‘ಕಾವ್ಯ ಕನ್ನಿಕೆ’ಯಲ್ಲಿ ಭೂಮಿಕಾ

ಶಿವಾನಿ ಹೊಸಮನಿ
ಫೋಟೋ: ಮಧೂಸೂದನ್

ಲಾಸ್ಯ ವರ್ಧನ ಟ್ರಸ್ಟ್ ಆಯೋಜನೆಯಲ್ಲಿ ರೂಪಿತವಾದ  ಕಲಾಯೋಗಿ ಗುರು ಡಾ. ಮಾಲಿನಿ ರವಿಶಂಕರ್ ಅವರ ಶಿಷ್ಯೆ ಕುಮಾರಿ ಭೂಮಿಕಾ ವೇಣುಗೋಪಾಲ್ ಅವರ ರಂಗಪ್ರವೇಶವು ಜೆಎಸ್ಎಸ್ ಸಭಾಂಗಣದಲ್ಲಿ ನಡೆಯಿತು. ಕಾವ್ಯಕನ್ನಿಕೆ ಎಂಬ ಶೀರ್ಷಿಕೆಯಡಿ ಡಾ. ಮಾಲಿನಿ ರವಿಶಂಕರ್ ಅವರ ನೂತನ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮವು ಅತ್ಯಂತ ವಿಭಿನ್ನವಾಗಿ ಮೂಡಿಬಂದಿತು .

ಮಾರ್ಗಂನ ಮೊದಲನೆಯ ನೃತ್ಯ ಬಂಧವೇ ಪುಷ್ಪಾoಜಲಿ. ನೃತ್ಯದ ಅಧಿದೈವ ನಟರಾಜನಿಗೆ ಭಕ್ತಿಯಿಂದ ಪುಷ್ಪಗಳನ್ನು ಅರ್ಪಿಸಿ, ಚುರುಕು ನಡೆಗಳೊಂದಿಗೆ ರಂಗವನ್ನು ಆರೋಹಿಸುತ್ತಾ , ವಿದ್ವಾಂಸರು ಗುರುಗಳು ಹಾಗೂ ಸಭಿಕರಿಗೆ ನಮಿಸುತ್ತಾ ಉತ್ಸಾಹಭರಿತವಾಗಿ ಕಾರ್ಯಕ್ರಮವು ಆರಂಭವಾಯಿತು. ವಿಘ್ನರಾಜನ ಸ್ತುತಿಯಲ್ಲಿ ಗಣನಾಯಕನಿಗೆ ಜಯಕಾರ ಹೇಳುತ್ತಾ ಮಂಗಳದಾಯಕ, ಪಾಶಾಂಕುಷಧಾರಿ, ಪಾರ್ವತಿ ತನಯನಿಗೆ ನಮಿಸಿ, ಎಲ್ಲ ವಿಘ್ನಗಳನ್ನು ನಿವಾರಿಸು ಎಂದು ಕಲಾವಿದೆಯು ಬೇಡಿಕೊಂಡರು. ನರಸಿಂಹ ದೇವರ ವರ್ಣನೆ ಇರುವ ಶ್ಲೋಕದೊಂದಿಗೆ ಪುಷ್ಪಾoಜಲಿ ಸುಂದರವಾಗಿ ಮೂಡಿಬಂದಿತು. 

ಅಹಲ್ಯಾ, ದ್ರೌಪದಿ, ಸೀತಾ, ತಾರಾ ಹಾಗೂ ಮಂಡೋದರಿ ಪಂಚ ಮಹಾ ಕನ್ಯೆಯರೆಂದು ಪ್ರಸಿದ್ಧರು. ಈ ಪಂಚ ಕನ್ಯೆಯರು ತಮ್ಮ ಜೀವನದಲ್ಲಿ ಹಲವಾರು ಕಷ್ಟಗಳನ್ನು ಅನುಭವಿಸಿ, ಎಲ್ಲಾ ಪರಿಸ್ಥಿತಿಗಳನ್ನು ಧೈರ್ಯದಿಂದ ಮೆಟ್ಟಿನಿಂತ ಆದರ್ಶ ಮಹಿಳೆಯರು. ಈ ಸ್ತ್ರೀಯರು ನಮ್ಮ ಸಂಸ್ಕೃತಿಯಲ್ಲಿ ಅಚ್ಚಳಿಯದಂತಹ ಪ್ರಭಾವ ಬೀರಿದ್ದಾರೆ ಹಾಗೂ ಹಲವಾರು ಮಹಿಳೆಯರಿಗೆ ಸ್ಫೂರ್ತಿ ಹಾಗೂ ಸಾಮರ್ಥ್ಯ ನೀಡುವ ದಾರಿದೀಪವಾಗಿದ್ದಾರೆ. ಇವರ ಜೀವನಗಾಥೆ ಆಧಾರಿತ ವಿಶೇಷ ನೃತ್ಯ ಬಂಧವನ್ನು ಕಲಾವಿದೆ ಪ್ರದರ್ಶಿಸಿದರು. 

ಋಷಿ ಗೌತಮರ ಪತ್ನಿಯಾದ ಅಹಲ್ಯಾ ಮಹಾ ಪತಿವ್ರತೆ. ಇಂದ್ರನ ಮಾಯಕ್ಕೆ ಮೋಸ ಹೋಗಿ ಗೌತಮರ  ಶಾಪಕ್ಕೆ ಗುರಿಯಾಗಿ ಶಿಲೆಯಾಗಿ ಪರಿವರ್ತನೆ ಆಗುತ್ತಾಳೆ. ಶ್ರೀ ರಾಮನ ಪಾದ ಸ್ಪರ್ಶದಿಂದ ಶಾಪ ವಿಮೋಚನೆ ದೊರಕಿ ಪುನೀತಳಾಗುತ್ತಾಳೆ.

ದ್ರೌಪದಿಯು ಯಜ್ಞದಿಂದ ಜನ್ಮ ಪಡೆದ ಯಜ್ಞಸೇನಿ. ಸ್ವಯಂವರದಲ್ಲಿ ಮತ್ಸ್ಯಯಂತ್ರವನ್ನು ಭೇದಿಸಿದ ಅರ್ಜುನನ ಪತ್ನಿಯಾಗುತ್ತಾಳೆ. ಆದರೆ ಕುಂತಿಯ ಮಾತಿನಂತೆ ಪಂಚ ಪಾಂಡವರನ್ನು ವಿವಾಹವಾಗಬೇಕಾಗುತ್ತದೆ.  ಪಾಂಡವ ಹಾಗೂ ಕೌರವರ ದ್ವೇಷದ ದ್ಯೂತದಲ್ಲಿ ಅನ್ಯಾಯವಾಗಿ ವಸ್ತ್ರಾಪಹರಣಕ್ಕೆ ಒಳಗಾಗಿ, ಸಭೆಯಲ್ಲಿದ್ದ ಮಹಾವೀರರ ಮೌನವನ್ನು ಖಂಡಿಸಿ, ಕೃಷ್ಣನನ್ನು ಸ್ಮರಿಸುತ್ತಾಳೆ.

ಸೀತೆಯು ಸಾಕ್ಷಾತ್ ಲಕ್ಷ್ಮಿ ದೇವಿಯ ಅವತಾರ. ಸಮರ್ಪಣೆ ಹಾಗೂ ತ್ಯಾಗಕ್ಕೆ ಹೆಸರುವಾಸಿ. ಶ್ರೀರಾಮನನ್ನು ವಿವಾಹವಾದರೂ ವನವಾಸ ತಪ್ಪಲಿಲ್ಲ. ರಾವಣನಿಂದ ಅಪಹರಿತವಾಗಿ ಬಂಧನದಲಿದ್ದು, ಶ್ರೀ ರಾಮನ ಬರುವಿಕೆಗೆ ಕಾಯುತ್ತಾಳೆ. ರಾಮನ ಭಾವನೆಗಳನ್ನು ಅರಿತು, ಪವಿತ್ರತೆಯನ್ನು ಸಾಬೀತುಪಡಿಸಲು ಅಗ್ನಿಪ್ರವೇಶ ಮಾಡುತ್ತಾಳೆ.

ತಾರೆಯು ಮಹಾನ್ ಸಾಧ್ವಿ. ವಾನರ ರಾಜ ವಾಲಿಯ ಪತ್ನಿಯಾದ ಆಕೆಗೆ ಭವಿಷ್ಯ ಅರಿಯಬಲ್ಲ ಶಕ್ತಿ ಇರುತ್ತದೆ. ರಾಮನೊಡನೆ ಯುದ್ಧ ಬೇಡವೆಂದು ಎಚ್ಚರಿಸಿದ್ದ ಆಕೆಯ ಮಾತನ್ನು ಕೇಳದ ವಾಲಿ ಹತನಾಗುತ್ತಾನೆ. ನಂತರ ಆಕೆ ಸುಗ್ರೀವನನ್ನು ವರಿಸಿ ಕಿಷ್ಕಿಂದೆಯ ರಾಣಿ ಆಗುತ್ತಾಳೆ. 

ರಾವಣನ ಪತ್ನಿ ಮಂಡೋದರಿ ನೀತಿವಂತಳು.  ಸೀತೆಯನ್ನು ಅಪಹರಣ ಮಾಡಿದ ವಿಷಯದಿಂದ ಆಘಾತಗೊಂಡ ಆಕೆಯ ಮಾತನ್ನು ನಿರ್ಲಕ್ಷಿಸುವ ರಾವಣ ಯುದ್ಧದಲ್ಲಿ ಹತನಾಗುತ್ತಾನೆ. ಪಂಚ ಕನ್ಯೆಯರ ಜೀವನದ ಸಂಕಷ್ಟಗಳು, ಭಾವತುಮುಲಗಳನ್ನು ಕಲಾವಿದೆ ಪರಿಪಕ್ವ ಅಭಿನಯದ ಮೂಲಕ ಕಟ್ಟಿಕೊಟ್ಟರು. ಈ ಕೃತಿಯನ್ನು ಶ್ರೀಮತಿ ವಾಣಿ ಕುಲಕರ್ಣಿ ಅವರು ಅತ್ಯಂತ ಪ್ರೀತಿಯಿಂದ ವಿಶೇಷವಾಗಿ ರಚಿಸಿದ್ದರು. 

ವ್ಯಾಸ ರಾಯರು ರಚಿಸಿದ ಕೃತಿಯನ್ನು ವರ್ಣದ ಚೌಕಟ್ಟಿಗೆ ಅಳವಡಿಸಲಾಗಿತ್ತು. ಶೃಂಗಾರ ಪ್ರಧಾನವಾದ ವರ್ಣದಲ್ಲಿ ವಿರಹಿಯಾದ ನಾಯಿಕೆಯು ತನ್ನ ನಾಯಕ ಹಲವಾರು ದಿನಗಳಿಂದ ಬರಲಿಲ್ಲ ಎಂಬ ಅಳಲನ್ನು ತನ್ನ ಸಖಿಯಲ್ಲಿ ’ಬಾರನ್ಯಾತಕೆ ಸಖಿ ನೀರಜನಾಭನು’ ಎಂದು ಹಂಬಲಿಸುತ್ತಾಳೆ. ಕೂರ್ಮ ಅವತಾರವನ್ನು ಧರಿಸಿ ಸಮುದ್ರದಲ್ಲಿ ಮಂಧರದಾರಿಯಾಗಿದ್ದ ನನ್ನ ನಾಯಕ ಇಂದು ಬರುವನೇ ಎಂದು ಯೋಚಿಸುತ್ತಾ ನನ್ನ ಕಷ್ಟಗಳನ್ನು ಅರಿಯದೆ ನನ್ನನ್ನು ಬಿಟ್ಟು ಹೋದನೆಂದು ದುಃಖ ಪಡುತ್ತಾಳೆ. ವಾಚಸ್ಪತಿ ರಾಗ ಆದಿ ತಾಳದಲ್ಲಿದ್ದ ಈ ವರ್ಣದಲ್ಲಿ ಪರಮ ಪುರುಷನಾದ ಕೃಷ್ಣನನ್ನು ತ್ವರಿತದಿ ಕರೆದು ತಾ ಎಂದು ತನ್ನ ಸಖಿಯಲ್ಲಿ ಪರಿಪರಿಯಾಗಿ ನಿವೇದಿಸುತ್ತಾಳೆ.

ಊರ್ವಶಿಯು ಸೌಂದರ್ಯದ ಅಧಿದೇವತೆ. ಲೋಕದ ಎಲ್ಲಾ ಸೌಂದರ್ಯಗಳು ಮೈದಳೆದಂತೆ, ತಪಫಲದಂತೆ, ಸ್ವರ್ಗ ಸುಖ ಸಾಕಾರವಾದಂತೆ ಊರ್ವಶಿಯ ರೂಪ ಅತಿಶಯವಾಗಿದೆ ಎಂದು ಕುಮಾರವ್ಯಾಸ ಭಾರತದಲ್ಲಿ ಹೇಳಲಾಗಿದೆ. ಅರ್ಜುನನನ್ನು ಊರ್ವಶಿಯ ಮೋಹಕ ನೃತ್ಯ ಪ್ರದರ್ಶನವನ್ನು ತದೇಕಚಿತ್ತದಿಂದ ನೋಡುತ್ತಾನೆ. ಇದನ್ನು ಗಮನಿಸಿದ ಇಂದ್ರ ಅವನು ಊರ್ವಶಿಯನ್ನು ಬಯಸುತ್ತಾನೆ ಎಂದು ತಿಳಿದು, ಅವಳನ್ನು ಅರ್ಜುನನ ಶಯ್ಯಾಗೃಹಕ್ಕೆ ಕಳುಹಿಸುವಂತೆ ಚಿತ್ರಸೇನನಿಗೆ ಹೇಳುತ್ತಾನೆ.  ಅರ್ಜುನನ ಬಳಿ ಊರ್ವಶಿ ಹೋದಂತಹ ಸಂದರ್ಭದಲ್ಲಿ  ಅರ್ಜುನನು, ಅಪೂರ್ವ ಪರಿಮಳಸಾರದ ಸುಂದರಿಯನ್ನು ನೋಡಿ, ಆಕೆಯನ್ನು ಆದರದಿಂದ, ಸುರೇಂದ್ರನ ಮಾನಿನಿಯರಾದ ನೀವು ನನ್ನ ತಾಯಿ ಸಮಾನ ಎಂದು ನುಡಿಯುತ್ತಾನೆ.

ಅರ್ಜುನನ ನಡುವಳಿಕೆ ಊರ್ವಶಿಗೆ ಗೊಂದಲವನ್ನುಂಟುಮಾಡುತ್ತದೆ. ಆಕೆ ವಿಸ್ಮಿತಳಾಗುತ್ತಾಳೆ . ಅರ್ಜುನ ಬುದ್ಧಿವಿಹೀನನೋ, ನಪುಂಸಕನೋ, ಸ್ಪಂದನೆಗಳು ಇಲ್ಲದ ಗಿಡವೋ ಎಂದು ಬೆಚ್ಚಿ ಬೀಳುತ್ತಾಳೆ. ಅಸಹನೀಯ ಪರಿಸ್ಥಿತಿಯಲ್ಲಿ ಸಿಲುಕುತ್ತಾ ಆತನನ್ನು ಧಿಕ್ಕರಿಸಿ ಕೋಪದಿಂದ ಒಂದು ವರ್ಷ ಭರತವರ್ಷದಲ್ಲಿ ನಪುಂಸಕನಾಗಿ ಚಲಿಸು ಎಂದು ಗುಡುಗಿ ಶಾಪ ಹಾಕುತ್ತಾಳೆ. ಇಂತಹ ಸಂದರ್ಭದಲ್ಲಿ ಊರ್ವಶಿಯ ಕೋಪ, ಅಸಹಾಯಕತೆ, ಅವಮಾನ, ಭಯ, ಹತಾಶೆಗಳನ್ನು ಕಲಾವಿದೆಯು ಸೂಕ್ತವಾಗಿ ಅಭಿವ್ಯಕ್ತಿಸಿ ಕಲಾಭಿಮಾನಿಗಳಲ್ಲಿ ರೋಮಾಂಚನವನ್ನುಂಟು ಮಾಡಿದರು.

ಕವಿ ಎಚ್ಎಸ್ ವೆಂಕಟೇಶಮೂರ್ತಿ ಅವರು ಲೋಕದ ಕಣ್ಣಿಗೆ ರಾಧೆಯು ಸಾಮಾನ್ಯ ಹೆಣ್ಣಾಗಿರಬಹುದು, ಆದರೆ ನನಗೆ ಆಕೆ ಕೃಷ್ಣನನ್ನು ಪ್ರೀತಿಸುವ ದಾರಿಯನ್ನು ತೋರುವ ಮೂಲವೆಂದು ಹೇಳುತ್ತಾರೆ. ನಾನು ನನ್ನದು ಎಂಬ ಅಹಂಕಾರವನ್ನು ನಾವು ತೊರೆದರೆ ಮಾತ್ರ ಕೃಷ್ಣನ ಸಾಕ್ಷಾತ್ಕಾರ ನಮಗೆ ಸಿಗುವುದು. ಅಹಂ ಎಂಬುವುದು ನಮ್ಮನ್ನು ಭಗವಂತನಿಂದ ದೂರ ಕೊಂಡೊಯ್ಯುತ್ತದೆ, ರಾಧೆಯ ನಿಸ್ವಾರ್ಥ ಪ್ರೀತಿಯು, ಪ್ರೀತಿ ಎಂಬ ಶಬ್ದಕ್ಕೆ ಪರಿಭಾಷೆ. ಪ್ರೀತಿಯನ್ನು ಕವಿ ಮಹಾ ಪ್ರವಾಹಕ್ಕೆ ಹೋಲಿಸಿದ್ದಾರೆ. ಯಾವುದೇ ನಿರ್ಬಂಧನೆಗಳು, ಅಪೇಕ್ಷೆಗಳಿಲ್ಲದೆ ತನ್ನನ್ನು ತಾನು ಕೃಷ್ಣನಿಗೆ ಸಂಪೂರ್ಣವಾಗಿ ಅರ್ಪಿಸುತ್ತಾಳೆ ರಾಧೆ. ಕಲಾವಿದೆಯು ಭಾವಪೂರ್ಣವಾಗಿ ಅಭಿನಯಿಸಿ ಪ್ರೀತಿಯ ಸಾರವನ್ನು ಹಬ್ಬಿಸಿದರು. ಈ ಭಾವಗೀತೆಯು ಶ್ರೀ ರಂಜಿನಿ ರಾಗ ಆದಿ ತಾಳದಲ್ಲಿ ನಿಬದ್ಧವಾಗಿತ್ತು

ಲವಲವಿಕೆಯ ಚಲನೆಗಳು ಅಡವುಗಳು ವೈವಿಧ್ಯಮಯ ಜತಿಗಳು ಹಾಗೂ ಚುರುಕು ಮುಕ್ತಾಯಗಳನ್ನು ಹೊಂದಿದ್ದ ದೇಶ್ ರಾಗ ಆದಿ ತಾಳದ ತಿಲ್ಲಾನದ ಮೂಲಕ ತಮ್ಮ ಪ್ರಸ್ತುತಿಯನ್ನು ಮುಕ್ತಾಯಗೊಳಿಸಿದರು. ವಿದುಷಿ ರಮ್ಯಾ ಸೂರಜ್ ಅವರು ಅತ್ಯಂತ ಸೃಜನಾತ್ಮಕವಾಗಿ ಕಲಾವಿದೆ, ಗುರುಗಳು, ದೇವರು, ಕಲಾವಿದೆಯ ತಂದೆ ತಾಯಿ, ಸಂಗೀತ ಹಾಗು ವಾದ್ಯ ವೃಂದದ ವಿದ್ವಾಂಸರುಗಳೂ ಸೇರಿದಂತೆ ಎಲ್ಲರ ಹೆಸರುಗಳನ್ನು ಹೆಣೆದು ರಚಿಸಿದ ಮಂಗಳಂ ಕಾರ್ಯಕ್ರಮದ ಕ್ರಿಯಾತ್ಮಕತೆಯನ್ನು ಹೆಚ್ಚಿಸಿತು. ತಮ್ಮ ವಿಶೇಷ, ವಿಭಿನ್ನ ಪರಿಕಲ್ಪನೆಯ ಕಾವ್ಯ ಕನ್ನಿಕೆ ಮಾರ್ಗ ನಾಯಿಕೆ ನೃತ್ಯಭೂಮಿಕೆ ಎಂಬ ಶೀರ್ಷಿಕೆಯಡಿಯಲ್ಲಿ ತಮ್ಮ ರಂಗಾರೋಹಣ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿದರು.

ಎಲ್ಲಾ ನೃತ್ಯ ಬಂಧಗಳನ್ನು ಗುರು ಡಾ. ಮಾಲಿನಿ ರವಿಶಂಕರ್ ಅವರು ಅತ್ಯಂತ ಕ್ರಿಯಾತ್ಮಕವಾಗಿ ಸಂಯೋಜಿಸಿದ್ದರು. ಕರ್ಣಾನಂದ ಉಂಟು ಮಾಡುವಂತಹ ಸಂಗೀತ ಸಂಯೋಜನೆ ಹಾಗೂ ಗಾಯನ ವಿದುಷಿ ಶ್ರೀಮತಿ ರಮ್ಯಾ ಸೂರಜ್ ಅವರದಾಗಿತ್ತು. ನಿರೂಪಣೆಯಲ್ಲಿ ಶ್ರೀಮತಿ ವಾಣಿ ಕುಲಕರ್ಣಿ, ವಾದ್ಯವೃಂದದಲ್ಲಿ ಅತ್ಯಂತ ನಿಪುಣ ವಿದ್ವಾಂಸರಾದ ವಿದ್ವಾನ್ ಶ್ರೀ ಜನಾರ್ಧನ್ ರಾವ್ ಮೃದಂಗದಲ್ಲಿ, ವಿದ್ವಾನ್ ಶ್ರೀ ನರಸಿಂಹ ಮೂರ್ತಿ ಅವರು ವೇಣುವಾದನದಲ್ಲಿ, ವೀಣೆ ನುಡಿಸಿದವರು ವಿದ್ವಾನ್ ಶ್ರೀ  ವಿ.ಗೋಪಾಲ್ ಅವರು ಹಾಗೂ ರಿದಂಪ್ಯಾಡ್  ಜೊತೆಗೆ ವಿದ್ವಾನ್ ಶ್ರೀ ಪ್ರಸನ್ನ ಕುಮಾರ್,   ಕೋನ್ನಕೋಲ್ನಲ್ಲಿ ಕುಮಾರಿ ಲಾಸ್ಯಪ್ರಿಯ ಹೀಗೆ ನೃತ್ಯಸಂಗೀತ ವಿದ್ವಾಂಸರುಗಳ ಸಹಯೋಗವು ಕಾರ್ಯಕ್ರಮಕ್ಕೆ ಮೆರಗು ನೀಡಿತು.  ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೈನ್ ವಿಶ್ವವಿದ್ಯಾಲಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿರುವ   ಡಾ.ಪ್ರಿಯಶ್ರೀ ವಿ ರಾವ್ ಅವರು ಉಪಸ್ಥಿತರಿದ್ದು ಕಲಾವಿದೆಗೆ ಶುಭ ಹಾರೈಸಿದರು. 

‍ಲೇಖಕರು avadhi

June 5, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: