ಕಾಡುವ ಕವಿತೆಗಳು ಭಾಗ –2…

ಪ್ರಿಯದರ್ಶಿನಿ ಮತ್ತು ಮೇಘದರ್ಶಿನಿ ಶೆಟ್ಟರ

ನಾವು ಪ್ರಾಥಮಿಕ ಶಾಲೆಯಲ್ಲಿದ್ದಾಗ ಮಮ್ಮಿ ನಮಗೆ ಕನ್ನಡ, ಇಂಗ್ಲಿಷ್ ಕಥೆಗಳನ್ನು, ಅವರು ಪಾಠ ಮಾಡುವ ಪಿ.ಯು.ಸಿ., ಡಿಗ್ರಿ ಪಠ್ಯಪುಸ್ತಕಗಳಲ್ಲಿನ ಪಾಠಗಳನ್ನು ರಾತ್ರಿ ಮಲಗುವಾಗ ಹೇಳುತ್ತಿದ್ದರು. ಆ ಮೂಲಕ ಸಾಹಿತ್ಯದ ಅಭಿರುಚಿ ಬೆಳೆಯಿತು. ಓದುವ, ಕೇಳುವ ಕೌತುಕಗಳು ನಮ್ಮಲ್ಲಿ ಹೆಚ್ಚಾದವು. ಧಾರವಾಡದ ಕಲ್ಯಾಣನಗರಕ್ಕೆ ಅಂಟಿಕೊಂಡ ನಿರ್ಮಲನಗರದಲ್ಲಿನ ಶಾಂತಿ ಸದನ ಶಾಲೆಯಲ್ಲಿ ನಾವಿಬ್ಬರೂ ಕಲಿತೆವು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಶುರುವಾಗಿತ್ತು (1st-4th). ನಂತರ ಇಂಗ್ಲಿಷ್ ಮಾಧ್ಯಮದಲ್ಲಿದ್ದಾಗಲೂ ಸಹ ಕನ್ನಡ ಎರಡನೆಯ ಭಾಷೆಯಾಗಿತ್ತು. ಶಾಲೆಯಲ್ಲಿ ನಮಗೆ ಅದ್ಭುತ ಶಿಕ್ಷಕರು, ಕನ್ನಡ ಪುಸ್ತಕಗಳು ದೊರೆತ ಕಾರಣ ಪಠ್ಯೇತರ ಓದು-ಬರಹಗಳಲ್ಲಿ ಆಸಕ್ತಿ ಹೆಚ್ಚಾಗತೊಡಗಿತ್ತು.

ವಾರಕ್ಕೊಂದು ದಿನ ʼಲೈಬ್ರರಿ ಪೀರಿಯಡ್ʼ‌ ಇರುತ್ತಿತ್ತು. ಪುಟ್ಟ ಪುಟ್ಟ ಕನ್ನಡ ಪುಸ್ತಕಗಳನ್ನು ನಮ್ಮ ರೋಲ್‌ ನಂಬರ್‌ ಕರೆದು ಕೊಡುತ್ತಿದ್ದರು. ಕೊಟ್ಟ ಪುಸ್ತಕಗಳನ್ನು ಮುಂದಿನ ವಾರದೊಳಗೆ ಓದಿ ಮುಗಿಸಿ ಅದನ್ನು ಕೊಟ್ಟು ಬೇರೆ ಪುಸ್ತಕ ಪಡೆಯುತ್ತಿದ್ದೆವು. ಇಲ್ಲದಿದ್ದರೆ ʼಕಂಟಿನ್ಯೂʼ ಎನ್ನುತ್ತಿದ್ದೆವು. ದಿನಕಳೆದಂತೆ ಒಂದೇ ವಾರದಲ್ಲಿ ನಮ್ಮ ಪುಸ್ತಕ ಓದಿ ಮುಗಿಸಿ ಗೆಳೆಯರೊಡನೆ ವಿನಿಮಯ ಮಾಡಿಕೊಂಡು ಒಟ್ಟು ಎರಡು ಪುಸ್ತಕಗಳನ್ನು ಓದುತ್ತಿದ್ದೆವು. ಕನ್ನಡ ಮಾಧ್ಯಮದಲ್ಲಿ ಕಲಿತಿದ್ದು ಎಂದೂ ನಮಗೆ ಇಂಗ್ಲಿಷ್ ಭಾಷೆ ಹಾಗೂ ಇತರ ವಿಷಯಗಳ ಕಲಿಕೆಗೆ ಯಾವತ್ತೂ ತೊಡಕಾಗಲಿಲ್ಲ. ಹೈಸ್ಕೂಲ್‌ ಹಂತದಲ್ಲಿ ಕಲಿಕೆಯ ಮಾಧ್ಯಮ ಬದಲಾದಾಗಲೂ ಸಹ ಯಾವ ಸಮಸ್ಯೆಯೂ ಆಗಲಿಲ್ಲ. ಯಾಕೆಂದರೆ ಕಲಿಯುವುದು ಇಂಗ್ಲಿಷ್ ಮೀಡಿಯಂ ಆದರೂ ಕೂಡ ಅರ್ಥವಾಗುವುದು, ಪುನರಾವರ್ತನೆಗೊಳ್ಳುವುದು ಕನ್ನಡದಲ್ಲೇ ಆಗುತ್ತಿತ್ತು.

ಮಮ್ಮಿ ತಮ್ಮ ರಜಾ ದಿನಗಳಲ್ಲಿ ನಮಗೆ ಹೆಚ್ಚಿನ ಸಮಯ ಕೊಡುತ್ತಿದ್ದರು. ಇದೆಲ್ಲದರ ಮಧ್ಯೆ ಅವರ ಜವಾಬ್ದಾರಿಗಳು ಹೆಚ್ಚುತ್ತಿದ್ದವು. ನಾವೂ ಬೆಳೆಯುತ್ತಿದ್ದೆವು. ಹೀಗಾಗಿ ಡಾಕ್ಟರೇಟ್‌ ಪದವಿಯ ಕನಸೊಂದು ಉಳಿದೇ ಬಿಟ್ಟಿತ್ತು. ಪಪ್ಪ ಪಿಎಚ್.ಡಿ. ಮುಗಿಸಿದಾಗ ನಾನು ನಾಲ್ಕನೇ ತರಗತಿಯಲ್ಲಿದ್ದೆ. ಮನೆಯಲ್ಲಿ ಒಂದು ಕೋಣೆಯಲ್ಲಿ ಹಲವು ಪುಸ್ತಕದ ರ್ಯಾಕ್‌ ಇದ್ದವು. ಸ್ವಂತ ಮನೆ ಕಟ್ಟಿಸಿದ ಮೇಲಂತೂ ಪುಟ್ಟ ಗ್ರಂಥಾಲಯವೇ ಆಗಿತ್ತು ನಮ್ಮ ಮನೆ. ಈಗೀಗ ಗ್ರಂಥಾಲಯದ ಜೊತೆಗೆ ಸಣ್ಣ ಆರ್ಟ್‌ ಗ್ಯಾಲರಿ ಸಹ ಆಗಿದೆ! ಅಷ್ಟೊಂದು ಪೇಂಟಿಂಗ್‌ ಇವೆ. ಮಣ್ಣಿನಲ್ಲಿ, ಕಲ್ಲು- ಕಟ್ಟಿಗೆಯಳ್ಳರಳಿದ ಅನೇಕ ಕಲಾಕೃತಿಗಳನ್ನು ಸಂಗ್ರಹಿಸುವುದು ಪಪ್ಪನ ಇಷ್ಟದ ಹವ್ಯಾಸಗಳಲ್ಲೊಂದು. ಆಗ ಪಪ್ಪ ಮನೆಯ ಕೆಲಸಗಳಲ್ಲಿ, ರಂಗಭೂಮಿ ಕಾರ್ಯಕ್ರಮಗಳು ಹಾಗೂ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಂಘಟಕ- ನಿರೂಪಕರಾಗಿ ಬಹಳ ಚಟುವಟಿಕೆಯಿಂದ ಇರುತ್ತಿದ್ದರು. ಅವರು ಒಳ್ಳೆಯ ಮಾತುಗಾರರೂ ಕೂಡ. 

ಶಾಲೆಯಲ್ಲಿ ಪೇರೆಂಟ್ಸ್‌ ಮೀಟಿಂಗ್‌ ಇದ್ದಾಗ ಮಮ್ಮಿ ಬರುತ್ತಿದ್ದದ್ದು ಅಪರೂಪ. ಆದರೆ ಸಮಯ ಸಿಕ್ಕರೆ ಖಂಡಿತ ಬರುತ್ತಿದ್ದರು. ಉಳಿದಂತೆ ನಾಟಕ, ಸಂಗೀತ, ಡಾನ್ಸ್‌ ಕಾರ್ಯಕ್ರಮಗಳಲ್ಲಿ, ಶಾಲಾ ವಾರ್ಷಿಕೋತ್ಸವದಂತಹ ಸಂದರ್ಭದಲ್ಲಿ ಹೇರ್‌ ಸ್ಟೈಲ್‌ ಮಾಡುತ್ತಿದ್ದರು. ಆದರೆ ಸೀರೆ, ಮೇಕಪ್‌, ವಿವಿಧ ಕಾಸ್ಟ್ಯೂಮ್‌ ಹಾಕಿ ತಯಾರಾಗಲು ಸಹಾಯಕ್ಕೆ ಬರುತ್ತಿದ್ದವರು ಸಹಪಾಠಿಗಳ ತಾಯಿ- ಸಹೋದರಿಯರು, ಶಿಕ್ಷಕಿಯರು. ಉದ್ಯೋಗಸ್ಥ ತಾಯಂದಿರು ಸಂಜೆ ಬರುತ್ತಿದ್ದರು. ಕಾರ್ಯಕ್ರಮಕ್ಕೆ ಮುಂಚೆ ಸರದಿಯಲ್ಲಿ ಕಾಯುತ್ತಿದ್ದಾಗ ಬಂದು ಭೇಟಿಯಾಗಿ, ಚೊಕೊಲೆಟ್‌ ತಿನ್ನಿಸಿ, ನೀರು ಕೊಟ್ಟು, ಲಿಪ್‌ಸ್ಟಿಕ್‌ ಸರಿಮಾಡಿ ʼಇಂತಹ ಸಾಲಿನಲ್ಲಿ ಕುಳಿತಿದ್ದೇವೆʼ ಅಂತ ಹೇಳಿ ಹೋಗುತ್ತಿದ್ದರು. ನಾವು ಸ್ಟೇಜ್‌ ಮೇಲೆ ಹಾಡುತ್ತ, ಕುಣಿಯುತ್ತ ʼಆ ಸಾಲಿನಲ್ಲಿʼ ಮನೆಯವರನ್ನೆಲ್ಲ ಹುಡುಕುತ್ತಿದ್ದೆವು! ಡಾನ್ಸ್‌ ಕ್ಲಾಸ್‌/ ಮ್ಯೂಸಿಕ್‌ ಕ್ಲಾಸ್‌ಗೆ ಕೆಲ ತಾಯಂದಿರು ಮಕ್ಕಳನ್ನು ಕರೆತಂದು ಕ್ಲಾಸ್‌ ಮುಗಿಯುವವರೆಗೆ ಅಲ್ಲೇ ಕುಳಿತಿರುತ್ತಿದ್ದರು. ನಮ್ಮಂತವರು ಸೈಕಲ್ ನಲ್ಲಿ ಬಸ್ಸಲ್ಲಿ ಹೋಗಿ ಬಂದು ಮಾಡಿ ಸ್ವಲ್ಪ ಇಂಡಿಪೆಂಡೆಂಟ್‌ ಆಗಲು ಕಲಿತೆವು. 

ಮಮ್ಮಿ ಆಗ ಹಳಿಯಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ್‌ (ಇಂಗ್ಲಿಷ್‌ ವಿಭಾಗ) ಆಗಿದ್ದರು. ಅವರ ಅಪಾಯಿಂಟ್ಮೆಂಟ್‌ ಆದಾಗ ನಾನು ೯ನೇ ತರಗತಿಯಲ್ಲಿದ್ದೆ. ನಾನು ಹೆಚ್ಚು ಹಠ ಮಾಡುತ್ತಿರಲಿಲ್ಲ. ಆದರೆ ಮೇಘ ಅವಳ ವೇದಿಕೆ ಕಾರ್ಯಕ್ರಮಗಳು, ಪರೀಕ್ಷೆಗಳಿದ್ದಾಗ ಮಮ್ಮಿ ಬರದೇ ಹೋದರೆ ಅತ್ತುಬಿಡುತ್ತಿದ್ದಳು. ಜೊತೆಗೆ ʼಅಕ್ಕನಿಗಷ್ಟೇ ಸಮಯಕೊಡುತ್ತೀ ನನ್ನ ಜೊತೆಗೂ ಬಾʼ ಎಂದು ಹಠ ಹಿಡಿಯುತ್ತಿದ್ದಳು. ಅವಳಿಗೆ ಸಂಗೀತದಲ್ಲಿ ಆಸಕ್ತಿ ಹೆಚ್ಚು. ಒಮ್ಮೆ ಅವಳ ಮ್ಯೂಸಿಕ್‌ (ಜ್ಯೂನಿಯರ್)‌ ಪರೀಕ್ಷೆ ಇತ್ತು. ಆಗ ೮ನೇ ತರಗತಿಯಲ್ಲಿದ್ದಳು. ಅದಕ್ಕಾಗಿ ಅರ್ಧದಿನ ರಜೆ ಪಡೆದು ಅವಳ ಜ್ಯೂನಿಯರ್ ಪರೀಕ್ಷೆ ಇದ್ದಾಗ ಅವಳೊಡನೆ ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದರು.

 ೨೦೦೮ರಲ್ಲಿ ಅನಾರೋಗ್ಯದಿಂದಾಗಿ ಗೌರಕ್ಕ ಅಮ್ಮ ತೀರಿಹೋದರು. ಆಮೇಲೆ ಎರಡೇ ತಿಂಗಳಲ್ಲಿ ಹೊಸಮನೆಯ ಗೃಹಪ್ರವೇಶವಾಯಿತು. ಆಗಿನಿಂದ ಅಡುಗೆ ಕೆಲಸದವರು ಇರುವುದು ಅನಿವಾರ್ಯವಾಗಿತ್ತು. ಗೌರಕ್ಕ ಅಮ್ಮ ಅಡುಗೆ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಅವರ ಅಡುಗೆ ಕೆಲಸಗಳನ್ನು ನೋಡಿ ನಾನು ಬಹಳ ಬೇಗನೇ ಅಡುಗೆ ಕಲಿತದ್ದು. ಪಪ್ಪ ಕೂಡ ಮನೆಕೆಲಸಗಳಲ್ಲಿ ಮೊದಲಿನಿಂದ ನೆರವಾಗುತ್ತಿದ್ದರು. ಮನೆಯಲ್ಲಿ ಎಲ್ಲ ಕೆಲಸಗಳನ್ನು ಎಲ್ಲರೂ ಕಲಿತು ಹಂಚಿಕೊಂಡರೆ ಒತ್ತಡ ಕಡಿಮೆಯಾಗುವುದರ ಜೊತೆಗೆ ಹುಡುಗ- ಹುಡುಗಿಯರಲ್ಲಿ ಜವಾಬ್ದಾರಿಯ ಅರಿವು ಉಂಟಾಗಿ ಅವರೂ ಸ್ವಲ್ಪ ಇಂಡಿಪೆಂಡೆಂಟ್‌ ಆಗುತ್ತಾರೆ. ಕೆಲವೊಮ್ಮೆ ಮನೆಕೆಲಸದವರು, ಅಡುಗೆಯವರು ಬರದೇ ಇದ್ದಾಗಲೂ ಹೇಗೋ ಮ್ಯಾನೇಜ್‌ ಮಾಡುವುದು ಸುಲಭವಾಗುತ್ತದೆ. ಮುಖ್ಯವಾದ ಸಂಗತಿಯೆಂದರೆ ಉದ್ಯೋಗಸ್ಥ ಮಹಿಳೆಯರನ್ನು ಹಾಗೂ ಗೃಹಿಣಿಯರನ್ನು ಸಮನಾಗಿ ಕಾಣುವುದನ್ನು ನಾವು ಕಲಿಯಬೇಕು. ಕೆಲ ಗೃಹಿಣಿಯರು ತಮಗೆ ಸಿಕ್ಕ ಸಮಯವನ್ನು ಓದು- ಬರಹ, ಚಿತ್ರಕಲೆ, ಕಸೂತಿ, ಸಂಗೀತ, ಮುಂತಾದ ಹವ್ಯಾಸಗಳಲ್ಲಿ ತೊಡಗುವಿಕೆಗೆ ಬಳಸುತ್ತಾರೆ. ಹೀಗೆ ಸಮಯದ ಸದ್ವಿನಿಯೋಗ ಮಾಡುವುದು ಪ್ರಶಂಸನೀಯ. 

ನಾನು ಬಿ.ಎಸ್ಸಿ.ಯಲ್ಲಿದ್ದಾಗ ೨೦೧೪ರಲ್ಲಿ ಮಮ್ಮಿ ಪಿಎಚ್.ಡಿ. ರಿಜಿಸ್ಟ್ರೇಷನ್‌ ಮಾಡಿಸಿದರು. ಈಗಿನ ಸೆಮೆಸ್ಟರ್‌ ಸಿಸ್ಟಂನ ವಿದ್ಯಾರ್ಥಿಗಳೊಡನೆ ಸ್ಪರ್ಧಿಸುವುದು ಸರಳವಲ್ಲ. ಆದರೂ ಸಹ ಆಪ್ಟಿಟ್ಯೂಡ್‌ ಮತ್ತು ತಮ್ಮ ವಿಷಯದಲ್ಲಿ ಒಳ್ಳೆಯ ಅಂಕ ಬಂದು ಸೀಟ್‌ ಪಡೆದರು. ರಜೆ ಪಡೆದು, ಕಾಲೇಜ್‌ ಟೈಮ್‌ ಟೇಬಲ್‌ ನಲ್ಲಿ ಅಡ್ಜಸ್ಟ್‌ ಮಾಡಿಕೊಂಡು ಹೇಗೋ ಕೋರ್ಸ್‌ವರ್ಕ ಮುಗಿಸಿಕೊಂಡರು. ಹಗಲು ರಾತ್ರಿ ಮಾಹಿತಿ ಕಲೆಹಾಕುವಿಕೆ, ಓದು ಬರಹ, ಹೀಗೆ ಮೂರ್ನಾಲ್ಕು ವರ್ಷಗಳು ಕಳೆದವು. ಧಾರವಾಡಕ್ಕೆ ವರ್ಗಾವಣೆಯಾಯಿತು. ಅವರ ಪಿಎಚ್.ಡಿ. ವಿಷಯ ಮನೋಹರ ಮಳಗಾಂವಕರ್‌ ಅವರ ಕಾದಂಬರಿಗಳಲ್ಲಿನ ಐತಿಹಾಸಿಕ ಅಂಶಗಳ ಕುರಿತಾಗಿತ್ತು (Historical elements in Manohar Malgonkar’s writings). ತಮ್ಮ ಥೀಸಿಸ್‌ ತಾವೇ ಟೈಪ್‌ ಮಾಡುತ್ತಿದ್ದರು.

ಟೈಪಿಂಗ್‌, ತಿದ್ದುಪಡಿ ಮಾಡುವಾಗ ನಾವೂ ಸಹಾಯ ಮಾಡುತ್ತಿದ್ದೆವು. ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯಾ ನಂತರದ ವಿದ್ಯಮಾನಗಳು, ಗಾಂಧಿಹತ್ಯೆ- ಹೀಗೆ ಮಳಗಾಂವಕರ್‌ ಅವರ ಇತರ ಕೃತಿಗಳು, ಇವೆಲ್ಲವುಗಳನ್ನು ಕುರಿತ ಬೇರೆ ಲೇಖಕರ ಪುಸ್ತಕಗಳು, ಲೇಖನಗಳು – ಹೊಸ ಶಬ್ದಗಳು, ಹೊಸ ವಿಷಯಗಳನ್ನು ಕಲಿಯುತ್ತಿದ್ದೆವು. ನಾನು ಹತ್ತನೇ ತರಗತಿಯಲ್ಲಿದ್ದಾಗ ಪಪ್ಪ ʼದಂಗೆಯ ದಿನಗಳುʼ ಕಾದಂಬರಿಯನ್ನು ಓದಲು ಕೊಟ್ಟರು (ಮೂಲ: ಮನೋಹರ ಮಳಗಾಂವಕರ್‌ ಅವರ Devil’s wind, ಅನುವಾದ: ರವಿ ಬೆಳಗೆರೆ). ಸಿಪಾಯಿದಂಗೆಯ ಬಗ್ಗೆ ಸಮಾಜವಿಜ್ಞಾನದಲ್ಲಿ ಪಾಠವೊಂದಿತ್ತು. ಅದಕ್ಕೆ ಪೂರಕವಾಗಿ ಈ ಪುಸ್ತಕದ ಓದು ಬಹಳ ಖುಷಿ ಕೊಟ್ಟಿತ್ತು. ಕೃತಿಯ ನಿರೂಪಣಾ ಶೈಲಿ ಇಷ್ಟವಾಗಿತ್ತು.

‍ಲೇಖಕರು Admin

November 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: