ಇದೇನು, ಬಾವಿಯ ಚಿತ್ರವೇಕೆ ಎನ್ನುವಿರಾ?

 

 

 

 

 

ಜ್ಯೋತಿ ಎ 

 

 

ಇದೇನು, ಬಾವಿಯ ಚಿತ್ರವೇಕೆ ಎನ್ನುವಿರಾ? ಹೌದು, ಇದಕ್ಕೊಂದು ಐತಿಹ್ಯವಿದೆ, ಕೋಮುಸೌಹಾರ್ದತೆಯ ಪರಂಪರೆಯನ್ನು ಹೊತ್ತು ನಿಂತಿದೆ…

ಬಾವಿಗೂ ಕೋಮುಸೌಹಾರ್ದತೆಗೂ… ಎತ್ತಿಂದೆತ್ತಣ ಸಂಬಂಧ ಎಂದು ಹುಬ್ಬೇರಿಸಬೇಡಿ! ಕೋಮುಗಳ ನಡುವೆ ವಿಷಬಿತ್ತಿ ಜನರನ್ನು ಬಾವಿಗೆ ತಳ್ಳುವವರು ಬೇರೆ. ನಾನು ಅವರ ಬಗ್ಗೆ ಮಾತನಾಡುತ್ತಿಲ್ಲ. ಇದು ಜೀವಕ್ಕೆ ಜಲ ಒದಗಿಸಿದವರ ಕಥೆ!

ಇದು ನಮ್ಮ ಮನೆಯ ಬಾವಿ. ಟೈಲ್‌ಗಳಿಂದ ಅಲಂಕೃತವಾದ ನೆಲಬಾವಿ. ಇದನ್ನು ಸುಮಾರು ಎರಡು-ಮೂರು ದಶಕಗಳ ಕೆಳಗೆ ತೋಡಿಸಿದ್ದು. ಆಗ ನಮ್ಮ ಮನೆಯ ಪ್ರದೇಶ ಇನ್ನೂ ಅಭಿವೃದ್ಧಿಯ ಹಾದಿಯಲ್ಲಿತ್ತು. ಈ ಮಟ್ಟದಲ್ಲಿ ಬೆಳೆದಿರಲಿಲ್ಲ. ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಿತ್ತು. ಬಿಂದಿಗೆಗಳ ಉಪಯೋಗವೂ ಇತ್ತು ಆಗ! ಮನೆತುಂಬಾ ಜನ, ಪಕ್ಕದ ಮನೆಯಲ್ಲಿದ್ದ ಬಾವಿಯಿಂದ ನಮ್ಮ ಮನೆಯ ನೀರಿನ ತೊಟ್ಟಿಯವರೆಗೂ ಸಾಲುನಿಂತು ನೀರು ತುಂಬಿಸುತ್ತಿದ್ದ ಕಾಲ. (ನಮಗೆ ಸೇರಿದ ಬಾವಿ ಎಂದು ಕೀಲಿ ಹಾಕಿಟ್ಟು ಕೊಳ್ಳದ ದಿನಗಳವು!)

ಒಬ್ಬರು ದೂರದ ಬಾವಿಯಿಂದ ನೀರೆಳೆದುಕೊಟ್ಟರೆ ಮೂರ್ನಾಲ್ಕು ಜನ ನೀರನ್ನು ಮನೆಯೊಳಗಿನ ತೊಟ್ಟಿಗಳಿಗೆ ಸೇರಿಸುವ ತನಕ ಕೆಲಸ ಮಾಡಿ ಹೈರಾಣಾಗುತ್ತಿದ್ದರು. ನಮ್ಮ ಚಿಕ್ಕಪ್ಪಂದಿರು, ಚಿಕ್ಕಮ್ಮ, ಸೋದರತ್ತೆಯರು, ನಮ್ಮ ಮನೆಯಲ್ಲಿದ್ದ ನಮ್ಮ ಕುಟುಂಬದವರೇ ಆಗಿಹೋಗಿದ್ದ ಚಿಕ್ಕಪ್ಪನವರ ಸ್ನೇಹಿತ, ಅಜ್ಜಿ, ಹೀಗೆ ಎಲ್ಲರೂ ಈ ಕಾಯಕದಲ್ಲಿ ತೊಡಗಿಸಿಕೊಂಡಾಗಲೇ ನಮಗೆ ಸ್ನಾನ, ಇತ್ಯಾದಿಗಳಿಗೆ ಕಾಯಕಲ್ಪ ಸಿಗುತ್ತಿದ್ದುದು. ದೊಡ್ಡವರ ನೀರು ತುಂಬುವ ಕೆಲಸ, ಮಕ್ಕಳಾದ ನಮಗೆ ಆಟವೆನಿಸಿದರೆ ನೌಕರಿ ಮಾಡುತ್ತಿದ್ದ ಅವರೆಲ್ಲರಿಗೂ ಅದು ಧರ್ಮಸಂಕಟವೇ ಆಗಿತ್ತು. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ ಎಂಬಂತಾಗಿತ್ತು ನೀರು ತುಂಬುವ ಪ್ರಕ್ರಿಯೆ.

ನಂತರದಲ್ಲಿ ಸಹಜವಾಗಿಯೇ ಎಲ್ಲರೂ ತಮ್ಮತಮ್ಮ ಬದುಕಿನ ದಾರಿ ಹಿಡಿದು ಹೊರಟರು. ನಮ್ಮ ಮನೆಯ ವಿಶಾಲವಾದ ಹಿತ್ತಲಲ್ಲಿ ವಿಧವಿಧವಾದ ಹಣ್ಣು ತರಕಾರಿಗಳನ್ನು ಬೆಳೆಯುವಾಗ ಒಂದು ಬಾವಿಯನ್ನು ತೋಡಿಸುವ ಅಗತ್ಯ ಏರ್ಪಟ್ಟಿತು. ಇದರಲ್ಲಿ ಪರಿಣತರಾದವರಿಗೆ ನಮ್ಮ ತಂದೆ ವಿಷಯ ಮುಟ್ಟಿಸಿದರು.

ಒಂದು ದಿನ ಇಬ್ಬರು ಪುರುಷರು ಬಂದು ಎಲ್ಲಿ ತ್ವರಿತವಾಗಿ ಮತ್ತು ಹೆಚ್ಚು ಜಲ ದೊರೆಯುವುದೆಂದು ತಿಳಿಯಲು ತಮ್ಮದೇ ವಿಧಾನ ಬಳಸಿ (ನಾವುಗಳು ಅದನ್ನು ವೈಜ್ಞಾನಿಕ ಎಂದು ಒಪ್ಪದಿದ್ದರೂ..) ಪುಷ್ಕಳವಾಗಿ ಅಂತರ್ಜಲ ಹೊಮ್ಮುತ್ತಿದ್ದ ನಮ್ಮ ಹಿತ್ತಲ ಒಂದು ಮೂಲೆಯನ್ನು ಆಯ್ದುಕೊಂಡರು. ಕೆಲವೇ ಗಂಟೆಗಳಲ್ಲಿ ಗುದ್ದಲ್ಲಿ, ಹಾರೆ, ಪಿಕಾಸಿಗಳಂತಹ ಹತ್ಯಾರಗಳೊಡನೆ ಬೆವರು ಸುರಿಸುತ್ತಾ ಫಲವತ್ತಾದ ಭೂಮಿಯಿಂದ ಜೀವಜಲ ಕಾಣಿಸಿದರು. ಎಂಥಾ ಸಂತೋಷ.. ಕೆಲವೇ ಅಡಿಗಳಿಗೆ ನೀರು ದೊರಕಿದ್ದು… ಶುದ್ಧಜಲ ಜೀವಜಲ ಕಲ್ಮಶವಿಲ್ಲದ ಮನಸ್ಸಿನ ಮುಗ್ಧ ಶ್ರಮಿಕರ ಕೈಗಳಿಂದ ಉಕ್ಕಿ ಹರಿದಿತ್ತು ನಮ್ಮ ತೋಟಕ್ಕೆ!

ಒಟ್ಟಾಗಿದ್ದ ದುಡಿಮೆಗಿಳಿದಿದ್ದ ಆ ಇಬ್ಬರು ಕಾಯಕಯೋಗಿಗಳ ಹೆಸರೇನು ಗೊತ್ತೇ!

ರಾಮ – ರಹೀಮ

(ನನಗೆ ಹೆಸರುಗಳು ತಿಳಿದು ಕೆಲವರ್ಷಗಳಷ್ಟೇ ಆಗಿದ್ದು!)

ರಾಮ-ರಹೀಮರು ತೋಡಿದ ಬಾವಿಯ ನೀರು ಸಾಕಷ್ಟು ಬೆಳೆಗಳನ್ನು ನೀಡಿ ನಮ್ಮ ಸಂತಸಕ್ಕೆ ಕಾರಣವಾಯಿತು. ಅವರ ಸೌಹಾರ್ದ ಬದುಕಿನಷ್ಟೇ ಜೀವಜಲವೂ ಸಿಹಿಯಾಗಿದೆ ಎಂಬುದನ್ನು ಸ್ಮರಿಸಿಕೊಳ್ಳಬೇಕು. ನಮ್ಮ ಮನೆ ಕೆಡವಿ ಆಧುನಿಕ ವಟಾರವಾಗಬೇಕಾದ (ಅಪಾರ್ಟ್ಮೆಂಟ್) ಸಂದರ್ಭದಲ್ಲಿ ಬೋರ್‌ವೆಲ್ ಇರುವುದರಿಂದ ನೆಲಬಾವಿಯನ್ನು ಮುಚ್ಚಬೇಕೆಂಬ ಪ್ರಸ್ತಾಪ ಬಂದಿತು.

ಆದರೆ ನಮ್ಮ ತಂದೆ ಈ ಪ್ರಸ್ತಾಪವನ್ನು ಸಾರಾಸಗಟಾಗಿ ತಳ್ಳಿಹಾಕಿದಾಗಲೇ ಈ ರಾಮ-ರಹೀಮರ ಸಂಗತಿ ಬೆಳಕಿಗೆ ಬಂದಿದ್ದು. ಅವರ ನೆನಪಿನಲ್ಲಿ, ಕೋಮುಸೌಹಾರ್ದತೆಯ ಸಂಕೇತವಾಗಿ ಈ ಬಾವಿಯನ್ನು ಉಳಿಸಿಕೊಂಡು, ಅದರ ಸೌಂದರ್ಯವನ್ನು ತೀಡಲಾಯಿತು. ಅಷ್ಟೇ ಅಲ್ಲ, ಮಳೆ ನೀರಿನ ಕೊಯ್ಲು ಮೂಲಕ ಇದರ ಮರುಪೂರಣದ ಕಾರ್ಯವನ್ನು ಕೈಗೊಳ್ಳಲಾಯಿತು. ರಾಮ-ರಹೀಮರು ಒದಗಿಸಿಕೊಟ್ಟ ಜೀವಜಲ ಎಂದೂ ಬತ್ತಿಲ್ಲ,‌ ಬರ ಕಂಡಿಲ್ಲ.

ಕೋಮುಸೌಹಾರ್ದತೆ ಮತ್ತು ಪರಿಸರ ರಕ್ಷಣೆ ಎರಡೂ ಒಂದಕ್ಕೊಂದು ಸಂಬಂಧಿಸಿದ್ದೇ ಆಗಿವೆ!

ರಾಮ – ರಹೀಮರ ಐಕ್ಯತೆ ಚಿರಾಯುವಾಗಲಿ!

ದುಡಿಯುವ ಜನರ ಸಾಮರಸ್ಯದ ಬದುಕಿಗೆ ಕೊಳ್ಳಿ ಇಡುವವರು ಸತ್ಯವನರಿಯಲಿ…

‍ಲೇಖಕರು avadhi

October 27, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: