ಕುರಿರಪ್ಪದಲ್ಲಿ ‘ರಣಧೀರ ಕಂಠೀರವ!’

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

ಅಲ್ಲೆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಹಳ್ಳಿಗಳು ಸ್ವಾಭಾವಿಕವಾದ ಮನರಂಜನೆಯ ಜೊತೆಗೆ ತಳುಕುಹಾಕಿಕೊಂಡಿರುತ್ತವೆ. ಜಾತ್ರೆ, ಆರತಿ, ಕೆಂಡ, ಹರಕೆ ಮರಿಊಟ ಇವೆಲ್ಲ ಒಂದು ಬಗೆಯ ಆಚರಣೆಯ ನೆಲೆಗಳಾದರೆ; ಹಳ್ಳಿಗಳಲ್ಲಿ ಹವ್ಯಾಸಿ ರಂಗಭೂಮಿ ಒಂದು ಜೀವಂತ ಇರುತ್ತದೆ. ಇಲ್ಲಿ ಪುರಾಣದ ನಾಯಕರುಗಳು ನಾಯಕತ್ವ ಕಳಚಿ ಸಾಮಾನ್ಯರಂತೆ ವಾಸಿಸತೊಡಗುವುದು ನಟರ ಆಂತರ್ಯದಲ್ಲಿ.

ನಾನು ಪ್ರಾಥಮಿಕ ಶಾಲೆಯಲ್ಲಿ ಓದುವ ಕಾಲಕ್ಕೆ ಸಿನಿಮಾ ಕುರಿತು ಏನು ಅರಿವಿರಲಿಲ್ಲ. ನಮ್ಮೂರಿನಲ್ಲಿ ಇದ್ದ ಹವ್ಯಾಸಿ ಕಲಾವಿದರು ವರ್ಷದಲ್ಲಿ ಒಮ್ಮೆ ಸಂಪೂರ್ಣ ರಾಮಾಯಣ ಅಥವಾ ಮಹಾಭಾರತ ನಾಟಕ ಆಡೋರು. ನಾವು ತರಬೇತಿ ನಡೆಯುವ ಜಾಗಕ್ಕೆ ಹೋಗಿ ಪ್ರಾಕ್ಟೀಸ್ ಹಂತದಿಂದಲೇ ನಾಟಕ ನೋಡ್ತಾ ಇದ್ವಿ. ಈ ತರಬೇತಿಯಲ್ಲಿ ಯಾವ ಸಿದ್ಧ ರಂಗಪರಂಪರೆಗಳ ಚೌಕಟ್ಟು ಇರುತ್ತಿರಲಿಲ್ಲ.

ಸಹಜವಾದ ಕಲಿಕೆಯ ಕುತೂಹಲಗಳಷ್ಟೇ ಪ್ರಧಾನವಾಗಿ ಇರ್ತಾ ಇದ್ದದ್ದು. ಇಂತ ದಿನಾಂಕದಂದು ನಾಟಕ ಅಂತ ಗೊತ್ತಾದ ಮೇಲೆ ಸುತ್ತ ಹಳ್ಳಿಗಳಲ್ಲಿ ಸಾರಾಕ್ಸೋರು. ನಾಟಕದ ದಿನ ಇಡೀ ಊರು ರಂಗೇರ್ತಾ ಇತ್ತು. ಪ್ರತಿ ಮನೆಯ ಜನರೂ ತಾವೇ ವರ್ಣಬಳಿದುಕೊಂಡು ನಾಟಕವಾಡಲು ಸಜ್ಜಾದಂತೆ ಮೈದುಂಬಿಕೊಳ್ತಾ ಇದ್ರು. ನಾಟಕದ ದಿನ ಬಾಡಿಗೆಗೆ ಉಡುಪುಗಳು,ರಂಗದ ಸೆಟ್ ಬಂತೆಂದರೆ ನಾಟಕ ಆರಂಭವಾಗುವ ಎರಡು ತಾಸು ಮೊದಲೇ ಆ ಜಾಗದಲ್ಲಿ ಮಂದ್ಲಿಕೆ ಹಾಸಿಕೊಂಡು ನಾವೆಲ್ಲ ಸೇರ್ತಾ ಇದ್ವಿ.

ಸುತ್ತಲೂ ಬೋಂಡಾ, ಟೀ, ಬುರ್ಗಿನ ಅಂಗಡಿಗಳು ಹಾಜರಾಗಿರ್ತಾ ಇದ್ವು. ನಾಟಕ ಆರಂಭವಾಗುವ ವೇಳೆಗೆ ನಮ್ಮದೆಲ್ಲ ವೀದಿಯಲ್ಲೇ ಒಂದು ನಿದ್ದೆ ಆಗಿರ್ತಾ ಇತ್ತು. ಅಕ್ಷರ ಲೋಕದ ಯಾವ ವಾಸನೆಗಳು ಗೊತ್ತಿರದ ಕೃಷಿಕರು, ಕಾಯಿ ಕೀಳುವ ವೃತ್ತಿಯವರು, ಬೇಟೆ ಆಡುವವರು ಇಲ್ಲಿ ಕಲಾವಿದರು. ಪಕ್ಕದ ಊರಿನ ಹಾರ್ಮೋನಿಯಂ ಮಾಸ್ತರ ಹಿಡಿತದಲ್ಲಿ ಇವರ ಕಲಿಕೆ.

ನಾಟಕ ಶುರುವಾಗುವ ಮೊದಲೇ ಸಿಳ್ಳುಗಳ ಮಹಾಸದ್ದಿನ ಜೊತೆ ರಾಮಲಕ್ಷ್ಮಣರನ್ನು ಸ್ವಾಗತಿಸುತ್ತಿದ್ದರು. ಸಾಕ್ಷಾತ್ ರಾಮ, ಹನುಮರ ದರ್ಶನವೇ ಆದಂತೆ ನೋಡುಗರ ಕಣ್ಮನಗಳಲ್ಲಿ ಭಕ್ತಿಯ ಅಸ್ಮಿತೆ ತುಂಬಿ ಹರಿಯೋದು. ಕೆಲವು ಮದ್ಯಪ್ರಿಯರು ತೂರಾಡುತ್ತಾ ತಮ್ಮಿಷ್ಟದ ನಟರ ಧಿರಿಸುಗಳಿಗೆ ನೋಟುಗಳನ್ನು ಪಿನ್ನದಲ್ಲಿ ಹಾಕುವ ಕೆಲಸ ಮುಗಿಯುವವರೆಗೂ ನಡೆಯೋದು. ಊರಿನ ಮನೆಗಳ ಜನವೆಲ್ಲ ನಸುಕು ದಾಟುವತನಕ ಬೀದಿಯಲ್ಲಿ ನೆಲೆಸುವುದೇ ವಿಶೇಷ.

ಈ ರಂಗಚಟುವಟಿಕೆಗಳನ್ನು ಬಿಟ್ಟರೆ ವರ್ಷಕ್ಕೂ ನಡೆಯುವ ಮಣ್ಣೆಮಾರಿ ಜಾತ್ರೆಯ ನಂತರ ಸುತ್ತೇಳಳ್ಳಿಗೂ ಮಣ್ಣಮ್ಮ ಮಡ್ಲಕ್ಕಿಗೆ ಬಂದಾಗ ಒಂದೊಂದು ಊರಿನಲ್ಲಿಯೂ ದೇವರನ್ನು ಉಳಿಸಿಕೊಂಡು ರಾತ್ರಿ ಇಡೀ ಮೆರವಣಿಗೆ ಮಾಡ್ಸೋರು. ಮಾರಿಯ ಬದುಕಿನ ರೋಚಕ ಕಥೆಗಳನ್ನು ವರ್ಣನೆ ಮಾಡ್ತಾ ಸೋಮಗಳನ್ನು ಹೊತ್ತು ಕುಣಿಯುವ ಸನ್ನಿವೇಶವಂತೂ ಅತ್ಯದ್ಭುತ.

ವರ್ಷದಲ್ಲಿ ಹೀಗೆ ಎರಡು ಮೂರು ಸಲ ಇರುಳಲ್ಲಿ ನಡೆಯುವ ನಾಟಕ, ಮೆರವಣಿಗೆಯನ್ನು ಬಿಟ್ಟರೆ ನಮಗೆ ಬೇರೆ ಮನರಂಜನೆ ಅಂತ ಏನು ಇರಲಿಲ್ಲ. ನಮ್ಮ ಪ್ರಾಥಮಿಕ ಹಂತದ ಶಿಕ್ಷಣ ಮುಗಿದು ಮಾಧ್ಯಮಿಕ ಶಿಕ್ಷಣ ಶುರುವಾಗುವ ವೇಳೆಗೆ ಹೊಸ ಮನರಂಜನೆಯ ಮಾದರಿಗಳು ಶುರುವಾದವು.

 ನಾನು ಐದನೇ ತರಗತಿ ಓದುವಾಗ ಸುತ್ತ ಏಳು ಹಳ್ಳಿಗಳಲ್ಲಿ ಯಾರ ಮನೆಯಲ್ಲಿಯೂ ಟಿವಿ ಇರಲಿಲ್ಲ. ಸಿನಿಮಾ ಜಗತ್ತಿನ ಪರಿಚಯವೇ ಇರದ ನಮಗೆ ಇದ್ದಕ್ಕಿದ್ದಂತೆ ಒಂದು ಸುದ್ದಿ ಸಿಕ್ತು.  ಓಣಿಹಾದೆಗೆ ಇರೋ ಒಕ್ಲೀರ್ ಸಿದ್ದಣ್ಣ ಟಿವಿ ಬಾಡಿಗೆ ತಂದು ಪಿಚ್ಚರ್ ಕ್ಯಾಸೆಟ್ ತಂದು ಹಾಕ್ತಾರಂತೆ. ರಾತ್ರಿ ಹತ್ತು ಗಂಟೆ ಮೇಲೆ ಸಿನಿಮಾ ಶುರು. ಎರಡು ರೂಪಾಯಿ ಕೊಟ್ರೆ ಒಳಗೆ ಬಿಡ್ತಾರೆ. ಕಂಡಿರದ ಸಿನಿಮಾ ನೋಡಲು ನಮ್ಮ ತಯಾರಿ ಹೇಗಿರುತ್ತಿತ್ತು ಅನ್ನೋದೇ ವಿಸ್ಮಯ.

ಒಂದು ಸಿವ್ಡು ಕಡ್ಡಿ ಎರೆದರೆ ನಾಲ್ಕಾಣೆ. ಮನೆಯ ಯಾರಿಗೂ ಗೊತ್ತಾಗದಂತೆ ಕಡ್ಡಿ ಸಾಬ್ರತ್ರ ಕಡ್ಡಿ ಹಾಕುಸ್ಕಂಡು ಯಾರು ಯಾರದೋ ಮನೆಯ ಬಾಗಿಲಿನ ಹಿಂದೆ ಕದ್ದು ಕಡ್ಡಿ ಎರೆದು ಎರಡು ರೂಪಾಯಿ ಕೂಡಿಟ್ಕಳದು. ಮನೆಯ ಎಲ್ಲರೂ ಮಲಗಿದ ಮೇಲೆ ನಿಧಾನಕ್ಕೆ ಕದ್ದು ಊರಕೆಳಗಿನ ಓಣಿಗೆ ತಲುಪೋದು. ಸಿನಿಮಾ ನಡೆಯುವ ಜಾಗವೇ ಬಂದ್ರೆತಡ್ಕೆ ಸುತ್ತ ಕಟ್ಟಿರುವ ಕುರಿಕೂಡುವ ರಪ್ಪ. ಅಲ್ಲಿ ಎರಡು ರೂ ಕೊಟ್ಟು ಒಳಗೆ ಹೋದ್ರೆ ನಾವೇ ಸಿನಿಮಾದಲ್ಲಿ ನಟಿಸಿದವರಂತೆ ಬೀಗ್ತಾ ಇದ್ವಿ.

ಕಣ್ಣು ಬಾಯಿ ಬಿಟ್ಕಂಡು ಸಿನಿಮಾ ನೋಡಕತ್ತಿರೆ ಬೆಳಕಾಗುವ ತನಕವೂ ಹಾಕುವ ಸಿನಿಮಾಕ್ಕೆ ಕಣ್ಮನಸು ಬೆಸೆದುಕೊಂಡು ಹೇಳತೀರದ ಸಡಗರ. ಹೀಗೆ ನಾನು ಮೊದಲು ನೋಡಿದ ಸಿನಿಮಾ ಅಣ್ಣನವರ ರಣಧೀರ ಕಂಠೀರವ. ಅಷ್ಟು ಕಿರಿಯ ವಯಸ್ಸಿನಲ್ಲಿ ಅಭಿನಯದ ಮಹತ್ವವೆಂದರೆ ಹೇಗೆ ಎಂದು ಸೆಳೆದ ಚಿತ್ರವದು. ಅಂದಿನಿಂದ ನಿರಂತರವಾಗಿ ನೋಡುತ್ತಾ ಬಂದಿರೋದು ಅಣ್ಣನವರ ಚಿತ್ರಗಳನ್ನೇ.

ನಟ ರಾಜ್ ಕುಮಾರ್ ಅವರು ಅನ್ನೋದು ಕೂಡ ನಮಗಾಗ ಪರಿಚಯ ಇರಲಿಲ್ಲ. ವಿಸಿಪಿ ಹಾಕೋರತ್ರ ಹೋಗಿ ಅಣ ಈವಣ್ಣಯ್ಯ ಇರ ಪಿಚ್ಚರ್ ಕ್ಯಾಸೆಟ್ ನೇ ತಗಂಬರ್ರಿ ಅಂತ ಹೇಳೇ ಬರ್ತಾ ಇದ್ವಿ. ಕ್ರಮೇಣ ಚಿತ್ರಜಗತ್ತಿನ ಪರಿಚಯ ಸಿಕ್ತಾ ಹೋಯ್ತು. ನಮಗೆ ಮನರಂಜನೆ ಅಂದ್ರೆ ಇಷ್ಟೇ. ಎಷ್ಟೊ ಸಲ ಕದ್ದು ಸಿನಿಮಾ ನೋಡಲು ಹೋಗಿ ಸಿಕ್ಕಿಬಿದ್ದು ಹಗ್ಗದಲ್ಲಿ ಒದೆ ತಿಂದದ್ದುಂಟು..

ಹೀಗೆ ಕದ್ದು ಸಿನಿಮಾ ನೋಡಲು ಹೋಗುವ ವಿಚಾರ ಮನೆಯಲ್ಲಿ ಗೊತ್ತಾಗಿ ತರುವಾಯ ಕ್ಯಾಸೆಟ್ ಹಾಕುವ ಸ್ಥಳ ಬದಲಾವಣೆ ಆಯ್ತು. ಕುರಿರಪ್ಪದಿಂದ ಸೀದಾ ವಿಸಿಪಿ ಟಿವಿ ನಮ್ಮ ಕಾಯಿಗೋಡನ್ನಿಗೆ ಬಂತು. ವಾರದಲ್ಲಿ ಎರಡು ಮೂರು ಸಲ ನಮ್ಮ ಗೋಡನ್ನಿನಲ್ಲಿ ಸಿನಿಮಾ ಇರ್ತಾ ಇದ್ದಿದ್ರಿಂದ ಭಯವಿಲ್ಲದೆ ಮನೆಯ ಜನರ ಜೊತೆಗೆ ಚಿತ್ರ ಪಯಣ ನಡೀತಿತ್ತು. ಒಮ್ಮೆ ಶ್ರೀಕೃಷ್ಣ ದೇವರಾಯ ಸಿನಿಮಾ ಪ್ರದರ್ಶನ.

ಸಿನಿಮಾ ಮುಗಿವ ವೇಳೆಗೆ ನೋಡುಗರೆಲ್ಲ ಅಳ್ತಾ ಇದಾರೆ. ಮರುದಿವಸ ಎಂಥಾ ಒಳ್ಳೆಯ ಪಿಚ್ಚರ್ ಹಾಕಿದ್ರಂತೆ ರಾತ್ರಿ; ಇವತ್ತು ಅದುನ್ನೇ ಹಾಕ್ಸಿ ನೋಡನ ಅಂತ ಊರ ಮಂದಿಯೆಲ್ಲ ಮತ್ತದೇ ಚಿತ್ರ ಹಾಕ್ಸಿ ನೋಡೋದು, ಅಳೋದೆ ಆಗಿತ್ತು ಕಥೆ. ಒಂದು ಸಿನಿಮಾ ಹಳ್ಳಿಗರ ಮೇಲೆ ಉಂಟುಮಾಡುವ ಪರಿಣಾಮ ಮೌಲ್ಯಪ್ರೇರಿತವಾಗಿರುತ್ತದಲ್ಲ ಇದು ಅತ್ಯಂತ ಮುಖ್ಯ ಆಗುತ್ತದೆ. ನೀರು ಸೇರುವಾಗ, ಬಟ್ಟೆ ಒಗೆಯಲು ಹಳ್ಳಕ್ಕೆ ಹೋದಾಗ, ಸೀನೀರಿನ ವರ್ತೆತಗೆ ಎಲ್ಲೆಲ್ಲಿಯೂ ಒಂದಷ್ಟು ದಿನ ಶ್ರೀ ಕೃಷ್ಣ ದೇವರಾಯ ಸಿನಿಮಾ ಕುರಿತೇ ಮಾತುಕತೆ ನಡೆದಿದ್ದು ಈಗಲೂ ನನ್ನ ನೆನಪುಗಳಿಗೆ ಒಳ್ಳೆಯ ಜೊತೆ.

ಹೆಚ್ಚು ಕಡಿಮೆ ಪದವಿ ಶಿಕ್ಷಣಕ್ಕೆ ನಗರಕ್ಕೆ ಬರುವವರೆಗೂ ನಮಗೆ ಸಿನಿಮಾ ಟಾಕೀಸ್ ಕುರಿತು ಗೊತ್ತೇ ಇರಲಿಲ್ಲ. ನಾವು ಹಳ್ಳಿಗಳಲ್ಲಿ ಗಳಿಸಿದ ಸಹಜ ಮನರಂಜನೆಗಳೇ ಪ್ರಾಮಾಣಿಕ ಸಂತಸ ಕೊಟ್ಟಿರೋದು. ಆಮೇಲಾಮೇಲೆ ಶಿರಾ ಪೇಟೆಗೆ ಸಿನಿಮಾಕ್ಕೆ ಹೋಗುವ ಪದ್ಧತಿ ಅಭ್ಯಾಸವಾಯಿತು ಜನಗಳಿಗೆ. ನಿಧಾನಕ್ಕೆ ಇದರ ಪರಿಣಾಮವಾಗಿ ಅಲ್ಲೊಂದು ಇಲ್ಲೊಂದು ಅಂತರ್ಜಾತಿ ವಿವಾಹಗಳ ಗಲಭೆಗಳು ನಡೆಯಲು ಮೊದಲಾಯಿತು.

ಕದ್ದುಮುಚ್ಚಿ ಅನೈತಿಕ ಚಟುವಟಿಕೆಗಳು ಹಳ್ಳಿಗೆ ಕಾಲಿಟ್ಟವು.! ನಾಯಕ-ಖಳನಾಯಕರ ಕಲ್ಪನೆ ವಾಸ್ತವದಲ್ಲಿ ಸುಳಿದು ಪಂಚಾಯಿತಿಗಳು ಪ್ರಭುತ್ವ ಜಾತಿ ಮೇಲಾಟಗಳು ಆರಂಭವಾದ್ವು.. ಊರಿಗೆ ಮನರಂಜನೆಯ ಹೆಸರಿನಲ್ಲಿ ಕಾಲಿಟ್ಟ ಟಿವಿ, ಸಿನಿಮಾ ನಿಧಾನಕ್ಕೆ ಬದುಕಿನ ಹಾದಿಯಲ್ಲಿ ಏರುಪೇರುಗಳಿಗೆ ನಾಂದಿಯಾಯಿತು. ಸ್ಥಿತಿವಂತರ ಮನೆಗಳಿಗೆ ಟಿವಿ ಬಂದ ಮೇಲಂತೂ ಹೊಸ ರೂಪ ಧರಿಸಿ ಹಳ್ಳಿಗಳು ತಮ್ಮ ಮೂಲ ಸಹಜತೆಯಿಂದ ದೂರವಾಗಿ ನಟನೆಯಂತ ಮುಖಹೊತ್ತು ಉದ್ಯಮ ಲಕ್ಷಣಗಳು ಕಾಣಿಸಿಕೊಂಡವು.

ಹವ್ಯಾಸಿ ರಂಗಭೂಮಿ ನಿಧಾನಕ್ಕೆ ಅವಸಾನವಾಗಿ ಸಿನಿಮಾ ಪ್ರತಿಷ್ಠೆ ಜಾಗ ಹಿಡೀತು. ನಟನಟಿಯರ ಅಭಿಮಾನದ ಸಂಘಗಳು ಹುಟ್ಟಿ ಜಾತ್ರೆ, ಮೆರವಣಿಗೆ, ನಾಟಕ, ವಿಸಿಪಿಯ ಪರಂಪರೆಗಳೆಲ್ಲ ಜನರೊಳಗೆ ನಿರಾಸಕ್ತಿಯ ರೂಪಧರಿಸಿ ಹೊಸಯಾನ ಹುಟ್ಟುವ ವೇಳೆಗೆ ನಾವು ನೌಕರಿ ಹಿಡಿದು ನಗರದ ಎಷ್ಟೋ ಅಸಹಜ ಹಕೀಕತ್ತುಗಳ ಜೊತೆಗೆ ರಾಜಿಮಾಡಿಕೊಂಡಾಗಿತ್ತು. ಊರೆಂಬ ಊರು ಮಾತ್ರ ಇವತ್ತಿಗೂ ಕೊಂಬಿನ ಕುರಿ
ತೊಂಬಾಳೆ ಹಣ್ಣು
ಇವತ್ಗೆ ಹದ್ನೈದು ದಿನಕ್ಕೆ
ಮಣ್ಣೆಮಾರಿ ಜಾತ್ರೆ ಕಣ್ರಪ್ಪೋ….

ಅಂತ ಸಾರಿಸಿಕೊಳ್ತ ಮಾರಿಯನ್ನು, ನಮ್ಮನ್ನು ಪ್ರತೀ ವರ್ಷವೂ ಊರಿಗೆ ಕರೆಸಿಕೊಂಡು ತನ್ನದೊಂದು ಹಳೆಯ ಚರಿತ್ರೆಯನ್ನು ಕಾಪಿಟ್ಟು ಮೆರವಣಿಗೆ ಸೋಮದ ಭಯಭಕ್ತಿಯನ್ನು ಉಳಿಸಿಕೊಂಡಿದೆ. ಎಷ್ಟೇ ಆಧುನಿಕತೆಗೆ ನಾವು ತೊಡಗಿಕೊಂಡರು ಕುರಿರಪ್ಪದಲ್ಲಿ ನೋಡಿದ “ರಣಧೀರ ಕಂಠೀರವ” ಸಿನಿಮಾ ಕೊಟ್ಟ ಸಂಭ್ರಮವೇ ನಮಗೆ ಇವತ್ತಿಗೂ ಉಳಿದಿರುವ ಸಹಜಾತಿಸಹಜ ಮೌಲ್ಯಪರಾಕ್ರಮ.

October 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Chaitrashree R nayak

    ನಾನು ಮೂರನೇ ತರಗತಿಯಲ್ಲಿ ಓದುತ್ತಿರುವಾಗ ನನ್ನ ಊರಿನಲ್ಲಿ ನಾಟಕ ನಡೆದಿದ್ದು. ಆಗ ನಾಟಕದ ರಂಗು ಊರಿನಲ್ಲಿ ಹೇಗಿರುತ್ತೆ ಎಂದು ನೋಡಿದ್ದು, ಇಲ್ಲಿಯವರೆಗೂ ಸುಮಾರು ಹದಿನೈದು ವರ್ಷಗಳಾದರೂ ನಾಟಕಗಳು ನಡೆದೇ ಇಲ್ಲ. ಕಾರಣ ರಾಜಕೀಯ, ಸಿನಿಮಾ ಮಂದಿರ, ಮೊಬೈಲ್ ಫೋನ್ ಗಳು ಇವೆಲ್ಲಾ ನಮ್ಮನ್ನು ಆಧುನಿಕರಣದ ಜೊತೆಗೆ ನಮ್ಮ ಹಿಂದಿನ ಹವ್ಯಾಸಗಳನ್ನು ಮನರಂಜನೆಗಳನ್ನು ನಶಿಸಿ ಹಾಕುತ್ತಿವೆ. ಕಾರ್ಮಿಕವರ್ಗದ ಜನರೆಲ್ಲ ತಾವೇ ಬಣ್ಣ ಹಾಕಿ ಪಾತ್ರಧಾರಿ ಯಾಗುವುದನ್ನು ಮರೆತುಬಿಟ್ಟಿದ್ದಾರೆ. ಅವರ ಕೌಶಲ್ಯಗಳು, ನಟನೆ, ಅಭಿನಯ ಮನೋರಂಜನೆಗಳೆಲ್ಲ ಮೂಲೆಗುಂಪಾಗಿವೆ. ಹತ್ತು ವರ್ಷಗಳ ಬಳಿಕ ಮತ್ತೆ ನಾಟಕ ನೋಡಿದೆ, ಈ ಗಂತಲು ವರ್ಷಕ್ಕೆ ಐದರಿಂದ ಆರು ನಾಟಕಗಳನ್ನು ತಪ್ಪದೆ ನೋಡುತ್ತೇವೆ ನಿಮ್ಮ ಮಾರ್ಗದರ್ಶನದಲ್ಲಿ. ನೀವು ನನಗೆ ರಂಗಭೂಮಿಯನ್ನು ಅದರ ಮಹತ್ವವನ್ನು ನಟರ ಕಲೆಯನ್ನು ತುಂಬಾ ಹತ್ತಿರದಿಂದ ಪರಿಚಯಿಸಿದ್ದೀರಿ. ಇಲ್ಲದಿದ್ದರೆ ನನ್ನ ಮನಸ್ಸಿನ ಮೂಲೆಯಲ್ಲಿದ್ದ ನಾಟಕ ಎನ್ನುವ ಪ್ರಭೇದ ನಾಶವಾಗುತ್ತಿತ್ತು. ನನಗೆ ನಾಟಕಗಳು, ರಂಗಭೂಮಿ, ಇವೆಲ್ಲವುದರ ಮೇಲೆ ಆಸಕ್ತಿ ಬೆಳೆದಿದ್ದು ನಿಮ್ಮ ಮಾರ್ಗದರ್ಶನದಿಂದಲೇ ಧನ್ಯವಾದಗಳು

    ಪ್ರತಿಕ್ರಿಯೆ
  2. ರೇಣುಕಾ ರಮಾನಂದ

    ಊರಲ್ಲಿ ಕಟ್ಟೆಪೂಜೆ ಕಾರ್ತಿಕ ಪೂಜೆ ಎಲ್ಲ ಇದ್ದಾಗ ಕ್ಯಾಸೆಟ್ ತಂದು ಹಾಕ್ತಿದ್ದದ್ದು ನೆನಪಾಯ್ತು..ಚಂದ ಬರೆದಿರುವಿರಿ ಮೇಡಂ

    ಪ್ರತಿಕ್ರಿಯೆ
  3. ಗೀತಾ ಎನ್ ಸ್ವಾಮಿ

    ಧನ್ಯವಾದಗಳು ರೇಣುಕಾ ಮೇಡಂ

    ಪ್ರತಿಕ್ರಿಯೆ
  4. Vishwas

    “ಜಗವೇ ಒಂದು‌‌ ನಾಟಕ‌ರಂಗ, ನಾವೆಲ್ಲಾ ಪಾತ್ರಧಾರಿಗಳು” ಎಂದು ಒಬ್ಬ ಮಹಾನುಭಾವರು ಹೇಳುವ ಹಾಗೇ, ಅಭಿವೃದ್ಧಿ ಹೆಸರಿನಲ್ಲಿ ನಗರೀಕರಣ ಮೊದಲಾಗುವುದೊಂದು ‘ನಾಟಕ’ವಾದರೇ, ರೂಢಿಯಲ್ಲಿರುವ ಪಧ್ಧತಿಗಳಲ್ಲಿ ಸಹಜವಾಗಿ ಬದಲಾವಣೆಗಳು ಕಂಡುಬರುವ ‘ನಾಟಕ’ದ್ದೇ ಮೇಲುಗೈ‌. ಅಕ್ಕ‌ನೂರನ್ನೇ ಉದಾಹರಣೆಯಾಗಿಸಿದರೆ, ಕಾಲವೆಂಬ ‘ನಾಟಕ’ವು ಸಾಗುತ್ತಾ ಇರಲು, ಮನೋರಂಜನಾ ಮಾರ್ಗಗಳಾಗಿ ಮೆರದದ್ದು ಹವ್ಯಾಸಿ ರಂಗಭೂಮಿ, ಮಣ್ಣೇಮಾರಮ್ಮನ ಉತ್ಸವ, ಸೋಮನ ಕುಣಿತ, ಮರಿಊಟ‌, ಕದ್ದು ಕುರಿರಪ್ಪದಲ್ಲಿ ಕಂಡ ರಣಧೀರ ಕಂಠೀರವ, ಗೋಡೋನಿನಲ್ಲಿ ಕಂಡ ಇನ್ನಷ್ಟು ಸಿನಿಮಾಗಳು, ಇತ್ಯಾದಿಗಳೆಲ್ಲವೂ ಅಲ್ಲಿ ಸಾಗಿದ ‘ಕಾಲ’ವೆಂಬ ‘ನಾಟಕ’ದಲ್ಲಿ ಬಂದ ದೃಶ್ಯಗಳೇ ಎನ್ನಬಹುದು. ಪರದೆಯಲ್ಲಿ ಪಳಗಿದ ಪಾತ್ರಗಳ ಪ್ರಭಾವ ಜನರ ಮೇಲೆ ಬೀರಿ ಅವರ ಜೀವನ ಶೈಲಿಯನ್ನೇ ಬದಲಿಸುವದೊಂದು ಇತ್ತೀಚಿನ ಜೀವನವೆಂಬ ‘ನಾಟಕ’ದಲ್ಲಿ ಕಂಡು ಬರುತ್ತಿರುವ ಪ್ರಮುಖ ಹಾಗೂ ಪ್ರಧಾನ ದೃಶ್ಯ. ಅಕ್ಕನ ಲೇಖನವು ಹೇಳುತ್ತಿರುವುದು,
    ಅಷ್ಟೆಲ್ಲಾ ಮನರಂಜಿಸಿದ ರಂಗಭೂಮಿ ಕಲೆಗಳನ್ನು ಟೆಲಿಪರೆದೆಗಳು ಸ್ವಾಧೀನ ಪಡಿಸಿಕೊಂಡರೂ, ಮಾರಮ್ಮನ ಉತ್ಸವ ಇಂದಗೂ ಎಂದಿಗೂ ನಿತ್ಯಹರಿದ್ವರ್ಣ. ಜೀವನವೂ ಇಷ್ಟೆಲ್ಲಾ ವಿಕಸನಗಳನ್ನು ನೋಡುತ್ತಿದ್ದರೂ, ಮನೋರಂಜನೆ ಎಲ್ಲವುಗಳಲ್ಲಿ ಸಮಾನ ಅಂಶ. ಅದುವೂ ಒಂದು ಪರಿಯ ‘ನಾಟಕ’. ಇಷ್ಟೆಲ್ಲಾ ‘ನಾಟಕ’ಕಳನ್ನಿರಿಸಿಕೊಂಡ ಸೂತ್ರಧಾರಿಯೇ ಸ್ವತಃ ನಡೆಸುವ ‘ನಾಟಕ’ವನ್ನು “ನೋಡುವ” ನೋಡುಗರೂ ನಾವೇ, “ಆಡುವ” ಪಾತ್ರಧಾರಿಗಳೂ ನಾವೇ!!! ಆ ‘ನಾಟಕ’ದ ಶೀರ್ಷಿಕೆ *ಜೀವನ*.

    ಅಕ್ಕನ ಲೇಖನ, “ಬಂದಂತೆ ಸ್ವೀಕರಿಸು”,ಎಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದ ಜೀವನ ಮೌಲ್ಯ‌.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: