ಶಕುಂತಲೆ ಮತ್ತೆ ಮರಳಲಾರಳು..

 

ಎರಡು ದಿನಗಳಿಂದ ಮಾತಂಗಾಶ್ರಮದಲ್ಲಿ ಅದೆಂತಹ ಗದ್ದಲ! ಆಶ್ರಮದ ನೀರವತೆಯನ್ನು ಕಲಕಿತ್ತು ಮಹಾರಾಜ ದುಷ್ಯಂತನ ಸೇನೆಯ ದಂಡು. ಅಲ್ಲಲ್ಲಿ ಕುಳಿತು ಚರ್ಚಿಸುವುದೇನು? ಕೇಕೆ ಹಾಕಿ ನಗುವುದೇನು? ಕಾಡಿನ ಮೃಗಗಳನ್ನು ಬೇಕಂತಲೇ ಹೆದರಿಸಿ ಓಡಿಸುವುದೇನು? ಸುಯ್ಯೆಂದು ಬಾಣವನ್ನು ಆಗಸದೆಡೆಗೆ ಬಿರುಸಾಗಿ ಹೂಡಿ ಹೊಡೆಯುವುದೇನು? ಪ್ರಶಾಂತವಾದ ಕೊಳವೊದರಲ್ಲಿ ಬಂಡೆಯೊಂದು ಉರುಳಿದಂತಾಗಿತ್ತು ಅಲ್ಲಿ.

ಶಕುಂತಲೆಯ ಮನದೊಳಗೂ ಅಂಥದ್ದೇ ಒಂದು ಬಿರುಗಾಳಿಯೆದ್ದಿತ್ತು. ಹೀಗೊಂದು ದಿನ ಬಂದೀತೆಂದು ಅವಳು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಕನಸುಗಳಿಗೆ ಅವಳ ಮನಸಸ್ಸಿನಲ್ಲಿ ಜಾಗವೂ ಇರಲಿಲ್ಲ. ಅವೆಲ್ಲವೂ ಅಂದೇ ಆ ರಾಜಸಭೆಯಲ್ಲಿಯೇ ಸುಟ್ಟು ಕರಕಲಾಗಿದ್ದವು. ಈಗವಳು ಮಾತಂಗ ಮುನಿಯ ನೆರಳಿನಲ್ಲಿ ಸ್ಥಿತಪ್ರಜ್ಞತೆಯನ್ನು ರೂಢಿಸಿಕೊಂಡುಬಿಟ್ಟಿದ್ದಳು. ಇಡಿಯ ಆಶ್ರಮದಲ್ಲಿ ಪ್ರಿಯಂವದೆಯೊಬ್ಬಳನ್ನು ಹೊರತುಪಡಿಸಿ ಒಂದೂ ಹೆಣ್ಣು ಜೀವವಿರಲಿಲ್ಲ. ಅವಳೋ ಇಡಿ ದಿನ ಸರ್ವದಮನನ ಆರೈಕೆಯಲ್ಲಿಯೇ ಮುಳುಗಿರುತ್ತಿದ್ದರಿಂದ ಶಕುಂತಲೆಗೆ ಏನೊಂದನ್ನು ಹಂಚಿಕೊಳ್ಳಲೂ ಯಾರೂ ಇರಲಿಲ್ಲ. ಇಡಿಯ ಆಶ್ರಮದ ತುಂಬೆಲ್ಲ ಬರಿಯ ಗಂಡು ಜೀವಗಳೇ ತುಂಬಿದ್ದವು. ಮ್ಲಾನವದನಳಾಗಿ ಕುಳಿತರೆ ಸಾಕು, ಅವರೆಲ್ಲರದೂ ಒಂದೇ ಪ್ರಶ್ನೆ, “ಯಾಕೆ, ಸರ್ವದಮನ ಏನಾದರೂ ಬೇಸರಪಡುವಂಥದ್ದನ್ನು ಮಾಡಿದನೆ? ನೀವೇನೂ ಚಿಂತಿಸಬೇಡಿ. ನಾವವನಿಗೆ ಬುದ್ಧಿ ಹೇಳುತ್ತೇವೆ.” ಹೆಣ್ಣೆಂದರೆ ತಾಯ್ತನ ಮಾತ್ರವೆ ಎಂದು ತಿಳಿದುಕೊಂಡಿರುವ ಬ್ರಹ್ಮಚಾರಿಗಳಲ್ಲಿ ಹೆಣ್ತನದ ಭಾವನೆಗಳನ್ನು ಹಂಚಿಕೊಳ್ಳಲುಂಟೆ? ದುಗುಡಗಳನ್ನು ಒಳಗೊಳಗೇ ನುಂಗುವುದು ರೂಢಿಯಾಗಿಬಿಟ್ಟಿದೆ.

ಇನ್ನು ಮಾತಂಗ ಮುನಿಗಳೋ? ಅವರ ಸ್ವಭಾವವೆಂಥದ್ದೆಂಬುದೇ ಶಕುಂತಲೆಗಿನ್ನೂ ತಿಳಿದಿಲ್ಲ. ಇಡಿಯ ಆಶ್ರಮದಲ್ಲಿ ಬರಿಯ ಬ್ರಹ್ಮಚಾರಿಗಳೇ ತುಂಬಿಕೊಂಡಿರುವುದರಿಂದ ತಮಗೆ ಆಶ್ರಯ ನೀಡಲಾರರೆಂಬ ಅಳುಕಿನಿಂದಲ್ಲವೆ ತಾನು ಮತ್ತು ಪ್ರಿಯಂವದೆ ಈ ಆಶ್ರಮವನ್ನು ಪ್ರವೇಶಿದುದು? ಆದರೆ ಅವರು ಅದರ ಬಗೆಗೆ ಚಕಾರವೆತ್ತಲಿಲ್ಲ. ನಾವು ಇಲ್ಲಿರುತ್ತೇವೆನ್ನುವಾಗ ಬೇಡವೆನ್ನಲಿಲ್ಲ. ತುಂಬಿದ ಬಸುರಿ ನಾನು. ನನ್ನ ಬಗ್ಗೆಯಾಗಲೀ, ನಾನು ಹಡೆದ ಮಗುವಿನ ಬಗೆಗಾಗಲೀ ಅತೀವ ಮಮತೆಯನ್ನೆಂದೂ ತೋರಿದವರಲ್ಲ. ಮಗು ಹುಟ್ಟಿ ತಿಂಗಳು ಆರು ಕಳೆದರೂ ಮಗುವಿಗೊಂದು ಹೆಸರಿಲ್ಲದ ಕಾರಣ ನಾನೇ ಒಂದು ದಿನ ಮಗುವನ್ನು ಅವರೆದುರಿಗೆ ಮಲಗಿಸಿ, “ಗುರುಗಳೇ, ನನ್ನ ಮಗುವಿಗೊಂದು ಹೆಸರನ್ನು ಸೂಚಿಸಿ” ಎಂದಿದ್ದೆ. ಅದಕ್ಕವರು ಏನೊಂದು ಭಾವನೆಯನ್ನೂ ಮುಖದಲ್ಲಿ ತೋರಿಸದೇ, “ಹೆಸರು ಸ್ವಭಾವಗಳು ಒಂದಕ್ಕೊಂದು ಹೊಂದಾಣಿಕೆಯಾದರೆ ಆ ಹೆಸರಿಗೊಂದು ಸಾರ್ಥಕತೆ. ಇವನಿನ್ನೂ ತೀರ ಚಿಕ್ಕವನು. ಸ್ವಲ್ಪ ದೊಡ್ಡವನಾಗಲಿ. ಅವನ ಸ್ವಭಾವವನ್ನು ನೋಡಿ ಅದಕ್ಕೆ ಹೊಂದುವ ಹೆಸರನ್ನಿಡೋಣ.” ಎಂದಿದ್ದರು. ನಾನು ಅವರ ಮಾತಿನಿಂದ ಸಮಾಧಾನಗೊಳ್ಳದೇ, “ಅವನಿಗೀಗ ಆರು ತಿಂಗಳು.” ಎಂದು ಮಗುವಿನ ವಯಸ್ಸನ್ನು ನೆನಪಿಸಿದ್ದೆ. ಅದಕ್ಕವರು ಒಂದಿನಿತೂ ಕೋಪಗೊಳ್ಳದೇ, “ನೋಡು ಶಕುಂತಲಾ, ಮನೆತುಂಬ ಮಕ್ಕಳಿದ್ದರೆ ಅವುಗಳನ್ನು ಕರೆಯಲೊಂದು ಹೆಸರು ತುರ್ತಾಗಿ ಬೇಕು. ಇವನು ಇಡಿಯ ಆಶ್ರಮಕ್ಕೊಬ್ಬನೇ ಮಗು. ತುರ್ತಾಗಿ ಹೆಸರಿಡಬೇಕಾದ ಅಗತ್ಯವೇನಿಲ್ಲ ಬಿಡು.” ಎಂದಿದ್ದರು. ಅವರು ಹೇಳಿದ ವಿಷಯವೇನೋ ಸತ್ಯವೆ. ಆದರೂ ನನಗದೆಂಥದ್ದೋ ವಿಷಾದ. ಬೇಡಬೇಡವೆಂದರೂ ತಂದೆ ಕಣ್ವರ ನೆನಪು ನುಗ್ಗಿಬಂದಿತ್ತು.

ಹೌದು, ಕಣ್ವ ಮಹರ್ಷಿಗಳು ಋಷಿಗಳೆಂದು ನನಗೆಂದೂ ಅನಿಸಿಯೇ ಇರಲಿಲ್ಲ. ಅದೆಂತಹ ಪಿತೃವಾತ್ಸಲ್ಯ ಅವರದು. ಇಡಿಯ ಆಶ್ರಮದ ತುಂಬೆಲ್ಲ ಗೆಳತಿಯರೇ ತುಂಬಿದ್ದರು ಅಲ್ಲಿ. ಹೆಣ್ಣುಗಳಿರುವಲ್ಲಿ ಸಂಭ್ರಮಕ್ಕೇನು ಕೊರತೆ? ಅದಕ್ಕೆಂದೇ ಇರಬೇಕು, ತಂದೆ ಕಣ್ವರು ಕೂಡ ಎಲ್ಲ ಮಹರ್ಷಿಗಳಂತೆ ಜಡದ ಮೂಟೆಯಾಗಿರಲಿಲ್ಲ. ಯಾವ ತಾಯಿಗೂ ಕಡಿಮೆಯಿಲ್ಲದ ಪ್ರೀತಿ ಅವರದ್ದು. ನನ್ನನ್ನು ತೊಡೆಯ ಮೇಲೆ ಕೂಡ್ರಿಸಿಕೊಂಡು ಲಲ್ಲೆಗರೆಯುವುದೇನು, ನನ್ನ ನೀಳ ಕೇಶರಾಶಿಯನ್ನು ಮೃದುವಾಗಿ ಬಾಚುವುದೇನು, ಕೈ ಮೈ ಕೊಳೆಯಾದರೆ ತಾನೇ ನಿಂತು ತೊಳೆಸುವುದೇನು? ಥೇಟ್ ಅಮ್ಮನ ಪ್ರತಿರೂಪ ಅವರು. ನಾನಾದರೂ ಅಷ್ಟೆ. ಪ್ರತಿಯೊಂದಕ್ಕೂ ಅವರನ್ನೇ ಅವಲಂಭಿಸಿದ್ದೆ. ಏನೊಂದು ಅಚ್ಛರಿಯ ವಿಷಯವನ್ನು ಕಂಡರೂ ಮೊದಲು ಅದನ್ನು ಅವರಿಗೇ ಹೇಳಬೇಕು, ಯಾರೊಬ್ಬರು ಹೊಸಬರು ಆಶ್ರಮದ ಸಮೀಪ ಸುಳಿದರೂ ನಾನೇ ಮೊದಲು ಓಡಿ ಬಂದು ಸುದ್ಧಿಯೊಪ್ಪಿಸಬೇಕು. ಅದೊಂದು ಆಶ್ರಮ, ಅಲ್ಲಿಯ ನಿಯಮಗಳು ಕಠಿಣ ಎಂದೆಲ್ಲ ಅನಿಸಿರಲೇ ಇಲ್ಲ ನನಗೆ.
ಕಣ್ವರ ನೆನಪಾದೊಡನೇ ಅಶ್ರುಬಿಂದುವೊಂದು ಶಕುಂತಲೆಯ ಕಣ್ಣಂಚಿನಿಂದ ಜಾರಿ ನೆಲಕ್ಕುರುಳಿತು.

ಶಕುಂತಲಾ…….. ಎಷ್ಟು ಮಾರ್ದೃವತೆಯಿಮದ ಕರೆಯುತ್ತಿದ್ದರು ನನ್ನ ತಂದೆ. ನಾನೊಮ್ಮೆ ಅವರಲ್ಲಿ ಕೇಳಿದ್ದೆ, “ನನಗೆ ಯಾರು ಹೆಸರಿಟ್ಟಿದ್ದು?” ಅದಕ್ಕವರು ತಾನೇ ಇಟ್ಟಿದ್ದು ಎಂದಿದ್ದರು. ನನ್ನ ಹೆಸರಿನ ಅರ್ಥವನ್ನು ಹೇಳುವ ನೆವದಲ್ಲಿ ನನ್ನ ಹುಟ್ಟಿನ ಗುಟ್ಟನ್ನೂ ಹೇಳಿದ್ದರು. ವಿಶ್ವಾಮಿತ್ರ ಮಹರ್ಷಿಗಳ ತಪಸ್ಸನ್ನು ಕೆಡಿಸಲು ಬಂದ ಮೇನಕೆ ಅವರೊಂದಿಗೆ ವರ್ಷಗಳ ಕಾಲ ವಾಸವಿದ್ದ ಫಲವಾಗಿ ನಾನು ಜನಿಸಿದ್ದಂತೆ. ತನ್ನ ಕೆಲಸವಾದ ಮೇಲೆ ಅಮ್ಮ ಸ್ವರ್ಗದ ಕಡೆಗೆ ಮುಖಮಾಡಿದರೆ ಅಪ್ಪ ತನ್ನ ಸಾಧನೆಯೆಡೆಗೆ ತೆರಳಿದರಂತೆ. ಅಲ್ಲೇ ಹುಲ್ಲುಹಾಸಿನ ಮೇಲೆ ಮಲಗಿದ್ದ ತನ್ನನ್ನು ಶಕುಂತಗಳು (ಪಕ್ಷಿಗಳು) ಗುಟುಕು ಕೊಟ್ಟು ಸಾಕುತ್ತಿದ್ದವಂತೆ. ಕಣ್ವರು ನನ್ನನ್ನು ನೋಡಿ ಆಶ್ರಮಕ್ಕೆ ಕರೆತಂದರಂತೆ. ನನ್ನನ್ನು ನೋಡಿಕೊಳ್ಳಲೆಂದು ಅಕ್ಕಪಕ್ಕದ ಆಶ್ರಮದ ಋಷಿಕುಮಾರಿಯರೆಲ್ಲ ಇಲ್ಲಿಗೆ ಬಂದು ಆಶ್ರಮದ ತುಂಬೆಲ್ಲ ತಪಸ್ವಿನಿಯರೇ ತುಂಬಿಹೋದರು ಎಂದು ನಕ್ಕಿದ್ದರು ಅಪ್ಪ. ಎಲ್ಲ ಹೇಳಿ ನಾನೆಲ್ಲಿಯಾದರೂ ತಂದೆ ತಾಯಿಗಳ ನೆನಪಿನಲ್ಲಿ ಬೇಸರಗೊಂಡಿರುವನೇನೋ ಎಂಬಂತೆ ನನ್ನ ಬೆನ್ನು ಸವರಿ ಹೇಳಿದ್ದರು. “ನೀನು ಯಾರಿಗೇ ಹುಟ್ಟಿದವಳಾಗಿರು. ಅಂದು ನಿನ್ನನ್ನು ಎತ್ತಿಕೊಂಡೆನಲ್ಲ, ಆ ದಿನದಿಂದ ನೀನು ನನ್ನ ಮಗಳು.” ಎಂದೂ ಕಂಡಿರದ ಅ ನನ್ನ ತಂದೆ ತಾಯಿಗಳು ನನಗೆ ನೆನಪಾಗಿ ಕಾಡಲಿಲ್ಲ. ಕಣ್ವರ ಮಮತೆಯ ಕೋಟೆಯಲ್ಲಿ ಎಲ್ಲಿಯೂ ಬಿರುಕಿರಲಿಲ್ಲ. ನಾನು ಅವೆಲ್ಲವನ್ನೂ ಹೀಗೆ ಕೇಳಿ ಹಾಗೆ ಮರೆತುಬಿಟ್ಟಿದ್ದೆ. ಮಾತಂಗ ಮುನಿಗಳೇನು ಕೆಟ್ಟವರಲ್ಲ, ಆದರೆ ಕಣ್ವರ ತಾಯ್ತನದ ಒರತೆ ಇವರಲ್ಲಿಲ್ಲ ಅಷ್ಟೆ. ನಾನು ನನ್ನನ್ನು ಸಂತೈಸಿಕೊಳ್ಳುತ್ತಿದ್ದೆ.

ಇದ್ದಕ್ಕಿದ್ದಂತೆ ಆಶ್ರಮದ ಕಡೆಯಿಂದ ಜೋರಾದ ಜೈಕಾರದ ಸದ್ದು. ಶಕುಂತಲೆ ತಾನು ಕುಳಿತ ಬಂಡೆಯೇರಿ ನಿಂತು ನಿರುಕಿಸಿದಳು. ಮಾಮೂಲಿನಂತೆ ಮಗು ಸರ್ವದಮನ ಸಿಂಹಗಳ ಮರಿಯನ್ನು ಎಳೆದೆಳೆದು ಅವುಗಳ ಹಲ್ಲುಗಳನ್ನೆಣಿಸುತ್ತಿದ್ದಾನೆ. ಅಂತಹ ಸಾಹಸ ಕಾರ್ಯವೆಸಗುತ್ತಿರುವ ತಮ್ಮ ಭಾವೀ ಪ್ರಭುಗಳ ಶೌರ್ಯಕ್ಕೆ ಎಲ್ಲರೂ ಜೈಕಾರ ಹಾಕುತ್ತಿದ್ದಾರೆ. ಅವರಿಗೆ ಇದೆಲ್ಲವೂ ಹೊಸದು. ತನಗೋ ಇವನ ತುಂಟಾಟಗಳನ್ನು ಕಂಡು, ಕಂಡು ರೂಢಿಯಾಗಿಬಿಟ್ಟಿದೆ. ಚಿಕ್ಕವನಾಗಿರುವಾಗಿನಿಂದಲೂ ಹಾಗೆ. ಹರಿಯುವ ಹಾವನ್ನು ಹಿಡಿದು ಗಿರಗಿರನೆ ತಿರುಗಿಸುತ್ತಾನೆ, ಓಡುವ ಹರಿಣಗಳ ಬೆನ್ನಟ್ಟಿ ಹಿಡಿಯುತ್ತಾನೆ, ಮಲಗಿರುವ ಸಿಂಹಿಣಿಯನ್ನು ಕೆಣಕಿ ಎಬ್ಬಿಸುತ್ತಾನೆ, ಚಿಗುರು, ಹೂವು, ಹಣ್ಣು ಏನನ್ನೇ ಕಂಡರೂ ಹರಿದು ಚೆಲ್ಲುತ್ತಾನೆ. ಗಂಡಸರೇ ತುಂಬಿರುವ ಈ ಆಶ್ರಮದಲ್ಲಿ ಅವನಿಂದ ಪೆಟ್ಟು ತಿನ್ನದವರಿಲ್ಲ.

ಪ್ರಿಯಂವದೆ ಮೊದಮೊದಲು ಇವೆಲ್ಲವನ್ನೂ ಮಾಡದಂತೆ ತಡೆಯುತ್ತಿದ್ದಳು, ಬುದ್ದಿ ಹೇಳುತ್ತಿದ್ದಳು. ಆದರೆ ಇವನು ಅವಳನ್ನೆಲ್ಲಿ ಕೇಳುತ್ತಿದ್ದ. ಒಮ್ಮೆ ಅವಳ ಜಡೆಯನ್ನೇ ಕಿತ್ತು ಬರುವಂತೆ ಎಳೆದು ಬೀಳಿಸಿಬಿಟ್ಟ. ಆಗವಳು ಕೋಪದಿಂದ ಕುದಿಯುತಾ ಬಂದು ನನ್ನಲ್ಲಿ ದೂರಿದ್ದಳು. “ಶಕೂ, ಇದ್ದೊಬ್ಬ ಮಗ ಹೀಗೆ ದಾರಿ ತಪ್ಪಿ ಹೋಗುತ್ತಿದ್ದರೂ ಇಡೀದಿನ ಬಂಡೆಯಂತೆ ಕುಳಿತಿರುವಿಯಲ್ಲ. ನಿನಗಾದರೂ ಬುದ್ದಿ ಬೇಡವೆ?”

ಅಂದೇ ನಾನು ಇವನ ಕೈಕಾಲುಗಳನ್ನು ಹಗ್ಗದಲ್ಲಿ ಕಟ್ಟಿ ಮಾತಂಗ ಋಷಿಗಳ ಎದುರು ನಿಲ್ಲಿಸಿದ್ದೆ. ಆಗಲೂ ಸ್ಥಿತಪ್ರಜ್ಞರಾಗಿಯೇ ಗುರುಗಳು ಹೇಳಿದ್ದರು, “ಅವನ ವರ್ತನೆ ಅವನ ವಂಶಕ್ಕೆ ತಕ್ಕುದಾಗಿಯೇ ಇದೆ. ಕಾಗೆಯ ಗೂಡಿನಲ್ಲಿ ಬೆಳೆದ ಮಾತ್ರಕ್ಕೆ ಕೋಗಿಲೆ ಕಾಗೆಯಂತೆ ಕೂಗುವುದೇ? ಕ್ಷತ್ರಿಯ ಕುಮಾರ ಅವನು. ಅವನಿಗೆ ತಕ್ಕುದಾದ ನಡತೆಯನ್ನು ತೋರುತ್ತಿದ್ದಾನೆ. ಸ್ವಲ್ಪ ದೊಡ್ಡವನಾದರೆ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾನೆ. ಅವನನ್ನು ಅವನಂತೆ ಬೆಳೆಯಲು ಬಿಡಿ.” ಎಂದು ನುಡಿದವರು ಮತ್ತೇನೋ ನೆನಪಾದವರಂತೆ, “ಹಾಂ, ಇವನಿಗೆ ಒಂದು ಚೆಂದದ ಹೆಸರನ್ನು ಈಗ ಇಡಬಹುದು. ಸರ್ವದಮನಾ…..” ಎಂದವರೇ ಅವನ ಕೈಕಾಲುಗಳಿಗೆ ಕಟ್ಟಿದ ಹಗ್ಗವನ್ನು ಬಿಚ್ಚಿ ಅಲ್ಲಿಯೇ ಇದ್ದ ಗಂಧಾಕ್ಷತೆಯ ಬಟ್ಟಲಿನಲ್ಲಿ ಅವನ ಕೈಬೆರಳುಗಳಲ್ಲಿ ‘ಸರ್ವದಮನ’ ಎಂದು ಬರೆದು ಹರಸಿದ್ದರು. ಈಗ ಅವನ ಸಹವರ್ತಿಗಳೆಲ್ಲ ಆಶ್ರಮಕ್ಕೆ ಬಂದಮೇಲಂತೂ ಅವನು ಕಿವಿಯಲ್ಲಿ ಗಾಳಿ ಹೊಕ್ಕ ಕರುವಿನಂತಾಗಿದ್ದಾನೆ. ಅವನ ತುಂಟಾಟಕ್ಕೆ ಇವರೆಲ್ಲರೂ ಎಷ್ಟೊಂದು ರೋಮಾಂಚಿತರಾಗುತ್ತಿದ್ದಾರೆ. ಹಾಗಾದರೆ ಗುರುಗಳು ಹೇಳಿದುದು ಸರಿ, ಅವನು ಅವನಂತಿದ್ದಾನೆ. ಆದರೆ ನಾನು…..?

ಕಣ್ವರ ಆರೈಕೆಯಲ್ಲಿ ನಿರಾಳವಾಗಿ ಬೆಳೆಯುತ್ತಿದ್ದೆ, ಕಾಡಿನ ಮೂಲೆಯೊಂದರಲ್ಲಿ ಬೆಳೆಯುತ್ತಿದ್ದ ಗಿಡದಂತೆ. ಅಂದು ಬೆಳಿಗ್ಗೆಯೇ ತಂದೆ ಎಲ್ಲಿಗೋ ಹೊರಡುವ ಧಾವಂತದಲ್ಲಿದ್ದರು. ನನ್ನನ್ನು ಕರೆದು ಆಶ್ರಮದ ಎಲ್ಲ ಜವಾಬ್ದಾರಿಯೂ ವಾರವೊಂದರ ಮಟ್ಟಿಗೆ ನಿನ್ನದು ಎಂದರು. “ಒಂದು ವಾರವೆ?” ಎಂದು ರಾಗವೆಳೆದ ನನ್ನ ತಲೆಗೊಂದು ಮೊಟಕಿ, “ಮಗಳೇ, ನೀನೀಗ ದೊಡ್ಡವಳಾಗಿರುವೆ. ಒಬ್ಬಳೇ ಆಶ್ರಮವನ್ನು ನಿಭಾಯಿಸುವಷ್ಟು.” ಎಂದು ಎಚ್ಚರಿಸಿದರು. “ಅಪ್ಪಾ, ಎಷ್ಟು ದೂರ ಹೊರಟಿರುವಿರಿ? ಏನು ಕಾರಣ ಹೊರಟಿರಿ?” ಎಂದು ಅವರ ಧೋತರದ ತುದಿಯೊಂದಿಗೆ ಆಟವಾಡಿದವಳಲ್ಲಿ, “ಈ ನನ್ನ ಮುದ್ದಿನ ಮಗಳಿಗೊಂದು ಗಂಡು ಹುಡುಕಲು ಎಂದೇ ಇಟ್ಟುಕೋ” ಎಂದು ಛೇಡಿಸಿದರು. ನಾನು ಮೊಗವನ್ನೆಲ್ಲ ಕೆಂಪೇರಿಸಿಕೊಂಡು ಅಲ್ಲಿಂದ ಓಡಿಹೊಗಿದ್ದೆ.

ಜೀವನದಲ್ಲಿ ಮೊದಲ ಬಾರಿಗೆ ನಾನೊಬ್ಬಳು ಜವಾಬ್ದಾರಿಯುತ ವ್ಯಕ್ತಿಯೆಂಬ ಭಾವ ನನ್ನನ್ನು ಆವರಿಸಿತ್ತು. ಆಶ್ರಮದ ಪ್ರತಿಯೊಂದು ಕೆಲಸದ ಉಸ್ತುವಾರಿಯನ್ನು ನಾನೇ ಹೊತ್ತೆ. ಕಾಲಕಾಲಕ್ಕೆ ಗಿಡಮರಗಳಿಗೆ ನೀರೂಡಿಸುವುದರಿಂದ ಹಿಡಿದು ಆಶ್ರಮದ ಎಲ್ಲ ಪ್ರಾಣಿಸಂಕುಲಗಳ ಪೋಷಣೆಯ ಬಗೆಗೂ ನಿಗಾ ವಹಿಸಿದ್ದೆ. ಹೋಮ, ಹವನ, ಪೂಜೆ ಪುನಸ್ಕಾರ ಎಲ್ಲವೂ ಕಾಲಕಾಲಕ್ಕೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದೆ. ಅದೊಂದು ಗೋಧೂಳಿಯ ಸಂಜೆ. ನನ್ನ ಪ್ರೀತಿಯ ಹರಿಣವೊಂದು ಇನ್ನೂ ಮನೆಸೇರಿರಲಿಲ್ಲ. ಅದೇ ಆತಂಕದಲ್ಲಿ ನಾನು ಪ್ರಿಯಂವದೆ ಆಶ್ರಮದಿಂದ ಬಹುದೂರ ಅದನ್ನು ಹುಡುಕುತ್ತ ಸಾಗಿದ್ದೆವು. ದೂರದಲ್ಲೆಲ್ಲೋ ಕುದುರೆಗಳ ಖರಪುಟದ ಸದ್ದು ಕೇಳಿಬಂದಿತ್ತು. ಧೂಳೆಬ್ಬಿಸುತ್ತಾ ಬರುವ ಸೈನಿಕರ ದಂಡು ನಾಡ ದೊರೆಯದಿರಬಹುದೆಂದು ಪ್ರಿಯಂವದೆ ಹೇಳಿದಳು. ಆಶ್ರಮದ ಗಡಿಯ ಹೊರಗಿರುವುದು ಕ್ಷೇಮವಲ್ಲವೆಂದು ನಾವು ಲಗುಬಗೆಯಿಂದ ಹಿಂದಿರುಗಿ ಬಂದೆವು. ಆದರೂ ಕಾಣೆಯಾದ ಹರಿಣದ ಚಿಂತೆಯಿನ್ನೂ ಮನದಿಂದ ದೂರವಾಗಿರಲಿಲ್ಲ. ಸ್ವಲ್ಪಹೊತ್ತು ಅಲ್ಲಯೇ ಕುಳಿತು ಅದರ ಬರವನ್ನು ಕಾಯೋಣವೆಂದುಕೊಂಡೆ. ರಾತ್ರಿಯೂಟದ ತಯಾರಿಗೆಂದು ಪ್ರಿಯಂವದೆ ಆಶ್ರಮಕ್ಕೆ ಮರಳಿದಳು.

ಆಗಲೇ ನಾನು ಅವನನ್ನು ನೋಡಿದ್ದು. ನನ್ನ ಹರಿಣವನ್ನು ಕೈಯಲ್ಲಿ ಹಿಡಿದುಕೊಂಡು ನಾನು ಕುಳಿತಿರುವಲ್ಲಿಗೆ ಬಂದಿದ್ದ. ನನ್ನನ್ನೇ ದಿಟ್ಟಿಸಿ ನೋಡುತ್ತ, “ಇದು ನಿಮ್ಮ ಆಶ್ರಮದ್ದೇ ಇರಬೇಕು. ಕೊಟ್ಟು ಹೊಗೋಣವೆಂದು ಬಂದೆ. ನನ್ನ ಸೈನಿಕರ ಕೈಗೇನಾದರೂ ಸಿಕ್ಕರೆ ನಾಳೆಯಾಗುವುದರೊಳಗೆ ಅವರ ಹೊಟ್ಟೆಯೊಳಗಿರುತ್ತದೆ.” ಎಂದ. ನಾನು ಹರಿಣದಂತೆಯೇ ಬೆದರಿ ಬೆವರಿದ್ದೆ. ಹರಿಣವನ್ನು ಅಲ್ಲಿಯೇ ಬಿಡುವಂತೆ ಹೇಳಿದೆ. ಓಡಿಹೋದಿತೆಂಬ ಆತಂಕ ಅವನದ್ದು. “ಅದಕ್ಕೆ ನನ್ನ ಪರಿಚಯವಿದೆ” ಎಂದೆ ನಾನು. ಅವನು ಬಿಡುವುದೊಂದೇ ತಡ, ನನ್ನ ಮುದ್ದು ಹರಿಣ ಓಡೋಡಿ ಬಂದು ನನ್ನ ಸೆರಗಿನಡಿಯಲ್ಲಿ ಬಚ್ಚಿಟ್ಟುಕೊಂಡಿತು. “ನಾನೂ ನಿಮ್ಮ ಪರಿಚಯ ಮಾಡಿಕೊಳ್ಳಬಹುದೆ?” ಎಂದ ದೊರೆ. ನಾನು ನನ್ನ ಪೂರ್ವಾಪರಗಳನ್ನೆಲ್ಲ ಹೇಳಿದೆ. “ಅಲ್ಲಿಗೆ ನೀನು ಕ್ಷತ್ರಿಯ ಕುವರಿ ಎಂದಾಯಿತು.” ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟ ದೊರೆ. ಅವನ ನಿರಾಳತೆಯ ಕಾರಣ ಮರುದಿನ ನನಗೆ ಗೊತ್ತಾಯಿತು.

ಮರುದಿನ ಬೆಳಿಗ್ಗೆ ಗುರುಪೂಜೆಯ ಸಕಲ ಸಾಮಗ್ರಿಗಳೊಂದಿಗೆ ದೊರೆಯೊಬ್ಬನೇ ಆಶ್ರಮಕ್ಕೆ ಬಂದ. ಕಣ್ವರು ಆಶ್ರಮದಲ್ಲಿಲ್ಲವೆಂಬ ಸುದ್ದಿಯನ್ನು ನಾನು ಬೇಕಂತಲೇ ಅವನಿಗೆ ಹೇಳಿರಲಿಲ್ಲ. ಎಲ್ಲ ತಪಸ್ವಿನಿಯರಿಗೆ ಒಂದು ರೀತಿಯ ದಿಗಿಲು. ದೊರೆಯನ್ನು ಸತ್ಕರಿಸುವುದು ಹೇಗೆಂಬ ಚಿಂತೆ. ಮತ್ತೆ ಆ ಜವಾಬ್ದಾರಿ ಸಹಜವಾಗಿ ನನ್ನ ಹೆಗಲಿಗೇರಿತು. ನಾನು, ಅವನು ಇಬ್ಬರೇ ಆಶ್ರಮದೊಳಗೆ. ಎಲ್ಲ ಪೂಜಾ ಪರಿಕರಗಳನ್ನು ಬದಿಗಿಟ್ಟ ದೊರೆ ಹೇಳಿದ, “ಗುರುಪೂಜೆಯ ಭಾಗ್ಯವಿಂದು ಇಲ್ಲವೆಂದಾಯಿತು. ದೇವಿಪೂಜೆಯನ್ನಾದದರೂ ನೆರವೇರಿಸುವ ಬಯಕೆ. ತಾವದಕ್ಕೆ ಅನುಮೋದಿಸಿದರೆ….” ನಾನು ಏನೊಂದೂ ಅರ್ಥವಾಗದೇ ಅವನ ಮುಖವನ್ನೇ ನೋಡಿದೆ. ತಂದೆಯನ್ನು ಬಿಟ್ಟರೆ ಅನ್ಯ ಪುರುಷರ ದರ್ಶನವಾದದ್ದೇ ಕಡಿಮೆ. ಅತೀವ ತೇಜಸ್ಸಿನಿಂದ ಕಂಗೊಳಿಸುತ್ತಿದ್ದ ಅವನ ಸನಿಹ ನನ್ನಲ್ಲಿ ಅದೆಂಥದ್ದೊ ಅಪ್ಯಾಯಮಾನತೆಯನ್ನು ಮೂಡಿಸಿತ್ತು. ದೊರೆ ನನಗೆ ಗಾಂಧರ್ವ ವಿವಾಹದ ಬಗೆಗೆ ಹೇಳಿದ. ಮೊದಮೊದಲು ಭಯವಾದರೂ ತಂದೆ ಹೋಗುವ ಮೊದಲು ಹೇಳಿದ ಮಾತುಗಳು ನೆನಪಾದವು. ತಂದೆಗೂ ನನ್ನನ್ನು ಮದುವೆಮಾಡುವ ಹಂಬಲವಿದೆ. ಅದು ಇಂಥಹ ತೇಜಸ್ವಿಯೊಂದಿಗಾದರೆ ಅವರೂ ಖುಶಿಪಟ್ಟಾರು ಎನಿಸಿತು. ದೊರೆಗೆ ವಾಗ್ದಾನ ನೀಡಿದೆ. ಅಂದೇ ಸಂಜೆ ಆಶ್ರಮದ ಲತಾಕುಂಜದಲ್ಲಿ ನಮ್ಮ ಸಮಾಗಮವೆಂದು ಮುಹೂರ್ತವೂ ನಿಗದಿಯಾಗಿಹೋಯ್ತು.

ಪ್ರಿಯಂವದೆಯೊಬ್ಬಳಿಗೆ ವಿಷಯ ತಿಳಿಸಿದ್ದೆ. ದೊರೆಯ ಮಾತನ್ನು ತೆಗೆದುಹಾಕುವ ಧೈರ್ಯ ಅವಳಿಗೂ ಇರಲಿಲ್ಲ. ಹಾಗಾಗಿ ನನ್ನ ಮದುವೆ ನಡೆದುಹೋಯ್ತು. ಅದೆಂಥಹ ಮದುವೆ! ಗಂಡು ಬಯಸಿದಾಗಲೆಲ್ಲ ಹೆಣ್ಣನ್ನು ಹೊಂದಲು ನಡೆಸುವ ಹುನ್ನಾರವದೆಂದು ನನಗೆ ಮತ್ತೆ ಅರಿವಾದದ್ದು ತಾನೆ? ಮೂರುದಿನಗಳ ಕಾಲ ಜೊತೆಗಿದ್ದವನು ಸ್ವರ್ಗದ ಸೀಮೆಯನ್ನೇ ತೆರೆದು ತೋರಿಸಿದ್ದ. ನಾಲ್ಕನೆಯ ದಿನ ಏನೂ ನಡೆದಿಲ್ಲವೆಂಬಂತೆ ರಾಜಪೋಷಾಕು ಧರಿಸಿ ಹೊರಟುಬಿಟ್ಟಿದ್ದ. ನನ್ನೆದೆಯೊಳಗೆ ಅದೆಂಥದ್ದೋ ಹೇಳಿಕೊಳ್ಳಲಾಗದ ತಳಮಳ! ನಾನು ನನ್ನೊಳಗಿನದೆಲ್ಲವನ್ನೂ ಅವನಿಗೆ ಬಸಿದುಕೊಟ್ಟು ಖಾಲಿಯಾಗಿಬಿಟ್ಟಿದ್ದೆ. ಅವನ ತೋಳಿಗೆ ತೆಕ್ಕೆಬಿದ್ದು ಅತ್ತೆ. ಅದಕ್ಕವನು ನನ್ನ ಬೆನ್ನು ನೇವರಿಸಿ, “ನಿನ್ನ ತಂದೆಯ ಅನುಮತಿ ಪಡೆದು ರಾಜಭವನಕ್ಕೆ ಬಾ. ಅಲ್ಲಿ ನಿನ್ನಂತೆಯೇ ಅನೇಕರಿದ್ದಾರೆ. ಅವರೊಂದಿಗೆ ಸುಖವಾಗಿರುವಿಯಂತೆ. ನೆನಪಿಗಾಗಿ ತೆಗೆದುಕೋ ಈ ಮುದ್ರೆಯುಂಗುರ.” ಎಂದು ತನ್ನ ಬೆರಳಿನೊಳಗಿನ ಉಂಗುರವನ್ನು ನನ್ನ ಬೆರಳಿಗೆ ತೊಡಿಸಿದ್ದ. ನನ್ನ ಸುಕೋಮಲ ನೀಳ ಬೆರಳುಗಳಿಂದ ಆ ಉಂಗುರ ಜಾರಿ ಬೀಳದಂತೆ ನಾನು ಬೆರಳನ್ನು ಮಡಚಿ ಹಿಡಿದಿದ್ದೆ.

ತಂದೆಯ ಮುಖ ನೋಡಲು ನನಗೆಲ್ಲಿ ಧೈರ್ಯವಿತ್ತು? ಪ್ರಿಯಂವದೆಯೇ ಎಲ್ಲವನ್ನೂ ಹೇಳಿರಬೇಕು. ತಂದೆ ಎಂದೂ ಇಲ್ಲದ ಮೌನ ಧರಿಸಿ ಕುಳಿತಿದ್ದರು. ಒಂದೆರಡು ದಿನಗಳ ಮಾತಲ್ಲವದು. ನಾಲ್ಕಾರು ತಿಂಗಳುಗಳೇ ಉರುಳಿಹೋಗಿದ್ದವು. ತಂದೆಯ ಮೌನ ನನ್ನನ್ನು ಸುಡುತ್ತಿತ್ತು. ಜೊತೆಯಲ್ಲಿ ಒಡಲೊಳಗೆ ಜೀವವೊಂದು ಮಿಡುಕಿದ ಸದ್ದು. ಪ್ರಿಯಂವದೆಗೆ ಎಲ್ಲವೂ ಅರ್ಥವಾಗಿತ್ತು. ನನ್ನನ್ನು ಹೂವಿನಂತೇ ಜೋಪಾನ ಮಾಡುತ್ತಿದ್ದಳು. ಆದರೆ ನನಗೆ ತಂದೆಯ ಸಾಂತ್ವನ ಬೇಕಿತ್ತು. ಒಂದು ದಿನ ತಾಳಲಾರದೇ ನಾನೇ ಹೋಗಿ ತಂದೆಗೆ ತೆಕ್ಕೆ ಬಿದ್ದು ಜೋರಾಗಿ ಅತ್ತೆ. ಕಣ್ವರು ಕರಗಿದರು. “ನಾನು ತಮಾಷೆಗೆಂದು ನುಡಿದುದನ್ನು ನೀನು ಮಾಡಿಯೇ ತೋರಿಸಿದೆ. ಆದರೆ ಅವಸರ ಮಾಡಿದೆ ಮಗಳೇ. ಒಡಲ ಕುಡಿ ಧರೆಗಿಳಿವ ಮುನ್ನ ದೊರೆಯನ್ನು ಸೇರಿಕೊಳ್ಳುವುದೊಳಿತು” ಎಂದರು. ದುಷ್ಯಂತನ ರಾಜಸಭೆಗೆ ಹೋಗುವ ತಯಾರಿಗಳು ನಡೆದವು.

ನಾನು ತಂದೆಯೂ ನನ್ನೊಂದಿಗೆ ಬರುವರೆಂಬ ಭರವಸಸೆಯಲ್ಲಿದ್ದೆ. ಆದರೆ ಪ್ರಿಯಂವದೆ ಮಾತ್ರವೇ ನನ್ನೊಂದಿಗೆ ಹೊರಟಳು. ಅವಳಿಗೆ ಮಾತ್ರವಲ್ಲವೇ ನಾನು ನನ್ನ ವಿವಾಹದ ವಿಷಯವನ್ನು ಮುಂಚಿತವಾಗಿ ತಿಳಿಸಿದ್ದು? ಶಚೀತೀರ್ಥವನ್ನು ನಾವೆಯ ನೆರವಿನಿಂದ ದಾಟಿ ನಾವು ದುಷ್ಯಂತನ ಅರಮನೆಯನ್ನು ಸೇರಿದೆವು. ಅರಮನೆಯಲ್ಲಿ ಕಾಡಿನ ನಿರಾಳತೆಯಿರಲಿಲ್ಲ. ಹೆಜ್ಜೆಹೆಜ್ಜೆಗೂ ಪಹರೆಯವರ ವಿಚಾರಣೆಗಳು, ಇಲ್ಲಸಲ್ಲದ ನಾನಾ ತರಹದ ಪ್ರಶ್ನಾವಳಿಗಳು. ಇವೆಲ್ಲದರ ಪರಿಚಯವಿಲ್ಲದ ನಾನು ದೈಹಿಕವಾಗಿಯಷ್ಟೇ ಅಲ್ಲ, ಮಾನಸಿಕವಾಗಿಯು ದಣಿದಿದ್ದೆ. ಪ್ರಿಯಂವದೆಯ ನೆರವಿಲ್ಲದಿದ್ದರೆ, ಗುರು ಕಣ್ವರ ಹೆಸರಿನ ಮಹಿಮೆಯಲ್ಲದಿದ್ದರೆ ನಾನು ರಾಜಸಭೆಯನ್ನು ಪ್ರವೇಶಿಸಲೂ ಸಾಧ್ಯವಿರಲಿಲ್ಲ. ಅಂತೂ ಮಹಾರಾಜನೆದುರು ನಿಂತಾಗ ಗುರಿ ಸೇರಿದ ನಿರಾಳತೆ!

ಆದರೆ ಆ ಖುಶಿಯು ಅಲ್ಪಕಾಲದ್ದಾಗಿತ್ತು. ಮಹಾರಾಜ ನನ್ನನ್ನು ಗುರುತಿಸಲೇ ಇಲ್ಲ. ಪ್ರಿಯಂವದೆ ತೀರ ಹತಾಶಳಾಗಿದ್ದಳು. ತುಂಬಿದ ಸಭೆಯೆದುರಿಗೆ ನನ್ನ ಮೋರೆಯ ಮುಸುಕನ್ನು ತೆರೆದು ತೋರುತ್ತಿದ್ದಳು. ಶಚೀತೀರ್ಥದ ದಂಡೆಯಲ್ಲಿ ಮೀನು ಮಾರುವ ಮಹಿಳೆಯರು ತಮ್ಮ ಮೀನು ಬುಟ್ಟಿಯಲ್ಲಿರುವ ಮೀನನ್ನು ನೆಗೆನಗೆದು ಗ್ರಾಹಕರಿಗೆ ತೋರಿಸುತ್ತಿದ್ದ ದೃಶ್ಯ ನೆನಪಾಯಿತು ನನಗೆ. ಸತ್ತ ಮೀನಿನ ಬಾಳುವೆಗಿಂತ ದುರ್ಭರವಾಗಿತ್ತು ನನ್ನ ಬದುಕು. ಕ್ರೂರತನವೆಂಬದು ಅರಮನೆಯ ಮೂಲಗುಣವೋ ಏನೊ? ಅಲ್ಲಿದ್ದವರೆಲ್ಲರೂ ನನ್ನ ತುಂಬಿದ ಹೊಟ್ಟೆಯನ್ನೇ ದಿಟ್ಟಿಸುತ್ತ ಕುಹಕವಾಡುತ್ತಿದ್ದರು. ಪ್ರಿಯಂವದೆಗೆ ತಕ್ಷಣ ನನ್ನ ಬೆರಳಿನಲ್ಲಿರುವ ಉಂಗುರದ ನೆನಪಾಗಿರಬೇಕು. “ಇಗೋ, ನೋಡು ದೊರೆ, ನೀನೇ ಬೆರಳಿಗಿಟ್ಟ ಮುದ್ರೆಯುಂಗುರ.” ಎಂದು ಆಕ್ರೋಶದಿಂದ ನುಡಿದು ನನ್ನ ಅಂಗೈಯನ್ನು ಎತ್ತಿದಳು. ಇಡಿಯ ಸಭೆ ಗಹಗಹಿಸಿ ನಕ್ಕಿತು. ಬೆರಳಿನಲ್ಲಿ ಉಂಗುರವಿರಲಿಲ್ಲ. ಬೆರಳಿನಿಂದ ಜಾರುವ ಉಂಗರವನ್ನು ಬೆರಳಿಗೆ ತೊಡಿಸಿ ದೊರೆ ಜಾರಿಕೊಂಡಿದ್ದ. ಉಂಗುರದೊಂದಿಗೆ ನನ್ನ ಮದುವೆಯ ಭಾಗ್ಯವೂ ಜಾರಿಹೋಗಿತ್ತು.

“ಶಕೂ, ಇಲ್ಲೇನು ಮಾಡುತ್ತಿರುವೆ? ಅಲ್ಲಿ ಎಲ್ಲರೂ ಆಮೋದದಲ್ಲಿರುವಾಗ ನೀನೊಬ್ಬಳೇ ಏಕಾಂಗಿಯಾಗಿ ಇಲ್ಲಿ ಕುಳಿತುರುವಿಯಲ್ಲ. ದೊರೆಯ ಕಣ್ಣುಗಳು ನಿನ್ನನ್ನೇ ಹುಡುಕುತ್ತಿದ್ದವು. ಬರಬಾರದೇನು?” ಎಂದು ಕರೆದಳು ಪ್ರಿಯಂವದೆ. ನನ್ನ ಮೌನ ಅವಳಿಗೆ ಅದೇನನ್ನು ಹೇಳಿತೋ ತಿಳಿಯದು. ಬಂದಂತೆ ಮರಳಿ ಹೋದಳು. ಬದುಕಿನದು ಎಂಥ ವಿಪರ್ಯಾಸ! ದೊರೆಯ ಒಂದು ಪ್ರೀತಿಯ ನೋಟಕ್ಕಾಗಿ ಎಷ್ಟೊಂದು ಹಂಬಲಿಸಿದ್ದೆ ನಾನು. ಅಂದು ರಾಜಸಭೆಯಿಂದ ಹೊರಬರುವಾಗ ಕೇಳಿತಲ್ಲ ಒಂದು ದನಿ, “ಯಾರದೋ ಗರ್ಭಕ್ಕೆ ರಾಜಮುದ್ರೆಯೊತ್ತುವ ಹುನ್ನಾರ!” ಅಂದೇ ಸತ್ತು ಹೋಗಿದ್ದವು ನನ್ನೆಲ್ಲ ಕನಸುಗಳು. ನಾನು ನನ್ನೊಳಗಿನ ಗರ್ಭವನ್ನು ವಿರೋಧಿಸುತ್ತಿದ್ದೆ. ಅದಕ್ಕೆಂದೇ ಇರಬೇಕು, ಮಗು ಸರ್ವದಮನ ಎಲ್ಲವನ್ನೂ ಧಮನಿಸುವ ಗುಣವುಳ್ಳವನಾಗಿ ಹುಟ್ಟಿದ್ದು. ಅದು ನನಗೆ ಚಿಂತೆಯ ವಿಷಯವಾದರೆ ಇವರಿಗೆ ಹೆಮ್ಮೆ ತರುವ ವಿಷಯ. ಇರಲಿ, ಅವರವರ ಭಾವಕ್ಕೆ.

ಇಂದು ದೊರೆಯ ಕಣ್ಣುಗಳು ನನ್ನನ್ನು ಹುಡುಕುತ್ತಿವೆಯೆಂದರೆ ವಿಷಯ ಗಂಭಿರವೇ ಇರಬೇಕು. ಅದೇನೋ ಕಥೆಯನ್ನು ಹೇಳಿದಳಲ್ಲ ಪ್ರಿಯಂವದೆ. ಮೀನಿನ ಹೊಟ್ಟೆಯಲ್ಲಿ ಆ ಉಂಗುರ ಸಿಕ್ಕಿತಂತೆ, ಆಗ ಮಹಾರಾಜನಿಗೆ ಎಲ್ಲವೂ ನೆನಪಾಯಿತಂತೆ, ನನ್ನನ್ನು, ಮಗನನ್ನು ಹುಡುಕಿಸುವಲ್ಲಿ ಹತ್ತು ವತ್ಸರಗಳು ಕಳೆದುಹೋದವಂತೆ. ಅದೇ ಚಿಂತೆಯಲ್ಲಿಯೇ ದೊರೆ ಮುಪ್ಪಡರಿದಂತೆ ಕಾಣುವುದಂತೆ. ಎಷ್ಟು ನಿಜವೋ, ಎಷ್ಟು ಸುಳ್ಳೋ ಯಾರಿಗೆ ಗೊತ್ತು?

ಸಣ್ಣವಳಿರುವಾಗ ತಂದೆ ನನ್ನನ್ನು ಕಾಲಮೇಲೆ ಮಲಗಿಸಿ ಅದೆಷ್ಟು ರಾಜಕುಮಾರರ ಕಥೆಗಳನ್ನು ಹೇಳುತ್ತಿದ್ದರಲ್ಲ. ಆಗೆಲ್ಲ ನಾನು ಕೇಳುತ್ತಿದ್ದೆ, ಇಷ್ಟೆಲ್ಲ ಕಥೆಗಳು ಹೇಗೆ ಹುಟ್ಟುತ್ತವೆಯೆಂದು? ಅದಕ್ಕೆ ತಂದೆ ಹೇಳಿದ್ದರು ,ರಾಜನ ಆಸ್ಥಾನದಲ್ಲಿ ಸ್ಥಳಪುರಾಣ ಮತ್ತು ವಂಶಪುರಾಣಗಳನ್ನು ಬರೆಯುವವರಿರುತ್ತಾರೆಂದು. ನನಗೇಕೋ ಇವೆಲ್ಲ ಹಾಗೆ ಯಾರೋ ಚತುರಮತಿಗಳು ಬರೆದ ಕಥೆಯಂತೆ ಕಾಣುತ್ತಿವೆ.

ಕಥೆಯಾಗಲೀ, ಚರಿತ್ರೆಯಾಗಲೀ ನನಗೇನೂ ಬೇಧವಿಲ್ಲ ಎಂದುಕೊಂಡಳು ಅವಳು. ಅದರಾಚೆಯ ಸತ್ಯವೊಂದರ ಅನ್ವೇಷಣೆಯಲ್ಲಿ ಕಳೆದುಹೋದಳು. ಕಲ್ಲಾಗಿ ಬಂಡೆಯೊಂದರ ಮೇಲೆ ಹಾಗೆಯೇ ಕುಳಿತಿದ್ದಳು. “ಶಕುಂತಲಾ, ಇಲ್ಲಿರುವೆಯೇನು? ಯಾಕೆ ನನ್ನೊಂದಿಗೆ ಮಾತನಾಡುವುದಿಲ್ಲವೆ?” ದುಷ್ಯಂತ ಅವಳಿಗೆ ತೀರ ಹತ್ತಿರದಲ್ಲಿ ಕುಳಿತು ಕೇಳಿದ. “ಹೇಳಿ….” ತಲೆಯೆತ್ತದೇ ನುಡಿದಳು ಶಕುಂತಲೆ. “ಕ್ಷಮಿಸು ನನ್ನನ್ನು. ಮರಳಿ ಬಾ ನನ್ನ ಜೊತೆ. ಇಡಿಯ ಅಯೋಧ್ಯೆ ನಿನ್ನ ಬರವಿಗೆ ಕಾದಿದೆ. ಪಟ್ಟದರಸಿಯ ಪಟ್ಟ ಖಾಲಿಯಾಗುಳಿದಿದೆ.” ಅಚ್ಚರಿಗೊಳ್ಳುವ ಸರದಿ ಶಕುಂತಲೆಯದು. “ಇಲ್ಲೇ ಹಾಯಾಗಿದೆ ಮಹಾರಾಜ. ಅರಮನೆಯಲ್ಲಿ ಉಸಿರುಗಟ್ಟುತ್ತದೆ. ಆಶ್ರಮದ ತಂಗಾಳಿಯಲ್ಲಿ ಉಸಿರಾಡಿದವರಿಗೆ ಅರಮನೆ ಬಂಧನವೇ ಸರಿ” ತಣ್ಣಗೆ ನಿರಾಕರಿಸಿದಳು ಶಕುಂತಲೆ. “ಹಾಗೆನ್ನದಿರು. ಅರಮನೆಯ ಸಿಂಹಾಸನ ಬರಿದಾಗುತ್ತದೆ. ಸರ್ವದಮನನೊಬ್ಬನೇ ಇಡಿಯ ರಾಜ್ಯಕ್ಕೆ ವಾರಸುದಾರ. ಗಂಡು ಸಂತಾನವಿಲ್ಲ ನನಗೆ.”

ಇದು ಅಸಲಿ ವಿಷಯ! ಸತ್ಯ ಎಷ್ಟೊಂದು ಸುಳ್ಳುಗಳ ಆಳದಲ್ಲಿ ಹುದುಗಿರುತ್ತದೆ! ಮುದಿದೊರೆಗೆ ಮುಂದಿನ ರಾಜ್ಯದ ವಾರಸುದಾರನ ಚಿಂತೆ ಕಾಡಿದೆ. ಆಗ ನನ್ನ ನೆನಪಾಗಿದೆ. ಮನದಲ್ಲೇ ನಕ್ಕಳು ಶಕುಂತಲೆ. ಅಂದು ಆಶ್ರಮದ ಲತಾಕುಂಜದಲ್ಲಿ ಕಳೆದ ಮೂರುದಿನಗಳು ಮಾತ್ರವೇ ಅವಳ ದಾಂಪತ್ಯದ ದಿನಗಳು. ಮತ್ತುಳಿದ ಯೌವ್ವನವನ್ನೆಲ್ಲ ಅವಳು ಕಲ್ಲುಬಂಡೆಯ ಮೇಲೆ ಕುಳಿತು ಮನಸ್ಸನ್ನು ಕಲ್ಲಾಗಿಸುತ್ತಲೇ ಕಳೆದಿದ್ದಾಳೆ. ಬಂಡೆಯ ಮೇಲೆ ಒಲವಿನ ಮಳೆಸುರಿಸಿದರೂ ಅದು ಜಾರಿಹೋಗುತ್ತದೆ ಅಷ್ಟೆ. ಮಾತು ಬೇಕೆನಿಸಲಿಲ್ಲ ಅವಳಿಗೆ. “ನಾಳೆ ಹೊರಡುವ ತಯಾರಿ ನಡೆಸಲೆ?” ಆತಂಕದಿಂದ ಕೇಳಿದ ದೊರೆ. “ಸರ್ವದಮನ ಏನೆನ್ನುತ್ತಾನೆ?” ಶಕುಂತಲೆ ಪ್ರಶ್ನಿಸಿದಳು. “ಅವನು ನನ್ನೊಂದಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾನೆ. ಅವನನ್ನು ಈ ಆಶ್ರಮದಲ್ಲಿಯೂ ಇಷ್ಟು ವೀರನಾಗಿ ಬೆಳೆಸಿದ ನಿನಗೆ ಹೇಗೆ ಧನ್ಯವಾದಗಳನ್ನು ಹೇಳಲಿ? ಇಡಿಯ ರಾಜ್ಯವನ್ನು ಆಳುವ ಶೌರ್ಯ, ಧೈರ್ಯ ಅವನಲ್ಲಿ ಈಗಲೇ ಮೇಳೈಸಿದೆ. ಅವನೇ ನಮ್ಮ ಮುಂದಿನ ಮಹಾರಾಜ.” ದುಷ್ಯಂತ ಮಾತಿನಲ್ಲೇ ಪಟ್ಟಾಭಿಷೇಕವನ್ನೂ ಮುಗಿಸಿದ್ದ. “ಅಂತೂ ನೀವು ನಿಮ್ಮ ಮಗನನ್ನು ಭರಿಸಿಕೊಂಡಿರಿ.” ಎಂದಳು ಶಕುಂತಲೆ. “ಹಾಂ, ಹೌದು ಭರಿಸಿಕೊಂಡೆ.” ಎಂದವನು ಏನೋ ನೆನಪಾದವನಂತೆ, “ಭರಿಸಿಕೊಂಡವನು…… ಅವನಿಗೊಂದು ಹೊಸ ನಾಮಕರಣ ಮಾಡೋಣವೆಂದುಕೊಂಡಿದ್ದೆ. ನಿನ್ನ ಮಾತಿನಲ್ಲಿ ಅದರ ಹೊಳಹು ಸಿಕ್ಕಿತು. ಭರಿಸಿದವನು….. ಭರತ…. ಭರತ…. , ಮುದ್ದಾದ ಹೆಸರು.” ಎನ್ನುತ್ತಾ ಅಲ್ಲಿಂದ ಹೊರಟ.

ಮರುದಿನ ಪ್ರಯಾಣಕ್ಕೆ ಎಲ್ಲವೂ ಸಜ್ಜುಗೊಂಡಿತ್ತು. ರಾಜ ಪರಿವಾರದವರೆಲ್ಲ ತಮ್ಮ ತಮ್ಮ ರಥವೇರಿದ್ದರು. ಸರ್ವದಮನ ತನ್ನ ತಂದೆಯೊಂದಿಗೆ ರಥವೇರಲು ಕಾತರನಾಗಿದ್ದ. ತಾಯಿಯ ಆಶೀರ್ವಾದಕ್ಕಾಗಿ ಕಾಯುತ್ತಿದ್ದ. ಶಕುಂತಲೆ ಮಾತಂಗ ಮುನಿಯ ಪಾದಕ್ಕೆರಗಿದಳು. “ಹೋಗಿ ಬಾ ಮಗು, ಶುಭವಾಗಲಿ” ಎಂದು ಹರಸಿದರು ಅವರು. ಶಕುಂತಲೆ ಅವರಲ್ಲಿ ಕೇಳಿದಳು, “ನಾನು ಆಶ್ರಮಕ್ಕೆ ಮತ್ತೆ ಮರಳಬಹುದೆ?” ಗುರುಗಳು ಮೊದಲಬಾರಿಗೆ ನಸುನಗುತ್ತ ನುಡಿದರು, “ನಿನಗೆ ಆಶ್ರಮದ ಬಾಗಿಲು ಸದಾ ತೆರೆದಿರುವುದು ಮಗಳೆ” ಮೊದಲ ಬಾರಿಗೆ ಅವರ ಬಾಯಲ್ಲಿ ಮಗಳೇ ಎಂಬ ಪದವನ್ನು ಕೇಳಿ ಶಕುಂತಲೆ ಮುದಗೊಂಡಳು. ಗಟ್ಟಿನಿರ್ಧಾರದೊಂದಿಗೆ ದೊರೆಯೆದುರು ನಿಂತಳು.

“ದೊರೆಯೆ, ನಾನು ನಿನ್ನೊಂದಿಗೆ ಮರಳಲಾರೆ. ನಿನಗೆ ನಿನ್ನ ರಾಜಕಾರ್ಯವಿರುವಂತೆಯೇ ನನಗೆ ನನ್ನ ಸಾಧನೆಯ ದಾರಿಯಿದೆ. ಮುದೆಂದಾದರೂ ನಿನ್ನಲ್ಲಿಗೆ ಬಂದರೂ ಬಂದೇನು. ಅಲ್ಲಿಯವರೆಗೆ ನನ್ನ ಗುರುತಿಗಾಗಿ ಇಗೋ ಈ ಅಭಿಜ್ಞಾನವನ್ನು.” ಸರ್ವದಮನನ್ನು ಎತ್ತಿ ದೊರೆಯ ಮಡಿಲಿಗಿತ್ತಳು.

ಮರಳಿಹೋಗುವ ಮಹಾರಾಜನ ರಥವು ಭಾರವಾದಂತಿತ್ತು. ಚಕ್ರಗಳು ನಿಧಾನಗತಿಯಲ್ಲಿ ಉರುಳುತ್ತಿದ್ದವು. ದೊರೆಯ ಹೃದಯವೂ ಭಾರವಾಗಿರಬೇಕು. ಅಲ್ಲಿಯವರೆಗಿನ ಶಕುಂತಲೆಯ ಬೇಗೆಯೆಲ್ಲ ಅವನೆದೆಗೆ ಇಂದು ವರ್ಗಾವಣೆಯಾಗಿದ್ದವು. ಅವರ ನಿರ್ಗಮನದ ಮರುಗಳಿಗೆಯೇ ಶಕುಂತಲೆ ಆಶ್ರಮಕ್ಕೆ ಹಿಂದಿರುಗಿದಳು.

ಸ್ವೀಕಾರಕ್ಕೂ, ನಿರಾಕರಣೆಗೂ ಒಂದು ಅದ್ಭುತವಾದ ಶಕ್ತಿ ಬೇಕು. ಅವೆರಡರ ಸಂಗಮವಾಗಿ ಶಕುಂತಲೆ ನಿಂತಿದ್ದಾಳೆ.

‍ಲೇಖಕರು avadhi

November 2, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. Ahalya Ballal

    ಹೂಂ.
    ಕಥೆ ಪರಿಚಿತವೇ. ವ್ಯಥೆ ಪ್ರತಿ ಸಲ ಹೊಸತೆನಿಸುತ್ತದೆ

    ಪ್ರತಿಕ್ರಿಯೆ
  2. Sandhya gowda

    ಶಕುಂತಲೆ ಅದೆಷ್ಟು ನೋವುಂಡಿದ್ದಳು, ಕೊನೆಗೆ ರಾಜನಿಗೆ ವರ್ಗವಾಗಿದೆ ನೋವು, ಆಕೆ ಇನ್ನು ನಿರುಮ್ಮಳು…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: