ಚಿತ್ರ ವಿಮರ್ಶೆ • ಸುಪ್ರೀತ್ ಕೆ ಎಸ್
ಸಂವಾದ.ಕಾಂ
ಸಾಹಿತ್ಯ ಹಾಗೂ ಸಿನೆಮ ಸೃಜನಶೀಲ ಅಭಿವ್ಯಕ್ತಿಗೆ ತೆರೆದುಕೊಂಡ ಮಾಧ್ಯಮಗಳಾದರೂ ಈ ಎರಡು ಮಾಧ್ಯಮಗಳ ನಡುವಿನ ಸಂಬಂಧದ ಕುರಿತು ಬಹಳಷ್ಟು ಆಸಕ್ತಿಕರವಾದ ಚರ್ಚೆಗಳು ನಡೆದಿವೆ. ಯು ಆರ್ ಅನಂತಮೂರ್ತಿಯವರ “ಘಟಶ್ರಾದ್ಧ’ ಕಥೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿ ಸಿನೆಮಾ ಮಾಡಿದರು. ಈ ಸಿನೆಮಾದ ಕುರಿತು ಬರೆಯುತ್ತ ಅನಂತಮೂರ್ತಿ ಹೀಗೆ ಹೇಳುತ್ತಾರೆ: ಆರ್ಥಿಕ ಕಾರಣಗಳಿಂದಾಗಿ ಸಿನಿಮಾ ಪ್ರೇಕ್ಷಕನನ್ನು ಕಡೆಗಾಣಿಸುವುದು ಕಷ್ಟ. ಆದ್ದರಿಂದಲೇ ಅನುಭವ ತೀವ್ರ ನೈಜ ಅನ್ವೇಷಣೆಯಲ್ಲಿ ಸಿನಿಮಾಕ್ಕಿಂತ ಸಾಹಿತ್ಯ ಮುಂದಿರುತ್ತದೆ.ಆದರೆ ಕನ್ನಡದ ಕೆಲವು ಸಿನಿಮಾಗಳಲ್ಲಾದರೂ ಪ್ರೇಕ್ಷಕನಿಗೆ ಪೂಸಿ ಹೊಡೆಯದಂತೆ ಚಿತ್ರ ನಿರ್ಮಿಸುವುದು ಸಾಧ್ಯವಾಗಿರುವುದು ನಮ್ಮ ಸಂಸ್ಕೃತಿಯ ಆರೋಗ್ಯ ದೃಷ್ಟಿಯಿಂದ ಸಂತೋಷಪಡಬೇಕಾದ್ದು. ಈ ಪ್ರೇರಣೆ ಸಿನಿಮಾಕ್ಕೆ ಸಾಹಿತ್ಯದಿಂದ ಬಂದಿರುವುದು – ಸಿನಿಮಾಕ್ಕೆಂದೇ ಬರೆಯದ ಸಾಹಿತ್ಯದಿಂದ ಬಂದಿರುವುದು.
ಲೇಖಕರು ತಮ್ಮ ಮಾಧ್ಯಮಕ್ಕೆ ಬದ್ಧರಾಗಿ ಪ್ರಾಮಾಣಿಕವಾಗಿ ಬರೆದ ಕೃತಿ ಸಿನೆಮಾಗೆ ಪ್ರೇರಣೆಯಾಗುವುದು ಅಪೇಕ್ಷಣೀಯ. ಆದರೆ ಸಿನೆಮಾ ಆಗಲು ಅರ್ಹವಾದಂತೆ ಕತೆ, ಕಾದಂಬರಿ ಬರೆಯಲು ಹೊರಟರೆ ಅಪ್ರಮಾಣಿಕರಾಗುತ್ತಾರೆ ಎನ್ನುವುದು ಅನಂತಮೂರ್ತಿಯವರ ವಿಚಾರ. ಈ ವಿಚಾರದ ಕಂದೀಲಿನ ಬೆಳಕಲ್ಲಿ “ಕಾಯ್ ಪೋ ಚೆ’ ಚಿತ್ರವನ್ನು ಅವಲೋಕಿಸುವುದು ಸಮರ್ಪಕವೆನಿಸುತ್ತದೆ.

ಚೇತನ್ ಭಗತ್ ಇಂದಿನ ಭಾರತೀಯ ಯುವ ಜನರ ನಾಡಿ ಮಿಡಿತವನ್ನು ಅರಿತವರಂತೆ ಬರೆಯುವ ಜನಪ್ರಿಯ ಲೇಖಕ. ಅವರ “ಫೈವ್ ಪಾಯಿಂಟ್ ಸಂ ಒನ್’ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಅನಧಿಕೃತ ಪಠ್ಯಪುಸ್ತಕ. ಈ ಚಿತ್ರದ ಜನಪ್ರಿಯ ಅಂಶಗಳನ್ನೇ ಆಧರಿಸಿದ “ಥ್ರೀ ಇಡಿಯಟ್ಸ್’ ಚಿತ್ರ ಒಳ್ಳೆಯ ಮನರಂಜನೆಯ ಚಿತ್ರವೆಂದು ಮನ್ನಣೆ ಪಡೆಯಿತು. “ಒನ್ ನೈಟ್ ಅಟ್ ದಿ ಕಾಲ್ ಸೆಂಟರ್’ ಸಹ ಚಲನಚಿತ್ರವಾಯಿತು. ಅವರ ಮೂರನೆಯ ಕಾದಂಬರಿ “ಥ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್’ ನ್ನು ಆಧರಿಸಿ ನಿರ್ಮಿಸಿರುವ ಚಿತ್ರ “ಕಾಯ್ ಪೋ ಚೆ’. ನಾಲ್ಕನೆಯ ಕಾದಂಬರಿ “ಟು ಸ್ಟೇಟ್ಸ್ : ದಿ ಸ್ಟೋರಿ ಆಫ್ ಮೈ ಮ್ಯಾರೇಜ್’ ಸಹ ಚಲನ ಚಿತ್ರವಾಗಿ ರೂಪಾಂತರಗೊಳ್ಳುತ್ತಿದೆ. ಹೀಗೆ ಒಬ್ಬ ಲೇಖಕನ ಸಾಹಿತ್ಯ ಕೃತಿಯನ್ನು ಕ್ಷಿಪ್ರವಾಗಿ ಸಿನೆಮಾವಾಗಿ ಪುನರ್ ರೂಪಿಸುತ್ತಿರುವುದಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದರೆ ಅನಂತಮೂರ್ತಿ ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿದ ವಿಚಾರಗಳ ಪ್ರಸ್ತುತಿ ನಮ್ಮ ಗ್ರಹಿಕೆ ಲಭಿಸುತ್ತದೆ.
ಚೇತನ್ ಭಗತ್ ರ ಕಾದಂಬರಿಗಳ ಸಾಹಿತ್ಯಿಕ ಮೌಲ್ಯ ದೊಡ್ಡದೇನಲ್ಲ್. ಲೇಖಕರಿಗೂ ತಮ್ಮ ಕಾದಂಬರಿಗಳ ಸಾಹಿತ್ಯಿಕ ಮೌಲ್ಯದ ಕುರಿತು ಕಾಳಜಿಯಿಲ್ಲ.ಭಗತ್ ರ ಕಾದಂಬರಿಗಳು ಸ್ವಲ್ಪ ಪರಿಶ್ರಮವಹಿಸಿ ಕಲಿತುಕೊಂಡ ಕೈಚಳಕವನ್ನು ಎಲ್ಲರೆದುರು ನಾಜೂಕಾಗಿ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸುವ “ಶೋ ಮನ್” ಗುಣವುಳ್ಳ ಕೃತಿಗಳು. ಅವುಗಳಲ್ಲಿ ಐಐಟಿ ವಿದ್ಯಾರ್ಥಿಗಳ, ಕಾಲ್ ಸೆಂಟರ್ ಉದ್ಯೋಗಿಗಳ, ಆಧುನಿಕ ಮೇಲ್ಮಧ್ಯಮ ವರ್ಗದ ಬದುಕು ಚಿತ್ರಿತವಾಗುವುದು ಕಥೆಗೆ ಒಳ್ಳೆಯ ಪೊಷಾಕನ್ನು ಒದಗಿಸುವ ಸೀಮಿತ ಉದ್ದೇಶಕ್ಕಾಗಿ. ಇವು ಜಾದೂಗಾರ ತನ್ನ ಕೈಚಳಕ ಪ್ರದರ್ಶಿಸಲು ಬಳಸುವ ಬೆಳಕಿನ ವಿನ್ಯಾಸ, ಉದ್ದನೆಯ ಟೋಪಿ, ಕೈ ಕವಚ, ಹೆಗಲಿಗಂಟಿಕೊಂಡ ಕೇಪ್ ಇದ್ದಂತೆ. ಜಾದೂಗಾರನ ಆಸಕ್ತಿ ಇರುವುದು ಈ ಎಲ್ಲಾ ಪರಿಕರಗಳನ್ನು ಬಳಸಿ ವೀಕ್ಷಕನನ್ನು ಭ್ರಮೆಗೆ ದೂಡಿ ಕಣ್ಕಟ್ಟು ಮಾಡುವುದರಲ್ಲಿ. ಆತನನ್ನು ರಂಜಿಸುವುದರಲ್ಲಿ. ಭಗತ್ ರ ಕಾದಂಬರಿಗಳಲ್ಲಿ ಸಹ ಪರಿಸರ, ಪಾತ್ರಗಳ ಬದುಕು ರಂಜಿಸುವ ಕಥೆಯೊಂದಕ್ಕೆ ಕ್ಯಾನ್ವಾಸ್ ಒದಗಿಸುವ ಪರಿಕರಗಳು. ಹೀಗಾಗಿಯೇ ಫೈವ್ ಪಾಯಿಂಟ್ ಸಂ ಒನ್ ನಲ್ಲಿ ಅಲೋಕ್ ಗುಪ್ತಾ (ಥ್ರೀ ಈಡಿಯಟ್ಸ್ ನಲ್ಲಿ ರಾಜು ರಸ್ತೋಗಿ) ನ ಮನೆಯಲ್ಲಿನ ದಾರುಣ ಬಡತನ ಲೇವಡಿಯ ಸರಕಾಗುತ್ತದೆ.
ಹೀಗೆ “ಬಾಲಿವುಡ್ ಆನ್ ಪೇಪರ್’ ಶೈಲಿಯ ಕಾದಂಬರಿಗಳನ್ನು ರಚಿಸಿ ಸಾಹಿತ್ಯ ಮಾಧ್ಯಮಕ್ಕೆ ಅಪ್ರಮಾಣಿಕರಾಗಿಸುವ ಚೇತನ್ ಭಗತ್ ರ ಕೃತಿಯನ್ನು ಸಿನೆಮಾಗೆ ಅಳವಡಿಸಿ ‘ಕಾಯ್ ಪೋ ಚೆ’ ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಕಾದಂಬರಿಯಾಗಿ ಸಾಧಾರಣವಾದ ಕೃತಿ ಸಿನೆಮಾ ಮಾಧ್ಯಮದಲ್ಲಿ ಸತ್ವಯುತವಾಗಿ ನಿರ್ಮಿಸಲ್ಪಟ್ಟಿದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಇದು ಒಂದು ಕ್ರೂರ ವ್ಯಂಗ್ಯ! ಚಲನಚಿತ್ರ, ಅದರಲ್ಲೂ ಸಮಸ್ತ ಮಸಾಲೆಗಳು ಹದವಾಗಿ ಬೆರೆತ ಬಾಲಿವುಡ್ ಚಲನಚಿತ್ರದ ಲಕ್ಷಣಗಳನ್ನು ಅನುಕರಿಸಿ ರಚಿಸಲ್ಪಟ್ಟ ಸಾಹಿತ್ಯ ಕೃತಿ “ಫಾಸ್ಟ್ ಫುಡ್ ಸಾಹಿತ್ಯ’ ಎಂದು ಕರೆಸಿಕೊಳ್ಳುತ್ತದೆ. ಈ ಕೃತಿ ಸಿನೆಮಾ ಆಗುತ್ತದೆ. ಆದರೆ ಬಾಲಿವುಡ್ ಸಿನೆಮಾದ ಆಧಾರ ಸ್ತಂಭಗಳಾದ ಸ್ಟಾರ್ ಕೇಂದ್ರಿತ ನಟವರ್ಗ, ಮರ ಸುತ್ತುವ, ಕೂತು ಕೂತಲ್ಲೇ ನ್ಯೂಜಿಲ್ಯಾಂಡ್, ಸ್ವಿಝರ್ ಲ್ಯಾಂಡಿನಲ್ಲಿ ಡ್ಯುಯೆಟ್ ಹಾಡುವ ಪ್ರೇಮಿಗಳು, ಒಮ್ಮೆ ಕಾಲು ಜಾಡಿಸಿದರೆ ಬಿಲ್ಲಿನಿಂದ ಜಿಗಿದ ಬಾಣದಂತೆ ಹಾರಿ ಹೋಗಿ ಬೀಳುವ ಗೂಂಡಾಗಳು- ಇವೆಲ್ಲವನ್ನು ಪೋಷಿಸದೆ ನಿರ್ಮಿಸಿದ ಸಿನೆಮ, ಸಿನಿಮೀಯ ಅಭಿವ್ಯಕ್ತಿಯ ಉತ್ತಮ ಉದಾಹರಣೆಯಾಗಿಬಿಡುತ್ತದೆ!
“ಕಾಯ್ ಪೋ ಚೆ’ ಸಿನೆಮಾ ಹಾಗೂ ಥ್ರೀ ಮಿಸ್ಟೇಕ್ಸ್ ಕೃತಿಗಳ ಉದಾಹರಣೆಯಲ್ಲಿ ಸಾಹಿತ್ಯ ಹಾಗೂ ಸಿನೆಮಾ ಮಾಧ್ಯಮಗಳ ಸಂಬಂಧವನ್ನು ಗಮನಿಸಲು ಸಾಧ್ಯವಿದೆ. ಅದಕ್ಕಿಂತ ಮುಖ್ಯವಾಗಿ ಸಿನೆಮಾ ಹಾಗೂ ಸಾಹಿತ್ಯವನ್ನು ಗ್ರಹಿಸುವ ಮಾನದಂಡಗಳು, ಈ ಎರಡು ಮಾಧ್ಯಮಗಳ ಓದುಗ/ಪ್ರೇಕ್ಷಕ/ವಿಮರ್ಶಕರ ಪ್ರಬುದ್ಧತೆಯ ಕುರಿತೂ ಅರಿಯಲು ಸಾಧ್ಯವಿದೆ. ಜನಪ್ರಿಯ ಕಾದಂಬರಿಯೊಂದನ್ನು ಬಲು ಸುಲಭವಾಗಿ ಇದು “ಫಾಸ್ಟ್ ಫುಡ್ ಸಾಹಿತ್ಯ” ಎಂದು ಕರೆಯಲು ಸಾಧ್ಯವಾಗುವ ಮಟ್ಟಿಗೆ ನಮ್ಮ ವಿಮರ್ಶಕರ ಹಾಗೂ ಓದುಗರ ಸಂವೇದನೆಗಳು ತಿದ್ದಲ್ಪಟ್ಟಿವೆ. ಭೈರಪ್ಪ, ಶಿವರಾಮ ಕಾರಂತರ ಕಾದಂಬರಿಗಳಿಗೂ ಸಾಯಿಸುತೆ, ಯಂಡಮೂರಿ ವಿರೇಂದ್ರನಾಥರ ಕಾದಂಬರಿಗಳಿಗೂ ಇರುವ ಭಿನ್ನತೆ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ. ಆದರೆ ಸಿನೆಮಾವನ್ನು ಈ ಪ್ರಬುದ್ಧತೆಯಿಂದ ಗ್ರಹಿಸುವಷ್ಟು ನಮ್ಮ ಸಂವೇದನೆಗಳು ನೇರ್ಪುಗೊಂಡಿಲ್ಲ. ಹೀಗಾಗಿ ನಮಗೆ ಸಿನೆಮಾವೊಂದನ್ನು ಫ್ಲಾಪ್ ಇಲ್ಲವೇ ಹಿಟ್ ಎನ್ನುವ ತೀರ್ಮಾನಾತ್ಮಕ ನಿಲುವನ್ನು ಮೀರಿ ಗ್ರಹಿಸುವುದಕ್ಕೆ ಕಷ್ಟವಾಗುತ್ತದೆ.
ಈ ಸಿನೆಮಾ ಕ್ರಿಕೆಟ್, ಧರ್ಮ, ರಾಜಕಾರಣವನ್ನು ಯಾವುದೇ ಒಳನೋಟಗಳಿಲ್ಲದೆ, ತೀರಾ ಮೇಲ್ಪದರದ ಗ್ರಹಿಕೆಯಲ್ಲಿ ಚಿತ್ರಿಸುತ್ತದೆ. ಹೀಗಾಗಿ ಭುಜ್ ಭೂಕಂಪನ, ಕೋಮುಗಲಭೆಯಂತಹ ಐತಿಹಾಸಿಕ ಘಟನೆಗಳು ಯಾವುದೇ ಸಾಂದ್ರತೆಯಿಲ್ಲದ ವಿವರಗಳಾಗಿ ಚಿತ್ರದಲ್ಲಿ ಸೇರಿವೆ. ಪಾತ್ರಗಳ ಸ್ವಭಾವವನ್ನು ಚಿತ್ರಿಸುವುದರಲ್ಲಿ ತೋರಿರುವ ಬುದ್ಧಿವಂತಿಕೆಯನ್ನು ನಿರ್ದೇಶಕ ಅವುಗಳ ಕ್ರಿಯೆಗಳ ಪ್ರೇರಣೆಯನ್ನು ಗುರುತಿಸುವಲ್ಲಿ ತೋರಿದ ಹಾಗೆ ಕಾಣುವುದಿಲ್ಲ. ಹೀಗಾಗಿ ಅಲಿ ಒಬ್ಬ ಪ್ರತಿಭಾವಂತ ಕ್ರಿಕೆಟ್ ಆಟಗಾರ, ಆತನನ್ನು ಅಂತರಾಷ್ಟ್ರೀಯ ಪ್ರತಿಭೆಯಾಗಿ ಬೆಳೇಸಬೇಕು ಎನ್ನುವ ಮಹತ್ವಾಕಾಂಕ್ಷೆಯಲ್ಲಿ ಮುಸ್ಲಿಂ ಕುಟುಂಬವೊಂದಕ್ಕೆ ಅಕಾರಣವಾಗಿ ನೆರವಾಗುವ ಇಶಾನ್ ಪಾತ್ರವನ್ನು ಹಿಂದುತ್ವ ಮೂಲಭೂತವಾದಿಗಳ ಎದುರಾಗಿ ಚಿತ್ರಿಸಿರುವುದು ಅರ್ಥಹೀನವಾಗಿದೆ. ಚಿತ್ರಕ್ಕೆ ಸ್ಪಷ್ಟವಾದ ಕೇಂದ್ರವಿಲ್ಲ. ಹೀಗಾಗಿ ಇದು ಯಾರ ಕಥೆಯನ್ನು ಹೇಳುತ್ತಿದೆ ಎನ್ನುವುದೇ ಪ್ರೇಕ್ಷಕನಿಗೆ ಗೊಂದಲವಾಗುತ್ತದೆ. ಪ್ರೇಕ್ಷಕ ಯಾವುದನ್ನು ಎದುರು ನೋಡಬೇಕು? ಅವರಿವರ ಕೈ ಕಾಲು ಹಿಡಿದು ಬಿಸಿನೆಸ್ ಮಾಡಲು ಹೊರಡುವ ಗುಜರಾತಿ ಬನಿಯ ಪ್ರಾಕೃತಿಕ ವಿಕೋಪ, ಗೆಳೆಯರ ಮೂರ್ಖತನ, ಕೋಮುಗಲಭೆ ಇವುಗಳನ್ನೆಲ್ಲ ಎದುರಿಸಿ ಯಶಸ್ವಿ ಬಿಸಿನೆಸ್ ಮನ್ ಆಗುವುದನ್ನೋ (“ಗುರು’ ಚಿತ್ರ ನೆನಪು ಮಾಡಿಕೊಳ್ಳಿ), ಬಡ ಮುಸ್ಲಿಂ ಕುಟುಂಬದ ಗೋಲಿ ಆಡುವ ಹುಡುಗ ಭಾರತೀಯ ಕ್ರಿಕೆಟ್ ತಂಡವನ್ನು ಸೇರುವ ಕಥೆಯನ್ನೋ (“ಇಕ್ಬಾಲ್’ ಚಿತ್ರವನ್ನು ನೆನಪಿಸಿಕೊಳ್ಳಿ), ತಾನು ಸಾಧಿಸದ ವಿಕ್ರಮವನ್ನು ತಾನು ತರಬೇತು ನೀಡಿದ ಶಿಷ್ಯರಿಂದ ಸಾಧಿಸುವ ಕನಸು ಕಾಣುವ ಗುರುವಿನ ಕಥೆಯನ್ನೋ (“ಚಕ್ ದೇ ಇಂಡಿಯಾ’ ನೆನಪಿಸಿಕೊಳ್ಳಿ) ಅಥವಾ ಯುವಕ ಯುವತಿಯರ ಪ್ರೇಮಕಥೆಯನ್ನೋ (ಬಹುಪಾಲು ಎಲ್ಲಾ ಬಾಲಿವುಡ್ ಸಿನೆಮಾಗಳನ್ನು ನೆನಪಿಸಿಕೊಳ್ಳಿ) ಎನ್ನುವುದು ಅಸ್ಪಷ್ಟ. ಬಾಲಿವುಡ್ ಸಿನೆಮಾಗಳ ಮೂಲ ವಸ್ತುಗಳನ್ನು ರೀಸೈಕಲ್ ಮಾಡಿದ ಕಾದಂಬರಿಯೊಂದನ್ನು ಮತ್ತೆ ಸಿನೆಮಾಗೆ ರೂಪಾಂತರಗೊಳಿಸುವಾಗ ಉದ್ಭವಿಸಿದ ದೋಷಗಳು ಇವು.
ಗುಜರಾತಿ ಬನಿಯನ ಪಾತ್ರದಲ್ಲಿ ರಾಜ್ ಕುಮಾರ್ ಯಾದವ್ ಇನ್ನಿತರ ಪಾತ್ರಗಳಲ್ಲಿ ನಟಿಸಿರುವ ನಟವರ್ಗ, ಪ್ರಾದೇಶಿಕತೆಯನ್ನು ವಸ್ತ್ರ ವಿನ್ಯಾಸ ಹಾಗೂ ಪ್ರೊಡಕ್ಷನ್ ಡಿಸೈನ್ ನಲ್ಲಿ ಬೆಸೆದಿರುವುದು ಚಿತ್ರದ ಪ್ರಶಂಸಾರ್ಹ ಅಂಶಗಳು. ಪ್ರಶಂಸನೀಯ ಅಂಶಗಳೆಲ್ಲ ಚಿತ್ರದಲ್ಲಿದ್ದು, ದೋಷಗಳೆಲ್ಲ ಮೂಲ ಕೃತಿಯಿಂದ ದಾಟಿ ಬಂದಿರುವುದರಿಂದ ಚಿತ್ರ ಒಟ್ಟಾರೆ ಕೃತಿಯಾಗಿ ಮಹತ್ವದ್ದಾಗಿ ಉಳಿಯುವುದಿಲ್ಲ.
“ಕಾಯ್ ಪೋ ಚೆ” ಗೆಲುವು ಇರುವುದು ಅದರ ನಿರ್ದೇಶಕ ತನ್ನ ಮಾಧ್ಯಮಕ್ಕೆ ನಿಷ್ಠನಾಗಿರುವುದರಲ್ಲಿ. ಆದರೆ ಅದರ ಸೋಲು ಇರುವುದು ಅದು ತನ್ನ ಮಾಧ್ಯಮಕ್ಕೆ ನಿಷ್ಠನಾಗಿಲ್ಲದ ಸಾಹಿತಿಯ ಕೃತಿಯನ್ನು ಆಧರಿಸಿರುವುದರಲ್ಲಿ.







ಸುಪ್ರೀತ್,
ತುಂಬ ಅರ್ಥಪೂರ್ಣವಾಗ ವಿಶ್ಲೇಷಣೆ. ನನಗೂ ಚಿತ್ರದಲ್ಲೇನೋ ಕೊರತೆಯಿದೆ ಅನ್ನಿಸಿತು. ಸಣ್ಣದಾಗಿ ಅದು ಕಾಡುತ್ತಿತ್ತು. ಅದನ್ನು ಸ್ಪಷ್ಟಗೊಳಿಸಿದ್ದೀರಿ. ಥ್ಯಾಂಕ್ಸ್.
–
I completely agree with the analysis.
ನಾನು ಚಿತ್ರ ನೋಡಿಲ್ಲ.
ಆದರೆ ವಿಶ್ಲೇಷಣೆ ಅರ್ಥಪೂರ್ಣವಾಗಿದೆ.
ಕನ್ನಡ ಚಿತ್ರಗಳಿಗೂ ಇದು ದಕ್ಕುವಂತಾಗಲಿ…
ಸಿನೇಮಾ ನೋಡಿಲ್ಲ. ಪುಸ್ತಕ ಓದಿದ್ದೆ. ಓದುವಾಗಲೇ ಇದು ಚಲನ ಚಿತ್ರಕ್ಕಾಗಿ ಬರೆದ ಕಥೆ ಎಂದು ಗೊತ್ತಾಗುತ್ತದೆ. ಇಲ್ಲಿ ಸುಪ್ರೀತ್ ರವರು ಹೇಳುವಂತೆ, ಆ ಪುಸ್ತಕದಲ್ಲಿ ಸಾಹಿತ್ಯಿಕ ಮೌಲ್ಯ ದೊಡ್ಡ ಸೊನ್ನೆ. ಕಥೆ ಯಾವ ರೀತಿ ತಿರುಗುತ್ತದೆ ಎಂದು ಚೇತನ್ ಭಗತ್ ರ ಎರಡು ಪುಸ್ತಕ ಓದಿದರೆ ಮೂರನೆಯ ಪುಸ್ತಕದಲ್ಲಿ ಹೇಳಬಹುದು. ಈ ಚಲನ ಚಿತ್ರಕ್ಕೆ ಟೈಂಸ್ ಆಫ್ ಇಂಡಿಯಾ ದವರು ನಾಲ್ಕು ಸ್ಟಾರ್ ಕೊಟ್ಟಿರುವುದು, ಈ ಲೇಖನ ಓದಿದ ನಂತರ, ಆಶ್ಚರ್ಯ ಆಗುತ್ತದೆ.
ಚಿತ್ರ ವಿಮರ್ಶೆ ಚೆನ್ನಾಗಿದೆ.
ಕೈ ಪೋ ಚೆ ನಾನು ಇತ್ತೀಚಿಗೆ ನೋಡಿದ ಅತ್ಯುತ್ತಮ ಕಮರ್ಷಿಯಲ್ ಚಿತ್ರ. ವಿಶ್ವರೂಪ ಎನ್ನುವ ಅಪ್ಪಟ ಕಮರ್ಷಿಯಲ್ ವಿರೂಪದ ಕುರಿತಂತೆ ರೇಜಿಗೆ ಹಿಡಿವಷ್ಟು ಚರ್ಚೆ ನಡೆಯುತ್ತಿದ್ದಾಗ ಯಾವುದೇ ಭಾರಿ ತಾರಾಂಗಣ, ತಂತ್ರಜ್ಞಾನ ಎಂಬಿತ್ಯಾದಿಯಾಗಿ ಸದ್ದು ಮಾಡದೆ, ಅತ್ಯಂತ ಸರಳವಾಗಿ, ಮಾನವೀಯ ಎಳೆಯೊಂದನ್ನು ನಂಬಿ ಚಿತ್ರ ಮಾಡಿದ ನಿರ್ದೇಶಕ ಅಭಿನಂದನಾರ್ಹರು. ಪ್ರೇಮ, ಕಾಮ ಇಲ್ಲಿ ಕೇಂದ್ರ ವಸ್ತು ಅಲ್ಲದಿದ್ದರೂ, ಅದು ಚಿತ್ರದಲ್ಲಿ ಸಹಜವಾಗಿ ಕೂಡಿಕೊಂಡ ಪರಿ ತುಂಬಾ ಇಷ್ಟವಾಯಿತು. ಹೃದಯಕ್ಕೆ, ಮನಸ್ಸಿಗೆ ತಂಪೆನಿಸುವ ಚಿತ್ರವನ್ನು ಅಭಿಷೇಕ್ ಕಪೂರ್ ನೀಡಿದ್ದಾರೆ. ತೀರ ತೆಳುವಾಗಿ, ಒಂದು ಸಣ್ಣ ತೊರೆಯಂತೆ ಸರಾಗವಾಗಿ ಹರಿಯುವ ಈ ಚಿತ್ರ, ಸಣ್ಣದೊಂದು ವಿಷಾದದ ಜೊತೆಗೆ ಆಶಾವಾದದ ಬೀಜವನ್ನು ಅಲಿ ಎನ್ನುವ ಪಾತ್ರದ ಮೂಲಕ ನೋಡುಗರ ಎದೆಯಲ್ಲಿ ಬಿತ್ತುತ್ತದೆ. ಚೇತನ್ ಭಗತ್ ಕಾದಂಬರಿ ನಾನು ಓದಿಲ್ಲ…ಆದರಿಂದ ನಾನು ಬುದ್ದಿಗೆ ಕೆಲಸ ಕೊಡದೆ ಸಿನಿಮಾವನ್ನು ಮಾತ್ರ ಎರಡೂವರೆ ಗಂಟೆ ಅನುಭವಿಸಿದೆ…
ಮೇಲಿನ ವಿಮರ್ಶಕರು ಚಿತ್ರದ ಕುರಿತಂತೆ ಏನು ಹೇಳುತ್ತಿದ್ದಾರೆ ಎಂದು ನನಗೆ ಅರ್ಥ ಆಗಲಿಲ್ಲ….ಬಹುಷಹ ಅದು ತುಂಬಾ ಗಂಭೀರ ವಿಷಯವಾಗಿರಬಹುದು.
ಚೇತನ್ ಭಗತ್ ಎ೦ಬ ಜ೦ಕ್ ಬರಹಗಾರನ ಸಾಹಿತ್ಯದಲ್ಲಿ ಏನು ಹುಡುಕೋದು?
Sir,
Sorry first you achieve like him then you can Junk… pls. may be you were not liking his style but … still we have to respect all ! sorry
ನೀವು ಇಲ್ಲಿ ಕೆಲವು ಸಂಗತಿಗಳನ್ನು ಮಿಕ್ಸ್ ಮಾಡಿದ್ದೀರಿ… ಎರಡು ಪ್ರಾಕಾರಗಳ ಸಾಹಿತ್ಯವನ್ನು ಅಕ್ಕಪಕ್ಕದಲ್ಲಿಟ್ಟು ಇದು ಉಚ್ಛ ಇದು ತುಚ್ಚ ಎನ್ನುವುದು ತಪ್ಪು. (ನೀವದನ್ನು ನೇರವಾಗಿ ವ್ಯಕ್ತ ಪಡಿಸದೆ ಇದ್ದರೂ, ಲೇಖನದ ಭಾವ ಅದನ್ನು ಸೂಚಿಸುತ್ತದೆ) ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿ ತಂತ್ರ ಶೈಲಿ ಭಾಷೆಗಳಲ್ಲಿ ಎಷ್ಟೇ ಉತ್ಕೃಷ್ಟವಾಗಿದ್ದರೂ, ಕೆಲವರಿಗೆ ಸಾಯಿಸುತೆಯ ಕಾದಂಬರಿ ಒದಗಿಸುವ ಮನರಂಜನೆ, ಕಾರಂತರ ಕಾದಂಬರಿಗಳು ಒದಗಿಸಲಾರದು. ಮಾಧ್ಯಮಗಳು ಚೇತನ್ ಭಗತನನ್ನು ಶ್ರೇಷ್ಠ ಲೇಖಕ ಎಂದು ಬಿಂಬಿಸಿದರೆ, ಅದನ್ನು ಎಲ್ಲರೂ ನಂಬಬೇಕಿಲ್ಲ. ಅವನ ಕಾದಂಬರಿಗಳು ಉತ್ತಮ ಮನರಂಜನೆ ಕೊಡಬಲ್ಲವು ಎಂಬುದನ್ನು ಅಲ್ಲಗೆಳೆಯುವ ಹಾಗೂ ಇಲ್ಲ.. ಚೇತನ್ ಭಗತ್ ನನ್ನು ನೀವು ಹೋಲಿಸಬೇಕಿದ್ದರೆ, ಅವನ ಶೈಲಿಯಲ್ಲೇ ಬರೆಯುವ ರವಿಂದರ್ ಸಿಂಗ, ಅಮೀಶ್ ತ್ರಿಪಾತಿ, ದುರ್ಜಾಯ್ ದತ್ತ ಇಂತಹ ಲೇಖಕರಿಗೆ ಹೋಲಿಸಿ ಗುಣದೋಷಗಳನ್ನು ಪಟ್ಟಿ ಮಾಡಬಹುದು. ನೀವು ಚೇತನ್ ಭಗತ್ ನ ಜನಪ್ರಿಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೆಚ್ಚಿನದೇನನ್ನೋ ನಿರೀಕ್ಷಿಸುತ್ತಿದ್ದೀರಿ. ಚೇತನ್ ಭಗತ್ ಮನರಂಜನಾ ಲೇಖಕ. ಮಾರ್ಕೆಟಿಂಗ್ ಮನುಷ್ಯ. ಅಷ್ಟೇ. ನಾನು ಗಮನಿಸಿದ ಹಾಗೆ ಅವನೆಂದೂ ಅಮಿತಾವ್ ಘೋಷ್, ಅಲ್ಬರ್ಟ್ ಕಾಮು, ಶಿವರಾಮ ಕಾರಂತ ಇವರುಗಳನ್ನು ಓದಬೇಡಿ ಎಂದು ಅವನು ಹೇಳಿದ್ದು ಕಾಣೆ!
ಅಗಾತಾ ಕ್ರಿಸ್ಟಿ, ಸಿಡ್ನಿ ಷೆಲ್ಡನ್, ಸ್ಟ್ಯಾನ್ಲಿ ಗಾರ್ಡನರ್ ಇನ್ನೂ ನೂರಾರು ಲೇಖಕರ ಪುಸ್ತಕಗಳು ಇಂಗ್ಲಿಶ್ ಮಟ್ಟಿಗೆ ಇಂದಿಗೂ ಚಾಲ್ತಿಯಲ್ಲಿರುವ ಹೆಚ್ಚೆಚ್ಚು ಜನರನ್ನು ರಂಜಿಸುತ್ತಿರುವ ಪುಸ್ತಕಗಳು. ಇದೇ ರೀತಿ ಮುಂಚೋಣಿಯಲ್ಲೇ ಇರಬೇಕಿದ್ದ ಟಿಕೆ ರಾಮರಾವ್, ಎನ್ ನರಸಿಂಹಯ್ಯ, ಜಿಂದೆ ನಂಜುಂಡಸ್ವಾಮಿ , ಸುದರ್ಶನ ದೇಸಾಯಿ ಮುಂತಾದವರನ್ನು ಕನ್ನಡ ಸಾಹಿತ್ಯ ಕಡೆಗಣಿಸಿರುವುದು ದುರಂತ. ಸೀರಿಯಸ್ಸಾಗಿ ಸಾಮಾಜಿಕ – ರಾಜಕೀಯ ಚಿಂತನೆಗಳನ್ನು ಒಳಗೊಂಡ ಕಾದಂಬರಿಗಳೇ ಗ್ರೇಟ್ ಎಂದು ನಾವು ಗ್ರಹಿಸಿದ್ದೇ ಇದಕ್ಕೆ ದೊಡ್ಡ ಕಾರಣ. ಕನ್ನಡದ ಪಲ್ಪ್ ಫಿಕ್ಷನ್ ಇಂದು ಪುನರುಜ್ಜೇವನಗೊಳ್ಳಬೇಕಿದೆ.
ಸಾಹಿತ್ಯಿಕ ಮೌಲ್ಯವನ್ನು ಅಳೆಯುವ ಮಾನದಂಡವೇ ಬದಲಾಗಬೇಕಿದೆ!
agree fully with you Sir.
ಸಾಹಿತ್ಯಿಕ ಮೌಲ್ಯವನ್ನು ಅಳೆಯುವ ಮಾನದಂಡವನೋ ಬದಲಾಗಬೇಕಿದೆ ಆದರೆ ಸಾಹಿತ್ಯವೂ ಒಂದು ಲಲಿತ ಕಲೆ ಯಂಬುವುದನ್ನು ನಾವು ಮರೆಯಬರದಲ್ಲ .
bm basheer ತಮ್ಮ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿರುವ ಕಾಮೆಂಟು ಇದು. ಬ್ರಾಹ್ಮಣೀಯ ಭಾಷೆ ಅಂದರೆ ಏನು ಎಂಬುದು ನನ್ನನ್ನು ಕಾಡುತ್ತಿದೆ. ಈ ಲೋಕದಲ್ಲಿ ಬರೆದದ್ದೆಲ್ಲ ತನಗೆ ಅರ್ಥವಾಗಬೇಕು ಎಂದು ಬಶೀರ್ ಸಾಹೇಬರು ಭಾವಿಸಿದಂತಿದೆ. ಇನ್ನೊಬ್ಬರ ಅಭಿಪ್ರಾಯವನ್ನು ಗೌರವಿಸುವ ಕನಿಷ್ಠ ಸೌಜನ್ಯವೂ ಇಲ್ಲದಂಥ ಅಸಹನೆಯ ವಾತಾವರಣ ಇಲ್ಲಿ ನಿರ್ಮಾಣ ಆದಂತಿದೆ. ಸುಪ್ರೀತ್ ಅವರು ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ. ಅದಕ್ಕೆ ತಮ್ಮ ಪ್ರತಿಕ್ರಿಯೆ ನೀಡುವುದಕ್ಕೆ ಬದಲು ಭಾಷೆಯಲ್ಲಿ ಬ್ರಾಹ್ಮಣ್ಯವನ್ನು ತಂದಿರುವುದು ಖೇದಕರ. ಬಶೀರ್ ದುಃಖಕ್ಕೆ ಕಾರಣವೂ ಸ್ಪಷ್ಟವಾಗಿದೆ. ಭೈರಪ್ಪ, ಶಿವರಾಮ ಕಾರಂತರ ಕಾದಂಬರಿಗಳಿಗೂ ಸಾಯಿಸುತೆ, ಯಂಡಮೂರಿ ವಿರೇಂದ್ರನಾಥರ ಕಾದಂಬರಿಗಳಿಗೂ ಇರುವ ಭಿನ್ನತೆ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ.- ಎಂಬ ಸಾಲು ಅವರನ್ನು ಕಂಗೆಡಿಸಿದೆ. ಇದೆಲ್ಲ ಹೇಗಾಗಿಬಿಟ್ಟಿದೆ ಅಂದರೆ ನಾವು ಏನು ಓದಬೇಕು, ಏನನ್ನು ಮೆಚ್ಚಬೇಕು ಅನ್ನುವುದನ್ನು ಬಶೀರ್ ಥರದವರು ನಿರ್ಧರಿಸುತ್ತಾರೆ. ಅವರು ಅಹುದಹುದು ಅನ್ನುವುದನ್ನು ಮಾತ್ರ ನೀವು ಮೆಚ್ಚಬಹುದು. ಇಂಥ ಒಂದು ಪಂಗಡ ಬೆಳೆಯುತ್ತಿದೆ. ಅಂದಹಾಗೆ ತಲೆಕೆರೆದುಕೊಂಡರೆ ಕೂದಲು ಉದುರುತ್ತದೆಯೇ ಹೊರತು ಯಾವುದೂ ಸ್ಪಷ್ಟವಾಗುವುದಿಲ್ಲ. ತಿಣುಕುತ್ತಿದ್ದಾನೆ ಅನ್ನುವುದು ಬಶೀರ್ ಅಸಹನೆಗೆ ಸಾಕ್ಷಿ. ಅದು ಬ್ರಾಹ್ಮಣ ಭಾಷೆ ಅಲ್ಲ!
ಬಶೀರ್ ಮುಂದುವರಿದು ಬರೆಯುತ್ತಾರೆ. ಇಸ್ಲಾಮಿಕ್ ಆಡಳಿತಗಾರರ ಆಳ್ವಿಕೆಯಲ್ಲಿ ಹಿಂದೂಗಳ ಆತ್ಮಗೌರವ ನಶಿಸಿಹೋದ ‘ಐತಿಹಾಸಿಕ ಸತ್ಯ’ವನ್ನು “ಆವರಣ” ಎಂಬ ಕಾದಂಬರಿಯ ಸ್ವರೂಪದಲ್ಲಿ ಎಸ್.ಎಲ್.ಭೈರಪ್ಪನವರು ಅನ್ವೇಷಿಸಹೊರಟಾಗ ಹುಟ್ಟಿಕೊಂಡ ವಿವಾದ ನಮ್ಮ ನೆನಪಿನಲ್ಲಿ ಹಸಿರಾಗಿದೆ….(…ತಕ್ಷಣ ಈ ಹುಡುಗನ ಮಾನಸಿಕ ಹಿನ್ನೆಲೆ ಅರ್ಥವಾಗಿಬಿಟ್ಟಿತು.)
ಎಷ್ಟು ಸುಲಭವಾಗಿ ಅರ್ಥ ಮಾಡಿಕೊಂಡಿದ್ದಾರೆ ಸಾಹೇಬರು. ಅಂದ ಹಾಗೆ ಮೊನ್ನೆ ಮೊನ್ನೆ ಇದೇ ಬಶೀರ್ ಸಾಹೇಬರು ಬೊಳುವಾರು ಅವರ ಕಾದಂಬರಿಯ ಬಗ್ಗೆ ಭಾಷಣ ಮಾಡಿದ ಫೊಟೋ ಫೇಸ್ ಬುಕ್ಕಲ್ಲಿ ಹಾಕಿದ್ದರು. ಬಶೀರರ ಕಾದಂಬರಿಯ ಬಗ್ಗೆ ಅವರೇ ಯಾಕೆ ಮಾತಾಡಬೇಕು ಅಂತ ನಾವೂ ಕೇಳಬಹುದು. ಅಲ್ಲವೇ. ಅದು ಜಾತೀಯತೆ ಅಲ್ಲ, ಇದು ಮಾತ್ರ ಬ್ರಾಹ್ಮಣೀಯತೆ.
ಕೈ ಪೋ ಚೆ ಸಿನಿಮಾದ ಕುರಿತಂತೆ ಅವಧಿ ವೆಬ್ ಸೈಟ್ ನಲ್ಲಿ ಅಪ್ಪಟ ಬ್ರಾಹ್ಮಣೀಯ ಭಾಷೆಯಲ್ಲಿ ಬರೆದ ಒಂದು ತಮಾಷೆಯ ವಿಮರ್ಶೆ ಓದಿದೆ. ನನಗೆ ತುಂಬಾ ಖುಷಿಕೊಟ್ಟ ಚಿತ್ರದ ಬಗ್ಗೆ ಇದೇನಿದು ಬರೆದಿದ್ದಾರೆ ಎಂದು ಎರಡೆರಡು ಬಾರಿ ತಲೆ ಕೆರೆದುಕೊಂಡರು ಸ್ಪಷ್ಟವಾಗಲಿಲ್ಲ…ಚಿತ್ರದ ಬಗ್ಗೆ ಲೇಖಕ ಹೊಗಳುತ್ತಿದ್ದಾನೋ ಅಲ್ಲ…ಬೇರೇನನ್ನೋ ಹೇಳಲು ತಿಣುಕುತ್ತಿದ್ದಾನೋ ಎಂದು ನೋಡಿದೆ….(ಜೊತೆಗೆ ಹಿರಿಯರಾದ ಜೋಗಿಯವರ ಕಮೆಂಟು ಬೇರೆ-ತುಂಬ ಅರ್ಥಪೂರ್ಣವಾಗ ವಿಶ್ಲೇಷಣೆ. ನನಗೂ ಚಿತ್ರದಲ್ಲೇನೋ ಕೊರತೆಯಿದೆ ಅನ್ನಿಸಿತು. ಸಣ್ಣದಾಗಿ ಅದು ಕಾಡುತ್ತಿತ್ತು. ಅದನ್ನು ಸ್ಪಷ್ಟಗೊಳಿಸಿದ್ದೀರಿ. ಥ್ಯಾಂಕ್ಸ್.-ಎಂಬುದಾಗಿ…)
ಆದರೆ ಅದರಲ್ಲಿರುವ ಕೆಲವು ಸಾಲು ಓದಿದಂತೆ ಚಿತ್ರದ ಕುರಿತಂತೆ ಸ್ಪಷ್ಟವಾಗಿ ಏನನ್ನೂ ಹೇಳದೆ…ಅಥವಾ ಹೇಳಿದಂತೆ ಮಾಡಿ ಚಿತ್ರವನ್ನು ಯಾಕೆ ಟೀಕಿಸಲು ಹೊರಟಿದ್ದಾನೆ ಎನ್ನೋದು ಅರ್ಥವಾಯಿತು. ಕೆಲವು ಸಾಲುಗಳನ್ನೇ ನೋಡಿ….
….ಹೀಗೆ “ಬಾಲಿವುಡ್ ಆನ್ ಪೇಪರ್’ ಶೈಲಿಯ ಕಾದಂಬರಿಗಳನ್ನು ರಚಿಸಿ ಸಾಹಿತ್ಯ ಮಾಧ್ಯಮಕ್ಕೆ ಅಪ್ರಮಾಣಿಕರಾಗಿಸುವ ಚೇತನ್ ಭಗತ್ ರ ಕೃತಿಯನ್ನು ಸಿನೆಮಾಗೆ ಅಳವಡಿಸಿ ‘ಕಾಯ್ ಪೋ ಚೆ’ ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಕಾದಂಬರಿಯಾಗಿ ಸಾಧಾರಣವಾದ ಕೃತಿ ಸಿನೆಮಾ ಮಾಧ್ಯಮದಲ್ಲಿ ಸತ್ವಯುತವಾಗಿ ನಿರ್ಮಿಸಲ್ಪಟ್ಟಿದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಇದು ಒಂದು ಕ್ರೂರ ವ್ಯಂಗ್ಯ!………..
….. ಜನಪ್ರಿಯ ಕಾದಂಬರಿಯೊಂದನ್ನು ಬಲು ಸುಲಭವಾಗಿ ಇದು “ಫಾಸ್ಟ್ ಫುಡ್ ಸಾಹಿತ್ಯ” ಎಂದು ಕರೆಯಲು ಸಾಧ್ಯವಾಗುವ ಮಟ್ಟಿಗೆ ನಮ್ಮ ವಿಮರ್ಶಕರ ಹಾಗೂ ಓದುಗರ ಸಂವೇದನೆಗಳು ತಿದ್ದಲ್ಪಟ್ಟಿವೆ. ಭೈರಪ್ಪ, ಶಿವರಾಮ ಕಾರಂತರ ಕಾದಂಬರಿಗಳಿಗೂ ಸಾಯಿಸುತೆ, ಯಂಡಮೂರಿ ವಿರೇಂದ್ರನಾಥರ ಕಾದಂಬರಿಗಳಿಗೂ ಇರುವ ಭಿನ್ನತೆ ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ….(ಭರಪ್ಪ ಶಿವರಾಮ ಕಾರಂತ ಈ ವಿಮರ್ಶಕರ ತಕ್ಕಡಿಯಲ್ಲಿ ಒಟ್ಟಿಗೆ ಇದ್ದಾರೆ…..ಭೈರಪ್ಪರ ಕಾದಂಬರಿಗಳನ್ನೂ ಅಗ್ಗದ ಜನಪ್ರಿಯ ಕಾದಂಬರಿಗೆ ಈ ಹುಡುಗನ dearst ಅನಂತಮೂರ್ತಿ ಹೋಲಿಸಿದ್ದು ಗೊತ್ತೇ ಇಲ್ಲ…ಭೈರಪ್ಪರ ಕಾದಂಬರಿಯ ನಾಟಕೀಯತೆಗಳಿಗೂ ಚೇತನ್ ಭಗತ ನ ಜನಪ್ರಿಯ ಕಾದಂಬರಿಗಳಲ್ಲಿರುವ ನಾಟಕೀಯತೆಗಳಿಗೂ ವ್ಯತ್ಯಾಸವೇ ಇಲ್ಲ…)
ವಿಮರ್ಶೆ ಮುಂದುವರಿಯುತ್ತದೆ…ನೋಡಿ…
….. ಪಾತ್ರಗಳ ಸ್ವಭಾವವನ್ನು ಚಿತ್ರಿಸುವುದರಲ್ಲಿ ತೋರಿರುವ ಬುದ್ಧಿವಂತಿಕೆಯನ್ನು ನಿರ್ದೇಶಕ ಅವುಗಳ ಕ್ರಿಯೆಗಳ ಪ್ರೇರಣೆಯನ್ನು ಗುರುತಿಸುವಲ್ಲಿ ತೋರಿದ ಹಾಗೆ ಕಾಣುವುದಿಲ್ಲ. ಹೀಗಾಗಿ ಅಲಿ ಒಬ್ಬ ಪ್ರತಿಭಾವಂತ ಕ್ರಿಕೆಟ್ ಆಟಗಾರ, ಆತನನ್ನು ಅಂತರಾಷ್ಟ್ರೀಯ ಪ್ರತಿಭೆಯಾಗಿ ಬೆಳೇಸಬೇಕು ಎನ್ನುವ ಮಹತ್ವಾಕಾಂಕ್ಷೆಯಲ್ಲಿ ಮುಸ್ಲಿಂ ಕುಟುಂಬವೊಂದಕ್ಕೆ ಅಕಾರಣವಾಗಿ ನೆರವಾಗುವ ಇಶಾನ್ ಪಾತ್ರವನ್ನು ಹಿಂದುತ್ವ ಮೂಲಭೂತವಾದಿಗಳ ಎದುರಾಗಿ ಚಿತ್ರಿಸಿರುವುದು ಅರ್ಥಹೀನವಾಗಿದೆ. ಚಿತ್ರಕ್ಕೆ ಸ್ಪಷ್ಟವಾದ ಕೇಂದ್ರವಿಲ್ಲ. ……
(ಹೀಗೆಲ್ಲ ಅರ್ಥವಾಗದ ಭಾಷೆಯಲ್ಲಿ ಗೊಂದಲಗೊಳಿಸಿ ಒಂದು ಒಳ್ಳೆ ಸಿನಿಮವನ್ನು ನೀವಾಲಿಸಲು ಹೊರಟ ಹುಡುಗನ ಬೇರೆ ಬರಹ ಹೇಗಿದೆ ಎಂದು ನೋಡಲು ಆತನ ಬ್ಲಾಗಿಗೆ ಹೋದೆ….)
ಅಲ್ಲಿ….
“ಝಿರೋ ಡಾರ್ಕ್ ಥರ್ಟಿ’ ಎಂಬ ಚಿತ್ರದ ಬಗ್ಗೆ ಈತ ಬರೆಯುತ್ತಾ ಹೋಗುತ್ತಾನೆ….
………… ಇಸ್ಲಾಮಿಕ್ ಆಡಳಿತಗಾರರ ಆಳ್ವಿಕೆಯಲ್ಲಿ ಹಿಂದೂಗಳ ಆತ್ಮಗೌರವ ನಶಿಸಿಹೋದ ‘ಐತಿಹಾಸಿಕ ಸತ್ಯ’ವನ್ನು “ಆವರಣ” ಎಂಬ ಕಾದಂಬರಿಯ ಸ್ವರೂಪದಲ್ಲಿ ಎಸ್.ಎಲ್.ಭೈರಪ್ಪನವರು ಅನ್ವೇಷಿಸಹೊರಟಾಗ ಹುಟ್ಟಿಕೊಂಡ ವಿವಾದ ನಮ್ಮ ನೆನಪಿನಲ್ಲಿ ಹಸಿರಾಗಿದೆ….(…ತಕ್ಷಣ ಈ ಹುಡುಗನ ಮಾನಸಿಕ ಹಿನ್ನೆಲೆ ಅರ್ಥವಾಗಿಬಿಟ್ಟಿತು.)
ಆದರೂ ಸಾಹಿತ್ಯದಲ್ಲಿ ಬ್ರಾಹ್ಮಣ ಭಾಷೆ ಒಂದಿದೆ ಮತ್ತು ಅದು ಹೇಗಿರುತ್ತದೆ ಎನ್ನುದಕ್ಕೆ ಕೈ ಪೋ ಛೆ ಕುರಿತು ಈತ ಅವಧಿಯಲ್ಲಿ ಬರೆದ ವಿಮರ್ಶೆ ನೀವು ಓದಲೇ ಬೇಕು.
ಯಾವುದೋ ಗಂಭೀರ ಬರಹ ಎಂದು ಬಾವಿಗೆ ಬೀಳಬೇಡಿ ಎಂದು ಈ ಸ್ಟೇಟಸ್ ಹಾಕಿದ್ದೇನೆ…
ಕೊನೆಯದಾಗಿ…………
ಮನುಷ್ಯ ಮನುಷ್ಯನನ್ನು ಅನುಮಾನದಿಂದ ಕಣ್ಣಲ್ಲೇ ಸುಟ್ಟು ಕೊಲ್ಲುವ ಈ ದಿನಗಳಲ್ಲಿ ಮಾನವೀಯ ಎಳೆಯನ್ನಿಟ್ಟು ಮಾಡಿದ ಕೈ ಪೋ ಚೆ ಖಂಡಿತ ನೋಡಿ. ಯಾಕೆಂದರೆ ಈ ಚಿತ್ರದ ಮೂರು ಮುಖ್ಯ ಪಾತ್ರಗಳಲ್ಲಿ ಒಂದರಲ್ಲಾದರೂ ನಾವಿರುತ್ತೇವೆ.
ಗುರು,
ಇದು ಕಾಯ್ ಪೋ ಚೆ ಸಿನೆಮಾದ ವಿಮರ್ಶೆ. ಚೇತನ್ ಭಗತ್ ಕಾದಂಬರಿಗಳ ಸಾಹಿತ್ಯಿಕ ಮೌಲ್ಯ ಕುರಿತಾದ ಬರಹವಲ್ಲ. ನಾನೆಲ್ಲೂ ಚೇತನ್ ಭಗತ್ ಆಗಲಿ, ಸಾಯಿ ಸುತೆ, ಯಂಡಮೂರಿಯರು ಓದಲು ಅನರ್ಹವಾದವರು ಎಂದು ಬರೆದಿಲ್ಲ. ಗಮನಿಸಿ ನೋಡಿ ನಾನು ಈ ಎರಡು ಬಗೆಯ ಸಾಹಿತ್ಯ ಸೃಷ್ಟಿಗಳಲ್ಲಿನ ಭಿನ್ನತೆ ಗುರುತಿಸುವುದಕ್ಕೆ ಸಾಮಾನ್ಯ ಓದುಗಾರದಿಯಾಗಿ ನಮ್ಮ ವಿಮರ್ಶಕರಿಗೆ ಸಾಧ್ಯವಾಗುವ ಮಟ್ಟಿಗೆ ನಮ್ಮ ಸಾಹಿತ್ಯಿಕ ಸಂವೇದನೆಗಳು ರೂಪುಗೊಂಡಿವೆ. ಆದರೆ ಇದೇ ಬಗೆಯ ಗ್ರಹಿಕೆ ನಮಗೆ ಸಿನೆಮಾಗಳಿಂದ ದೊರೆಯುವಷ್ಟು ನಮ್ಮ ದೃಶ್ಯ ಸಂವೇದನೆ ರೂಪು ಗೊಂಡಿಲ್ಲ.
ಕಾಯ್ ಪೋ ಚೆ ತನ್ನ ಮಾಧ್ಯಮಕ್ಕೆ ನಿಷ್ಟವಾಗಿರುವ ಚಿತ್ರ. ಭಗತ್ ರ ಕಾದಂಬರಿ ತನ್ನ ಮಾಧ್ಯಮಕ್ಕೆ ನಿಷ್ಟವಾಗಿಲ್ಲ ಎನ್ನುವುದಷ್ಟೇ ನನ್ನ ಬರಹದ ಆಸಕ್ತಿಯ ಕ್ಷೇತ್ರ.
kai po che, is a reasonably good movie from a mass-writer.
let us forget the writer when we see a movie. and not forget the writer when we read. here, Supreeth, according to me, is only trying to put forth his point of view of the movie ‘kai po che’. not either of the book or of the writer of the book!