ಕುಮಾರವ್ಯಾಸನ ‘ಭೀಮ’ನೂ, ಭೀಮನ ಅಮಾವಾಸ್ಯೆಯೂ..

ರೇಣುಕಾರಾಧ್ಯ. ಎಚ್.ಎಸ್.

ಭೀಮನ ಅಮಾವಾಸ್ಯೆ ಇತ್ತೀಚಿಗೆ ಮುಗಿಯಿತು. ಈ ಭೀಮನ ಅಮಾವಾಸ್ಯೆಗೂ ಹೆಣ್ಣುಮಕ್ಕಳು (ವಿವಾಹಿತ) ತಮ್ಮ ಪತಿ ಪೂಜೆ, ಹಾಗು ಗುಂಡು ಕಲ್ಲು ಪೂಜೆ ಮಾಡುವ (ಅವಿವಾಹಿತ ಹೆಣ್ಣು ಮಕ್ಕಳು) ಆಚರಣೆಯ ಹಿಂದಿನ ಕತೆ ನನಗೆ ಗೊತ್ತಿಲ್ಲ.

ನನಗೆ ಗೊತ್ತಿರೋದು ನಮ್ಮ ಕುಮಾರವ್ಯಾಸನ ‘ಭೀಮ’ ಮಾತ್ರ. ಅವನೆಂದರೆ ಮಡದಿಯಾದ ದ್ರೌಪದಿಗೆ ಅದೆಷ್ಟು ಪ್ರೀತಿ, ಸಲುಗೆ ಎಂದರೆ ಅವಳ ಮಾತಲ್ಲೇ ಕೇಳಿ.

‘ಎಲ್ಲರೊಳು ಕಲಿಭೀಮನೆ ಮಿಡುಕುಳ್ಳ ಗಂಡನು ಹಾನಿ ಹರಿಬಕೆ ನಿಲ್ಲದೆ ಅಂಗೈಸುವನು,ಕಡು ಹೀಹಾಳಿಯುಳ್ಳವನು’

ಇಂಥ ದ್ರೌಪದಿ ತನಗೆ ಮತ್ತೆ ಮತ್ತೆ ಆಗುತ್ತಿರುವ ಅವಮಾನ, ಹಿಂಸೆ, ನೋವಿನಿಂದ ಅಸಹಾಯಕಳಾಗಿ ಎದುರಿಗಿದ್ದ ಭೀಮನ ಕುರಿತು “ನಿನ್ನನ್ನು ಸೇರಿ ನಿನ್ನ ಸಹೋದರರು ನನ್ನ ಇವತ್ತಿನ ಈ ಸ್ಥಿತಿಗೆ ಕಾರಣರು ನೀವು ಮೂರು ಲೋಕದ ಗಂಡರು ಒಬ್ಬಳನು ಆಳಲಾರಿರಿ ಗಂಡರೋ ನೀವು ಭಂಡರೋ ಎಂದು ಹೀಯಾಳಿಸಿ, “ನೀವು ಬಲ್ಲಿದರೆಂದು ಹೊಕ್ಕರೆ ಹೆಣ್ಣ ಕೊಂದಿರಿ”  ಎನ್ನುತ್ತಾಳೆ.

ಆ ಯಮ ಕೋಪಗೊಂಡರೆ ಅವನನ್ನೆ ಕೊಲ್ಲುತ್ತೇವೆ ಎಂದು ಬಡಾಯಿಕೊಚ್ಚಿಕೊಳ್ಳುವ ನೀವು ನನ್ನೊಬ್ಬಳನ್ನು ಆಳಲಾರಿರಿ, ಪಾಪಿಗಳ ಅಪಕೀರ್ತಿಗೆ ಕೊಂಚ ಅಳುಕಿರಿ, ಹೆಣ್ಣನ್ನು ಕಾಪಾಡುವ ಜವಾಬ್ದಾರಿ (ತೋಳಹೊರೆ) ನಿಮಗಿಲ್ಲ. ಕ್ಷತ್ರಿಯ ವಂಶದಲ್ಲಿ ನಿಮ್ಮಂಥವರು ಅದೇಕೆ ಹುಟ್ಟಿದಿರಿ, ನೀವು ಕೂಳಿಗಾಗಿ ಬದುಕುವವರು ಜೀವನ ಮೌಲ್ಯಕಲ್ಲ, ನಿಮ್ಮಂಥವರಿಗೆ ಸಂಸಾರವೇಕೆ ಎಂದು ಹೀಯಾಳಿಸಿ, ನಾನು ಸಾಯುತ್ತೇನೆ ಎಂದು ದುಃಖದಿಂದ ನುಡಿಯುತ್ತಾಳೆ.

ದ್ರೌಪದಿಯ ಮಾತು ಕೇಳಿ ಭೀಮನ ಕಣ್ಣಲ್ಲಿ ಕಣ್ಣೀರು ತುಂಬಿ, ಅಳುತ್ತಾ, ಮನಕರಗಿ, ರೋಷ ಹೆಚ್ಚಾಗಿ, ಮನದಲ್ಲೆ ತನ್ನ ಹಗೆಗಳನು ಹಿಂಡಿ, ಮೆಲ್ಲನೆ ದ್ರೌಪದಿಯ ಅಪ್ಪಿ, ತನ್ನ ಸೆರಗಲ್ಲಿ ಅವಳ ಕಣ್ಣೀರ ಒರೆಸಿ, ಕುರುಳ ನೇವರಿಸಿ, ಗಲ್ಲವನು ಒರೆಸಿ, ಮುಂಡಾಡಿ ಮಂಚದ ಬಗಲಲ್ಲಿ ಇದ್ದ ತಂಬಿಗೆಯ ನೀರಲ್ಲಿ ಅವಳ ಮುಖ ತೊಳೆದು, ಇನ್ನು ದುಃಖವ ಬಿಡು ನಾನು ನಿನ್ನ ಜೊತೆಗಿದ್ದೇನೆ ಎಂದು ಸಂತೈಸುತ್ತಾನೆ. ನೋವಿನಲ್ಲಿ, ಅಸಹಾಯಕತೆಯಲ್ಲಿ, ಒಂಟಿತನದಲ್ಲಿ ಸದಾ ಕಾಲ ಬದುಕುವ ಮಡದಿಗೆ ಇಷ್ಟು ಸಾಕಲ್ಲವೆ.

ಇದೇ ಭೀಮನು ಈ ಹಿಂದೆ ಪಾಂಡವರು ವನವಾಸದಲ್ಲಿದ್ದಾಗ ಒಮ್ಮೆ ದ್ರೌಪದಿ ಒಂದು ಬೆಳಿಗ್ಗೆ ತಮ್ಮ ಕಾಡಿನ ಗುಡಿಸಲ ಮುಂದೆ ಗಾಳಿಯಲ್ಲಿ ಹರಡಿಬಂದ ಸೌಗಂಧಿಕ ಪುಷ್ಪದ ಸುಂಗಂಧಕ್ಕೆ ಮನಸೋತು ಈ ಸುಗಂಧವೆ ಹೀಗಿರಬೇಕಾದರೆ ಇದರ ಹೂವು ಅದೆಷ್ಟು ಚೆಂದವೋ ಎಂದು ಬಯಸಿ, ತನ್ನ ಬಯಕೆಯ ಈಡೇರಿಸುವವನು ಭೀಮನೊಬ್ಬನೆ ಎಂದು ತಿಳಿದು ಭೀಮನಿಗೆ ಹೇಳಿದ ಮರುಕ್ಷಣವೇ ಆ ಪುಷ್ಪದ ಗಂಧದ ದಾರಿ ಹಿಡಿದು ಬಂದು ಅದರ ಕಾವಲಿಗಿದ್ದ ರಕ್ಕಸರ ಜೊತೆ ಹೊಡೆದಾಡಿ ಹೂ ತಂದು ದ್ರೌಪದಿ ಕೈಗಿತ್ತು ತಾನು ಖುಷಿ ಪಡುತ್ತಾನೆ.

ಇಂಥ ಭೀಮನನ್ನು ಸೃಷ್ಟಿಸಿರುವ ನಾರಾಣಪ್ಪನ ಕಾವ್ಯದ ಕಾರಣದಿಂದ (ಏಕೆಂದರೆ ಹಿಂದೆ ನಾರಣಪ್ಪನ ಕಾವ್ಯ ನಮ್ಮ ಹಳ್ಳಿ ಹಳ್ಳಿಗಳಲ್ಲಿ ಪ್ರತಿದಿನ ವಾಚನಗೊಳ್ಳುತ್ತಿತ್ತು) ಈ ಭೀಮನ ಅಮಾವಾಸ್ಯೆ ಹಬ್ಬ ಬಂತೊ ಎನೋ ಗೊತ್ತಿಲ್ಲ ತಿಳಿದವರು ಹೇಳಬೇಕು.

‍ಲೇಖಕರು Avadhi Admin

August 15, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: