸ್ವೀಕರಿಸಬೇಕಾ? ಸಂನ್ಯಾಸಿಗಳೆಂದವರೂ ಸುಮ್ಮನಿರದ ಕಾಲದಲ್ಲಿ?
ಇಷ್ಟಕ್ಕೂ ರೈತನ ಮಕ್ಕಳೇ ರೈತನಾಗಬೇಕು ಅಂತ ಯಾವ ರೂಲ್ಸೂ ಇಲ್ಲ. ಸಿಟಿ ಹುಡುಗೀರು ರೈತನ್ನ ಮದುವೆಯಾಗಬಾರದು ಅಂತಲೂ ಯಾರೂ ಶಾಸನ ಕೆತ್ತಿಸಿಟ್ಟಿಲ್ಲ. .ಗೊತ್ತು, ನಾಗರಿಕ ಬಂಧುಗಳು ಯಾವತ್ತೂ ಮನಸು ಮಾಡಲ್ಲ. ರೈತನಿಗೆ ಹೆಣ್ಣು ಕೊಡೋದು ಅಂದ್ರೆ ಭಾಷಣ ಮಾಡಿದಷ್ಟು ಸುಲಭ ಅಲ್ಲವಲ್ಲ.!!
ಕಾಲ ಚಕ್ರ ಉರುಳುತ್ತಂತೆ. ಇತಿಹಾಸ ಮರುಕಳಿಸುತ್ತಂತೆ. ಪ್ರಕೃತಿ ಎಲ್ಲವನೂ ಬ್ಯಾಲೆನ್ಸ್ ಮಾಡತ್ತಂತೆ. ಹುಡುಕಿಕೊಂಡು ಹೋಗಿ ರೈತನಿಗೆ ಹೆಣ್ಣುಕೊಡುತ್ತಾರಂತೆ. “ನಮ್ಮ ಮಗಳನ್ನ ನಾಕೆಕರೆ ಜಮೀನಿರೋ ಒಬ್ಬ ಸಣ್ಣ ರೈತನಿಗೆ ಕೊಟ್ಟಿದೇವೆ” ಅಂತ ಹೆಮ್ಮೆಯಿಂದ ಹೇಳೋ ದಿನವೂ ಬರ್ತದಂತೆ. ಮುಂದೊಂದು ದಿನ, ಮದುವೆ ಫಿಕ್ಸಾದ ಹುಡುಗಿ ಗೆಳತಿ ಫೋನು ಮಾಡುತ್ತಾಳೆ. “ಏನ್ ಮಾಡ್ತಾನೆ ನಿನ್ hubby? ಅಂದರೆ, “he is an agriculturist you know. ನಾಲಕ್ ಜೊತೆ ಹಸುಗಳಿವೆ.ಕಣೇ” ಅಂದಾಗ, ಆ ಕಡೆ ಹುಡುಗಿ, “ಓಹ್..great, how lucky you are, congratulations” ಅನ್ನುವ ಕಾಲವೂ ಬರುತ್ತಂತೆ. ಬರಬಹುದಾ?????


Are we trying escape from the state we are in or are we attempting to improve it. I have never seen a teacher trying to groom his son to become a better teacher. Normally he tries to evade his son from the very path. Only mearchants and businessmen wanted their successors to hold on to their profession. Very nice expression of todays trans-society scenario.
ಬಂದೇ ಬರುತಾವ ಕಾಲ. ಕೊನೆಯ ಪ್ಯಾರಾದಲ್ಲಿನ ಉಲ್ಲೇಖ ನಿಜವಾಗುತ್ತದೆ.ಕಾಯೋಣ. ಒಳ್ಳೆಯ ಬರಹ.
ಹುಂ ಎನೋ ಒಂದ ಎರಡು ವರ್ಷ ಐಟಿಐ ಓದಿ ನಾಕ ವರ್ಷ ರೈತನಾಗಿ ದುಡಿದೆ ನಾಲ್ಕ ಜನರ ಹೊಟ್ಟೆ ತುಂಬಸಗೊಳೊದು ಕಷ್ಟ ಅದ ಯಾವದಾರ ಕೆಲಸಾ ನೋಡಿಕೊಂಡು ಬದುಕೊ ಮಗನಾ ಅಂತಾ ನಮ್ಮ ಅವ್ವಾ ಹೆಳಿದ್ರು. ನೋಡು ನಾಕ ವರ್ಷಗಳ ಬರಗಾಲದಾಗ ನಿಮ್ಮ ಕಾಕಾನ ಕೆಎಸ್ ಆರ್ ಟಿ ಸಿ ಪಗಾರ ಇಪ್ಪತ್ತು ಮಂದಿ ಹೊಟ್ಟಿ ನೆತ್ತಿ ನೊಡೆತಿ ಅವರ ಪುಣ್ಯದಿಂದ ನೀವು ಸಾಲಿ ಕಲಿತಿರಿ.ಇನ್ನ ಕಮತಾ ಮಾಡಿದ್ದ ಸಾಕು ಕೆಲಸಾ ನೊಡೊಅಂದರ ನಾ ಉರಬಿಟ್ಟ ಹೋಗಾಂಗಿಲ್ಲ ಎಕರೆಕ ಎಂಟ ಕಿಂಟಲ್ ಬಳ್ಳೊಳಿ ನಾಕ ಕಿಂಟಲ್ ಮೆಣಸಿನಕಾಯಿ ಬೆಳದನಿ ನಮ್ಮ ಮುಂದ ಯಾ ನೌಕರಿ ಆಂವ ಅದಾನ ನಾ ಹೋಗಂಗಿಲ್ಲಾಂದರ ಹೊಗಂಗಿಲ್ಲ ಅಂದಾವ್. ಇವತ್ ಬೆಂಗಳೂರಿನಲ್ಲಿ ಏಳು ವರ್ಷ ಕೆಲಸಾ ಮಾಡಿ ಇಗಾ ಪಾರಿನ್ನ ದಾಗ ಅದನೀ ಅಂದರ ಕಾರಣ ನಮ್ನ ಮಾವ ಬೀಡರಿ.ಮತ್ತ್ ನಾಂವ್ ಬೆಳದ ಮೆಣಸಿನಕಾಯಿ ಕ್ವಿಂಟಲ್‌ಗೆ ನಾಕ ಸಾವಿರನೂ ಮಾರಲಿಲ್ಲ ಅಂತ.ಹೇಳಿದರ ಬಾಳ ಅಐತಿ ಮೊನ್ನೆ ಕುಸುಮ ಬಾಲೆ ಮೆಡಂ ನವರು ಕಮೆಂಟ ಹಾಕಿದ್ರು ಇನ್ನಂದು ನಾಕ ಸಾಲ ಬರದರ ಅದ ಒಂದ ಆರಟಿಕಲ್ಲ ಅಂತ.ಅದಂಗ ಮನ್ನೆ ಇಪ್ಪತ್ತು ದಿನಾ ರಜಾ ಊರಿಗೆ ಹೋದಾಗ ಆರೆಂಟ ಕನ್ನೆದ ಫೋಟೋ ಬಂದಿದ್ವ ನಾ ಒಂದ ನೋಡಿದ್ಯಾ ಯಾಕಂದರ ಅದನು ನಮ್ಮೂರ ಸಾಲಿ ಟೀಚರ್ ತೊರಸಾರಅಂತ ಹುಡಗಿ ಚಂದ ಇತ್ತು.
ನನಗೆನ ಇನ್ನೊಂದ ವರ್ಷದ ನಂತರ ನೋಡುನಂತರಿ ನಮ್ಮ ಕಾಕಾ ಯಾವರ ಕನ್ನೆ ತೊರಸರಿ ಅಂದರ ಕಮತಾ ಮಾಡವರಂದರ ಕನ್ಯೆ ತೊರಸುದ ಅಲ್ಲ ಪೊಟೊನು ಕೊಡಾಂಗಿಲ್ಲ.ದುಬೈದಾಗ ಅದಿ ಅಂದಿದ್ದಕ್ಕ ಲಘುನ ಪೊಟೋ ಕೊಟ್ಟಾರ ನೀ ನೋಡ ಅಂದರು.
ಬಂದೇ ಬರತ್ತೆ. ಮಲಗೊ ಹಾಸಿಗೆಲಿ ಎಷ್ಟು ದಿನ ಹೇಸಿಗೆ ಮಾಡಿಕೊಂಡು ಮಲಗಕ್ಕೆ ಸಾಧ್ಯ?
ಅಂಥಾ ಕಾಲ ಬರಂಗಾಗ್ಲಿ……ಮೇಡಂ…. ಬರಹ ಚೆನ್ನಾಗಿದೆ
Please ad some more profession to this list. Purohitaru, adugeyavaru, chikka angadi ittavaru, sanna factorily dudiyuvavaru, etc. Now bride do not bother who earns less than a lakh per month. Employee gets PF, medical insurance, retirement benefits, loan subsidy, etc. What do other get? Question is unanswered.
ಮೂಲತಃ ರೈತನಾದ ನನಗೆ ನಿಮ್ಮ ಆಶಯ ತುಂಬ ಇಷ್ಟವಾಯಿತು…
ಆದರೆ ಆ ಕಾಲ ಬರಬಹುದೇ? ಎನ್ನುವುದು ನನಗೂ ಪ್ರಶ್ನೆಯಾಗಿಯೇ ಉಳಿಯಿತು.
‘ನಮ್ಮ ದಿನಗಳು’ ಮುಗಿಯುವುದರಲ್ಲಂತೂ ಅದು ಸಾಧ್ಯವಿಲ್ಲ ಎನಿಸುತ್ತದೆ.
ಸುಂದರ ಬರಹ.
ಅಕ್ಕರೆಯ ಕುಸುಮ ,
ಈ ಬರಹ ತುಂಬಾ ಇಷ್ಟ ಆಯಿತು. ರೈತರ ಯಶೋಗಾಥೆಯ ಬಗ್ಗೆ ಆಗಾಗ್ಗೆ ನಾವು ಓದುತ್ತಲೇ ಇರುತ್ತೇವೆ . ಆದರೆ ವ್ಯವಸಾಯ ಮಾಡುವ ಹುಡುಗನಿಗೆ ಹೆಣ್ಣು ಕೊಡಲು ಹಿಂದೆ ಮುಂದೆ ನೋಡುತ್ತೇವೆ . ಬೆಂಗಳೂರಿನಲ್ಲಿ ಆಟೋ ಓಡಿಸುತ್ತಾ ನನಗೆ ಡ್ರೈವರ್ ಕೆಲಸ ಇದೆ ಎಂದು ಸುಳ್ಳು ಹೇಳಿ ಮಾಡುವೆ ಆಗಿರುವ ಭೂಪರು ಇದ್ದಾರೆ. ಅಂಥವರನ್ನು ಒಪ್ಪಿಕೊಳ್ಳುವ ನಮ್ಮ ಹಿರಿಯರು, ಹುಡುಗಿಯರು, ರೈತಾಪಿ ಹುಡುಗರ ಬಗ್ಗೆ ತೋರುವ ಅನಾದರ ಕಂಡರೆ ನೋವಾಗುತ್ತದೆ. “ನಮ್ಮ ಮಗಳನ್ನ ನಾಕೆಕರೆ ಜಮೀನಿರೋ ಒಬ್ಬ ಸಣ್ಣ ರೈತನಿಗೆ ಕೊಟ್ಟಿದೇವೆ” ಅಂತ ಹೆಮ್ಮೆಯಿಂದ ಹೇಳೋ ದಿನವೂ ಬೇಗನೆ ಬರಲಿ ಎಂಬುದು ನನ್ನ ಪ್ರಾರ್ಥನೆ ಕೂಡ…
ಹೌದು! ಭಾವನಾತ್ಮಕ ಲೋಕದಲ್ಲಿ ಸಕಲವೂ, ಪೂಜ್ಯ, ಮಾನ್ಯ… ಆದರೆ ವ್ಯವಹಾರಿಕ ಬದುಕೇ ಭಿನ್ನ… ದೇಶ ಪ್ರಜ್ಞಾವಂತರು, ಬುದ್ಧಿವಂತರಾರು ರೈತರಾಗುತ್ತಿಲ್ಲ… ಹಾಗಾಗಿ nobody is fighting for their rights issues as per demands of times…
ಓದಿ ಪ್ರತಿಕ್ರಿಯಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
ಚಿಂತನೆಗೆ ಹಚ್ಚುವ ಮಾತುಗಳು. ವಾಸ್ತವದ ಕ್ರೂರ ವ್ಯಂಗ, ಎಂಥೆಂಥವೋ ವಾದಗಳು, ಇಸಂಗಳು ಹುಟ್ಟಿ ಅವಕ್ಕೆ ನೋಬೆಲ್ ಇನ್ನೂ ಏನೇನು ಪ್ರಶಸ್ತಿ ಬಾಚಿಕೊಳ್ಳುವ ವಿಜ್ಞಾನಿಗಳಿಗೆ ಸಮಾಜದ ಈ ಕೋರೆಗಳನ್ನು ತಪ್ಪಿಸುವುದಕ್ಕಾಗುತ್ತಿಲ್ಲವಲ್ಲ. ಬಂದೇ ಬರುತ್ತದೆ ಆ ಕಾಲ….ನಾನು ಆಶಾವಾದಿ ಕುಸುಮಾ….
ಹಳ್ಳಿಯ ರೈತನ ಮನೆಗೆ ಸೊಸೆಯಾಗಿ ಹೋದ ಹೆಣ್ಣುಮಕ್ಕಳ ಕಥೆಯೂ ಅಷ್ಟೇ ಕರುಣಾಮಯವಾಗಿರುತ್ತದೆ. ಹಿರಿ ಸೊಸೆ ಆದರಂತೂ,ಇನ್ನೂ ಭೀಕರ. ನಗರದಲ್ಲಿರುವ ವಾರಗಿತ್ತಿಯರು ಜಾತ್ರೆ-ಮದುವೆ ಸಂದರ್ಭದಲ್ಲಿ ಹಳ್ಳಿಗೆ ಭೇಟಿ ಕೊಟ್ಟಾಗ, ಸದಾ ತನ್ನ ಮೇಲೆ ಧುಮು-ಧುಮಿಸುತ್ತಿದ್ದ ಅತ್ತೆ ಹಾಗೂ ಉಳಿದವರು, ಈ ಪಟ್ಟಣದ ಸೊಸೆಗೆ ಮಾಡುವ ಉಪಚಾರ ನೋಡಿದಾಗ, ನಾನೂ, ನನ್ನ ಗಂಡ-ಮಕ್ಕಳೊಡನೆ ಪಟ್ಟಣದಲ್ಲಿ ಮನೆ ಮಾಡಬಾರದೇಕೆ ಅನ್ನುವ ವಿಚಾರ ಮನಸ್ಸಿನಲ್ಲಿ ಬರುತ್ತದೆ. ಗಂಡನ ಮನೆಗೆ ಮದುವೆಯಾಗಿ, ನಗರಕ್ಕೆ ಹೋಗಿರುವ ನಾದಿನಿ ತೌರುಮನೆಗೆ ಬಂದಾಗಂತೂ, ಅತ್ತೆಗೆ ಕೋಡು ಮೂಡಿಬಿಟ್ಟಿರುತ್ತವೆ. ಸೊಸೆ ಬಗ್ಗೆ, ಮಗಳ ಮುಂದೆ ಇಲ್ಲೆದ್ದೆಲ್ಲಾ ಹೀಯಾಳಿಸಿ ತನ್ನ ತೀಟೆ ತೀರಿಸಿಕೊಳ್ಳುತ್ತಳೆ. ಮನೆಯ ಗಂಡುಮಕ್ಕಳೋ ಚಟಗಳ ದಾಸರಾಗಿರುತ್ತಾರೆ. ಆದ್ದರಿಂದ ಸಂಸಾರ ತೂಗಿಸಲು, ಆಕಳು-ಎಮ್ಮೆಯನ್ನೂ ಮನೆಯಲ್ಲಿ ಕಟ್ಟಿರಬೇಕಾಗುತ್ತದೆ. ಒಟ್ಟಿನಲ್ಲಿ ಅವಳೊಂದು ದುಡಿಯುವ ಯಂತ್ರ ಮಾತ್ರ ಆಗಿರುತ್ತಾಳೆ. ಅದಕ್ಕೇ ಅವಳು ಮನದಲ್ಲಿ ನನ್ನ ಹೆಣ್ಣುಮಕ್ಕಳು ಮಾತ್ರ ನನ್ನ ಹಾಗೆ ಕಷ್ಟಪಡಬಾರದು ಮತ್ತು ಅವರನ್ನು ನಗರದಲ್ಲಿ ನೌಕರಿಯಲ್ಲಿರುವವರಿಗೇ ಮದುವೆ ಮಾಡಿಕೊಡುವದು ಅಂತಾ ನಿರ್ಧಾರ ಮಾಡಿರುತ್ತಾಳೆ.
ಆಹಾ..!
ಚಂದದ ಲೇಖನ…
ಕೊನೆ ಸಾಲುಗಳು ಸಕಾರವಾಗುವ ದಿನ ಬೇಗ ಬರಲಿ..
gud one kusuma…keep it up…
ರೈತನ ಮನಸಿನ ಭಾವನೆಗಳನ್ನೇ ತಂದು ಕೂರಿಸಿದ್ದೀರಿ ಈ ಲೇಖನದಲ್ಲಿ…. ಆಹಾ..!! ಭಾಷಾ ಶೈಲಿ ಪಸಂದಾಗೈತೆ. “ಕಾಲ ಚಕ್ರ ಉರುಳುತ್ತಂತೆ. ಇತಿಹಾಸ ಮರುಕಳಿಸುತ್ತಂತೆ” ಇದು ಆಗುತ್ತೇನೋ ಕಾದು ನೋಡಬೇಕು. ರೈತ ಎಂದರೆ ಕೆಲಸವಿಲ್ಲದವನು ಎನ್ನುವಂತಾಗಿದೆ.
“ನಾಕ್ ಮನೆ ಹಳ್ಳೀ ಮೂಲೆಗೋದ್ರೂ ನಮಗ್ ಕೆಲಸದ್ ಮೆಲಿರವ್ನೇ ಬೇಕು ಅಂತಾರ. ಏನ್ ತಾನೇ ಮಾಡಕಾದ್ದು?”” ಕಾಲ ಏಕಮುಖಿ, ಚಕ್ರವಲ್ಲ , ನನ್ಗೇನೋ ಬದಲಾವಣೆ ಡೌಟು. ಇದು ಬದಲಾಗುವದರಲ್ಲಿ ರೈತನ ಸ್ಟೈಲೆ ಬದಲಾಗಿರುತ್ತದೆ -ಇವನೇನಾ ರೈತ ಅಂದ್ರೆ ಎಂದುಕೊಳ್ಳುವ ಕಾಲ ಬಂದಿರುತ್ತದೆ.
-ಅನಿಲ
ಬಂದೇ ಬರುತಾವ ಕಾಲ……………….