‘ಕಿ ರಂ ನೆನಪು’ ಇಲ್ಲಿದೆ..

ಹಿರಿಯ ವಿಮರ್ಶಕರಾದ ಟಿ ಎನ್ ವಾಸುದೇವಮೂರ್ತಿ ಅವರು ಕಿ ರಂ ನಾಗರಾಜ್ ಅವರ ಜೊತೆಗಿನ ನೆನಪುಗಳ ಕೃತಿಯನ್ನು ಹೊರತಂದಿದ್ದಾರೆ.

‘ಕಿ ರಂ ನೆನಪು’ ಕೃತಿಗೆ ಅವರು ಬರೆದ ಮಾತು ಇಲ್ಲಿದೆ-

ಡಾ.ಟಿ.ಎನ್. ವಾಸುದೇವಮೂರ್ತಿ

ಈ ಬರವಣಿಗೆಯನ್ನು ಪ್ರಾರಂಭಿಸುವ ಮುನ್ನ, ಫರ್ಡಿನೆಂಡ್ ಡಿ ಸಸ್ಯೂರನ ಚೆಲ್ಲಾಪಿಲ್ಲಿ ವಿಚಾರಗಳಿಗೆ ಅವರ ವಿದ್ಯಾರ್ಥಿಗಳು ಸೇರಿ ಒಂದು ಕೃತಿರೂಪವನ್ನು ನೀಡಿದಂತೆ ನಾನೂ ಸಹ ಕಿರಂ ಮಾತುಗಳನ್ನು ಸಂಕಲಿಸಿ ಪುಸ್ತಕ ರೂಪದಲ್ಲಿ ಮಂಡಿಸ ಬೇಕು ಎಂದು ಸಂಕಲ್ಪಿಸಿದ್ದೆ. ಪಂಪನ ಕುರಿತು, ನವ್ಯದ ಕುರಿತು, ಬೇಂದ್ರೆ, ಅಲ್ಲಮ, ಕುಮಾರವ್ಯಾಸರ ಕುರಿತು ಅವರು ಈ ಹದಿನೈದು ವರ್ಷಗಳಲ್ಲಿ ಹೇಳಿದ್ದ ಮಾತುಗಳನ್ನು ಆಗಾಗ ಕೇಳಿಸಿಕೊಂಡಿದ್ದ ನಾನು ಅವನ್ನು ನನ್ನ ನೆನಪಿನಿಂದಲೇ ಹೊರತೆಗೆದು ಅವರ ಮಾತುಗಳಲ್ಲಿ ನನ್ನದೇ ಮಿತಿಯಲ್ಲಿ ನಿರೂಪಿಸುವುದರಿಂದ ಕನ್ನಡ ಸಾಹಿತ್ಯ ಚರಿತ್ರೆಗೆ ಒಂದು ಮಹತ್ವದ ಪಠ್ಯ ಲಭ್ಯವಾದಂತಾಗುತ್ತದೆ ಹಾಗು ಕಿರಂರನ್ನು ಹಲವು ತಲೆಮಾರುಗಳವರೆಗೂ ತಲುಪಿಸಿದಂತಾಗುತ್ತದೆ ಎಂಬ ಮಹತ್ವಾಕಾಂಕ್ಷೆ ನನ್ನಲ್ಲಿತ್ತು.

ಹೀಗೆ ಮಾಡುವುದರಿಂದ ಹದಿನೈದು ವರ್ಷಗಳ ನನ್ನ ಕಿರಂ ಕೈಂಕರ್ಯಕ್ಕೂ ತೃಪ್ತಿ ಸಲ್ಲುತ್ತದೆ ಎಂದು ಭಾವಿಸಿ ಆ ನಿಟ್ಟಿನಲ್ಲಿ ಒಂದಿಷ್ಟು ಪ್ರಯತ್ನವನ್ನೂ ಮಾಡಿ ನೋಡಿದೆ. ಆದರೆ ಆ ಪ್ರಯತ್ನ ಅದೇಕೋ ಮುಂದುವರೆಯದೆ ಅರ್ಧಕ್ಕೇ ನಿಂತಿತು. ನನ್ನ ನೆನಪಿನಲ್ಲಿದ್ದ ಅವರ ಹಲವು ಅಭಿಪ್ರಾಯಗಳ ನಡುವೆ ಒಂದು ಸಾಂಗತ್ಯವನ್ನು ತರಲು ನನ್ನಿಂದಾಗಲಿಲ್ಲ.

ಏಕೆಂದರೆ ಕಿರಂ ಹಲವು ಒಳನೋಟಗಳನ್ನು ಹೊಂದಿದ್ದರಾದರೂ ಯಾವುದೇ ಪಠ್ಯದ ಬಗ್ಗೆ ಅವರ ವಿಚಾರಗಳಿಗೆ ಒಂದು ನಿಶ್ಚಿತ ಆಕೃತಿ ಎಂಬುದು ಇರಲಿಲ್ಲ. ಡಿ.ಆರ್. ನಾಗರಾಜ್ ಥರ ಒಂದು ಒಳನೋಟವನ್ನು ಪ್ರಮೇಯದ ರೂಪಕ್ಕೆ ಹಿಗ್ಗಿಸುವ ಆಸಕ್ತಿ, ವ್ಯವಧಾನಗಳು ಅವರಿಗಿರಲಿಲ್ಲ. ಬಹುಶಃ ತನ್ನ ಒಳನೋಟ ಇನ್ನಾವುದೋ ಸಿದ್ಧಾಂತದ ಸವಾರಿಗುದುರೆಯಾಗಿಬಿಡಬಹುದು ಎಂದು ಹೆದರಿಕೆಯೂ ಅವರಲ್ಲಿ ಮನೆ ಮಾಡಿದ್ದಿರಬಹುದು.

ಅದಕ್ಕೇ ಬೌದ್ಧಿಕತೆಯೊಂದಿಗೆ ಅವರು ಹಲವು ತರಹದ ಲೀಲೆಗಳಲ್ಲಿ ತೊಡಗಿರುತ್ತಿದ್ದರೇ ವಿನಃ ಒಂದು ಸಾಧನೆಯ ಪರಿಕರದಂತೆ ಬೌದ್ಧಿಕತೆಯನ್ನು ಎಂದೂ ಗಂಭೀರವಾಗಿ ಬಳಸುತ್ತಿರಲಿಲ್ಲ. “ಹಳೆಯ ಸಿದ್ಧಾಂತಗಳನ್ನೆಲ್ಲ ಕಟ್ಟಿಟ್ಟು ಪ್ರತಿಸಲವೂ ಹೊಸದಾಗಿ ಕಾವ್ಯವನ್ನು ಅನುಸಂಧಾನ ಮಾಡುವುದೇ ಸರಿಯಾದ ಕ್ರಮ” ಎಂದು ಪದೇ ಪದೇ ಹೇಳುತ್ತಿದ್ದರು.

ಹಾಗಾಗಿ ತುಂಬ ವೈಜ್ಞಾನಿಕ ವಿಧಾನದಲ್ಲಿ ಚಿಂತನೆ ನಡೆಸುವ ಸಸ್ಯೂರನ ವಿಚಾರಗಳನ್ನು ಸಂಗ್ರಹಿಸಿದಂತೆ ಅನುಭವ ಪ್ರಾಮಾಣ್ಯವನ್ನು ನೆಚ್ಚಿಕೊಂಡಿದ್ದ ಕಿರಂರ ಕಾವ್ಯದ ಕುರಿತ ವಿಚಾರಗಳನ್ನು ಸಂಗ್ರಹಿಸಿ ಅದಕ್ಕೊಂದು ಪ್ರಮೇಯದ ರೂಪ ನೀಡಿದರೆ ಕಿರಂ ಪಾಲಿಸುತ್ತಿದ್ದ ನೈತಿಕತೆಗೇ ಅಪಚಾರವಾಗುತ್ತದೆ.

ಅಲ್ಲದೆ ಅವರ ಸಾಹಿತ್ಯಿಕ ಹೊಳಹುಗಳು ಪ್ರಸಂಗವಶಾತ್ ಸಂಭವಿಸುತ್ತಿದ್ದಂಥವು. ಅವರಲ್ಲಿ ಜನಿಸುತ್ತಿದ್ದ ಹೊಸ ಆಲೋಚನೆಗಳು ಸದಾ ಸುತ್ತಣ ಸನ್ನಿವೇಶದಿಂದ ಪ್ರೇರಿತವಾಗಿರುತ್ತಿತ್ತು ಮತ್ತು ಅದರೊಡನೆಯೇ ತಿರೋಧಾನವಾಗಿಬಿಡುತ್ತಿತ್ತು. ಉದಾಹರಣೆಗೆ ಅವರ ಬೇಂದ್ರೆಯ ಅರ್ಥೈಸುವಿಕೆಯನ್ನು ಎದುರಿಗೆ ಕುಳಿತಿರುತ್ತಿದ್ದ ಕೇಳುಗನ ಅಥವ ವಿದ್ಯಾರ್ಥಿಯ ಪ್ರೌಢಿಮೆ, ಹಿನ್ನೆಲೆ, ನಂಬಿಕೆಗಳ ಜೊತೆಗೆ ಇನ್ನೂ ಹಲವು ವರ್ತಮಾನದ ವಿದ್ಯಮಾನಗಳು ಪ್ರಭಾವಿಸುತ್ತಿದ್ದವು.

ಕಿರಂ ವಿಚಾರಗಳನ್ನು ಈ ಬಗೆಯ ಪೂರಕ ಸಂಗತಿಗಳಿಂದ ಬೇರ್ಪಡಿಸಿ ದೇಶಕಾಲಾತೀತವಾಗಿ ನೋಡಲು ಸಾಧ್ಯವಿರಲಿಲ್ಲ. ವಿಚಾರದ ಹುಟ್ಟಿಗೆ ಮೂಲವಾಗಿದ್ದ ಅಂತಹ ಯಾವ ಸಣ್ಣ ಪುಟ್ಟ ಸಂಗತಿಯನ್ನೂ ಕಡೆಗಣಿಸದೆ ಕಿರಂ ಅವರನ್ನು ಪರಿಚಯಿಸಬೇಕೆಂಬ ನಿರ್ಧಾರದಿಂದ ಈ ಬರವಣಿಯನ್ನು ಪ್ರಾರಂಭಿಸಿದೆ. ಇದನ್ನು ಕಾವ್ಯದ ವಿಚಾರಗಳಿಗಷ್ಟೇ ಸೀಮಿತಗೊಳಿಸದೆ ಅವರ ಸಾಮೀಪ್ಯದಲ್ಲಿ ಹಲವು ಪ್ರಸಂಗಗಳಲ್ಲಿ ನಾನು ಪಡೆದ ಒಟ್ಟು ಜೀವನಾನುಭವವನ್ನು ಈ ಬರವಣಿಗೆಯಲ್ಲಿ ದಾಖಲಿಸಲು ಪ್ರಯತ್ನಿಸಿದ್ದೇನೆ.  

ಕಿರಂ ಒಮ್ಮೆ “ಏಕಾಗ್ರ ಚಿತ್ತದಿಂದ ಕುಳಿತು ಮನಸ್ಸಿಗೆ ತೋಚಿದ್ದನ್ನೆಲ್ಲ ಕಾಗದದಲ್ಲಿ ಇಳಿಸುತ್ತ ಹೋದರೆ ಅದು ಕಾದಂಬರಿ ರೂಪವನ್ನು ತಳೆದುಬಿಡುತ್ತದೆ, ಆದರೆ ಕವಿತ್ವ ಹಾಗಲ್ಲ,..” ಎಂದಿದ್ದರು. ಹಾಗೆ ಹೇಳಿ ಅವರು ಕಾದಂಬರಿ ರಚನೆಯ ತಂತ್ರವನ್ನು ವಿವರಿಸಿದ್ದರೋ ಅಥವ ವಿಡಂಬಿಸಿದ್ದರೋ ಎಂಬುದು ನನಗೆ ಈತನಕ ಬಗೆಹರಿದಿಲ್ಲ. ಆದರೆ ಆ ಮಾತುಗಳನ್ನು ಪಾಸಿಟೀವ್ ಆಗಿಯೇ ಸ್ವೀಕರಿಸಿ ಈ ಬರವಣಿಗೆಯನ್ನು ಪ್ರಾರಂಭಿಸಿದಾಗ ಇದುವೇ ಕಾದಂಬರಿ ರಚನೆಯ ತಂತ್ರವೆಂದು ನನಗೆ ತಿಳಿಯಿತು.

ಆದರೆ ಈ ಬರವಣಿಗೆಯನ್ನು ಪ್ರಾರಂಭಿಸುವಾಗ ಕಾದಂಬರಿ ರಚನೆ ನನ್ನ ಉದ್ದೇಶವಾಗಿರಲಿಲ್ಲ. ಈ ಹಿಂದೆ ಹೇಳಿದಂತೆ ಇದು ಶುದ್ಧ ವಿಮರ್ಶಾ ಬರಹವಾಗಬೇಕು ಎಂಬುದು ನನ್ನ ಆಶಯವಾಗಿತ್ತು. ಆದರೆ ಒಬ್ಬ ಲೆಜೆಂಡರಿ ಅಕಾಡೆಮಿಷಿಯನ್ ಆಗಿದ್ದ ಕಿರಂ ಕುರಿತ ಬರವಣಿಗೆ ಕೇವಲ ಅಕಾಡೆಮಿಕ್ ಬರವಣಿಗೆಯಾದರೆ ಸಾರ್ಥಕವಾಗದು. ಏಕೆಂದರೆ ಕಿರಂ ಅವರ ಪ್ರತಿಭೆ ಹಾಗು ಆಸಕ್ತಿಗಳು ಯಾವಾಗಲೂ ಅಕಾಡೆಮಿಕ್ ಚೌಕಟ್ಟಿನ ಹೊರಗಿನದ್ದಾಗಿರುತ್ತಿತ್ತು.

ಮಾತನಾಡುವಾಗ ಎಲ್ಲವನ್ನೂ ಸರಳಗೊಳಿಸಿ ನುಡಿಯುವ ಹಾಗು ಕಥನದ ಗಾಂಭೀರ್ಯವನ್ನು ಭಗ್ನಗೊಳಿಸಿ ಪ್ರತಿಯೊಂದನ್ನೂ ಹೃದಯಂಗಮವಾಗಿ ನಿರೂಪಿಸುವ ಅವರ ಮಾತಿನ ನಾವೀನ್ಯವೇ (ನಾವೆಲ್ಟಿ) ಈ ಬರವಣಿಗೆಗೂ ಸಿದ್ಧಿಸಬೇಕೆಂದು ಈ ಬರವಣಿಗೆಯನ್ನು ಪ್ರಾರಂಭಿಸಿದೆ. ಹಾಗಾಗಿ ಇದು ವಿಮರ್ಶಾ ಬರಹವಾಗಬೇಕು, ಸಂಸ್ಕೃತಿಕ ಚಿಂತನೆಯ ರೂಪದ್ದಾಗಬೇಕು ಎಂಬಿತ್ಯಾದಿ ಆವಾಹಿತ ಪ್ರೇರಣೆಗಳನ್ನೆಲ್ಲ ಬದಿಗಿರಿಸಿ ಮನಸ್ಸಿಗೆ ತೋಚಿದ್ದನ್ನೆಲ್ಲ ಬರವಣಿಗೆಯಲ್ಲಿ ನಿರೂಪಿಸಲಾರಂಭಿಸಿದೆ.

ಹೀಗೆ ಬರೆದು ಕಿರಂ ಅವರ ವ್ಯಕ್ತಿತ್ವ ಹಾಗು ಆಲೋಚನೆಗಳನ್ನು ಸಮಗ್ರವಾಗಿ ಹಿಡಿದಿಡಬೇಕೆಂಬ ಮಹತ್ವಾಕಾಂಕ್ಷೆಯಾಗಲಿ ಅಥವ ಹಿಡಿದಿಡಬಲ್ಲೆನೆಂಬ ಹುಂಬತನವಾಗಲಿ ನನಗಿಲ್ಲ. ಇಲ್ಲಿ ‘ತೋಚಿದ್ದನ್ನೆಲ್ಲ ಬರೆಯಲಾರಂಭಿಸಿದೆ’ ಎಂಬ ನನ್ನ ಮಾತುಗಳು ಬಳಕೆಯ ಮಾತಷ್ಟೇ. ನನ್ನ ಪಾಲಿಗಂತೂ ಬರವಣಿಗೆ ಹರಟೆಯಲ್ಲ, ತೋಚಿದ್ದನ್ನೆಲ್ಲವನ್ನೂ ಬರೆಯಲೇಬೇಕಾದ ತೊಂಡು ಮೇವಿನ ಕ್ರಿಯೆಯಲ್ಲ. ಚರಿತ್ರೆಯಲ್ಲಿ ತನ್ನ ಆಲೋಚನೆ ಸಂಸ್ಕೃತಿಯ ಬೆಳವಣಿಗೆಯ ದೃಷ್ಟಿಯಿಂದ ತುಂಬ ಮಹತ್ವದ್ದಾಗಲಿದೆ ಎಂದು ಭಾವಿಸಿಕೊಂಡಿರುವವನು ದಾಖಲಿಸಿಕೊಳ್ಳುವ ಪ್ರಯತ್ನದಲ್ಲಿ ನಿರತನಾಗಿರುತ್ತಾನೆ.

ಆದರೆ ಕಿರಂ ಚರಿತ್ರೆಗಿಂತ ಚಾರಿತ್ರ್ಯಕ್ಕೆ, ಆಲೋಚನೆಗಿಂತ ಅನುಭವಕ್ಕೆ ಬೆಲೆ ನೀಡುತ್ತಿದ್ದರು. ಒಮ್ಮೆ ಬರವಣಿಗೆಯ ಕುರಿತು “ನಮ್ಮ ಅತ್ಯಂತ ಮಹತ್ವದ ಒಳನೋಟಗಳನ್ನೂ ಕೆಲವೇ ಸೂತ್ರಗಳಿಗೆ ಇಳಿಸಿಬಿಡಬಹುದು ಮತ್ತು ಹಾಗೆ ಇಳಿಸುವುದೇ ಸರಿ” ಎಂದು ಪಿಎಚ್.ಡಿ ಪ್ರಬಂಧ ರಚನೆಯ ಸಂದರ್ಭದಲ್ಲಿ ನನಗೆ ಸಲಹೆ ನೀಡಿದ್ದರು. ನನಗೂ ಸಹ ಇದನ್ನು ಬರೆಯುತ್ತ ಬರವಣಿಗೆ ತುಂಬ ಖಾಸಗೀ ವ್ಯವಹಾರವೆಂದು ಮನವರಿಕೆಯಾಗಿದೆ. ಬರವಣಿಗೆಗೊಂದು ಶೀಲವಿದ್ದು ಸುಲಭವಾಗಿ ಸೂತಕಗೊಳ್ಳುವ ಕೋಮಲತೆ (vulnerability) ಅದಕ್ಕಿದೆ ಎಂದು ನಾನು ನಂಬಿದ್ದೇನೆ.

ನಾನು ಬಲ್ಲಂತೆ ಕಿರಂ ಅವರನ್ನು ಮೆಚ್ಚಿದವರೂ ಉಂಟು, ಮೆಚ್ಚದೆ ಇದ್ದವರೂ ಉಂಟು. ಅವರನ್ನು ದೊಡ್ಡ ನೈತಿಕ ವ್ಯಕ್ತಿ ಎಂದವರೂ ಉಂಟು, ಮಹಾ ನೀತಿ ವಿರಹಿತನೆಂದು ಕರೆದವರೂ ಉಂಟು. ಜನ ಅವರಲ್ಲಿ ಜಾಣತನವನ್ನು ಕಾಣುತ್ತಿದ್ದರು, ಭೋಳೆತನವನ್ನೂ ಗುರುತಿಸುತ್ತಿದ್ದರು. ಕೆಲವರ ದೃಷ್ಟಿಯಲ್ಲಿ ಕಿರಂ ನಾಡಿನ ಸರ್ವಶ್ರೇಷ್ಠ ವಿಮರ್ಶಕರಾಗಿದ್ದರೆ ಮತ್ತೆ ಕೆಲವರ ದೃಷ್ಟಿಯಲ್ಲಿ ಅವರು ವಿಮರ್ಶೆಯ ರೀತಿ ಹಾಗು ನೀತಿಗಳನ್ನೇ ಅರಿಯದ ಕೇವಲ ಪಂಡಿತರಾಗಿದ್ದರು.

ಅಷ್ಟೆಲ್ಲ ಏಕೆ, ನನ್ನೊಬ್ಬನ ಕಣ್ಣಿಗೇ ಅವರು ಒಮ್ಮೊಮ್ಮೆ ಮಹಾಸುಖಿಯಂತೆ ಕಾಣಿಸುತ್ತಿದ್ದರು, ಮತ್ತೆ ಕೆಲವು ಸಲ ಸದಾ ಉದ್ವಿಗ್ನಗೊಂಡವರಂತೆ ಕಾಣಿಸುತ್ತಿದ್ದರು. ಒಬ್ಬನೇ ವ್ಯಕ್ತಿ ಬೇರೆ ಬೇರೆಯ ಕಣ್ಣುಗಳಲ್ಲಿ ಇಷ್ಟೆಲ್ಲ ರೂಪಗಳನ್ನು ತಳೆಯಬಲ್ಲನೇ ಅಥವ ಒಂದೇ ಕಣ್ಣಿಗೆ ಹಲವು ಸಲ ಹಲವು ರೂಪಗಳಲ್ಲಿ ಗೋಚರಿಸಬಲ್ಲನೇ ಎಂದು ನನಗೆ ಒಮ್ಮೊಮ್ಮೆ ಅಚ್ಚರಿಯಾಗುತ್ತದೆ.

“ನಮ್ಮನ್ನು ಹೊಗಳುವವರ ಮಾತುಗಳಲ್ಲೂ ಹಾಗೆಯೇ ತೆಗಳುವವರ ಮಾತುಗಳಲ್ಲೂ ನಮ್ಮನ್ನು ಕುರಿತ ಯಾವುದೋ ಒಂದು ನಿಜಾಂಶ ಇದ್ದೇ ಇರುತ್ತದೆ” ಎಂಬ ಮಾತುಗಳನ್ನು ಬಹು ಹಿಂದೆ ಲಂಕೇಶರ ಒಂದು ಟೀಕೆ ಟಿಪ್ಪಣಿ ಬರಹದಲ್ಲಿ ಓದಿದ್ದೆ. ಹಾಗಾಗಿ – ಈ ಬರವಣಿಗೆಯನ್ನೂ ಒಳಗೊಂಡಂತೆ – ಕಿರಂ ಕುರಿತು ಯಾರು ಏನೇ ಬರೆದರೂ ಆ ಬರವಣಿಗೆಯಲ್ಲಿ ನಿಜಾಂಶವಿದ್ದರೂ ಅದನ್ನು ಸರಿಯಾಗಿ ಬೆದಕದೆ ನಿಜವನ್ನು ನಿರ್ಧರಿಸಲಾಗದು. ನನ್ನ ಬರವಣಿಗೆಯಂತೂ ವಾಸ್ತವದಲ್ಲಿ ಕಿರಂ ಜೊತೆಗಿನ ನನ್ನ ಆಂತರ್ಯದ ಸಂವಾದದ ಮರುರೂಪವಾಗಿದೆ.

ಅವರ ಜೊತೆಗಿನ ನನ್ನ ಜಗಳಗಳು ನನಗೆ ನಾನೇ ಘೋಷಿಸಿಕೊಂಡ ಯುದ್ಧಗಳಾಗಿವೆ. ವಿದ್ಯಾರ್ಥಿಯಾಗಿ ಅವರ ಪಾಠಗಳನ್ನು ಕೇಳುವಾಗ ಮತ್ತು ಸಾಹಿತ್ಯಿಕ ಚರ್ಚೆಗಳನ್ನು ಮಾಡುವಾಗ ಅವರಲ್ಲಿ ಉಂಟಾಗುತ್ತಿದ್ದ ವಿವಿಧ ಭಾವ ಪಲ್ಲಟಗಳು ತತ್‌ಕ್ಷಣದಲ್ಲಿ ನನ್ನಲ್ಲೂ ಸಂಭವಿಸುತ್ತಿದ್ದವು. ಇದನ್ನೇ ಯೂಂಗ್ ‘ಸಿಂಕ್ರಾನಿಸಿಟಿ’ ಎನ್ನುತ್ತಿದ್ದನೇನೋ, ಅದು ನನಗೆ ತಿಳಿಯದು.

ಕಿರಂಗೆ ೬೦ ವರ್ಷ ತುಂಬಿದಾಗ ಕೆಲವು ಹಿರಿಯ ವಿದ್ಯಾರ್ಥಿಗಳು ಅವರ ಹೆಸರಿನಲ್ಲಿ ಒಂದು ಅಭಿನಂದನಾ ಗ್ರಂಥವನ್ನು ತರಬೇಕೆಂದು ಪ್ರಯತ್ನಿಸಿದ್ದರು. ನನ್ನಿಂದಲೂ ಅವರು ಒಂದು ದೀರ್ಘವಾದ ಲೇಖನವನ್ನು ಬರೆಸಿಕೊಂಡಿದ್ದರು. ಆದರೆ ಅದೇಕೋ ಪ್ರಕಟಗೊಳ್ಳಲೇ ಇಲ್ಲ. ಅಥವ ಕಿರಂಗೆ ಇವರ ಚಟುವಟಿಕೆಗಳ ಜಾಡಿನ ಪತ್ತೆಯಾಗಿ ಅವರೇ ಅದನ್ನು ಸ್ಥಗಿತಗೊಳಿಸಿದರೋ ತಿಳಿಯದು. ಕಿರಂ ಹಾಗೇನೂ ಮಾಡಿರದಿದ್ದರೂ ಹಾಗೆ ಮಾಡುವ ಸ್ವಭಾವ ಅವರದ್ದಾಗಿತ್ತು.

ಅವರು ತೀರಿಕೊಂಡ ಮೇಲೆ ಅವರ ಕಿರಿಯ ವಿದ್ಯಾರ್ಥಿ ಪ್ರದೀಪ್ ಮಾಲ್ಗುಡಿ ಹಾಗು ಸಂಗಡಿಗರು ‘ನಿಜದ ನಾಡೋಜ’ ಎಂಬ ಹೆಸರಿನ ಅಭಿನಂದನಾ ಗ್ರಂಥವನ್ನು ಹೊರತಂದರು. ಅವರ ಪ್ರಯತ್ನವನ್ನು ನಾನು ಅಭಿನಂದಿಸಿದೆನಾದರೂ ಅವರೊಡನೆ ಕ್ರಿಯಾಶೀಲವಾಗಿ ತೊಡಗುವ ಮನಸ್ಥಿತಿಯಲ್ಲಿ ಆಗ ನಾನಿರಲಿಲ್ಲ. ಅವರು ಕೇಳಿದರೆಂದು ಕಿರಂ ತೀರಿಕೊಂಡ ದುಃಖವನ್ನಷ್ಟೇ ತೋಡಿಕೊಂಡ ಒಂದು ಲೇಖನವನ್ನು ಬರೆದು ಕೊಟ್ಟಿದ್ದೆ.

ಆ ದಿನ ಪುಸ್ತಕವನ್ನು ಬಿಡುಗಡೆ ಮಾಡಿದ ಕೆ. ಮರುಳಸಿದ್ದಪ್ಪನವರು “ನಾನು ಸ್ನೇಹಿತರು ಹಾಗು ಸಹೋದ್ಯೋಗಿಗಳು ಪರಸ್ಪರರ ಅಭಿನಂದನಾ ಗ್ರಂಥಗಳನ್ನು ಪ್ರಕಟಿಸಿಕೊಳ್ಳುವುದನ್ನು ನೋಡಿದ್ದೇನೆ, ತಮ್ಮ ಅಭಿನಂದನಾ ಗ್ರಂಥಕ್ಕೆ ತಾವೇ ಖುದ್ದಾಗಿ ನಿಂತು ಅವರಿವರಿಂದ ಲೇಖನಗಳನ್ನು ಬೇಡಿ ಪಡೆದುಕೊಳ್ಳುವ ವಿದ್ವಾಂಸರುಗಳನ್ನೂ ಕಂಡಿದ್ದೇನೆ.

ಆದರೆ ಇಲ್ಲಿ ಕಿರಂ ಅವರ ಅತ್ಯಂತ ಕಿರಿಯ ವಯಸ್ಸಿನ ಶಿಷ್ಯರುಗಳು ಸೇರಿ ಇಂಥದೊಂದು ಗ್ರಂಥವನ್ನು ತರುತ್ತಿದ್ದಾರೆ. ಇದು ತುಂಬ ಮುಖ್ಯ. ಏಕೆಂದರೆ ಅತ್ಯಂತ ಹೊಸ ತಲೆಮಾರು ಸಹ ತಮಗೆ ಕಿರಂ ಅಗತ್ಯ ಎಂಬುದನ್ನು ಈ ರೀತಿಯಲ್ಲಿ ಸೂಚಿಸುತ್ತಿದೆ” ಎಂದು ತುಂಬ ಮಾರ್ಮಿಕವಾಗಿ ನುಡಿದಿದ್ದರು.

ಅವರು ತೀರಿಕೊಂಡ ಮೇಲೆ ಅವರ ನೆನಪುಗಳು ಹಿಂದೆಂದಿಗಿಂತಲೂ ಬೃಹತ್ತಾದ ರೂಪವನ್ನು ತಾಳುತ್ತ ನನ್ನನ್ನು ಕಾಡತೊಡಗಿದವು. ಅದರಿಂದ ಪಾರಾಗಲು ನಾನು ಹಲವು ದಾರಿಗಳನ್ನು ಹುಡುಕಿಕೊಂಡೆ. ಸಾಹಿತ್ಯ ಕ್ಷೇತ್ರಕ್ಕೇ ತಿಲಾಂಜಲಿ ಕೊಟ್ಟು ಬೇರೆ ಮತ್ತೊಂದು ದುಡಿಮೆಯಲ್ಲಿ ತೊಡಗಿಕೊಂಡೆ. ಆದರೆ ಯಾವ ಬಗೆಯ ಪಲಾಯನವೂ ಫಲಕಾರಿಯಾಗಲಿಲ್ಲ.

ಭೂತ(past) ವನ್ನು ಹಿಡಿದಿರುವುದು ನಾವಲ್ಲ, ಅದೇ ನಮ್ಮನ್ನು ತನ್ನ ಬಿಗಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿರುತ್ತದೆ ಅನ್ನಿಸಿತು (ಬಹುಶಃ ಇದನ್ನೇ ಅಕ್ಕ “ಬಿಟ್ಟೆನೆಂದರೆ ಬಿಡದೀ ಮಾಯೆ, ಬಿಡದಿದ್ದರೆ ಬೆಂಬತ್ತಿತು ಮಾಯೆ” ಎಂದು ಹೇಳಿರಬಹುದು). ನಮ್ಮ ಮೇಲೆ ಉಂಟಾಗಿರುವ ಪ್ರಭಾವದ ಸ್ವರೂಪವನ್ನು ನಮಗೆ ನಾವೇ ನಿರ್ವಚಿಸಿಕೊಂಡಾಗ ಆ ಪ್ರಭಾವದಿಂದ ವಿಮೋಚನೆ ಸಿಕ್ಕೀತು ಎಂಬ ನಿರೀಕ್ಷೆಯಿಂದ ಈ ಬರವಣಿಗೆಯನ್ನು ಪ್ರಾರಂಭಿಸಿದೆ.

ಆದರೆ ಹಾಗೆ ನಿರ್ವಚಿಸಿಕೊಳ್ಳುವಾಗ ಅದು ಗುರುವಿಗೆ ಒಬ್ಬ ಶಿಷ್ಯನು ನೀಡುವ ಶ್ರದ್ಧಾಂಜಲಿಯೋ ಅಥವಾ ಕೃತಜ್ಞತಾಪೂರ್ವಕ ಬಿನ್ನವತ್ತಳೆಯೋ ಆಗಬಾರದು. ಏಕೆಂದರೆ ದೀರ್ಘಕಾಲ ಅವರೊಂದಿಗೆ ಒಡನಾಡಿದ ನಾನು ಸುಲಭವಾಗಿ ಇಂತಹುದೊಂದು ಬರವಣಿಗೆಯನ್ನು ಮಾಡಬಲ್ಲೆನಾದರೂ ಇದು ಕೇವಲ ನನ್ನ ಆತ್ಮತೃಪ್ತಿಗೆ ಬರೆದುಕೊಂಡ ಸಾಹಿತ್ಯವಾದರೆ ವ್ಯರ್ಥವಾಗುತ್ತದೆ, ಅದನ್ನು ಕಿರಂ ಸಹ ಇಷ್ಟ ಪಡುತ್ತಿರಲಿಲ್ಲ.

“ನನ್ನ ತೃಪ್ತಿಗಾಗಿ ನಾನು ಬರೆದುಕೊಳ್ಳುತ್ತೇನೆ ಎಂಬ ಧೋರಣೆಯನ್ನು ಸಾಹಿತಿಗಳು ಕೈಬಿಡಬೇಕು” ಎಂದು ನಟರಾಜ್ ಹುಳಿಯಾರ್ ಅವರ ಪುಸ್ತಕವನ್ನು ಬಿಡುಗಡೆ ಮಾಡುವಾಗ ಕಿರಂ ಕರೆ ನೀಡಿದ್ದರು. ಅವರಿಗೆ ಶಿಷ್ಯ ಸಂಬಂಧೀ ವೈಯಕ್ತಿಕ ಒಡನಾಟಗಳನ್ನು ಮೀರಿದ, ಮುಂದಿನ ತಲೆಮಾರುಗಳಿಗೂ ಸಲ್ಲಬಲ್ಲ, ಹಲವು ಸಾಂಸ್ಕ್ರೃತಿಕ ಐಡೆಂಟಿಟಿಗಳಿದ್ದವು. ಆ ವಿಭಿನ್ನ ಸಾಂಸ್ಕ್ರೃತಿಕ ಅವತಾರಗಳನ್ನು ಕಂಡರಿಯುವುದು ನನ್ನ ಬರವಣಿಗೆಯ ಆಶಯವಾಗಿದೆ.

ಇದು ಅವರೊಡನೆ ಕಳೆದ ಹಲವು ರೋಚಕ ಪ್ರಸಂಗಗಳನ್ನು ನೆನೆದು ಓದುಗನ ಕುತೂಹಲಕ್ಕೆ ಕ್ಷಣಭಂಗುರವಾದ ಮನರಂಜನೆ ಒದಗಿಸುವ ಬರವಣಿಗೆ ಖಂಡಿತ ಅಲ್ಲ. ಹಾಗೇನಾದರೂ ಮಾಡಿದರೆ ಮೇಲೆ ಹೇಳಿದ ಈ ಬರವಣಿಗೆಯ ಮೂಲ ಉದ್ದೇಶಕ್ಕೇ ಅದರಿಂದ ಹಾನಿಯಾಗುತ್ತದೆ. 

ಕಿರಂ ಅವರನ್ನು ಕಳೆದುಕೊಂಡ ಮೇಲೆ ಗೆಳೆಯ ರುದ್ರೇಶ್ ನನ್ನ ದುಃಖವನ್ನು ಅಜಗಣ್ಣನನ್ನು ಕಳೆದುಕೊಂಡ ‘ಶೂನ್ಯಸಂಪಾದನೆ’ಯ ಮುಕ್ತಾಯಕ್ಕನ ಸ್ಥಿತಿಗೆ ಹೋಲಿಸಿದಾಗ ನಾನು ಒಪ್ಪಿರಲಿಲ್ಲ. “ಈ ಗೋಳನ್ನೆಲ್ಲ ಮುಕ್ತಾಯಕ್ಕನಂಥವಳ ವೇದನೆಗೆ ಹೋಲಿಸಬಾರದು” ಎಂದು ಅವನೊಡನೆ ವಾದಿಸಿದ್ದೆ.

ಶೂನ್ಯಸಂಪಾದನೆಯ ಮೊದಲ ಅಧ್ಯಾಯದಲ್ಲಿ ಬರುವ ಮುಕ್ತಾಯಕ್ಕನ ಆಧ್ಯಾತ್ಮಿಕ ವೇದನೆ ಅವಳ ಬದುಕಿನ ಕಟ್ಟಕಡೆಯ ಉಪಾಧಿಯಾಗಿತ್ತು. ಆದರೆ ನನ್ನ ವಿಷಯದಲ್ಲಿ ಕಿರಂ ಸಾವಿನ ಕೊರಗು ಕಟ್ಟಕಡೆಯ ಉಪಾಧಿಯೇನೂ ಆಗಿರಲಿಲ್ಲ. ಅಥವ “ಮೊದಲ ಹಾಗು ಕಡೆಯ ಉಪಾಧಿಗಳು ಬೇರೆ ಬೇರೆಯವಲ್ಲ” ಎಂಬ ಜೆ. ಕೃಷ್ಣಮೂರ್ತಿಯ ಮಾತುಗಳನ್ನು ಒಪ್ಪುವುದಾದರೆ.

ಇದೇ ಕಟ್ಟಕಡೆಯ ಉಪಾಧಿಯಾದರೂ ಆಗಿಯೇ ಬಿಡಲಿ, ಆಗ ಈ ನನ್ನ – ಮಾತೆಂಬ ಜ್ಯೋತಿರ್ಲಿಂಗವನ್ನು ಸ್ಥಾವರ ರೂಪಕ್ಕೆ ಇಳಿಸಬಲ್ಲ – ಬರವಣಿಗೆಯೇ ಕಿರಂ ಕುರಿತ ಹೊಸಸಂಪಾದನೆಗಳ ಮೊದಲ ಅಧ್ಯಾಯವಾಗಲಿ ಎಂದು ನಾನು ಬಯಸುತ್ತೇನೆ.  

ವಾಙ್ಮಯ ಪ್ರಪಂಚದಲ್ಲಿ ಕಿರಂ ಎಲ್ಲ ತಲೆಮಾರುಗಳಿಗೂ ಮಾದರಿಯಂತಿದ್ದರೇ ವಿನಃ ಅವರು ಒಂದು ತಲೆಮಾರಿನ ಅಭಿವ್ಯಕ್ತಿ ಮಾತ್ರ ಆಗಿರಲಿಲ್ಲ. ಅದಕ್ಕೇ ಇರಬೇಕು ಓ.ಎಲ್. ನಾಗಭೂಷಣಸ್ವಾಮಿಯವರು ಕಿರಂರನ್ನು“a phenomenon”ಎಂದು ಕರೆದದ್ದು. ಕಿರಂ ಅವರ ಪ್ರತಿಭೆ ಮಿಷನರಿ ಸ್ವರೂಪದ್ದಲ್ಲ. ಅದು ನಿರಂತರವಾಗಿ ಕ್ರಿಯಾಶೀಲವಾಗಿತ್ತಾದರೂ ಆ ಕ್ರಿಯಾಶೀಲತೆಗೆ ಯಾವುದೇ ಸುಲಭ ಗೋಚರವಾದ ಫಲಾಕಾಂಕ್ಷೆ ಇರಲಿಲ್ಲ.

ಕರ್ಪೂರದ ಗಿರಿಗೆ ಕಿಚ್ಚು ಹಿಡಿದಂತಿದ್ದ ಅವರ ಪ್ರತಿಭೆಯ ಸ್ಪಂದನಗಳನ್ನು ನಿರಂತರವಾಗಿ ಕ್ರಿಯಾಶೀಲ ಸ್ಥಿತಿಯಲ್ಲಿ ಇಟ್ಟಿರುವುದು ಸುಲಭದ ಕೆಲಸವಲ್ಲ. ಬರವಣಿಗೆಯಿಂದಲಾಗಲಿ ಅಥವ ಸಾಂಸ್ಥಿಕ ಚಟುವಟಿಕೆಗಳಿಂದಲಾಗಲಿ ಅದು ನೆರವೇರುವುದಿಲ್ಲ. ಹಲವು ಖಾಸಗೀ ವಲಯಗಳಲ್ಲಿ ಮಾತ್ರ ಕಿರಂ ಜೀವಂತರಾಗಿರುತ್ತಾರೆ ಎಂದು ಅವರು ತೀರಿಕೊಂಡ ಮೇಲೆ ನಾನು ಮನಗಂಡಿದ್ದೇನೆ.

ಅಂತಹ ಖಾಸಗೀ ವಲಯದ ನನ್ನ ಸ್ನೇಹಿತರ ಒತ್ತಾಯವೂ ಈ ಬರವಣಿಗೆಗೆ ಕಾರಣವಾಗಿದೆ. ಅದರಲ್ಲೂ ಟೈಮ್ಸ್ ಆಫ್ ಇಂಡಿಯಾದಲ್ಲಿರುವ ನನ್ನ ಗೆಳೆಯ ಹಾಗು ಕಿರಂ ವಿದ್ಯಾರ್ಥಿ ಶ್ರೀ ಎನ್.ಡಿ. ಶಿವಕುಮಾರ್ ಒತ್ತಾಯಪೂರ್ವಕವಾಗಿ ಆಗ್ರಹ ಮಾಡದೇ ಹೋಗಿದ್ದರೆ ನಾನು ಖಂಡಿತ ಇದನ್ನು ಬರೆಯುವ ಮನಸ್ಸು ಮಾಡುತ್ತಿರಲಿಲ್ಲ. ಅಂತಹ ಎಲ್ಲ ಸ್ನೇಹಿತರಿಗೂ ನಾನು ತುಂಬ ಆಭಾರಿಯಾಗಿದ್ದೇನೆ.

‍ಲೇಖಕರು Avadhi

October 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಕಿರಂ ಅವರ ಬಗ್ಗೆ ಒಂದಷ್ಟು ಕೇಳಿದ್ದೇನೆ. ಬೇಂದ್ರೆಯವರ ಕಾವ್ಯದ ಬಗೆಗಿನ ಅವರ ವಿಚಾರಗಳನ್ನು ತಿಳಿದುಕೊಳ್ಳಬೇಕೆಂದಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: