ಕುದ್ಮುಲ್ ರಂಗರಾಯರು ಸಿಕ್ಕಿದ್ದರು..

ಜಿ ಎನ್ ಮೋಹನ್ 

ಈ ದಿನದ ‘ಕನ್ನಡಪ್ರಭ’ದ ಪುರವಣಿಯಲ್ಲಿ ಪ್ರಕಟಿತ

ಕಾರು ಇನ್ನೇನು ಅತ್ತಾವರದ ರೋಡಿನಲ್ಲಿ ಹಾದು ಮಾರ್ನಮಿಕಟ್ಟೆಯತ್ತ ಹೊರಳಿಕೊಳ್ಳುತ್ತಿತ್ತು. ಅದೋ ಎತ್ತರದ ರಸ್ತೆ. ಕಾರಿಗೂ ಉಬ್ಬಸ. ತಕ್ಷಣ ನನಗೆ ಅರೆ..! ಎತ್ತರವನ್ನು ಮುಟ್ಟುವುದು ಗುಲಾಬಿಯ ಹಾದಿಯಲ್ಲ.. ಕಾರಿಗೂ, ಜೀವಕ್ಕೂ.. ಅನಿಸಿಹೋಯಿತು. ಎತ್ತರದ ಗುರಿ ಮುಟ್ಟಬೇಕಾದರೆ ಎಷ್ಟು ಉಬ್ಬಸಪಡಬೇಕಾದ ಸವಾಲುಗಳು! ಆ ಕ್ಷಣಕ್ಕೆ ನನಗೆ ನೆನಪಾಗಿ ಹೋದದ್ದು ಕುದ್ಮುಲ್ ರಂಗರಾಯರು.

ಅದೇ.. ಅದೇ.. ರಸ್ತೆಯ ಎಡದಲ್ಲಿರುವ ವಿಸ್ತಾರವಾದ ಅಂಗಳದಲ್ಲಿ ಕುದ್ಮುಲ್ ರಂಗರಾಯರು ಮಲಗಿದ್ದರು. ಇಲ್ಲ, ಅವರನ್ನು ಒಮ್ಮೆ ನೋಡದೆ ಇನ್ನೊಂದು ಹೆಜ್ಜೆ ಇಡಲಾರೆ ಅನಿಸಿತು. ಎಲ್ಲಿಗೋ ಹೋಗುತ್ತಿದ್ದ ಕಾರು ನಿಂತಲ್ಲೇ ನಿಂತಿತು. ನನ್ನ ಹೆಜ್ಜೆಯ ಧಿಕ್ಕೂ ಬದಲಾಗಿತ್ತು.. ಮಳೆಯಿಂದ ಆಗಷ್ಟೇ ಎದ್ದು ನಿಂತಿದ್ದ ಹಸಿರೋ ಹಸಿರು ನೆಲದಲ್ಲಿ ‘ಬ್ರಹ್ಮ ಸಮಾಜ’ ಎನ್ನುವ ಹೆಸರು ಹೊತ್ತಿದ್ದ ಗೇಟು ತೆಗೆದೆ..

ಅದರ ಜೊತೆಗೆ ನನ್ನ ನೆನಪುಗಳ ಗೇಟೂ ತೆರೆದುಕೊಂಡಿತು..

೧೯೯೨ ರಲ್ಲಿ ನಾನು ಮಂಗಳೂರಿಗೆ ಕಾಲಿಟ್ಟಾಗ ಕುದ್ಮುಲ್ ರಂಗರಾಯರ ಪರಿಚಯ ಏನೇನೂ ಇರಲಿಲ್ಲ. ಆದರೆ ಪ್ರತೀ ಬಾರಿ ನಾನು ಪಿ ವಿ ಎಸ್ ಸರ್ಕಲ್ ನಿಂದ ಎಡಕ್ಕೆ ಹೊರಳಿಕೊಂಡು ಕಚೇರಿ ತಲುಪಬೇಕಾದಾಗಲೆಲ್ಲಾ ನನ್ನ ಕಣ್ಣು ಬಲಗಡೆ ಇದ್ದ ಕಟ್ಟಡದತ್ತ ಹೋಗುತ್ತಿತ್ತು. ಅದಕ್ಕೆ ಕಾರಣ ಇಷ್ಟೇ ಆ ಬೆಳಗ್ಗೆಯಲ್ಲಿ ಎಷ್ಟೊಂದು ಮಕ್ಕಳು ಶಿಸ್ತಾಗಿ ಶಾಲೆಯ ಧಿಕ್ಕಿನತ್ತ ಬಿಲ್ಲಿನಿಂದ ಹೊರಟ ಬಾಣದಂತೆ ಹೋಗುತ್ತಿದ್ದರು. ಅದು ಹಾಸ್ಟೆಲ್. ಕೃಶ ದೇಹ ಆದರೆ ಬೆಳಕು ಹೊತ್ತ ಕಣ್ಣುಗಳು ಅದು ಖಂಡಿತಾ ಮೇಲ್ವರ್ಗದ ಹಾಸ್ಟೆಲ್ ಅಲ್ಲ ಎನ್ನುವುದನ್ನು ತಾನೇ ತಾನಾಗಿ ಸಾರಿಬಿಟ್ಟಿತ್ತು. ಅದು ಕುದ್ಮುಲ್ ರಂಗರಾವ್ ಅವರ ಹೆಸರು ಹೊತ್ತ ಹಾಸ್ಟೆಲ್.

ಆಫೀಸಿಗೆ ಬಂದವನೇ ನಾನು  ‘ಕುದ್ಮುಲ್ ರಂಗರಾವ್’ ಹೆಸರಿನ ಹಿಂದೆ ಬಿದ್ದೆ. ಅದು ಗೂಗಲ್ ಕಾಲವಲ್ಲ. ಹಾಗಾಗಿ ಎಲ್ಲೆಲ್ಲಿಗೋ ಫೋನು ರಿಂಗಾಯಿಸಲು ಶುರು ಮಾಡಿದೆ. ಆಗ ಹೊಳೆಯಿತು. ಅರೆ! ಕುದ್ಮುಲ್ ರ ಕೈಯನ್ನು ನಾನು ಈ ಹಿಂದೆಯೇ ಕುಲುಕಿದ್ದೇನೆ. ‘ಭಾರತ ಭಾರತಿ’ ಪುಸ್ತಕದ ಮಾಲಿಕೆಯಲ್ಲಿ. ತಕ್ಷಣ ನೆನಪು ಹಿಂದೋಡಿತು.

ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಎರಡೂ ಸೇರಿ ಆಗ ಕನ್ನಡ ಜಿಲ್ಲೆ ಎಂದು ಮಾತ್ರ ಇತ್ತು. ಗಾಂಧಿ ‘ಕನ್ನಡ’ ಜಿಲ್ಲೆಗೆ ಮೂರು ಬಾರಿ ಬಂದಿದ್ದರಂತೆ. ಆದರೆ ಒಂದು ವಿಶೇಷವಿತ್ತು ಕನ್ನಡ ಜಿಲ್ಲೆಯ ನೆಲದಲ್ಲಿ. ಕಾಸರಗೋಡಿನ ಕುದ್ಮುಲ್ ನಲ್ಲಿ ಹುಟ್ಟಿದ ರಂಗರಾಯರು ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಹೊರಟುಬಿಟ್ಟಿದ್ದರು. ಗಾಂಧಿ ಮತ್ತು ಅಂಬೇಡ್ಕರ್ ಗೂ ಮುಂಚೆಯೇ. ಗಾಂಧಿ ಮತ್ತು ಅಂಬೇಡ್ಕರ್ ಎದುರಿಸಿದ ಸಂಕಷ್ಟಗಳು, ಸವಾಲುಗಳ ಬಗ್ಗೆ ನಾವು ಓದಿದ್ದೇವೆ ಬೇಕಾದಷ್ಟು. ಹಾಗಾದರೆ ಅವರಿಗೂ ಮುನ್ನವೇ ಮನುಷ್ಯನನ್ನು ಕಾಣಲು ಹೋರಾಟ ಕುದ್ಮುಲ್ ರಂಗರಾಯರ ಹಾದಿ ಎಂತಹದ್ದಿರಬಹುದು?

ಕುದ್ಮುಲ್ ರಂಗರಾಯರು ಜಾತಿಯಿಂದ ಎತ್ತರದ ಸ್ಥಾನದಲ್ಲಿದ್ದರು. ಆದರೆ ಆ ಉಪ್ಪರಿಗೆಯನ್ನು ಅವರೇ ತೊಡೆದು ಹಾಕಿ ದಲಿತರೆಡೆಗೆ ನಡೆದುಬಂದರು.  ಶಿಕ್ಷಣವೊಂದೇ ಸಮಾನತೆಗೆ ಮೊದಲ ಬೆಳಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಅವರು ಮೊದಲು ಕೈ ಹಾಕಿದ್ದು ದಲಿತ ಶಾಲೆಯ ಸ್ಥಾಪನೆಗೆ. ಅಂಬೇಡ್ಕರ್ ಹಾಗೂ ಗಾಂಧೀಜಿ ಹೋರಾಟದ ಕಣಕ್ಕೆ ಇಳಿಯುವ ಮೊದಲೇ..

ಅವರತ್ತ ಕಲ್ಲು ತೂರಿಬಂತು, ಮಕ್ಕಳಿಗೆ ದಾರಿಯಲ್ಲಿ ಅಪಮಾನ ಮಾಡಲಾಯಿತು, ಶಾಲೆಗೆ ಮಕ್ಕಳು ಬರದಂತೆ ಮಾಡಲಾಯಿತು. ಮಕ್ಕಳು ಬಂದರೂ ಶಿಕ್ಷಕರೇ ಇರದಂತಾಯಿತು. ಈ ಎಲ್ಲವನ್ನೂ ದಾಟಿಕೊಂಡೇ ಕುದ್ಮುಲ್ ಆರು ಹೆಜ್ಜೆ ಹಾಕಿದರು. ಅವರೊಳಗೆ ಒಬ್ಬ ಮನುಷ್ಯ ಹುಟ್ಟಿ ಸಾಕಷ್ಟು ವರ್ಷವಾಗಿ ಹೋಗಿತ್ತು.

ರಂಜಾನ್ ದರ್ಗಾ ಹೇಳುತ್ತಾರೆ ‘ಅವರು ಶಿಕ್ಷಣ, ಭೂಮಿ ಹಾಗೂ ಅಧಿಕಾರ ಈ ಮೂರನ್ನೂ ದಲಿತರ ಏಳಿಗೆಯ ದೀವಿಗೆಯಾಗಿ ಬಳಸಿದರು’ ಎಂದು. ಕುದ್ಮುಲ್ ರಂಗರಾಯರು ‘ಡಿಪ್ರೆಸ್ಡ್ ಕ್ಲಾಸ್ ಮಿಷನ್’ ಹುಟ್ಟು ಹಾಕಿದರು. ದಲಿತರು ಮಹಿಳೆಯರ ಪರವಾಗಿ ನಿಂತರು. ಆ ಕಾಲಕ್ಕೆ ಮುನಿಸಿಪಾಲಿಟಿಯಲ್ಲಿ ಜಿಲ್ಲಾ ಬೋರ್ಡ್ ಗಳಲ್ಲಿ ದಲಿತರ ನೇಮಕಕ್ಕೆ ಆಗ್ರಹಿಸಿ ಯಶಸ್ಸೂ ಗಳಿಸಿದರು.

‘ಅವರಿಗೆ ಕ್ಷೌರ ಮಾಡಲು ಯಾರೂ ಮುಂದೆ ಬರಲಿಲ್ಲ, ಬಟ್ಟೆ ಒಗೆಯಲು ಮುಂದೆ ಬಂದವರು ಬಹಿಷ್ಕಾರಕ್ಕೆ ಒಳಗಾಗುತ್ತಿದ್ದರು’ ಎನ್ನುತ್ತಾರೆ ಲಕ್ಷ್ಮಣ ಕೊಡಸೆ. ಬಟ್ಟೆಗೆ ಅಂಟಿದ ಕೊಳೆಯನ್ನಾದರೂ ಹಾಗೇ ಬಿಡಬಹುದು ಆದರೆ ಮನಸ್ಸಿಗೆ ಅಂಟಿದ ಕೊಳೆ? . ಹಾಗಾಗಿಯೇ ಕುದ್ಮುಲ್ ರಂಗರಾಯರು ಕೊಳೆ ತೊಳೆಯುವ ಮಡಿವಾಳನಂತೆ, ಜಗದ ಕೊಳೆ ತೊಲಗಿಸುವ ಜಲಗಾರನಂತೆ ಹೆಜ್ಜೆ ಹಾಕಿದರು.

ನಾನು ‘ಬ್ರಹ್ಮ ಸಮಾಜ’ದ ಆ ನೆಲದಲ್ಲಿ ಕಾಲಿಟ್ಟಾಗ ಎಲ್ಲೆಲ್ಲೂ ಹಸಿರು ಮುಕ್ಕಳಿಸುತ್ತಿತ್ತು. ಮಂಗಳೂರಿನ ಹೃದಯ ಭಾಗದಲ್ಲೇ ಕುದ್ಮುಲ್ ರಂಗರಾಯರ ಸಮಾಧಿ ಇತ್ತು. ಮಂಗಳೂರಿಗೇ ಹೃದಯವಂತಿಕೆ ಕೊಟ್ಟ ಅವರು ಅಲ್ಲೇ ಇದ್ದರು. ನಾನು ಕ್ಯಾಮೆರಾ ಕ್ಲಿಕ್ಕಿಸುತ್ತಾ ಹೋದೆ. ಮನುಷ್ಯರಿಗೆ ಹೃದಯ ಕೊಡಬಹುದು ಆದರೆ ತಂತ್ರಜ್ಞಾನದ ನಾಗಾಲೋಟದಲ್ಲಿ ತಾನೂ ಇನ್ನೊಂದು ಮೆಷಿನ್ ಮಾತ್ರವಾಗಿರುವ ಸಮಾಜಕ್ಕೆ ಹೃದಯ ಕಸಿ ಮಾಡುವುದು ಹೇಗೆ? ಎನ್ನುವುದು ತಲೆಯಲ್ಲಿ ಸುತ್ತಿ ಸುಳಿಯಲಾರಂಭಿಸಿತು.

ಹೊರಡಲು ಕಾರು ಸಜ್ಜಾಯಿತು. ಒಂದಷ್ಟು ದೂರ ಸಾಗಿರಬಹುದೇನೋ..

”ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ, ದೊಡ್ಡವರಾಗಿ, ಸರಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಗಳಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಗಬೇಕು. ಆಗ ನನ್ನ ಜನ್ಮ ಸಾರ್ಥಕವಾಗುತ್ತದೆ..”

ಎಂದು ಅವರ ಸಮಾಧಿಯ ಮೇಲೆ ಇದ್ದ ಮಾತು ಕಾರಿನ ಚಕ್ರದಂತೆಯೇ ನನ್ನೊಳಗೆ ಸುತ್ತಲಾರಂಭಿಸಿತು.

 

‍ಲೇಖಕರು avadhi

July 2, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

    • Anonymous

      ಪ್ರಿಯ ಮೋಹನರೇ, ಕುದ್ಮಲ್ ರಂಗರಾಯರ ಬಗೆಗಿನ ಬರೆಹ ಅವರನ್ನು ಪುನಃ ಸ್ಮರಿಸುವಂತೆ ಮಾಡಿತು. ಬೆಳಕಿಗೆ ಬಾರದ ಇನ್ನೂ ಇಂತಹ ಎಷ್ಟು ವಜ್ರಗಳು ಕಗ್ಗತ್ತಲ ಕಾನನಗಳಲ್ಲಿ ಇವೆಯೋ… ಮುಂಬರುವ ಪೀಳಿಗೆಯವರಿಗೆ ಇಂತಹ ಮಹಾನುಭಾವರು ಇದ್ದರು ಎಂದು ನೆನಪಿಸಲು ಹಾಗೂ ರಂಗರಾಯರು ಮಾಡಿದಂತಹ ಸಮಾಜಮುಖಿ ಚಟುವಟಿಕೆಗಳಿಂದ ಪ್ರೇರಿಪಿತಗೊಳ್ಳಲು ಈ ತರಹದ ವಿಷಯಗಳನ್ನು ನಮ್ಮ ಶಾಲಾಕಾಲೇಜುಗಳ ಪಠ್ಯಗಳಲ್ಲಿ ಅಳವಡಿಸಿಕೊಳ್ಳಬೇಕು……ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು

      ಪ್ರತಿಕ್ರಿಯೆ
  1. Ashwath Kodagadde

    ಮೊನ್ನೆ ಮಂಗಳೂರಿನಲ್ಲಿ ಸಿಕ್ಕಿದ್ರಿ ಅಂತಾ ಸ್ನೇಹಿತ ಕಿರಣ್ ಹೇಳಿದ್ರು. ಆದ್ರೆ ಈ ಮಹಾನ್ ಚೇತನವನ್ನ ಭೇಟಿಯಾಗಿದ್ದು ಗೊತ್ತಾಗಿರಲಿಲ್ಲ. ಆಗ ಅಷ್ಟು ಕಷ್ಟಪಟ್ಟು ಅವರನ್ನು ಹುಡುಕಿದ್ರಿ. ಆದರೆ ಇಂದು ಕೈತುದಿಯಲ್ಲೇ ಎಲ್ಲವೂ ಸಿಗುತ್ತಿದ್ರೂ ಅವರ ಬಗ್ಗೆ ತಿಳಿದುಕೊಂಡಿರಲಿಲ್ಲ. ಬೆಳ್ಳಂಬೆಳಿಗ್ಗೆ ಒಂದು ಪೊಸಿಟೀವ್ ಸ್ಟೋರಿ. ನಿಮ್ಮ ನೆನಪಿನ ಮೆರವಣಿಗೆಗೆ ನಮೋನಮಃ

    ಪ್ರತಿಕ್ರಿಯೆ
  2. Sudha ChidanandGowd

    ಅಬ್ಬಾ.,.ಎಂಥೆಂಥಾ ಹಿರಿಯ ಹೃದಯವಂತ ಸಜ್ಜನರು ಆಗಿಹೋಗಿದ್ದಾರೆ ನಮ್ಮ ನಡುವೆ. ಒಂದೆರಡು ಬಾರಿ ಮಂಗಳೂರಿಗೆ ಹೋಗಬೇಕಾಗಿ ಬಂದಿದ್ದಾಗ ಇವರ ಹೆಸರು ಕೇಳಿದ್ದೆ. ಇದೀಗ ಸಂಪೂರ್ಣ ಮಾಹಿತಿ ದೊರೆಯಿತು. ಅವರ ಸಮಾಧಿಯ ಮೇಲಿನ ಸಾಲುಗಳಂತೂ..
    ಹೃದಯ ತುಂಬಿ ಬಂದಿತು.
    ಧನ್ಯವಾದ-ಸೊಗಸಾದ ಬರವಣಿಗೆಗೆ ಮತ್ತು ಹಸಿರು ಚಿಮ್ಮುತಿರುವ ಫೋಟೋಗಳಿಗೆ.

    ಪ್ರತಿಕ್ರಿಯೆ
  3. ನಾಗರಾಜ್ ಹರಪನಹಳ್ಳಿ

    ಸರ್, ಮೊನ್ನೆ ಸಾವಿತ್ರಿ ಬಾಯಿ ಪುಲೆ ಬಗ್ಗೆ ಬಂದ ಕನ್ನಡದ ಪುಸ್ತಕ ಓದಿದೆ. ಆಗ ನೆನಪಾದರು ಕುದ್ಮಲ್ ರಂಗರಾಯರು. ಅವರ ಹೆಸರು ಪುಲೆ ಅವರ ಬಗ್ಗೆ ಓದುವಾಗ ಎಷ್ಟು ನೆನಪು ಮಾಡಿಕೊಂಡರೂ ಆಗಲಿಲ್ಲ. ಕಂದಗಲ್ ಅಂತ ಮಾತ್ರ ನೆನಪಾಗುತ್ತಿತ್ತು. ಅವರ ಬಗ್ಗೆ ಹಿಂದೆ ಕೇಳಿದ್ದೆ. ಸರಿ ಮಂಗಳೂರು ಗೆಳೆಯರಿಗೆ ದೂರವಾಣಿ ಮಾಡಿ ಕೇಳಬೇಕು ಅಂದ್ಕೊಂಡಿದ್ದೆ. ಅಷ್ಟರಲ್ಲಿ ನಿಮ್ಮ ಲೇಖನ. ಸಂತೋಷ ವಾಯಿತು. ಮಂಗಳೂರು ಹೋದಾಗ ರಂಗರಾಯರು ಕಟ್ಟಿದ ಶಾಲೆಗೆ , ಸಮಾಧಿ ಸ್ಥಳ ನೋಡಿ ಬರುವೆ.

    ಪ್ರತಿಕ್ರಿಯೆ
  4. .ಮಹೇಶ್ವರಿ.ಯು

    ನಿಜ ಸರ್. ಅಂತಹ ಮಹಾತ್ಮರ ನೆನಪಿನ ದೀಪವನ್ನು ಆಗಾಗ ಹಚ್ಚ್ಕುತ್ತಿರಬೇಕು..ಆದರೆ ನಾನು ಈ ಹಿಂದೆ ಬಹಳ ವಿಚಾರಿಸಿದ್ದೆ. ಕುದ್ಮಲ್ ಎಂಬ ಸ್ಥಳ ಕಾಸರಗೋಡಿನಲ್ಲಿ ಇದ್ದಂತಿಲ್ಲ.ಮೂಲ್ಕಿಯ ಸಮೀಪದಲ್ಲಿ ಕುದ್ಮಲ್ ಎಂಬ ಊರಿದ್ದು ಅಲ್ಲಿಂದ ಅವರ ಹಿರಿಯರು ಕಾಸರಗೋಡಿಗೆ ಹೋಗಿ ನೆಲೆನಿಂತ ಕಾರಣದಿಂದ ಕುದ್ಮಲ್ ಎಂಬ ಹೆಸರು ಅವರೊಂದಿಗೆ ಬೆಸೆದುಬಂದಿರಬೇಕು.. ಆಗ ಕಾಸರಗೋಡಿನಲ್ಲಿ ಬಹಳಷ್ಟು ಸಾರಸ್ವತ ಕುಟುಂಬಗಳು ಇದ್ದವಂತೆ.ರಂಗರಾಯಯರ ಹುಟ್ಟು, ಆರಂಭಿಕ ವಿದ್ಯಾಭ್ಯಾಸ ಕಾಸರಗೋಡಿನಲ್ಲಿ ನಡೆಯಿತೆಂದು ಕೇಳಿದ್ದೆ.

    ಪ್ರತಿಕ್ರಿಯೆ
    • Avadhi

      ಪ್ರತಿಕ್ರಿಯೆಗಾಗಿ ವಂದನೆಗಳು. ಕುದ್ಮುಲ್ಎನ್ನುವ ಗ್ರಾಮ ಮದ್ರಾಸ್ ಪ್ರಾಂತ್ಯದಲ್ಲಿತ್ತು. ಆಗ ಅದು ಕಾಸರಗೋಡಿನ ಭಾಗವಾಗಿತ್ತು ಎನ್ನುವ ವಿವರಣೆಯಷ್ಟೇ ನನಗೂ ಸಿಕ್ಕಿರುವುದು. ಬಹುಷಃ ರಾಜ್ಯ ರಚನೆಯ ನಂತರ ಇದರ ಹೆಸರೂ ಬದಲಾಗಿರಬೇಕು. ಇದನ್ನು ನಾನೂ ಹುಡುಕುತ್ತಿದ್ದೇನೆ

      ಪ್ರತಿಕ್ರಿಯೆ
  5. Na.Damodara Shetty

    ಕುದ್ಮಲ್ ರಂಗರಾಯರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು, ಆರೋಗ್ಯಕರ ಸಮಾಜ ಕಟ್ಟಬಯಸುವವರು. ಜಿ.ಎನ್.ಮೋಹನ್ ಆ ದಿಸೆಯಲ್ಲಿ ಇಟ್ಟ ಹೆಜ್ಜೆ ಶ್ಲಾಘನೀಯ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: