ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಪ್ಪಸದ ಬೆನ್ನ ಹಿಂದಿನ ಕಿಟಕಿಯಲ್ಲಿ..

ಭವ್ಯ ಕಬ್ಬಳಿ 
ನಮ್ಮೊಳಗೆ ನಾವು
ಬಂದಿಯಾದಷ್ಟೂ
ಸ್ವತಂತ್ರರಾಗುವ ನಮಗೆ !
ಒಬ್ಬರಿಂದೊಬ್ಬರು
ಎಲ್ಲವನ್ನು ಪಡೆದುಕೊಳ್ಳುವ,
ಏನನ್ನೂ ಉಳಿಸಿಕೊಳ್ಳಬಾರದೆಂಬ
ಸುಳ್ಳು ಹಂಬಲ
ಸಂಜೆ ದೀಪ ಉರಿಯುವಾಗ
ಸಣ್ಣಗೆ ಗುನುಗುವ ಅವನ ಕೊರಳ ದನಿಗೆ,
ಪ್ರತಿ ಬಾರಿಯೂ ಸೋಲುತ್ತೇನೆ,
ಮತ್ತದೇ ಸೋಲಿಗೆ ಕಾಯುತ್ತೇನೆ
ಅಂಗೈಬೆಸೆದು
ಮತ್ತೊಂದು ಅಂಗೈಯಿಗೆ
ನನ್ನ ನಡುವನು ನೀಡುವಾಗ
ಅವನೆದುರು ನವಿಲಾಗಿದ್ದೇನೆ,
ಜೊತೆಗೇ ಹೆಜ್ಜೆ ಹಾಕುವ ದೀಪವು ನಾಚಿ
ನಮ್ಮ ನೆರಳ ಕಡೆ ತಿರುಗಿ
ಗೋಡೆಯ ಮೇಲೆ
ಒಂದೇ ದೇಹದಂತೆ ಕಾಣುವ
ನಮ್ಮಿಬ್ಬರ ಕಂಡು
ಕರಗಿಹೋಗುತ್ತದೆ
ಕುಪ್ಪಸದ ಬೆನ್ನ ಹಿಂದಿನ ಕಿಟಕಿಯಲ್ಲಿ
ಜೇಡದ ಬಲೆಯೊಂದನ್ನು ಬಿಡಿಸಿ
ಅಲ್ಲಿ ನನ್ನದೇ ಒಂದಷ್ಟು
ಕವಿತೆಗಳನ್ನು ಸಿಕ್ಕಿಸಿಬಿಡುತ್ತಾನೆ,
ಮತ್ತೆ ಮತ್ತೆ ಓದುತ್ತಾನೆ

ಏಕಾಂತದಲ್ಲಿ
ಇಡೀ ಭವಿಷ್ಯದ
ಪರ್ಯಟನೆ ನಡೆಸಿ
ನೂರು ಆಸೆಗಳನು
ಗುರುತು‌ಮಾಡುತ್ತೇವೆ
ತಡೆದ ಆಸೆಗಳನ್ನು
ಹಡೆಯುವುದೆಂದರೆ
ಈಗ ಇಬ್ಬರಿಗೂ ಅಷ್ಟೆ ಸಲೀಸು
ಎಷ್ಟೆಲ್ಲಾ ತುಂಬಿಸಿಕೊಡುವ ಬದುಕು!
ಇದ್ದುಬಿಡಬೇಕು,
ಇಬ್ಬರೂ ಒಬ್ಬರಾಗಿಯೇ
ಕೊನೆಯಿಲ್ಲದಂತೆ
ಮೊದಲಿನಿಂದ ಪ್ರಾರಂಭಿಸುತ್ತಾ
ಎಲ್ಲವನ್ನೂ ಪಡೆದುಕೊಳ್ಳುತ್ತಾ
ಒಂದಿಷ್ಟನ್ನು ಬೇಕೆಂದೆ ಉಳಿಸಿಕೊಳ್ಳುತ್ತಾ

‍ಲೇಖಕರು avadhi

8 October, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading