ಕಾಣೆಯಾಗುತ್ತಿರುವ ಶಾಂತಲೆಯರು..

ಅಂದು ಇಡಿಯ ಶಿವಗಂಗೆ ಒಂದು ರೀತಿಯ ಉನ್ಮಾದದಲ್ಲಿ ಮುಳುಗೇಳುತಿತ್ತು. ಊರಿನ ಜನರೆಲ್ಲರೂ ತಮ್ಮ ಖುಶಿಯನ್ನು ಅಡಗಿಸಿಡಲಾರದೇ ಕುಣಿದು, ಕುಪ್ಪಳಿಸಿ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು. ಅವರೆಲ್ಲರ ಖುಶಿಗೆ ಮೂಲ ಕಾರಣವೆಂದರೆ ಆ ಊರಿನ ಮುದ್ದಿನ ಕೂಸು, ಡಣಾಯಕ ಮಾರಸಿಂಗಯ್ಯ ಮತ್ತು ಮಾಚಿಕಬ್ಬೆಯವರ ಏಕಮಾತ್ರ ಪುತ್ರಿ ಶಾಂತಲಾ. ಶಿವಗಂಗೆಯೆಂಬ ಆ ಪುಟ್ಟ ಹಳ್ಳಿಯ ಹುಡುಗಿ ಇನ್ನೇನು ಕೆಲವೇ ದಿನಗಳಲ್ಲಿ ಹೊಯ್ಸಳ ಸಾಮ್ರಾಜ್ಯದ ಸಾಮ್ರಾಜ್ಞಿಯಾಗಲಿದ್ದಳು. ತನ್ನ ಅನನ್ಯವಾದ ನೃತ್ಯದ ಮೂಲಕ ನಾಡಿನ ಭಾವೀ ಪ್ರಭು ವಿಷ್ಣುವರ್ಧನರ ಮನಸ್ಸನ್ನು ಸೂರೆಗೊಂಡಿದ್ದಳು. ತಮ್ಮೂರಿನ ಸಾಮಾನ್ಯ ದಂಡಾಧಿಕಾರಿಯ ಮಗಳೊಬ್ಬಳು ನಾಡಿನ ಮಹಾರಾಣಿಯಾಗುವಳೆಂದರೆ ಯಾರಿಗೆ ತಾನೆ ಸಂತೋಷವಾಗದು?

ಇತ್ತ ತನ್ನ ಕೊಠಡಿಯಲ್ಲಿ ಏಕಾಂಗಿಯಾಗಿ ಮಲಗಿರುವ ಶಾಂತಲೆಗೆ ಬಳಿಗೆ ರಾತ್ರಿಯಿಡೀ ನಿದ್ರೆ ಸುಳಿಯಲಿಲ್ಲ. ಅವಳಿಗೆ ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ, ತನ್ನ ಆತ್ಮದೊಂದಿಗೆ ಎರಕ ಹೊಯ್ದಂತಿರುವ ನೃತ್ಯಕ್ಕೆ ತಾನಿನ್ನು ವಿದಾಯ ಹೇಳಬೇಕೇನೋ ಎಂಬ ಚಿಂತೆ. ಸಾಮಾನ್ಯಳಂತೆ ಮಹಾರಾಣಿ ಎಂದಾದರೂ ನರ್ತಿಸಿಯಾಳೇನು? ನರ್ತಿಸಿದರೂ ಕೂಡಾ ರಾಜನ ಸಂತೋಷಕ್ಕಾಗಿ ಅರಮನೆಯ ಆಯ್ದ ಪ್ರೇಕ್ಷಕರೆದುರು ನರ್ತಿಸಬಹುದು ಅಷ್ಟೆ. ಅವಳು ಎಂತಹ ಸುಖವನ್ನಾದರೂ ನೃತ್ಯಕ್ಕೆಂದು ನಿರಾಕರಿಸಿಯಾಳು!

ನೃತ್ಯ ನೀಡುವ ಅಲೌಕಿಕ ಆನಂದದ ಮುಂದೆ ಮಹಾರಾಣಿಯಾಗುವ ಸುಖ ಅವಳಿಗೆ ನಗಣ್ಯವೆನಿಸುತ್ತಿದೆ. ಆದರೆ ಪುರಜನರ ಸಂತೋಷದ ಅಲೆಯನ್ನವಳು ಅಲ್ಲಗಳೆಯಲಾರಳು. ರಾಜನ ಕಟ್ಟಳೆಯನ್ನು ಮೀರಲಾರದ ತಂದೆ ತಾಯಿಯರ ಕಷ್ಟದ ಅರಿವಿದೆ ಅವಳಿಗೆ. ಈ ಯಾವ ಆಯ್ಕೆಯೂ ಈಗ ಅವಳ ಕೈಯ್ಯಲ್ಲಿಲ್ಲ. ಆದರೆ ನೃತ್ಯ? ಅವಳು ಇಲ್ಲಿಯವರೆಗಿನ ತನ್ನ ಜೀವನದ ಬಹುಪಾಲು ಸಮಯವನ್ನು ನೃತ್ಯದ ಗುಂಗಿನಲ್ಲಿಯೇ ಕಳೆದಿದ್ದಾಳೆ. ನೃತ್ಯ ಅವಳ ಆತ್ಮದ ಭಾಗವಾಗಿ ಅವಳೊಂದಿಗೆ ಎರಕವಾಗಿದೆ.

ಹೌದು, ಶಾಂತಲೆಯ ಅಜ್ಜಿ ಬಾಚಿಕಬ್ಬೆ ಅಪ್ರತಿಮ ನೃತ್ಯಗಾತಿ. ಗೆಜ್ಜೆ ಕಟ್ಟಿ ರಾಜರ ಆಸ್ಥಾನದಲ್ಲಿ ಕುಣಿದು ಉಡುಗೊರೆಗಳನ್ನು ಬಾಚಿಕೊಂಡವಳು. ನೃತ್ಯವನ್ನು ಹೊನ್ನಾದೇವಿಯ ವರಪ್ರಸಾದವೆಂಬಂತೆ ಸ್ವೀಕರಿಸಿದವಳು. ಅವಳ ಮಗಳು ಮಾಚಿಕಬ್ಬೆ ನೃತ್ಯದೆಡೆಗೆ ಮನಮಾಡದೇ ಮಾರಸಿಂಗಯ್ಯನವರನ್ನು ವರಿಸಿ ಸಂಸಾರದಲ್ಲಿ ವ್ಯಸ್ತಳಾದಾಗ ಅವಳಿಗೆ ಆಶಾಕಿರಣವಾಗಿ ಕಂಡವಳು ಮೊಮ್ಮಗಳು ಶಾಂತಲೆ. ತನ್ನಲ್ಲಿರುವ ಎಲ್ಲ ನೃತ್ಯಕೌಶಲ್ಯವನ್ನವಳು ಮೊಮ್ಮಗಳಿಗೆ ಧಾರೆಯೆರೆದಿದ್ದಾಳೆ. ಶಾಂತಲೆಯೂ ಅಷ್ಟೇ ವಿಧೇಯ ವಿದ್ಯಾರ್ಥಿಯಾಗಿ ಅಜ್ಜಿಯಿಂದ ಎಲ್ಲ ನೃತ್ಯಕೌಶಲವನ್ನೂ ಬಾಚಿಕೊಂಡಿದ್ದಾಳೆ.

ಅಂದು ಹೊನ್ನಾದೇವಿಯ ಜಾತ್ರಾಮಹೋತ್ಸವ. ಸಂಜೆ ಬಾಚಿಕಬ್ಬೆಯ ವಂಶಸ್ಥರು ದೇವಿಗೆ ನೃತ್ಯಸೇವೆಯನ್ನು ನಡೆಸಿಕೊಡುವುದು ಅನೂಚಾನವಾಗಿ ಬೆಳೆದುಬಂದ ಪದ್ಧತಿ. ಸಾವಿರಾರು ಜನರು ಸೇರಿದ ಸಭೆಯಲ್ಲಿ ಮೊಮ್ಮಗಳು ಶಾಂತಲೆ ನರ್ತಿಸಲಿ ಎಂದು ಆದೇಶಿಸಿದ್ದಾಳೆ ಬಾಚಿಕಬ್ಬೆ. ಇಡಿಯ ಊರೇ ಕಾತರದಿಂದ ಹೊಸ ನರ್ತಕಿಯ ಉದಯಕ್ಕೆ ಕಾಯುತ್ತಿದೆ. ಶಾಂತಲೆ ಮತ್ತವಳ ಓರಗೆಯವಳಾದ ಲಕ್ಷ್ಮಿ ಅಂದು ಶಿವತಾಂಡವ ನೃತ್ಯವನ್ನು ಪ್ರಸ್ತುತಪಡಿಸಲಿದ್ದಾರೆ.

ಭೂಮಂಡಲವನ್ನೇ ನಡುಗಿಸುವಂತಹ ಪ್ರಳಯ ರುದ್ರನ ತಾಂಡವದ ಹೆಜ್ಜೆಯೊಂದಿಗೆ ಲಕ್ಷ್ಮಿ ರಂಗವನ್ನು ಪ್ರವೇಶಿಸಿದಳು. ಢಮಢಮರೆಂಬ ಢಮರುಗದ ಸದ್ದಿಗೆ ಇಡಿಯ ಸಭಾಂಗಣವೇ ಕಂಪಿಸುತ್ತಿರಲು, ಮಂಜಿನನಿಂದಾವೃತವಾದ ಕೈಲಾಸ ಪರ್ವತವೇ ರುದ್ರದೇವನ ಕೋಪಕ್ಕೆ ಬೆವರುತ್ತಿರಲು, ಶಿವನ ಆವೇಶದ ಶಮನಕ್ಕೆ ಸುಳಿವ ಮಂದಮಾರುತದಂತೆ ಶಾಂತಲೆ ಮಂದಸ್ಮಿತೆಯಾಗಿ ರಂಗವನ್ನು ಪ್ರವೇಶಿಸಿದಳು. ರುದ್ರನ ಕೋಪ, ತಾಪಗಳನು ಕಳೆದು ಚಿರಶಾಂತಿ ನೆಲೆಸುವಂತೆ ಮಾಡುವ ಸಂತೋಷದ ಅಲೆಯಂತೆ ಸರ್ತಿಸಿದಳು ಶಾಂತಲೆ.

ಶಾಂತಶಿವನ ಮೂರ್ತರೂಪ ಕಾಂತೆ ಪಾರ್ವತಿ
ರುದ್ರನೇತ್ರನ ಪ್ರೀತಿಸ್ವರೂಪಿ ಹರನ ಪ್ರಿಯಸತಿ
ಡಮರು ಢಕ್ಕೆ ನಾದಗಳಿಗೆ
ಕೊಳಲಗಾನದ ಇಂಪು ಬೆರಸಿ
ಪ್ರಳಯನಾದದ ರೌದ್ರ ತೊಡೆದು
ಸೃಷ್ಟಿಯುದಯ ರಾಗವ ಮಿಡಿವಳು

“ಭಳಿರೆ, ಭಾಪುರೆ…. ಬೆರೆಗಾದೆ ನಿಮ್ಮ ನೃತ್ಯದ ಬೆಡಗಿಗೆ” ಎಂಬ ಕಂಚಿನ ಕಂಠವೊಂದು ಪ್ರೇಕ್ಷಕರ ಹಿಂದಿನ ಸಾಲಿನಿಂದ ತೂರಿಬಂದು, ಎಲ್ಲರೂ ಹಿಂದಿರುಗಿ ನೋಡಿದರು. ನಾಡಿನ ಭಾವೀ ಪ್ರಭು ವಿಷ್ಣುವರ್ಧನ ಮಹಾರಾಜರು ತನ್ನ ಭಂಟ ಬಪ್ಪರಸನೊಂದಿಗೆ ನೃತ್ಯವೀಕ್ಷಣೆ ಮಾಡುತ್ತಿದ್ದರು. ಅವರ ನರ್ತನದ ಸೊಗಸಿಗೆ ಮಾರುಹೋಗಿದ್ದರು. ತಮ್ಮ ಆಸ್ಥಾನಕ್ಕೆ ಬಂದು ನರ್ತಿಸಿ ಎಂಬ ಬೇಡಿಕೆಯಿಡಬಹುದೆಂದು ಶಾಂತಲೆ ನಿರೀಕ್ಷಿಸಿದ್ದಳು. ಆದರವರ ಬೇಡಿಕೆಯೇ ಬೇರೆಯಾಗಿತ್ತು. ಶಾಂತಲೆಯನ್ನವರು ಮನದನ್ನೆಯಾಗಿ ಆರಿಸಿದ್ದರು. ಪಟ್ಟದ ರಾಣಿಯ ಪಟ್ಟ ಬಯಸದೆಯೇ ಅವಳೆದುರು ಬಂದು ನಿಂತಿತ್ತು.

ಮಹಾರಾಜರಿಂದ ಇಂಥದೊಂದು ನಿರೂಪ ಬಂದಾಗ ಶಿವಗಂಗೆಯ ಇಡಿಯ ಪರಿವಾರವೇ ಖುಶಿಯ ಅಲೆಯಲ್ಲಿ ತೇಲಿಹೋಗಿತ್ತು.ಆದರೆ…. ಶಾಂತಲೆಯೊಳಗಿನ ನರ್ತಕಿ ಪ್ರಶ್ನೆಯಾಗಿ ಅವಳೆದುರು ನಿಂತಿದ್ದಳು.
ಅವಳಿಗೆ ಸಿದ್ಧಿಸಿದ ಆ ಅಸಾಮಾನ್ಯ ನೃತ್ಯಸಿದ್ಧಿ ಅವಳೊಬ್ಬಳ ಸೊತ್ತಾಗಿರಲಿಲ್ಲ. ಅವಳು ವಾಸಿಸುವ ಆ ಇಡಿಯ ಪರಿಸರದಿಂದ ರೂಪುಗೊಂಡ ರಸಪಾಕವದು. ಶಿವಗಂಗೆಯ ಬೆಟ್ಟದ ತುಂಬೆಲ್ಲ ಹರಡಿರುವ ಹಸಿರಿನ ನಡುವಿಂದ ತೂರಿಬರುವ ತಂಗಾಳಿಯ ಲಯವೇ ಅವಳ ಮೊದಲ ನೃತ್ಯದ ಹೆಜ್ಜೆಯಾಗಿತ್ತು.

ರಾಜಮನೆತನದವಳಲ್ಲದ ಅವಳಜ್ಜಿ ಬಾಚಿಕಬ್ಬೆಯ ನೆರವಿನಿಂದಲೇ ನೃತ್ಯದ ಪಟ್ಟುಗಳನ್ನವಳು ಕಲಿತಿದ್ದಳು. ಆ ಊರಿನ ಜನರ ಹಾಡು, ಹಸೆ, ಸುಗ್ಗಿ, ಸಂಭ್ರಮಗಳೆಲ್ಲವೂ ಅವಳೊಳಗೆ ಸಂತೋಷದ ಅಲೆಯಾಗಿ ಸೇರಿ ಅವಳನ್ನು ನೃತ್ಯಗಾತಿಯಾಗಿಸಿದ್ದವು. ಅವಳು ಕೇವಲ ನೃತ್ಯಗಾತಿ ಶಾಂತಲೆ ಮಾತ್ರವಲ್ಲ; ಶಿವಗಂಗೆಯೆಂಬ ಹಳ್ಳಿಯ ಗ್ರಾಮದೇವತೆ ಹೊನ್ನಾದೇವಿಯ ಅಂಗಳದಲ್ಲಿ ಅಂಬೆಗಾಲಿಟ್ಟು ಬೆಳೆದು ನರ್ತಕಿಯಾದ ಶಾಂತಲೆಯೂ ಆಗಿದ್ದಳು.

ಪಟ್ಟದರಸಿಯ ಪಟ್ಟದೊಂದಿಗೆ ಆ ಊರಿನ ಜನ ಅವಳೊಳಗಿನ ನೃತ್ಯಗಾತಿ ಶಾಂತಲೆಯನ್ನೂ ಕಳಕೊಳ್ಳಲಿದ್ದರು. ಅವರಿಗದರ ಅರಿವಿರಲಿಕ್ಕಿಲ್ಲ ನಿಜ; ಆದರೆ ನೃತ್ಯವನ್ನು ಆರಾಧಿಸುವ ಶಾಂತಲೆಗೆ ಅವರು ಕಳಕೊಳ್ಳುವ ಭಾಗ್ಯದ ಅರಿವಿತ್ತು. ಅರಮನೆಯೊಳಗೆ ನರ್ತಿಸಲು ಮಹಾಪ್ರಭು ಅಡ್ಡಿಪಡಿಸಲಾರರೆಂಬ ನಂಬಿಕೆಯಿತ್ತು. ಆದರೆ ಕಲೆಯೆಂಬುದು ಎಂದಿದ್ದರೂ ಪ್ರಕೃತಿಯ ಸೊತ್ತು; ಪ್ರಭುವಿನ ಸೊತ್ತಲ್ಲ. ಪ್ರಕೃತಿಯ ಭಾಗವಾದ ಸಹೃದಯರ ಕಣ್ಣಿಗೆ ಒದಗುವುದರಲ್ಲಿಯೇ ಅದರ ಸಾರ್ಥಕತೆಯಿರುವುದು ಎಂಬುದು ಆಕೆಯ ನಂಬುಗೆಯಾಗಿತ್ತು.

ಹಾಗೆಂದು ನಮ್ಮೂರಿನ ಸಾಮಾನ್ಯ ಹುಡುಗಿಯೊಬ್ಬಳು ಮಹಾರಾಣಿಯಾಗುವಳೆಂಬ ಊರಿನವರ ಸಂಭ್ರಮವನ್ನು ಕಸಿಯುವುದೂ ಅವಳಿಗೂ ಇಷ್ಟವಿರಲಿಲ್ಲ. ಮಹಾರಾಜರ ಆಶಯವಿದಾದ್ದರಿಂದ ಅದನ್ನು ಮೀರುವುದೂ ಸಾಧ್ಯವಿರಲಿಲ್ಲ. ಕಲೆಯೇ ತನ್ನನ್ನು ಮಹಾರಾಣಿಯಾಗಿಸಿತು ಎಂಬ ಸಮಾಧಾನದ ನಡುವೆಯೂ ಅವಳೊಳಗನ್ನು ಬೆಳಗಿದ ಜನರೆದುರು ಅವಳು ಸಿದ್ಧಿಸಿಕೊಂಡ ನೃತ್ಯಕಲೆಯನ್ನು ಶಾಶ್ವತವಾದ ಕಲಾಕೃತಿಯಾಗಿಸಬೇಕಾದ ತುರ್ತು ಕೂಡಾ ಅವಳಿಗಿತ್ತು. ಅಜ್ಜಿ ಯಾವಾಗಲೂ ಹೇಳುತ್ತಿದ್ದಳು, “ಕಲಿತ ಕಲೆ ಬಂಧನಕ್ಕೊಳಪಟ್ಟು ನಿಂತ ನೀರಾಗಬಾರದು; ಪರಂಪರೆಯಾಗಿ ಮುಂದುವರೆಯಬೇಕು.” ಪರಂಪರೆಯಾಗಿಸುವ ಅವಕಾಶವನ್ನು ಮಹಾರಾಣಿಯಾದ ಗಳಿಗೆಯಲ್ಲೇ ಅವಳು ಕಳೆದುಕೊಳ್ಳಲಿದ್ದಳು. ಹಾಗಾಗಿ ಕಲೆಯನ್ನು ಸಾರ್ವಜನಿಕರ ಸೊತ್ತಾಗಿ ಪ್ರದರ್ಶನಕ್ಕಿಡುವ ಹೊಸದೊಂದು ಮಾರ್ಗದ ಅನ್ವೇಷಣೆಯಲ್ಲಿ ಅವಳು ನಿರತಳಾದಳು.

ಆಗ ನೆನಪಾದವರು ಅವಳ ಶಿಲ್ಪಗುರು ಜಕಣಾಚಾರಿ. ಶಿಲೆ ಅವರ ಕೈಯಲ್ಲಿ ಸಿಕ್ಕಿದಾಗ ಕಲೆಯೆಂಬ ಆತ್ಮವನ್ನು ಧರಿಸಿ ಜೀವ ಪಡೆಯುವ ಸೋಜಿಗವನ್ನು ಅವಳು ನೋಡಿದ್ದಳು. ಅವರ ನೆರವಿನಿಂದ ನೃತ್ಯವನ್ನು ಶಿಲೆಯ ಬೆಡಗಾಗಿ ಜೀವಂತಗೊಳಿಸುವ ತೀರ್ಮಾನಕ್ಕೆ ಅವಳು ಬಂದಳು. ಮಹಾರಾಣಿಯಾಗಿ ಅರಮನೆಯ ಹೊಸಿಲು ದಾಟಿದ ಆ ಗಳಿಗೆ ಅವಳೊಳಗಿನ ನೃತ್ಯಗಾತಿ ಬಾಗಿಲಲ್ಲಿಯೇ ಏಕಾಂಗಿಯಾಗಿ ನಿಂತಿರುವುದನ್ನು ಅವಳು ನೋಡಿದಳು. ಅವಳನ್ನು ನೆಲೆಯಾಗಿಸದೇ ಮಹಾರಾಜನ್ನು ಸೇರಲು ಸಾಧ್ಯವಿರಲಿಲ್ಲ.

ಅಂದು ಅವರಿಬ್ಬರ ಮೊದಲ ರಾತ್ರಿಯ ಸಂಭ್ರಮ. ಮದುವೆಯ ವೈಭವದಲ್ಲಿ ದುಡಿದು, ಕುಣಿದು, ದಣಿದ ಇಡಿಯ ರಾಜಧಾನಿ ನಿದ್ರೆಯಲ್ಲಿ ಮುಳುಗಿತ್ತು. ಅವಳ ಮೃದುಬೆರಳನ್ನು ನೇವರಿಸುವ ದೊರೆಯಲ್ಲಿ ಮೆಲ್ಲನೆ ತನ್ನ ಮನದಾಸೆಯನ್ನು ತೆರೆದಿಟ್ಟಳು.

“ದೊರೆಯೆ, ಇಂದಿನಿರುಳನ್ನು ನನಗಾಗಿ ನೀಡಲಾರಿರಾ?”

“ಶಾಂತಲಾ, ಇದೆಂತಹ ಪ್ರಶ್ನೆ? ನನ್ನನ್ನೇ ನಿನಗಾಗಿ ನೀಡಿರುವೆ. ಒಂದಿರುಳಿನ ಮಾತೇಕೆ?

“ಹಾಗಾದರೆ ನಾವೀಗಲೇ ಮಾರುವೇಷದಲ್ಲಿ ಹೊರಡಬೇಕು”.

“ಎಲ್ಲಿಗೆ? ಯಾಕೆ? ಇಂದೇ ಹೋಗಬೇಕೇಕೆ?” ಪ್ರಶ್ನೆಗಳ ಸಾಲು, ಸಾಲು ತೂರಿಬಂದವು.

“ಕ್ಷಮಿಸಿ, ಪ್ರಥಮ ರಾತ್ರಿಯನಿಂತು ಬರಿದು ಮಾಡುತ್ತಿರುವುದಕ್ಕೆ. ಪುರವೆಲ್ಲ ನಿದ್ರಿಸುತ್ತಿರುವ ಈ ವೇಳೆಯಲ್ಲದೆ ಬೇರೆ ಸಿಗದು ಈ ಗುರುತರವಾದ ಕಾರ್ಯಕ್ಕೆ.ನನ್ನ ಗುರು ಜಕಣಾಚಾರ್ಯರು ಇಲ್ಲೇ ಹತ್ತಿರದಲ್ಲಿ ಬಿಡಾರ ಹೂಡಿರುವರೆಂಬುದನ್ನು ಅರಿತೆ. ಇಂದೇ ಅವರನ್ನು ಭೇಟಿಯಾದರೆ ನೀವು ಮೆಚ್ಚುವ ನನ್ನ ನೃತ್ಯವನ್ನು ಸ್ಥಿರವಾಗಿಸಬಹುದು ವೀರ ನಾರಾಯಣನ ಸನ್ನಿಧಿಯಲ್ಲಿ”

“ನಾಳೆ ಹೋದರಾಗದೆ ಚೆನ್ನೆ”

“ನನ್ನ ಗುರು ಇಂದಿರುವ ಜಾಗದಲ್ಲಿ ನಾಳೆ ನಿಲ್ಲುವರಲ್ಲ ದೊರೆ. ಹಕ್ಕಿಯಂತೆ ಮನಬಂದಲ್ಲಿ ಸ್ವಚ್ಛಂದವಾಗಿ ಹಾರಾಡುವವರು. ಅವರ ವಿಷಯದಲ್ಲಿ ನಾಳೆಯೆಂದರೆ ಅದು ಬಾರದ ದಿನವಾಗಲೂಬಹುದು”

“ರಾಜ ನಾನು, ಆಜ್ಞೆ ಮಾಡಿದರೆ ಬರಲಾರರೇನು?”

“ರಾಜಾಜ್ಞೆ ನಾಡಿನ ಜನರಿಗೆ, ಹಾಡುವ ಕೋಗಿಲೆಗಲ್ಲ ದೊರೆ. ನನ್ನ ಗುರು ಎಲ್ಲ ಬಂಧನವ ತೊರೆದ ಹಾಡುಹಕ್ಕಿ”

“ಅವರೇ ಯಾಕಾಗಬೇಕು ನೃತ್ಯ ಶಿಲ್ಪ ಕೊರೆಯಲು?”

“ಅವರಲ್ಲದನ್ಯರಿಗೆ ದಕ್ಕದ ಕೌಶಲವದು ದೊರೆ. ವಿಗ್ರಹ ಶಿಲ್ಪಕ್ಕೆ ಹೃದಯೋದ್ದೀಪನ ಶಕ್ತಿಯನ್ನು ತುಂಬಬಲ್ಲ ಸಾಮರ್ಥ್ಯ ಅವರಿಗಲ್ಲದೇ ಅನ್ಯರಿಗಿಲ್ಲ. ಕಲ್ಲಿನಲ್ಲಿ ನೃತ್ಯವೆಂಬ ಕಾವ್ಯವನ್ನು ಸುಮ್ಮನೆ ಕೊರೆಯಲಾಗದು ದೊರೆ”

“ಮೆಚ್ಚಿದೆ ಶಾಂತಲಾ, ನಿನ್ನ ಕಲಾಪ್ರೀತಿಗೆ. ನಿನ್ನಂತ ಕಣ್ಮಣಿಯ ಜೊತೆಗಿರುವ ಪ್ರತಿರಾತ್ರಿಯೂ ಪ್ರಥಮ ರಾತ್ರಿಯೆ. ನಡೆ, ಈಗಲೇ ನಿನ್ನ ಗುರುವನ್ನು ನೋಡೋಣ”

ಅವರು ಗುರುವಿನ ಕಲಾಶಾಲೆಯೆಂಬ ಗುಡಿಸಲಿನೊಳಗೆ ಹೋಗುವಾಗ ಗುರು ಯಾವುದೋ ವಿಗ್ರಹದ ಕೆತ್ತನೆಯಲ್ಲಿ ಮುಳುಗಿದ್ದರು. ಶಿಷ್ಯನೊಬ್ಬ ಅವರನ್ನು ಕಂಡೊಡನೆಯೇ ಮಾತನಾಡದಂತೆ ಸನ್ನೆ ಮಾಡಿದ. ಗುರುವಿನ ಸಮಾಧಿ ಸ್ಥಿತಿಗೆ ಭಂಗ ಬಂತೆಂದರೆ ಅವರೆಂದೂ ಆ ಶಿಲ್ಪ ಕೆತ್ತನೆಯನ್ನು ಮುಂದುವರೆಸಲಾರರು ಎಂಬುದು ಅವಳಿಗೂ ತಿಳಿದಿತ್ತು. ಶಬ್ದವಾಗದಂತೆ ಅವರಿಬ್ಬರೂ ಹೆಜ್ಜೆಯಿಟ್ಟರು. ಯಾವುದೋ ದೇವವಿಗ್ರಹದ ಮುಖಭಾಗವನ್ನು ಕಲ್ಲಿನಲ್ಲಿ ಕೊರೆಯುತ್ತಿದ್ದರು ಗುರು ಜಕಣಾಚಾರಿ. ಅಂದರೆ ಬೆಳಗು ಜಾವದವರೆಗೂ ಅವರು ಹೊರಜಗತ್ತಿನ ಪರಿವೆಯಿಲ್ಲದ ಧ್ಯಾನಸ್ಥ ಸ್ಥಿತಿಯಲ್ಲಿಯೇ ಕೆಲಸ ಮಾಡುತ್ತಿರುತ್ತಾರೆ.

ಅವರಿಗೆ ಗುರುವನ್ನು ಕಾಯದೇ ಉಪಾಯವಿರಲಿಲ್ಲ. ಸುಮ್ಮನೆ ಕುಳಿತಿರಲು ಮನಸ್ಸಾಗಲಿಲ್ಲ. ಕೆಲಸದ ನಡುವೆ ಆಗಾಗ ತಾಂಬೂಲವನ್ನು ತಿನ್ನುವುದು ಗುರುವಿನ ರೂಢಿ. ಶಿಷ್ಯನೊಬ್ಬ ಅವರಿಗೆ ತಾಂಬೂಲವನ್ನು ಮಡಚಿ ಬಾಯಿಗಿಡಬೇಕು. ಮತ್ತೊಬ್ಬ ಅದನ್ನು ಉಗಿಯಲು ಪಕ್ಕದಲ್ಲೇ ಪೀಕುದಾನಿಯನ್ನು ಹಿಡಿದು ಕೂಡಬೇಕು. ಶಾಂತಲೆ ಆ ಕೆಲಸಕ್ಕೆ ನೇಮಕವಾದವರನ್ನು ಬದಿಗೆ ಸರಿಯಲು ಹೇಳಿದಳು. ತಾಂಬೂಲದ ಬಟ್ಟಲನ್ನು ದೊರೆಯ ಕೈಗೆ ಕೊಟ್ಟಳು. ಪೀಕುದಾನಿಯನ್ನು ಹಿಡಿದು ಗುರುವಿನ ಪಕ್ಕದಲ್ಲಿ ಕುಳಿತಳು.

ಗುರುವಿನ ಕೈಯಲ್ಲಿ ಉಳಿಯೊಂದು ಅಕ್ಷರವ ಬರೆಯುವ ಲೇಖನಿಯಂತೆ ನಾಜೂಕಾಗಿ ಗೆರೆಗಳನ್ನು ಬರೆಯುತ್ತಿತ್ತು. ಕಪ್ಪು ಶಿಲೆಯ ಕಲ್ಲು ಬೆಣ್ಣೆಯ ಮುದ್ದೆಯೇನೋ ಎಂಬಂತೆ ಮೃದುವಾಗಿ ಬಾಗುತ್ತಿತ್ತು.ದೇವ ವಿಗ್ರಹದ ಮುಖಭಾಗವನ್ನವರು ಉಳಿಯಿಂದ ಕೆತ್ತುತ್ತಿದ್ದರು. ದೇವಮೂರ್ತಿಯ ಕಣ್ಣನ್ನು ಚಿತ್ರಿಸುವಾಗ ಗುರುಗಳು ಅದೆಷ್ಟು ತಾದ್ಯಾತ್ಮದಲ್ಲಿರುತ್ತಿದ್ದರೆಂದರೆ, “ಶಾಂತಲಾ, ಆ ಕಣ್ಣಿಂದ ಹೊರಬರುವ ನೋಟವಿದೆಯಲ್ಲ, ಅದು ಭಕ್ತರ ಎದೆಯೊಳಗೆ ನೇರ ಇಳಿದು ಅವರ ಹೃದಯ ಬೆಳಗಬೇಕು. ಇಲ್ಲವಾದರೆ, ಆ ಮೂರ್ತಿ ದೇವರೆಂತಾದೀತು?” ಎನ್ನುತ್ತಿದ್ದರು. ಬೆಳಗಾಗಲು ಒಂದು ಜಾವವವಿದೆಯೆನುವಾಗ ದೇವಶಿಲ್ಪಕ್ಕೆ ದೃಷ್ಟಿ ಬಂದಿತು. ಗುರು ಜಕ್ಕಣರ ಕಣ್ಣೊಳಗೂ ಬೆಳಕು! ತನ್ನ ಕೈಯ್ಯನೊಮ್ಮೆ ಅವರಿಬ್ಬರ ಹೆಗಲ ಮೇಲಿಟ್ಟು ಮೈಮುರಿದರು. ಅವಳ ಮೈಯ್ಯ ಮೃದುತ್ವ ಅವರ ತೋಳನ್ನು ತಾಕಿತು. ಪಟ್ಟನೆ ಎಚ್ಚರಗೊಂಡು ದಿಟ್ಟಿಸಿದರು.

“ದೇವಿ, ಇದೇನಿದು ನೀನಿಲ್ಲಿ? ನನ್ನ ಪೀಕುದಾನಿಯನ್ನು ಹಿಡಿದು. ಅರೆರೆ! ನಾಡನ್ನಾಳುವ ದೊರೆ! ನನ್ನ ತಾಂಬೂಲ ಪೆಟ್ಟಿಗೆಯ ಹಿಡಿದು ಬರಿನೆಲದಲ್ಲಿ ಕುಳಿತಿರುವಿರಲ್ಲ. ಏನು ಮಗಳೇ ಇದೆಲ್ಲ?”
ಹುಸಿಮುನಿಸಿನಿಂದ ಪ್ರಶ್ನಿಸಿದರು, ಅವರು ಉಗುಳಿದ ತಾಂಬೂಲದ ಕಲೆಗಳಿಂದ ತೊಯ್ದ ಶಾಂತಲೆಯ ಸೀರೆಯನ್ನೇ ಪಶ್ಚಾತ್ತಾಪದಿಂದ ದಿಟ್ಟಿಸುತ್ತಾ.

“ಗುರುಗಳೇ, ರಾಣಿಯಾಗಲಿ, ದೇವಿಯಾಗಲೀ, ನಾನು ನಿಮ್ಮ ಶಿಷ್ಯೆ. ಗುರುಸೇವೆ ಎಂದೆಂದಿಗೂ ನನ್ನ ಭಾಗ್ಯ” ಎಂದಳು ಅವರಿಗೆ ವಂದಿಸುತ್ತಾ.

“ನಾಡನ್ನಾಳುವ ದೊರೆಯ ಕೈಯಲ್ಲಿ ತಾಂಬೂಲದ ಪೆಟ್ಟಿಗೆಯ ಹಿಡಿಸಬಹುದೆ ಮಗಳೆ?”

‘ಖಂಡಿತ ಹಿಡಿಸಬಾರದು. ಹಿಡಿಸಿದರೆ ಅದಕ್ಕೆ ತಕ್ಕ ಶಿಕ್ಷೆಯನ್ನು ವಿಧಿಸಲಾಗುವುದು”
ದೊರೆ ನಗುತ್ತಾ ಹೇಳಿದರು.

“ನಿಮ್ಮ ಯಾವುದೇ ಶಿಕ್ಷೆಗೂ ಬದ್ಧ ನಾನು”
ಜಕ್ಕಣಾಚಾರ್ಯರು ತಲೆಬಗ್ಗಿಸಿ ನುಡಿದರು.

ಶಾಂತಲೆ ಅವರ ಪಾದಹಿಡಿದು ಹೇಳಿದಳು, “ವೀರನಾರಾಯಣನ ಗುಡಿ ನೃತ್ಯಕಲೆಯ ವಿಶ್ವವಿದ್ಯಾಲಯವಾಗುವಂತೆ ಮಾಡಿ ಗುರುವೆ. ಇಡಿಯ ದೇವಳದ ಗೋಡೆಯ ತುಂಬೆಲ್ಲಾ ಅನನ್ಯವಾದ ನೃತ್ಯಭಂಗಿಗಳೇ ತುಂಬಿರಬೇಕು, ಅವೆಲ್ಲವೂ ಜೀವಂತವಾಗಿ ನರ್ತಿಸುತ್ತಿರುವಂತೆ ನೋಡುಗರಿಗನಿಸಬೇಕು” ಗುರುಗಳು ಕ್ಷಣಕಾಲ ಗಂಭೀರವಾದರು, ಮತ್ತೆ ಯೋಚಿಸಿ ನುಡಿದರು, “ನೃತ್ಯಶಿಲ್ಪಗಳನ್ನು ಕಡೆಯಬಹುದು.ಜೀವಂತ ನೃತ್ಯವನ್ನೇ ಚಿತ್ರಿಸಬೇಕೆಂದರೆ ಶಿಲೆಯ ಕೆತ್ತನೆಯೆದುರು ಮಾದರಿಯಾಗಿ ನಿಲ್ಲುವ ಜೀವಂತ ಶಿಲ್ಪಗಳು ಬೇಕು. ಹಾಗೆ ನೃತ್ಯಭಂಗಿಯನ್ನು ಸರ್ವಾಂಗಶುದ್ಧವಾಗಿ ಪ್ರದರ್ಶಿಸುವ ನೃತ್ಯಗಾತಿಯರನ್ನೆಲ್ಲಿಂದ ತರುವೆ ಮಗಳೆ? ಈ ಕೆಲಸ ನನ್ನಿಂದಾಗದು” ಎಂದರು.

ಶಾಂತಲೆಗೆ ಗುರುವಿನ ಮನದೊಳಗಿನ ದ್ವಂದ್ವದ ಅರಿವಾಗಿತ್ತು. ಅವಳು ಪ್ರಭುವಿನ ಅಪ್ಪಣೆಯನ್ನು ಬೇಡುವಂತೆ ದೊರೆಯೆಡೆಗೆ ನೋಡಿದಳು. ಪ್ರಭು ಕಡೆಗಣ್ಣ ನೋಟದಲ್ಲೇ ಅನುಮತಿ ನೀಡಿದರು. “ನಾನೇ ನಿಮ್ಮೆದುರು ಮಾದರಿಯಾಗಿ ನಿಂತರೆ….” ಶಾಂತಲೆ ಗುರುವಿನೆದುರು ನೃತ್ಯಸರಸ್ವತಿಯಾಗಿ ನಿಂತಳು. ಗುರು ಅವಳನ್ನೇ ನೋಡುತ್ತಾ ಒಂದರಗಳಿಗೆ ಮೈಮರೆತರು. ಮತ್ತೆ “ನೀವಿಬ್ಬರೂ ನನ್ನನ್ನು ಕಟ್ಟಿಹಾಕಿದಿರಿ” ಎನ್ನುತ್ತಾ ಒಳನಡೆದರು. ಬೇಲೂರಿನ ಗುಡಿಯಲ್ಲಿ ಶಾಂತಲೆ ತನ್ನ ನೃತ್ಯಭಂಗಿಗಳನ್ನೆಲ್ಲವನ್ನೂ ನೋಡುಗರೆದುರು ತೆರೆದಿಟ್ಟು ತಾನು ರಾಜನ ಅಂತಃಪುರದಲ್ಲಿ ಬಂಧಿಯಾದಳು.

ಚೆನ್ನಕೇಶವನ ಸನ್ನಿಧಿಯಲಿ
ನರ್ತಿಸಿದಳು ಬಾಲೆ, ಶಾಂತಲೆ
ನರ್ತಿಸಿದಳು ತಾನೆ……
ಕನ್ನಡಿಯನು ಹಿಡಿದು ಮುಕುರಮುಗ್ಧೆ
ತನ್ನ ತಾನೇ ಶೃಂಗರಿಸಿದಳು
ಪೂಸಿದಳು ಪುನ್ನಾಗ ಸೌಗಂಧಿಕವಾ ವಾಸಂತೀ….
ಶುಕಭಾಷಿಣೀ………ಕೀರವಾಣಿ….
ಕಪಿಕುಪಿತೆ…ಲೀಲಾ ಕಿರಾತಿ…..
ನರ್ತಿಸಿದಳು ಲಲನೆ, ಶಾಂತಲೆ…….

ನೀಳಕೇಶವ ಚಾಚಿ ಮಂಜುಕಬರೀ…
ಢಕ್ಕೆಯ ಶಿರಕೆತ್ತಿ ಮುರಜಾಮೋದೆ..
ಭೈರವಿ, ತಾಂಡವೆ…ತದ್ದಿಮಿ ಝಣುತಾ…
ಗಾನಜೀವನೆ, ಮುರಳೀಧರೆ….
ಜಗನ್ಮೋಹಿನಿ ವೀಣಾಪಾಣಿ…..
ಕುಟಿಲ ಕುಂತಲೆ… ರಸಿಕ ಶಬರೀ
ನರ್ತಿಸಿದಳು ಲಲನೆ, ಶಾಂತಲೆ…..

ವೀರಾವೇಷದಿ ವೀರಯೋಷಿತೆ
ತಾಳವರಿಯದಾ ಪೂ ವಿಡಂಬಿತೆ
ನಾಟ್ಯ ನಿಪುಣೆ ನೃತ್ಯ ಸರಸ್ವತಿ
ಸ್ವರ್ಗ ಹಸ್ತೆ ಕೃತಕ ಶೂಲಿ
ಜಯನಿಷಾದಿ ರಾಗಯೋಗಿ
ಭಸ್ಮಭೂಷಿತೆ ಭಸ್ಮಾಸುರ ಹರಣೆ
ನರ್ತಿಸಿದಳು ಲಲನೆ, ಶಾಂತಲೆ..

ನೀಲಾಂಬರೆ, ಸರ್ಪಸುಂದರಿ
ಶಕುನ ಶಾರದೆ, ಭೂಷಣ ಪ್ರಿಯೆ
ವೀಟಿಧರೆ ನಾಗವೈಣಿಕೆ
ಭೂಷಣಪ್ರಿಯೆ, ವೇಣುಗಾನ ಲೋಲೆ
ಲಾಸೋತ್ಸವೆ ಗಾಂಧರ್ವದೇವಿ
ಶುಕಭಾಷಿಣಿ ನೃತ್ಯೋನ್ಮತ್ತೆ ಸರಸ್ವತಿ
ನರ್ತಿಸಿದಳು ಲಲನೆ, ಶಾಂತಲೆ…..

ನರ್ತನದ ಭಂಗಿಗಳೆಲ್ಲ ಶಿಲೆಯಾಗಿ ಮೈದಳೆದವೆಂಬಂತೆ ದೇವಾಲಯದ ಸುತ್ತೆಲ್ಲ ಅರಳಿ ನಿಂತು ಕಂಗೊಳಿಸಿದವು. ಶಾಂತಲೆ ನಿರಂತರವಾಗಿ ನರ್ತಿಸುತ್ತಲೇ ಇದ್ದಾಳೆ, ಶಿಲೆಯ ಅಳಿವು ಸಂಭವಿಸುವವರೆಗೂ.

ಇದೊಂದು ರಂಜನೀಯವಾದ ಕಥೆಯಾಗಬಹುದಷ್ಟೆ. ಏಕೆಂದರೆ ನೃತ್ಯವೆಂದರೆ ಒಂದು ಚಲನೆ, ನೃತ್ಯವೆಂದರೆ ಕಾವ್ಯದ ಹರಿವು, ನೃತ್ಯವೆಂದರೆ ಸಂಗೀತದ ಸ್ವರಗಳ ಅಲೆಯ ಚಿತ್ರಿಕೆ, ನೃತ್ಯವೆಂದರೆ ನಮ್ಮ ದೃಷ್ಟಿಗೊದಗುವ ನೋಟಕ್ಕೆ ನಮ್ಮ ಚರಣಗಳಯ ಬಿಡಿಸುವ ಚಿತ್ತಾರವಲ್ಲವೇನು? ಕಲ್ಲು….? ಚಲನೆಯಿಲ್ಲದ ಸ್ತಬ್ಧತೆಯ ಪ್ರತೀಕ. ಚಲನೆಯನ್ನು ಮರೆತ ಈ ಶಿಲ್ಪಗಳು ಶಾಂತಲೆಯ ಹೆಪ್ಪುಗೆಟ್ಟಿದ ಕನಸುಗಳಂತೆ ಕಾಣುತ್ತವೆ.

ನರ್ತಕಿ ತನ್ನ ನರ್ತನದಲ್ಲಿ ನತ್ತದ ಒಂದು ಭಂಗಿಯಲ್ಲಿ ಸ್ಥಿರವಾಗಿ, ಪ್ರೇಕ್ಷಕರ ಚಪ್ಪಾಳೆಗಳ ಸುರಿಮಳೆಯಾದ ನಂತರ ಮತ್ತಷ್ಟು ಉತ್ಸಾಹದೊಂದಿಗೆ ನರ್ತಿಸುತ್ತಾಳೆ. ಆದರೆ ಈ ಶಿಲ್ಪಗಳು? ಎಷ್ಟೊಂದು ಜನರ ಮೆಚ್ಚುಗೆಯ ನೋಟದ ನಂತರವೂ ಚಲಿಸದೇ ಮೌನವಾಗಿ ದುಃಖಿಸುವಂತೆ ಅನಿಸುತ್ತವೆ. ನೋಟಕ್ಕೆ ನಿಲುಕುವ ದೃಶ್ಯಗಳಿಗೆ ಹೆಜ್ಜೆಯನ್ನಿಡಲಾಗದೇ ಸ್ಥಬ್ದಗೊಂಡಿವೆ. ಕಲೆಯ ಸಾರ್ಥಕತೆಯ ಹುಡುಕಾಟಕ್ಕೆ ಶಾಂತಲೆ ಆ ಕ್ಷಣದ ತಂಗಾಳಿಯೇನೋ ನಿಜ. ಆದರೆ ಜೀವಂತ ನರ್ತನಕ್ಕೆ ಸ್ತಭ್ದವಾದ ಚಿತ್ರ ಎಂದಿಗೂ ಪರ್ಯಾಯವಾಗಲಾರದು.

ಹುಡುಗಿ ಗೃಹಿಣಿಯಾದೊಡನೇ ಅವಳೊಳಗಿನ ನರ್ತಕಿ, ಹಾಡುಗಾರ್ತಿ, ಚಿತ್ರಕಾರ್ತಿ, ಕ್ರೀಡಾಪಟು, ವಾಗ್ಮಿ ಎಲ್ಲರೂ ಕಾಣೆಯಾಗುವುದು ಇಂದಿಗೂ ನಡೆಯುತ್ತಲೇ ಇದೆ. ಶಾಂತಲೆಗಾದರೆ ತನ್ನೊಳಗಿನ ನೃತ್ಯಗಾತಿಯನ್ನು ಶಿಲ್ಪವಾಗಿಸುವ ಸ್ವಾತಂತ್ರ್ಯವಾದರೂ ಇತ್ತು. ಆದರೆ ಇವರಿಗೆ ಆ ಸೌಭಾಗ್ಯವೂ ಇಲ್ಲ. ನಮ್ಮೆಜಮಾನರಿಗೆ ಅದೆಲ್ಲಾ ಇಷ್ಟವಿಲ್ಲ ಅಂತಲೋ, ಮದುವೆಯಾದ ಮೇಲೆ ಅವುಗಳಿಗೆಲ್ಲ ಸಮಯವೆಲ್ಲಿದೆ ಎಂತಲೋ, ನಮ್ಮದು ಬಹಳ ಗೌರವಾನ್ವಿತ ಮನೆತನ ಎಂಬ ಹೆಚ್ಚುಗಾರಿಕೆಯ ನುಡಿಯಿಂದಲೋ ತಾವು ಏನಾಗಿದ್ದೆವೆಂಬುದರ ಕುರುಹೂ ಇಲ್ಲದಂತೆ ಮರೆಯಾಗಿಬಿಡುವ ಈ ಕಲಾವಿದೆಯರನ್ನು ಹುಡುಕುವ ಪರಿಯೆಂತು? ಶಾಂತಲೆಯರು ಕಾಣೆಯಾಗುತ್ತಲೇ ಇರುತ್ತಾರೆ.

‍ಲೇಖಕರು avadhi

August 10, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. ಮಾಯಕಾರ

    ನಾನು ನಿಮ್ಮ ದೊಡ್ಡ ಅಭಿಮಾನಿ ಮೇಡಂ.. ದಯವಿಟ್ಟು ಶಾಂತಲೆಯು ಜೀವ ತೆಗೆದು ತೆಗೆದುಕೊಂಡ ಕಥೆಯನ್ನು ಬರೆಯಿರಿ. ..

    ಪ್ರತಿಕ್ರಿಯೆ
    • Sudha Hegde

      “ತುಂಬಾ ಧನ್ಯವಾದಗಳು ತಮ್ಮ ಪ್ರೀತಿಗೆ
      ಆ ದುರಂತ ಬರೆಯಲು ಮನಸ್ಸಾಗುತ್ತಿಲ್ಲ

      ಪ್ರತಿಕ್ರಿಯೆ
  2. Sarojini Padasalgi

    ಗೊತ್ತಿಲ್ಲ , ಯಾಕೋ ಅರಿಯದೇ ಕಣ್ಣು ಹನಿಯಿತು.ನಿಜ ಶಾಂತಲೆ ಬಂದಿಯಾದಳು ಅಂತ:ಪುರದೊಳಗೆ.ಒಂದೊಂದೂ ಹೆಣ್ಣಿನ ಕಥೆ ಇದು.ಎಷ್ಟೋ ಹಣ್ಣುಗಳು ತೊಟ್ಟು ಕಳಚಿ ಮಣ್ಣು ಸೇರುತ್ತವೋ ಬಲ್ಲವರಾರು? ತಮ್ಮನ್ನೇ ತಾವು ಬಂದಿಯಾಗಿಸಿ ಮನದ ಬಾಗಿಲಿಗೆ ಬೀಗ ಜಡೆಯುತ್ತಾರೋ , ಎಲ್ಲಿದೆ ಲೆಕ್ಕ? ಬದಲಾದೀತಾ ಈ ರೀತಿ ನೀತಿ? ಕಾಲವೇ ಉತ್ತರ ಹೇಳಬೇಕು.ಕಾಯೋಣ.

    ಪ್ರತಿಕ್ರಿಯೆ
    • Sudha Hegde

      ಹೌದು. ಕಲಾವಿದೆಯರೆಲ್ಲ ಮದುವೆಯ ನಂತರ ಕಾಣೆಯಾಗುವವರೆ…

      ಪ್ರತಿಕ್ರಿಯೆ
  3. Pratibha Kudtadka

    ಹಾಗೆ ಕಾಣೆಯಾಗುವವರೆಲ್ಲ ಶಾಂತಲೆಯರಲ್ಲ, ಕಲೆಯೇ ಉಸಿರಾದ ನಿಜವಾದ ಶಾಂತಲೆಯರು ಕಲೆಯನ್ನು ತ್ಯಜಿಸಿ ಬಾಳಲಾರರು. ಯಾವ ಬೇಡಿಯೂ ಅವರನ್ನು ತಡೆಯಲಾರದು, ತಡೆದಿಲ್ಲ… ಅಲ್ಲವೇ?

    ಪ್ರತಿಕ್ರಿಯೆ
    • Sudha Hegde

      ಶಾಂತಲೆ ತ್ಯಜಿಸಿದಳು
      ಅವಳ ಅಂತ್ಯವೂ ದುರಂತವೆ

      ಪ್ರತಿಕ್ರಿಯೆ
  4. Sarojini Padasalgi

    ನಿಜ ನೀವು ಹೇಳುವುದು ಪ್ರತಿಭಾ ಅವರೇ.ಕಲೆಯನ್ನು ತ್ಯಜಿಸಿ ಬಾಳಲಾರದೇ ಬಾಳುವ ಜೀವಿಗಳ ಲೆಕ್ಕ ಇಟ್ಟವರಾರು? ಎಷ್ಟು ರೀತಿಯಿಂದ ಹೋರಾಡಿ,ಗುದ್ದಾಡಿದರೂ ಅವಕಾಶ ಸಿಗದೇ ಮುರುಟಿ ಹೋದ ಪ್ರತಿಭೆ ಗಳೆಷ್ಟು ಬಲ್ಲವರಾರು?ನೃತ್ಯ ನಮಗೆ ಹೇಳಿಸಿದ್ದಲ್ಲ ಅಂತ ಸ್ವಪ್ರಯತ್ನದಿಂದ ವರ್ತಿಸುತ್ತಿದ್ದ ಬಾಲೆಯ ಕುಣಿತ ನಿಲ್ಲಿಸಿದ ದೃಷ್ಟಾಂತ ಕಣ್ಣ ಮುಂದೆಯೇ ಇದೆ ಇನ್ನೂ.ರೂಂ ಬಾಗಿಲು ಹಾಕಿ ದೊಡ್ಡವರು ಕಣ್ತಪ್ಪಿಸಿ ತೃಪ್ತಿ ಮಾಡುವಷ್ಟು ನರ್ತಿಸಿ ಮನ ತುಂಬುವ ಷ್ಟು ಕಣ್ಣೀರು ಸುರಿಸಿ ಹೊರಬಂದವರನ್ನು ಬಲ್ಲೆ.ಸುಮಧುರ ಕಂಠ ,ಪ್ರತಿಭೆ ಇದ್ದರೂ ಅವಕಾಶ ಸಿಗದೇ ನರಳುವವರನ್ನು ಬಲ್ಲೆ.ಇವರೆಲ್ಲ ಕಲೆಯನ್ನು ತ್ಯಜಿಸಿ ಬಾಳಲಾರದೇ ಬಾಳುವವರೇ.ಬೇಡಿ, ಬೀಗ ಮುರಿಯಲಾರದೇ ನೊಂದವರು ,ಅಸಹಾಯಕರು.ಬರೀ ನೃತ್ಯ ಸಂಗೀತ ಅಲ್ಲ, ಪ್ರತಿ ಕಲೆಗಾರರ ಉದಾಹರಣೆ ಲೆಕ್ಕ ಸಿಗದಷ್ಟು.ಎಲ್ಲ ಸರಿಹೋಗಿ ಬೆಳಕಿಗೆ ಬರುವ ಅದೃಷ್ಟವಂತರು ಇಲ್ಲ ಅಂತಲ್ಲ.ಆದರೆ ಮುರುಟಿ ಹೋದ ಪ್ರತಿಭೆ ಗಳು ಸಾಕಷ್ಟು.ಕಾಲ ಬದಲಾಗಬೇಕು, ಅಷ್ಟೇ.ಮನುಷ್ಯ ತನ್ನ ತಾ ಅರಿಯಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: