ಕುಮಾರವ್ಯಾಸನ ಕೃಷ್ಣ: ಯು ಆರ್ ಪ್ರತಿಕ್ರಿಯೆ

‘ಅವಧಿ’ ರೂಪಿಸಿದ ಯು ಆರ್ ಅನಂತಮೂರ್ತಿ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಬರಹ

***

ಕುಮಾರವ್ಯಾಸನ ಕೃಷ್ಣ: ಒಂದು ಪ್ರತಿಕ್ರಿಯೆ

ನಾನಿಲ್ಲಿ ಒಂದೆರಡು ಮಾತು ಹೇಳಬಯಸುತ್ತೇನೆ. ಈ ಮಾತುಗಳು ಇಂದು ಕಿ.ರಂ. ನೀಡಿದ ಪ್ರವಚನದಿಂದಲೇ ಹುಟ್ಟಿದವು. ಬೆಳಿಗ್ಗೆ ಡಿ.ಆರ್. ಮತ್ತು ಕಿ.ರಂ. ಸಿಕ್ಕಾಗ ನನಗೆ ಥಟ್ಟನೆ ಬೇಂದ್ರೆಯವರ ಒಂದು ಕವಿತೆ ನೆನಪಾಯಿತು. ಆ ಕವಿತೆಯ ಹೆಸರು `ಕನಸಿನೊಳಗೊಂದು ಕಣಸು’ ಅಂತ. ಆ ಕವಿತೆಯಲ್ಲಿ ಏನಾಗತ್ತೆ ಅಂದರೆ- ಒಂದು ಕನಸು ಅದು. ಬೇಂದ್ರೆ ಹೋಗತಾ ಇದ್ದಾರೆ. ಎದುರುಗಡೆ ಒಬ್ಬಳು ಹೆಂಗಸು ಕಾಣಿಸುತ್ತಾಳೆ. ಕವಿ ಸಾಮಾನ್ಯವಾಗಿ ಕೇಳುವಂತೆ ಸಹಜವಾಗಿ ಕೇಳತಾರೆ: `ಯಾರು ನಿಂದವರಲ್ಲಿ ತಾಯೆ ಎಂದೆ’. ಅವಳೂ ಸಹಜವಾಗಿಯೇ ಮೊದಲೊಂದು ಉತ್ತರ ಕೊಡುತ್ತಾಳೆ. ಆದರೆ ಅವಳ ಉತ್ತರದಲ್ಲಿ ಏನೋ ಒಂಚೂರು ಕೊಂಕು ಇರುತ್ತೆ. ಇವರಿಗೆ ಕುತೂಹಲ ಹೆಚ್ಚಾಗತ್ತೆ. ಯಾರು ಅಂತ ಅವಳನ್ನ ಬೆದಕುತ್ತಾ ಪ್ರಶ್ನಿಸುತ್ತಾ ಹೋದಹಾಗೆ ಅವಳು- ಸಹಜವಾಗಿ ಕಾಣತಾ ಇದ್ದವಳು- ಕವಿಯ ಮನಸ್ಸಿನಲ್ಲಿ ಬೆಳೀತಾ ಹೋಗತಾಳೆ. ಬೆಳೀತಾ ಬೆಳೀತಾ ಅವಳು ಇನ್ಯಾರೂ ಅಲ್ಲ, ಕರ್ನಾಟಕದ ದೇವಿ, ಕನ್ನಡಮಾತೆ, ನಾಡದೇವಿ ಅಂತ ಹೊಳಿಯುತ್ತೆ. ಕರ್ನಾಟಕದ ದೇವಿ ಇರಬಹುದು ಎಂದು ಕವಿಯ ಮನಸ್ಸಿನಲ್ಲಿ ಬೆಳೆಬೆಳೆದ ಹಾಗೆ ಅವಳೂ ಬೆಳೆಯುತ್ತಾ ಹೋಗುತ್ತಾಳೆ. ಕೇಳುವವನ ಮನಸ್ಸು ಬೆಳೆದ ಹಾಗೆ ಅವಳು ಬೆಳೆಯೋದು. ಕಾಗ್ನಿಶನ್ ಇದೆಲ್ಲ, ಅವನ ಅರಿಯುವಿಕೆಯ ಬೆಳವಣಿಗೆಯಲ್ಲಿ ಅವಳು ಬೆಳೀತಾಳೆ. ಹೀಗೆ ಬೆಳೀತಾ ಹೋದಾಗ ಇವನನ್ನ ಸರ್ವತ್ಯಾಗಕ್ಕೂ ಕೇಳುವ ಉತ್ತೇಜಿಸುವ ಸ್ಥಿತಿಯನ್ನು ಅವಳು ಮುಟ್ಟುತಾಳೆ. ಮೊದಲು ಅವಳನ್ನ ಕಂಡಾಗ `ಯಾರು ನಿಂದವರಲ್ಲಿ ತಾಯೆ?’ ಅಂದರೆ, `ಏನವ್ವಾ, ಯಾರಮ್ಮ ನೀನು?’ ಎಂಬಂತೆ ಕೇಳಿದವನು. ಈಗ ಗಾಬರಿಯಿಂದ ಹಿಂಜರಿಕೆಯಿಂದ ಕೇಳಬೇಕಾಗತ್ತೆ. `ಇಲ್ಲೆನ್ನಲಾರೆ ನಾನಹುದೆನ್ನಲಮ್ಮೆ’ ಅಂತಂದವನು ಕೊನೆಗೆ ಧೈರ್ಯಮಾಡಿ, `ಚಂಡಿ ಚಾಮುಂಡಿ ಪೇಳ್ ಬೇಕಾದುದೇನು?’ ಎಂದು ಕೇಳತಾನೆ. ಅವಳು ತನಗಾಗಿ `ಗಂಡುಸಾದರೆ ನಿನ್ನ ಬಲಿ ಕೊಡುವೆಯೇನು?’ ಅಂತ ಕೇಳತಾಳೆ. ಇದೊಂದು ಅದ್ಭುತವಾದ ಪದ್ಯ. ಅದು ಅರಿಯುವಿಕೆಯ ಬಗ್ಗೇನೆ ಇರುವ ಪದ್ಯ. ಅವಳ ಬೆಳವಣಿಗೆ ಮತ್ತು ಇವನ ಮನಸ್ಸಿನ ಬೆಳವಣಿಗೆ- ಇದು ತಾತ್ತಿ ್ವಕವಾಗಿ ತುಂಬಾ ಆಸಕ್ತಿ ಹುಟ್ಟಿಸುವಂಥದ್ದು.
ಹಿಂದೊಮ್ಮೆ ನಾನು ಈ ಪದ್ಯದ ಜೊತೆಗೆ ಬಿ.ಎಂ.ಶ್ರೀಯವರ `ಕನ್ನಡ ತಾಯ ನೋಟ’ ಎಂಬ ಪದ್ಯವನ್ನ ಇಟ್ಟು ಹೋಲಿಸಿದ್ದೆ. ಅದರಲ್ಲಿ ಕನ್ನಡ ತಾಯಿಯ ಬಗ್ಗೆ ಹೇಳತಾ ಅವರು- ತೆಲುಗಿನವರು ಮುಂದುವರೀತಾ ಇದ್ದಾರೆ, ಅಮ್ಮಾ ನೀನು ಯಾತಕ್ಕೆ ಮುಂದುವರಿದಿಲ್ಲ- ಅಂತ ಕೇಳುವ ಪದ್ಯವದು. ಅದು ಬರೀ ಕರ್ನಾಟಕದ ಮಟ್ಟಿಗೆ ಅಗುವಂತಹ ಪದ್ಯ. ಆದರೆ ಬೇಂದ್ರೆಯವರ ಈ ಕವಿತೆ ಮಾತ್ರ ಐರ್ಲೆಂಡಿನವರು ಐರಿಶ್ ತನ್ನತನಕ್ಕಾಗಿ ಹೋರಾಡೋದಕ್ಕೂ ಬಳಸಬಹುದಾದ ಕವಿತೆ ಇದು. ಬರಿಯ ಕನ್ನಡ ತಾಯಿಯ ಬಗೆಗಿನ ಪದ್ಯ ಅಲ್ಲ. ಯಾಕೆಂದರೆ, ಇದು ಅರಿವಿನ ಏಳಿಕೆಯನ್ನೇ ಕುರಿತ ಕವಿತೆಯಾದ್ದರಿಂದ ಅದು ಐರಿಷ್ ಜನರಿಗೂ ಆಗಬಹುದು, ಹಂಗೇರಿಯನ್ನರಿಗೂ ಆಗಬಹುದು, ಪ್ಯಾಲಿಸ್ತೇನಿಯನ್ನರಿಗೂ ಆಗಬಹುದು. ತನ್ನತನದ ಹುಡುಕಾಟದಲ್ಲಿ ಮಗ್ನರಾಗಿರುವ ಯಾರಿಗೆ ಬೇಕಾದರೂ ಅನ್ವಯಿಸಬಹುದು. ಹೀಗೆ ಯಾರು ಬೇಕಾದರೂ ತಮ್ಮದನ್ನಾಗಿ ಬಳಸಬಹುದಾದ ಒಂದು ವಿಶೇಷ ಕವಿತೆ ಬೇಂದ್ರೆಯವರದು.
ಇದರಲ್ಲಿ ಒಂದು ಸಮಸ್ಯೆ ಇದೆ. ಅದು ಎಲ್ಲಾ ಕಾಲದಲ್ಲೂ ಮನುಷ್ಯನನ್ನ ಬಾಧಿಸಿರೋವಂಥ ಸಮಸ್ಯೆ. ನಮ್ಮ ನಡುವೆ ಒಬ್ಬ ದೇವರು ಇದ್ದಾನೆಯೆ? ಒಬ್ಬ ದೇವರೇ ಇದ್ದಾನೆಯೆ? ಅವನು ದೇವರು ಹೌದೋ ಅಲ್ಲವೋ? ಅನ್ನುವಂತಹ ಒಂದು ಪ್ರಶ್ನೆ ಇರತ್ತೆ ಅನ್ನೋದರಿಂದಲೇ ಪುರಾಣಗಳು ಹುಟ್ಟಿರೋದು. ಕುಮಾರವ್ಯಾಸನ ಭಾರತದಲ್ಲಿ – ಕೃಷ್ಣ ಗೊಲ್ಲ. ಕಪ್ಪಾಗಿದ್ದಾನೆ. ಮೀಸೆ ಬಿಟ್ಟಿದ್ದಾನೆ. ಅವನು ಹುಡುಗನಾಗಿದ್ದಾಗ ತನ್ನ ಮನೆಯಲ್ಲೇ ಇರಲಿಕ್ಕಾಗಲಿಲ್ಲ. ಇನ್ಯಾರದೋ ಮನೆಯಲ್ಲಿ ಬೆಳೆಯಬೇಕಾಗಿ ಬಂತು. ಅಲ್ಲಿ ದನಗಳನ್ನು ಕಾದುಕೊಂಡು ಇರಬೇಕಾಗಿ ಬಂತು. ಅಲ್ಲಿ ಕೆಲವು ಅದ್ಭುತಗಳನ್ನೆಲ್ಲ ಮಾಡಿದ್ದಾನೆ. ಹಾಗೆ ಮಾಡಿದ್ದಾನೆ ಅಂತ ನಾವು ಕೇಳಿದ್ದೀವಿ. ಆದರೂ ಅವನು ದೇವರು ಹೌದೋ ಅಲ್ಲವೋ ಅನ್ನುವಂತಹ ಸಮಸ್ಯೆ ಇದ್ದೇ ಇದೆ. ಅಷ್ಟೇ ಅಲ್ಲ, ಅವನು ದೇವರು ಅಂತ ಗೊತ್ತಾದ ಮೇಲೆ ಕೂಡ ಅವನು ಹೇಳಿದ ಹಾಗೆ ನಡೆದುಕೊಳ್ಳಬೇಕೋ ಬೇಡವೋ ಅನ್ನುವುದೂ ಸಮಸ್ಯೆಯಾಗಿ ಉಳಿಯುತ್ತೆ. ದುಯರ್ೊಧನನಿಗೆ ಅವನ ಮನಸ್ಸಿನಲ್ಲಿಯೇ ಅನ್ನಿಸತ್ತೆ- `ಇವನು ನನ್ನ ಮನಸ್ಸಿನಲ್ಲೇ ನಿಂತು ಸಂಧಿಯನ್ನು ಮುರಿಯುವ ಹಾಗೆ ಮಾಡುತ್ತಿದ್ದಾನಲ್ಲ!’- ಅಂತ. ಅಲ್ಲಿ ಇನ್ನೊಂದು ಸಂಗತೀನೂ ಬರತ್ತೆ ಅಂತ ಕಾಣತ್ತೆ. ಅವನು ಸಂಧಿಗೆ ಅಂತಲೇ ಹೊರಟಹಾಗೆ ಹೊರಟಿದ್ದಾನೆ. ಸಂಧಿ ಮಾಡೋ ಬಗ್ಗೆ ಬಹಳ ಸಿನ್ಸಿಯರ್, ಬಹಳ ಪ್ರಾಮಾಣಿಕ ಇರೋ ಹಾಗೆ ಕಾಣತಾನವನು. ಹಾಗೆಯೇ ಅತ್ತ ದ್ರೌಪದಿಗೆ, `ನಾನು ನಿನ್ನ ಹಿತವನ್ನೂ ನೋಡಿಕೋತೀನಿ’ ಅಂತ ಮಾತು ಬೇರೆ ಕೊಟ್ಟಿರತಾನೆ. ಅವನು ಕಳ್ಳನೂ ಕೂಡ! ಖದೀಮನೂ! ಅಲ್ಲವೆ?
ನಿಜವಾಗಿಯೂ ನಮ್ಮ ದೇಶ, ನಮ್ಮ ಗ್ರಹಿಕೆ – ಭಾರತದ ಗ್ರಹಿಕೆ ಬಹಳ ದೊಡ್ಡ ಸಮಸ್ಯೆಯನ್ನು ಎದುರಿಸಿರೋದು ಕೃಷ್ಣನಲ್ಲಿಯೆ. ಯಾಕೆಂದರೆ, ಅವನು ಕಳ್ಳ, ಖದೀಮ! ದುರ್ಯೋಧನನ ಪರವಾಗಿಯೂ ಬೇಕಾದಷ್ಟು ವಾದ ಇದೆಯಲ್ಲ. ಯಾಕೆಂದರೆ, ಪಾಂಡವರು ಕೌಂತೇಯರು. ನಿಜವಾಗಿಯೂ ನಾವು ಆಗಿನ ಕಾಲದ ಕ್ರಮಗಳನ್ನ, ಶಾಸ್ತ್ರಗಳನ್ನ ಎಲ್ಲ ನೋಡಿದರೆ- ಅವರು ತಂದೆಗೆ ಹುಟ್ಟಿದ ಮಕ್ಕಳಲ್ಲ, ತಂದೆಗೆ ಹುಟ್ಟಿದ ಮಕ್ಕಳಲ್ಲದಿರೋದರಿಂದಲೇ ಅವರಿಗೆ ರಾಜ್ಯಭಾರದ ಹಕ್ಕು ಸಿಗಬಾರದು ಅನ್ನೋದಕ್ಕೆ ಅವರ ಕಾಲದ ಸ್ಮೃತಿ-ಶಾಸ್ತ್ರ-ಸಂವಿಧಾನಗಳಲ್ಲಿ ಏನಾದರೂ ಕಾನೂನು ಇದ್ದಿರಬಹುದು. ಸರಿ, ಕೋಟರ್ಿಗೆ ಹೋಗಿದ್ದರೆ, ಸುಪ್ರೀಂಕೋಟರ್ಿನಲ್ಲಿ ಪಾಂಡವರು ಖಂಡಿತಾ ಸೋಲುತ್ತಿದ್ದರು- ಅವರು ತಂದೆಯ ಮಕ್ಕಳಲ್ಲ, ಕೇವಲ ಕೌಂತೇಯರು ಅನ್ನುವ ಕಾರಣಕ್ಕಾಗಿ. ಅವರನ್ನು ಹಂಗಿಸುವಾಗಲೆಲ್ಲ ಕೌರವ ಅವರನ್ನು `ಕೌಂತೇಯರು’ ಅಂತಲೇ ಹೇಳತಾನೆ. (ಧೃತರಾಷ್ಟ್ರ ಕೂಡ ಹಾಗೆಯೆ ಅಲ್ಲವಾ ಅಂತಂದರೆ, ಅದು ಕೋಟರ್ಿನಲ್ಲಿ ಇನ್ನೊಬ್ಬರು ಮಾಡುವ ವಾದವಾಗುತ್ತದೆ.) ಅಂದರೆ ಇಲ್ಲಿನ ವಾದ, ಇಲ್ಲಿನ ಪ್ರಶ್ನೆ ಏನಂದರೆ, ಇಲ್ಲಿ ಎಲ್ಲವೂ ಸಮಸ್ಯಾತ್ಮಕವೇ ಅನ್ನುವುದು. ಪ್ರತಿಯೊಂದು ಸಂಗತಿಯನ್ನೂ ಸಮಸ್ಯಾತ್ಮಕಗೊಳಿಸಲಾಗಿದೆ. ನಾವು ಅದನ್ನ ಸಮಸ್ಯಾತ್ಮಕ, ಪ್ರೋಬ್ಲೆಮಟೈಸ್ಡ್ ಅಂತ ಇತ್ತೀಚೆಗೆ ಹೇಳತೊಡಗಿದ್ದೇವೆ. ಪ್ರತಿಯೊಂದೂ ಸಮಸ್ಯಾತ್ಮಕ. ರಾಜತ್ವವೂ ಸಮಸ್ಯಾತ್ಮಕ. ರಾಜ್ಯ ಯಾರಿಗೆ ಸೇರಬೇಕು ಅನ್ನುವುದೂ ಸಮಸ್ಯಾತ್ಮಕ. ಇವನು ಈ ಕೃಷ್ಣ ಇಷ್ಟೆಲ್ಲ ಮಾಡಿದರೂ- `ಮುರಾರಿ’ ಅಂತ ಕರೆಸಿಕೊಳ್ಳತಾನೆ. ಗೋವರ್ಧನಗಿರಿಯನ್ನ ಎತ್ತತಾನೆ, ಎಲ್ಲ ಸರಿ; ಏನು ಮಾಡಿದರೂ- ಇವನು `ದೇವರು’ ಅನ್ನೋದು ಸಮಸ್ಯಾತ್ಮಕ. ದೇವರು ಹೌದು ಅಂತ ಗೊತ್ತಾದ ಮೇಲೆ ಕೂಡ ಅವನು ಹೇಳಿದ ಹಾಗೆ ತಾನು ನಡೀಬೇಕು ಅಂತನ್ನೋದು ಸಮಸ್ಯಾತ್ಮಕ. ಯಾಕೆಂದರೆ, ಈ ಪ್ರಪಂಚ ಹೀಗೆಯೇ ನಡೀಬೇಕು ಅನ್ನೋದಾದರೆ ದುಯರ್ೊಧನನಂಥವರೂ ನಡೀಬೇಕು, ಪಾಂಡವರಂಥವರೂ ನಡೀಬೇಕು. ಎಲ್ಲರೂ ನಡೀಬೇಕಲ್ಲಪ್ಪಾ! ಅದೂ ಕೂಡ ಸಮಸ್ಯಾತ್ಮಕ. ಹೀಗೆ ಇಲ್ಲಿ ಪ್ರತಿಯೊಂದೂ ಸಮಸ್ಯಾತ್ಮಕ.
ನಾವು ಒಬ್ಬ ದೇವರನ್ನ `ದೇವರು’ ಅಂತ ಹೇಗೆ ಗುರುತಿಸತೇವೆ? ಹೇಗೆ ರೆಕಗ್ನೆ ಸ್ ಮಾಡತೇವೆ? ಇದು ಸಮಸ್ಯಾತ್ಮಕ ಅಲ್ಲ ಅಂದರೆ, ಅಲ್ಲಿಯೂ ಅದೇ. ಇಸ್ಲಾಂನಲ್ಲಿಯೂ `ಇದು ಸಮಸ್ಯಾತ್ಮಕವೇ. ಯಾಕೆಂದರೆ, ಮಹಮ್ಮದನಿಗೆ ಎಲ್ಲರನ್ನೂ ಸೋಲಿಸಿ ಒಂದು ದೇವರನ್ನ ಸ್ಥಾಪಿಸಬೇಕು ಅನ್ನುವ ಹಠ. ಅವನು ಮಹಾ ದೊಡ್ಡ ಸಂತ, ಪ್ರವಾದಿ. ಒಬ್ಬ ದೇವರು ಅನ್ನೋ ಒಂದು ಕಲ್ಪನೆಯನ್ನ ಇಡೀ ಜಗತ್ತಿನಲ್ಲಿ ಸ್ಥಾಪಿಸಬೇಕು ಅಂತ ಹೊರಟವನು. ಆದರೆ ಅವನು ಕೆಲವು ಸಲ ಸೋಲಬೇಕಾಗತದೆ. ಆವಾಗ, ಮೂರು ದೇವತೆಗಳನ್ನ- `ಇವರೂ ನನ್ನ ದೇವರ ಕಡೆಗೇ ಒಯ್ಯುವ ವಾಹಕಗಳು ಅಂತ ಒಪ್ಪಿಕೊಳ್ಳಬಹುದು’- ಅಂತ ಕುರಾನಿನಲ್ಲಿ ಬರೆದುಬಿಡತಾನೆ. ನಂತರ ಅವನಿಗೆ-ನಾನು ಹಾಗೆ ಬರೆದದ್ದೇ ತಪ್ಪು, ನನ್ನ ಹತ್ತಿರ ನುರಿತವನು ದೇವರಲ್ಲ, ದೆವ್ವ, ಸೇಟನ್-ಅಂತ ಅನ್ನಿಸತ್ತೆ. ಅಂದರೆ, ದೇವರೇ ಬಂದು ನಿಮ್ಮ ಹತ್ತಿರ ಮಾತನಾಡಿದಾಗಲೂ ಹಾಗೆ ಬಂದು ಮಾತಾಡಿದವನು ದೇವರೋ ಅಥವಾ ದೆವ್ವವೋ ಅನ್ನೋ ಸಮಸ್ಯೆ ಇರುತ್ತೆ. ಈ ಮನುಷ್ಯ ಲೋಕದಲ್ಲಿ ಯಾವುದೂ ಸರ್ವಥಾ ಮೊದಲೇ ಸಿದ್ಧವಾದುದಲ್ಲ.

ಮಹಮ್ಮದನಿಗೆ ಅಂತಹ ಸಮಸ್ಯೆಗಳಿದ್ದಾವೆ. ಅದಕ್ಕೇ ಅವನ ಕಥೆ, ಕುರಾನಿನ ಕಥೆ ದೊಡ್ಡ ಕಥೆ. ಅವನಿಗೆ ಹೆಜ್ಜೆಹೆಜ್ಜೆಗೆ ಮತ್ತೆ ಆ ಸಮಸ್ಯೆ ಎದುರಾಗತ್ತೆ- ದೇವರು ಮಾತಾಡಿದ್ದೋ ಅಥವಾ ದೆವ್ವ ಮಾತಾಡಿದ್ದೋ ಅಂತ. ನೀವು ಕೇಳಿರಬಹುದು- `ಏಂಜಲ್ಸ್, ಅಂದರೆ ದೇವದೂತರು ಬಂದು ನನ್ನಿಂದ ಪದ್ಯಗಳನ್ನ ಬರೆಸತಾರೆ, ಆಮೇಲೆ ಅದನ್ನ ಸ್ವಲ್ಪ ತಿದ್ದತಾ ಇದ್ದರು’- ಅಂತ ಬ್ಲೇಕ್ ಹೇಳತಿದ್ದ. ದೇವದೂತರು ಬಂದು ತನ್ನ ಪದ್ಯಗಳನ್ನ ಬರೆದು ತಿದ್ದತಾ ಇದ್ದರು ಹಾಗೆ ಅನ್ನಿಸಿತ್ತು ಅವನಿಗೆ. ಮನುಷ್ಯನಾಗಿ ಹುಟ್ಟಿದವನಿಗೆ ಯಾವಾಗಲೂ ಅವನ ಕ್ರಿಯೆಗಿಂತ ಮುಂಚೆ ಈ ಸಮಸ್ಯೆ ಇರತ್ತೆ. ಹಾಗೆಯೇ ಮಹಮ್ಮದನಿಗೆ ಸಮಸ್ಯೆ ಇತ್ತು. ಆದರೆ, ದೇವರು ಈ ಪ್ರಪಂಚಕ್ಕೆ ಹೊರತಾಗಿ ಇರುವವನು- ಅಂದರೆ ಅವನು ಟ್ರಾನ್ಸೆಂಡೆಂಟರಿ- ಅಂತ ತಿಳಿದುಕೊಂಡಿರುವ ಧರ್ಮಗಳಿದ್ದಾವಲ್ಲ- ಕ್ರಿಸ್ತಧರ್ಮದ ಹಾಗೆ- ಅವರಿಗೆ ಈ ಪ್ರಪಂಚ ದೇವರಲ್ಲ. ಕ್ರಿಶ್ಚಿಯನರಿಗೆ ಕಾಣುವ ಈ ಪ್ರಪಂಚ ದೇವರಲ್ಲ; ಅವನು ಅದರಾಚೆಯವನು. ವಡ್ಸರ್್ವತರ್್ಗೆ ಅದೊಂದು ದೊಡ್ಡ ಸಮಸ್ಯೆಯಾಗಿಬಿಡತದೆ. ಅವನು, ತನ್ನೆಲ್ಲ ತಿಳಿವಳಿಕೆ ವಿವೇಕ ವಿಸ್ಡಮ್ಮುಗಳನ್ನು – ಗುಣಗಳನ್ನು ಈ ಪ್ರಕೃತಿಯಿಂದಲೇ ಪಡೆದುಕೊಂಡೆ; ಆಕೆಯೇ ದೇವರು; ಆಕೆಯೇ `ತಾಯಿ’ ಅನ್ನುತ್ತಿದ್ದವನು, ವಯಸ್ಸಾದ ನಂತರ, ಕ್ರಿಶ್ಚಿಯನ್ ಧರ್ಮಕ್ಕೆ ಹೆಚ್ಚೆಚ್ಚು ಹತ್ತಿರವಾದ ನಂತರ, ಆಕೆಯನ್ನು `ಸಾಕುತಾಯಿ’ ಅನ್ನತೊಡಗಿದ. ಮೊದಲು ತಾಯಿಯಾಗಿದ್ದ ಪ್ರಕೃತಿ ಬರುಬರುತ್ತ ಸಾಕುತಾಯಿಯಾದಳು. ಈಗ ನಿಸರ್ಗ ಆ ದೇವರ ಸೃಷ್ಟಿ ಅಷ್ಟೇ. ಯಾಕಂದರೆ, ಕ್ರಿಶ್ಚಿಯನ್ ಧರ್ಮಕ್ಕೆ ಅನ್ವಯಿಸಿ ಹೇಳುವಾಗ ದೇವರು ಈ ಪ್ರಪಂಚದಲ್ಲಿಯೇ ಇಲ್ಲ; ಪ್ರಪಂಚಕ್ಕೆ ಹೊರತಾಗಿ ಇದ್ದಾನೆ. ದೇವರ ಕುರಿತು ಹೇಳುವಾಗ ಎರಡು ತರಹ ಇದೆ: ಟ್ರಾನ್ಸೆಂಡೆಂಟ್, ಅತೀತ ಅಂತ ಒಂದು ಮತ್ತು ಎಮೆನೆಂಟ್, ಅಂತರ್ಗತ ಅಂತ ಇನ್ನೊಂದು. ಅತೀತವಾಗಿರುವಂತೆಯೆ ಅದು ಇಲ್ಲಿ ಅಂತರ್ಗತವಾಗಿಯೂ ಇದೆಯೆಂಬ ನಂಬಿಕೆ.
ಭಾರತೀಯ ಮನಸ್ಸು ಈ ಪ್ರಪಂಚವೆಲ್ಲ ದೇವರ ಲೀಲೆ, ಅದು ಈ ಪ್ರಪಂಚದಲ್ಲಿ ಅಂತರ್ಗತವಾಗಿದೆ ಎಂದು ತಿಳಿಯುವುದರಿಂದ ಈ ಮೂತರ್ಿಗಳೆಲ್ಲ ಹುಟ್ಟುವುದು ಸಾಧ್ಯವಾಯಿತು. ಇಲ್ಲವಾದರೆ ಇಷ್ಟೊಂದು ದೇವರುಗಳು ಇಷ್ಟೊಂದು ಮೂತರ್ಿಗಳು ಇರಲು ಸಾಧ್ಯವಾಗುತ್ತಿರಲಿಲ್ಲ. ದೇವರು ಈ ಪ್ರಪಂಚದಲ್ಲಿಯೇ ಇರೋದು ಸಾಧ್ಯ ಅಂತ ತಿಳಿಯುವುದರಿಂದಲೇ, ಕೃಷ್ಣನು ದೇವರೇ ಇರಬಹುದೋ ಅಲ್ಲವೋ ಅಂತನ್ನುವ ಪ್ರಶ್ನೆ ಹುಟ್ಟೋದು ಸಾಧ್ಯವಾಗತದೆ.
ರಾಮನಲ್ಲಿಯೂ ಈ ಸಮಸ್ಯೆ ಬರುತ್ತವೆ. ಆ ಕುರಿತು ನನ್ನ ಸ್ನೇಹಿತರೊಬ್ಬರು ದೊಡ್ಡ ವ್ಯಾಖ್ಯಾನ ಮಾಡಿದ್ದಾರೆ. ರಾಮ ಮನುಷ್ಯ ಅಂತ ಒಂದು ಕಲ್ಪನೆ ಇದೆ. ಮನುಷ್ಯ ಹೌದು ಆದರೂ ಅವನು ದೇವರು ಅಂತ ವಾಲ್ಮೀಕಿ, ತುಲಸೀದಾಸ ಎಲ್ಲ ಹೇಳತಾರೆ. ಆದರೆ ಅಲ್ಲಿಯೇ ಅವನನ್ನ ದೇವರಂತ ಒಪ್ಪಿಕೊಳ್ಳೋದಕ್ಕೆ ಕೆಲವು ಸಮಸ್ಯೆಗಳು ಎದುರಾಗತಾವೆ. ಅವನು ಮರದ ಮರೆಯಲ್ಲಿ ನಿಂತು ವಾಲಿಯನ್ನು ಕೊಲ್ಲತಾನೆ, ಸೀತೆಯ ಬಗ್ಗೆ ಅವಳು ಪವಿತ್ರಳೋ ಅಲ್ಲವೋ ಅಂತ ಅನುಮಾನಪಟ್ಟು ಬೆಂಕಿಯ ಮೇಲೆ ನಡೆಸತಾನೆ, ಆಮೇಲೆ- ಇದನ್ನ ಪ್ರಕ್ಷಿಪ್ತ ಅಂತಲೂ ಹೇಳತಾರೆ- ಸೀತೆಯನ್ನ ಮತ್ತೆ ವನವಾಸಕ್ಕೆ ಕಳಿಸತಾನೆ, ಇತ್ಯಾದಿ. ಹಾಗಾದರೆ ಅವನು ಹೇಗೆ ದೇವರು? ಶಾಸ್ತ್ರದ ಪ್ರಕಾರ ಅವನು ದೇವರು ಆಗಿರಲೇಬೇಕು. ಯಾಕೆಂದರೆ, ರಾಕ್ಷಸರ ಸಂಹಾರ ಆಗಬೇಕಲ್ಲ- ರಾಕ್ಷಸನಾದ ರಾವಣ ದೇವತೆಗಳಾಗಲೀ ಯಕ್ಷ ರಾಕ್ಷಸ ಗಂಧರ್ವರಾಗಲೀ ಯಾರೂ ತನ್ನನ್ನ ಕೊಲ್ಲೋಹಾಗಿಲ್ಲ ಅಂತ ವರ ತಗೊಂಡುಬಿಟ್ಟಿದ್ದಾನೆ. ಮನುಷ್ಯ ತನ್ನನ್ನ ಕೊಲ್ಲೋಹಾಗಿಲ್ಲ ಅಂತ ಅವನು ಕೇಳಿರಲಿಲ್ಲ- ಮನುಷ್ಯ ತನ್ನನ್ನ ಏನು ಮಾಡಿಯಾನು, ಹೇಗೆ ಕೊಲ್ಲತಾನೆ ಅಂತ ಅಂದುಕೊಂಡಿದ್ದ. ಹಾಗಾಗಿ ದೇವರು ಮನುಷ್ಯನಾಗಿ ಹುಟ್ಟಿದ ಅಂತ ಒಬ್ಬ ಅಮೆರಿಕನ್ ಶಾಸ್ತ್ರಜ್ಞ ಈ ವಾದ ಮಂಡಿಸಿದ್ದಾರೆ. ಅಲ್ಲೂ ಇದು ಸಮಸ್ಯಾತ್ಮಕವೇ- ಅವನನ್ನ ದೇವರು ಅನ್ನಬೇಕೋ ಮನುಷ್ಯ ಅನ್ನಬೇಕೋ? ಆದ್ದರಿಂದ ಒಬ್ಬ ದೇವರು ಹೌದೋ ಅಲ್ಲವೋ ಅನ್ನೋದು ಯಾವಾಗಲೂ ಸಮಸ್ಯಾತ್ಮಕ.
ಸಮಸ್ಯಾತ್ಮಕವಾದ ಈ ಪ್ರಶ್ನೆ ಇರೋದರಿಂದಲೇ ಈ ಕೃಷ್ಣ, ಅದರಲ್ಲೂ ನಮ್ಮ ಕತೆಗಳ ಕೃಷ್ಣ ಹೇಗಿದ್ದಾನೆ ನೋಡಿ- ಅವನಿಗೆ ಹೆಂಗಸರು ಬಹಳ ಇಷ್ಟ, ಸಾವಿರಾರು ಮಂದಿ ಗೋಪಿಕೆಯರ ಜೊತೆ ಇದ್ದಾನೆ- ಹಾಗಾದರೆ ಅವನು ದೇವರು ಹೇಗಾಗತಾನೆ? ಅವನು ಇಷ್ಟು ವಿಪರೀತ ವ್ಯಾಮೋಹಿ ಅಂತ ಕಾಣತಾನೆ. ಇಷ್ಟು ವ್ಯಾಮೋಹಿ ಆಗಿರೋವನು ದೇವರಾಗಲಿಕ್ಕೆ ಸಾಧ್ಯವೆ? ಆದರೂ ಎಲ್ಲರಿಗೂ ದೇವರು ಅಂತಲೇ ಕಾಣಿಸತಾನಲ್ಲ. ನಮ್ಮ ಜೊತೆಗೆ ಮನುಷ್ಯನಾಗಿಯೇ ಇದ್ದರೂ ದೇವರು ಅಂತಲೂ ಅನ್ನಿಸತಾನಲ್ಲ. ಅಜರ್ುನ ಅವನನ್ನ ಸಖ ಅಂತಲೂ ತಿಳಿದಿರತಾನೆ, ದೇವರು ಅಂತಲೂ ತಿಳಿದಿರತಾನೆ. ಎಂಥಾ ಸಮಸ್ಯೆ ನೋಡಿ. ಭಗವದ್ಗೀತೆಯಲ್ಲಿ ಅವನಿಗೆ ತರ್ಕ ವಾದ ಎಲ್ಲ ಹೂಡಿ ತೋರಿಸತಾನೆ, ಯಾಕೆ ನೀನು ಯುದ್ಧ ಮಾಡೋದು ಅನಿವಾರ್ಯ ಅಂತ. ಯುದ್ಧ ಅನ್ನೋದನ್ನ ತರ್ಕದ ಮುಖಾಂತರವೇ ಹೇಳತಾನೆ. ಅಜರ್ುನ ಒಬ್ಬ ರಾಶನಲಿಸ್ಟ್ ಆಗಿದ್ದರೆ ಇದರಿಂದ ಕನ್ವಿನ್ಸ್ ಆಗಿರಬೇಕಿತ್ತು. ಅವನೂ ಒಂಥರಾ ರಾಶನಲಿಸ್ಟೇ, ಕನ್ವಿನ್ಸ್ ಆಗಿರಬೇಕು. ಆದರೂ ಆಗಿರೋದಿಲ್ಲ! ಅವನ ಮನಸ್ಸು ಒಪ್ಪಿರೋದಿಲ್ಲ. ಆಗ ಕೃಷ್ಣ ವಿಶ್ವರೂಪದರ್ಶನ ಮಾಡಿಸತಾನೆ. ಅಂದರೆ ಅವನನ್ನ ಬೆಚ್ಚಿಸಿಬಿಡತಾನೆ- `ನೋಡು, ನಾನು ಯಾರು!’ ಎಲ್ಲ ನೋಡಿದ ನಂತರ ಅಜರ್ುನ, `ಇಂಥಾದ್ದನ್ನೆಲ್ಲ ನನಗೆ ನೋಡೋಕೆ ಸಾಧ್ಯವಿಲ್ಲಪ್ಪ, ನಿನ್ನ ಆ ಸೌಮ್ಯ ರೂಪವನ್ನೇ ತೋರಿಸು’ ಅಂತಾನೆ. ಅಷ್ಟಕ್ಕಾದರೂ ಕನ್ವಿನ್ಸ್ ಆಗಿರಬೇಕಾ? ಆದರೆ, `ಯಥೇಚ್ಛಸಿ ತಥಾ ಕುರು’- ನಿನಗೆ ಹೇಗೆ ಇಚ್ಛೆ ಬರತದೋ ಹಾಗೆ ಮಾಡು- ಅನ್ನತಾನೆ. ಅಂದರೆ ಇಷ್ಟೆಲ್ಲ ಆದಮೇಲೆ ಕೂಡ ನಾನು ಏನು ಮಾಡಬೇಕು ಅನ್ನೋದು ಸಮಸ್ಯಾತ್ಮಕವೇ.
ಇದು ಕೃಷ್ಣನ ಕಥೆಯಲ್ಲಂತೂ ಅದ್ಭುತವಾದ ರೀತಿಯಲ್ಲಿದೆ. ಆದ್ದರಿಂದ ಅವನನ್ನ ದೇವರು ಅಂತ ಒಪ್ಪಿಕೊಳ್ಳುವುದೂ ಸಮಸ್ಯಾತ್ಮಕ, ಒಪ್ಪಿಕೊಂಡ ಮೇಲೆ ಅವನು ಹೇಳಿದಂತೆಯೆ ನಡೆಯಬೇಕು ಅನ್ನುವುದೂ ಸಮಸ್ಯಾತ್ಮಕ. ಒಂದು ಕ್ಷಣದಲ್ಲಿ ಅವನನ್ನ ದೇವರು ಅಂತ ಒಪ್ಪಿಕೊಂಡರೂ ಇನ್ನೊಂದು ಕ್ಷಣದಲ್ಲಿ ಅವನು ದೇವರಂತ ಅನ್ನಿಸದೆ ಇರಬಹುದಾದ ಸಮಸ್ಯೆ. ಇವಿಷ್ಟೂ ಬಗೆಯ ಬಿಕ್ಕಟ್ಟುಗಳು ನಮ್ಮ ಪುರಾಣಗಳಲ್ಲಿಯೆ ಇದ್ದಾವೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವಾಗಿ ಹೇಗೆ ಯೋಚನೆ ಮಾಡುತ್ತಿದ್ದರು ಅಂದರೆ- ಕೃಷ್ಣ ನಮಗೆ ಹೀಗೆ ಸಮಸ್ಯಾತ್ಮಕನಾಗಬೇಕಾಗಿಲ್ಲ, ದೇವರು ಈ ಪ್ರಪಂಚದಲ್ಲಿ ಎಲ್ಲ ಕಡೆಯಲ್ಲೂ ಇದ್ದಾನೆ, ಅವನು ಮರದಲ್ಲಿ, ಗಿಡದಲ್ಲಿ, ಪ್ರಾಣಿ-ಪಕ್ಷಿಗಳಲ್ಲಿದ್ದಾನೆ, ಹುಲ್ಲಿನ ದಳದಲ್ಲೂ ಇದ್ದಾನೆ, ಯಃಕಶ್ಚಿತ್ ಆದವುಗಳಲ್ಲೂ ಇದ್ದಾನೆ. ಅವನು ಸವರ್ಾಂತಯರ್ಾಮಿ. ಚರ-ಅಚರ, ಜಡ-ಚೇತನ ಎಲ್ಲವುಗಳಲ್ಲಿಯೂ ಒಳಗಿನಿಂದ ವ್ಯಾಪಿಸಿ ಇದ್ದಾನೆ-ಅಂತ. ಅವನು ಟ್ರಾನ್ಸೆಂಡೆಂಟ್, ಅತೀತ, ಆಚೆ ಹೊರಗೆ ಇರುವವನು ಅಂತ ತಿಳಿಯದೇ ಇದ್ದರೆ ಸವರ್ಾಂತಯರ್ಾಮಿ ತಾನೆ! ಜ್ಯೂಯಿಶ್ ಮತ್ತು ಕ್ರಿಶ್ಚಿಯನ್ ಧರ್ಮಗಳಲ್ಲಾದರೆ ಅವನು ಟ್ರಾನ್ಸೆಂಡೆಂಟ್. ಅವುಗಳ ಪ್ರಕಾರ ಅವನು ಇಲ್ಲಿರೋದಿಲ್ಲ. ಇದಕ್ಕಿಂತ ಹೊರತಾಗಿರತಾನೆ, ಬೇರೆಯಾಗಿರತಾನೆ. ಅದಕ್ಕೇ ಅದು ಸಗುಣ. ಆದರೆ ನಿರಾಕಾರ. ಶಂಕರಾಚಾರ್ಯರಿಗೂ ಈ ಸಮಸ್ಯೆ ಇರಲಿಕ್ಕಿಲ್ಲ. ಅವರಿಗೆ ಅದು ನಿಗರ್ುಣ ನಿರಾಕಾರವಾದದ್ದು. ಹೀಗೆ ಕೃಷ್ಣನ ಜೊತೆಗೆ ಗುದ್ದಾಡುವ ಮನಸ್ಸಲ್ಲ ಅವರದು. ಅದು ಜ್ಞಾನದ ಹಾದಿಯಲ್ಲಿ ಹೊರಟಿರೋ ಮನಸ್ಸು. ಬುದ್ಧನಿಗೂ ಅದರ ಅಗತ್ಯವಿಲ್ಲ. ಅದು ಬೇರೆಯೆ ರೀತಿಯದು. ಇವರಿಗೆ ಆ ಅಗತ್ಯ ಬಂದ ಕೂಡಲೆ ಅವನು ಸಗುಣ ಸಾಕಾರ ಆಗತಾನೆ. ಕುಮಾರವ್ಯಾಸ ಅವನನ್ನ ಖಂಡಿತ ಸಗುಣ ಸಾಕಾರ ಮಾಡುತ್ತಲೇ ನಿಗರ್ುಣ ನಿರಾಕಾರದ ಇನ್ನೊಂದು ಆಯಾಮ ಅವನಿಗೆ ಇರೋಹಾಗೆ ಬರೀತಾನೆ. ಅವನು ಭಾಷೆಯಲ್ಲಿ ಇಷ್ಟೆಲ್ಲ ಹೇಳುತ್ತ ಏನೆಲ್ಲ ಕಟ್ಟುತ್ತ ಈ ರೀತಿಯ ಕೆಲಸಗಳನ್ನೆಲ್ಲ ಮಾಡೋದು ಯಾಕೆ ಅಂದರೆ, ಇವರು ಹೇಳಿದಂತೆ, ಅವನಲ್ಲಿ ಲೌಕಿಕವನ್ನೂ ಅಲೌಕಿಕವನ್ನೂ ಎರಡನ್ನೂ ಒಟ್ಟಿಗೇ ಕಾಣುವ ಪ್ರಯತ್ನ ಅದು. ಅವನು ಆ ಎರಡನ್ನೂ ಹಿಡಿದು ತೋರಿಸತಾನೆ. ಆದರೆ, ಕಾವ್ಯದಲ್ಲಿ ಅದು ಮುಖ್ಯವಾಗಿ ಸಗುಣ ಸಾಕಾರವಾಗಿಯೇ ಬರುತ್ತದೆ.
ಸಗುಣ ಸಾಕಾರವಾಗಿರುವುದರಲ್ಲಿ ನಿಗರ್ುಣ ನಿರಾಕಾರವನ್ನು ತೋರಿಸೋದು ಅಲ್ಲಮನ ಮಾರ್ಗ. ಅವನ ಮಾತಿನಲ್ಲಿ ಪರಸ್ಪರ ವಿರೋಧವಾಗಿರುವ ಸಂಗತಿಗಳು ಒಟ್ಟೊಟ್ಟಿಗೇ ಬರುತ್ತವೆ. ಪದೇ ಪದೇ ವೈರುಧ್ಯಗಳನ್ನ ಬಳಸತಾನೆ. ಅಲ್ಲಮ ಭಾಷೆಯನ್ನ ಯಾಕೆ ಹಾಗೆ ಉಪಯೋಗಿಸತಾನೆ ಅಂದರೆ, ಅದು ಸಗುಣ ಅಂತ ತೋರಿಸಿದಾಗ ನಮ್ಮ ಮನಸ್ಸು ಅಲ್ಲಿಯೇ ನಿಂತುಬಿಡದಿರಲಿ, ಅದೊಂದನ್ನೇ ಗ್ರಹಿಸದಿರಲಿ ಎಂದು. ಭಾಷೆಯಲ್ಲಿ ನಾವು ಯಾವಾಗಲೂ ಒಂದೊಂದನ್ನೇ ಗ್ರಹಿಸತಾ ಇರತೇವೆ. ಆದರೆ ಭಾಷೆಯ ಶಕ್ತಿ ತನ್ನ ಮಿತಿಯನ್ನ ಮೀರಬೇಕು. ಅದಕ್ಕೆ ಭಾಷೆಯನ್ನು ಮುರಿದು ಕಟ್ಟಬೇಕಾಗತದೆ. ಭಾಷೆಯನ್ನ ಮುರಿಯಲಿಕ್ಕಾಗಿಯೆ ಭಾಷೆ ನಿಮರ್ಿಸೋದು. ಹೇಗೆಂದರೆ, ಹೇಳಿದ್ದಕ್ಕೆ ವಿರೋಧವಾಗಿ ಕೂಡಲೇ ಇನ್ನೊಂದನ್ನ ಹೇಳಿಬಿಡೋದು. ಅದರಿಂದ ನಮ್ಮ ಮನಸ್ಸು ಸಲೀಸಾಗಿ ಮುಂದೆ ಹೋಗದಿರೋ ಹಾಗೆ ನೋಡಿಕೊಳ್ಳೋದು. ಮನಸ್ಸು ಸಲೀಸಾಗಿ ಮುಂದೆ ಹೋದಾಗ ನಾವು ಒಂದನ್ನು ಮಾತ್ರ ಗಮನಿಸತಾ ಇರತೇವೆ, ಇತರ ವಿಷಯಗಳು ಬದಿಗೆ ಸರಿದುಬಿಡತಾವೆ. ಇದಕ್ಕೆ ನಾನು ಯಾವಾಗಲೂ ಕೊಡುವ ಉದಾಹರಣೆಯಿದೆ-ಸ್ವಿಚ್ ಆರಿಸಿ ಎನ್ನಲು, `ಪುಟೌಟ್ ದಿ ಲೈಟ್’ ಅಂದರೆ ನೀವು ಹೋಗಿ ಲೈಟ್ ಆರಿಸಿ ಬರತೀರಿ. ಅದನ್ನೇ ಶೇಕ್ಸ್ಪಿಯರ್ ಹೇಳಿದಾಗ ಹಾಗಾಗದೇ ಇರೋಹಾಗೆ ಮಾಡತಾನೆ, ಒಥೆಲ್ಲೋದಲ್ಲಿ. ಡೆಸ್ಡೆಮೋನ ಮಲಗಿದ್ದಾಳೆ. ಒಥೆಲ್ಲೋಗೆ ಅವಳು ಬೇರೆ ಒಬ್ಬನನ್ನ ಮೋಹಿಸಿರಬಹುದು ಅಂತ ಗುಮಾನಿ. ತುಂಬಾ ಹೊಟ್ಟೆಕಿಚ್ಚು ಆಗಿಬಿಟ್ಟಿದೆ. ಅವಳನ್ನ ಕೊಲ್ಲಬೇಕು ಅಂತ ಹೋಗತಾನೆ. ಅಲ್ಲಿ ಒಂದು ಮೋಂಬತ್ತಿ ಉರೀತಾ ಇದೆ. ಅವನು ಅವಳನ್ನ ತುಂಬಾ ಪ್ರೀತಿಸಿದ್ದಾನೆ. ಅವಳಿಂದ ಮೋಹಿತನಾಗಿದ್ದಾನೆ. ಆದ್ದರಿಂದ ಆ ಮೋಂಬತ್ತಿಯ ಬೆಳಕಿನಲ್ಲಿ ಅವಳನ್ನ ಕೊಲ್ಲೋದು ಅವನಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕವನು, `ಪುಟ್ ಔಟ್ ದಿ ಲೈಟ್, ದೆನ್ ಪುಟ್ ಔಟ್ ದಿ ಲೈಟ್’ ಅನ್ನತಾನೆ. ಹೇಳಿದ್ದನ್ನೇ ಪುನಃ ಹೇಳತಾನೆ. `ದೆನ್ ಪುಟ್ ಔಟ್ ದಿ ಲೈಟ್’ ಅಂದಕೂಡಲೇ ಅದಕ್ಕೆ ಬೇರೆ ವಿಶೇಷವಾದ ಅರ್ಥಗಳೆಲ್ಲ ಬಂದುಬಿಡತಾವೆ. ಅದು ಯಾವ ಲೈಟು? ಯಾವ ಬೆಳಕು? ತನ್ನ ಜೀವನದ ಬೆಳಕನ್ನ ಕಳೆಯಬೇಕು ಅಥವಾ ಅವಳ ಒಳಗೇನೆ ಇರುವ ಬೆಳಕನ್ನ ಕಳೆಯಬೇಕು. ಯೋಚನೆ ಮಾಡತಾ ಹೋದ ಹಾಗೆ ಹಲವು ಅರ್ಥಗಳು ಹೊರಡಲು ಪ್ರಾರಂಭವಾಗತದೆ. ಅಂದರೆ, ಅದಕ್ಕೆ ಭಾಷೆಯನ್ನ ಒಡೀಬೇಕಾಗತದೆ. ಅದು ಇರೋದನ್ನು ಹೇಳುತ್ತಾ ಇಲ್ಲದಿರೋದನ್ನೂ ಹೇಳುವಂತಾಗಬೇಕು ಅನ್ನಿಸಿದಾಗ ಭಾಷೆಯಲ್ಲಿ ಈ ಪ್ರಯೋಗ ಮಾಡತೇವೆ. ಆಗ ಅದು ಕಾವ್ಯ ಆಗಿಬಿಡತ್ತೆ. ಇರುವುದನ್ನ ಮಾತ್ರ ಹೇಳುವಾಗ `ಫುಟ್ ಔಟ್ ದಿ ಲೈಟ್’ ದೀಪ ಆರಿಸು- ಅಷ್ಟೇ. ಆಗ ನೀವು ಹೋಗಿ ಆ ಕೆಲಸ ಮಾಡಿ ಮುಗಿಸುತ್ತೀರಿ. ಅಲ್ಲಿಗೆ ಮುಗೀತು. ಆದರೆ, ನಾನು ಹೇಳಿದ್ದನ್ನ ನೀವು ಕೂಡಲೇ ಮಾಡದೇ ಇರಬೇಕಾದರೆ ನಾನದನ್ನ ಕಾವ್ಯದ ಭಾಷೆಯಲ್ಲಿ ಹೇಳಬೇಕು. ಅಂದರೆ, ಅದನ್ನೊಂದು ಧ್ಯಾನದ ಸ್ಥಿತಿಗೆ ತರಬೇಕು. ಕ್ರಿಯಾಸ್ಥಿತಿಯಲ್ಲಿರುವ ಮನಸ್ಸನ್ನ ಧ್ಯಾನಸ್ಥಿತಿಗೆ ತರಬೇಕು. ಹಾಗೆ ತರೋದಕ್ಕಾಗಿ ಇದನ್ನೆಲ್ಲ ಮಾಡತಾರೆ. ಕುಮಾರವ್ಯಾಸ ಅದ್ಭುತವಾಗಿ ಕೃಷ್ಣನನ್ನ ಒಬ್ಬ ಉಪಾಯಗಾರ, ಕಳ್ಳ, ಗೊಲ್ಲ, ಮೀಸೆ ಬಿಟ್ಟವನು, ಕಪ್ಪು ಮೈಯವನು ಅಂತೆಲ್ಲ ವಣರ್ಿಸುತ್ತಲೇ ಹಾಗಲ್ಲ ಅಂತಲೂ ಹೇಳತಿರತಾನೆ. ಕೃಷ್ಣ ಒಂದು ಮದುವೆಗೆ ಹೋಗತಾನೆ; ಯಾಕೆ ಬಂದೆ ಅಂತ ಕೇಳಿದರೆ ಮದುವೆಗೆ ಬಂದೆ ಅಂತಾನೆ- ಹೀಗೆ ಅವನನ್ನ ನಿತ್ಯದ ವ್ಯವಹಾರದಲ್ಲಿ ತೋರಿಸುತ್ತಲೇ `ಅಲ್ಲ’, `ಅಷ್ಟೇ ಅಲ್ಲ’ ಅಂತಲೂ ಸೂಚಿಸತಾನೆ. ಅಲ್ಲ ಅಂದರೂ ನಂಬೋದು ಕಷ್ಟ; ನಂಬಿದವರಿಗೂ ನಂಬೋದು ಕಷ್ಟ. ಇವೆಲ್ಲ ಗೊಂದಲಗಳನ್ನು ಪುರಾಣದಲ್ಲಿ ಸೃಷ್ಟಿಸತಾನೆ, ಕಾವ್ಯದಲ್ಲಿ ಸೃಷ್ಟಿಸತಾನೆ.
ಮೊನ್ನೆ ಸಂಜೆ ಆಶೀಶ್ ನಂದಿಯವರ ಜೊತೆ ಮಾತಾಡತಾ ಇದ್ದಾಗ ಒಂದು ಮಾತು ಹೇಳಿದರು. ಅದಕ್ಕೂ ಇದಕ್ಕೂ ಸಂಬಂಧ ಹೊಳೀತು, ಅದಕ್ಕಾಗಿ ಹೇಳತೀನಿ. ಗಾಂಧಿ ಸತ್ತಾಗ ಎಲ್ಲರೂ ಬೇಕಾದಷ್ಟು ಮಾತುಗಳನ್ನು ಹೇಳಿದ್ದಾರೆ. ಐನ್ಸ್ಟೆ ನ್ ಅಲ್ಲದೆ, ಬ್ರಿಟಿಷ್ ಇತಿಹಾಸಕಾರ ಟಾಯ್ನ್ಬೀ ಏನು ಹೇಳಿದ ಅಂದರೆ, `ಇನ್ನು ಮುಂದೆ ನಮಗಾಗುವ ಆಶ್ಚರ್ಯವೆಂದರೆ- ಒಬ್ಬ ಸಂತ ಕೂಡ ಒಂದು ರಾಜಕೀಯದ ಕೊಳೆಗೇರಿಯಲ್ಲಿ ಬದುಕುವ ಅಚ್ಚರಿಯನ್ನು ನಾವಿನ್ನು ನೋಡಬಹುದೆ?’ ಅಂತ. ಆಶೀಶ್ ನಂದಿಯವರು ಹೇಳುವ ಪ್ರಕಾರ, ಇನ್ನು ಮುಂದೆ ಮನುಜಕುಲ ತನ್ನ ಪ್ರವಾದಿಗಳನ್ನು ಕೇಳುತ್ತದೆ- `ರಾಜಕಾರಣದ ಕೊಳೆಗೇರಿಯಲ್ಲಿ ಬದುಕಲು ನೀವು ಸಿದ್ಧರಿದ್ದೀರೋ?’- ಎಂದು. ಗಾಂಧಿ ಆ ರೀತಿ ಬದುಕಲು, ಬಲಿಯಾಗಲು ಸಿದ್ಧರಾದ ಸಂತರಾಗಿದ್ದರು. ರಾಜಕೀಯದ ಸ್ಲಮ್ನಲ್ಲಿ! ಇವತ್ತಿಗೂ ನಮಗೆ ರಾಜಕೀಯ ಸ್ಲಮ್ ಅಂತಲೇ ಅನ್ನಿಸತದೆ. ಅದು ಹೌದು. ಆದರೆ, ಸಂತನಿಗೆ ಇರೋ ಅಗತ್ಯ ಈ ಸ್ಲಮ್ಮಿನಲ್ಲಿರೋದು. ಕೃಷ್ಣನ ಬಗ್ಗೆ ಕೂಡ ಹಾಗೆಯೆ ಅನ್ನಿಸುತ್ತದೆ- ಇವನೂ ಒಬ್ಬ ರಾಜಕೀಯದ ಸ್ಲಮ್ನಲ್ಲಿಯೇ ಬದುಕಿದವನು ಅಂತ. ಆದರೆ, ಸ್ವಲ್ಪ ಬೇರೆ ರೀತಿಯಲ್ಲಿ, ಗಾಂಧಿಯ ರೀತಿಯಲ್ಲಲ್ಲ. ಆ ಮಹಾಭಾರತ ಕಾಲದ ರಾಜಕೀಯ ಸ್ಲಮ್ ಇತ್ತಲ್ಲ, ಅಲ್ಲಿ ಯಾರು ಯಾರು ಏನು ಅಂತ ಗೊತ್ತಾಗೋದು ಬಹಳ ಕಷ್ಟ. ಕೃಷ್ಣ ದೇವರು ಅಂತ ಭೀಷ್ಮನಿಗೆ ಗೊತ್ತಿಲ್ಲವೆ? ಗೊತ್ತಿದ್ದೂ ಮೂರುಕಾಸಿನ ಪ್ರಯೋಜನ ಆಗಲಿಲ್ಲ ಅವನಿಗೆ. ಏನಾಯಿತು? ದೇವರು ಅಂತ ಗೊತ್ತಿದ್ದೂ ಅವನು ಯಾರ ಜೊತೆಗೆ ಇದ್ದ? ದುಯರ್ೊಧನನ ಜೊತೆಗೆ. `ದೇವರು’ ಅಂತ ಗೊತ್ತಿದ್ದೂ ದುಯರ್ೊಧನ ಏನು ಮಾಡಿದ? ದ್ರೋಣ ಏನು ಮಾಡಿದ? ಅಥವಾ ಪಾಂಡವರು ಏನು ಮಾಡಿದರು? ಗೊತ್ತಿದ್ದು ಯಾರೇನು ಮಾಡಿದರು? ಏನು ಪ್ರಯೋಜನವಾಯಿತು? ಇದು ಸಮಸ್ಯೆ. ಈ ಸಮಸ್ಯೆ ಬಗ್ಗೆ ಮಹಾಭಾರತ ಹೇಳೋದು ಇದನ್ನೇ.
ಹಾಗೆಯೇ ಒಂದು ಮೂತರ್ಿಯನ್ನು ಸೃಷ್ಟಿಸುವಾಗ ಕೂಡ. ನಿನ್ನೆ ರಾಜಾರಾಮ್ ಮೂತರ್ಿಗಳ ಕುರಿತು ಮಾತನಾಡುತ್ತಿದ್ದಾಗ, ನನ್ನ ಮನಸ್ಸಿನಲ್ಲಿ ಒಂದು ರೀತಿಯ ಅತೃಪ್ತಿ ಮೂಡುತ್ತಿತ್ತು- ಇವರು ಇದರ ಒಳಗೆ ಆಳಕ್ಕೆ ಇಳಿಯೋದಿಲ್ಲವಲ್ಲ-ಅಂತ. ಮೂತರ್ಿ ನಿಮರ್ಾಣದಲ್ಲಿ ಏನು ಸಮಸ್ಯೆ ಇತ್ತು? ಆನಂದಕುಮಾರಸ್ವಾಮಿ ಬರೋದಕ್ಕೆ ಮುಂಚೆ ನಮ್ಮ ಭಾರತದ ಮೂತರ್ಿಗಳನ್ನ ಯುರೋಪಿನಲ್ಲಿ ಯಾರಿಗಾದರೂ ತೋರಿಸಿದ್ದರೆ, ಅವರು ಇದನ್ನ ಭಯಾನಕವಾದ, ಕೊಳಕಾದ, ವಿಕೃತವಾದ ಅಗ್ಲೀ ಚಿತ್ರಗಳು ಅಂತ ತಿಳಿದುಕೊಳ್ಳುತ್ತಿದ್ದರು; ಇದರಲ್ಲಿ ಯಾವುದೇ ರೀತಿಯ ಪ್ರಜ್ಞೆಯಾಗಲೀ ಸೌಂದರ್ಯವಾಗಲೀ ಕೆಲಸ ಮಾಡಿರಲಿಲ್ಲ ಅಂತ ತಿಳೀತಿದ್ದರು. ಅವರು ಭಗವದ್ಗೀತೆಯನ್ನು ಒಪ್ಪಿಕೊಳ್ಳತಾರೆ ಅಥವಾ ಕಾಲಿದಾಸನನ್ನ ಒಪ್ಪಿಕೊಳ್ಳತಾರೆ; ಉದಾಹರಣೆಗೆ ಗಯಟೆಯಂಥವರು. ಆದರೆ ಇದನ್ನ ಒಪ್ಪಿಕೊಳ್ಳೋಕೆ ಅವರಿಂದ ಆಗತಿರಲಿಲ್ಲ.
ದೇವರು ಈ ಮನುಷ್ಯನ ಚರಿತ್ರೆಯಲ್ಲಿಯೇ ಹುಟ್ಟತಾನೆ ಎಂದು ನಮ್ಮ ನಂಬಿಕೆ. ಈ ಮನುಷ್ಯನ ಚರಿತ್ರೆಯಲ್ಲಿಯೇ ದೈವತ್ವ ಅನ್ನೋದು ಕೆಲಸ ಮಾಡತಿರತ್ತೆ. ಇದು ಭಾರತದ ಸಂಸ್ಕೃತಿಯಲ್ಲಿರುವ ನಂಬಿಕೆ. ಆದರೆ ಅದು ಹೇಗೆ ಕೆಲಸ ಮಾಡತ್ತೆ ಅನ್ನೋದು ಗೊತ್ತಿಲ್ಲ. ಕೆಲವರ ಪ್ರಕಾರ ಅದು ಕೆಲವರ ಮೂಲಕ ಕೆಲಸ ಮಾಡಬಹುದು. ಅದು ಕೃಷ್ಣನ ಮೂಲಕ ಕೆಲಸ ಮಾಡಬಹುದು, ಗಾಂಧಿ ಮೂಲಕ ಕೆಲಸ ಮಾಡಬಹುದು. ಹಾಗೆಯೇ, ಇನ್ನೊಬ್ಬರ ಮೂಲಕ ಅದಕ್ಕೆ ವಿರುದ್ಧವಾಗಿಯೂ ಕೆಲಸ ಮಾಡಬಹುದು. ಹೀಗೆ ವಿರುದ್ಧವಾಗಿ ಕೆಲಸ ಮಾಡೋದು ಕೂಡ ಚರಿತ್ರೆಯ ಯಾವುದೋ ಒಂದು ಆಶಯವನ್ನು ಪೂರ್ಣಗೊಳಿಸುವ ಕ್ರಮವಾಗಿರಬಹುದು. ಇದೆಲ್ಲ ಲೀಲಾತ್ಮಕವಾದದ್ದು. ಈ ಲೀಲೆ ಅನ್ನುವ ಶಬ್ದ ಇದೆಯಲ್ಲ ಅದು ಬಹು ವಿಚಿತ್ರವಾದ ಶಬ್ದ. ಅದೊಂದು ಆಟ. ಆ ಲೀಲಾತ್ಮಕತೆಯಲ್ಲಿ ಎಲ್ಲವೂ ಇರುತ್ತದೆ, ಎಲ್ಲವೂ ಆಗುತ್ತದೆ. ಇದನ್ನ ಈ ನಾನು ಪ್ರತಿನಿಧಿಸಿ ನೋಡಬೇಕು. ಯಾಕೆಂದರೆ, ಇದು ಪ್ರಪಂಚದಲ್ಲಿರೋದು, ಕಣ್ಣಿಗೆ ಕಾಣುವಂಥದ್ದು. ಕಾಣಬಲ್ಲಂಥದ್ದು ಅಂದಕೂಡಲೇ ಒಬ್ಬ ಮನುಷ್ಯನ ಚಿತ್ರವನ್ನೇ ಬರೆದರೆ ಆಗೋದಿಲ್ಲ. ಅದಕ್ಕೆ ಪ್ರಭಾವಳಿಯ ಕಿರೀಟ ಇಡತಾರೆ, ಹತ್ತು ಕೈ, ನಾಲ್ಕು ತಲೆ, ಮೂರು ಕಣ್ಣು, ಡೊಳ್ಳು ಹೊಟ್ಟೆ ಎಲ್ಲ ಕೊಡತಾರೆ. ಸರ್ರಿಯಲಿಸಮ್ಗೆ ಇದಕ್ಕಿಂತ ದೊಡ್ಡ ಉದಾಹರಣೆ ಬೇರೆ ಬೇಡ. ಭಾವನೆಗೆ ಒಂದು ರೂಪ ಕೊಡಬೇಕು ಅನ್ನೋ ಹಠದಲ್ಲಿ ಇವೆಲ್ಲ ಬಂದವು.
ಭಾರತದಲ್ಲಿ ಕೃಷ್ಣ ಅಂಥ ಒಂದು ರೂಪ. ರಾಮನದು ಇನ್ನೂ ಸ್ವಲ್ಪ ಸರಳ. ಸರಳವಾದರೂ ಸರಳವಲ್ಲ. ಯಾಕೆಂದರೆ, ಅವನು ವಾಲಿಯನ್ನು ಕೊಲ್ಲಬೇಕಲ್ಲ. ಕೊಲ್ಲುವುದಕ್ಕೆ ಹೋದ ಕೂಡಲೇ ಕವಿಗೆ ಕಷ್ಟಗಳು ಎದುರಾಗತವೆ. ಇಂಥಾ ಕಷ್ಟಗಳ ನಡುವೆ, ಲೌಕಿಕದ ನಡುವೆ ಅಲೌಕಿಕವನ್ನು ಮಾಡಿಸೋದು ಅಂದರೆ ರಾಜಕೀಯದ ಕೊಳಗೇರಿಯಲ್ಲಿ ಗಾಂಧಿ ಕೆಲಸ ಮಾಡಿದ ಹಾಗೆ. ಅದು ಪರಮಹಂಸರಿಗೂ ಸಮಸ್ಯೆಯಾಗಿತ್ತು. ಕ್ಯಾನ್ಸರ್ ಬಂದಾಗ ಅವರು ದೇವಿಯನ್ನ ಕೇಳಿದರಂತೆ- `ಏನಮ್ಮಾ, ನಿನಗೆ ಎಷ್ಟು ಬೇಕಾದವನು ನಾನು, ನನಗೆ ಕ್ಯಾನ್ಸರ್ ಕೊಟ್ಟುಬಿಟ್ಟೆಯಲ್ಲ, ಏನನ್ನೂ ನುಂಗಲಾರದಂತಹ ನೋವು ಕೊಟ್ಟೆಯಲ್ಲ!’-ಅಂತ. ಅದಕ್ಕೆ ದೇವಿಯಿಂದ ಹೀಗೆ ಉತ್ತರ ಬರತ್ತೆ- `ನಾನು ಸಾವಿರ ಕೊರಳಿನಿಂದ ನನ್ನ ಆಹಾರ ತಗೊಂಡಿದ್ದೀನಿ, ನಿನ್ನದೊಂದೇ ಏನು ಮಹಾ ಅಂತ ತಿಳಕೊಂಡಿದ್ದಿ ನೀನು?’ ಆ ಮಾತಿನಿಂದ ಅವರು ಉತ್ತರ ಪಡೆದರು ಅಂತ ಹೇಳತಾರೆ. ನಾನಿದನ್ನ ಅನುಮಾನಿಸಿದ್ದೆ. ನನ್ನದೊಂದು ಲೇಖನದಲ್ಲಿ- ಇಷ್ಟು ಸುಲಭವಾಗಿ ಅದು ಉತ್ತರ ಆಗೋದಿಲ್ಲ, ಇಲ್ಲೊಬ್ಬ ಕಿಕರ್ೆಗಾಡರ್್ನಿಗಾಗಿದ್ದರೆ ಮಹಾ ತರಲೆ ಆಗಿರೋದು, ಉತ್ತರ ಕೇಳಿದ ನಂತರವೂ ಅವನು ಒದ್ದಾಡತಿದ್ದ-ಅಂತ ಹೇಳಿದ್ದೆ. ಪರಮಹಂಸರು ಹಾಗೆ ಒದ್ದಾಡಿದರೋ ಇಲ್ಲವೋ ಗೊತ್ತಿಲ್ಲ. ಭಾರತೀಯ ಸಂಸ್ಕೃತಿಯ ಇಂತಹ ಕೆಲವು ಆಯಾಮಗಳ ಬಗ್ಗೆ ನನ್ನ ಕೆಲವು ಪ್ರಶ್ನೆಗಳು ಈಗಲೂ ಹಾಗೆಯೆ ಉಳಿದಿದ್ದಾವೆ. ಈ ಇದನ್ನೆಲ್ಲ ಕೇಳಿಸಿಕೊಳ್ಳುತ್ತಲೇ ನಾನು ಯೋಚನೆ ಮಾಡತೇನೆ. ನಮಗ್ಯಾರಿಗೂ ಸಮಸ್ಯೆಗಳಿಲ್ಲ ಅಂತಲ್ಲ. ಇದು ಸಮಸ್ಯಾತ್ಮಕವಾದದ್ದೇ. ಆದ್ದರಿಂದಲೇ ಅವರಿಗೆ ಉತ್ತರ ಸಿಕ್ಕಿತು. ಯುದ್ಧ ಮಾಡಬಹುದು ಅಂತ ಅಜರ್ುನನಿಗೆ ಉತ್ತರ ಸಿಕ್ಕಿತೆ? ಸಿಕ್ಕಿತು; ಮತ್ತು ಸಿಗಲಿಲ್ಲ.
ಮೂತರ್ಿಗಳು ಹುಟ್ಟೋದು ಇವುಗಳ ನಡುವೆ. ಪುರಾಣಗಳು ಹುಟ್ಟೋದು ಇವುಗಳ ನಡುವೆ. ನಮ್ಮ ನಮ್ಮ ವ್ಯಾಖ್ಯಾನ ನಡಿಯೋದು ಕೂಡಾ ಇವುಗಳ ನಡುವೆಯೇ. ಕೀತರ್ಿ ಮತ್ತು ಕಿ.ರಂ. ಕೃಷ್ಣನನ್ನ ತೋರಿಸಿದ ಕ್ರಮದಲ್ಲಿ ಇದು ಸ್ಪಷ್ಟವಾಗುತ್ತದೆ. ನನಗೆ ಈ ಹೊಳಹನ್ನು ನೀಡಿದ್ದಕ್ಕೆ ಅವರಿಗೆ ಕೃತಜ್ಞ.

***

ಹದಿನೇಳು ವರ್ಷಗಳ ಹಿಂದೆ, 1995ರ ನೀನಾಸಮ್ ಸಂಸ್ಕೃತಿ ಶಿಬಿರದಲ್ಲಿ ಕಿ.ರಂ. ನಾಗರಾಜ್ ಅವರು ಕನ್ನಡ ಕಾವ್ಯಲೋಕದ ದೇವ-ದೇವಿಯರ ಕುರಿತು ಒಂದು ಉಪನ್ಯಾಸ ನೀಡಿದ್ದರು. ಆ ಉಪನ್ಯಾಸದ ಬಳಿಕ ಡಾ. ಅನಂತಮೂರ್ತಿಯವರು ಅದಕ್ಕೆ ತಮ್ಮ ಪ್ರತಿಸ್ಪಂದನೆಯಾಗಿ ಆಡಿದ ಮಾತುಗಳು `ಮಾತುಕತೆ’ಯಲ್ಲಿ ಪ್ರಕಟವಾಗಿತ್ತು. ಬರಹರೂಪ: ವೆಂಕಟ್ರಮಣ ಐತಾಳ.

 

‍ಲೇಖಕರು G

August 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Neeta Rao

    ಯು.ಆರ್.ಅನಂತಮೂರ್ತಿಯವರಿಗೆ ಯಾವಾಗಲೂ ಮನಸ್ಸಿನಲ್ಲಿ ಗೊಂದಲಗಳಿದ್ದವು ಅಂತ ಅವರ ಅನೇಕ ಕಥೆಗಳನ್ನು ಓದಿದಾಗ ಸ್ಪಷ್ಟವಾಗುತ್ತದೆ. ಉಳಿದವರಿಗೆ ಬಾರದ ಸಮಸ್ಯೆಗಳು, ಗೊಂದಲಗಳು ಯಾಕೋ ಕೆಲವರನ್ನು ಅತಿಯಾಗಿ ಕಾಡುತ್ತವೆ. ಅತ್ಯಂತ ಸರಳವಾಗಿರುವುದನ್ನು ಅಂಥವರು ಗೋಜಲು ಮಾಡಿಕೊಳ್ಳುತ್ತಾರೆ, ಮತ್ತೆ ಉಳಿದವರಿಗೂ ಗೊಂದಲ ಹುಟ್ಟಿಸುತ್ತಾರೆ. ಸಧ್ಯದ ಲೇಖನವೂ ಅಂಥದೇ ಒಂದು ಉದಾಹರಣೆ. ಕೃಷ್ಣನು ಮನುಷ್ಯನಾಗಿದ್ದುಕೊಂಡೇ ದೇವರ ಸ್ಥಾನವನ್ನು ಗಳಿಸಿದ, ಅಥವಾ ಅವನ ಗುಣಗಳಿಂದಾಗಿ ಅವನಿಗೆ ನಾವು ದೇವರ ಪಟ್ಟವನ್ನು ಆರೋಪಿಸುತ್ತೇವೆ ಎಂದು ತಿಳಿದುಕೊಂಡರೆ ಇದರಲ್ಲಿ ಯಾವ ಸಮಸ್ಯೆಯು ಇರುವುದಿಲ್ಲ. ಮುಖ್ಯವಾಗಿ ನಂಬಿಕೆಯ ಬಲವಾದ ಆಧಾರ ಇರುವವರಿಗೆ ಇಂಥ ಸಮಸ್ಯೆಗಳು ಕಾಡುವುದೇ ಇಲ್ಲ. ಆದರೆ ಅನಂತಮೂರ್ತಿಯವರಿಗೆ ಯಾವಾಗಲೂ ಎಲ್ಲದರಲ್ಲೂ ಅಪನಂಬಿಕೆ, ಎಲ್ಲದರಲ್ಲೂ ಸಮಸ್ಯೆ. ಮುಖ್ಯವಾಗಿ ಯಾವ ವಿಚಾರಗಳೂ ಸ್ಪಷ್ಟವಿಲ್ಲ. ಹಾಗಾಗಿ ಅವರು ಎಲ್ಲವನ್ನೂ ಸಮಸ್ಯಾತ್ಮಕವಾಗಿಯೇ ಚರ್ಚಿಸುತ್ತಾರೆ. ಇದೇ ತರಹದ ಗೊಂದಲಗಳು ಅವರ ಭಾರತಿಪುರದ ಪಾತ್ರಗಳಲ್ಲೂ ಕಾಣಸಿಗುತ್ತವೆ. ನವಿಲುಗರಿ ಎನ್ನುವ ಅವರ ಕಥೆಯಲ್ಲೂ ಗೊಂದಲಗಳಿವೆ. ಹ್ಯಾಂಗೋವರ್ ಅನ್ನುವ ಕಥೆಯಲ್ಲೂ ಯಾವುದೂ ನಿರ್ಧಾರಕ್ಕೆ ಬರಲು ಪಾತ್ರ ಸೋಲುತ್ತದೆ. ಸ್ವತಃ ಅವರ ಆತ್ಮಕಥೆ ಸುರುಗಿಯಲ್ಲೂ ಸಂಪೂರ್ಣ ಪುಸ್ತಕ ಓದಿ ಮುಗಿಸಿದ ಮೇಲೂ ಅವರ ಬಾಲ್ಯ, ಯೌವನ, ನಂತರದ ಬದುಕು ಸ್ಪಷ್ಟವಾಗಿ ನಮ್ಮೆದುರು ತೆರೆದುಕೊಳ್ಳುವುದೇ ಇಲ್ಲ. ಎಲ್ಲ ಅಸ್ಪಷ್ಟ, ಗೋಜಲು, ವಿಚಿತ್ರ ಸಂಕೀರ್ಣತೆ.
    ಬಹುಷಃ ಕೆಲವರ ವಿಚಾರಗಳೇ ಅಮೂರ್ತವಾಗಿರುತ್ತವೆ ಅನಿಸುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: