ಕಾವೇರಿಯವರ ಕಾಡುವ ಪುಟಗಳು

ಎಚ್ ಕೆ ಶರತ್ 

ಒಡಲ ಖಾಲಿ ಪುಟ

ಲೇಖಕರು: ಕಾವೇರಿ ಎಸ್ ಎಸ್

ಪ್ರಕಾಶನ: ಪ್ರಜೋದಯ ಪ್ರಕಾಶನ, ಹಾಸನ. ಸಂಪರ್ಕ ಸಂಖ್ಯೆ:8792276742

ಪುಟಗಳು: 152

ಬೆಲೆ: 120

ನಗಿಸುತ್ತಲೇ ವಿಷಾದವನ್ನೂ ದಾಟಿಸುವ ಬರಹಗಳು

‘ಒಡಲ ಖಾಲಿ ಪುಟ’ ಕಾವೇರಿ ಅವರ ಎರಡನೇ ಕೃತಿ. ಏಕಕಾಲಕ್ಕೆ ನಗು ಮತ್ತು ವಿಷಾದ ಎರಡನ್ನೂ ದಾಟಿಸಬಲ್ಲ ಕಸುವು ಅವರ ಬರಹಗಳಲ್ಲಿ ಎದ್ದು ಕಾಣುವ ಅಂಶ. ತಮಗನಿಸುವುದನ್ನು ಅವರು ಪ್ರಾಮಾಣಿಕವಾಗಿ ಸರಳವಾಗಿಯೂ, ಸಂಕೀರ್ಣವಾಗಿಯೂ ಅಭಿವ್ಯಕ್ತಗೊಳಿಸುವ ಪರಿಯನ್ನು ‘ಒಡಲ ಖಾಲಿ ಪುಟ’ದಲ್ಲೂ ಗಮನಿಸಬಹುದು.

ಕೃತಿಯ ಮೊದಲ ಭಾಗವಾದ ‘ಭಾವ ಪಟಗಳು’ ಬರಹಗಳನ್ನು ಓದಿದಾಗ ಚಕಿತನಾದೆ. ಎಷ್ಟು ಚೆನ್ನಾಗಿ ಬರೆದಿದ್ದಾರೆ ಎನ್ನುವ ಉದ್ಘಾರ ನನ್ನೊಳಗೇ ಒಡಮೂಡಿತು. ಕಾವೇರಿ ಅವರ ಬಾಲ್ಯದ ಬದುಕನ್ನು ಕಟ್ಟಿಕೊಡುವ ಇಲ್ಲಿನ ಕೆಲ ಬರಹಗಳು ನಗಿಸುತ್ತಲೇ ವಿಷಾದವನ್ನೂ ಓದುಗರ ಮನಸ್ಸಿನ ಒಳಗಿಳಿಸುವಷ್ಟು ಸಶಕ್ತವಾಗಿವೆ. ಸರ್ಕಾರಿ ಶಾಲೆ, ಅಂಗನವಾಡಿಯಲ್ಲಿ ಅಕ್ಷರ ಜ್ಞಾನ ದಕ್ಕಿಸಿಕೊಳ್ಳುವ ಮಕ್ಕಳ ಭಾವಲೋಕವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಗಳ ನಡುವೆಯೂ ಸಂಭ್ರಮಿಸುವ ಬದುಕಿನ ಚಿತ್ರಗಳು ಆಪ್ತವಾಗಿವೆ.

ತಾವು ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಡಿಪ್ಲೊಮಾ ಓದುವ ವೇಳೆ ಕೈಗೊಂಡ ಅಧ್ಯಯನ ಪ್ರವಾಸದ ಅನುಭವಗಳನ್ನು ‘ಅರಿವಿನ ಪಯಣದ ಆರ್ದ್ರ ನೆನಪುಗಳು’ ಬರಹದಲ್ಲಿ ದಾಖಲಿಸಿದ್ದಾರೆ. ಈ ಬರಹ ಅಧ್ಯಯನ ಪ್ರವಾಸವನ್ನು ಆಯೋಜಿಸುವ ಇತರರಿಗೆ ದಿಕ್ಸೂಚಿಯಂತಿದೆ.

ಕೃತಿಯ ಎರಡನೇ ಭಾಗವಾದ ‘ವಿಚಾರ ವಿಹಾರ’ ಲೇಖನಗಳಲ್ಲಿ ಮೀಸಲಾತಿ, ಮುಟ್ಟು-ಮೈಲಿಗೆ, ಶಿಕ್ಷಣ, ಕೃಷಿ ಇನ್ನಿತರೆ ವಿಚಾರಗಳ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ‘ಮಾಧ್ಯಮ ಮತ್ತು ಮಹಿಳೆ’ ಪ್ರಬಂಧ ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆ ಎದುರಿಸಬೇಕಿರುವ ಸವಾಲುಗಳು, ಅಪಸವ್ಯಗಳ ಕುರಿತು ಗಮನ ಸೆಳೆಯುತ್ತದೆ. ತಮಗಾದ ಅನುಭವಗಳ ಮೂಲಕವೇ ಸುದ್ದಿಮನೆಯಲ್ಲಿ ಪತ್ರಕರ್ತೆಯರಿಗೆ ಎದುರಾಗುವ ಸನ್ನಿವೇಶಗಳನ್ನು ಚಿತ್ರಿಸಿದ್ದಾರೆ.

ಇನ್ನು ಕೃತಿಯ ಮೂರನೇ ಭಾಗವಾದ ಅಸಂಗತ ಲಹರಿ ಕಾವೇರಿ ಅವರು, ತಮ್ಮ ಮನಸ್ಸನ್ನು ಆವರಿಸುವ ದುಗುಡವನ್ನು ಅಭಿವ್ಯಕ್ತಗೊಳಿಸಲು ಪ್ರಜ್ಞಾಪೂರ್ವಕವಾಗಿಯೇ ಆಯ್ದುಕೊಳ್ಳುವ, ಸಂಕೀರ್ಣತೆ ಹಾಗೂ ಅಸ್ಪಷ್ಟತೆ ಮೇಳೈಸಿದ ಬರಹ ಶೈಲಿಯನ್ನು ಪರಿಚಯಿಸುತ್ತದೆ. ಕೆಲ ಸಾಲುಗಳು ಸರಾಗವಾಗಿ ಓದಿಸಿಕೊಳ್ಳದೆ, ಮರು ಓದಿಗೆ ಪುಸಲಾಯಿಸುತ್ತವೆ.

ಒಡಲ ಖಾಲಿ ಪುಟದ ಅಂತಿಮ ಭಾಗ ಪ್ರೇಮದ ಕುರಿತಾದ ಬರಹಗಳನ್ನು ಒಳಗೊಂಡಿದೆ.

ಈ ಕೃತಿಯಲ್ಲಿರುವ ಕೆಲವೇ ಕೆಲವು ಬರಹಗಳು ಇನ್ನೂ ಮಾಗಬಹುದಾದ ಸಾಧ್ಯತೆಯಿಂದ ವಂಚಿತವಾಗಿವೆ ಅನಿಸಿದರೂ, ಒಟ್ಟಾರೆ ಒಡಲ ಖಾಲಿ ಪುಟ ಒಂದೊಳ್ಳೆ ಪುಸ್ತಕ ಎನ್ನಲು ಬೇಕಾಗುವ ಪುರಾವೆಗಳೂ ಇಲ್ಲಿನ ಬರಹಗಳಲ್ಲೇ ದಕ್ಕಲಿವೆ.

‍ಲೇಖಕರು Avadhi

November 2, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: