ಕುಟುಂಬ ಯೋಜನೆಯೆಂಬ ಅಣಕ…

ಸಮತಾ.ಆರ್

ಈ ಕರೋನ ಕಾಲದ ಕಡ್ಡಾಯ ರಜೆಯಲ್ಲಿ ಹೀಗೆ ಒಂದು ದಿನ ಕಾಲ ಸಾಗದೆ ಮೊಬೈಲ್ ಹಿಡಿದು ಫೇಸ್ಬುಕ್ ದುರ್ಬೀನಿನಿಂದ ಅವರಿವರ ಜೀವನದೊಳಗೆ ಇಣುಕಿ ನೋಡುತ್ತಿದ್ದಾಗ ನನ್ನ ಪಿಯುಸಿ ಗೆಳತಿಯೊಬ್ಬಳು ಕಣ್ಣಿಗೆ ಬಿದ್ಲು. ‘ಅರೆ ನೋಡಿ ಎಷ್ಟೋ ವರ್ಷ ವಾಗಿತ್ತಲ್ಲ’ ಎನಿಸಿ ತಕ್ಷಣವೇ ನನ್ನ ಫೋನ್ ನಂಬರ್ ಮೆಸೇಜ್ ಮಾಡಿದೆ. ಒಂದರ್ಧ ಗಂಟೆಯಲ್ಲೆ ಅವಳು ಕರೆ ಮಾಡಿ ಚೆನ್ನಾಗಿ ಬಾಯಿ ನೋಯುವಷ್ಟು ಹರಟುವಾಗ ನಾನು ಇರುವ ಊರಿನಲ್ಲೇ ಅವಳೂ ಇರುವುದು ತಿಳಿದು ಬಲು ಖುಷಿಯಾಯಿತು. ಅವಳಿಗೆ ಪಿಯುಸಿ ಕಳೆದ ತಕ್ಷಣವೇ ಮದುವೆ ಮಾಡಿ ಬಿಟ್ಟಿದ್ದರಿಂದ ಈಗ ಅವಳ ಮಕ್ಕಳು ಆಗಲೇ ಕಾಲೇಜ್ ಮೆಟ್ಟಿಲು ಹತ್ತಿರುವುದು, ಗಂಡ ಸರ್ಕಾರಿ ಉದ್ಯೋಗದಲ್ಲಿ ದೊಡ್ಡ ಅಧಿಕಾರಿಯಾಗಿರುವುದು ಎಲ್ಲಾ ಹೇಳಿಕೊಂಡಳು.

ಓದುವ ಕಾಲದಲ್ಲಿ ತುಂಬಾ ಚೆನ್ನಾಗಿ ಓದುತ್ತಿದ್ದ ಅವಳಿಗೆ ಒಳ್ಳೇ ಕೆಲಸದಲ್ಲಿ ಇದ್ದ ಗಂಡು ಬಂದ ಕಾರಣ ಪಿಯುಸಿ ಪರೀಕ್ಷೆ ಮುಗಿದ ತಕ್ಷಣವೇ ಮದುವೆ ಮಾಡಿಬಿಟ್ಟರು. ವರನೋ ಚೆನ್ನಾಗಿ ಓದಿ ಒಳ್ಳೇ ಕೆಲಸದಲ್ಲಿದ್ದರೂ ಆತನ ವಯಸ್ಸು ಮಾತ್ರ, ಇವಳ ಅಪ್ಪನ ಪ್ರಕಾರವೇ ‘ಸೊಲುಪವೆ ಸೊಲೂಪ ಹೆಚ್ಚು’. ಅವರಮ್ಮನಂತೂ ‘ಅಷ್ಟೊಂದು ಓದಿ, ಬರ್ದು, ಕೆಲ್ಸ ಸಿಕ್ಕೋಷ್ಟ್ರಲ್ಲಿ ವಸಿ ವಯಸ್ ಆಗ್ದೇ ಇದ್ದ ದಾ, ಹೆಣ್ಣು ಒಂದ್ ಹೆತ್ ಮೇಲೆ ಗಂಡಂಗಿಂತ ವಯಸ್ಸಾಗಿ ಕಂಡೇ ಕಾಣ್ ತಾಳೆ. ಸುಮ್ನೆ ಒಪ್ಕೋ, ಎರಡ್ ಹೆತ್ ಮೇಲೆ ಎಲ್ಲಾ ಸರೋಯ್ತದೆ. ಅದೇನೋ ಎಣ್ಣೆ ಬಂದಾಗ ಕಣ್ಣು ಮುಚ್ ಕೊಂಡ್ರೂ ಅನ್ನಂಗೆ ಅಡ್ಬೇಡ’ ಎಂದು ಮಗಳನ್ನು ಮದುವೆಗೆ ಒಪ್ಪಿಸಿದ್ದರು.

ನಂತರ ವಿಳಾಸ ತೆಗೆದುಕೊಂಡು ಒಂದು ದಿನ ಮನೆಗೂ ಬಂದಳು ಅದೂ ಇದೂ ಎಲ್ಲಾ ಹರಟಿದ ಮೇಲೆ ನಾನು ‘ಅಲ್ಲಾ ಕಣೇ, ಅಷ್ಟು ಚೆನ್ನಾಗಿ ಓದುತ್ತಿದ್ದೆಲ್ಲ, ಮದ್ವೆಯಾದ ಮೇಲೂ ಓದು ಮುಂದುವರೆಸಿ ಏನಾದ್ರೂ ಮಾಡಬಹುದಿತ್ತಲ್ಲ’ ಎಂದಿದ್ದಕ್ಕೆ ‘ಅದಕ್ಕೆಲ್ಲಾ ಎಲ್ಲೇ ಟೈಮ್ ಇತ್ತು. ಮದ್ವೆಯಾದ ಮೇಲೆ ಮೂರು ವರ್ಷಕ್ಕೇ ಎರಡು ಮಕ್ಕಳಾಗಿ, ಅವರನ್ನು ಸಾಕಿ ಬೆಳೆಸೋದ್ರಲ್ಲೆ ಆಯಿತು, ನನಗೆ ಅಂಥ ಪುರುಸೊತ್ತು ಎಲ್ಲಿತ್ತು’ ಎಂದು ನಿಟ್ಟುಸಿರಾದಳು.

ನನಗೆ ಅಚ್ಚರಿಯೆನಿಸಿ ‘ಅದ್ಯಾಕೆ ಅಷ್ಟು ಬೇಗ ಬೇಗ ಮಕ್ಳು ಮಾಡ್ಕೊಂಡೆ. ಈ ಕಾಲದಲ್ಲಿ ಎಷ್ಟೊಂದು ಕುಟುಂಬ ಯೋಜನೆ ಪ್ಲಾನ್ ಇವೆ, ಮಕ್ಳ ಮಧ್ಯೆ ಗ್ಯಾಪ್ ತೊಗೊಬಾರ್ದಿತ್ತಾ’ ಅಂದರೆ ಅವಳು’ನೋಡೇ, ನನ್ ಗಂಡ ನನಗಿಂತ ಹದಿನೈದು ವರ್ಷ ದೊಡ್ಡೋರು, ವಯಸ್ಸಾದ ಮೇಲೆ ಮದ್ವೆ ಆಗಿದ್ದಲ್ವಾ ಅದಕ್ಕೆ ಬೇಗ ಬೇಗ ಮಕ್ಳು ಮಾಡ್ಕೊಳ್ಳೋಣ, ಇಲ್ದಿದ್ರೆ ರಿಟೈರ್ ಆದ್ಮೇಲೂ ಮಕ್ಳು ನೋಡೋದೇ ಆಗುತ್ತೇ, ಅಂತೇಳಿ ಹಾಗಾಯಿತು. ನಮ್ಮ ಇಷ್ಟ ಯಾರ್ ಕೇಳ್ತಾರೆ ಹೇಳು. ಇದಕ್ಕೆ ಕುಟುಂಬ ಯೋಜನೆ ಅಂತ ಯಾರ್ ಹೆಸರು ಇಟ್ರೋ, ಗಂಡನ ಯೋಜನೆ ಅಂತ ಇಡಬೇಕಿತ್ತು’ ಅಂತ ವಿಷಾದದಿಂದಾ ನಕ್ಕಾಗ ಕನಿಕರವೆನಿಸಿತು.

ಈ ಕುಟುಂಬ ಯೋಜನೆ ಅನ್ನೋದು ನಮ್ಮ ದೇಶದಲ್ಲಿ ಚಾಲ್ತಿಗೆ ಬಂದು ಸ್ವಲ್ಪ ದಶಕ ಗಳಾಗಿವೆ ಅಷ್ಟೇ. ನಮ್ಮ ಅಜ್ಜಿ ತಾತಂದಿರ ಕಾಲದಲ್ಲಂತೂ ಇರಲೇ ಇಲ್ಲ ಬಿಡಿ. ಹಾಗಾಗಿ ನಮ್ಮ ಪೀಳಿಗೆಯವರಿಗೆ ಅಂದರೆ ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ಹುಟ್ಟಿದವರಿಗೆ ಒಂದುಗಾಡಿ ಜನ ಅತ್ತೆ, ಮಾವ, ಚಿಕ್ಕಮ್ಮ, ಚಿಕ್ಕಪ್ಪ, ದೊಡ್ಡಮ್ಮ, ದೊಡ್ಡಪ್ಪಂದಿರು ಇಲ್ಲವೇ? ಅಜ್ಜಿ ತಾತಂದಿರ ಕಾಲದಲ್ಲಿ, ಸಾಲು ಸಾಲು ಮಕ್ಕಳನ್ನು ಹೆತ್ತು, ಅವರನ್ನು ಸಾಕಿ, ಸಲಹಿ, ಸೆಟಲ್ ಮಾಡೋಷ್ಟರಲ್ಲಿ ಅಜ್ಜಿ ಅಜ್ಜಂದಿರಿಗೆ ವಯಸ್ಸಾಗಿ, ಬೆನ್ನು ಬಾಗಿ, ದೈಹಿಕ, ಮಾನಸಿಕ, ಆರ್ಥಿಕವಾಗಿ ನಿಂತು ಹೋಗಿರುತಿದ್ದರು.

ಅವರ ಮುಂದಿನ ಪೀಳಿಗೆಯವರಾದ ನಮ್ಮ ಅಮ್ಮ ಅಪ್ಪಂದಿರ ಕಾಲಕ್ಕೆಲ್ಲಾ ಮೆಲ್ಲ ಮೆಲ್ಲನೆ ಅಡಿಯಿಡತ್ತ ಬಂದ ಕುಟುಂಬ ಯೋಜನೆಯ ಕೃಪೆಯಿಂದಾಗಿ ಇಬ್ಬರು ಇಲ್ಲವೇ ಮೂವರು ಮಕ್ಕಳಿಗೆ ಕುಟುಂಬವನ್ನು ಸೀಮಿತವಾಗಿಸಿಕೊಂಡು, ಅದರಿಂದಾಗಿ ಆರ್ಥಿಕ ಸ್ಥಿತಿ ಉತ್ತಮಗೊಳಿಸಿಕೊಂಡು, ಇರೋ ಮಕ್ಕಳನ್ನೇ ಎಲ್ಲಾ ಸವಲತ್ತು ಸೌಕರ್ಯ ನೀಡಿ ಸಾಕಲಾರಂಭಿಸಿದರು. ಅದರಲ್ಲೂ ಹೆಣ್ಣು ಮಕ್ಕಳಿಗೂ ವಿದ್ಯೆ, ಉದ್ಯೋಗಗಳಿಸಲು ಪ್ರೋತ್ಸಾಹ ಅವಕಾಶಗಳು ಹೆಚ್ಚು ಹೆಚ್ಚಾಗಿ ಸಿಗಲಾರಂಭಿಸಿದ್ದೂ ಇದೇ ಕಾಲದಲ್ಲಿ. ಆದರೆ ಹೆಣ್ಣು ಮಕ್ಕಳ ವಿದ್ಯೆಗೆ ಪ್ರೋತ್ಸಾಹ ನೀಡಿದ ಅಪ್ಪ ಅಮ್ಮಂದಿರು ಮದುವೆ ಮತ್ತು ಉದ್ಯೋಗಕ್ಕೆ ಹೆಚ್ಚಿನ ಆಯ್ಕೆಯ ಸ್ವಾತಂತ್ಯ ನೀಡಿದ್ದು ಕಡಿಮೆಯೇ.

‘ಡಿಗ್ರೀ ಇಲ್ಲವೇ ಮಾಸ್ಟರ್ ಡಿಗ್ರೀ ಯಾದ್ರು ಓದಿ ಕೊಳ್ಳಲಿ, ತಕ್ಷಣ ಕೆಲಸ ಸಿಕ್ರೆ ಹೋಗ್ಲಿ, ಇಲ್ದಿದ್ರೆ ಮದ್ವೆ ಮಾಡಿದ್ರಾಯಿತು, ಆಮೇಲೆ ಬೇಕಾರೆ ಗಂಡನ ಮನೆಯವರು ಒಪ್ಪಿದ್ರೆ ಕೆಲ್ಸ ಮಾಡ್ಲಿ, ಇಲ್ದಿದ್ರೆ ನೆಮ್ಮದಿಯಾಗಿ ಮನೇಲಿ ಇರ್ಲಿ’ ಎನ್ನುವ ಧೋರಣೆಯೇ ಬಹುತೇಕ ಮಂದಿಯದು. ಇದಕ್ಕೆ ಅಪವಾದ ಎನ್ನುವ ಮನೋಭಾವದವರೂ ಇದ್ದರೂ ಅವರ ಸಂಖ್ಯೆ ಕಡಿಮೆಯೇ.

ಇನ್ನು ನನ್ನ ಗೆಳತಿಯರ ಮನೋಭಾವದ ಬಗ್ಗೆ ಹೇಳುವುದಾದರೆ ‘ಚೆನ್ನಾಗಿ ಓದಿ ಕರಿಯರ್ ಮಾಡ್ತೀವಿ’ ಅನ್ನೋರು ಎಷ್ಟಿದ್ದರೋ ‘ಮದ್ವೆ ಯಾಗಿ ಸೆಟಲ್ ಆದ್ರೆ ಸಾಕು’ ಅನ್ನೋರು ಕೂಡ ಅಷ್ಟೇ ಇದ್ದರು. ಆಗಿನ ಕಾಲದಲ್ಲಿ ತಮ್ಮ ಮಗಳಿಗೆ ಅವಳ ಗುಣ, ರೂಪ, ವಿದ್ಯೆಗೆ ತಕ್ಕ ವರನನ್ನು ಹುಡುಕಿ, ಅವನುದ್ದ ವರದಕ್ಷಿಣೆ ಸುರಿದು, ವರ್ಷದೊಳಗೆ ಅವಳು ಬಸಿರಾಗುವುದನ್ನೇ ಕಾಯ್ದು, ಕರೆದು ಬಾಣಂತನ ಮಾಡಿ, ಮಗುವಿಗೊಂದು ಚಿನ್ನದ ಸರ, ಉಂಗುರ, ಬೆಳ್ಳಿ ಉಡುದಾರ ಮಾಡಿ ಕಳಿಸಿಕೊಟ್ಟರೆ ಸಾಕು, ತಂದೆ ತಾಯಂದಿರಿಗೆ ಒಂದು ದೊಡ್ಡ ತಲೆನೋವು ತಪ್ಪಿದಂತೆಯೆ ಸರಿ.

ಇದರ ನಡುವೆ ಚೆನ್ನಾಗಿ ಓದಿ, ಒಳ್ಳೆಯ ಕರಿಯರ್ ಮಾಡಬೇಕೆಂಬ ಹಂಬಲವಿದ್ದರೂ ಮನೆಯವರ ಒತ್ತಡಕ್ಕೆ ಮದ್ವೆಯಾಗಿ, ಮದ್ವೆಯಾದ ಬಳಿಕ ಗಂಡ ಸಹಕಾರ ಕೊಟ್ಟರೆ ಮುಂದೆ ಓದಿ ಕೆಲಸಕ್ಕೆ ಸೇರಬೇಕೆನ್ನುವ ಅಸೆಯಿದ್ದ ಕೆಲವು ಗೆಳತಿಯರ ಕನಸು ಈ ಮೇಲೆ ಹೇಳಿದ ಗೆಳತಿಯಂತೆ ಗಂಡನ ಸಹಕಾರವಿಲ್ಲದೇ ಮಣ್ಣು ಪಾಲಾಗಿದ್ದು ಇದೆ.

ನನ್ನ ಉದ್ಯೋಗಸ್ಥ ಗೆಳತಿಯೊಬ್ಬಳು ಮೊದಲನೇ ಮಗು ಸಿಸೇರಿಯನ್ ನಿಂದಾಗಿ ಅವಳ ಗೈನಿಕ್ ಅವಳಿಗೆ ಇನ್ನು ಮೂರು ವರುಷ ಮಕ್ಕಳು ಮಾಡಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದರು. ಸಿಸೇರಿಯನ್ ನಿಂದಾಗಿ ಲೂಪ್ ಬಳಸ ಲಾಗದೆ ಅವಳು ಪಿಲ್ ಗಳ ಮೊರೆ ಹೊಕ್ಕಾಗ, ಅವಳಿಗೇಕೊ ಅಡ್ಡ ಪರಿಣಾಮಗಳುಂಟಾಗಿ ಮೈ ಕೈ ಎಲ್ಲಾ ವಿಪರೀತವಾಗಿ ಊದಿ ಕೊಳ್ಳಲು ಶುರುವಾಯಿತು. ತಕ್ಷಣ ಪಿಲ್ ನಿಲ್ಲಿಸಿ ತನ್ನ ಗಂಡನಿಗೆ ‘ನೀವೇ ಏನಾದ್ರೂ ಮಾಡಿಕೊಳ್ಳಿ’ ಅಂದ್ರೆ ಆತ ಖಡ ಖಂಡಿತವಾಗಿ ನಿರಾಕರಿಸಿದ. ಹಾಗಾಗಿ ಇನ್ನೊಂದೇ ವರ್ಷಕ್ಕೆ ಇನ್ನೂ ಒಂದು ಮಗು ಸಿಸೇರಿಯನ್ ನಿಂದಲೆ ಅವತರಿಸಿ, ಅವಳ ಪಾಡು ಯಾರಿಗೂ ಬೇಡ. ಮೂರು ವರ್ಷಗಳಲ್ಲಿ ಎರಡು ಆಪರೇಷನ್, ಎರಡು ಚಿಕ್ಕ ಮಕ್ಕಳ ನೋಡುವ ಹೊಣೆಗಾರಿಕೆ ಎಲ್ಲದರಿಂದ ಬಸವಳಿದ ಅವಳು ಅನಿವಾರ್ಯವಾಗಿ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿ ಈಗ ಫುಲ್ ಟೈಂ ಗೃಹಿಣಿ ಯಾಗಿದ್ದಳೆ.

ಇನ್ನೊಬ್ಬಳು ಗೆಳತಿಗೂ ಕೂಡ ಇನ್ನೂ ಪದವಿ ಎರಡನೇ ವರ್ಷದಲ್ಲಿ ಮದುವೆ ನಿಶ್ಚಯವಾದರೂ ಅವಳು ತಾನು ಓದು ಮುಗಿಸದ ಹೊರತು ಮದುವೆ ಆಗಲಾರೆ ಎಂದು ಹಠ ಹಿಡಿದ ಕಾರಣ ಹುಡುಗ ಎರಡು ವರ್ಷ ಕಾಯಬೇಕಾಗಿ ಬಂತು. ನಂತರವೂ ಕೆಲಸಕ್ಕೆ ಸೇರುವ ಮಹದಾಸೆ ಇಟ್ಟು ಕೊಂಡಿದ್ದ ಅವಳು ತನ್ನ ಗಂಡನನ್ನು ‘ಮಕ್ಕಳು ತಡ ಮಾಡಿಕೊಳ್ಳೋಣ, ನಾನು ಒಂದೆರಡು ವರ್ಷ ವಾದಾರೂ ಕೆಲಸ ಮಾಡುತ್ತೀನಿ’ ಎಂದರೆ ಆತ ‘ಹೋಗೆ ನಿನ್ನ ಹಿಂದೆ ಎರಡು ವರ್ಷ ಸುತ್ತಿ ಸಾಕಾಗಿದೆ, ಇನ್ನೇನೂ ಡಿಮ್ಯಾಂಡ್ ಮಾಡ್ಬೇಡ’ ಎಂದು ಅವಕಾಶ ಕೊಡದ ಕಾರಣ ವರ್ಷದೊಳಗೆ ಮಗುವಿನ ತಾಯಿಯಾದಳು. ಅದೂ ಸಾಲದು ಅಂತ,ಅವರಮ್ಮ ‘ನನ್ನ ಕೈಕಾಲು ಗಟ್ಟಿ ಯಾಗಿರುವಾಗಲೇ ಇನ್ನೊಂದು ಬಾಣಂತನ ಕೂಡ ಮಾಡಿ ಬಿಡ್ತೀನಿ, ನಿಮ್ಮಣ್ಣ ಮದುವೆ ಆದ ಮೇಲೆ ಹೇಗೋ ಏನೋ, ಬರೋಳು ಹೆಂಗಿರುತ್ತಾಳೋ, ಅದಕ್ಕೆ ಇನ್ನೊಂದು ಮಗೂನ ಬೇಗ ಮಾಡ್ಕೋ’ ಅಂತ ಅವಳ ಜೀವ ತಿಂದು ,ಮದ್ವೆ ಯಾದ ಮೂರು ವರ್ಷಕ್ಕೇ ಎರಡು ಮಕ್ಕಳಾಗಿ, ಅವುಗಳ ಆರೈಕೆಯಲ್ಲಿ ಮುಳುಗಿ ಹೋಗಿ ಅವಳ ಕೆಲಸಕ್ಕೆ ಹೋಗುವ ಕನಸು ಬಾಡಿ ಹೋಯಿತು.

ನನ್ನ ಕಸಿನೊಬ್ಬಳ ಕಥೆ ಇನ್ನೂ ವಿಚಿತ್ರ. ಅವಳದು ಅತ್ತೆ ಮಾವಂದಿರ ಜೊತೆಗಿನ ತುಂಬಿದ ಮನೆ. ಆದರೆ ಗಂಡ ಸಹಕರಿಸಿದ್ದರಿಂದ ಮದುವೆಯಾದ ತಕ್ಷಣವೇ ಮಕ್ಕಳು ಮಾಡಿಕೊಳ್ಳದೆ ಆರಾಮಾಗಿದ್ದರು. ಒಂದು ದಿನ ಅವಳ ಭೇಟಿಯಾಗಲು ಹೋದಾಗ ಹೀಗೆ ಮಾತನಾಡುತ್ತ’ ಪರವಾಗಿಲ್ಲ ಕಣೇ, ಮದ್ವೆಯಾಗಿ ವರ್ಷ ಆದ್ರೂ ಇನ್ನೂ ಮಗು ಮಾಡ್ಕೊಂಡಿಲ್ಲ, ಮುಂದೆ ಓದು, ಕೆಲ್ಸ ಅಂತ ಏನಾದ್ರೂ ಪ್ಲಾನ್ ಇದೆಯಾ ‘ಅಂದಿದ್ದಕ್ಕೆ,’ ಇಲ್ಲ ಕಣಕ್ಕ, ನಮ್ಮತ್ತೆ ಆಗ್ಲೇ, ‘ನಮ್ ಕಡೇವೆಲ್ಲ ಮದ್ವೆಯಾದ ವರ್ಷಕ್ಕೆಲ್ಲಾ ಹಡದ್ರೆ, ಇದ್ ಯಾಕೋ ಸುಮ್ನದೆ’ ಅಂತಾ ಇರೋ ಬರೋ ಡಾಕ್ಟ್ರು, ಜೋಯಿಸ್ರು ಅಂತ ಕರ್ ಕೊಂಡು ಹೋಯ್ತಾವ್ರೆ. ದಿನಾ ಎದ್ದು ಅರಳಿಮರ ಬೇರೆ ಸುತ್ ಬೇಕು, ಈ ಕಾಟಕ್ಕಿಂತ ಈ ವರ್ಷ ಮಗು ಮಾಡ್ಕೊಳ್ಳೋದೆ ವಾಸಿ ಅಂತ ಅಂದ್ ಕೊಂಡಿದ್ದಿನಿ’ ಎಂದಾಗ, ‘ಯಾಕೆ ನಿಮ್ಮತ್ತೆಗೆ ನಿಮ್ ಪ್ಲಾನ್ ಬಗ್ಗೆ ಹೇಳಲಿಲ್ವಾ?’ ಅಂದಿದ್ದಕ್ಕೆ ‘ಹೇಳಿದ್ರೆ ಅಷ್ಟೇ, ನನ್ನ ಮನೆಯಿಂದ ಹೊರಹಾಕ್ತಾರೆ, ಅವರಿಗೆ ಹೇಳ್ದೆ ಈ ಮನೇಲಿ ಯಾವ ಕೆಲ್ಸಾನೂ ನಡೆಯೋ ಹಾಗಿಲ್ಲ’ ಎಂದು, ‘ಇನ್ನೇನು ಯಾವತ್ತಿದ್ರೂ ಗಂಡ ಮಕ್ಳು ಮನೆ ಅಂತಾ ತಾನೇ ನನ್ನ ಜೀವನ, ಆದಂಗೆ ಆಗ್ಲೀ ಅಂತ ಸುಮ್ಮನಾದೆ’ ಎಂದಾಗ, ಬರಿ ಇವಳೊಬ್ಬಳದಲ್ಲ ಈ ಕಥೆ ಅನಿಸಿಬಿಟ್ಟಿತು.
ಹೀಗೆ ನೋಡುತ್ತಾ ಹೋದ್ರೆ ಕುಟುಂಬ ಯೋಜನೆಯಲ್ಲಿ ಆಯ್ಕೆಯ ಅವಕಾಶವೇ ಸಿಗದ ಎಷ್ಟೊಂದು ಹೆಣ್ಣು ಮಕ್ಕಳ ಉದಾಹರಣೆಗಳು ದೊರೆಯುತ್ತವೆ.

ಸಾಲು ಸಾಲು ಮಕ್ಕಳ ಹಡೆಯುವುದು ತಪ್ಪಿ, ಒಂದೆರಡು ಮಕ್ಕಳಿಗೆ ಸೀಮಿತಗೊಳಿಸಿ ಕೊಳ್ಳುವ ಅವಕಾಶ ಸಿಕ್ಕಿರುವುದು ಒಂದೇ ಇದರಲ್ಲಿ ಪ್ಲಸ್ ಪಾಯಿಂಟ್. ಇನ್ನು ಮಕ್ಕಳ ಪಾಲನೆ, ಪೋಷಣೆ, ಮನೆ ನಿಭಾಯಿಸುವುದು ಎಲ್ಲಾ ಹೆಂಗಸರ ಪಾಲೆ. ಮಕ್ಕಳ ಪೋಷಣೆಗಾಗಿಯೇ ತಮ್ಮ ಕರಿಯರ್ ಕನಸು ಬಿಟ್ಟು ಕೊಟ್ಟು ಪೂರ್ಣ ಪ್ರಮಾಣದಲ್ಲಿ ಗೃಹಿಣಿಯಾದವರು ಸಾಕಷ್ಟಿದ್ದಾರೆ.

ಪ್ಲಾನ್ ಗಳ ದುರುಪಯೋಗದ ಕೆಲವು ವಿಚಿತ್ರ ಪ್ರಕರಣಗಳೂ ಇವೆ. ಅದರಲ್ಲಿಗಂಡು ಮಗುವೇ ಬೇಕು ಅಂತ ಅಂದುಕೊಂಡು, ಎರಡು ಮೂರು ಹೆಣ್ಣು ಮಕ್ಕಳಾದ ಮೇಲೂ ಆಪರೇಷನ್ ಗೆ ಒಪ್ಪದ ಗಂಡಂದಿರಿಂದಾಗಿ ಪ್ರತಿ ತಿಂಗಳೂ ಪೀರಿಯಡ್ಸ್ ಗಾಗಿ ಆತಂಕದಿಂದ ಕಾಯುವ ಕೆಲವರನ್ನೂ ನೋಡಿದ್ದೇನೆ. ಹೆಂಡತಿಯ ಮೇಲಿನ ಅನುಮಾನದಿಂದಾಗಿ ಅವಳಿಗೆ ಆಪರೇಷನ್ ಮಾಡಿಸದೆ ಮತ್ತೆ ಮತ್ತೆ ಬಸಿರಾದರೂ ತೆಗೆಸುತ್ತ ಗೋಳು ಹಾಕಿಕೊಂಡ ಅನುಮಾನ ಪಿಶಾಚಿ ಯೊಬ್ಬನನ್ನೂ ನೋಡಿದ್ದೇನೆ. ಇನ್ನು ಆಪರೇಷನ್ ಅಂದ್ರೆ ಟುಬೆ ಕ್ಟಮಿಯೇ. ವ್ಯಾಸೆಕ್ಟಮಿ ಮಾಡಿಸಿಕೊಂಡಿರುವವರ ಪ್ರಮಾಣ ಎಷ್ಟಿದೆ ಹೇಳಿ?

ಇದಕ್ಕೆ ಅಪವಾದಗಳೂ ಇಲ್ಲದಿಲ್ಲ. ಮನೆಯಲ್ಲಿ ಸಂಪೂರ್ಣ ಸಹಕಾರ ಸಿಕ್ಕಿ, ಯಶಸ್ವಿಯಾಗಿ ಮನೆ ಕರಿಯರ್ ಎರಡೂ ನಿಭಾಯಿಸಿದ ಮಹಿಳೆಯರೂ ಇದ್ದಾರೆ. ಓದು, ಕೆಲಸ, ನಂತರವೇ ಮದುವೆ, ಸಮಯಾವಕಾಶವಿದ್ದರೇ ಮಕ್ಕಳು, ಮಕ್ಕಳಾದರೂ ಗಂಡ ಹೆಂಡತಿಯರಿಬ್ಬರೂ ಜವಾಬ್ದಾರಿ ತೆಗೆದು ಕೊಳ್ಳಬೇಕೆನ್ನುವ ಮನೋ ಧೋರಣೆಯ ಹುಡುಗಿಯರನ್ನು ಕಂಡಾಗ ಖುಷಿಯಾಗುತ್ತದೆ. ಸಾಕಷ್ಟು ಸ್ವಾತಂತ್ರ್ಯ ನೀಡಿ ಓದಿಸಿರುವಾ ಕೆಲವು ಪೋಷಕರಿಂದಾಗಿ ಒಳ್ಳೆಯ ಶಿಕ್ಷಣ ದೊರೆತು, ಜೊತೆಗೆ ಒಳ್ಳೆಯ ಹವ್ಯಾಸ, ಅಭಿರುಚಿಗಳನ್ನೂ ಬೆಳೆಸಿ ಕೊಳ್ಳುವ ಅವಕಾಶವೂ ಎಷ್ಟೋ ಮಕ್ಕಳಿಗಿದೆ. ಮಕ್ಕಳ ಅಭಿರುಚಿ, ಮನೋಭಾವಗಳಿಗೆ ತಕ್ಕಂತ ಸಂಗಾತಿ ದೊರೆಯು ವವರೆಗೆ ಕಾಯುವ ತಾಳ್ಮೆ ಈ ಪೋಷಕರಿಗೂ ಇದೆ.

ಹಳ್ಳಿಗಳ ಕಡೆಯೂ ಒಂದೆರಡು ಮಕ್ಕಳನ್ನು ಮಾತ್ರ ಮಾಡಿ ಕೊಂಡಿರುವವರಾ ಸಂಖ್ಯೆಯೂ ಸಾಕಷ್ಟಿದ್ದು, ಅವರಲ್ಲಿ ಹಲವರು ತಮ್ಮ ಮಗಳಿಗೆ ಎಷ್ಟೇ ಗಂಡುಗಳು ನೋಡಲು ಬಂದರೂ, ಅವಳಿಗೆ ತಕ್ಕಂತ ವರ ಬರಲೆಂದು ‘ಇನ್ನೂ ಒಳ್ಳೆ ಕಡೆ ಕೊಟ್ಟರಾಯ್ತು, ಬಿಡಿ’ ಎಂದು ನಿರಾಳವಾಗಿರುವವರೂ ಇದ್ದಾರೆ.

ನನ್ನ ನೆಂಟರೊಬ್ಬರ ಮಗಳು ಬಿ.ಇ ಮಾಡಿ ಕೆಲಸಕ್ಕೆ ಸೇರಿ,ನಂತರ ಮದ್ವೆಯಾಗಿ, ಎರಡು ವರ್ಷಗಳಾದರೂ ಮಕ್ಕಳು ಮಾಡಿಕೊಳ್ಳದ್ದಕ್ಕೆ ಅವರಜ್ಜೀ ಒಂದಿನ ಆಕ್ಷೇಪಣೆ ತೆಗೆದಾಗ ಆ ಹುಡುಗಿ, ‘ಅಜ್ಜೀ,ಮಕ್ಳು ಗಿಕ್ಕಳು ಅಂತೆಲ್ಲಾ ನಂಗೆ ಈಗ ಟೈಮ್ ಇಲ್ಲಾ, ಫಾರಿನ್ ಗೆ ಹೋಗಿ ಮುಂದೆ ಓದಬೇಕು ಅಂದು ಕೊಂಡಿ ದ್ದೀನಿ, ನಿನ್ನ ಚಿನ್ನಪನ್ನ ಎಲ್ಲಾ ಮಾರಿ ನಂಗೆ ದುಡ್ಡು ಕೊಡು, ನಿನ್ ಹೆಸರೇಳಿ ಎಂ.ಟೆಕ್ ಮಾಡ್ಕೊಂಡ್ ಬರ್ತೀನಿ’ ಅಂತ ರೇಗಿಸಿದಾಗ ಆ ಅಜ್ಜಿ ಆ ಕಿವಿಯಿಂದ ಈ ಕಿವಿಯವರೆಗೆ ನಕ್ಕರು.

‍ಲೇಖಕರು Avadhi

February 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: