ವಿಜಯಶ್ರೀ ಹಾಲಾಡಿ ಅವರ ಕಥಾ ಸಂಕಲನ ‘ಉಮ್ಮಲ್ತಿ ಗುಡಿಯ ಸಾಕ್ಷಿ’
ಮಳೆಕೋಂಗಿಲ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
–ರಾಜಾರಾಂ ತಲ್ಲೂರು
ಕುಂದಾಪುರ ತಾಲೂಕಿನ ನಟ್ಟ ನಡುವೆ ರಾಷ್ಟ್ರೀಯ ಹೆದ್ದಾರಿ 66 ಸಾಗುತ್ತದೆ. ಈ ಹೆದ್ದಾರಿ ಹೇಗೆ ಕುಂದಾಪುರಕ್ಕೆ ಹೊರದಾರಿಯೋ ಹಾಗೆಯೇ ಒಂದು ಸಾಮಾಜಿಕ ವಿಭಾಜಕ ಕೂಡ ಹೌದು. ಹೆದ್ದಾರಿಯ ಪಶ್ಚಿಮಕ್ಕಿರುವ ಸಮುದ್ರ ತೀರದ ಬದುಕು ಮತ್ತು ಪೂರ್ವಕ್ಕಿರುವ ಪಶ್ಚಿಮ ಘಟ್ಟಗಳ ತಪ್ಪಲಿನ ಬದುಕುಗಳು ಸಂಪೂರ್ಣ ಭಿನ್ನ ಎಂಬುದು ನನ್ನ ಅನುಭವ. ಇದಕ್ಕೆ ವ್ಯತಿರಿಕ್ತ ಅಭಿಪ್ರಾಯಗಳಿರಬಹುದು… ಗೊತ್ತಿಲ್ಲ.
ಶಿಕ್ಷಕಿ, ಹೆಸರಾಂತ ಮಕ್ಕಳ ಸಾಹಿತಿ ವಿಜಯಶ್ರೀ ಹಾಲಾಡಿ ಅವರು ತಮ್ಮ “ಉಮ್ಮಲ್ತಿ ಗುಡಿಯ ಸಾಕ್ಷಿ” ಸಣ್ಣ ಕಥೆಗಳ ಸಂಕಲನವನ್ನು ಇತ್ತೀಚೆಗೆ ಕಳುಹಿಸಿದ್ದರು. ಇದು ಅವರ ಮೊದಲ ಕಥಾ ಸಂಕಲನ. ನನ್ನ ಗಡಿಬಿಡಿಗಳ ನಡುವೆ ಓದುವುದು ಸಾಧ್ಯ ಆಗಿರಲಿಲ್ಲ. ಈಗ ಅದನ್ನು ಓದಿ ಮುಗಿಸಿದೆ.
ಇಲ್ಲಿನ ಕಥೆಗಳು ನನಗೆ ಕಥೆಗಳಿಗಿಂತ ಹೆಚ್ಚಾಗಿ ಸ್ತಬ್ಧ ಚಿತ್ರಗಳು ಅನ್ನಿಸಿದವು. ಅದರಲ್ಲೂ ಹೆದ್ದಾರಿಯ ಪೂರ್ವಭಾಗದ, ಪಶ್ಚಿಮ ಘಟ್ಟಗಳ ತಪ್ಪಲಿನ ವಿಶಿಷ್ಟ ಜನಜೀವನದ ಕುರಿತು ಒಳನೋಟಗಳನ್ನು ಕೊಡಬಲ್ಲ ಹಲವು “ಘಟನೆಗಳು” ಇಲ್ಲಿವೆ. ಕುಂದಾಪುರದ ಪೂರ್ವಭಾಗ ಬಹುತೇಕ ದೊಡ್ಡ ಭೂಮಾಲಕರು ಮತ್ತು ಅವರ ಒಕ್ಕಲುಗಳ ಬದುಕಿನ ಕಥೆಗಳ ಸಮೃದ್ಧ ಖಜಾನೆ. ಈ ಒಕ್ಕಲುಗಳೋ ಅಲ್ಲಿನ ಬುಡಕಟ್ಟುಗಳ ಪರಿವಾರದವರು. ಅವರ ಪ್ರಾಮಾಣಿಕತೆ, ಶ್ರಮದ ದುಡಿಮೆ, ಮರ್ಯಾದಸ್ಥ ಬದುಕುಗಳು ಇತ್ತೀಚೆಗಿನವರೆಗೂ ಅಲ್ಲಿ ಸಂಕಥನಗಳಿಗೆ ಕೊರತೆ ಆಗದಂತೆಯೇ ಬದುಕಿದ್ದವು.
ವಿಜಯಶ್ರೀ ಅವರ ಈ ಕಥೆಗಳೆಲ್ಲವೂ ಆ ಸಮೃದ್ಧ ಖಜಾನೆಯದೇ ಭಾಗಗಳು. ನನಗೆ ಪುಸ್ತಕದಲ್ಲಿ ಇಷ್ಟ ಆದದ್ದು, ಅಥೆಂಟಿಕ್ ಆದ ಕುಂದಾಪ್ರ ಕನ್ನಡದ ನುಡಿಸಿರಿ ಮತ್ತು ಅವು ಹೊರಹೊಮ್ಮಿಸುವ ಕರಾವಳಿಯ ಈ ಭಾಗಕ್ಕೇ ವಿಶಿಷ್ಟವಾದ ಧ್ವನಿಗಳು. ಅಲ್ಲಿನ ಗ್ರಾಮೀಣ ಬದುಕಿನ ಜೊತೆ ಒಡನಾಡದೇ ಇಂತಹದೊಂದು ವಕಾಬುಲರಿ ಹುಟ್ಟುವುದು ಕಷ್ಟ ಇದೆ. ಇಲ್ಲಿರುವ 14 ಕಥೆಗಳೂ ಕೂಡ, ಕೊನೆಗೆ ಒಂದೇ ಕಥೆಯ ವಿವಿಧ ಆಯಾಮಗಳು ಅನ್ನಿಸಿದರೂ ಅಚ್ಚರಿ ಇಲ್ಲ; ಅಷ್ಟೊಂದು ಆಳವಾಗಿ ಅಲ್ಲಿನ ಬದುಕಿನ ಜೊತೆ ಈ ಕಥೆಗಳು (ಕಥೆಗಾರ್ತಿ) ಸಮ್ಮಿಳಿತಗೊಂಡಿದ್ದಾರೆ.

ಇಲ್ಲಿ ಆ ಬುಡಕಟ್ಟು ಬದುಕಿಗೆ “ಆಧುನಿಕತೆ”ಯ ಪ್ರವೇಶ ಬಹುತೇಕ ಕಥೆಗಳ ಟ್ರಿಗರಿಂಗ್ ಪಾಯಿಂಟ್. ಬಹುತೇಕ ಎಲ್ಲ ಕಥೆಗಳೂ ಸ್ತ್ರೀ ಕೇಂದ್ರಿತ. ಪುರುಷಪ್ರಧಾನ, ಪಾಳೆಗಾರಿ ವ್ಯವಸ್ಥೆಯ ಒಳಗೆ ಸ್ತ್ರೀ ಪಾತ್ರಗಳು ತೋರಿಸುವ ಮನುಷ್ಯ ರೂಪಗಳೇ ಹೆಚ್ಚಿನ ಕಥೆಯ ವಸ್ತುಗಳು. ಇಲ್ಲಿನ ಯಾವ ಸ್ತ್ರೀ ಪಾತ್ರ ಕೂಡ ಸ್ಟೀರಿಯೊಟೈಪ್ ಅಬಲೆ ಅಲ್ಲ. ತಮ್ಮ ಬದುಕನ್ನು ಸಮೃದ್ಧವಾಗಿ ಬದುಕಬಲ್ಲವರು. ಸಾರಾಯಿ, ಮೊಬೈಲು, ಸ್ವಸಹಾಯ ಸಂಘ, ಹೆದ್ದಾರಿ ತೆರೆದಿಟ್ಟ ಬಿಡುಗಡೆಯ (?!) ದಾರಿಗಳ ಚಿತ್ರಣದ ಮೂಲಕ ತಮ್ಮ ಪರಿಸರವನ್ನು ಚಿತ್ರಿಸುವ ಕಥೆಗಾರ್ತಿ, ಕೆಲವೆಡೆ ಕಥೆ ತುದಿಗೆ ತಲುಪಿಸಲು “ಅದ್ಭುತ ರಮ್ಯ”ಗಳ ಆಸರೆ ಪಡೆಯುವಾಗ ಮಕ್ಕಳ ಸಾಹಿತ್ಯದ ಪ್ರಭಾವ ಇಣುಕುತ್ತಿದೆ ಎಂದು ನನಗೆ ಅನ್ನಿಸಿತು. ಇದನ್ನು ನಾನು “ನೆಗೆಟಿವ್” ಆಗಿ ಹೇಳುತ್ತಿಲ್ಲ. ಈ ವಾಸ್ತವದ ಸ್ತಬ್ಧ ಚಿತ್ರಗಳಿಗೆ ಬೇರೆ ಹಾದಿ ಹಿಡಿಯುವುದು ತೀರಾ ಕೃತಕ ಅನ್ನಿಸಿಬಿಡುವ ಅಪಾಯ ಇದೆ.
ಆರಂಭದ ನಾಲ್ಕೈದು ಕತೆಗಳನ್ನು ಸಾಕಷ್ಟು ಧ್ಯಾನಿಸಿ ಬರೆದದ್ದು ಎದ್ದುಕಾಣಿಸುತ್ತದೆ. ಉಳಿದ ಕಥೆಗಳೂ ಅದೇ ಹಾದಿ ಹಿಡಿದಿದ್ದರೆ, ಕುಂದಾಪ್ರ ಕನ್ನಡಕ್ಕೆ ಒಂದು ಮಹತ್ವದ ಕಥಾ ಸಂಕಲನ ಇದಾಗಬಹುದಿತ್ತು. ಒಳ್ಳೆಯ ಓದು ಒದಗಿಸಿದ್ದಕ್ಕಾಗಿ ವಿಜಯಶ್ರೀ ಹಾಲಾಡಿ ಅವರಿಗೆ ಕೃತಜ್ಞತೆಗಳು.
ಮಳೆಕೋಂಗಿಲ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ. ಬೆಲೆ: ೨೦೦ ರೂ. ಪ್ರಕಾಶನಕ್ಕೆ ಸಂಪರ್ಕ: 8317494268






0 Comments