ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಮನ ಬಿಲ್ಲ ಹಿಡಿದ ಬಿಳಿ ಚಾದರ

ಹೆಚ್ ಆರ್ ಸುಜಾತಾ

 

ದೂರುತ್ತಾ,

ದೂರ-ದೂರ

ಅಂತರ ಕಾದು

ದೂರಾದೆ, ಬಾನಾದೆ

ಭೂಮಿ ತೂಕ ಹೊತ್ತು

ಬಿಡದೆ ಹರಿದೆ

ತೂಕ ತಪ್ಪದೆ ಬಾನಗಲಕೂ

ಕಾಯವ ಹರವಿದೆ

 

ಹಠ ಹಿಡಿದ ನದಿಯಂತೆ

ಒಳಗಿನ ಝಲಝಲ ಕಣ್ಣ

ಎಚ್ಚರಿಸಿ, ತೆರೆಸಿ

ಹನಿಹನಿ ಕಲೆಹಾಕಿ

ಸರಸರನೆ ಅರಸಿ

ನಿನ್ನುದ್ದಕೂ ಕೈಚಾಚಿ ನಡೆದೆ

 

ಹೂವಿನ ಚಿತ್ರ ಬಿಡಿಸಿ

ಬಣ್ಣ ತುಂಬಿದಂತೆ;

ನೆಲನೆಲವನೆಲ್ಲ ಸಿಂಗರಿಸಿ.

 

ಇದು ಹುಲ್ಲು, ಅದು ಮನೆ,

ಇಲ್ಲಿ ಮರ, ಅಗೋ ನೆರಳು,

ಓಹೋ! ಬೆಟ್ಟ,

ಇಕಾ ಝರಿ!

ದುಮ್ಮಿಡುವ ಇಣಕಲುಗುಂಟ

ಸಾಗಿ ಮಾಗಿ

ಬಣ್ಣ ಕಲೆಸುವ ನೀರಾದೆ

 

ಮೋಡ ಹರಸಿದೆ ನೀ ಬಾನಲ್ಲಿ

ಹಸಿರ ಹರಿಸಿದೆ ನಾ ಒಡಲಲ್ಲಿ

ಕೊನೆಗೆ ನಿಂತು ಕಡಲಾದೆ

 

ಕೊನೆಯಂಚಿನಲೇ,

ತೋಳ್ ತೆರೆದು ಬಾಗಿ ನಿಂತು,

ಬಾರೆಂದು ಕರೆದ ನಿನ್ನ,

ಕೂಡಿಕೊಂಡೆ.

 

ಕಿಲಕಿಲನೆ ನಕ್ಕರು

ಓಡಿ ಬಂದು ನಿಂತು,

ಮಿಲನ ಕಂಡು ತಾರೆಯರು

 

ಕಚಗುಳಿಯಿಟ್ಟು ನಿನಗೆ

ಹಾರಿಹೋದ ಹಕ್ಕಿಸಾಲು

ಬಂದಿಳಿದು ತೇಲಿದವು ಇಲ್ಲಿ,

ಸುಮ್ಮಾನದಲಿ.

 

ಬೆಳಗಾನ ವಿರಹದಲ್ಲಿ ಉರಿದಿದ್ದ

ಸೂರ್ಯ,

ಸಂಜೆ ಬಣ್ಣಬಣ್ಣದ

ಹೂವಿನ ಚೆಂಡಾಗಿ

ನೀರದ್ದಿ, ಅದ್ದಿ. ಓಕುಳಿಯಾಡಿ

ಅಟ್ಟಾಡಿಸಿ, ನನ್ನ ತಟ್ಟಿಗೆ ಕೆಡವಿದ.

ಮೈಸೋತ ಬಣ್ಣಗಳು

ಮೈಮರೆತು ಒಂದಾಗಿ

ಬಿಳಿ ಚಾದರ ಹೊದ್ದು

ಬೆಳದಿಂಗಳ ಕನಸ ಕಂಡವು

ತುಂಬು ನಿದ್ದೆಯಲಿ

 

ಚಂದಿರನ ತಂದು

ಮುತ್ತ ಹೊನಲಲ್ಲೇ…

ಮುಳುಗಿಸಿ ಪದಕ

ಮಾಡಿ ಹಾಕಿದೆ ಎದೆಗೆ.

 

ಉಬ್ಬುಬ್ಬಿ ತಬ್ಬಿದರು ನಲುಗಿಸದೆ

ಕಣ್ಣೊಳಗೆ ಅಡಗಿಸಿ,

ದೇವರೆದೆಯ ಪದಕ! ನೀ

ತಣ್ಣಗೆ ನಕ್ಕೆ

ನನ್ನ ಕಣ್ಣಲ್ಲಿ

 

ತೆರೆತೆರೆಯಾಗಿ

ಅಲೆ ಅಲೆ ತೇಲಿತು

ಒಡಲಲ್ಲಿ

 

ದೋಣಿ ಸಾಗಿತು

ಗಾಳಿ ಹಾಯಿತು

ದೂರದಲ್ಲಿ ಹಾಡು ಮಾಗಿತು

 

ಲೇಲೇಲೇ ಲೆಯ್ಯಾ

ಲೇ ಲೇ ಲೆಯ್ಯಾ

ಹೊಯ್ಯಾರೆ ಹೊಯ್ಯಾ

ಹೊಯ್ಯಾ, ಹೊಯ್ಯಾ, ಹೋಯ್ಯ

 

ದೇವ ನೀನಯ್ಯಾ

ಮೀನ ಕಣ್ಣಿಗೆ ಗಾಳ ಹಾಕುವ

ಹಸಿದ ಒಡಲಿಗೆ ಊಟ ಉಣಿಸುವ

ದೇವ ನೀನಯ್ಯ.

 

‍ಲೇಖಕರು avadhi

27 October, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading