ಕಾಡುವ ‘ಏಕತಾರಿ’

ಪ್ರಸನ್ನ ಸಂತೇಕಡೂರು

ಉತ್ತರ ಕರ್ನಾಟಕದ ಗ್ರಾಮಗಳ ಜನ ಜೀವನವನ್ನು ಚಿತ್ರಿಸಿರುವ ಚನ್ನಪ್ಪ ಕಟ್ಟಿಯವರ ಏಕತಾರಿ ಕಥಾಸಂಕಲನ ಕನ್ನಡ ಸಾಹಿತ್ಯದಲ್ಲಿ ಇತ್ತೀಚಿಗೆ ಬಂದಿರುವ ಉತ್ತಮ ಮತ್ತು ಒಳ್ಳೆಯ ಕಥಾಸಂಕಲನಗಳಲ್ಲಿ ಒಂದು ಎಂದು ಹೇಳಬಹುದು. ಇಲ್ಲಿ ಉಪಮೆಗಳು ಹೆಚ್ಚಾಗಿ ಸಿಗುತ್ತವೆ. ಇಲ್ಲಿನ ಭಾಷೆ ಕೂಡ ಗದಗ್ ಮತ್ತು ಬಾಗಲಕೋಟೆ ಭಾಗಗಳದ್ದು.

ಈ ಕಥಾಸಂಕಲನದಲ್ಲಿ ರಾವ್ ಬಹಾದ್ದೂರ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಆಲನಹಳ್ಳಿ ಶ್ರೀಕೃಷ್ಣ ಅವರ ಸಾಹಿತ್ಯದಲ್ಲಿ ಬರುವ ಹಳ್ಳಿಗಳ ಚಿತ್ರಣಗಳನ್ನು ಕಾಣಬಹುದು. ಚನ್ನಪ್ಪ ಕಟ್ಟಿಯವರು ತುಂಬಾ ವರ್ಷದಿಂದ ಕತೆಗಳನ್ನು ಬರೆಯುತ್ತಿದ್ದರೂ ಅವರಿಗೆ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟ ಕೃತಿ ಏಕತಾರಿ ಕಥಾಸಂಕಲನ ಎಂದು ಕಾಣುತ್ತದೆ.

ಈ ಕಥಾಸಂಕಲನಕ್ಕೆ ಈಗಾಗಲೇ ಅಮ್ಮ ಪ್ರಶಸ್ತಿ ಮತ್ತು ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಸಿಕ್ಕಿರುವುದು ಈ ಕೃತಿಯ ಮಹತ್ವವನ್ನು ತೋರಿಸುತ್ತದೆ. ಈ ಕಥಾಸಂಕಲನದ ಮುನ್ನುಡಿಯನ್ನು ಇನ್ನೊಬ್ಬ ದೊಡ್ಡ ಸಾಹಿತಿ ಎಸ್.ಎಫ್. ಯೋಗಪ್ಪನವರ್ ಬರೆದಿದ್ದಾರೆ. ಮುನ್ನುಡಿಯಲ್ಲಿ ಯೋಗಪ್ಪನವರ್ “ಚನ್ನಪ್ಪ ಕಟ್ಟಿ ನನ್ನ ಕಣ್ಣೆದುರು ಹೆಮ್ಮರವಾಗಿ ಬೆಳೆದವರು. ನಾವಿಬ್ಬರೂ ಒಂದೇ ಪ್ರದೇಶದವರು. ಅವರ ಬರವಣಿಗೆಯಲ್ಲಿ ನಮ್ಮ ನೆಲದ ಕೂಗನ್ನು ಬಿಟ್ಟರೆ ಮತ್ತೇನೂ ಕೇಳಿಸಲಾರದು!

“ಏಕತಾರಿ ಕಥಾಸಂಕಲನದ ಕತೆಗಳಲ್ಲಿ ನಮ್ಮ ಪ್ರದೇಶದ ಎಲ್ಲ ಪಾತ್ರಗಳು ಬಂದು ಡೇರೆ ಹಾಕಿವೆ, ಅವುಗಳು ಗುಡಾರ, ಗುಡಿಸಲು, ಕಂಬಳಿಗಳೊಂದಿಗೆ ಬಂದಿವೆ. ಜೊತೆಗೆ ನಂಬಿಕೆಗಳ ನೀಲಿ ಆಕಾಶವನ್ನೇ ಎಳೆದು ತಂದಿವೆ. ಹುಲುಮಾನವರ ಅಭೀಷ್ಟೆಯ ಹೊಸಲೋಕ ಸೃಷ್ಟಿಯಾಗಿದೆ” ಎಂದು ಹೇಳುತ್ತಾರೆ.

ಇಲ್ಲಿರುವ ಕತೆಗಳು ಓದುಗರನ್ನ ಮಂತ್ರಮುಗ್ದರನ್ನಾಗಿಸುತ್ತವೆ. ಕೊನೆ ತನಕ ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ.

ಈ ಕಥಾಸಂಕಲನದಲ್ಲಿ ಒಟ್ಟು ಒಂಭತ್ತು ಕತೆಗಳಿವೆ.

೧. ಜುಮ್ಮಣ್ಣನ ಕಂಚಿನ ಮೂರ್ತಿ
೨. ರತ್ನಾಗಿರಿ ಎಂಬ ಮಾಯೆ
೩. ಬಾಲಕನ ಕಣ್ಣಲ್ಲಿ ಕಂಡ ಸಾವು
೪. ಅಟ್ಟ
೫. ಹೊಸ್ತಿಲೊಳಗಣ ಹುತ್ತ
೬. ಊರ್ಧ್ವರೇತ
೭. ಸುಖದ ನಾದ ಹೊರಡಿಸುವ ಕೊಳಲು
೮. ಏಕತಾರಿ
೯. ರಾಯಪ್ಪನ ಬಾಡಿಗೆ ಸಾಯಿಕಲ್ಲು.

ಎಲ್ಲಾ ಕತೆಗಳಲ್ಲೂ ಹಳ್ಳಿಯ ಚಿತ್ರಣ ತುಂಬಾ ಸುಂದರವಾಗಿ ಮೂಡಿಬಂದಿದೆ. ಕೆಲವು ಕತೆಗಳಲ್ಲಿ ಮಾಸ್ತಿಯವರ ಪ್ರಭಾವವಿದೆ ಎಂದು ಕಾಣುತ್ತದೆ. ಇತ್ತೀಚೆಗೆ ಬರೆಯುತ್ತಿರುವ ಕೆಲವು ಜನ ನಗರ ಕೇಂದ್ರಿತ ಕತೆಗಳನ್ನು ಬರೆಯುತ್ತಿದ್ದರೂ ಹೆಚ್ಚು ಪ್ರಮಾಣದ ಜನರೂ ತಾವು ಹುಟ್ಟಿ ಬೆಳೆದ ಪರಿಸರ, ತಮ್ಮ ಹಳ್ಳಿಯ ಬದುಕು, ಪ್ರಾದೇಶಿಕತೆಯ ಸೊಗಡನ್ನು ತಮ್ಮ ಸಾಹಿತ್ಯದಲ್ಲಿ ತುಂಬಾ ಚೆನ್ನಾಗಿ ಚಿತ್ರಿಸುತ್ತಿದ್ದಾರೆ. ಈ ಕಥಾಸಂಕಲನ ಕೂಡ ಆ ಸಾಲಿಗೆ ಸೇರುತ್ತದೆ.

ಏಕತಾರಿ ಎಂಬ ಶೀರ್ಷಿಕೆಯ ಕತೆಯಲ್ಲಿ ಚಂದ್ರಪ್ಪ ಎಂಬ ಕಥಾನಾಯಕ ಮದುವೆಯ ಮೊದಲ ರಾತ್ರಿಯಿಂದ ಬಹಳಷ್ಟು ದಿನಗಳವರೆಗೆ ಬೇರೊಂದು ಹೆಂಗಸಿನ ಸಹವಾಸದಿಂದ ಹೆಂಡತಿಯ ಸಂಪರ್ಕಕ್ಕೆ ಬಂದಿರುವುದಿಲ್ಲ. ಹೆಂಡತಿ ಚಂದ್ರವ್ವ ತುಂಬಾ ಚಿಕ್ಕವಳು. ಅವಳಿಗಿನ್ನೂ ಮದುವೆಯ ವಯಸ್ಸಾಗಿರುವುದಿಲ್ಲ, ಅವಳ ವಯಸ್ಸಿನ ಆಧಾರದ ಮೇಲೆ ಅದು ಬಾಲ್ಯವಿವಾವೆಂದು ಹೇಳಬಹುದು.

ಚಂದ್ರಪ್ಪ ತನ್ನ ಗೆಳತಿಯೊಡನೆ ಊರೂರು ತಿರುಗುತ್ತಿರುತ್ತಾನೆ. ಕೊನೆಗೆ ತನ್ನ ತಪ್ಪಿನ ಅರಿವಾಗಿ ಹೆಂಡತಿಯನ್ನು ಹುಡುಕಿಕೊಂಡು ಬರುತ್ತಾನೆ. ಚಂದ್ರಪ್ಪ ಚಂದ್ರವ್ವನಲ್ಲಿ ತನ್ನ ಅವ್ವ ಕಾಣುತ್ತಾಳೆ ಎಂದು ಹೇಳುತ್ತಿರುತ್ತಾನೆ. ಇದು ಅವನ ಮನೋರೋಗವ ಅಥವಾ ಅವನು ತನ್ನ ಅಕ್ರಮ ಸಂಬಂಧದಿಂದ ಈ ರೀತಿ ಹೇಳುತ್ತಿರುತ್ತಾನೋ ತಿಳಿಯುವುದಿಲ್ಲ. ಇನ್ನು ನಾಯಕಿ ಚಂದ್ರವ್ವನ ನೋಡಿದರೆ “ಅನುಭವ” ಎಂಬ ಕಾಶೀನಾಥ್ ನಿರ್ದೇಶನದ ಚಲನಚಿತ್ರದ ಬದುಕಿನ ಅನುಭವ ಇಲ್ಲದ ಬಾಲಕಿ, ನಾಯಕಿ ನಮ್ಮ ಮುಂದೆ ಬಂದು ನಿಲ್ಲುತ್ತಾಳೆ.

“ಊರ್ಧ್ವರೇತು” ಎಂಬ ಕತೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಎಂದು ಹೇಳಬಹುದು. ಇಲ್ಲಿನ ಕಥಾನಾಯಕ ರಂಗರಾಜ ಬಾಲ್ಯದಿಂದಲೇ ಬಾದಾಮಿ ಚಾಲುಕ್ಯರ ದೇವಾಲಯಗಳ ಕಲ್ಲಿನ ಮೇಲೆ ಕೆತ್ತಿರುವ ಶಿಲ್ಪಕಲೆ ಅದರಲ್ಲೂ ಮೈಥುನ ಮತ್ತು ಲೈಂಗಿಕ ಆಸಕ್ತಿ ಕೆರಳಿಸುವ ಶಿಲ್ಪಕಲೆಗಳ ಮೇಲೆ ಹೆಚ್ಚು ಆಸಕ್ತಿ ಹೊಂದಿರುತ್ತಾನೆ. ಜೊತೆಗೆ ಓದಿನಲ್ಲಿಯೂ ಕೂಡ ತುಂಬಾ ಮುಂದೆ ಇರುತ್ತಾನೆ.

ಮುಂದೆ ಅವನು ಚೆನ್ನಾಗಿ ಓದಿ ಮದುವೆಯಾಗಿ ಡಾ. ರಂಗರಾಜ ಎಂಬ ಇತಿಹಾಸ ಪ್ರಾಧ್ಯಾಪಕನಾಗಿ ಶಿಲ್ಪಕಲೆಯ ಮೇಲಿನ ತನ್ನ ಸಂಶೋಧನೆಯನ್ನು ಮುಂದುವರೆಸುತ್ತಾನೆ. ಡಾ. ರಂಗರಾಜು ತನ್ನ ಸಂಶೋಧನೆಯನ್ನು ಬಾದಾಮಿ ಮತ್ತು ಮಹಾಕೂಟ ದೇವಾಲಯಗಳ ಲೈಂಗಿಕ ಅದರಲ್ಲೂ ಲಜ್ಜಾಗೌರಿ ಮತ್ತು ಊರ್ಧ್ವರೇತೇಶ್ವರ ಶಿಲ್ಪಕಲೆಯ ಮೇಲೆ ಮುಂದುವರೆಸುತ್ತಾನೆ.

ಇದೆ ದೇವಾಲಯಗಳಿಗೆ ಡಾ. ರಂಗರಾಜು ಅವರ ಹಾಗೆ ಸಂಶೋಧನ ಸಮಾನಾಸಕ್ತರಾದ ಡಾ. ಸೇವಂತಿಯವರು ರಂಗರಾಜು ಅವರ ಜೊತೆಗೆ ಬರುತ್ತಾರೆ. ಆಗ ಅಲ್ಲಿ ಒಂದು ಮಹತ್ತರವಾದ ಘಟನೆ ಸಂಭವಿಸುತ್ತದೆ. ಆ ಘಟನೆ ಡಾ. ರಂಗರಾಜು ಹೇಗೆ ಐಹಿಕ ಸುಖಗಳಿಂದ ವಿಮುಖನಾಗಿ ಊರ್ಧ್ವರೇತೇಶ್ವರನಾದ ಎಂದು ತೋರಿಸುತ್ತದೆ.    

“ರತ್ನಾಗಿರಿ ಎಂಬ ಮಾಯೆ” ಕತೆ ಆಧುನಿಕ ಭಾರತದ ಯುವಕರ ಮತ್ತು ಮಧ್ಯಮ ವಯಸ್ಕರ ಡೋಲಾಯಮಾನ ಸ್ಥಿತಿಯನ್ನು ಚೆನ್ನಾಗಿ ತೋರಿಸುತ್ತದೆ. ಗಾಂಧೀಜಿ ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಉದ್ದಾರವಾದರೆ ದೇಶ ಉದ್ದಾರವಾದ ಹಾಗೆ ಎಂದು ಹೇಳಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕರೋನ ಕಾಲದಲ್ಲಿ ಅದು ಹೆಚ್ಚು ಪ್ರಸ್ತುತ ಎಂದು ಅನಿಸುತ್ತದೆ.

ಈ ಕತೆ ಇನ್ನೊಂದು ಕಡೆ ಮಾಸ್ತಿಯವರ “ಮೊಸರಿನ ಮಂಗಮ್ಮ” ಕತೆಯನ್ನು ಜ್ಞಾಪಕಕ್ಕೆ ತರುತ್ತದೆ. ರತ್ನಾಗಿರಿ ಎಂಬ ಹಳ್ಳಿಯಲ್ಲಿ ಕಥಾನಾಯಕನ ತಾಯಿ ತನ್ನ ಹೊಲದಲ್ಲಿಯೇ ದುಡಿಯುತ್ತ ಹಳ್ಳಿಯಲ್ಲಿ ಬಹಳ ವರ್ಷ ನೆಲೆಸಿರುತ್ತಾಳೆ. ಇವನು ಉದ್ಯೋಗ ನಿಮ್ಮಿತ್ತ ಪಟ್ಟಣ ಸೇರಿ ದೊಡ್ಡ ಉದ್ಯೋಗಲ್ಲಿರುತ್ತಾನೆ.

ಮೊಸರಿನ ಮಂಗಮ್ಮನಂತಹ ಮುದುಕಿಯೊಬ್ಬಳು ಕಥಾನಾಯಕನ ಮನೆಗೆ ಪ್ರತಿದಿನ ತರಕಾರಿ ತಂದು ಮಾರುತ್ತಿರುತ್ತಾಳೆ. ಆ ಮುದುಕಿಯ ಮಾತುಗಳು ಕಥಾನಾಯಕನನ್ನು ತನ್ನ ಹಳ್ಳಿಗೆ ಹಿಂತಿರುಗಿ ಕೃಷಿಗೆ ಮುಖಮಾಡುವಂತೆ ಪ್ರಭಾವ ಬೀರುತ್ತವೆ. ಯಾವ ರತ್ನಾಗಿರಿ ತನ್ನ ಮಾಯೆಯಿಂದ ಕಥಾನಾಯಕನ ತಾಯಿಯನ್ನು ಹಿಡಿದುಕೊಂಡಿತ್ತು ಅದೇ ರತ್ನಾಗಿರಿ ಇವನನ್ನು ತನ್ನೆಡೆಗೆ ಆಕರ್ಷಿಸುತ್ತದೆ.  

ರಾಯಪ್ಪನ ಬಾಡಿಗೆ ಸಾಯಿಕಲ್ಲು ಎಂಬ ಕತೆ ಮುಗ್ದ ಹಳ್ಳಿಯ ರೈತನೊಬ್ಬ ದೇಶದ ರಾಜಕೀಯ ವಿಷವರ್ತುಲದಲ್ಲಿ ಹೇಗೆ ಸಿಲುಕುತ್ತಾನೆ ಎಂದು ತೋರಿಸುತ್ತದೆ. ಕತೆಯ ಮಹತ್ವವಿರುವುದು ಅವನು ಆ ವಿಷವರ್ತುಲದಿಂದ ತಪ್ಪಿಸಿಕೊಂಡು ಮತ್ತೇ ತನ್ನ ಹೊಲಕ್ಕೆ ಹೋಗುವುದು.

ಬಾಲಕನ ಕಣ್ಣಲ್ಲಿ ಕಂಡ ಸಾವು ಕತೆಯಲ್ಲಿ ಕಥಾನಾಯಕ ರೈಲಿನಲ್ಲಿ ಹೋಗುವಾಗ ಕನಸು ಕಾಣುತ್ತಾನೆ. ಆ ಕನಸೆಲ್ಲಾ ನಿಜವಾಗುತ್ತದೆ. ಇವೆಲ್ಲಾ ಲೌಕಿಕ ಜಗತ್ತಿನಿಂದ ಅಲೌಕಿಕ ಜಗತ್ತಿನೆಡೆಗಿನ ಪಯಣವನ್ನು ತೋರಿಸುತ್ತದೆ. ರೈಲಿನಲ್ಲಿ ಕುಳಿತು ತನ್ನ ತಾಯಿಯೊಡನೆ ಪ್ರಯಾಣಿಸುವ ಬಾಲಕ ಅಲ್ಲಿನ ಘಟನೆಗಳಿಗೆಲ್ಲಾ ಸಾಕ್ಷಿಯಾಗುತ್ತಾನೆ.

ಸುಖದ ನಾದ ಹೊರಡಿಸುವ ಕೊಳಲು ಕತೆಯಲ್ಲಿ ರೆಬಕಾಯಿ ಎಂಬ ಮುದುಕಿ ಅರ್ಯಾಣಸಿದ್ದ ಎಂಬ ದೇವರಲ್ಲಿ ಸಂಪೂರ್ಣವಾಗಿ ನಂಬಿಕೆಯಿಟ್ಟು ಸಮರ್ಪಿತಳಾಗುವುದು ಕೂಡ ಅಲೌಕಿಕ ಸಂದೇಶವನ್ನು ನೀಡುತ್ತದೆ. ಆ ಮುದುಕಿ ಮಾದಾರ ಚನ್ನಯ್ಯನ ವಂಶದವಳು.

ಹೊಸ್ತಿಲೊಳಗಣ ಹುತ್ತ ಕತೆಯಲ್ಲಿ ಗಾಮೀಣ ಬದುಕಿನ ರೈತ ರೈತರ ನಡುವಿನ ಅಸೂಯೆ, ಸಿಟ್ಟು, ದ್ವೇಷಗಳ ಚಿತ್ರಣವಿದೆ. ಇಲ್ಲಿ ಗಿರಿಯಪ್ಪ ಮತ್ತು ಪರಪ್ಪರ ನಡುವಿನ ದ್ವೇಷದ ಚಿತ್ರಣವನ್ನು ಘಟನಗೆಳ ಮೂಲಕ ಚಿತ್ರಿಸಲಾಗಿದೆ. ಇದು ಗೊರೂರು ರಾಮಸ್ವಾಮಿ ಅಯ್ಯಂಗಾರರ ಭೂತಯ್ಯನ ಮಗ ಅಯ್ಯು ಕತೆಯಲ್ಲಿನ ದ್ವೇಷದ ಚಿತ್ರಣಗಳ ಘಟನೆಗಳನ್ನು, ರಾವ್ ಬಹದ್ದೂರರ ಗ್ರಾಮಾಯಣ, ಆಲನಹಳ್ಳಿ ಶ್ರೀಕೃಷ್ಣರ ಕಾಡು ಕಾದಂಬರಿಗಳ ಘಟನೆಗಳನ್ನು ಕೂಡ ನಮಗೆ ನೆನಪಿಸುತ್ತದೆ.  

ಅಟ್ಟ ಕತೆಯ ಕೆಂಚನ ಪಾತ್ರ ಕೂಡ ಆಲನಹಳ್ಳಿ ಶ್ರೀಕೃಷ್ಣರ ಕಾಡು ಕಾದಂಬರಿಯ ಕಿಟ್ಟಿ. ಅನಂತಮೂರ್ತಿಯವರ ಘಟಶ್ರಾದ್ದದ ನಾಣಿಯನ್ನು ನೆನಪಿಗೆ ತರುತ್ತದೆ. ಈ ಕತೆಯಲ್ಲಿ ಸಂಕೀರ್ಣ ಸಂಸಾರಗಳಲ್ಲಿನ  ಅನಾಥನಂತೆ ಬದುಕುತ್ತಿರುವ ಬಾಲಕನೊಬ್ಬನ ಜಗತ್ತನ್ನು ಕಾಣಬಹುದು.

ಜುಮ್ಮಣ್ಣನ ಕಂಚಿನ ಮೂರ್ತಿ ಎಂಬ ಮೊದಲ ಕತೆಯಲ್ಲಿ ತನ್ನ ತಂದೆಯ ಸಾವಿಗೆ ಕಾರಣವೇನು ಎಂದು ವ್ಯಕ್ತಿಯೊಬ್ಬ ಹುಡುಕುವುದರ ಬಗ್ಗೆ ಚಿತ್ರಿಸಿರುವ ಕತೆ. ತನ್ನ ತಾಯಿ ಏಕೆ ಹಳ್ಳಿಯನ್ನು ಬಿಟ್ಟು ಪಟ್ಟಣಕ್ಕೆ ಬರುತ್ತಿಲ್ಲ ಎಂದು ಕಥಾನಾಯಕ ಯೋಚಿಸುತ್ತಿರುತ್ತಾನೆ. ಕೊನೆಗೆ ಅದರ ರಹಸ್ಯ ತಿಳಿದ ಮೇಲೆ ಅವನ ತಾಯಿ ಜುಮ್ಮಣ್ಣನ ಕಂಚಿನ ಮೂರ್ತಿಯ ಜೊತೆ ಪಟ್ಟಣಕ್ಕೆ ಹೊರಡುತ್ತಾಳೆ.

ಇಲ್ಲಿ ಅವಳ ಗಂಡ ಮಹಾ ಸ್ತ್ರೀಲೋಲ. ಅವನ ಸಾವಿಗೆ ಕಾರಣವೇನು? ಅವನ ಹುಂಬತನವೇ ಅವನ ಸಾವಿಗೆ ಕಾರಣವಾಯಿತೆ? ತಿಳಿಯುವುದಿಲ್ಲ. ಇಲ್ಲಿಯೂ ಕೂಡ ವ್ಯಕ್ತಿ ವ್ಯಕ್ತಿಗಳ ನಡುವಣ ದ್ವೇಷ ಹೇಗೆಲ್ಲಾ ಮಾಡಿಸುತ್ತದೆ ಎಂದು ತಿಳಿಯಬಹುದು.

ಈ ಕತೆಗಳನ್ನೆಲ್ಲಾ ಓದಿದ ಮೇಲೆ ಗಿರೀಶ್ ಕಾರ್ನಾಡರು ಕೆಲವು ವರ್ಷಗಳ ಹಿಂದೆ ಲೇಖಕರ ಮೇಲೆ ಅದರಲ್ಲೂ ಕತೆ ಕಾದಂಬರಿಗಳನ್ನು ಬರೆಯುವವರ ಮೇಲೆ ಒಂದು ಆಪಾದನೆ ಮಾಡಿದ್ದರು. ಅವರು ಮಾಡಿದ ಆಪಾದನೆಯ ಬಗ್ಗೆ ಚರ್ಚಿಸಬೇಕಾಗುತ್ತದೆ. ಅವರ ಪ್ರಕಾರ ಇಂದಿಗೂ ಬಹಳಷ್ಟು ಜನ ಗ್ರಾಮ ಕೇಂದ್ರಿತ ಕತೆಗಳನ್ನೇ ಹೆಚ್ಚಾಗಿ ಬರೆಯುತ್ತಿದ್ದಾರೆ ಎಂಬುದು.

ಅದು ಸತ್ಯ ಕೂಡ. ಕಾರಣ ಇಷ್ಟೇ ಇಂದು ಬಹಳಷ್ಟು ಜನರು ನಗರಗಳಲ್ಲಿ ವಾಸಿಸುತ್ತಿದ್ದರೂ ಕೂಡ ಅವರ ಬೇರುಗಳು ಇಂದಿಗೂ ಹಳ್ಳಿಯಲ್ಲಿಯೇ ಇರುತ್ತವೆ. ಬಹಳಷ್ಟು ಜನ ಲೇಖಕರು ಹುಟ್ಟಿ ಬೆಳೆದದ್ದೆಲ್ಲ ಹಳ್ಳಿಗಳೇ ಆಗಿರುತ್ತವೆ. ಆ ಕಾರಣದಿಂದ ಅದರಲ್ಲೂ ಉತ್ತರ ಕರ್ನಾಟಕದ ಲೇಖಕರುಗಳು ತಮ್ಮ ಸಾಹಿತ್ಯಕ್ಕೆ ಇಂದಿಗೂ ಹಳ್ಳಿಯ ಚಿತ್ರಣವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದು ಹಳ್ಳಿ ಭಾಷೆಯ ಸೊಗಡನ್ನ ತರುವುದಕ್ಕೂ ಇರಬಹುದು.

ಚನ್ನಪ್ಪ ಕಟ್ಟಿಯವರು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದವರು. ಅವರು ಕತೆ, ಕಾವ್ಯ, ಸಂಶೋಧನೆಯ ಮೂಲಕ ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ಕತೆಗಳಲ್ಲಿನ ಚಿತ್ರಣ ಮತ್ತು ರೂಪಕಗಳು ಕಾದಂಬರಿ ಬರೆಯಲು ಕೂಡ ಯೋಗ್ಯವಾಗಿವೆ.

ಅವರು ಕಾದಂಬರಿ ಲೋಕಕ್ಕೂ ಕಾಲಿಡಬಹುದು. ಈಗಾಗಲೇ ಜಾಕ್ ಲಂಡನ್ ನ “ಸ್ಕಾರ್ಲೆಟ್ ಪ್ಲೇಗ್” ಕಾದಂಬರಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅದು ಸದ್ಯದಲ್ಲಿಯೇ ಪ್ರಕಟವಾಗಲಿದೆ. ಅವರಿಂದ ಇನ್ನು ಹೆಚ್ಚು ಕೃತಿಗಳು ಮೂಡಿ ಬರಲಿ ಎಂಬುದು ನನ್ನ ಸದಾಶಯ.  

November 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ದೀಪ್ತಿ ಭದ್ರಾವತಿ

    ಉತ್ತಮ‌ ಗ್ರಹಿಕೆ ಬರಹ ಚನ್ನಾಗಿ ಮೂಡಿ ಬಂದಿದೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: