‘ಇವರ ಸಾಮಾಜಿಕ ಅಂತರಕ್ಕೆ ಶತಮಾನಗಳ ಚರಿತ್ರೆಯಿದೆ’

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ.

ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ ಇಂಥದ್ದೊಂದು ನಡೆಯಲಿಲ್ಲವಲ್ಲ ನಮ್ಮ ಮಕ್ಕಳು ಮುಚ್ಚಟೆಯಾಗಿದ್ದಾರಲ್ಲ ಎನ್ನುವ ನೆಮ್ಮದಿಯ ಭಾವ ಮನಸಿನಾಳದಲ್ಲಿ ಬೆಚ್ಚಗೆ ಕೂತಿರುತ್ತದೆ.

ಕಾಣದಾದ ಮತ್ತು ವಾಪಸ್ಸು ಮನೆಗೆ ಹೋಗದ ಹೆಣ್ಣುಮಕ್ಕಳ ಬಗ್ಗೆ ಲೀಲಾ ಸಂಪಿಗೆ ನಮ್ಮ ನಿಮ್ಮೆಲ್ಲರ ವೈಯಕ್ತಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ತುಸು ಜಾಗೃತಗೊಳಿಸುತ್ತಿದ್ದಾರೆ ‘ಆಫ್ ದಿ ರೆಕಾರ್ಡ್’ ನಲ್ಲಿ.

‘ವೇಶ್ಯೆಯನ್ನು ಹುಡುಕುತ್ತಾ……’

ಒಮ್ಮೆ ಬಿಚ್ಚಿಬಿದ್ದೆ!  ಅದೇನೆಂದು ಹೇಳಲಾಗದ ಭಯವೊಂದು ಬೆನ್ನುಹುರಿಯುದ್ದಕ್ಕೂ ತಣ್ಣನೆ ಹರಿಯುತ್ತಿರುವಂತೆ ಭಾಸವಾಯಿತು. ಇಲ್ಲಿಂದ ಮರಳಿ ಹೋಗಿಬಿಡಲೇ ಯೋಚಿಸಿದೆ. ಆದರೆ ಹಾಗೆ ಸುಲಭವಾಗಿ ಮರಳಿ ಹೋಗುವಂತಿರಲಿಲ್ಲ. ಅವರನ್ನು ಭೇಟಿಯಾಗಲೆಂದು ಅವರ ಜೊತೆ ಮಾತನಾಡಬೇಕೆಂದು ಬಹಳ ದಿನಗಳಿಂದ ಯೋಚಿಸಿದ್ದೆ. 

ದಶಕವೇ ಕಳೆದಿದೆ. ಆ ದಿನ ಕಲಾಸಿಪಾಳ್ಯದ ಮೊದಲ ಭೇಟಿ ಮರೆಯಲಾರದ್ದು. 

ಅದು ಕಲಾಸಿಪಾಳ್ಯದ ಬಸ್ಟಾಂಡ್. ಅಡ್ಡಾದಿಡ್ಡಿ ನಿಂತಿರುವ ಖಾಸಗಿ ಬಸ್ಸುಗಳು. ಮೂಗು ಬಿಡಲಾಗದಷ್ಟು ಗಬ್ಬುನಾತ. ಕಾಲಿಡಲೂ ಅಸಹ್ಯವಾಗುವಷ್ಟು ಕೊಚ್ಚೆ ನೆಲ. ಅವರು ಅಲ್ಲೇ ಸಿಗುತ್ತಾರೆ ಅಂತ ತಿಳಿದುಕೊಂಡಿದ್ದೆ. ಎಲ್ಲರೂ ಕಾಲಿಡಲೂ ಅಸಹ್ಯ ಪಡುವ ಕೊಳಕು ಜಾಗದಲ್ಲಿ. ಎರಡು ಬಸ್ಸುಗಳ ನಡುವೆ. 

ಹೌದು, ಅದೇ ಅವರಿರುವ ಜಾಗ.  ಅಲ್ಲೇ ಅವರು ಪಿಚಕ್ಕನೆ ತಾಂಬೂಲ ಉಗಿಯುತ್ತಾರೆ.  ಸೀರೆಯ ನೆರಿಗೆ ಸರಿಪಡಿಸಿಕೊಳ್ಳುತ್ತಾರೆ.  ಬೈತಲೆಗಳನ್ನು ತೀಡಿಕೊಳ್ಳುತ್ತಾರೆ. ಹಾಗೇ ತೀಡಿಕೊಳ್ಳುತ್ತಲೇ ತಮ್ಮ ನೋವು,ದುಃಖ, ಅವಮಾನ  ಎಲ್ಲವನ್ನೂ ತಮ್ಮ ಸಹೋದ್ಯೋಗಿಗಳ ಜೊತೆಗೆ ಹಂಚಿಕೊಳ್ಳುತ್ತಾರೆ.  ಅವರೊಡನೆ ಕೈ ಕೈ ಮಿಲಾಯಿಸಿ ಜಗಳವಾಡುತ್ತಾರೆ. ಚಾ ಹುಡುಗ ತಂದ  ಟೀಯನ್ನು ಎಲ್ಲರೂ ಕೂತು ಒಂದೊಂದೇ ಸಿಪ್ ಹೀರಿ ಸುಖಿಸುತ್ತಾರೆ.

ಯಾವಾಗೆಂದರಾವಾಗ ಕುಡಿದು ಬಂದು ಆ ಮತ್ತಿನಲ್ಲಿ ಎಲ್ಲ ಜಂಜಾಟಗಳನ್ನು ಮರೆತು ಅಲ್ಲೇ ಮಲಗುತ್ತಾರೆ.  ನಾನು ಅಲ್ಲಿಗೇ ಹೋಗಿದ್ದೆ!  ಅವರನ್ನು ಅವರ ಜಾಗದಲ್ಲೇ ಮಾತನಾಡಿಸಬೇಕೆಂದು ಕೊಂಡಿದ್ದೆ.  ಯಾರಾದರೂ ನೋಡಿಯಾರೆಂಬ ಭಯ ಒಮ್ಮೆ ಕಾಡಿತು.  ಮರುಕ್ಷಣವೇ ಆ ಭಯ ಮಾಯವಾಗಿ ಕರ್ತವ್ಯ ನನ್ನನ್ನು ಎಚ್ಚರಿಸಿತು.  ಮೊತ್ತ ಮೊದಲ ಬಾರಿಗೆ ಅವರಲ್ಲೊಬ್ಬರ ಕೈಕುಲುಕಿ ಪರಿಚಯ ಮಾಡಿಕೊಂಡೆ.

ಆ  ಪರಿಚಯ ಕ್ರಮೇಣ ನನಗೆ ಇಡೀ ಬೆಂಗಳೂರಿನ ಹಾಗೂ ರಾಜ್ಯದ ಮೂಲೆಮೂಲೆಯ, ದೇಶದ ಉದ್ದಗಲದ ಕಾಡುಮಲ್ಲಿಗೆಯ, ಕತ್ತಲ  ಕೂಪದಲ್ಲಿ ಅನಿವಾರ್ಯತೆಗಾಗಿ, ಅಸಹಾಯಕತೆಗಾಗಿ ಒಮ್ಮೆ ಜಾರಿದ್ದೇವೆಂಬ ಒಂದೇ ಕಾರಣಕ್ಕಾಗಿ ಆ ವೃತ್ತಿಗಿಳಿದ ಅಸಂಖ್ಯಾತ ಬದುಕುಗಳ ಪರಿಚಯಕ್ಕೆ ನಾಂದಿಯಾಗುತ್ತದೆಂಬ ಅರಿವು ನನಗಿರಲಿಲ್ಲ. ನನ್ನೆದುರಿಗೆ ಒಂದು  ಜವಾಬ್ದಾರಿಯಿತ್ತು.

ನಾನು  ಪ್ರಪಂಚದ ಅತ್ಯಂತ ಭಿನ್ನವಾದ ಸೋಂಕು “ಎಚ್ಐವಿ ಹಾಗೂ ಏಡ್ಸ್” ಬಗ್ಗೆ ಲೈಂಗಿಕ ವೃತ್ತಿ ಮಹಿಳೆಯರಿಗೆ ಅರಿವು ಮೂಡಿಸುವ,  ಅವರನ್ನು ಮತ್ತೆ ಬದುಕಿನ ಬೆಳಕಿನತ್ತ ಮುಖ ಮಾಡಿಸುವ ಸಂಯೋಜಕಳಾಗಿ ಈ ಪಾತಕ ಲೋಕದೊಳಗೆ ಪ್ರವೇಶಿಸಿದ್ದೆ. ಕರ್ತವ್ಯವೆಂದು ಶುರು ಮಾಡಿದ್ದು ದಿನಗಳೆದಂತೆ  ಕಾಳಜಿಯ, ಕಕ್ಕುಲತೆಯ ಕೆಲಸವಾಗಿಬಿಟ್ಟಿತು. 

ಕಲಾಸಿಪಾಳ್ಯದಲ್ಲಿ ಆರಂಭವಾದದ್ದು ಮೆಜೆಸ್ಟಿಕ್,  ಶಿವಾಜಿನಗರ, ಮಲ್ಲೇಶ್ವರಂ,ಡಬ್ಬಲ್ ರೋಡ್, ವಿಜಯನಗರ, ವಿಲ್ಸನ್ ಗಾರ್ಡನ್, ಮಡಿವಾಳ, ಬಿಟಿಎಂ ಲೇಔಟ್, ಜಯನಗರ……  ಬೆಂಗಳೂರಿನಾದ್ಯಂತ ಹಬ್ಬಿತು. ರಾಜ್ಯ, ದೇಶದ ಎಲ್ಲೆಡೆ ಸುತ್ತಿದೆ. ಎಲ್ಲಾ ಅನಧಿಕೃತವಾದರೂ ಪ್ರತಿಷ್ಠಿತ ಕೆಂಪು ದೀಪಗಳನ್ನು ನೋಡಿದೆ.  ಸಮಾಜದ ದೃಷ್ಟಿಯಲ್ಲಿ ದೂಷಣೆಯ  ಶಿಶುಗಳಾಗಿ,  ಅವಮಾನಗಳಿಗೆ ತುತ್ತಾಗಿರುವ ಅವರು ನಿಧಾನವಾಗಿ ತಮ್ಮ ಕತೆಗಳನ್ನು  ಹೇಳಿಕೊಂಡರು.  ಸಮಸ್ಯೆಗಳನ್ನು ಅನುಭವದ ಬುತ್ತಿಯ ಗಂಟು ಬಿಚ್ಚಿಟ್ಟರು. 

 “ಅದರಲ್ಲಿ ಒಂದೇ ಒಂದು  ಸಂತೋಷದ ಪಕಳೆಗಳಿರಲಿಲ್ಲ.  ನೋವಿನ,  ಅವಮಾನದ,  ಹತಾಶೆಯ, ಸಂಕಟದ ಬುತ್ತಿ ಅದು.  ಬದುಕಿನ ತಿರುವುಗಳು,  ಅನೂಹ್ಯ ಸೆಳೆತಗಳು,  ಪಾಚಿಗಟ್ಟಿದ ಜಾರು ದಾರಿಯಲ್ಲಿ ಸಾವರಿಸಿ ನಿಲ್ಲಲಾಗದೆ ಜಾರಿದವರ ವೃತ್ತಾಂತಗಳು.  ಇವೆಲ್ಲದರ ನಡುವೆ ಎಲ್ಲರಂತೆ ಬಾಳುವ ಹಂಬಲ, ಸಂಸಾರದ ಕನಸು, ಗಂಡ ಮನೆ ಮಕ್ಕಳು ಇವರೆಲ್ಲರ ಸಂಸರ್ಗ ಇರಬೇಕಿತ್ತೆಂಬ  ದೂರದಾಶೆ.  ಜೊತೆಗೆ ಅದೆಲ್ಲಾ ತಮ್ಮ ಪಾಲಿಗೆ ಗಾಳಿಗೋಪುರವೆಂಬ ಅರಿವು!!”

ಸಂಸ್ಕೃತದ ‘ವೇಶ್ಯಾ’ ಶಬ್ದದ ಮೂಲದಿಂದ ಬಂದು ಜನಜನಿತವಾಗಿರುವ ವೇಶ್ಯೆ ಅಥವಾ ಇಂದಿನ ‘ಲೈಂಗಿಕ ವೃತ್ತಿ’ ಮಹಿಳೆಯರ ಬದುಕುಗಳಿಗೆ ಗಂಭೀರವಾದ ಹೊಣೆಯೊಂದನ್ನು ಹೊತ್ತು ಒಳಹೊಕ್ಕಿದೆ. ಆ ನಿರ್ಧಾರ ಮಾಡಿದ ದಿನ ಅದೆಂಥಾ ದುಗುಡ, ಭಯ, ದ್ವಂದ್ವ ಒಳಗೊಳಗೇ ಹುಟ್ಟಿದ ನಡುಕ, ನಿದ್ದೆಗೆಡಿಸಿ ಬೆಚ್ಚಿಸಿದ ಆ ರಾತ್ರಿಗಳು ನನ್ನೊಳಗೇ ಒಂದು ಸಂಘರ್ಷವನ್ನು ತೀವ್ರ ಗೊಳಿಸಿದ್ದವು. 

ಇಟ್ಟ ಹೆಜ್ಜೆ ಹಿಂತೆಗೆಯಲಿಲ್ಲ. ಒಂದು ಸಣ್ಣ ಕಿಂಡಿಯೊಳಗಿಂದ ಪ್ರವೇಶಿಸಿ ಭಾರತದಾದ್ಯಂತ ತೆರೆದಿಟ್ಟಿರುವ ಆ ಜಾಲದೊಳಗೆ ಮೈಯ್ಯೆಲ್ಲ ಕಣ್ಣಾಗಿ ಒಳಹೊಕ್ಕೇ ಬಿಟ್ಟೆ. ಒಂದು mental distance ಕಾಯ್ದುಕೊಳ್ಳದೇ ಹೋಗಿದ್ದರೆ ಇವತ್ತು ಇಷ್ಟು ಪ್ರಶಾಂತವಾಗಿ ಕುಳಿತು ಈ ಅನುಭವಗಳನ್ನು ನಿಮ್ಮ ಮುಂದೆ ಹರವಿ ಕೊಳ್ಳಲು ಆಗುತ್ತಿರಲಿಲ್ಲವೇನೋ! ಈ ಸಮುದಾಯ ಶತ ಶತಮಾನಗಳಿಂದಲೂ ಅದೆಂಥಾ ‘ಕಳಂಕಿತ’ ಹಣೆಪಟ್ಟಿ ಹೊತ್ತುಕೊಂಡೇ ಬರುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿರುವುದೇ.

ವೇಶ್ಯಾವಾಟಿಕೆ ‘ಅತ್ಯಂತ ಪ್ರಾಚೀನ ವೃತ್ತಿ’ ಅನ್ನೋ ಗರಿಮೆಯನ್ನು ಈ ವ್ಯವಸ್ಥೆ ನಿರೂಪಿಸುತ್ತಲೇ ಬಂದಿದೆ. ಈ ವೃತ್ತಿಯ ಸುತ್ತ ತನ್ನ ಕಬಂಧ ಬಾಹುಗಳನ್ನು ಚಾಚಿ ಅನಾಯಾಸವಾಗಿ ತನ್ನ ತೃಷೆಯನ್ನು ಹಿಂಗಿಸಿಕೊಳ್ಳುವ ಹುನ್ನಾರದಲ್ಲಿ ಇರದಿದ್ದ ಮಡಿವಂತಿಕೆ, ಕಣ್ಣು ಮುಚ್ಚಿ ಹಾಲು ಕುಡಿಯುವ ಹುಂಬತನದಲ್ಲಿ ಕಣ್ಣಿಗೆ ರಾಚುತ್ತದೆ.

ಪ್ರಾಚೀನ ವೃತ್ತಿ ಎಂದು ಹೇಳುವಾಗಲೇ  ವ್ಯವಸ್ಥೆಯ ದ್ವಿಮುಖ ಧೋರಣೆ ಬಯಲಾಗುತ್ತದೆ. ಈ ಧೋರಣೆಯು ಪ್ರಾಚೀನದಿಂದಲೂ ಹೆಣ್ಣಿನ ಮೇಲೆ ಮೆರೆದಿರುವ ದೌರ್ಜನ್ಯದ ಪ್ರತೀಕ. ಇನ್ನು  ಕೆಲವು ಪ್ರಶ್ನೆಗಳಾದ ಪುನರ್ವಸತಿ, ಪ್ರೋತ್ಸಾಹ, ಮಾನ್ಯತೆ ಇವುಗಳನ್ನು ಅಷ್ಟೊಂದು ಸಲೀಸಾಗಿ ಅಥವಾ ಪ್ರಬುದ್ಧವಾಗಿ ವಿಶ್ಲೇಷಿಸಲು ಹೊರಟರೆ ಪ್ರತಿಫಲ ಶೂನ್ಯವಾಗಿರುತ್ತದೆ.

 ಈ ಸಮಸ್ಯೆಯನ್ನು ಒಂದು ಸಮಾಜದ ಬುನಾದಿಯಾದ ಹಲವು ವಿಚಾರಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಅಭ್ಯಸಿಸಬೇಕಾಗುತ್ತದೆ.  ಪ್ರಮುಖವಾಗಿ ಧರ್ಮ, ಪರಂಪರೆ, ಪ್ರಾಚೀನತೆ, ಐತಿಹಾಸಿಕ ಮಜಲುಗಳ, ಸಿದ್ಧಾಂತಗಳ ಬೇರುಗಳಲ್ಲಿ ಅಗತ್ಯ- ಅನಿವಾರ್ಯತೆಗಳ ನೆಲೆಗಟ್ಟಿನಲ್ಲಿ ನೋಡಬೇಕಾಗುತ್ತದೆ. ಒಂದು ‘ಸಾಮಾಜಿಕ ಅನಿಷ್ಠವಾಗಿ’ ಎಲ್ಲರ ರಕ್ತ ಸಂಚಲನವನ್ನು ತ್ವರಿತಗೊಳಿಸುವ ಈ ಪ್ರಶ್ನೆಯನ್ನು ಅರ್ಥೈಸಿಕೊಳ್ಳಬೇಕಾಗಿದೆ.

ಮೊದಲನೇಯದಾಗಿ ಮಹಿಳೆ ಅದರಲ್ಲೂ ಲೈಂಗಿಕ ವೃತ್ತಿ ಮಹಿಳೆ ಜಗತ್ತಿನಾದ್ಯಂತ ಅತ್ಯಂತ ಶೋಷಣೆ ಅನುಭವಿಸುತ್ತಿದ್ದಾಳೆ ಎನ್ನುವುದು ಅತಿಶಯೋಕ್ತಿಯೂ ಅಲ್ಲ ಅಥವಾ  ಆಧಾರರಹಿತವಾದುದೂ ಅಲ್ಲ. ಹಾಗೆಯೇ  ಈ ಬಗ್ಗೆ ಅಭಿಪ್ರಾಯ ಮೂಡಲೂ ಸಾಧ್ಯವಿಲ್ಲ.  ಆದರೆ ಅತ್ಯಂತ ಶ್ರೀಮಂತ ರಾಷ್ಟ್ರಗಳೂ ಸೇರಿದಂತೆ ಜಗತ್ತಿನಾದ್ಯಂತ ಲೈಂಗಿಕವೃತ್ತಿಯು ಇಷ್ಟೊಂದು ನಿರ್ಲಕ್ಷ ಹಾಗೂ ಔದಾಸೀನ್ಯಕ್ಕೆ ಏಕೆ ತುತ್ತಾಗಿದೆ?   ಹಾಗೆಂದು ಇದ್ಯಾವುದೂ ರಾತ್ರೋರಾತ್ರಿ ಘಟಿಸಿದ್ದಲ್ಲ….. ಸಾವಿರಾರು ವರ್ಷಗಳ ದೀರ್ಘಕಾಲದ ಪ್ರಾಚೀನತೆ, ಧಾರ್ಮಿಕ  ಸ್ವಾರ್ಥಗಳು, ಲಾಲಸೆಗಳು, ಐತಿಹಾಸಿಕ ಘಟ್ಟಗಳು ನಮ್ಮೊಂದಿಗಿವೆ.

ಲೈಂಗಿಕವೃತ್ತಿ ಸಮುದಾಯದೊಂದಿಗೆ ನಡೆಸಿದ ಅಧ್ಯಯನ ಮತ್ತು ಅವರನ್ನು ಒಗ್ಗೂಡಿಸುವಿಕೆ ಯ ಪ್ರಯತ್ನದ ಅನುಭವದ ಹಾದಿಯುದ್ದಕ್ಕೂ ನನ್ನನ್ನು ಬಹಳ ಮುಖ್ಯವಾದ ಪ್ರಶ್ನೆಗಳು ಕೆಲವು ಪ್ರಶ್ನೆಗಳು ಕಾಡುತ್ತಿದ್ದವು.

   * ವೇಶ್ಯಾವೃತ್ತಿಯು ಅನೂಚಾನವಾಗಿ ಈ ಸಮಾಜದೊಂದಿಗೆ ಜೀವಂತವಾಗಿ, ಸಕ್ರಿಯವಾಗಿ ನಡೆದು ಬರುತ್ತಿರುವುದಾದರೂ ಏಕೆ ? 

 * ವೇಶ್ಯಾವೃತ್ತಿಯೊಂದು  ಸಾಮಾಜಿಕ ಅನಿಷ್ಠವಾಗಿದ್ದಲ್ಲಿ ಯಾವ ಕಾರಣಕ್ಕಾಗಿ ಇದನ್ನು ನಿರ್ಮೂಲನ ಮಾಡಲು ಸಾಧ್ಯವೇ ಆಗಿಲ್ಲ? 

* ಮನುಷ್ಯನ ಯಾವ ಮಾನಸಿಕ ಒತ್ತಾಸೆಗಳು, ಉತ್ಕಟತೆಗಳು ಈ  ವೃತ್ತಿಯನ್ನು ನಿರಂತರವಾಗಿ ಶತಶತಮಾನಗಳಿಂದಲೂ ಕಾಯ್ದುಕೊಂಡು ಬಂದಿದೆ?  ಇದಕ್ಕೆ ವೈಜ್ಞಾನಿಕ ಕಾರಣವಾದರೂ ಏನು? * ಸಮಾಜದಲ್ಲಿದ್ದ ಅನಿಷ್ಟಗಳಾದ ಸತಿ ಪದ್ಧತಿ, ಬಾಲ್ಯವಿವಾಹ, ಅಸ್ಪೃಶ್ಯತೆಯಂತವುಗಳನ್ನು ತೊಡೆದುಹಾಕಲು ತಮ್ಮ ಬದುಕುಗಳನ್ನು ಪಣವಾಗಿಟ್ಟು ಹೋರಾಡಿದ ಅನೇಕ ಸಮಾಜ ಸುಧಾರಕರುಗಳಿಗೆ ಏಕೆ ವೇಶ್ಯಾವಾಟಿಕೆ ಒಂದು ಜಟಿಲ ಪ್ರಶ್ನೆಯಾಗಿಲ್ಲ?

* ವೇಶ್ಯಾವೃತ್ತಿಯ ಮಹಿಳೆಯು ಸ್ವತಃ ತನ್ನನ್ನೇ ಬಹಳ ಪ್ರಮುಖಳು ಎಂದು ಪರಿಗಣಿಸದೇ ಇರುವ ಪರಿಸ್ಥಿತಿಯಲ್ಲಿ ಅವಳ ಆರೋಗ್ಯ ಮತ್ತು ಜೀವನಗಳನ್ನು ಕಾಪಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಬಲ್ಲಳು  ಎಂದು ಆಲೋಚಿಸುವುದಾದರೂ ಹೇಗೆ ?

 * ಭಾರತದಾದ್ಯಂತ ಪ್ರಗತಿಪರ, ಎಡಪಂಥೀಯ ಚಳುವಳಿಗಳೂ ಕೂಡ ವೇಶ್ಯಾವಾಟಿಕೆಯಂತಹ ಒಂದು ಜಟಿಲವಾದ,  ಸಂಕೀರ್ಣವಾದ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದು ಪರಿಗಣಿಸದಿರುವುದಾದರೂ ಏಕೆ?

* ಬಹುತೇಕ ದಲಿತ ಹಾಗೂ ಬುಡಕಟ್ಟು ಹೆಣ್ಣು ಮಕ್ಕಳೇ  ಬಲಿಯಾಗುತ್ತಿರುವ ವೇಶ್ಯಾವಾಟಿಕೆಯ ಬಗ್ಗೆ  ದಲಿತ ಚಳುವಳಿಗಳೂ ಕೂಡ ಒಂದು ಸ್ಪಷ್ಟ ಧ್ವನಿ ಎತ್ತಿಲ್ಲವಾದರೂ ಏಕೆ ?

  ‘ವೇಶ್ಯಾವಾಟಿಕೆ’ ಎನ್ನುವಾಗಲೇ ಈ ಸಮಾಜದ ಬಿಳಿಲು-ಬೇರುಗಳಲ್ಲಿ  ರೂಪಿತವಾದ ಮಡಿವಂತಿಕೆಯ ಮನಸ್ಸುಗಳು ಒಂದಷ್ಟು ಪ್ರಶ್ನೆಗಳನ್ನು ಮುಂದಿಟ್ಟುಬಿಡುತ್ತವೆ. 

  * ಇದರಿಂದ ಹೊರಗೆ ಬರಲು ಸಾಧ್ಯವಿಲ್ಲವೇ?

* ಬದುಕಲು ಬೇರೆ ದಾರಿಗಳಿಲ್ಲವೇ? ಎಲ್ಲರೂ ವೇಶ್ಯಾ ವೃತ್ತಿಯನ್ನೇ ಮಾಡಿ ಬದುಕುತ್ತಾರಾ ? 

* ಬದುಕಲು ಸುಲಭಮಾರ್ಗ ಮಾಡಿಕೊಂಡಿದ್ದಾರೆ ಅಷ್ಟೆ !

*ಅವರ ಬಗ್ಗೆ ಮಾತನಾಡಿ ಆ ವೃತ್ತಿಯನ್ನು ಪ್ರೋತ್ಸಾಹಿಸುತ್ತಿದ್ದೀರಿ ??

 ಈ ಪ್ರಶ್ನೆಗಳು ಅವರವರದ್ದೇ ನೆಲೆಗಳಲ್ಲಿ ನಿಂತು ಈ  ಸಮುದಾಯವನ್ನು ಪರಿಭಾವಿಸುವ ಪರಿಯನ್ನು ತೆರೆದಿಡುತ್ತದೆ. ಲೈಂಗಿಕವೃತ್ತಿ ಮಹಿಳಾ ಸಮುದಾಯದೊಂದಿಗೆ ಬಹಳವಾಗಿ ಬದ್ಧತೆಯೊಂದಿಗೆ, ಪೂರ್ಣವಾದ ಒಂದು ಸಾಮುದಾಯಿಕ ಹೋರಾಟವನ್ನಾಗಲೀ,  ಒಗ್ಗೂಡಿಸುವಿಕೆ ಪ್ರಯತ್ನವನ್ನಾಗಲೀ  ಏಕೆ ಯಾರೂ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ? 

ಸಾಮಾಜಿಕ ಅನಿಷ್ಟಗಳ ವಿರುದ್ಧ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು ಆ ಹೋರಾಟಕ್ಕೊಂದು  ಸಾಮೂಹಿಕ ಆಂದೋಲನ ರೂಪ ಕೊಟ್ಟು ಅವುಗಳನ್ನು ತೊಡೆದು ಹಾಕುವ ಪ್ರಯತ್ನಗಳನ್ನು ನಡೆಸಿದ್ದಾರೆ,  ಅವುಗಳಿಗೆಲ್ಲಾ ಸಾಮಾಜಿಕ ಭಾಗವಹಿಸುವಿಕೆ, ಬೆಂಬಲಗಳು ದೊರೆತಿವೆ.  ಇಂತಹ  ಸಾಮಾಜಿಕ ಕಳಂಕಗಳ ಪರ್ಯಾಯಕ್ಕಾಗಿ, ವಿಮೋಚನೆಗಾಗಿ, ಪರಿಣಾಮಕಾರಿಯಾದ ಸಂಘಟಿತ ಶಕ್ತಿಯನ್ನು ಹೋರಾಟಗಳನ್ನು ಒಗ್ಗೂಡಿಸುವಲ್ಲಿ ಏಕೆ ವೇಶ್ಯಾವಾಟಿಕೆಯಂಥ ಪ್ರಶ್ನೆ ಸವಾಲಾಗಲಿಲ್ಲ ??

 ‘ವೇಶ್ಯಾವಾಟಿಕೆ’  ಮಡುವಿನಲ್ಲಿ ಲಕ್ಷಾಂತರ ಹಸುಗೂಸುಗಳು, ಅಮಾಯಕ ಯುವತಿಯರು ನಿರಂತರವಾಗಿ ತಮ್ಮ ಬದುಕನ್ನು, ಕನಸುಗಳನ್ನು ಬಲಿಕೊಡುತ್ತಲೇ  ಇದ್ದರೂ, ಇಂದಿಗೂ ಅಂತಹ ಒಂದು ದಂಧೆಯ ವಿರುದ್ಧ ಒಂದು ಯಶಸ್ವೀ ಪ್ರಯೋಗ ನಡೆದಿಲ್ಲ ವಾದರೂ ಏಕೆ?

‍ಲೇಖಕರು ಲೀಲಾ ಸಂಪಿಗೆ

October 28, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಗೀತಾ ಎನ್ ಸ್ವಾಮಿ

    ಮೋಜಿನ ಹಾಗೂ ವಿಕೃತ ಸುಖಗಳ ನಿರ್ವಹಿಸುವ ಗಂಡು ಸಮಾಜಕ್ಕೆ ಲಕ್ಷಾಂತರ ಮಂದಿ ಮಹಿಳೆಯರು ಹಸುಗೂಸುಗಳು ನರಳುವುದು ಕಾಣಲ್ಲ. ಶೋಷಿತ ವರ್ಗದ ಪರ ದಲಿತ ಸಂಘಟನೆಗಳು ದನಿ ಎತ್ತದಿರುವ ಕುರಿತು ವ್ಯಥೆ ಆಯ್ತು ಅಕ್ಕ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: