ನಾಗರಾಜ್ ಹರಪನಹಳ್ಳಿ, ಕಾರವಾರ
ದಾರಿ ತೆಪ್ಪಗೆ ಬಿದ್ದು ಕೊಂಡಿದೆ
ನಡೆವವರ ಸದ್ದು ಆಲಿಸುತ್ತಾ.
ನಿನಗೆ ಅರ್ಥವಾಗುವುದೆಂದು ?
ಅಲ್ಲಿ ನಮ್ಮ ಪ್ರೇಮದ ಧ್ವನಿಹೆಜ್ಜೆಗಳು ರಿಂಗಣಿಸುತ್ತವೆ ಎಂದು ;
ದಾರಿಗಳು ಪ್ರೇಮಿಗಳ ಹೆಜ್ಜೆಗಳಿಗೆ ಮೂಕ ಸಾಕ್ಷಿಯಾಗಿವೆ
ನಿನಗೆ ಅರ್ಥವಾಗುವುದೆಂದು ?
ಅಲ್ಲಿ ನಮ್ಮ ; ನಮ್ಮಂಥವರ ಕುಲು ಕುಲು ನಗು ಇದೆ ಎಂದು
ಪಿಸು ಧ್ವನಿಗಳಿವೆ ಎಂದು.
ದಾರಿಗಳು ಯುಗ ಯುಗಗಳಿಂದ ಸಾಕ್ಷಿಯಾಗಿವೆ
ರೋಮಿಯೋ ಜುಲಿಯೆಟ್
ಸಲೀಂ ಅರ್ನಾಕಲಿ ಪ್ರೇಮಕತೆಗಳಿಗೆ
ಉಮರ್ ಖಯ್ಯಾಮ್ ಕವಿತೆಗಳಿಗೆ
ನಿನಗೆ ಅರ್ಥವಾಗುವುದೆಂದು
ಸಾವಿರ ಸಾವಿರದ ಕನಸುಗಳಿಗೆ
ಇದೇ ದಾರಿಯಲಿ ಸವೆಯದ ಹೆಜ್ಜೆಹಾಕಿ
ಗೂಡು ಕಟ್ಟಿದ್ದೆವೆಂದು
ಕೂಡುವುದು ಕಷ್ಟವಲ್ಲ
ಕೂಡಿದ ಮೇಲೆ ಅಗಲುವುದು ಕಷ್ಟವೆಂದು ಕಣ್ಣೀರು ಹಾಕಿದ್ದು
ಇದೇ ದಾರಿಯಲ್ಲಿ.
ದಾರಿಗಳಿಗೆ ಎಲ್ಲಾ ನೆನಪಿದೆ
ನಮಗೆ ಮರೆತಿದೆ
ಹಾಗಾಗಿ ಪ್ರೇಮಿಗಳು ನೆಡೆದೇ ಇದ್ದಾರೆ ದಾರಿಯಲಿ
ಇತಿಹಾಸದ ಪಾಠಗಳ ಮರೆತು
ಪ್ರೀತಿಸುತ್ತಲೇ ಇದ್ದಾರೆ
ಕರುಣೆಯಿಲ್ಲದ ಹಾದಿಯಲಿ.
ಬೆಳಕಿಲ್ಲದ ದಾರಿ
ಹಾದಿ ತಪ್ಪಿಸಬಹುದು
ಕನಸಿರುವ ದಾರಿ ಕೈಹಿಡಿದು
ನಡೆಸೀತು.
ದಾರಿಯ ಪಿಸುಮಾತು, ಕುಲು ಕುಲು
ನಗು ಜೇಬಿಗೆ ತುಂಬಿಕೊಂಡು
ನಡೆದು ಬಿಡೋಣ
ಗೊಂದಲವಿರುವ ಜಗವ ಬಿಟ್ಟು
ಬೆಳಕಿನರಮನೆಗೆ.
ಒಂದೇ ಒಂದು ಕಿರುನಗುವಿನ
ಸಂಜ್ಞೆ ನೀಡು ಸಾಕು.





0 Comments