ಕಾಡುಕೊಂಪೆಯೊಳಗೊಂದು ಸುತ್ತು..

ಕರ್ನಾಟಕ ಪತ್ರಕರ್ತೆಯರ ಸಂಘ ಹಾಗೂ ಸೆಲ್ಕೊ ಪ್ರತಿಷ್ಠಾನ ಸಂಯುಕ್ತವಾಗಿ ಅಧ್ಯಯನ ಪ್ರವಾಸ ಆಯೋಜಿಸಿತ್ತು.

ಈ ಸಂದರ್ಭದಲ್ಲಿ ರಸ್ತೆ, ವಿದ್ಯುತ್, ಕುಡಿಯುವ ನೀರು, ಆರೋಗ್ಯ ಸೇವೆಯಂತಹ ಮೂಲ ಸೌಕರ್ಯವೇ ಇಲ್ಲದ ಪ್ರದೇಶಗಳು ಮುಂದುವರಿದ ರಾಜ್ಯ ಎಂಬ ಗರಿಮೆ ಹೊಂದಿರುವ ಕರ್ನಾಟಕದಲ್ಲಿ ಸಾಕಷ್ಟು ಕಂಡುಬಂದಿತು.

ಅದರಲ್ಲೂ ರಾಜಧಾನಿ ಬೆಂಗಳೂರಿನಿಂದ ಕೇವಲ ೨೧೦ ಕಿಮೀ ದೂರದಲ್ಲಿರುವ ಪ್ರದೇಶದಲ್ಲಿ ಇಂತಹ ದುಃಸ್ಥಿತಿ ಇದೆ ಎಂಬ ಕಟು ವಾಸ್ತವ ಸ್ಥಿತಿ ಬೆಳಕಿಗೆ ಬಂದಿತು.

ಈ ಬಗ್ಗೆ ‘ಕಸ್ತೂರಿ’ ಮಾಸಪತ್ರಿಕೆಯ ಸಂಪಾದಕಿ ಶಾಂತಲಾ ಧರ್ಮರಾಜ್ ಅವರ ನಿಟ್ಟುಸಿರು ಇಲ್ಲಿದೆ

ಶಾಂತಲಾ ಧರ್ಮರಾಜ್

ದೇಶಕ್ಕೆ ಸ್ವಾತಂತ್ರ್ಯ ದೊರೆತು ೭೪ ವರ್ಷಗಳಾದವು. ಚುನಾವಣೆಗಳ ಮೇಲೆ ಚುನಾವಣೆಗಳು ಬರುತ್ತಲೇ ಇವೆ. ೧೭೪೦ ಮತದಾರರಿರುವ ಈ ಕಾಡುಕೊಂಪೆಗಳಿಗೆ ಮಾತ್ರ ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಒಬ್ಬರೇ ಒಬ್ಬ ಜನಪ್ರತಿನಿಧಿ ಕಾಲಿಟ್ಟಿಲ್ಲ. ಅದು ಸಾಧ್ಯವೂ ಇಲ್ಲ. ಏಕೆಂದರೆ ಇಲ್ಲಿ ರಸ್ತೆ, ವಿದ್ಯುತ್, ಶುದ್ಧ ಕುಡಿಯುವ ನೀರು, ತುರ್ತು ಆರೋಗ್ಯ ಸೇವೆಗಳಂಥ ಮೂಲ ಸೌಕರ್ಯಗಳ್ಯಾವುವೂ ಇಲ್ಲ.

ಐಟಿ ಬಿಟಿ ಕ್ಷೇತ್ರದ ಸಾಧನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಕರ್ನಾಟಕದ ಹಲವು ಹಳ್ಳಿಗಳಲ್ಲಿ ಇಂತಹ ಪರಿಸ್ಥಿತಿ ಎಂದರೆ ನಂಬಿಕೆ ಬರುವುದು ತುಸು ಕಷ್ಟವೇ..

ಕರ್ನಾಟಕ ಪತ್ರಕರ್ತೆಯರ ಸಂಘ ಹಾಗೂ ಸೆಲ್ಕೊ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿದ್ದ ಅಧ್ಯಯನ ಪ್ರವಾಸದ ಸಂದರ್ಭದಲ್ಲಿ ರಸ್ತೆ, ವಿದ್ಯುತ್, ಕುಡಿಯುವ ನೀರು, ಆರೋಗ್ಯಸೇವೆಯೇ ಮೊದಲಾದ ಮೂಲಸೌಕರ್ಯ ವಂಚಿತ ಪ್ರದೇಶಗಳು ಕೇವಲ ಪಶ್ಚಿಮ ಬಂಗಾಳ ಅಥವಾ ಒಡಿಶಾದಲ್ಲಷ್ಟೇ ಅಲ್ಲ ಕರ್ನಾಟಕದಂತಹ ಮುಂದುವರೆದ ರಾಜ್ಯದಲ್ಲೂ ಸಾಕಷ್ಟು ಸಂಖ್ಯೆಯಲ್ಲಿವೆ. ಅದರಲ್ಲೂ ರಾಜಧಾನಿ ಬೆಂಗಳೂರಿನಿಂದ ಕೇವಲ ೨೧೦ ಕಿಮೀ ದೂರದಲ್ಲಿರುವ ಪ್ರದೇಶದಲ್ಲಿ ಇಂತಹ ದುಃಸ್ಥಿತಿ ಇದೆ ಎಂಬ ಕಟು ವಾಸ್ತವ ಸ್ಥಿತಿ ಬೆಳಕಿಗೆ ಬಂದಿತು.

 

ಕುಕ್ಕೆ ಸುಬ್ರಹ್ಮಣ್ಯದ ನಂತರ ರಾಜ್ಯದಲ್ಲಿ ಅತಿಹೆಚ್ಚು ಆದಾಯವಿರುವ ಮುಜರಾಯಿ ದೇವಾಲಯ ಕ್ಷೇತ್ರ ಶ್ರೀಮಲೆಮಹದೇಶ್ವರ ಬೆಟ್ಟ. ಸುತ್ತಮುತ್ತಲಿನ ಗ್ರಾಮ ಹಾಗೂ ಜಿಲ್ಲೆಗಳ ಜನರ ಅಧಿದೇವನಾಗಿರುವ ಮಲೆ ಮಹದೇಶ್ವರನ ದರ್ಶನಕ್ಕೆ ಬರುವ ಭಕ್ತಾದಿಗಳು ನೀಡುವ ಹುಂಡಿ ಕಾಣಿಕೆಯ ಆದಾಯ (೨೨.೧೧.೧೯ರಂದು ನಡೆಸಿದ ಎಣಿಕೆಯಲ್ಲಿ ೧.೭೧ ಕೋಟಿ ರೂ ಹುಂಡಿ ಆದಾಯ) ಕೋಟಿಗಳಲ್ಲೇ ಇದ್ದರೂ ಈ ಧಾರ್ಮಿಕ ಕ್ಷೇತ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಮೂಲಸೌಕರ್ಯಗಳು ಇನ್ನೂ ಮರೀಚಿಕೆಯಾಗೇ ಉಳಿದಿದೆ.

ದೀಪದ ಬುಡದಲ್ಲಿ ಕತ್ತಲು
ಮಹದೇಶ್ವರ ಬೆಟ್ಟದ ಸಮೀಪದ ಗ್ರಾಮಗಳು ಹಾಗಿರಲಿ, ಈ ಪವಿತ್ರ ದೇವಸ್ಥಾನದ ಹೊರಾಂಗಣದಲ್ಲಿ ಸ್ವಚ್ಛ ಭಾರತ ಅಭಿಯಾನದ ಗಾಳಿಗಂಧವಿಲ್ಲ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ಈ ಸ್ಥಳದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಸ್ಥಾಪಿಸಲು ಇನ್ನೂ ಕಾಲ ಕೂಡಿ ಬಂದಿಲ್ಲ.

ಸುತ್ತಮುತ್ತಲಿನ ಗ್ರಾಮಸ್ಥರು ಮೂರು ಬಾರಿ ಪ್ರತಿಭಟನೆ ನಡೆಸಿದ ಮೇಲೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೊದಲು ಪ್ರಭಾರಿ ವೈದ್ಯರು ನಂತರ ಇದೀಗ ಆಯುಷ್ ವೈದ್ಯರ ನೇಮಕವಾಗಿದೆ. ಈಗಲೂ ಇಲ್ಲಿನ ಗ್ರಾಮಗಳಲ್ಲಿ ಗರ್ಭಿಣಿಯರು ೭ ರಿಂದ ೧೮ ಕಿ.ಮೀ ದೂರದ ಮಹದೇಶ್ವರ ಬೆಟ್ಟಕ್ಕೆ ಸಾವು-ಬದುಕಿನ ನಡುವೆ ಹೋರಾಡುತ್ತ ಡೋಲಿಯಲ್ಲಿ ತಲುಪಿ ಅಲ್ಲಿಂದ ಹೆರಿಗೆ ಆಸ್ಪತ್ರೆಗಾಗಿ ೩೦ ಕಿಮೀ ದೂರದ ತಮಿಳುನಾಡಿನ ಕೊಳತ್ತೂರಿಗೋ ಇಲ್ಲಾ ೪೮ ಕಿ.ಮೀ ದೂರದ ಮೆಟ್ಟೂರು, ೮೦ ಕಿ.ಮೀ ದೂರದ ಸೇಲಂ ಅಥವಾ ಕೊಳ್ಳೇಗಾಲಕ್ಕೊ ವಾಹನದಲ್ಲಿ ಹೋಗಬೇಕು.

ತೊಳಸಿಕೆರೆ, ಇಂಡಿಗನತ್ತ, ಪಡಸಲನತ್ತ, ತೋಕರೆ, ದೊಡ್ಡಾಣೆ ಸೇರಿದಂತೆ ಸುಮಾರು ಎಂಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆ, ರಸ್ತೆ, ಶಿಕ್ಷಣ, ವಿದ್ಯುತ್ ಸೇರಿದಂತೆ ಯಾವುದೇ ಸಮರ್ಪಕವಾದ ಮೂಲಸೌಕರ್ಯಗಳಿಲ್ಲ. ಈ ಹಳ್ಳಿಗಳಿಗೆ ಇಲ್ಲಿಯವರೆಗೆ ಚುನಾಯಿತ ಪ್ರತಿನಿಧಿ ಹಾಗಿರಲಿ, ಚುನಾವಣೆಗೆ ಸ್ಪರ್ಧಿಸುವ ಯಾವುದೇ ಪಕ್ಷದ ಅಭ್ಯರ್ಥಿಯೂ ಮತ ಕೇಳಲು ಭೇಟಿ ನೀಡಿಲ್ಲ.

ಮಹದೇಶ್ವರ ಬೆಟ್ಟವೇ ಕೊನೆ. ಅಲ್ಲಿಂದ ಮುಂದೆ ಒಂದು ಹೆಜ್ಜೆಯನ್ನೂ ಇಲ್ಲಿನ ಚುನಾಯಿತ ಪ್ರತಿನಿಧಿಗಳು ಇರಿಸುವುದಿಲ್ಲ. ಇವರು ತಮ್ಮ ಮರಿ, ಪುಡಿ ಏಜೆಂಟರುಗಳ ಮೂಲಕ ಅರಣ್ಯ ಪ್ರದೇಶದ ಮತದಾರರನ್ನು ಚುನಾವಣೆ ಸಂದರ್ಭದಲ್ಲಷ್ಟೇ ಸಂಪರ್ಕಿಸುತ್ತಾರೆ.

ಕೇವಲ ಒಂದು ಮತದ ಅಂತರದಲ್ಲಿ ಚುನಾವಣೆ ಗೆಲ್ಲಿಸಿದ ಖ್ಯಾತಿಯ ಸಂತೆಮರಳ್ಳಿ(ಪ್ರಸ್ತುತದ ಕೊಳ್ಳೇಗಾಲ ಕ್ಷೇತ್ರ) ಯಿಂದ ಕೂಗಳತೆ ದೂರದಲ್ಲಿರುವುದರಿಂದ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಒಂದೊಂದು ಮತವೂ ಮೌಲ್ಯಯುತವೇ. ಪರಿಸ್ಥಿತಿ ಹೀಗಿದ್ದರೂ ೧೭೪೦ ಅರ್ಹ ಮತದಾರರಿರುವ ಈ ಗ್ರಾಮಗಳಿಗೆ ಯಾವ ರಾಜಕಾರಣಿಯೂ ಇಲ್ಲಿಯವರೆಗೆ ಹೆಜ್ಜೆ ಇರಿಸಿಲ್ಲ, ಅದು ಸಾಧ್ಯವೂ ಇಲ್ಲ. ಏಕೆಂದರೆ ಇಲ್ಲಿ, ಕಚ್ಚಾ ರಸ್ತೆಗಳು ಹಾಗಿರಲಿ ಎತ್ತಿನಗಾಡಿ ಚಲಿಸುವ ಕಲ್ಲುಮುಳ್ಳಿನ ರೈತ ಕಾಯಕ ಮಾರ್ಗವೂ ಇಲ್ಲ.

ನಾಗಮಲೆ ಬೆಟ್ಟಗಳ ಸಾಲಿನ ಕಲ್ಲುಮಯವಾಗಿರುವ ಕಡಿದಾದ ದುರ್ಗಮ ಹಾದಿಯಲ್ಲಿ ತೀರಾ ಇತ್ತೀಚಿನ ವರೆಗೆ ಕತ್ತೆಗಳ ಮೇಲೆ ಸಾಮಾನು ಹೊರೆ ಹೊರಿಸಿ, ನಡೆದೇ ಸಾಗುತ್ತಿದ್ದ ಜನರೀಗ ಗುಂಡಿಗೆ ಗಟ್ಟಿ ಮಾಡಿಕೊಂಡು ಜೀವ ಕೈಯ್ಯಲ್ಲಿ ಹಿಡಿದು, ಜೀಪಿನಲ್ಲಿ ಪ್ರಯಾಣ ಮಾಡುವುದನ್ನು ರೂಢಿ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲೇ ವನ್ಯಜೀವಿ ಧಾಮದ ಕಾನೂನು ಅದಕ್ಕೂ ಸಂಚಕಾರ ತಂದಿದೆ.
ಬದುಕೇ ದುಸ್ತರ..!

೨೦೧೩ರಲ್ಲಿ ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ಧಾಮ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಅರಣ್ಯದೊಳಗಿನ ಗ್ರಾಮಸ್ಥರ ಜೀವನ ಮತ್ತಷ್ಟು ದುಸ್ತರವಾಗಿದೆ. ಕೃಷಿಯೊಂದಿಗೆ ಹಿಂದೆಲ್ಲ ಕಾಡಿನಲ್ಲಿ ಬಿದ್ದಿದ್ದ ಮರಗಳ ಕಟ್ಟಿಗೆ ಮಾರಿ ಬದುಕು ಕಟ್ಟಿಕೊಂಡಿದ್ದ ಜನರಿಗೆ ಈಗ ಹೊಟ್ಟೆಪಾಡಿಗೆ ಉದ್ಯೋಗ ಅರಸಿ ನೆರೆಯ ತಮಿಳುನಾಡಿಗೆ ಗುಳೆ ಹೋಗದೇ ಬೇರೆ ದಾರಿಯಿಲ್ಲ.

ಅನಕ್ಷರತೆ, ಜಾತೀಯತೆ, ಬಾಲ್ಯವಿವಾಹ, ಬಾಣಂತಿ ಹಾಗೂ ನವಜಾತ ಶಿಶು ಮರಣ ಪ್ರಮಾಣ ಅತ್ಯಧಿಕವಾಗಿರುವ ಈ ಪೋಡುಗ್ರಾಮಗಳಲ್ಲಿನ ಸಾಮಾಜಿಕ ವ್ಯವಸ್ಥೆ ತೀರಾ ಸಂಕುಚಿತ ಮನಸ್ಥಿತಿಯದ್ದಾಗಿದೆ.

ಕಳೆದ ದಶಕದಲ್ಲಿ ಕೆಲವು ಸ್ವಯಂಸೇವಾ ಸಂಸ್ಥೆಗಳು ಈ ಪ್ರದೇಶಕ್ಕೆ ಪಾದಾರ್ಪಣೆ ಮಾಡಿರದಿದ್ದರೆ ಪರಿಸ್ಥಿತಿ ಬಹುಶಃ ಶಿಲಾಯುಗದಷ್ಟೇ ಕಠಿಣತಮವಾಗಿರುತ್ತಿತ್ತೇನೋ. ಹನೂರಿನಲ್ಲಿ ಸಕ್ರಿಯವಾಗಿದ್ದ ಸೆಲ್ಕೊ ಪ್ರತಿಷ್ಠಾನದವರು ಕಗ್ಗತ್ತಲಿನಲ್ಲಿ ಮುಳುಗಿದ್ದ ತೊಳಸಿಕೆರೆಗೆ ೨೦೦೮ರಲ್ಲಿ ಪ್ರಾಯೋಗಿಕವಾಗಿ ಎರಡು ಮನೆಗೆ ಸೋಲಾರ್ ದೀಪಗಳನ್ನು ಅಳವಡಿಸಿದರು.

ಆ ಹೊತ್ತು ಈ ಕೊಂಪೆಯಲ್ಲಿ ಹೊತ್ತಿಕೊಂಡ ಸೌರಶಕ್ತಿ ಕ್ರಾಂತಿಯ ಕಿಡಿ ಇಂದು, ಬೀದಿ ದೀಪ, ಶಾಲಾ ದೀಪ, ಕಂಪ್ಯೂಟರ್, ಪ್ರೊಜೆಕ್ಟರ್, ಮಕ್ಕಳ ಓದಿನ ಟೇಬಲ್‌ಲ್ಯಾಂಪ್, ಹಿಟ್ಟಿನ ಗಿರಣಿ, ರುಬ್ಬುವ ಯಂತ್ರ, ನೀರೆತ್ತುವ ಪಂಪ್.. ಹೀಗೆ ನಾನಾ ಅವತಾರಗಳನ್ನೆತ್ತಿ ಕಾಡಿನ ಜನರ ಜೀವನಕ್ಕಾಸರೆಯಾಗಿ ಹೆಗಲು ಕೊಟ್ಟಿದೆ; ನಾಳೆಯ ಕುರಿತ ಭರವಸೆಯ ಬೆಳಕಾಗಿದೆ.

೨೦೦೮ರಲ್ಲಿ ಹನೂರಿನಲ್ಲಿ ಸೌರಶಕ್ತಿ ಕುರಿತ ಕಾರ್ಯಾಗಾರವನ್ನು ಸೆಲ್ಕೊ ಹಮ್ಮಿಕೊಂಡಿತ್ತು. ಆಗ ಮೈರಾಡ ಮಂಜುನಾಥ್‌ರ ಮನವಿ ಮೇರೆಗೆ ನಾವು ಮಹದೇಶ್ವರ ಬೆಟ್ಟದಿಂದ ಕೇವಲ ಏಳು ಕಿ.ಮೀ ದೂರದಲ್ಲಿದ್ದರೂ ವಿದ್ಯುತ್, ರಸ್ತೆ ಮೊದಲಾದ ಮೂಲಸೌಕರ್ಯಗಳು ಮರೀಚಿಕೆಯಾಗಿರುವ ತೊಳಸಿಕೆರೆಯ ಎರಡು ಮನೆಗೆ ಒಂದು ತಿಂಗಳ(೨೦೦೯ರಲ್ಲಿ) ಮಟ್ಟಿಗೆ ಪ್ರಾಯೋಗಿಕವಾಗಿ ಸೋಲಾರ್ ದೀಪ ನೀಡಿದೆವು. ಅಲ್ಲಿನ ಜನರಿಗೆ ಸೌರಶಕ್ತಿ ಬಗ್ಗೆ ಮಾಹಿತಿ ಇರಲಿಲ್ಲ. ಇವರು ಕಡುಬಡವರು.

ವಿದ್ಯುತ್ ಬೇಕು ಆದರೆ ಹಣ ಇಲ್ಲ. ಹದಿನೇಳು ಮಂದಿ ಸೋಲಾರ್ ದೀಪ ಹಾಕಿಸಿಕೊಳ್ಳಲು ಮುಂದೆ ಬಂದರು. ಆಗ ಎಸ್‌ಬಿಎಂ ಹಾಗೂ ಮೈರಾಡ ಮೈಕ್ರೊಫೈನಾನ್ಸ್ ಮೂಲಕ ಸಾಲ ನೀಡಿದರು. ಅಲ್ಲಿನ ಜನರಿಗೆ ಕೃಷಿ ಹೊರತು ಬೇರೇನೂ ಜೀವನೋಪಾಯ ತಿಳಿದಿರಲಿಲ್ಲ. ಆಗ ಅಲ್ಲೊಂದು ಹೊಲಿಗೆ ಕೇಂದ್ರ ಪ್ರಾರಂಭಿಸಿ, ಹತ್ತು ಮಂದಿಗೆ ಹೊಲಿಗೆ ತರಬೇತಿ ಕೊಡಿಸಲಾಯಿತು ಎಂದು ತಮ್ಮ ಅನುಭವ ಕಥನವನ್ನು ಸೆಲ್ಕೊದ ಸುಕುಮಾರ್ ಬಿಚ್ಚಿಡುತ್ತಾರೆ.

ಕಲಿಕೆಗಾಗಿ ಬೆಳಕು
ನಂತರ ಗಮನ ಶಾಲೆಯ ಕಡೆಗೆ ಹರಿಯಿತು. ಅಲ್ಲೊಂದು ಸರ್ಕಾರಿ ಪ್ರಾಥಮಿಕ ಶಾಲೆ ಇತ್ತು. ಆದರೆ ಕಲಿಯುವ ಮಕ್ಕಳ ಸಂಖ್ಯೆ ಹೆಚ್ಚಾಗಿರಲಿಲ್ಲ. ಸೋಲಾರ್ ಸ್ಟಡಿ ಲ್ಯಾಂಪ್ ಕೊಟ್ಟೆವು(೨೦೧೦), ಮಕ್ಕಳು ದೀಪಕ್ಕೋಸ್ಕರ ಶಾಲೆಗೆ ಬರಲಾರಂಭಿಸಿದರು. ಬ್ಯಾಟರಿಯನ್ನು ದಿನ ಬಿಟ್ಟು ದಿನ ಮಕ್ಕಳು ಶಾಲೆಯಲ್ಲೇ ಚಾರ್ಜ್ ಮಾಡಿಕೊಂಡು ಹೋಗಿ ಮನೆಯಲ್ಲಿ ರಾತ್ರಿ ಸೋಲಾರ್ ಸ್ಟಡಿ ಲ್ಯಾಂಪ್ ಬೆಳಕಿನಲ್ಲಿ ಓದುವ ವ್ಯವಸ್ಥೆಯಾಗುತ್ತಿದ್ದಂತೇ ಮಕ್ಕಳು ಚುರುಕಾದರು.

ಮನೆಪಾಠವನ್ನು ಶಿಸ್ತಿನಿಂದ ಮಾಡುವುದಷ್ಟೇ ಅಲ್ಲದೆ, ಓದಿನಲ್ಲಿ ಆಸಕ್ತಿ ತೋರಲಾರಂಭಿಸಿದರು. ಉತ್ತಮ ಅಂಕ ಗಳಿಸಲು ಸಾಧ್ಯವಾಯಿತು.  ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಯೋಜನೆಯಡಿ ಡಿಜಿಟಲ್ ಎಜುಕೇಷನ್, ಇ-ಲರ್ನಿಂಗ್ ಸ್ಮಾರ್ಟ್ ಕ್ಲಾಸ್ ಯೋಜನೆಯಡಿ ಕಪ್ಪು ಹಲಗೆ ಬದಲಿಗೆ ಬಿಳಿ ಹಲಗೆ ಎಂದರೆ ಟಿವಿ ಪರದೆಯ ಮೂಲಕ ಗಣಿತ, ವಿಜ್ಞಾನ, ಇಂಗ್ಲಿಷ್‌ನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ಬೋಧಿಸುವ ಕಾಯಕಕ್ಕೆ ಸೆಲ್ಕೊ ಹೆಗಲುಕೊಟ್ಟಿದೆ.

ಸೌರಶಕ್ತಿ ಆಧಾರಿತ, ಸ್ಮಾರ್ಟ್ ಬೋರ್ಡ್ ಮತ್ತು ಕಂಪ್ಯೂಟರ್, ಪ್ರೊಜೆಕ್ಟರ್‌ಗಳು ಸುಮಾರು ಒಂದು ಸಾವಿರ ಗ್ರಾಮೀಣ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದರಿಂದ ಕಲಿಕೆ ಸುಲಭವಷ್ಟೇ ಅಲ್ಲ, ಶಿಕ್ಷಕರ ಕೊರತೆ ಸಮಸ್ಯೆಯೂ ಒಂದು ಹಂತಕ್ಕೆ ಬಗೆಹರಿದಂತಾಗಿದೆ ಎಂದು ಸುಕುಮಾರ್ ವಿವರಿಸುತ್ತಾರೆ. 

ಕಗ್ಗತ್ತಲಿನ ಕಾಡು ಕೊಂಪೆ
ಹತ್ತು ವರ್ಷಗಳ ಹಿಂದೆ ಈ ಭಾಗದಲ್ಲಿ ವಿಪರೀತ ಸಮಸ್ಯೆಗಳು ಇದ್ದದ್ದು ನಿಜ. ಮೇ, ೨೦೦೫ರಲ್ಲಿ ನನ್ನ ಸರ್ಕಾರಿ ವೃತ್ತಿ ಪಯಣ ಪ್ರಾರಂಭವಾಗಿದ್ದು ಮಹದೇಶ್ವರ ಬೆಟ್ಟದಿಂದ ೭ ಕಿ.ಮೀ ದೂರದ ತೊಳಸಿಕೆರೆಯಲ್ಲಿ. ಮೊದಲ ದಿನ ಕರ್ತವ್ಯಕ್ಕೆ ಹಾಜರಾಗಲು ಬೆಟ್ಟದಿಂದ ಕಲ್ಲುಮುಳ್ಳಿನ ದುರ್ಗಮ ಹಾದಿಯಲ್ಲಿ ನಡೆದು ಬಂದು ಐದು ದಿನ ಮೈಕೈ ನೋವಿನಿಂದ ನರಳಿದೆ. ಸಿಕ್ಕಿರುವ ಸರ್ಕಾರಿ ನೌಕರಿ ಬಿಡುವುದು ಬೇಡ ಎಂದು ಕಗ್ಗತ್ತಲಿನ ಕಾಡು ಕೊಂಪೆ ತೊಳಸಿಕೆರೆಯಲ್ಲೇ ಮನೆ ಮಾಡಿದೆ.

ಮೊದಲ ಐದು ವರ್ಷ ಬಹಳಷ್ಟು ಕಷ್ಟಗಳನ್ನು ಕಂಡೆ. ಎಲ್ಲ ಕಡೆ ಸೀಮೆಎಣ್ಣೆ ದೀಪ ಬಳಕೆ. ಶಾಲೆಯ ಮಕ್ಕಳಿಗೆ ಮೇಲಿಂದ ಮೇಲೆ ಅನಾರೋಗ್ಯ ಸಮಸ್ಯೆ. ಕಡುಬಡತನದ ಕುಟುಂಬಗಳಿಂದ ಬಂದವರು. ನೋಟ್‌ಬುಕ್ ಕೊಳ್ಳಲು ಹಣವಿರಲಿಲ್ಲ. ಈ ಭಾಗದ ಶಾಲೆಗಳ ವಸ್ತುಸ್ಥಿತಿ ಕುರಿತಂತೆ ಪತ್ರಿಕಾ ವರದಿ ಓದಿ, ಹೆಲ್ಪ್ ಎಜುಕೇಟ್ ಎ ಚೈಲ್ಡ್ ಸ್ವಯಂ ಸೇವಾ ಸಂಸ್ಥೆಯವರು ಮಕ್ಕಳಿಗೆ ನೋಟ್‌ಬುಕ್ ಮತ್ತಿತರ ಅಗತ್ಯ ಸಾಮಗ್ರಿಗಳನ್ನು ಕೊಡಿಸಿದರು.

ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಇರುವ ಕಾರಣ ಸ್ಥಳೀಯ ವಿದ್ಯಾವಂತ ಯುವಕರಿಗೆ ತರಬೇತಿ ಕೊಡಿಸಿ, ಅತಿಥಿ ಶಿಕ್ಷಕರನ್ನಾಗಿ ನಿಯೋಜಿಸಿ ಅವರಿಗೆ ಈ ಸರ್ಕಾರೇತರ ಸಂಸ್ಥೆಯವರೇ ಗೌರವ ವೇತನ ನೀಡುತ್ತಿದ್ದಾರೆ. ಸೆಲ್ಕೋದವರು ಸೌರಶಕ್ತಿಯ ಸ್ಟಡಿ ಲ್ಯಾಂಪ್, ಶಾಲೆಗೆ ಕುಡಿಯಲು ಮತ್ತು ಮಧ್ಯಾಹ್ನದ ಬಿಸಿ ಊಟ ತಯಾರಿಕೆಗೆ ಶುದ್ಧ ನೀರನ್ನು ಪೂರೈಸುವ ಪಂಪ್-ಸಂಪ್ ಒದಗಿಸಿದ್ದಾರೆ.

ಮೈರಾಡದವರು ಇಲ್ಲಿನ ಗ್ರಾಮಸ್ಥರಿಗೆ ಸಾಲ ಸೌಲಭ್ಯ ನೀಡುತ್ತಿದ್ದಾರೆ. ಸೌರಶಕ್ತಿ ಈ ಗ್ರಾಮಗಳ ಜನರ ಜೀವನದಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದೆ. ರಸ್ತೆ ಸೌಲಭ್ಯ ದೊರಕಿದರೆ ಈ ಭಾಗದ ಜನರ ಶೇ. ೭೦ರಷ್ಟು ಸಮಸ್ಯೆಗಳು ಬಗೆಹರಿಯುತ್ತದೆ. ಪ್ರಾಥಮಿಕ ಶಾಲೆ ಪ್ರೌಢಶಾಲೆಗೆ ಮೇಲ್ದರ್ಜೆಗೇರುತ್ತೆ; ಹೆಣ್ಣುಮಕ್ಕಳು ಇಲ್ಲೇ ಪ್ರೌಢಶಾಲಾ ಶಿಕ್ಷಣ ಪೂರ್ಣಗೊಳಿಸಬಹುದು; ಪ್ರಾಥಮಿಕ ಶಿಕ್ಷಣಕ್ಕೇ ವಿದ್ಯಾಭ್ಯಾಸ ಮೊಟಕುಗೊಳಿಸುವವರ ಸಂಖ್ಯೆಯೂ ಕಡಿಮೆ ಆಗುತ್ತೆ.

ಪ್ರಸ್ತುತ ಒಟ್ಟು ಆರು ಸ್ವಯಂಸೇವಾ ಸಂಸ್ಥೆಗಳು ಈ ಭಾಗದಲ್ಲಿ ಸಕ್ರಿಯವಾಗಿವೆ. ಸರ್ಕಾರದ ವತಿಯಿಂದ ಸೋಲಾರ್ ಬೀದಿ ದೀಪ ನೀಡಲಾಗಿದ್ದರೂ ನಿರ್ವಹಣೆ ಕೊರತೆ ಇದೆ. ಬೇಸಿಗೆಯಲ್ಲಿ ನೀರಿನ ಬವಣೆ ಹೇಳಲಸಾಧ್ಯ. ಒಂದು ಮನೆಗೆ ದಿನಕ್ಕೆ ಐದು ಬಿಂದಿಗೆ ನೀರು ಎಂದು ನಿಗಡಿಪಡಿಸಲಾಗುತ್ತದೆ.

ಎಷ್ಟೇ ಮಂದಿ ಇರಲಿ ಸ್ನಾನ, ಶೌಚ, ಕುಡಿಯಲು, ಅಡುಗೆ, ದನಕರು ಕುರಿಗಳಿಗೆ..ಎಲ್ಲವೂ ಇಷ್ಟರಲ್ಲೇ ಆಗಿ ತೀರಬೇಕು ಎಂದು ಈ ಕಾಡುಕೊಂಪೆಗಳ ಜನರ ಸಂಕಷ್ಟಮಯ ಜೀವನದ ಚಿತ್ರಣ ನೀಡುತ್ತಾರೆ ತೊಳಸಿಕೆರೆ ಶಾಲಾ ಮುಖ್ಯೋಪಾಧ್ಯಾಯರಾದ ಎಚ್.ಎಸ್. ಮಹೇಶ್.

ಸರ್ಕಾರೇತರ ಸಂಸ್ಥೆಗಳು ತಂತಮ್ಮ ಸೀಮಿತ ಪರಿಧಿಯಲ್ಲಿ ಈ ಕಾಡುಕೊಂಪೆಗಳ ಜನರ ಜೀವನ ಹಸನು ಗೊಳಿಸಲು, ಅವರು ಸ್ವಾವಲಂಬಿಗಳಾಗಿ ಬದುಕಲು ದಾರಿ ತೋರಿಸುತ್ತಿವೆ ನಿಜ. ಆದರೆ ಈ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕಿರುವುದು ಸರ್ಕಾರದ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು.

ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿಯೇ ಮಹದೇಶ್ವರ ಬೆಟ್ಟ ಪ್ರದೇಶದ ಗ್ರಾಮಗಳು ಶತಮಾನಗಳಿಂದಲೂ ಕಗ್ಗತ್ತಲೆಯ ಕುಗ್ರಾಮಗಳಾಗಿ ಉಳಿಯುವಂತಾಗಿದೆ. ಯಾವುದೇ ಮೂಲಸೌಕರ್ಯಗಳಿಲ್ಲದ ಇಲ್ಲಿನ ಜನರು ಸಂವಿಧಾನದ್ಧ ಹಕ್ಕುಗಳಿಂದಲೂ ವಂಚಿತರಾಗಿರುವುದು ಪರಿಸ್ಥಿತಿಯ ಕ್ರೂರವ್ಯಂಗ್ಯವೇ ಸರಿ.

ಅಧಿಕ ಮರಣ ಪ್ರಮಾಣ..!

ಆರೋಗ್ಯ ಸೇವೆಯಲ್ಲಿ ತೀರಾ ಹಿಂದುಳಿದಿರುವ ಪ್ರದೇಶವಾಗಿರುವ ಮಲೆ ಮಹದೇಶ್ವರ ಬೆಟ್ಟ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು ೧೮ ಗ್ರಾಮಗಳು ಹಾಗೂ ೧೫ ಸಾವಿರ ಜನಸಂಖ್ಯೆಯಿದೆ. ಹೆಣ್ಣುಭ್ರೂಣ ಹತ್ಯೆ, ಪ್ರಸವ ಪೂರ್ವ ಮತ್ತು ಪ್ರಸವ ನಂತರ ತಾಯಿ-ಮಗು ಇಬ್ಬರ ಸಾವಿನ ಸಂಖ್ಯೆ ರಾಜ್ಯದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿರುವ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಈ ಗ್ರಾಮ ಪಂಚಾಯ್ತಿ ಹಾಗೂ ಸಮೀಪದಲ್ಲಿರುವ ಗೋಪಿನಾಥಂ ಗ್ರಾಮ ಪಂಚಾಯ್ತಿಗಳಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಆರ್‌ಎಚ್‌ಎಂ) ವ್ಯಾಪ್ತಿಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಕಾಳಜಿ ಯೋಜನೆ ಜಾರಿಗೊಳಿಸಲಾಗಿದೆ.

ಈ ಯೋಜನೆಯನ್ವಯ ಸ್ಥಳೀಯ ಮಹಿಳೆಯರಿಗೆ ಸ್ವಚ್ಛತೆ, ಆರೋಗ್ಯ ಕಾಳಜಿ, ರಕ್ತಹೀನತೆ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸುವುದು, ಗರ್ಭಿಣಿಯರಿಗೆ ಮೂರು ತಿಂಗಳಿಗೊಮ್ಮೆ ಕೆಂಪುರಕ್ತ ಪ್ರಮಾಣ ಪರೀಕ್ಷೆ, ಅಗತ್ಯ ಟಾನಿಕ್, ಮಾತ್ರೆಗಳನ್ನು ಒದಗಿಸಲಾಗುತ್ತಿದೆ. ಥಾಟ್ಸ್ ವರ್ಕ್ ಇಂಡಿಯಾ ಪ್ರೈ ಲಿ. ಎರಡು ವರ್ಷಗಳ ಈ ಯೋಜನೆ ಅನುಷ್ಠಾನಕ್ಕೆ ಹಣಕಾಸಿನ ನೆರವು ನೀಡಿದೆ. 

ಕಲುಷಿತ ಕುಡಿಯುವ ನೀರು

ಕೃಷಿ, ಪಶು ಸಂಗೋಪನೆಯೇ ಇಲ್ಲಿನ ಜನರ ಜೀವನಾಧಾರ. ಜಾನುವಾರುಗಳ ಸಂಖ್ಯೆ ಸಾಕಷ್ಟಿರುವುದರಿಂದ ತೆರೆದ ಬಾವಿ, ಹರಿಯುವ ಝರಿ, ತೊರೆಗಳ ನೀರೆಲ್ಲ ಕಲುಷಿತಗೊಂಡಂತದ್ದೇ. ಹಾಗಾಗಿ ಈ ಪ್ರದೇಶದಲ್ಲಿ ನೀರಿನಿಂದ ಉಂಟಾಗುವ ಸೋಂಕುಗಳ ಆರೋಗ್ಯ ಸಮಸ್ಯೆ ವ್ಯಾಪಕವಾಗಿದೆ. ಲಭ್ಯತೆ ವಿರಳವಾಗಿರುವ ಶುದ್ಧ ಕುಡಿಯುವ ನೀರಿನ ಪೂರೈಕೆ ಹಾಗೂ ನೀರು ಶುದ್ಧೀಕರಣ ಘಟಕಗಳ ಅಗತ್ಯತೆ ಇದೆ. 

ಸಿಬ್ಬಂದಿ ಕೊರತೆ

ಮಲೆ ಮಹದೇಶ್ವರ ಬೆಟ್ಟ ಪಂಚಾಯ್ತಿ ವ್ಯಾಪ್ತಿಯಲ್ಲಿ ೩೨ ಗ್ರಾಮಗಳಿದ್ದು ೩೨ ಸದಸ್ಯರಿದ್ದಾರೆ; ೧೨ ಸಾವಿರ ಜನಸಂಖ್ಯೆಯಿದೆ. ಇಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎರಡು ಉಪಕೇಂದ್ರಗಳಿವೆ. ಎರಡೂ ಉಪಕೇಂದ್ರಗಳು ಕಾರ್ಯನಿರ್ವಹಿಸುತ್ತಿಲ್ಲ. ಗೋಪಿನಾಥಂ ಹಾಗೂ ನಾಗಮಲೆ ರಸ್ತೆಯಲ್ಲಿರುವ ಹಳೆಯೂರು ಉಪಕೇಂದ್ರಗಳು ಸಿಬ್ಬಂದಿ ಕೊರತೆಯಿಂದಾಗಿ ‘ಕೋಮಾ’ ಸ್ಥಿತಿಯಲ್ಲಿವೆ.
ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬ ಆಯುಷ್ ವೈದ್ಯರಿದ್ದಾರೆ.

ಆದರೆ, ನರ್ಸ್ ಇಲ್ಲ; ಕೇವಲ ಒಬ್ಬ ಎಎನ್‌ಎಂ ಇದ್ದಾರೆ. ಸರ್ಕಾರದ ಆದೇಶದ ಪ್ರಕಾರ ಪ್ರತಿ ಸಾವಿರ ಮಹಿಳೆಯರಿಗೊಬ್ಬ ಆಶಾ ಕಾರ್ಯಕರ್ತೆ ಇರಬೇಕು, ಆದರೆ ಇಲ್ಲಿ ಒಬ್ಬರೇ ಒಬ್ಬ ಆಶಾ ಕಾರ್ಯಕರ್ತೆ ಇದ್ದಾರೆ. ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಮೂಳೆ ತಜ್ಞರು, ಜನರಲ್ ಫಿಸಿಶಿಯನ್‌ರಂತಹ ಪರಿಣತ ವೈದ್ಯರು ಹಾಗೂ ಶುಶ್ರೂಷಕಿಯರು ಅವಶ್ಯ ಬೇಕೇ ಬೇಕೆಂಬ ಅನಿವಾರ್ಯತೆ ಇದೆ.

ಆದರೆ ಕಾಡು ಪ್ರದೇಶ, ರಸ್ತೆ ಇಲ್ಲ, ಸಂಚಾರ ಕಠಿಣ, ಉಳಿಯಲು ಸುರಕ್ಷಿತವಾಗಿಲ್ಲ, ಸಂಜೆ ೬ರ ನಂತರ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿನ ಗ್ರಾಮಗಳ ಅರಣ್ಯ ಇಲಾಖೆ ಗೇಟ್ ಮುಚ್ಚಲಾಗುತ್ತದೆ. ಪ್ರಾಣಕ್ಕೆ ಎಂಥದ್ದೇ ಸಂಚಕಾರ ಒದಗಿದರೂ, ಯಾವುದೇ ತುರ್ತು ವೈದ್ಯಕೀಯ ಸೇವೆ ಲಭ್ಯವಿಲ್ಲ. ಹಾಗಾಗಿ ಇಲ್ಲಿನ ಜನರದ್ದು ಇಂತಹ ಸಂದರ್ಭಗಳಲ್ಲಿ ಕೇವಲ ಅರಣ್ಯರೋದನವಷ್ಟೆ. ಸ್ಪಂದಿಸುವ ಅಧಿಕಾರಿ, ರಾಜಕಾರಣಿಗಳಿಲ್ಲ.

ಮಳೆ ನಿಂತ ಮೇಲೆ ಕ್ರಮ

ಮಲೆ ಮಹದೇಶ್ವರ ಬೆಟ್ಟದ ಡಿಎಫ್‌ಒ ವಿ. ಏಡುಕೊಂಡಲು ಅವರ ಪ್ರಕಾರ- ಇಲ್ಲಿನ ಜನರಿಗೆ ರಸ್ತೆಯದ್ದು ಪ್ರಮುಖ ಸಮಸ್ಯೆಯೇ ಅಲ್ಲ. ಗುಡ್ಡಗಾಡು ಮತ್ತು ಇಳಿಜಾರು ಪ್ರದೇಶವಾದ್ದರಿಂದ ಬಯಲುಸೀಮೆಯಂತೆ ಉತ್ತಮ ರಸ್ತೆ ಸೌಲಭ್ಯ ಕಲ್ಪಿಸಲು ಸಾಧ್ಯವಿಲ್ಲ. ಇಲ್ಲಿ ೮೦೦, ೯೦೦, ೧೨೦೦ ಮೀಟರ್‌ನಷ್ಟು ಇಳಿಜಾರು ಪ್ರದೇಶಗಳಿವೆ. ಹಾಗಾಗಿ ಇಲ್ಲಿ ಏನೇ ಮಾಡುವುದಾದರೂ ಮಣ್ಣು ಸವಕಳಿ, ಗುಡ್ಡ ಕುಸಿತವನ್ನು ಗಮನದಲ್ಲಿಟ್ಟುಕೊಳ್ಳಲೇಬೇಕು.

ವನ್ಯಜೀವಿ ಧಾಮದ ಕಾನೂನಿನ ಪ್ರಕಾರ ಇಲ್ಲಿಯವರೆಗೆ ಏನು ವ್ಯವಸ್ಥೆ ಇದ್ದಿತೋ ಅದನ್ನೇ ಮುಂದುವರೆಸಬೇಕು. ಕಚ್ಚಾ ರಸ್ತೆ ಇದ್ದರೆ ಅದನ್ನು ಹಾಗೇ, ಪಕ್ಕಾ ರಸ್ತೆ ಇದ್ದರೆ ಅದನ್ನೇ ನಿರ್ವಹಿಸಿಕೊಂಡು ಹೋಗಿ, ಹೊಸತಾಗಿ ಏನನ್ನೂ ಮಾಡುವಂತಿಲ್ಲ. ಇಲ್ಲಿ ಹಿಂಗಾರು ಮಳೆಯ ಆರ್ಭಟ ಜೋರು. ಈ ಬಾರಿ ದಾಖಲೆಯ ಮಳೆಯಾಗಿ ಸಂಚಾರ ಮಾರ್ಗಗಳು ಕೊಚ್ಚಿಹೋಗಿವೆ.

ಅರಣ್ಯ ಇಲಾಖೆ ವತಿಯಿಂದ ಕಾನೂನಿನ ಮಿತಿಯಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿರುವ ಜನರಿಗೆ ಅನುಕೂಲ ಮಾಡಿಕೊಡಲು ಸಾಕಷ್ಟು ಶ್ರಮಿಸುತ್ತಿದೆ. ಗ್ರಾಮ ಅರಣ್ಯ ಸಮಿತಿ ರಚಿಸಿ, ಮೋಟಾರು ವಾಹನಗಳಲ್ಲಿ ಪಡಿತರ ಸಾಮಾನು, ಶಾಲಾ ಮಕ್ಕಳ ಬಿಸಿಯೂಟದ ಪದಾರ್ಥಗಳು, ಶಿಕ್ಷಕರ ಅಗತ್ಯ ವಸ್ತುಗಳ ಸಾಗಣೆಗೆ ಇತ್ತೀಚಿನ ದಿನಗಳಲ್ಲಿ ವ್ಯವಸ್ಥೆ ಮಾಡಿಕೊಡಲಾಗಿದೆ.

ಮಳೆ ಕಡಿಮೆ ಆದಮೇಲೆ ತೊಳಸಿಕೆರೆ, ಇಂಡಿಗನತ್ತ ಗ್ರಾಮಗಳ ಸಂಚಾರ ಮಾರ್ಗ ವ್ಯವಸ್ಥೆಗೆ ಆಯ್ಯನುವೆಲ್ ಪ್ಲಾನ್ ಆಫ್ ಆಪರೇಷನ್ ಅಡಿಯಲ್ಲಿ ತುರ್ತುಕ್ರಮ ಕೈಗೊಳ್ಳಲಾಗುವುದು. ಈ ಗ್ರಾಮಗಳ ಅರಣ್ಯ ಸಮಿತಿಗಳಿಗೆ ಪ್ರತ್ಯೇಕವಾಗಿ ಅರಣ್ಯ ಇಲಾಖೆ ವತಿಯಿಂದ ಜನರ ಉಪಯೋಗಕ್ಕಾಗಿ ವಾಹನ ಸೌಲಭ್ಯ ಕಲ್ಪಿಸುವುದಕ್ಕೂ ಆಲೋಚಿಸಲಾಗಿದೆ.

ಒಂದು ಕೊಡ ನೀರಿಗೆ ಬೆಟ್ಟ ಹತ್ತಿ ಇಳಿಯಬೇಕು

ಹೌದು. ತೋಕರೆ ಗ್ರಾಮ ವಿಪರೀತ ಏರು, ಇಳಿಜಾರಿನ ಹಳ್ಳಿ. ಇಲ್ಲಿ ಮಹಿಳೆಯರ ಸಂಕಷ್ಟ ಹೇಳತೀರದು. ಎತ್ತರದ ಕಡಿದಾದ ಪ್ರದೇಶದಲ್ಲಿರುವ ಕೊಳವೆ ಬಾವಿಯಿಂದ ನೀರು ಸಂಗ್ರಹಿಸಲು ಕನಿಷ್ಟ ನಲವತ್ತರಿಂದ ಅರವತ್ತು ನಿಮಿಷ ಕಾಯಬೇಕು. ನಂತರ ಸೊಂಟ, ತಲೆ ಮೇಲೆ ನೀರಿನ ಕೊಡಗಳನ್ನು ಹೊತ್ತುಕೊಂಡು ತಗ್ಗಿನಲ್ಲಿರುವ ಮನೆ ತಲುಪಬೇಕು.

ಬೇಸಿಗೆಯಲ್ಲಂತೂ ಈ ಭಾಗದ ಮಹಿಳೆಯರ ಸಂಕಷ್ಟ ಹೇಳತೀರದು. ಒಂದು ಬಿಂದಿಗೆ ನೀರಿಗೆ ಒಂದು ಬೆಟ್ಟ ಹತ್ತಿ ಮತ್ತೊಂದು ಬೆಟ್ಟ ಇಳಿಯಬೇಕು. ಕೆಲವೆಡೆ ಆನೆಗಳು ಕುಡಿಯುವ ನೀರಿನ ಪೈಪ್‌ಗಳನ್ನು ಹಾಳು ಮಾಡಿವೆ. ತೊರೆಗಳ ನೀರಿನಲ್ಲಿ ಬಟ್ಟೆ ಸ್ವಚ್ಛಗೊಳಿಸಿದರೆ ತಗ್ಗು ಪ್ರದೇಶದ ಗ್ರಾಮಗಳಲ್ಲಿ ಅದೇ ನೀರು ಕುಡಿಯುವುದಕ್ಕೆ ಬಳಕೆಯಾಗುತ್ತದೆ. ಇಲ್ಲಿನ ಮಹಿಳೆಯರಿಗೆ ನೀರು ತರುವುದೊಂದು ಸರ್ಕಸ್‌ನಂತೆ. ಬಹು ಎಚ್ಚರ ವಹಿಸಿ ಹೆಜ್ಜೆ ಇರಿಸಬೇಕು. ಕಡಿದಾದ ಕಲ್ಲುಗಳಿಂದಾವೃತವಾಗಿರುವ ತೋಕರೆ ಗ್ರಾಮದ ರಸ್ತೆ ಸಂಪರ್ಕಕ್ಕೆ ಸ್ಟೋನ್ ಪಿಚ್ಚಿಂಗ್ ಮಾಡಲೇಬೇಕು. 

ಏಳಕ್ಕೇ ಗುಡ್‌ಬೈ

ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹಗಳು ತೀರಾ ಇತ್ತೀಚಿನವರೆಗೂ ವ್ಯಾಪಕವಾಗಿದ್ದ ಈ ಪ್ರದೇಶದಲ್ಲಿ ಶಾಲಾ ಶಿಕ್ಷಣ ಅರ್ಧಕ್ಕೇ ಮೊಟಕುಗೊಳಿಸುವ ವಿದ್ಯಾರ್ಥಿಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚು. ತೊಳಸಿಕೆರೆಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೈಕಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಇವರಲ್ಲಿ ಬಹುತೇಕ ಮಕ್ಕಳು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವ ಸಾಧ್ಯತೆ ತೀರಾ ಕಡಿಮೆ. ಇಲ್ಲಿ ಅತಿಹೆಚ್ಚಿನ ಕಲಿಕೆ ಎಂದರೆ ಪಿಯುಸಿ ಶಿಕ್ಷಣವಷ್ಟೆ. ಶೇ. ೯೫ ವಿದ್ಯಾರ್ಥಿನಿಯರು ೭ನೇ ತರಗತಿಗೆ ಓದಿಗೆ ತಿಲಾಂಜಲಿಯಿತ್ತರೆ, ಶೇ. ೫ರಷ್ಟು  ಹುಡುಗಿಯರು ಮಾತ್ರ ಹೈಸ್ಕೂಲ್/ಪಿಯುಸಿ ಮೆಟ್ಟಿಲೇರುತ್ತಾರೆ.

ಬಂಧುಗಳ ಮನೆಗಳಲ್ಲಿ ಮತ್ತು ಹಾಸ್ಟೆಲ್‌ಗಳಲ್ಲಿ ಓದಿಸಲು ಪೋಷಕರು ಹಿಂಜರಿಯುವುದರಿಂದ ಅರಣ್ಯ ಭಾಗದ ಗ್ರಾಮಗಳ ಹೆಣ್ಣು ಮಕ್ಕಳು ಎಷ್ಟೇ ಚೆನ್ನಾಗಿ ಓದಿದರೂ ಏಳನೇ ತರಗತಿ ನಂತರ ಅವರಿಗೆ ಮನೆವಾರ್ತೆಯೇ ಕಾಯಂ. ಈ ಕಾರಣದಿಂದಲೇ ಇಲ್ಲೆಲ್ಲ ಬಾಲ್ಯ ವಿವಾಹ, ಅಸುರಕ್ಷಿತ ಹೆರಿಗೆ, ಬಾಣಂತಿ ಸಾವು, ಹಸುಳೆಗಳ ಸಾವು ಪ್ರಕರಣಗಳು ಹೆಚ್ಚು.

ಏನೇನು ಬೇಕು?

– ಶುದ್ಧ ಕುಡಿಯುವ ನೀರು
– ಸಂಚಾರ ಮಾರ್ಗ/ಕಚ್ಚಾ ರಸ್ತೆಯಾದರೂ ಸೈ
–  ತುರ್ತು ವೈದ್ಯಕೀಯ ಸೇವೆಯುಳ್ಳ ಆಸ್ಪತ್ರೆ
– ಪ್ರೌಢಶಾಲೆ-ಕಿರಿಯ ಕಾಲೇಜು
– ಬಾಲಕಿಯರ ವಸತಿ ಶಾಲೆ
– ಪ್ರಸೂತಿ ತಜ್ಞರು, ಜನರಲ್ ಫಿಸಿಶಿಯನ್, ಮಕ್ಕಳ ತಜ್ಞರು, ಮೂಳೆರೋಗ ತಜ್ಞರು
– ಸಂಚಾರಿ ಆರೋಗ್ಯ ಘಟಕ
– ಮಹಿಳೆಯರಿಗೆ ಕರಕುಶಲ ತರಬೇತಿ-ಮಾರಾಟ ವ್ಯವಸ್ಥೆ
– ಸೌರಶಕ್ತಿ ಆಧರಿತ ಗ್ರಾಮೀಣ ಜೀವನೋಪಾಯ ಯೋಜನೆ 

ಬೇಡ ಗಂಪಣ ಬುಡಕಟ್ಟು

ಮಲೆಮಹದೇಶ್ವರನ ಅನುಯಾಯಿಗಳಲ್ಲಿ ಬೇಡ ಗಂಪಣರು ಪ್ರಮುಖರು. ಚಾಮರಾಜನಗರ, ಕೊಳ್ಳೇಗಾಲ, ಹನೂರು ತಾಲೂಕುಗಳಲ್ಲಿ ಈ ಬುಡಕಟ್ಟಿನ ಸುಮಾರು ೧೫ ಸಾವಿರ ಹಾಗೂ ತಮಿಳುನಾಡಿನ ಬರಗೂರು ಹಾಗೂ ಸುತ್ತಮುತ್ತಲಿನ ೩೬ ಗ್ರಾಮಗಳಲ್ಲಿ ಸುಮಾರು ೩೦ ಸಾವಿರ ಮಂದಿ ನೆಲೆಸಿದ್ದಾರೆ. ಇವರು ಈ ಭಾಗದ ಮೂಲನಿವಾಸಿಗಳು.

ಮಹದೇಶ್ವರರು ನೆಲೆಸಿದ್ದ ಕಾಲದಲ್ಲಿ ಇವರಿಗೆ ಲಿಂಗಧಾರಣೆ ಮಾಡಿಸಿ, ಸಸ್ಯಾಹಾರ ರೂಢಿಸಿದ್ದರಿಂದ ಇವರು ಕಾಡಿನ ಮಕ್ಕಳಾದರೂ ಮಾಂಸಾಹಾರದಿಂದ ಬಲುದೂರ. ಮಾದಪ್ಪನ ವಕ್ಕಲುತನದ ದೆಸೆಯಿಂದಾಗಿ ದೇವಾಲಯದಲ್ಲಿ ಅವನನ್ನು ಪೂಜಿಸುವ ಅಧಿಕಾರವೂ ಇದೆ. ಇವಿಷ್ಟೇ ಇವರಿಗೆ ಬಂದ ಭಾಗ್ಯ.

ಕೋಟಿಗಟ್ಟಲೆ ಆದಾಯದ ಮಲೆ ಮಹದೇಶ್ವರ ಬೆಟ್ಟದ ದೇವಾಲಯದಲ್ಲಿ ಪೂಜೆ ಮಾಡುವ ಇವರಿಗೆ ಭಕ್ತಾರ್ಥಿಗಳು ನೀಡುವ ತಟ್ಟೆಕಾಸು ಅಥವಾ ಮಂಗಳಾರತಿ ತಟ್ಟೆಯ ದಕ್ಷಿಣೆ ಹೊರತು ಪಡಿಸಿದರೆ ಮತ್ಯಾವುದೇ ಆದಾಯವಿಲ್ಲ. ಭಕ್ತರು ನೀಡುವ ಕೋಟಿಗಟ್ಟಲೆ ಹುಂಡಿ ಕಾಣಿಕೆ ಮುಜರಾಯಿ ಇಲಾಖೆ ಮೂಲಕ ಬೊಕ್ಕಸ ಸೇರುತ್ತದೆ.

ಬಡತನ ರೇಖೆಗಿಂತ ಕೆಳಗಿನ ಕುಟುಂಬದವರಾದ ಬೇಡ ಗಂಪಣ ಲಿಂಗಾಯಿತರಿಗೆ ಸರ್ಕಾರದ ಯಾವ ಸವಲತ್ತೂ ಲಭ್ಯವಾಗುತ್ತಿಲ್ಲ. ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗುಡ್ಡಗಾಡುಗಳಲ್ಲಿ ನೆಲೆಯೂರಿರುವ ಈ ಬುಡಕಟ್ಟು ಜನರು ತಮ್ಮ ಸಮಾಜದವರನ್ನು ಹೊರತು ಪಡಿಸಿ ಹೊರಗಿನವರೊಂದಿಗೆ ವೈವಾಹಿಕ ಸಂಬಂಧ ಬೆಳೆಸುವುದಿಲ್ಲ.

ಹಸುವಿನ ಸೆಗಣಿಯ ಬೆರಣಿ ಸುಟ್ಟು ವಿಭೂತಿ ಉಂಡೆ ತಯಾರಿಸುವುದರಲ್ಲಿ ಬೇಡಗಂಪಣ ಸಮುದಾಯದ ಹೆಣ್ಣುಮಕ್ಕಳು ನಿಷ್ಣಾತರು. ಆದರೆ ಅದನ್ನು ಮಾರಾಟ ಮಾಡಲು ಮಳಿಗೆ ಹಾಕುವಷ್ಟು ಸಶಕ್ತರಲ್ಲ. ಬುಡಕಟ್ಟು ಜನರಾಗಿದ್ದರೂ ಸರ್ಕಾರದ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿಲ್ಲವಾದ್ದರಿಂದ ಇವರಿಗೆ ಗಿರಿಜನರ ಮಾನ್ಯತೆ, ಸ್ಥಾನಮಾನ, ಸವಲತ್ತುಗಳ್ಯಾವುವೂ ಲಭ್ಯವಾಗಿಲ್ಲ.

ಕಗ್ಗತ್ತಲೆಯ ಪ್ರದೇಶದಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲದೆ ತೀರಾ ಬಡತನದಲ್ಲಿ ಜೀವನ ನಡೆಸುತ್ತಿರುವ ಬೇಡ ಗಂಪಣ ಸಮುದಾಯದವರಿಗೆ ತಮ್ಮನ್ನು ರಾಜಕಾರಣಿಗಳು, ಅಧಿಕಾರಿಗಳೂ ಸೇರಿದಂತೆ ಸಮಸ್ತರೂ ಕುರಿಗಳಂತೆ ಕಾಣುತ್ತಿದ್ದಾರೆ ಎಂಬ ಅಳಲು ದಟ್ಟವಾಗಿದೆ. ಇವರ ಈ ಪರಿಸ್ಥಿತಿಗೆ ಮುಖ್ಯ ಕಾರಣ  ವಿದ್ಯಾವಂತರ ಕೊರತೆ.

ಈ ಸಮುದಾಯದ ಯುವಕರು ಕಾಲೇಜು ಮೆಟ್ಟಿಲು ಏರಿದ್ದು ತೀರಾ ಇತ್ತೀಚೆಗೆ. ಬೆರಳೆಣಿಕೆಯಷ್ಟು ಮಂದಿ ಶಿಕ್ಷಕರು, ಪೊಲೀಸ್ ಪೇದೆಗಳನ್ನು ಹೊರತು ಪಡಿಸಿದರೆ ಮತ್ಯಾರೂ ಉದ್ಯೋಗಸ್ಥರು ಇವರಲ್ಲಿಲ್ಲ. ಬಹು ಪ್ರಯತ್ನದ ಫಲವಾಗಿ ಬೇಡ ಗಂಪಣ ಸಮುದಾಯದ ಒಬ್ಬೇ ಒಬ್ಬರು ತಾಲೂಕು ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗುವಲ್ಲಿ ಸಫಲರಾಗಿದ್ದಾರೆ.

ಶಿಕ್ಷಣದ ಕೊರತೆಯ ಕಾರಣ ಇವರಿಗೆ ತಮಗೇನು ಬೇಕು, ಅದನ್ನು ಯಾರ ಬಳಿ ಕೇಳಬೇಕು ಎಂಬುದರ ತಿಳವಳಿಕೆ ಇರಲಿಲ್ಲ. ರಾಜಕಾರಣಿಗಳಂತೂ ಚುನಾವಣೆಯ ಸಮಯದಲ್ಲಿ ಕೇವಲ ಓಟಿಗಾಗಿ ಬಳಸಿಕೊಂಡು, ಉಳಿದ ದಿನಗಳಲ್ಲಿ ಇವರ ಕಡೆ ತಿರುಗಿಯೂ ನೋಡುವುದಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಕೆಲ ಯುವಕರು ಎಚ್ಚೆತ್ತುಕೊಂಡು, ತಂಡ ಕಟ್ಟಿಕೊಂಡು ತಮ್ಮ ಸಮುದಾಯವನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಪರಿಣಾಮವಾಗಿ ಈ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ದೇಣಿಗೆ ಪಡೆದು ಬೆಂಗಳೂರಿನ ಅನಾಥ ಶಿಶುನಿವಾಸದವರ ಸಹಯೋಗದೊಂದಿಗೆ ಇಪ್ಪತ್ತು ಮಂದಿ ಬಾಲಕಿಯರಿಗೆ ಹನೂರಿನಲ್ಲಿ ಹಾಸ್ಟೆಲ್ ಪ್ರಾರಂಭಿಸಿ, ಶಿಕ್ಷಣ ಕೊಡಿಸಲಾಗುತ್ತಿದೆ.

ಇದೇ ರೀತಿ ಬೆಂಗಳೂರಿನ ಅಬಲಾಶ್ರಮದಲ್ಲಿ ಈ ವರ್ಷ ಈ ಸಮುದಾಯದ ೨೫ ಹುಡುಗಿಯರಿಗೆ ವಸತಿ ಸೌಲಭ್ಯ ಕಲ್ಪಿಸಿ, ಶಿಕ್ಷಣ ಕೊಡಿಸಲಾಗುತ್ತಿರುವುದೊಂದು ಉತ್ತಮ ಬೆಳವಣಿಗೆ. ಹನೂರಿನಲ್ಲಿ ಸರ್ಕಾರದ ನೆರವಿಲ್ಲದೆ ಖಾಸಗಿಯಾಗಿ ಬಾಲಕಿಯರ ಹಾಸ್ಟೆಲ್ ಪ್ರಾರಂಭಿಸಲು ಕಾರಣವೆಂದರೆ ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ಈ ಮಕ್ಕಳಿಗೆ ಜಾತಿ ಕಾರಣದಿಂದ ಪ್ರವೇಶ ನಿರಾಕರಿಸಿದ್ದು.

ಭಾಷಾವಾರು ಪ್ರಾಂತ್ಯಗಳ ಪುನಾರಚನೆ ಆಗುವವರೆಗೂ ತಮಿಳುನಾಡು ಸರ್ಕಾರದ ವ್ಯಾಪ್ತಿಯಲ್ಲಿದ್ದ ಈ ಪ್ರದೇಶ ೧೯೫೨ರಲ್ಲಿ ಕನ್ನಡ ನಾಡಿನ ಆಡಳಿತಕ್ಕೆ ಒಳಪಟ್ಟಾಗ ಇವರ ಬಳಿ ಇದ್ದ ೧೨೦೦ ಎಕರೆ ಜಮೀನನ್ನು ದೇವಾಲಯದ ಅಭಿವೃದ್ಧಿ ಸಲುವಾಗಿ ತೆಗೆದುಕೊಳ್ಳಲಾಯಿತು ಎನ್ನಲಾಗಿದೆ.

ದೇವಸ್ಥಾನಕ್ಕಾಗಿ ಜಮೀನು ಕೊಟ್ಟರೂ ಇವರನ್ನು ಇಲ್ಲಿನ ಉದ್ಯೋಗಗಳಲ್ಲಿ, ವ್ಯಾಪರೀ ಮಳಿಗೆಗಳಲ್ಲಿ ಇವರಿಗೆ ಅವಕಾಶವಿಲ್ಲ. ಲಕ್ಷಾಂತರ ರೂ ಬಿಡ್ ಕೂಗಿ, ಹರಾಜಿನಲ್ಲಿ ಅವಕಾಶ ಪಡೆಯುವಷ್ಟು ಇವರು ಸ್ಥಿತಿವಂತರಲ್ಲ. ಹೊರಗಿನವರು ಟ್ರಸ್ಟಿ, ಆಫೀಸರ್‌ಗಳಾಗಿ ಬರುತ್ತಾರೆ; ಅಂಗಡಿ ಹಾಕಿಕೊಳ್ಳಲು ಹೊರಗಿನವರಿಗೆ ಅವಕಾಶವಿದೆ, ನಮಗಿಲ್ಲ ಎನ್ನುವ ಕೊರಗು ಇವರದು.

ಮುಜರಾಯಿ ಇಲಾಖೆಗೆ ಹಸ್ತಾಂತರವಾಗುವವರೆಗೂ ದೇವಾಲಯದ ಆಸ್ತಿ, ಮೈಸೂರು ಮಹಾರಾಜರು ನೀಡಿರುವ ಅಮೂಲ್ಯ ಒಡವೆ ಕಾಣಿಕೆಗಳನ್ನು ಜತನದಿಂದ ಕಾಪಾಡಿ, ಸರ್ಕಾರಕ್ಕೆ ಒಪ್ಪಿಸಿದವರು ನಾವು, ಆದರೆ ಇಂದು ನಮ್ಮಗಳನ್ನೇ ದೇವಾಲಯದಿಂದ ದೂರ ಇರಿಸಲಾಗುತ್ತಿದೆ ಎಂಬ ನೋವು ಬೇಡ ಗಂಪಣ ಸಮುದಾಯದವರದ್ದು.

ಮೊದಲು ಪಶುಪಾಲನೆ, ಬಿದಿರಿನ ಬುಟ್ಟಿ ನೇಯುವುದು, ವಿಭೂತಿ ಉಂಡೆ ತಯಾರಿಸುವುದು, ಕಿರು ಅರಣ್ಯ ಉತ್ಪನ್ನ ಸಂಗ್ರಹಣೆ-ಇವುಗಳಿಂದ ಜೀವನ ನಡೆಯುತ್ತಿತ್ತು. ಆದರೆ ಈಗ ಅಭಯಾರಣ್ಯ ಕಾನೂನು ಇವಕ್ಕೆಲ್ಲ ತೊಡಕಾಗಿದೆ.  ಮಾದಪ್ಪನ ಪೂಜೆಗೆ ಅವಕಾಶ ಇರುವುದು ಬೇಡ ಗಂಪಣರಲ್ಲಿ ಕೇವಲ ಮೂರು ಗುಂಪಿಗೆ ಮಾತ್ರ. ಉಳಿದವರು ಹೊಟ್ಟೆಪಾಡಿಗೆ ಇತರೆ ಉದ್ಯೋಗ ಅವಲಂಬಿಸಬೇಕು.

ಹುಂಡಿಕಾಣಿಕೆ, ಅತಿಥಿಗೃಹ ಕೊಠಡಿಗಳ ಬಾಡಿಗೆ, ಬಸ್ ವ್ಯವಸ್ಥೆ, ಪ್ರಸಾದ, ವಿವಿಧ ಸೇವೆಗಳ ಮೂಲಕ ತಿಂಗಳಿಗೆ ಕೋಟ್ಯಾಂತರ ರೂ. ಆದಾಯ ಗಳಿಸುವ ಮಹದೇಶ್ವರ ಬೆಟ್ಟ ದೇವಾಲಯ ಅಭಿವೃದ್ಧಿ ಪ್ರಾಧಿಕಾರದವರೇಕೆ ಈ ಹಳ್ಳಿಗಳನ್ನು ದತ್ತು ತೆಗೆದುಕೊಂಡು ಉದ್ಧಾರ ಮಾಡಬಾರದು? ಹಾಗೆ ನೋಡಿದರೆ ತಮಿಳುನಾಡು ಸರ್ಕಾರ ಬೇಡಗಂಪಣರು ನೆಲೆಸಿರುವ ಸ್ಥಳಗಳಲ್ಲಿ ಮೂಲಸೌಕರ್ಯಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಿದೆ. 

ದತ್ತು ತೆಗೆದುಕೊಳ್ಳಲಿ

ಎಲ್ಲ ರೀತಿಯಲ್ಲೂ ತೀರಾ ಹಿಂದುಳಿದಿರುವ ಬೇಡ ಗಂಪಣರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಮೀಸಲಾತಿ ಅತ್ಯವಶ್ಯ. ಹಂಪೆ ವಿಶ್ವವಿದ್ಯಾಲಯದವರು ಈ ಕುರಿತಂತೆ ಪ್ರತ್ಯೇಕ ಸಂಶೋಧನೆ ನಡೆಸಿ, ಪುಸ್ತಕ ಪ್ರಕಟಿಸಿದ್ದಾರೆ. ಮೀಸಲಾತಿ ಜಾರಿಗೆ ಆಗ್ರಹಿಸಿ ಸಾಕಷ್ಟು ಹೋರಾಟ ನಡೆದಿದೆ.

ಆದರೆ ಇವೆಲ್ಲ ಕೇವಲ ಅರಣ್ಯರೋದನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುವ ಬೇಡ ಗಂಪಣ ಸರದಿ ಪೂಜಾ ಅರ್ಚಕರ ಸಂಘದ ಗೌರವಾಧ್ಯಕ್ಷರಾದ ಪುಟ್ಟಣ್ಣ, ಸರ್ಕಾರ ನಮ್ಮ ಗ್ರಾಮಗಳನ್ನು ದತ್ತು ತೆಗೆದುಕೊಂಡು ಮೂಲ ಸೌಕರ್ಯಗಳನ್ನು ಒದಗಿಸಬೇಕು. ದೇವಸ್ಥಾನದ ಉದ್ಯೋಗದಲ್ಲಿ, ವ್ಯಾಪಾರೀ ಮಳಿಗೆ-ಅಂಗಡಿ ಹಂಚಿಕೆಯಲ್ಲಿ ಬೇಡಗಂಪಣರಿಗೆ ಮೀಸಲಾತಿ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.

ಸಸ್ಯಾಹಾರಿಗಳಾಗಿದ್ದೇ ಪಾಪವೇ?

ತಲೆಮಾರುಗಳಿಂದ ಕಾಡಿನಲ್ಲಿ ಪ್ರಾಣಿಗಳ ಬೇಟೆಯಾಡಿ ಜೀವಿಸುತ್ತಿದ್ದ ಬೇಡರು ನಾವು ಮಾದಪ್ಪನ ಆಜ್ಞೆಯಂತೆ ಮಾಂಸಾಹಾರ ತ್ಯಜಿಸಿ, ಲಿಂಗ ಕಟ್ಟಿಕೊಂಡಿದ್ದು ನಾವು ಮಾಡಿದ ಪಾಪವೇ? ಈ ಕಾರಣಕ್ಕಾಗಿ ನಮ್ಮನ್ನು ಮೀಸಲಾತಿ ಪಟ್ಟಿಗೆ ಸೇರಿಸದೆ ಸರ್ಕಾರದ ಎಲ್ಲ ಸವಲತ್ತುಗಳಿಂದ ವಂಚಿತರನ್ನಾಗಿಸಿ ಈ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ನಮ್ಮನ್ನು ಕಾಡುಜನರನ್ನಾಗಿಯೇ ಉಳಿಸಿರುವುದು ಎಷ್ಟು ಸರಿ?

ಜಿಲ್ಲಾ ಕೇಂದ್ರಗಳಿಗೆ ವಿಮಾನ ಹಾರಾಟ ಪ್ರಾರಂಭವಾಗಿರುವ ಈ ದಿನಗಳಲ್ಲಿ ನಮ್ಮ ಹೆಣ್ಣುಮಕ್ಕಳು ಮಾತ್ರ ಹೆರಿಗೆಗೆ ಜೋಲಿಯಲ್ಲಿ ಬೆಟ್ಟ ಹತ್ತಿ ಆಸ್ಪತ್ರೆ ಸೇರಬೇಕೆ? ನಮ್ಮ ಜನಾಂಗದ ಶೇ. ೯೯ ಮಂದಿ ಅವಿದ್ಯಾವಂತರು. ಅರವತ್ತು ಸಾವಿರ ಮಂದಿಗೆ ಇಬ್ಬರು ಮಾತ್ರ ಪದವೀಧರರಾದರೆ ಸಾಕೆ?

ನಮ್ಮ ಆಹಾರ ಕ್ರಮ ಹಾಗೂ ಧಾರ್ಮಿಕ ನಂಬಿಕೆ- ಸರ್ಕಾರದ ಸವಲತ್ತು ಪಡೆಯಲು ಅಡ್ಡಿಯಾಗಿರುವುದೆಂದರೆ ಅದಕ್ಕೆ ಅರ್ಥ ಇದೆಯೇ? ನಮಗೆ ಸರ್ಕಾರ ಗುಡ್ಡಗಾಡು ಜನಾಂಗದ ಮೀಸಲಾತಿಯನ್ನು ಈಗಾಲಾದರೂ ಜಾರಿಗೊಳಿಸಲೇಬೇಕು ಎಂಬ ಆಗ್ರಹ ಬೇಡ ಗಂಪಣ ಮೀಸಲಾತಿ ಹೋರಾಟಗಾರರಾದ ಕೆ.ವಿ. ಮಾದೇಶ್ ಅವರದ್ದು.

। ಈ ಲೇಖನ ಮೊದಲು ‘ಸಂಯುಕ್ತ ಕರ್ನಾಟಕ’ದಲ್ಲಿ ಪ್ರಕಟವಾಗಿತ್ತು ।

‍ಲೇಖಕರು

December 11, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vasudeva Sharma

    Dear Shanthala, very good rendition and very well written. Thanks for giving a clear picture.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: