ಕಾವೇರಿ ಇತಿಹಾಸವನ್ನು ಬಗೆದ ಬಗೆ‌..

ಸಂತೋಷ್ ಅನಂತಪುರ

ಗಾಢ ಮೌನದೊಳಗೆ ಇತಿಹಾಸವು ಮಲಗಿರುತ್ತದೆ. ಅಗೆದು ಬಗೆದಂತೆಲ್ಲ ಹರಳುಗಟ್ಟಿದ ಚರಿತ್ರೆಯು ಪದರು ಪದರುಗಳಾಗಿ ಬಿಡಿಸಿಕೊಳ್ಳುತ್ತವೆ. ಆ ಪದರುಗಳಲ್ಲಿ ಅಡಗಿರುವ ಸತ್ಯಗಳನ್ನು ಮಿಥ್ಯವನ್ನಾಗಿಸುತ್ತಾ, ಮಿಥ್ಯಗಳನ್ನು ಸತ್ಯವೆಂದೇ ತಿಳಿಸುತ್ತಾ ಸವೆಯುವ ಹಾದಿಯಲ್ಲಿ ಕಟ್ಟಬೇಕಾದ, ನಿರ್ಮಿಸಬೇಕಾದ ನಾಳೆಗಳಿಗೆಂದು ಕಾಪಿಡಬೇಕಾದ ಚರಿತ್ರೆಯ ಹಾಳೆಗಳನ್ನು ಹಾಳುಗೆಡವುತ್ತೇವೆ. ಇತಿಹಾಸವಿರುವುದೇ ವರ್ತಮಾನ ಸಹ್ಯವೆನಿಸಲು ಹಾಗೂ ಭಾವೀಯನ್ನು ಸುಂದರಗೊಳಿಸಲು.

ಕಾಲವನ್ನು ಹಿಂದಕ್ಕೆ ಮುಂದಕ್ಕೆ ಜಗ್ಗಿ ಎಳೆದಾಡಿ ಅಕಾಲಕ್ಕೆ ಮೊರೆ ಹೋಗುವ ಚಾಳಿಯಿಂದ ನಾವಿನ್ನೂ ಹೊರಕ್ಕೆ ಬಂದಿಲ್ಲ. ಚರಿತ್ರೆಯೊಂದು ಹೇಗೆ, ಮತ್ತೆಷ್ಟರವರೆಗೆ ನಾಗರಿಕತೆಯ ಅಳಿವು-ಉಳಿವಿನಲ್ಲಿ ಮತ್ತದರ ಬೆಳವಣಿಗೆಯಲ್ಲಿ ಸಹಕಾರಿ ಎನ್ನುವ ಅರಿವು ಎಲ್ಲರಿಗೂ ಇರಬೇಕಾದುದೇ. ಆ ನಿಟ್ಟಿನಲ್ಲಿ ಇತಿಹಾಸದೊಳಗಿನ ಇಣುಕು ಮಹತ್ತಾದದ್ದು. ಆಗಾಗ ತಿದ್ದಿಕೊಳ್ಳಲು, ಬುದ್ದಿ ಹೇಳಿಸಿಕೊಳ್ಳಲು ಚರಿತ್ರೆಯ ಫಲಕುಗಳು ಜೀವವೆತ್ತಿ ಬರುವುದಿದೆ.

ಅಷ್ಟರ ಮಟ್ಟಿಗಾದರೂ ನಮ್ಮನ್ನು ನಾವಾಗಿಯೇ ಉಳಿಸಿಕೊಳ್ಳುವಲ್ಲಿ ಇತಿಹಾಸವು ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಹೀಗೆ ಕಾಣದ ಲೋಕವೊಂದು ಅನಾವರಣಗೊಳ್ಳುತ್ತಾ ಹೋಗುತ್ತದೆ. ಇತಿಹಾಸದ ಮುಖಕ್ಕೆ ಹತ್ತಲವು ಮುಖವಾಡಗಳನ್ನು ತೊಡಿಸಿ ರಂಗೀಲಾವಾಗುವುದನ್ನು ನೋಡುತ್ತಲಿರುವಾಗಲೂ ಇದ್ದ, ಇರುವ, ಇರಲಿರುವ ಕಾಲದ ಸುತ್ತಲೇ ಪ್ರದಕ್ಷಿಣೆ ಹಾಕುವ ಪ್ರಮೇಯವು ಮಾತ್ರ ತಪ್ಪಿದುದಲ್ಲ.

ಒ.ಕೆ.ಜೋಣಿಯವರು ಮಲೆಯಾಳಂನಲ್ಲಿ ಬರೆದ ‘ಕಾವೇರಿ ತೀರದ ಪಯಣ’ ಎಂಬ ಸಹಜ ಮಾನವ ತಲ್ಲಣಗಳಿಂದ ಕೂಡಿದ ನದಿಯ ಯಾನದ ಚರಿತ್ರೆಯನ್ನು ಕನ್ನಡಕ್ಕೆ ಭಾಷಾಂತರಿಸಿದವರು ಗಡಿನಾಡು ಕಾಸರಗೋಡು ಜಿಲ್ಲೆಯ ‘ವಿಕ್ರಂ ಕಾಂತಿಕೆರೆ’. ಭಾಷೆಯ ಸೊಗಡನ್ನು ಮತ್ತದರ ಭಾವವನ್ನು ಹಿಡಿದಿಟ್ಟು ದಾಟಿಸುವುದು ಅಷ್ಟು ಸುಲಭದ ಮಾತಲ್ಲ. ಆಯಾ ಭಾಷೆಯ ಮೂಲ ಗುಣ ಸ್ವಭಾವವನ್ನು ಅರಗಿಸಿಕೊಂಡ ಮೇಲೆಯೇ ಮೂಲಭಾವ ಸಮೇತ ತನ್ನ ಮಣ್ಣಿನ ಭಾವನೆಗಳನ್ನೂ ಸೇರಿಸಿ ಅನ್ಯ ಭಾಷಾವಲಯಕ್ಕೆ ದಾಟಿಸಲು ಸಾಧ್ಯವಾಗುವುದು.

ಕಾಸರಗೋಡು ಜಿಲ್ಲೆಯ ಬಹುಭಾಷಾ ಸಾಂಸ್ಕೃತಿಕತೆಯು ‘ವಿಕ್ರಂ ಕಾಂತಿಕೆರೆ’ ಯವರಿಗೆ ತಾವು ಹಿಡಿದ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಲು ಪೂರಕವಾಯಿತೆನ್ನುವ ಅನಿಸಿಕೆ ನನ್ನದು. ಮೂಲ ಬರಹದ ಓಘಕ್ಕೆ ಚ್ಯುತಿ ಬಾರದಂತೆ ಕನ್ನಡಕ್ಕೆ ಕಟ್ಟಿಕೊಟ್ಟ ಪುಸ್ತಕ- ‘ಕಾವೇರಿ ತೀರದ ಪಯಣ’. ಇಲ್ಲಿ ‘ಜೋಣಿ’ಯವರು ಸೆರೆ ಹಿಡಿದ ಕಾವೇರಿಯ ಹರಿವಿನ ಆತ್ಮದ ತುಣುಕುಗಳನ್ನು ‘ವಿಕ್ರಂ’ ಅವರು ಸಮರ್ಥವಾಗಿ ಕಾವೇರಿ ನಾಡಿನ ಮಣ್ಣಿಗೆ ಕೊಟ್ಟಿದ್ದಾರೆ.

ಮೂಲತಃ ಕೇರಳದ ವಯನಾಡಿನವರು ಒ.ಕೆ.ಜೋಣಿ. ದೇವರ ಸ್ವಂತ ನಾಡಿನಲ್ಲಿ ದೇವರೇ ಇಟ್ಟ ಪ್ರಾಕೃತಿಕ ಸಂಪತ್ತು ಹತ್ತಲವು. ಅಂತಹ ಒಂದು ಐಶ್ವರ್ಯ ವಯನಾಡಿನದ್ದೂ ಹೌದು. ಕೇವಲ ನದಿಯೊಂದರ ಹರಿವಿನ ಪಯಣವನ್ನಾಗಿಸದ ಈ ಕೃತಿಯಲ್ಲಿ-ನದಿಯ ಹರಿವ ಸೊಬಗಿದೆ, ತಿರದುದ್ದಕ್ಕೂ ತೀರದೇ ಇರುವ ಪಯಣವಿದೆ, ಜನಪದಗಳಿವೆ, ಸ್ಥಳ ಪುರಾಣಗಳಿವೆ, ಆಡು ಮಾತು-ಕತೆ, ವಾಸ್ತವತೆಗಳಿವೆ. ಎಲ್ಲದಕ್ಕೂ ಮಿಗಿಲಾಗಿ ಮನುಷ್ಯ ಸಂಬಂಧವನ್ನು ಹೊತ್ತು ಹೆತ್ತು, ಅನುಭವವನ್ನು ಕಥನವನ್ನಾಗಿಸಿದ ಮಾನವೀಯ ಸ್ಪರ್ಶಕ್ಕೆ ಅಕ್ಷರ ಮುಖೇನ ಭಾವವನ್ನು ಕಟ್ಟಿ, ರೂಪವನ್ನು ಕೆತ್ತಿ ಕೊಡಲಾಗಿದೆ. ‘ಮಾತೃಭೂಮಿ ಪಬ್ಲಿಕೇಷನ್ಸ್’ ಮಲೆಯಾಳಂನಲ್ಲಿ ಪ್ರಕಟಿಸಿದ ಪುಸ್ತಕವನ್ನು ಕನ್ನಡಕ್ಕೆ ಬೆಂಗಳೂರಿನ ‘ನವಕರ್ನಾಟಕ ಪಬ್ಲಿಕೇಷನ್ಸ್’ ಹೊರ ತಂದಿದೆ. ಒಟ್ಟು 35 ಅಧ್ಯಾಯಗಳಿರುವ ಪುಸ್ತಿಕೆಯೊಳಗಿಳಿದರೆ ಇತಿಹಾಸದ ಮೊಗಸಾಲೆಯಲ್ಲಿ ಕುಳಿತ ಅನುಭವವಾಗುತ್ತದೆ.

ಮೂರು ರಾಜ್ಯಗಳಿಗೆ ಸಂಬಂಧಿಸಿದ ಭಾವ-ಬಂಧಗಳನ್ನು ಬೆಸೆದ ಕಾವೇರಿಯು ಹುಟ್ಟಿ ಬೆಳೆದು ಹರಿದು ಸಾಗರಕ್ಕೆ ಸೇರುವಲ್ಲಿವರೆಗಿನ ದೀರ್ಘ ಯಾತ್ರೆಯಲ್ಲಿ ಅದೆಷ್ಟೋ ಸುಖ-ದುಃಖಗಳು ಹರಿದು ಹೋಗಿವೆ. ಪ್ರತಿಯೊಂದು ಅಧ್ಯಾಯವೂ ಚರಿತ್ರೆಯನ್ನು ಬಗೆಯುತ್ತಾ ಹೋದಂತೆ ಅರಿಯದ ಭಾವಸ್ಥಿತಿಯೊಂದು ಅನಾವರಣಗೊಳ್ಳುತ್ತದೆ. ಕೇರಳ-ಕರುನಾಡು-ಕೊಂಗನಾಡು-ಕೊಡಗು-ಕಾವೇರಿ-ಕಬಿನಿ.. ಹೀಗೆ ‘ಕ’ ಅಕ್ಷರಗಳೇ ಇತಿಹಾಸದ ಪುಟಗಳಲ್ಲಿ ಮೈದೆರೆದು ನಿಂತು ದಾಖಲಿಸಲ್ಪಟ್ಟಿವೆ.

ಕೊಡಗಿನ ಭಾಗಮಂಡಲದಲ್ಲಿ ಹುಟ್ಟಿದ ಕಾವೇರಿಯು ಪೂಂಪುಹಾರ್ ನಲ್ಲಿ ಸಮುದ್ರ ಸೇರುವಲ್ಲಿವರೆಗಿನ ತಲ್ಲಣ, ಸಂಕಟ, ಸೌಖ್ಯ ಸಂಧಾನಗಳನ್ನು ‘ಕಾವೇರಿ ತೀರದ ಪಯಣ’ ಕೃತಿಯು ಕಟ್ಟಿಕೊಟ್ಟಿದೆ.

ಕೊಡಗಲ್ಲಿ ಹುಟ್ಟಿ ಹರಿವ ಕಾವೇರಿಯ ಸುತ್ತಮುತ್ತ ಆಕೆಯದ್ದೇ ಆದ ಚರಿತ್ರೆಯಿದೆ. ಸ್ಥಳಪುರಾಣ, ಐತಿಹ್ಯಗಳಿಂದ ತೊಡಗುವ ‘ಕಾವೇರಿ ತೀರದ ಪಯಣ’ವು ಕೇಳರಿಯದ ಹಲವು ವಿಷಯಗಳನ್ನು ಬಿಚ್ಚುತ್ತಾ ಸಾಗುತ್ತದೆ. ಆಕೆ ತನ್ನ ಹರಿವನ್ನು, ತೀಕ್ಷ್ಣ ತಿರುವನ್ನು ಥಟ್ಟನೆ ಬದಲಾಯಿಸಿದಂತೆ ಚರಿತ್ರೆಯು ಕೂಡಾ ಬದಲಾಗುತ್ತಾ ಹೋಗುತ್ತದೆ. ಗ್ರೀಕ್ ಬೇರುಗಳ ಮೂಲವನ್ನು ಕೊಡವರಲ್ಲಿ ಕಾಣಬಹುದು ಎಂಬ ಅಂಶವನ್ನು ಹೇಳುತ್ತಲೇ ಕೊಡವರ ಅಪ್ರತಿಮ ಶೌರ್ಯದ ವಿವರಣೆಯೂ ಸಿಗುತ್ತದೆ.

ಮಲೆಯಾಳಂ-ತುಳು-ಕೊಡವ ಭಾಷೆ, ಸಂಸ್ಕೃತಿ, ಬಂಧಗಳಲ್ಲಿ ಅಡಗಿರುವ ಸಾಮ್ಯತೆಗಳನ್ನೂ ಕಾಣಬಹುದು. ಇಕ್ಕೇರಿ, ಹಾಲೇರಿ ವಂಶಸ್ಥರು ಕೊಡಗಿನ ನೆಲವನ್ನು ಆಳಿದ ಕಥಾನಕಗಳು ಕೊಡಗು-ಕಾವೇರಿಯ ಇತಿಹಾಸದಲ್ಲಿ ಅಚ್ಚಳಿಯದ ಚಿತ್ರಣಗಳು. ಹಾಗಿದ್ದೂ ಕೊಡವ ನಾಡನ್ನು ಕೊಡವನೊಬ್ಬನಿಗೆ ಆಳಲು ಯಾಕೆ ಸಾಧ್ಯವಾಗಲಿಲ್ಲ? ಎಂದು ತೀವ್ರವಾಗಿ ನನ್ನನ್ನು ಕಾಡುವ ಪ್ರಶ್ನೆಗಿಲ್ಲಿ ಉತ್ತರವಿಲ್ಲ. ಯೋಧನೊಬ್ಬನಿಗೆ ಬೇಕಾದ ಸರ್ವ ಲಕ್ಷಣಗಳನ್ನು ಹೊತ್ತ ವೀರ ಕೊಡವರು ತಮ್ಮದೇ ವಿಶಿಷ್ಟ ಸಂಸ್ಕಾರ-ಸಂಪ್ರದಾಯಗಳನ್ನು ಹೊಂದಿದವರು. ಹಾಗಿರುವಾಗಲೂ ಹೊರಗಿನಿಂದ ಬಂದವರ ಕೈಯಲ್ಲಿ ಆಳಿಸಿಕೊಂಡರೆಂದು ತಿಳಿಯಲ್ಪಡುವ ಇತಿಹಾಸದಲ್ಲಿ ಎಲ್ಲೂ ಕೊಡಗನ್ನು ಕೊಡವರೇ ಆಳಲಿಲ್ಲ ಯಾಕೆ? ಎನ್ನುವ ಕುರಿತಾಗಿ ಬೆಳಕು ಚೆಲ್ಲಿದ್ದರೆ ಚೆನ್ನಾಗಿರುತ್ತಿತ್ತು.

ಚಂದ್ರಗುಪ್ತ ಮೌರ್ಯನಿಂದ ಹರಿದು ಬಂದ ಜೈನಿಸಂ ಮತ್ತಾತನ ಮೊಮ್ಮಗ ಅಶೋಕನ ಕಾಲದ ಬುದ್ದಿಸಂಗೂ ಕಾವೇರಿ ಕಣಿವೆಯು ಸಾಕ್ಷಿಯಾಗುತ್ತದೆ. ವಿಶಿಷ್ಟಾದ್ವೈತದ ಶ್ರೀ.ರಾಮಾನುಜಾಚಾರ್ಯರು ‘ಬಿಟ್ಟಿದೇವ’ನನ್ನು ಹರ್ಷಚಿತ್ತನನ್ನಾಗಿಸಿ ‘ಹರ್ಷವರ್ಧನ’ನನ್ನಾಗಿಸಿದ ಕಾಲದ ತುಣುಕೂ ಇಲ್ಲಿದೆ. ವಿಳಂಬಿತ, ಮಧ್ಯಮ, ಧೃತ್ ನಲ್ಲಿ ಕಾವೇರಿಯ ಹರಿವನ್ನು ಹಿಡಿದಿಟ್ಟ ಶ್ರೇಯಸ್ಸು ಲೇಖಕ ಒ.ಕೆ.ಜೋಣಿ ಮತ್ತು ಭಾಷಾಂತಕಾರ ವಿಕ್ರಂ ಕಾಂತಿಕೆರೆಯವರದ್ದು.

ಚರಿತ್ರೆಯ ಪುಟಗಳು ವರ್ತಮಾನದಲ್ಲಿ ಹೇಗೆ ಉಸಿರಾಡುತ್ತವೆ ಎನ್ನುವುದರತ್ತಲೂ ಸೂಕ್ಷ್ಮ ಅವಲೋಕನವಿದೆ. ಸಾಕಷ್ಟು ಆಕರ ಗ್ರಂಥಗಳ ಅಧ್ಯಯನವನ್ನು ಮಾಡಿರುವ ಮೂಲ ಲೇಖಕರು, ಅದಾಗಲೇ ಕಾವೇರಿ ಕೊಳ್ಳವು ಕಟ್ಟಿಟ್ಟಿದ್ದ ಇತಿಹಾಸಕ್ಕೆ ತಾವೂ ಒಂದಷ್ಟು ಅಧ್ಯಯನ ಮಾಡಿ ಹೊಸ ಅಂಶಗಳನ್ನು ಸೇರಿಸಿರುವುದು ಇತಿಹಾಸದ ಮರು ಓದಿಗೆ ಕಾರಣವಾಗಿದೆ.

ಹೈದರಾಲಿಯ ಕೇಳರಿಯದ ಗುಣ ಸ್ವಭಾವಗಳನ್ನು ತಿಳಿಸುತ್ತಾ ಹೋದಂತೆ; ಇತಿಹಾಸವು ಹೇಗೆ ವರ್ತಮಾನದಲ್ಲಿ ಆಯಾ ಮೂಗಿನ ನೇರಕ್ಕೆ ಕುಣಿಯುತ್ತದೆ ಎನ್ನುವದನ್ನು ಹೇಳುತ್ತಾರೆ. ಹೈದರ-ಟಿಪ್ಪು-ಒಡೆಯರ್-ಕಳಲೆ ಅರಸರ ಕುರಿತಾಗಿ ಹೇಳುತ್ತಾ ಹೋಗುತ್ತಿರುವಾಗ ಲೇಖಕರು ಥಟ್ಟನೆ ಕೊಕ್ಕರೆ ಬೆಳ್ಳೂರಿಗೆ ಹಾರುತ್ತಾರೆ. ವರ್ತಮಾನದ ಸಿಹಿಯೊಂದು ಕಹಿಯಾಗುವ ಮಾದರಿಯನ್ನೂ ಬಿಡಿಸಿಡುತ್ತಾರೆ.

ಮನುಷ್ಯ-ಪ್ರಕೃತಿ-ಪಕ್ಷಿಗಳ ನಡುವಿನ ಅನ್ಯೋನ್ಯತೆಯನ್ನು ಚಿತ್ರಿಸುವಾಗ ಮಮಕಾರ ಭಾವವಲ್ಲಿ ಸ್ಪುರಿಯುತ್ತದೆ. ವರ್ಷಾಂಪ್ರತಿ ಸಾವಿರಾರು ಮೈಲುಗಳ ಆಚೆಯಿಂದ ಹಾರಿ ಬರುವ ಹಕ್ಕಿಗಳು- ‘ಹೆರಿಗೆಗೆಂದು ತವರಿಗೆ ಬರುವಂತೆ’-ಎಂದು ಕಾಣುವ ಊರಮಂದಿಯ ಕಲ್ಪನಾಭಾವವನ್ನು ವಿಸ್ತರಿಸಿ ಆರ್ದ್ರಗೊಳ್ಳುವ ಲೇಖಕ ತುಸು ಭಾವುಕರೂ ಆಗುತ್ತಾರೆ. ಅಭಿವೃದ್ಧಿ-ಆಧುನಿಕತೆಯ ಭರಾಟೆಯಲ್ಲಿ ಸೂಕ್ಶ್ಮತೆಗಳನ್ನು ಕಳೆದುಕೊಳ್ಳುತ್ತಾ ಯಾಂತ್ರಿಕವಾಗುವ ಮನೋಜಾಢ್ಯದಿಂದ ಮನುಷ್ಯ ಹೊರ ಬರಬೇಕಾಗಿರುವುದು ಅವಶ್ಯವೆಂದು ಕೊಕ್ಕರೆ ಬೆಳ್ಳೂರು ಅಧ್ಯಾಯವು ತಿಳಿಸಿ ಕೊಡುತ್ತದೆ.

ಸತಿ ಪದ್ಧತಿಯ ಅಧ್ಯಾಯಗಳನ್ನು ಗಮನವಿಟ್ಟು ಓದಬೇಕು. ಬಹಳ ತೀಕ್ಷ್ಣವಾಗಿ-ಸೂಕ್ಶ್ಮವಾಗಿ ಗ್ರಹಸಿ, ಅಧ್ಯಯನವನ್ನು ಮಾಡಿ ಚರಿತ್ರೆಯ ಪುಟಗಳನ್ನು ಲೇಖಕರು ಇನ್ನಷ್ಟು ಹೊಸ ಅಂಶಗಳೊಂದಿಗೆ ತೆರೆದಿಟ್ಟಿದ್ದಾರೆ. ವಿದೇಶಿ ಪ್ರವಾಸಿಗರ ಕಣ್ಣಲ್ಲಿ ಕಾವೇರಿ ನದಿ ತೀರದ ಐತಿಹ್ಯವನ್ನೂ ಇಲ್ಲಿ ಕೊಡಲಾಗಿದೆ. ಇಕ್ಕೇರಿಯ ಹತ್ತಿರವಿರುವ ತೆಲುಗು ನಾಡಿನ ‘ಜಿಯಾಕಮ್ಮ’ ಎಂಬ ಸತಿಯ ಜೊತೆಗೆ ಭಾಷಾಂತರಕಾರನ ಸಹಕಾರದಿಂದ ಪೋರ್ಚುಗೀಸ್ ರಾಯಭಾರಿಯೊಂದಿಗೆ ಬಂದಿದ್ದ ‘ಪಿಯತ್ರೋ’ವಿನ ಸಂಭಾಷಣೆಯಿದೆ.

ಅಪ್ರಕಟಿತವಾದ ಆ ಬರವಣಿಗೆ ವ್ಯಾಟಿಕನ್ ಬಿಬಿಲಿಯೋಥಿಕಾದಲ್ಲಿದೆ ಎನ್ನುವ ಲೇಖಕರು- ವ್ಯಾಟಿಕನ್ ಮಾಧ್ಯಮ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಕವಿ, ಪಂಡಿತ ‘ರೆವರೆಂಡ್ ಫಾದರ್ ವಿನ್ಸೆಂಟ್ ಅರಯ್ಕಲ್’ ಆ ಬರಹವನ್ನು ತರ್ಜುಮೆ ಮಾಡಿ ಲೇಖಕರಿಗೆ ನೀಡಿರುತ್ತಾರೆ ಎಂದವರು ದಾಖಲಿಸಿದ ಅಂಶ ಕುತೂಹಲವಾಗಿದೆ. ಇದು ಚರಿತ್ರೆಯ ಪುಟಗಳಿಗೆ ಇನ್ನಷ್ಟು ಬಲವನ್ನು ನೀಡಿದಂತಾಗಿದೆ. ತರ್ಜುಮೆ ಹೇಗೆ? ಯಾವ ಭಾವದಿಂದ ಆಗಿದೆ ಎನ್ನುವ ಕೌತುಕವಿದೆ. ಅದರ ಪ್ರತಿಯನ್ನು ಒದಗಿಸಿದ್ದಿದ್ದರೆ ಕೃತಿಯ ಮೌಲ್ಯವು ಇನ್ನಷ್ಟು ಹಿಗ್ಗುತ್ತಿತ್ತು. ಜೊತೆಗೆ ಲೇಖಕರ ಮಾತಿಗೊಂದು ಅಧಿಕೃತೆಯೂ ಒದಗುತ್ತಿತ್ತು. ಹೀಗೆ ‘ದೇಕಬ್ಬೆ’ಯ ಚರಿತ್ರೆಯಿಂದ ತೊಡಗಿ ವರ್ತಮಾನದಲ್ಲಿ ಘಟಿಸಿದ ‘ಬೂದನಾಳ’ದ ಇತಿಹಾಸವನ್ನು ದಾಖಲಿಸುತ್ತಾ ಲೇಖಕರು ಮುಂದಕ್ಕೆ ಸಾಗುತ್ತಾರೆ.

ಕಾವೇರಿಯು ತನ್ನ ಹರಿವಿನ ವೇಗವನ್ನು ಹೆಚ್ಚಿಸಿ ಹರಿದಲ್ಲೆಲ್ಲಾ ಸೃಷ್ಟಿಸಿದ ದಾಖಲೆಗಳನ್ನು ಹಿಡಿದಿಡುವ ಭರದಲ್ಲಿ- ವರ್ತಮಾನದ ತಲ್ಲಣ, ಅಸಮಾನತೆ, ಸತ್ಯವು ಮಿಥ್ಯವಾಗಿ, ಮಿಥ್ಯವನ್ನೇ ಸತ್ಯವೆಂದು ಬಿಂಬಿಸಿ ಉಸಿರಾಡುವ ಕಾಲಧರ್ಮದ ವಿಪರ್ಯಾಸವನ್ನು ಹೇಳಲೂ ಲೇಖಕರು ಹಿಂಜರಿಯುವುದಿಲ್ಲ. ಆದರೆ ಬಗೆದ ಚರಿತ್ರೆಯನ್ನು ಪ್ರಸ್ತುತ ರಾಜಕೀಯ ವಿದ್ಯಮಾನಕ್ಕೆ ಹೋಲಿಕೆ ಮಾಡಿರುವುದು ಬೇಡವಾಗಿತ್ತೇನೋ? ಚರಿತ್ರೆಯನ್ನು ಎಳೆತಂದು ಪ್ರಸ್ತುತ ಸ್ಥಿತಿಗೆ ಹೋಲಿಸಿದ್ದು ಸೈದ್ಧಾಂತಿಕ ಒಲವನ್ನು ಹೇರುವಂತಾಯಿತು ಎಂದು ನನಗನಿಸಿದ್ದು ಸುಳ್ಳಲ್ಲ.

ಹೀಗಾದಾಗಲೇ ನಿಜವಾದ ಚರಿತ್ರೆಯೂ ಒಲವಾಧಾರವಾಗಿ ವಿಂಗಡಿಸಲ್ಪಡುವುದು, ನಿಜವೂ ಸುಳ್ಳು-ಪೊಳ್ಳೆಂದು ಅನಾವಶ್ಯ ಚರ್ಚೆಗೆ ಗ್ರಾಸವಾಗುವುದು. ಇತಿಹಾಸವನ್ನು ಇತಿಹಸವಾಗಿಯೇ ನೋಡದಿರುವುದರಿಂದಲೇ ಚರಿತ್ರೆಯು ಸೈದ್ಧಾಂತಿ-ವೈಚಾರಿಕತೆಯ ಅಡಿಯಲ್ಲಿ, ರಾಜಕೀಯದ ನೆರಳಲ್ಲಿ ಓದಿ ಅರ್ಥೈಸಿಕೊಳ್ಳುವಂತಾಗುವುದು. ಒಂದೊಳ್ಳೆಯ ಅಕಾಡೆಮಿಕ್ ಚೌಕಟ್ಟಿನಲ್ಲಿ ಕುಳಿತುಕೊಳ್ಳಲು ಯೋಗ್ಯವಾದ ಪುಸ್ತಕವು- ಅನಗತ್ಯವೆಂದು ನಾನು ನಂಬುವ ತುಲನೆಗಳಿಂದಲಾಗಿ ಸೊರಗಿದೆ. ಲೇಖಕರ ಈ ಪ್ರಯತ್ನವು ಒಂದಷ್ಟು ತೀರದ ಪಯಣ ಸುಖವನ್ನು ಕಸಿದುಕೊಂಡಿದೆ.

ಕಾವೇರಿ ಉಕ್ಕೇರಿದಾಗ ಒಂದು ಚರಿತ್ರೆ. ಆಕೆ ಇಳಿದು ಒಣಗಿದಾಗ ಮತ್ತೊಂದು ಚರಿತ್ರೆ. ವರ್ತಮಾನದಲ್ಲಿ ನಿಂತು ನದಿಯೊಂದು ಭವಿಷ್ಯವನ್ನು ಹೇಗೆ ಕಟ್ಟುತ್ತದೆ ಎಂಬುದಕ್ಕೆ ಜ್ವಲಂತ ಸಾಕ್ಷಿಗಳನ್ನು ಇತಿಹಾಸದ ಪುಟಗಳಿಂದ ತಿಳಿಯಬಹುದಾಗಿದೆ. ನದಿಯು ಒಣಗದೆ ಹೋಗಿರದಿದ್ದರೆ ಘಟಿಸಬಹುದಾಗಿದ್ದ ಚರಿತ್ರೆಯ ಊಹೆಯತ್ತ ಓದುಗರನ್ನು ಲೇಖಕರು ದೂಡುತ್ತಾರೆ.

ಕಾಲದ ಮುಂದೆ ಯಾರೂ ದೊಡ್ಡವರಲ್ಲ ಎನ್ನುವ ಸತ್ಯ ದರ್ಶನವನ್ನು ಕಾವೇರಿಯು ಕರುಣಿಸುತ್ತಾ ಬಂದಿದ್ದಾಳೆ. ಕಾಲದ ಹರಿವೇ ಕಾವೇರಿಯ ಹರಿವೂ ಆಗಲು, ಆಕೆ ಬಳುಕಿ ಹರಿದೆಡೆಯಲ್ಲೆಲ್ಲಾ ಹೊಮ್ಮಿದ ಸಂಸ್ಕಾರ-ಸಂಸ್ಕೃತಿಗಳನ್ನು ಸೂಕ್ಶ್ಮವಾಗಿ ಅವಲೋಕಿಸಬೇಕು. ಚರಿತ್ರೆ ಇರುವುದು ತಿದ್ದಿ ತೀಡಿಕೊಳ್ಳಲು, ಉತ್ತಮ ಬದುಕನ್ನು ಕಟ್ಟಿಕೊಳ್ಳಲು. ಇತಿಹಾಸದಿಂದ ಕಲಿಯದೇ ಹೋದರೆ ವರ್ತಮಾನದಲ್ಲಿ ಬದುಕಲು, ಸುಂದರ ಭವಿಷ್ಯವನ್ನು ಹೆಣೆಯಲು ಸಾಧ್ಯವೇ ಇಲ್ಲ.

ಸ್ವಾರ್ಥ ಲಾಭಕ್ಕಾಗಿ, ಅನ್ಯರ ಮುಂದೆ ಸೊಬಗರಾಗಲೆಂದು ಕಟ್ಟಿಕೊಳ್ಳುವ ಸುಳ್ಳುಗಳಿಗೆ ಸತ್ಯದ ಹಣೆಪಟ್ಟಿ ಕಟ್ಟುವ ಪ್ರಕ್ರಿಯೆಯಲ್ಲಿ ಹತ್ತಾರು ಸುಳ್ಳುಗಳನ್ನು ಸಮರ್ಥನಾ ರೂಪದಲ್ಲಿ ಕಟ್ಟುತ್ತಲೇ ಹೋಗಿರುವ ನಿಜದ ಅಂಶದ ಅರಿವಾಗುವುದು ಕೂಡಾ ಕಾಲವನ್ನು ದಾಟಿ ಬಂದ ಮೇಲೆಯೇ. ಕಾಲಘಟ್ಟವೊಂದರ ಜೊತೆಗಿನ ನೇರ ಮುಖಾಮುಖಿಯು ಮತ್ತದು ತಟ್ಟಿದ ಸುಖ-ದುಃಖಗಳು, ಮಾನವೀಯ ನೆಲೆಯಲ್ಲಿ ನಿಂತು ನಡೆಸುವ ಅನುಸಂಧಾನಕ್ಕೆ ವೇದಿಕೆಯಾಗುತ್ತದೆ. ಇತಿಹಾಸಾಸಕ್ತ ಸಾಹಿತ್ಯ ವಿದ್ಯಾರ್ಥಿಗಳಿಗೆ ಈ ರೀತಿಯ ಯೋಚನೆಯು ಸಹಕಾರಿಯಾಗಲಿದೆ.

ಕೊಡಗಲ್ಲಿ ಹುಟ್ಟಿ ಕರುನಾಡಲ್ಲಿ ಬೆಳೆದು ಹರಿದು, ಕೊಂಗನಾಡನ್ನು ಸ್ಪರ್ಶಿಸಿ ಅಲ್ಲಿಯೂ ಇತಿಹಾಸವನ್ನು ಕಟ್ಟುವ ಕಾವೇರಿಯ ಸುಧೀರ್ಘಯಾನವು ಆಸಕ್ತಿಕರ ವಿಚಾರಗಳಿಂದ ಕೂಡಿವೆ. ಶಿವನ ಸಮುದ್ರದಿಂದ ಕೊಂಗನಾಡಿಗೆ ಪ್ರವೇಶಿಸುವ ಕಾವೇರಿ- ತಿರುಚ್ಚಿರಪಳ್ಳಿ ಮಲೈಕೋಟೆಯನ್ನು ಸ್ಪರ್ಶಿಸಿ, ಶ್ರೀರಂಗವೆಂಬ ಆಂಡಾಳ್ ಬೃಂದಾವನವನ್ನು ಹೊಕ್ಕು, ತಂಜಾವೂರಿನ ರಾಜಕೀಯ ಸ್ಥಿತಿಯಂತರಗಳಿಗೆ ಕಾರಣವಾಗುವುದನ್ನು ಕಾಣಬಹುದು. ಮುಂದಕ್ಕೆ ಬೃಹದೇಶ್ವರ, ಚೋಳ ಸಾಮ್ರಾಜ್ಯ, ಪಳಯರೈ ಮತ್ತು ಕುಡಾಮುಕ್ಕ್.. ಚಿದಂಬರದ ನಟರಾಜ.. ತಿರುವಯ್ಯಾರಿನ ತ್ಯಾಗರಾಜ ಸಮೇತ ಪಾವೇರಿ ಪಟ್ಟಣದ ಮುಗಿಯದ ಪಯಣದಲ್ಲಿ ನಾವೂ ಭಾಗಿಯಾಗುತ್ತೇವೆ.

ಕಾವೇರಿ ಹರಿದ ನೆಲದ ಹಿರಣ್ಯ ಗರ್ಭ ಇತಿಹಾಸಕ್ಕಿಳಿಯುವ ಮೊದಲು ‘ಕಾವೇರಿ ತೀರದ ಪಯಣ’ವನ್ನು ಓದಲೇಬೇಕು. ದೇವರ ಸ್ವಂತ ನಾಡಿನವನೊಬ್ಬ ತನ್ನ ಮಾತೃಭಾಷೆಯಲ್ಲಿ ಶ್ರೀಗಂಧದ ನಾಡಿನ ಸುಗಂಧವನ್ನು ಕಟ್ಟಿಕೊಟ್ಟದ್ದನ್ನು- ಕನ್ನಡಕ್ಕೆ ಬೇಕಿದ್ದೂ ಬೇಡವಾದ ಪ್ರದೇಶದ ಬಹುಸಂಸ್ಕೃತಿ-ಸಂಸ್ಕಾರದ ಅಳವು,ಅರಿವುಳ್ಳ ದೇವರ ಸ್ವಂತ ನಾಡಿನವನೇ ಆಗಿ ಇತಿಹಾಸದ ಮಗ್ಗುಲುಗಳನ್ನು ಕನ್ನಡ ಭಾವಕೋಶಗಳಿಗೆ ಪರಿಚಯಿಸಿದ್ದು ಕಾಕತಾಳಿಯವೋ?

‘ಕಾವೇರಿ ತೀರದ ಪಯಣ’ದಲ್ಲಿ ಹರಿವ ಕಾವೇರಿಯ ಜೊತೆಗೆ ನಾವೂ ತೇಲುತ್ತಾ ಆಕೆ ಹರಿದೆಡೆಯೆಲ್ಲಾ ಸಾಗಿ ನಿರಾಭರಣ ಸುಂದರಿಯ ಸ್ನಿಗ್ಧ ಸೌಂದರ್ಯವನ್ನು ಆಸ್ವಾದಿಸುತ್ತೇವೆ. ಬಾಯಾರಿದವರು ತುಂಬಾ ಜನರಿದ್ದಾರೆ. ಅಂತವರ ಬಾಯಾರಿಕೆಯನ್ನು ತಣಿಸಿದ್ದೇವೆಂದು ನಾವಂದುಕೊಂಡಿದ್ದೇವಷ್ಟೆ. ಆದರೆ ನಿಜಾರ್ಥದಲ್ಲಿ ನಾವೂ ಬಾಯಾರಿದವರೇ. ಬೆಳೆಯಬೇಕಿದ್ದರೆ, ಅರಳಬೇಕಿದ್ದರೆ ಆಗಾಗ ಹಿಂತಿರುಗಿ ನೋಡಬೇಕು.

‍ಲೇಖಕರು Admin

August 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: