ಖಂಡವಿದಕೋ ಮಾಂಸವಿದಕೋ. . . .

ಮಮತಾ ರಾವ್


ಗೋವಿನ ಹಾಡನ್ನು ಕೇಳದ ಕನ್ನಡಿಗರಿರಲಾರರು. ಹಾಡಿನಲ್ಲಿ ಬರುವ ಪ್ರಸ್ತುತ ಸಾಲುಗಳು ಯಾವ ಕಟುಕನ ಹೃದಯವನ್ನಾದರೂ ಕರಗಿಸದೆ ಇರಲಾರದು. ಕೊಟ್ಟ ಮಾತಿಗೆ ತಪ್ಪದೆ ಇನ್ನೊಂದು ಜೀವದ ತೃಷೆಯನ್ನು ತಣಿಸಲು ತನ್ನ ಪ್ರಾಣವನ್ನೇ ತ್ಯಜಿಸಲು ಸಿದ್ಧವಾದ ಗೋವಿನ ಬಲಿದಾನದ ಕಥೆಯಿದು. ಅಂತೆಯೇ ಪುಟ್ಟ ಪಾರಿವಾಳವನ್ನು ಬದುಕಿಸಲು ತನ್ನ ದೇಹದ ಮಾಂಸವನ್ನೇ ಕತ್ತರಿಸಿ ಕೊಟ್ಟ ಚಂದ್ರವಂಶದ ಚಕ್ರವರ್ತಿ ಶಿಭಿಯ ಉದಾರತೆಯ ಅರಿವಿಲ್ಲದ ಭಾರತೀಯರು ಯಾರು? ತಮ್ಮ ದೇಹವನ್ನೇ ಇತರರ ಹಸಿವನ್ನು ತಣಿಸಲು ನೀಡಲು ಸಿದ್ಧರಾದ ಇಂಥಹ ಉಲ್ಲೇಖಗಳು ಅಪರೂಪ. ಸಾಲ ಪಡೆದ ಹಣದ ಬದಲಿಗೆ ಸಾಲಗಾರನ ದೇಹದ ಮಾಂಸವನ್ನು ಬಯಸಿದ ಜ್ಯೂ ಮನಿಲೆಂಡರ್‌ನನ್ನು ನಾವು ಶೇಕ್ಸ್ ಪಿಯರ್‌ನ ಹೆಸರಾಂತ ನಾಟಕ ‘ಮರ್ಚೆಂಟ್ ಆಫ್ ವೆನಿಸ್’ನಲ್ಲಿ ಕಾಣುತ್ತೇವೆ. ನರಮಾಂಸವನ್ನು ಭಕ್ಷಿಸುವ ಪದ್ಧತಿ ಫಿಜಿ, ಕಾಂಗೋ, ನ್ಯೂಝಿಲ್ಯಾಂಡ್, ಸುಮತ್ರಾ, ಮುಂತಾದ ಕಡೆಗಳಲ್ಲಿ ಪ್ರಚಲಿತವಿತ್ತು. ‘ದಿ ಸೈಲೆನ್ಸ್ ಅಫ್ ದಿ ಲ್ಯಾಂಬ್’ ಚಲನಚಿತ್ರದಲ್ಲಿ ನರಮಾಂಸ ಭಕ್ಷಕ ಹನ್ನಿಬಾಲ್ ಲೆಕ್ಟರ್ ಆಗಿ ಅಭಿನಯಿಸಿದ ಆಂಥನಿ ಹೊಪ್‌ಕಿನ್ಸ್ನನ್ನು ಮರೆಯಲಾದೀತೆ? ೧೯೭೨ರಲ್ಲಿ ಆ್ಯಂಡೀಸ್ ಪರ್ವತದಲ್ಲಿ ಪತನಗೊಂಡ ವಿಮಾನದಲ್ಲಿ ಮೃತರಾದ ತಮ್ಮ ಸಂಗಡಿಗರ ಹಸಿಮಾಂಸ ತಿಂದು ಎರಡು ತಿಂಗಳುಗಳ ಕಾಲ ಬದುಕುಳಿದ ರಗ್ಬಿ ಆಟಗಾರರ ಕಥೆ ನಮಗೆಲ್ಲ ತಿಳಿದದ್ದೇ.

ಪ್ರೀತಿ ಪ್ರೇಮದ ಉತ್ಕಟತೆ ಮನುಷ್ಯನಿಂದ ಮಾಡಿಸುವ ಕೆಲಸಗಳಲ್ಲಿ ಕೆಲವು ಒಳಿತು; ಕೆಲವು ಕೆಡಕು. ತನ್ನ ಪ್ರೀತಿಯನ್ನು ಸಾಧಿಸಲು ಮನುಷ್ಯ ಎಂತಹ ಹೇಯಕೃತ್ಯವನ್ನೇ ಆಗಲಿ ಮಾಡಲು ಹೇಸುವುದಿಲ್ಲ. ಇಂಥಹ ವಸ್ತುವನ್ನೇ ಆಧರಿಸಿ ನವರಸಗಳಲ್ಲಿ ಬೀಭತ್ಸ ಅಂದರೆ ಏನು ಅನ್ನುವುದನ್ನು ಬಹಳ ಸರಳವಾಗಿ ಅಷ್ಟೇ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಆಸಾಮಿ ಚಲನಚಿತ್ರ ‘ಅಮೀಸ್’. ೨೦೧೯ರಲ್ಲಿ ಟ್ರೆಂಬೆಕಾದಲ್ಲಿ ಜರುಗಿದ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶಿತವಾಗಿ ಬಹು ಚರ್ಚೆಗೊಳಗಾದ ಚಲನಚಿತ್ರ ನನ್ನ ಕುತೂಹಲವನ್ನು ಕೆರಳಿಸಿತೆಂದೇ ಹೇಳಬಹುದು. ಆಮಿಸ್ ಎಂದರೆ ಆಸಾಮಿ ಭಾಷೆಯಲ್ಲಿ ಮಾಂಸ ಎಂದರ್ಥ. ಭಾಸ್ಕರ್ ಹಝಾರಿಕಾ ಬರೆದು ನಿರ್ದೇಶಿಸಿದ ಈ ಚಲನ ಚಿತ್ರದಲ್ಲಿ ಸ್ತ್ರೀ -ಪುರುಷರ ನಡುವಿನ ಪರಸ್ಪರ ನಿಷ್ಕಾಮ ಪ್ರೀತಿಯ ನೂತನ ಮುಖವನ್ನು ದರ್ಶಿಸಲಾಗಿದೆ. ಪ್ರಮುಖ ಭೂಮಿಕೆಯಲ್ಲಿ ಲಿಮಾ ದಾಸ್ ಹಾಗೂ ಅರ್ಘದೀಪ್ ಬರುವಾ ಪರಿಣಾಮಕಾರಿಯಾಗಿ ಅಭಿನಯಿಸಿದ್ದಾರೆ.

ಡಾ. ನಿರ್ಮಲಿ (ಲೀಮಾ ದಾಸ್) ವಿವಾಹಿತ ಸ್ತ್ರೀ; ಅವಳ ಡಾಕ್ಟರ್ ಪತಿ ಪಟ್ಟಣದಿಂದ ದೂರ ಕಾಡುಮೇಡುಗಳಲ್ಲಿ ವಾಸಿಸುವ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಆಗಾಗ ಮನೆಗೆ ಬರುತ್ತಿರುತ್ತಾನೆ. ಅವರ ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಎದ್ದು ಕಾಣುತ್ತದೆ. ನಿರ್ಮಲಿಯೊಂದಿಗೆ ಅವಳ ಮಗನೂ ಇದ್ದಾನೆ. ಸುಮನ್ ಪಿಚ್‌ಡಿ ವಿದ್ಯಾರ್ಥಿ. ಈಶಾನ್ಯ ಭೂಭಾಗದ ಜನರ ಮಾಂಸಹಾರ ಸೇವನೆಯಲ್ಲಿರುವ ವೈವಿಧ್ಯತೆ ಇವನ ಅಧ್ಯಯನದ ವಿಷಯ. ಇ

ವರಿಬ್ಬರ ಆಕಸ್ಮಿಕ ಭೇಟಿ ಸ್ನೇಹಕ್ಕೆ ತಿರುಗಲು ಕಾರಣೀಭೂತವಾಗುವುದು ಅವರಿಬ್ಬರಲ್ಲಿರುವ ಆಹಾರದ ಕುರಿತಾದ ಸಮಾನ ಆಸಕ್ತಿ. ಹೊಸಹೊಸ ರುಚಿಯನ್ನು ಅರಸುತ್ತಾ ವಿಭಿನ್ನ ಜಾಗಗಳಿಗೆ ಭೇಟಿಯಾಗುವುದಲ್ಲದೆ, ಕೈಯಾರೆ ಮಾಡಿದ ಹೊಸಹೊಸ ರುಚಿಯನ್ನು ನಿರ್ಮಲಿಗೆ ಉಣಬಡಿಸುತ್ತಾ ಸುಮನ್ ಅವಳ ಪ್ರೀತಿಗಾಗಿ ಹಾತೊರೆಯುತ್ತಾನೆ. ವೈವಾಹಿಕ ಜೀವನದಲ್ಲಿ ಅತೃಪ್ತಳಾಗಿದ್ದರೂ ಸುಮನ್‌ನೊಂದಿಗೆ ಕೇವಲ ಸ್ನೇಹದಿಂದಲೇ ಇರುವ ನಿರ್ಮಲಿಯನ್ನು ಪ್ರಭಾವಿಸಲು ಸುಮನ್ ಕೊನೆಯಾಸ್ತ್ರವನ್ನು ಪ್ರಯೋಗಿಸುತ್ತಾನೆ.

ಪ್ರಯೋಗಕ್ಕಾಗಿ ಬೇಕೆಂದು ತನ್ನ ದೇಹದ ಮಾಂಸದ ತುಂಡನ್ನು ಲ್ಯಾಬ್‌ನಲ್ಲಿ ಕತ್ತರಿಸಿ ಅದನ್ನೇ ಬೇಯಿಸಿ ಅವಳಿಗೆ ತಿನಿಸುತ್ತಾನೆ. ತನಗೆ ಬಹಳ ಇಷ್ಟವಾದದ್ದು ನರಮಾಂಸವೆಂದು ತಿಳಿದು ಜಿಗುಪ್ಸೆಯೆನಿಸಿದರೂ ಕ್ರಮೇಣ ನರಮಾಂಸಕ್ಕಾಗಿ ಆಕೆಯ ಹಂಬಲಿಕೆ ಹೆಚ್ಚುತ್ತಾ ಹೋಗುತ್ತದೆ. ಅದರ ಪರಿಣಾಮ ಅಮಾಯಕನೊಬ್ಬನ ಕೊಲೆ, ಅವರಿಬ್ಬರ ಬಂಧನದಲ್ಲಿ ಕೊನೆಯಾಗುತ್ತದೆ.

ಹೃದಯಕ್ಕೆ ದಾರಿ ಹೊಟ್ಟೆಯಿಂದ ಎನ್ನುವ ಮಾತನ್ನು ಹಿಂದಿ ಚಲನ ಚಿತ್ರ ‘ಲಂಚ್ ಬಾಕ್ಸ್’ ಕಾಣಿಸುವ ರೀತಿಗೂ ‘ಅಮಿಸ್’ ಚಿತ್ರಕ್ಕೂ ಅಜಗಜಾಂತರ. ಚಲನಚಿತ್ರದುದ್ದಕ್ಕೂ ಶರೀರಸಂಪರ್ಕವೇ ಇರದ ಪ್ರೇಮಿಗಳು ಕೊನೆಯಲ್ಲಿ ಪ್ರೆಸ್ ಮುಂದೆ ಬರುವಾಗ ಮುಖಮರೆಸಿದ್ದರೂ ಅವರಿಬ್ಬರ ಕೈಗಳು ಬೆಸೆದಿರುವುದನ್ನು ನಿರ್ದೇಶಕ ಕಾಣಿಸಿರುವುದು ಹಲವು ಅರ್ಥಸಾಧ್ಯತೆಗಳನ್ನು ತೋರುತ್ತದೆ. *

‍ಲೇಖಕರು avadhi

June 5, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: