ಕಾಮಕ್ಕೆ ಕನ್ನಡಿ: ಕಂಚುಗನ್ನಡಿ

ಬಿ.ಕೆ. ಮೀನಾಕ್ಷಿ


ಶ್ರೀಮತಿ ಉಷಾನರಸಿಂಹನ್ ಈಗಾಗಲೇ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೆಲಸ ಮಾಡಿರುವವರು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಇವರ ಕಾದಂಬರಿಗಳು ಧಾರಾವಾಹಿಗಳಾಗಿ ಹರಿದು ಬಂದಿದ್ದು, ಸಣ್ಣಕತೆಗಳು, ಕವನಗಳು, ಪ್ರಬಂಧಗಳು ಪ್ರಕಟಗೊಳ್ಳುತ್ತಲೇ ಇರುತ್ತವೆ. ಬರೆದ ಎಲ್ಲ ಕೃತಿಗಳು ಒಂದಲ್ಲಾ ಒಂದು ಪ್ರಶಸ್ತಿಗಳನ್ನು ಪಡೆದುಕೊಂಡಿರುವುದು ಇವರ ಸಾಹಿತ್ಯ ಕೃಷಿಯ ಹೆಮ್ಮೆಯಾಗಿದೆ.

ಈಗಾಗಲೇ ನಾಲ್ಕಾರು ನಾಟಕಗಳ ಕರ್ತೃವಾದ ಲೇಖಕಿ ಉಷಾರವರು ಇತ್ತೀಚೆಗಷ್ಟೇ ‘ಕಂಚುಗನ್ನಡಿ’ ಎಂಬ ನಾಟಕವನ್ನು ಬರೆದು ಪ್ರಕಟ ಮಾಡಿದ್ದಾರೆ.

ಈ ನಾಟಕದ ಹೆಗ್ಗಳಿಕೆಯೆಂದರೆ ಪ್ರಕಟಗೊಳ್ಳುವ ಮೊದಲೇ ಮೈಸೂರು ಅಸೋಸಿಯೇಷನ್, ಮುಂಬೈ ಅವರ ‘ನೇಸರು’ ಜಾಗತಿಕ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡದ್ದಲ್ಲದೆ, ನವರಾತ್ರಿ ರಂಗೋತ್ಸವ ಸಮಯದಲ್ಲಿ ರಂಗರೂಪಕ್ಕೆ ಬಂದು, ಮೈಸೂರಿನ ರಂಗಾಯಣ, ಅಲ್ಲದೆ ಮುಂಬೈಯಲ್ಲೂ ಪ್ರದರ್ಶನಗೊಂಡು, ಶಿವಮೊಗ್ಗೆಯ ಕರ್ನಾಟಕ ಸಂಘದಿಂದಲೂ ಪ್ರಶಸ್ತಿ ಪುರಸ್ಕೃತವಾಗಿದ್ದು ನಾಟಕಕ್ಕೊಂದು ಕಳಶಪ್ರಾಯದ ಸಂಗತಿ! ಇಂತಹ ಹಿರಿಮೆಗಳನ್ನೆಲ್ಲ ಹೊತ್ತು ಈಗ ನಾಟಕ ಓದುಗರ ಕೈಸೇರಲು ಸಿದ್ಧಗೊಂಡಿದೆ.

‘ಕಂಚುಗನ್ನಡಿ’ಯು ಗೌತಮ ಮಹರ್ಷಿಗಳ ಪತ್ನಿ ಅಹಲ್ಯೆಯ ಜೀವನಕ್ಕೆ, ಹೊಸ ನೋಟವನ್ನು, ಹೊಸ ಹೊಳಹನ್ನು, ಹೊಸ ಆಯಾಮವನ್ನು ಪ್ರಯೋಗಾತ್ಮಕವಾಗಿ ಪ್ರಚುರಪಡಿಸಿದೆ. ಹೀಗೂ ಒಂದು ಸಾಧ್ಯತೆ ಇರಬಹುದೆಂಬ ಕಲ್ಪನೆಯನ್ನು ಬರೆಸಿಕೊಳ್ಳುತ್ತಾ ಹೋದಂತೆ ಅಹಲ್ಯೆ ಬಚ್ಚಿಟ್ಟುಕೊಂಡ ಭಾವಗಳ ಹೆಣ್ಣುಮಕ್ಕಳ ಪ್ರತೀಕವಾಗಿ ನಿಲ್ಲುತ್ತಾಳೆ.

ಗಂಡು ಹೆಣ್ಣುಗಳ ಆತ್ಮಗಳಲ್ಲಿ, ಭೇದವಿಲ್ಲದೆ ಮೂಡಬಹುದಾದ ಆಸೆಗಳು, ಆಂತರ್ಯದ ಕಾಮನೆಗಳು ಹೊರಹೊಮ್ಮಿದಾಗ, ತನ್ಮೂಲಕ ನಡೆಯಬಹುದಾದ ತಪ್ಪುಗಳಿಗೆ, ಅಪಚಾರಗಳಿಗೆ ಗಂಡು ಕ್ಷಮೆಗೆ ಅರ್ಹನಾಗಿ, ಹೆಣ್ಣು ಶಿಕ್ಷೆಗೆ ಒಳಪಡುವುದು ಯಾವ ನ್ಯಾಯವೆಂಬುದೇ ಇಲ್ಲಿಯ ಮುಖ್ಯ ಧ್ವನಿಯಾಗಿದೆ.

ಭಾರತೀಯ ಸಮಾಜದಲ್ಲಿ `ಗಂಡು ಬಯಲ ಶೃಂಗಾರ’ ಎಂದು ಒಪ್ಪಿ ಆದರಿಸುವ ನಾವು, ಹೆಣ್ಣಿನ ಒಂದು ತಪ್ಪು ಹೆಜ್ಜೆ, ನೋಟ, ನಡೆ-ನುಡಿ, ನಿರ್ಧಾರ…. ಯಾವುದನ್ನು ಒಪ್ಪಲೂ ಸಿದ್ಧರಿಲ್ಲ. ಇಂತಹ ಸಮಾಜದಲ್ಲಿ ಜನಿಸಿದ ಅಹಲ್ಯೆಯು, ನಮ್ಮ ದ್ವಂದ್ವ ನೀತಿಯ ದೆಸೆಯಿಂದಾಗಿ, ಮತ್ತೆ ಮತ್ತೆ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತಾಳೆ.

ಇಂದ್ರನನ್ನು ` ರಸಿಕ’ ಎಂದು ಹುಸಿಕೋಪದಿಂದ, ತುಟಿಕೊಂಕಿಸಿ ನಕ್ಕು ಅವನನ್ನು ಒಪ್ಪಿಕೊಳ್ಳುವ ನಾವು, ಅಹಲ್ಯೆಯನ್ನು ಕಲ್ಲು ಮನಸಿನಿಂದ ಕಲ್ಲಾಗಿ ಮಾಡಿ, ಅದೇ ಸರಿಯೆಂದು ಸಮರ್ಥಿಸಿಕೊಂಡವರು. ತಾರೆಗಾದ ಅನ್ಯಾಯವನ್ನು ಮರೆತು, ಚಂದ್ರನನ್ನು ರಮಿಸುವವರು, ಪೂಜಿಸುವವರು ನಾವು! ಇಂಥಹ ದ್ವಂದ್ವಗಳನ್ನು ನಾವೇ ಖಂಡಿಸಿಕೊಳ್ಳುವ ಆತ್ಮಾಭಿಮಾನಿಗಳೂ ನಾವೇ! ಮತ್ತೆ ಉಕ್ಕಡದ ಅಹಲ್ಯೆಗೆ ಭಕ್ತಿಯಿಂದ ಆರತಿ ಎತ್ತುವವರೂ ನಾವೇ!

ಇಂದ್ರನು ತನ್ನ ಅಮರಾವತಿಯಿಂದ ಅಹಲ್ಯೆಗಾಗಿ ಕೆಲವು ಉಡುಗೊರೆ ನೀಡುವಲ್ಲಿ ಕನ್ನಡಿಯ ಕೊಡುಗೆಯು ಮುಂದಿನ ಎಲ್ಲ ಅನಾಹುತಗಳ ಹೇತುವಾಗುತ್ತದೆ. ಮನುಷ್ಯನ ಸ್ವಪ್ರೇಮ, ತನ್ನ ತಾನರಿಯುವಲ್ಲಿ ತಪ್ಪು ಹೆಜ್ಜೆ ಹಾಕಿ ಎಡವುವ ಮಾರ್ಗವನ್ನು ಕನ್ನಡಿ ಸೃಷ್ಟಿಮಾಡಿಕೊಡುತ್ತದೆ.

ಅವನ ಕೊಡುಗೆ ಉದ್ದೇಶಪೂರ್ವಕವೇ ಆದರೂ ಅಹಲ್ಯೆಯ ನಡೆ ಅದಕ್ಕೆ ಪೂರಕವಾಗಿ ಒದಗಿಬರುವುದು ವಿಪರ್ಯಾಸ. ತನ್ನ ತಾನರಿವಲ್ಲಿ ಒಡಮೂಡಿದ ಭಾವಗಳು ಮುಂದಿನ ಎಲ್ಲ ಘಟನೆಗಳನ್ನು ಆಗುಮಾಡುವಲ್ಲಿ ಸಫಲವಾಗುತ್ತವೆ. ತನ್ನನ್ನು ತಾನು ಹೊಸದಾಗಿ ಪರಿಭಾವಿಸಿಕೊಂಡು ತೆರೆದುಕೊಳ್ಳುತ್ತಾ ಹೋಗುವ ಅಹಲ್ಯೆ, ಇಂದ್ರನ ಪ್ರಣಯಿನಿಯಾಗಿ ಮಾರ್ಪಡುತ್ತಾಳೆ. ಗೌತಮರೊಂದಿಗಿನ ನೀರಸ ಬದುಕಿಗೆ ಹೇಸಿದ ಅಹಲ್ಯೆ, ರಸಿಕತನದ ಮಾತು, ಸುಪ್ತಕಾಮನೆಗಳ ತಿಕ್ಕಾಟದಲ್ಲಿ ಜಾರುವ ಒಂದು ಹೆಜ್ಜೆ, ಅವಳ ಜೀವನವೇ ದುರಂತದೆಡೆಗೆ ಸಾಗುವಂತೆ ಮಾಡುತ್ತದೆ.

ಜಾಜಿ ಹೂವಿನ ಮಧುರ ಕಂಪಿನ ವರ್ಣನೆ ಮಾಡುವ ಅಹಲ್ಯೆಗೆ ಅವಳ ಗೆಳತಿ ಮಾಲೆ ಮಾಡಿ ಮುಡಿದುಕೋ , ಇಲ್ಲವೆ ಕೊರಳಿಗಾದರೂ ಹಾಕಿಕೊ ಎಂದು ಸಲಹೆ ಕೊಡುತ್ತಾಳೆ. ಹೂವೇನಿದ್ದರೂ ದೇವರಮೂರ್ತಿಗೆ, ಯಜ್ಞಕುಂಡದ ಅಲಂಕಾರಕ್ಕೆ ಮಾತ್ರ, ಮುಡಿಯುವುದು ಅವರಿಗಾಗುವುದಿಲ್ಲ ಎಂದು ನಿರಾಸೆಯಿಂದ ನುಡಿವ ಅಹಲ್ಯೆ, ಮುಂದುವರೆದು ನಮ್ಮ ಇಷ್ಟವೆಂದು ನಮಗೇನಿದೆ? ಅಪ್ಪ ಹೇಳಿದವರನ್ನು ಮದುವೆಯಾಗಿ ಗಂಡ ಇಷ್ಟಪಟ್ಟಂತೆ ಬದುಕುವುದು ಮಾತ್ರ ನಮ್ಮ ಬದುಕಲ್ಲವೇ? ಎಂದು ನುಡಿವ ಅಹಲ್ಯೆಯ ಮೂಲಕ, ಹೆಣ್ಣಿನ ಎಂದಿಗೂ ಬದಲಾಗದ ಸ್ಥಿತಿಗತಿಗಳನ್ನು ಲೇಖಕಿ ಬಿತ್ತರಿಸುತ್ತಾರೆ. ಅವಳ ಆಂತರ್ಯವನ್ನು ಒಮ್ಮೆಯಾದರೂ ಅರ್ಥ ಮಾಡಿಕೊಳ್ಳದ ಗೌತಮರ ಬಗ್ಗೆ ಅವಳ ತಿರಸ್ಕಾರ ಭಾವಗಳನ್ನು , ನಿಜ ಹೇಳುವೆ ಮಾಧವಿ.

ಈ ಆಶ್ರಮ ಜೀವನದ ಕಟ್ಟುಪಾಡುಗಳು ಸಾಕಾಗಿದೆ ನನಗೆ. ಊಟೋಪಚಾರ ಬಾಯಿರುಚಿಗಳೇ ಮರೆತುಹೋಗಿವೆ ನನಗೆ ಎಂದುಸುರುವ ಅಹಲ್ಯೆಯ ಆಂತರ್ಯವನ್ನು, ಗಂಡನಾದವನು ಒಮ್ಮೆಯಾದರೂ ಅರ್ಥ ಮಾಡಿಕೊಂಡು, ಅವಳ ಆಸೆಗಳ ಪೂರೈಕೆಗೆ ಒತ್ತಾಸೆಯಾಗಬೇಕಿತ್ತು ಎನ್ನುತ್ತಾ, ಎಂದೂ ಮುಗಿಯದ ಹೆಣ್ಣಿನ ತಲ್ಲಣಗಳಿಗೆ ಬೆಲೆಯಿಲ್ಲದ ಭಾವಗಳಿಗೆ ನಾಟಕಕಾರರು ಅಕ್ಷರವಾಗುತ್ತಾರೆ.

ಕನ್ನಡಿಯ ಮೋಹ ಬೇಡವೆನ್ನುವ ಸಖಿ ಮಾಧವಿಗೆ, ಜಡ್ಡುಗಟ್ಟಿದ ಮನಸ್ಸಿಗೆ ಬಣ್ಣಗಳನ್ನು ಬೇಡವೆನ್ನಲು ನನ್ನ ಮನಸ್ಸು ಒಪ್ಪುತ್ತಿಲ್ಲ ಎನ್ನುವ ಮೂಲಕ ಲೇಖಕಿ ಅಹಲ್ಯೆಯ ಆಂತರ್ಯಕ್ಕೆ ಕನ್ನಡಿ ಹಿಡಿಯುತ್ತಾರೆ. ಇಲ್ಲಿಗೆ ಅವಳ ಜಾರುವಿಕೆಗೆ ಕಾರಣ ಸ್ಪಷ್ಟವಾಗಿದೆ. ಕೇವಲ ಸಂತಾನಪ್ರಾಪ್ತಿಗಾಗಿ ಮಾತ್ರ ಪತಿಪತ್ನಿಯರ ಸಮಾಗಮ ಎಂಬ ಕಾಲದಲ್ಲಿ, ಅಹಲ್ಯೆಯನ್ನು ಬಂಡಾಯಗಾರ್ತಿಯನ್ನಾಗಿ ಚಿತ್ರಿಸಿರುವುದು ಲೇಖಕಿಯ ಹೊಸ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ.

ಅಹಲ್ಯೆ ಗರ್ಭಿಣಿಯಾಗಿ ಅನುಭವಿಸುವ ತಲ್ಲಣಗಳು, ಮುಂದೆ ಈ ಮಗುವಿನ ಭವಿಷ್ಯ, ಪುತ್ರ ಶತಾನಂದನಿಂದ ದೂರಾದ ಯಾತನೆ, ತನಗೆ ಹೆಣ್ಣು ಮಗುವೇ ಆಗುತ್ತದೆ ಎಂಬ ಗಾಢವಾದ ಅನಿಸಿಕೆಯಲ್ಲಿ, ಅದನ್ನೂ ಕೂಡ ಆಶ್ರಮವಾಸಿಯನ್ನಾಗಿಸಬಾರದೆಂಬ ತೀವ್ರ ಕಾಳಜಿ, ಆ ಮಗುವನ್ನು ಹೇಗಾದರೂ ಉತ್ತಮವಾಗಿ ಜತನವಾಗಿಸಬೇಕೆಂಬ ಅವಳ ತಾಯ್ತನದ ತುಡಿತದ ಚಿತ್ರಣ ನಾಟಕದಲ್ಲಿ ಅತ್ಯಂತ ಹೃದಯಸ್ಪರ್ಷಿಯಾಗಿದೆ.

ಎಲ್ಲ ಜವಾಬ್ದಾರಿಗಳ ನಿರ್ವಹಣೆಯ ನಂತರ, ತನ್ನನ್ನು ತಾನೇ ಆತ್ಮಪರೀಕ್ಷೆಗೆ ಒಡ್ಡಿಕೊಂಡು, ಹೊರಗಿನ ಎಲ್ಲ ವ್ಯಾಮೋಹಗಳನ್ನು ತ್ಯಜಿಸಿ, ಅಂತರ್ಮುಖಿಯಾಗಿ ಒಂದು ಕಲ್ಲುಬಂಡೆಗಳಂತೆ ತಾನೇ ನಿರ್ಮಿಸಿಕೊಂಡ ಏಕಾಂತದಲ್ಲಿ, ಏಕಾಂಗಿಯಾಗಿ ಬದುಕುವ, ಈ ಸಮಯದಲ್ಲಿ ತನ್ನನ್ನು ತಾನು ಗಟ್ಟಿಗೊಳಿಸಿಕೊಳ್ಳುವ, ಪಾಂಡಿತ್ಯ ಸಂಪಾದಿಸಿಕೊಳ್ಳುವ ಅಹಲ್ಯೆಯ ಸ್ಥಿತಪ್ರಜ್ಞತೆ ಯಾರಿಗೂ ಮೆಚ್ಚುಗೆಯಾಗುವಂತೆ ಮೂಡಿಬಂದಿದೆ.

ತನ್ನನ್ನು ಬಳಸಿಕೊಂಡ ಇಂದ್ರ, ತನ್ನನ್ನೇ ನಿಂದಿಸುವುದು, ಗೌತಮರ ಶಿಕ್ಷೆಗೆ ಗುರಿಯಾಗಿ ಅನುಭವಿಸುವ ಒಂಟಿತನ, ಗೆಳತಿಯೊಬ್ಬಳ ಆಸರೆ, ಹದಿನೈದು ವರ್ಷಗಳ ಈ ಪರೀಕ್ಷೆಯಲ್ಲಿ ತನಗೆ ತಾನೇ ಗಟ್ಟಿಯಾಗಿ ಬದುಕು ಕಟ್ಟಿಕೊಳ್ಳುವುದು….. ಇದೆಲ್ಲ ಆವತ್ತಿಗೂ ಇವತ್ತಿಗೂ ಇರುವ ಹೆಣ್ಣಿನ ಜೀವನವೇ ಆದರೂ, ಎಲ್ಲವನ್ನೂ ಎದುರಿಸಿ ನಿಲ್ಲುವ ದೃಢತೆ, ಸ್ವಾವಲಂಬಿತನದ ಅವಶ್ಯಕತೆ ಈ ನಾಟಕದ ಮೂಲ ಉದ್ದೇಶವೆನಿಸುತ್ತದೆ.

ಎಪ್ಪತ್ತೆಂಟು ಪುಟಗಳ ಈ ನಾಟಕ ಪುಟ್ಟದಾದರೂ ಒಂದಷ್ಟು ದಿನ ಮನವನ್ನು ಕಾಡುತ್ತದೆ. ಲೇಖಕಿ ಎತ್ತುವ ಪ್ರಶ್ನೆಗಳಿಗೆ ಓದುಗನೂ ಸಹಮತ ಸೂಚಿಸುವಂತೆ ಮಾಡುತ್ತದೆ. ಒಂದು ಆಶ್ಚರ್ಯಕರ ಸಂಗತಿಯಲ್ಲಿ ಮುಕ್ತಾಯಗೊಳ್ಳುವ ನಾಟಕ ಒಂದೇ ಉಸಿರಿಗೆ ಓದಿಸಿಕೊಂಡು, ಸಮಾಧಾನದ ಅಥವಾ ಒಂದು ನಿಟ್ಟುಸಿರಿನೊಂದಿಗೆ ಪುಸ್ತಕವನ್ನು ಮಡಿಲಲ್ಲಿ ಉಳಿಸಿಕೊಳ್ಳುವಂತೆ ಮಾಡುತ್ತದೆ. ಸೀತೆ, ಇಂದ್ರ ಮತ್ತು ಅಹಲ್ಯೆಯರ ಮಗಳೆಂಬ ರಮ್ಯ ಕಲ್ಪನೆಯೊಂದಿಗೆ ಕಂಚುಗನ್ನಡಿ ಪುರಾಣ ಮತ್ತು ಸಮಕಾಲೀನತೆಯನ್ನು ಬೆರೆಸಿದೆ.

‍ಲೇಖಕರು Avadhi

September 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: