ಕಿರಣ ಭಟ್ ಹೊನ್ನಾವರ ಕಂಡಂತೆ ‘ನವಿಲು ಪುರಾಣ’

  ಕಿರಣ ಭಟ್ ಹೊನ್ನಾವರ

ಇನ್ತಿಜಾರ್ ಹುಸೇನ್, ಪಾಕಿಸ್ತಾನದ ಉರ್ದು ಲೇಖಕ. ಅವಿಭಜಿತ ಭಾರತದಲ್ಲಿ ಹುಟ್ಟಿ ಪಾಕಿಸ್ತಾನಕ್ಕೆ ಹೋದ ಅವರು ದೇಶವಿಭಜನೆಯ ಕರಾಳತೆಯನ್ನು ಸ್ವಂತ ಅನುಭವಿಸಿದವರು. ನೋವುಂಡವರು. ಮಾನವನ ಬದುಕಿನ ಅನೇಕ ದಾರುಣ ಕಥೆಗಳನ್ನು ಇನ್ತಿಜಾರ್ ಹುಸೇನ್ ಬರೆದಿದ್ದಾರೆ. ಅವರ  A Chronicle of the Peacocks ಇಂಥ ಕಥೆಗಳಲ್ಲೊಂದು. ಈ ಕಥೆಯನ್ನಾಧರಿಸಿ ‘ ನವಿಲು ಪುರಾಣ’ ನಾಟಕ ಸಿದ್ಧವಾಗಿದೆ. ಈ ಕಥೆಯನ್ನು ಅನುವಾದಿಸಿ  ನಾಟಕ ರೂಪವಾಗಿಸಿದವರು ಪ್ರೊ. ಕೆ. ಈ. ರಾಧಾಕೃಷ್ಣ.

ಕಥೆಯ ಹುಟ್ಟು ಇರುವದು ಮಹತ್ವದ ಯುದ್ಧ ಮೂಲ ಬೆಳವಣಿಗೆಯೊಂದರಲ್ಲಿ

1998. ಭಾರತ, ಪಾಕಿಸ್ತಾನಗಳು ಆಗಷ್ಟೇ ಅಣ್ವಸ್ತ್ರ ಪರೀಕ್ಷೆ ನಡೆಸಿವೆ. ಈ ಪ್ರಕ್ರಿಯೆಯ ಜೊತೆಯಲ್ಲೇ ಒಂದು ವಿಷಾದಕರ ಬೆಳವಣಿಗೆಯಾಗಿದೆ. ಅಣ್ವಸ್ತ್ರಗಳ ಧಮಾಕಾದಲ್ಲಿ ಗಮನ ಸೆಳೆಯದೇ ಹೋಗಿಬಿಟ್ಟ ವಿಷಯ ಅದು. ಧಮಾಕಾ ದ ಧಿಮಾಕಿನ ಶಬ್ದಕ್ಕೆ ಹೆದರಿದ ಲಕ್ಷಾಂತರ ವನವಿಲುಗಳು ಜೀವಭಯದಿಂದ ರಾಜಸ್ತಾನದ ಕಾಡುಗಳನ್ನು ಬಿಟ್ಟು ಬಲು ದೂರ ಹೊರಟು ಹೋಗಿವೆ. ಈಗ ಅದು ನವಿಲುಗಳೇ ಇಲ್ಲ ಪ್ರದೇಶ.

ಇಂಥ ಸುದ್ದಿಯ ಬೆನ್ನು ಹತ್ತಿ ಲೇಖಕ ಪ್ರವಾಸ ಹೊರಟಿದ್ದಾನೆೆ. ಒಂದು ಕಾಲದಲ್ಲಿ ತಾನು ಕಂಡಿದ್ದ ನವಿಲುಗಳನ್ನ ಅರಸಿ. ಈಗ ಆತ ಆ ಪ್ರದೇಶದಲ್ಲಿದ್ದಾನೆ.. ಎಲ್ಲೂ ನವಿಲುಗಳ ಸುಳಿವಿಲ್ಲ. ಹತಾಶೆಯ ಉತ್ತುಂಗವೋ ಎಂಬಂತೆ ಆತನ ಕೊಠಡಿಯ ಪಾಗಾರದ ಮೇಲೆ …. ಒಂಟಿ ನವಿಲು.

ಹೀಗೆ  ನೆಲೆ ಕಳೆದುಕೊಂಡ ನವಿಲನ್ನು ರೂಪಕವಾಗಿಟ್ಟುಕೊಂಡ ಈ ನಾಟಕ ಅಣ್ವಸ್ತ್ರಗಳ, ಯುದ್ಧಗಳ ವಿನಾಶವನ್ನು ಚಿತ್ರಿಸುತ್ತ ಹೋಗುತ್ತದೆ. ಭೂ ದಾಹದ, ಶಕ್ತಿ ದಾಹದ ಪ್ರಭುತ್ವಗಳ ನಡುವಿನ ಸ್ಪರ್ಧೆಯಲ್ಲಿ ತನ್ನ ನೆಲವನ್ನೇ ಕಳೆದುಕೊಳ್ಳುವ ನವಿಲು, ನೆಲೆ ಕಳೆದುಕೊಂಡ ಜನಸಾಮಾನ್ಯರ ಬದುಕಿನ ಕಷ್ಟ ಕೋಟಲೆಗಳಿಗೆ ಕನ್ನಡಿಯಾಗಿತ್ತದೆ. ಇಲ್ಲಿ ನವಿಲು ರೂಪಕವಾದರೆ ಇರಾನ್ ಇರಾಕ್ ಯುದ್ಧದ ವಿನಾಶದ ರೂಪಕವಾಗಿ ಎಣ್ಣೆಯಿಂದ ತೊಯ್ದು ಹೊಲಸಾದ ರಾಜಹಂಸವಿದೆ. ಒಂದು ಕಾಲಕ್ಕೆ ಚೈತನ್ಯ ತುಂಬಿಕೊಂಡು ನಳನಳಿಸುತ್ತಿದ್ದ ಹಂಸದ ಮೈಯೆಲ್ಲ ಈಗ ಕೊಳಕು.. ಇಂಥ ಘಟನೆಗಳ ಬೆನ್ನು ಹತ್ತಿ ಹೋಗುವ ಲೇಖಕ ಈಗ ಅಶ್ವತ್ಥಾಮ ನಲ್ಲಿಗೆ ಬಂದು ತಲುಪಿದ್ದಾನೆ. ಇವುಗಳೆಲ್ಲವುದರ ಮೂಲ ಇಲ್ಲಿ ಸಿಕ್ಕಿದೆ. ಈಗ ‘ಬ್ರಹ್ಮಾಸ್ತ್ರ’ ಮುನ್ನೆಲೆಗೆ ಬಂದಿದೆ.

ಅಂದಿನಿಂದಲೂ ಕಾಡಲು ಶುರುಮಾಡಿದ

ಬ್ರಹ್ಮಾಸ್ತ್ರ ಇಂದೂ ಕಾಡುತ್ತಿದೆ. ಮುಂದೆಯೂ….

ಇಂಥದೊಂದು ಕಥೆಯನ್ನು ನಾಟಕ ರೂಪವಾಗಿಸುವಲ್ಲಿ ಸಾಕಷ್ಟು ಸವಾಲುಗಳಿವೆ. ಪ್ರೊ. ಕೆ. ಈ. ರಾಧಾಕೃಷ್ಣ ಇವನ್ನೆಲ್ಲ ದಾಟಿ ಚೆಂದದ ನಾಟಕ ಬರೆದಿದ್ದಾರೆ. ಅನುವಾದ ಸುಂದರವಾಗಿದೆ.

ಇದೊಂದು ರೀತಿಯಲ್ಲಿ ಪ್ರವಾಸಿಯೊಬ್ಬನ ದಿನಚರಿಯ ನಿರೂಪಣೆಯಾದರೂ ಸುರೇಶ ಆನಗಳ್ಳಿ ಅದನ್ನು ವಿಶಿಷ್ಟ ರೀತಿಯಲ್ಲೇ ರಂಗಕ್ಕೆ ತಂದಿದ್ದಾರೆ. ನಿರೂಪಕನನ್ನು ಮುಂದಿಟ್ಟು ಕಥನವನ್ನು ಕಟ್ಟಿಕೊಡಲಾಗಿದೆ. ನಿರೂಪಕನೇ ಪಾತ್ರವೂ ಆಗುತ್ತ, ಕಥೆ ಹೇಳುತ್ತಾನೆ. ನಾಟಕದ ಪ್ರಾರಂಭದಲ್ಲೇ ತುಂಡಾದ ಕೈಗಳನ್ನು ಹಿಡಿದುಕೊಂಡು ವಿಕಾರವಾದ ಬೃಹತ್ ಮುಖ ಹೊತ್ತು ಬರುವ ಅಶ್ವತ್ಥಾಮ. ಆತನನ್ನು ಹಿಂಬಾಲಿಸುವ  ಬೃಹತ್ ಗಾತ್ರದ ಅಣ್ವಸ್ತ್ರ ಹೊತ್ತ ಸೈನಿಕರು. ಹೀಗೆ ಯುದ್ಧದ, ಅಣ್ವಸ್ತ್ರಗಳ ವಿನಾಶದ ಅಗಾಧತೆಯನ್ನು ಮನದಟ್ಟುಮಾಡಿಕೊಡಲೋ ಎಂಬಂತೆ ವಿಪರೀತ ಗಾತ್ರದ ಬ್ರಹ್ಮಾಸ್ತ್ರಗಳೂ, ಅಣ್ವಸ್ತ್ರಗಳೂ ಆಗಾಗ ಬಂದು ಹೋಗುತ್ತವೆ. ಕ್ರೂರ ಪ್ರಭುತ್ವಗಳೂ ಅಷ್ಟೇ ವಿಕಾರವಾದ ಬೃಹದಾಕಾರ ಮುಖವಾಡ ಹೊತ್ತು ಬರುತ್ತವೆ. ಘಟನೆಗಳ ಅಥೆಂಟಿಸಿಟಿಗಾಗಿ ಸಾಕ್ಷ್ಯಚಿತ್ರಗಳ ತುಣುಕುಗಳನ್ನೂ ಆಗಾಗ ಬಿತ್ತರಿಸಲಾಗುತ್ತದೆ. ಹೀಗೆ ಬಹುಮಾಧ್ಯಮಗಳನ್ನೊಳಗೊಂಡಂತೆ ಕಥೆಗಾರನ ವ್ಯಥೆಯನ್ನ ದಾಖಲಿಸುವ  ಪ್ರಯತ್ನವನ್ನು ಸುರೇಶ ಆನಗಳ್ಳಿ ಮಾಡುತ್ತಾರೆ. ಆನಗಳ್ಳಿಯವರ ಎಂದಿನ ಪ್ರಯೋಗ ಶಿಸ್ತು, ಚೆಲುವು ಈ ರಂಗಕೃತಿಯಲ್ಲೂ ಇದೆ.

ನಾಟಕದ ಕೊನೆ. ಈಗ, ನವಿಲನ್ನ ಅರಸುತ್ತ ಅದರ ಚೈತನ್ಯಕ್ಕಾಗಿ ಹಂಬಲಿಸುವ ಕಥೆಗಾರನ ಹಿಂದೆ ಬಿದ್ದಿದಾನೆ ಅಶ್ವತ್ಥಾಮ. ಆತನದೋ ಬ್ರಹ್ಮಾಸ್ತ್ರದ ಉರಿಗೈ. ಶಾಂತಿಯನ್ನರಸುತ್ತ ಲೇಖಕ ಹೋದಲ್ಲೆಲ್ಲ ಆತನನ್ನು ಹಿಂಬಾಲಿಸುತ್ತಿದಾನೆ ಆತ.

ನೆಲೆ ಕಳಕೊಂಡ ನವಿಲುಗಳು…ಅವುಗಳನ್ನರಸುವ ಲೇಖಕ….ಆತನ ಹಿಂದೆ ಬ್ರಹ್ಮಾಸ್ತ್ರ. ಇದು ಎಂದೂ ಮುಗಿಯದ ಕಥೆ.  ವಿನಾಶದ ಕಥೆ.

‘ನಾಟ್ಕ ಬೆಂಗ್ಳೂರು’ ನಲ್ಲಿ ತಪ್ಪಿ ಹೋದ ಈ ನಾಟಕವನ್ನ ನಾನು ಕೆರೆಮನೆ ಶಂಭು ಹೆಗಡೆ ನಾಟ್ಯೋತ್ಸವದಲ್ಲಿ ನೋಡಿದೆ. ಆನಗಳ್ಳಿ ಹೊನ್ನಾವರಕ್ಕೆ ಹೊಸಬರಲ್ಲ. ಹೊನ್ನಾವರದ ಕಾಲೇಜು ವಿದ್ಯಾರ್ಥಿಗಳಿಗೂ, ಕಲಾವಿದರಿಗೂ ರಂಗ ಶಿಬಿರ ನಡೆಸಿ ನಾಟಕಗಳನ್ನು ಆಡಿಸಿದವರು ಅವರು. ಹೊನ್ನಾವರದ ಅವರ ಎಷ್ಟೋ ವಿದ್ಯಾರ್ಥಿಗಳು ಈಗ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ಆ ಮಟ್ಟಿಗೆ ಹೊನ್ನಾವರದ ರಂಭೂಮಿ ಅವರಿಗೆ ಋಣಿ. ಈ ಸಂದರ್ಭದಲ್ಲಿ ಅದನ್ನು ನೆನಪಿಸಿಕೊಳ್ಳಬೇಕೆನಿಸಿತು.           

‍ಲೇಖಕರು avadhi

February 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: