ಕಿರಸೂರ ಗಿರಿಯಪ್ಪ ಕವಿತೆಗಳು ನೊಂದ ಜೀವಕ್ಕೆ ಹೆಗಲಾಗುತ್ತವೆ..

ಅವಧಿಯ ಮಹತ್ವದ ಪ್ರಯೋಗಗಳಲ್ಲಿ ಮುಖ್ಯವಾದದ್ದು ‘Poet of the Week’

ಹೊಸ ಬನಿಯ ಕವಿತೆಗಳನ್ನುಪರಿಚಯಿಸುವ, ಆ ಮೂಲಕ ಕನ್ನಡ ಕಾವ್ಯ ಲೋಕವನ್ನು ಪ್ರವೇಶಿಸುತ್ತಿರುವ ಕವಿಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ.

ಅಷ್ಟೇ ಅಲ್ಲದೆ ಪ್ರಕಟಿಸಿದ ಕವಿತೆಗಳನ್ನು ಕಾವ್ಯ ಪ್ರಿಯರಿಗೆ ಕಳಿಸಿಕೊಟ್ಟು ಅವರ ಅಭಿಪ್ರಾಯವನ್ನು ಪ್ರಕಟಿಸುವುದು. ಇದರಿಂದ ಕವಿಗಳಿಗೆ ಮೊದಲ ಅಭಿಪ್ರಾಯವನ್ನು ಧಕ್ಕಿಸಿಕೊಟ್ಟು ಅವರು ಇನ್ನಷ್ಟು ಬರೆಯಲು ಕುಮ್ಮಕ್ಕು ನೀಡುವುದು ಉದ್ಧೇಶ.

ಕಳೆದ ವಾರದ POET OF THE WEEK ನಲ್ಲಿ ಬಾಗಲಕೋಟೆಯ ಕಿರಸೂರ ಗಿರಿಯಪ್ಪ ಅವರ ಕವಿತೆಗಳನ್ನು ಪ್ರಕಟಿಸಿದ್ದೆವು.

ಅದಕ್ಕೆ  ಕವಿ ಬಿದಲೋಟಿ ರಂಗನಾಥ್  ಅವರು ಬರೆದ ಮೊದಲ ನೋಟ ಇಲ್ಲಿದೆ- 

 

ಬಿದಲೋಟಿ ರಂಗನಾಥ್

ಬಿ ರಂ ಎಂದು ಹೆಸರುವಾಸಿಯಾಗಿರುವ ರಂಗನಾಥ ಬಿ ಎಂ ಅವರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೋಕಿನ ಬಿದಲೋಟಿಯಲ್ಲಿ ಹುಟ್ಟಿ ಬೆಳೆದವರು, ನ್ಯಾಯಾಲಯದಲ್ಲಿ ವಾದ ಮಾಡುತ್ತಾ ಕಾವ್ಯ ಬರಹವನ್ನು ಬಗಲಲ್ಲಿ ಇರಿಸಿಕೊಂಡವರು.

ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’ ಎಂಬ ಎರಡು ಕವನ ಸಂಕಲನಗಳನ್ನು ರಚಿಸಿದ್ದಾರೆ.  ಇವರ ಕಾವ್ಯಕ್ಕೆ ‘ಸಂಕ್ರಮಣ’ ಬಹುಮಾನ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿವೆ. 

                                                       

ಕವಿ ಕಿರಸೂರ ಗಿರಿಯಪ್ಪನ ಕವಿತೆಗಳನ್ನು ಅವಧಿಯಲ್ಲಿ ಓದಿದೆ. ಮೊದಲಿನಿಂದಲು ಅವರ ಕವಿತೆಗಳು ನನ್ನ ಕಾವ್ಯದ ಹಸಿವ ನೀಗಿಸಿದ್ದವು. ಅವರು ಒಬ್ಬ ಕಾವ್ಯ ಕಡು ಮೋಹಿ ಎಂಬುದಕ್ಕೆ ಅವರ ಕವಿತೆಳಲ್ಲಿ ಜಾಗೃತ ಉಸಿರಾಟ ಸಾಕ್ಷೀಕರಿಸುತ್ತವೆ. ಅವರು ಬಳಸುವ ರೂಪಕಗಳು ಇನ್ನಿಲ್ಲದಂತೆ ಕಾಡಿ ಮನಸುಗಳನ್ನು ಕವಿತೆಗಳ ಕಂಬಕ್ಕೆ ಕಟ್ಟಿ ಹಾಕುತ್ತವೆ. ಅವರ ಕವಿತೆಗಳಲ್ಲಿ ಬೆಳಕಾಗುವ ಸಾಮಾಜಿಕ ಪ್ರಜ್ಞೆ ಕವಿತೆಗಳ ಜೀವಾಳ. ನೊಂದ ಜೀವ ಯಾವಾಗಲು ಕಾವ್ಯಕ್ಕೆ ಹೆಗಲಾಗುತ್ತದೆ ಎಂಬುದು ನನ್ನ ನಂಬಿಕೆ. ಆ ನಿಟ್ಟಿನಲ್ಲಿ ಗಿರಿಯಪ್ಪ ಸಮರ್ಥರೆನಿಸಿಕೊಂಡವರು.

ಇಲ್ಲಿ ಆಸೀಫಾಳ ಬಗ್ಗೆ ಬರೆದ ಕವನ ನೋವಿನಲ್ಲೆ ನೇಯ್ದ ಜೇಡರ ಬಲೆಯಂತೆ ಇದೆ.ಆ ಹೆಣ್ಣು ಜೀವಕ್ಕೆ ಕೊಟ್ಟ ಹಿಂಸೆಯಲ್ಲಿ ಹೆಣೆದ ಕವಿತೆ ನಿಜಕ್ಕೂ ಗಮನಾರ್ಹವಾದ ಕವಿತೆಯಾಗಿದೆ. ಆ ಮಗುವಿನ ಅಂತರಂಗದ ನಾಡಿಮಿಡಿತ ಕವಿತೆಯಲ್ಲಿ ಧ್ವನಿಸಿದೆ.
ಮತ್ತೊಂದು ಕವಿತೆಯಲ್ಲಿ ಗಿರಿಯಪ್ಪ ಹೀಗೆ ಬರೆಯುತ್ತಾರೆ.

“ಚುಕ್ಕಿಗಳು ಕಚಗುಳಿ ಇಕ್ಕಿ
ನೆನಪುಗಳ ನೇಗಿಲ ಉಳುತ್ತಿದ್ದವು”

ಭಾವಸ್ಪರ್ಶದ ಸಾಲುಗಳು ರೂಪಕದ ನಡುವೆ ವಿಜೃಂಭಿಸಿವೆ. ಕವಿತೆ ಧ್ಯಾನಸ್ಥ ಸ್ಥಿಯ ಪ್ರಸವ ಅಂತ ಧ್ಯಾನಸ್ಥ ಸ್ಥಿತಿ ಕವಿಗೆ ಸಿದ್ಧಿಸಿದೆ ಎನ್ನಲು ಅವರ ಕವಿತೆಗಳೇ ಸಾಕ್ಷಿ. ಅವರು ಕವಿತೆಗಳನ್ನು ಎಂದೂ ಆರ್ಭಟಿಸಿ ಬರೆದವರಲ್ಲ. ತಣ್ಣನೆ ಮೆಲುನುಡಿಯಲ್ಲಿ ಸಾಗುವ ಅವರ ಕವಿತೆಗಳು ಹೃದಯವನ್ನು ಸ್ಪರ್ಶಿಸಿ ಇಷ್ಟವಾಗುತ್ತವೆ.

ನೆಲದ ಮೂಲ ಕರುಳದನಿ , ಯಾವಾಗಲು ಸಮಾಜವನ್ನು ಪರಿವರ್ತನೆಯ ಹಾದಿಯಲ್ಲಿ ನಡೆಸಿ ಓರೆಕೋರೆಗಳನ್ನು ತಿದ್ದುವಲ್ಲಿ ಶ್ರಮವಹಿಸುತ್ತಲೆ ಬಂದಿದೆ. ಕಾವ್ಯ ಬರೆಯುವುದೇ ಮೋಜಾಗಬಾರದು ಅದು ತನ್ನೊಳಗಿನ ಆಂತರಿಕ ಭಾವ ಸ್ಪರ್ಶದ ಕಡಲಿನ ಮಖೇನ ಕತ್ತಲನ್ನು ಅಳಿಸಿ ಬೆಳಕಿನ ದಾರಿಯನ್ನು ತುಳಿದಾಗ ಮಾತ್ರ ಕವಿತೆಗೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ.

ಕವಿಗೆ ಯಾವಾಗಲು ಕವಿತೆ ಬರೆಯುವ ತುಡಿತ ಇದ್ದು ಧ್ಯಾನದ ಅಮಲು ನೆತ್ತಿಗೇರಿ ಪರಕಾಯ ಪ್ರವೇಶ ಆದಾಗ ತನ್ನೊಳಗಿನ ಕವಿ ನಿರಾಳವಾಗುತ್ತಾನೆ. ಬಟಾಬಯಲಲ್ಲಿ ಬಿಟ್ಟ ಮನಸು ಬಿಸಿಲ ಬಿಳಲುಗಳ ಮೇಲೆ ಮಾಯ ಜಿಂಕೆಯೊಂದು ಓಡುವುದ ನೋಡಿದ್ದೆ ತಡ ಮಾಯವಾಗುವ ಕವಿತೆಯ ಹೆಜ್ಜೆ ಗುರುತ ಗಬಕ್ಕನೆ ಹಿಡಿಯುವ ಚಾಣಾಕ್ಷತನ ಮೈಗೂಡಿಸಿಕೊಂಡಾಗ ಕವಿತೆಯ ಹುಟ್ಟಿನ ತಾವಿನಲಿ ಯಾವೊದೋ ಗೆಜ್ಜೆ ಸದ್ದು ಕೇಳುತ್ತದೆ. ಆಗ ಆಗುವುದೇ ಕವಿಮನಸಿನಲ್ಲಿ ಕವಿತೆಯ ಮಿಲನೋತ್ಸವ. ಅಂತಹ ಪಕ್ವತೆಯನ್ನುಕವಿ ಗಿರಿಯಪ್ಪನಲ್ಲಿ ಕಂಡರು ಯಾವುದೋ ಒಂದು ಎಳೆಯ ಮೇಲೆ ಸುಮಾರು ಕವಿತೆಗಳು ಹೆಜ್ಜೆ ತುಳಿಯುತ್ತಿರುವುದು ನೆಗೆಟಿವ್ ಚಿಂತನೆಗೆ ಎಡೆಮಾಡಿಕೊಡುತ್ತದೆ. ಈ ಮಾತನ್ನು ಅವರ ಸುಮಾರು ಕವಿತೆಗಳನ್ನು ಗಮನಿಸೇ ಹೇಳುತ್ತಿರುವೆ. ಆ ನಡೆಯನ್ನು ಬಿಟ್ಟು ಹೊರಬಂದರೆ ಕವಿತೆಗಳು ಅವರ ಅಂಗೈಯಲ್ಲೇ ಆಡುತ್ತವೆ ಎಂಬುದರಲ್ಲಿ ಅನುಮಾನವಿಲ್ಲ.

 

ಸಂವಿಧಾನ ಜನ್ಮತಾಳಿದಂದಿನಿಂದಲೂ ಸಮತೆಯ ಹೂವಿಗಾಗಿ ಕಾಯುತ್ತಲೇ ಬಂದಿರುವ ಬಡವರ, ಶೋಷಿತರ ತಾಳ್ಮೆ ನಿಂತ ಜಾಗವನ್ನೇ  ಶಪಿಸುವ ಮಟ್ಟಕ್ಕೆ ಬಂದಿದೆ. ಎಷ್ಟು ದಿನ ಅಂತ ಬದುಕಿನ ನೋವು ಸಹಿಸಿಕೊಂಡಾರು? ಕೆಂಡವಾಗುತ್ತಿರುವ ಮನಸುಗಳ ಅಂತಹಃಕರಣ ಹೂವಾಗುವುದೆಂದು? ಇಷ್ಟಕ್ಕೂ ನ್ಯಾಯವು ನ್ಯಾಯಾಲಯದ ಒಳಮನಸ್ಸಿನ ಕನ್ನಡಿಯಾಗುತ್ತಿಲ್ಲ.ಅಲ್ಲಿಯೂ ಅಸಮಾನತೆಯು ಉಸಿರಾಡುತ್ತಿದೆ ಎಂಬ ನೋವಿನಿಂದ ಬರೆದ ಗಿರಿಯಪ್ಪನವರ ಆಲೋಚನೆ ನಿಜಕ್ಕೂ ಸಮಾಜವನ್ನು ಎಚ್ಚರಿಸುವ ಕಣ್ಣು. ಹೀಗೆ ಪೂರಕವಾಗಿ ಬರೆದ ಕವಿತೆಯ ಮೈತುಂಬಾ ಕನಸುಗಳಿವೆ. ನೋಡಿ ಅವರು ಬರೆದ ಸಾಲುಗಳು

ಮರುಗಲಿಲ್ಲ
ಮಮತೆಯ ತೆಪ್ಪಕಟ್ಟಲಿಲ್ಲ
ನ್ಯಾಯದ ಕಣ್ಣಿಗೆ
ಅಸಮಾನತೆಯ ಪೂರೆ ಬಿದ್ದಿದೆ.

ಎಂದು ಬರೆಯುವ ಕವಿ ಗಿರಿಯಪ್ಪನವರ ನೈಜತೆಯ ಗುದ್ದಾಟಕ್ಕೆ ತಂದ ಜಯ. ನ್ಯಾಯವನ್ನು ಹರಸುತ್ತಾ ಹೋದ ಬಟ್ಟೆಹರುಕನ ನೊಂದ ಮನಸು ಹೆಳವನ ಸ್ಥಿತಿಗೆ ಬಂದು ನಿಂತಂತಿದೆ. ಎಲ್ಲಿಯೂ ಸಿಗದ ನ್ಯಾಯ ನ್ಯಾಯದೇಗುಲದಲ್ಲಿ ಸಿಗುತ್ತಿದೆ ಎಂಬ ಆಸೆಯ ಮೇಲೆ ತಣ್ಣಿರೆರಚುವ ನ್ಯಾಯದೇವತೆಯ ಮೇಲೆ ಮುನಿಸಿದೆ. ಯಾರೋ ಮಾಡಿದ ತಪ್ಪಿಗೆ ಯಾರೋ ಶಿಕ್ಷೆಯ ನೋವನ್ನು ಉಣ್ಣುವ ಕಾಲದ ಅರಿವನ್ನು ಕವಿ ಚನ್ನಾಗಿ ಅರಿತಿದ್ದಾರೆ. ಹೌದು ಕವಿಯಾದವನಿಗೆ ನೆಲದ ನೊಂದ ಮನಸುಗಳ ನಾಡಿಮಿಡಿತ ಗೊತ್ತಿರಬೇಕು .ಆಗ ಕಾವ್ಯ ನಡೆಯುವ ಹಾದಿ ಮೇಲೆ ನಗುವು ಚೆಲ್ಲಬಹುದು.

ಈ ಕವಿಯು ಯಾವಾಲೂ ನೆಲದ ನಡಿಗೆಯನ್ನು ಆವರಣದಲ್ಲೇ ಹೆಚ್ಚು ಸಂಚರಿಸುವುದರಿಂದ, ರೈತನ ನಡೆ,ಗುಡಿಸಲುಗಳ ಕಣ್ಣೀರು, ನೆಲಮೂಲ ಸಂಸೃತಿಯ ಸುತ್ತಲೆ ಭಾವದ ಗೂಡಕಟ್ಟುವುದು ಸುಲಭದಾರಿಯಾಗಿದೆ

ಕಾವೇರಿದ ಬಯಲ ಮಿಡಿಗಾಗಿ
ಒಡಲ ತೇಪೆಯ ಬಿರುಕಿಗಾಗಿ
ಯಾವ ಭರವಸೆ ಮೊಳಗಿಸದೆ
ತೆಪ್ಪಗೆ ಕುಳಿತವು ರಾಜಧಾನಿಯ ಬೀದಿಗಳು

ರಾಜಧಾನಿಗಳ ಬಯಲ ಹುಡುಕಾಟ ನಿರಂತರ . ಕಟ್ಟಡಗಳು ಅಡಿ ಜಾಗವಿಲ್ಲದಷ್ಟು ತಲೆಯೆತ್ತಿವೆ. ಮಹಡಿಗಳ ಮೇಲೆ ಮಹಡಿಗಳ ಕಟ್ಟುತ್ತಾ ಹೋಗುತ್ತಿರುವ ,ಬಲಾಢ್ಯರ ಕಸುಬಿಗೆ ಮುಂದೆ ಭೂಮಿಯು ಉಸಿರು ಚೆಲ್ಲುವ ಆತಂಕ ಬರುವ ನೀರಿಕ್ಷೆಯ ಕಾವ್ಯದ ಒಡಲಾಗಿದೆ. ಅಷ್ಟೊಂದು ಬೆಳೆಯುತ್ತಿರುವ ರಾಜಕಾರಣಿಗಳು ಹಳ್ಳಿಗಾಡಿನ ಜನರಿಗೆ ಕೊಟ್ಟ ಭರವಸೆಗಳ ಮಹಾಪೂರ ಹೀಡೆರಿಸದೇ ತೆಪ್ಪೆಗೆ ಕೂತಿರುವ ಜಾಣ ಜಾಗೃತನಡೆಯನ್ನು ಪ್ರಶ್ನಿಸುವ ಕವಿ ಕಿರಸೂರು ಗಿರಿಯಪ್ಪನ ಆತಂಕ ಎಚ್ಚರದ ಗಂಟೆ. ಹೌದು ಕವಿಯಾದವನಿಗೆ ಆ ಒಂದು ಜಾಗೃತ ಎಚ್ಚರಿಸುವ ಪ್ರಜ್ಞೆ ಇರಬೇಕೂ ಕೂಡ. ನೋವುಂಡವನಿಗೆ ನೋವಿನ ದಾರಿಯ ಮೇಲೆ ಸಹಜ ಅಕ್ಕರೆ ಸೆಳೆತ ತಾನಾಗಿಯೇ ಬರುತ್ತದೆ ಅದಕ್ಕೆ ಗಿರಿಯಪ್ಪನೂ ಹೊರತಲ್ಲ.

ಒಟ್ಟಾರೆ ಗಿರಿಯಪ್ಪನವರ ಕವಿತೆಗಳು ಆಪ್ತವಾಗಿ ತಣ್ಣನೆಯ ಗಾಳಿಯಲ್ಲಿ ಘಮಿಸುವ ಸುಗಂಧದ ರೀತಿ ಹೃದಯ ತಾಕಿ ಇಷ್ಟದ ಅಮಲೇರಿಸುತ್ತವೆ. ಕವಿಗೆ ಕಾವ್ಯ ಜಗತ್ತಿನಲ್ಲಿ ಉಜ್ವಲ ಭವಿಷ್ಯವಿದೆ ಎಂದಷ್ಟೆ ಹೇಳುವೆ. ಕೇವಲ ಏಳು ಕವಿತೆ ಇಟ್ಟುಕೊಂಡು ಹೆಚ್ಚೇನೂ ಹೇಳಲಾರೆ. ಆದರೆ ಅನ್ನ ಬೆಂದಿದೆ ಎನ್ನಲು ಮಾಡಿದ ಅಷ್ಟೂ ಅನ್ನ ಹಿಚಕಿ ನೋಡಬೇಕಿಲ್ಲ ಎಂಬ ನಂಬಿಕೆಯಿಂದ ಬರಿದಿದ್ದೇನೆ. ಕವಿಯ ಭರವಸೆಯು  ನಿಲ್ಲದಿರಲಿ ಭವಿಷ್ಯತ್ತಿನ ಹಾದಿಯಲ್ಲಿ  ಇನ್ನೂ ಹೆಚ್ಚು ಬಿಕ್ಕಟ್ಟುಗಳನ್ನು ಬಿಡಿಸುವಲ್ಲಿ ಗಿರಿಯಪ್ಪನ ಕವಿತೆಗಳು ದಾರಿದೀಪವಾಗಲಿ. ತನ್ನೊಳಗಿನ ತುಮುಲ ಕಳಚಿ ಬಿಡು ಬೀಸಾಗಿ ಕವಿತೆಗಳು ಮೊಳೆಯಲಿ….

‍ಲೇಖಕರು Avadhi Admin

March 20, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: