ಕಾಮರೂಪದ ಪ್ರಭಾಕರ…

ರಹಮತ್‌ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ ಆದಿಮ'ಕ್ಕೆ; ಇನ್ನೊಂದು-ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. ೫೦ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು. `ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನೆಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರ ಮುಖದ ಮೇಲೆ ಜ್ಞಾನೋದಯವಾದ ಸಿದ್ಧನಂತೆ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ ೭೫ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲ್ಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತಾರಾಷ್ಟ್ರೀಯ -ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ. ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ ೫೦ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.

ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

‍ಲೇಖಕರು Admin

December 31, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: