ಕಾಡಿದ ‘ನಾರಸಿಂಹ’

ಕಿರಣ್ ಭಟ್

ಅಭಿನಯ: ನೃತ್ಯನಿಕೇತನ ಕೊಡವೂರು
ರಚನೆ: ಸುಧಾ ಆಡುಕಳ
ಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್
ನೃತ್ಯ: ಮಾನಸಿ ಸುಧೀರ್, ಅನಘಶ್ರೀ.

ನಾಟಕ ಕೊನೆಯ ಹಂತಕ್ಕೆ ಬಂದಿದೆ. ಹಿರಣ್ಯಕಷ್ಯಪು ಕಂಭ ಒಡೆದಿದ್ದಾನೆ. ಘನಘೋರ ಶಬ್ದ. ನರಸಿಂಹ ಕಂಬದಿಂದ ಹೊರಬೀಳುತ್ತಿದ್ದಾನೆ..
ಥಟ್ಟನೆ ಆ ರಕ್ಕಸ, ಮಗನನ್ನ ಬರಸೆಳೆದು ಅಪ್ಪಿದ್ದಾನೆ. ಘೋರ ರೂಪ ಕಣ್ಣಿಗೆ ಕಂಡು ಮಗ ಬೆದರದಂತೆ. ಆತನಲ್ಲಿದ್ದ ತಂದೆತನ ಅರಿವಿಲ್ಲದೆ ಜಾಗೃತವಾಗಿದೆ. ಪ್ರೀತಿ ಗೆಲ್ಲುತ್ತಿದೆ.ಇದುವರೆಗೂ ಹಲವು ವಿಧದಲ್ಲಿ ಮಗನನ್ನ ಕೊಲ್ಲಿಸಲು ಪ್ರಯತ್ನಿಸುತ್ತಿದ್ದವ ಇವನೇನಾ? ಎಂಬಂತೆ.
ಹಾಗೆ…

ಒಳಿತಿನ ಬೀಜವೊಂದು ಅವನೆದೆಯನ್ನ ಹೊಕ್ಕಿದೆ. ಕೆಲವೇ ಕ್ಷಣಗಳಲ್ಲಿ ತಮಸದ ಪೊರೆ ಹರಿದು ಬೆಳಕು ಬರಲಿದೆ ಅಜ್ಞಾನವ ಬಗೆದು ಜ್ಞಾನ ಅರಳಲಿದೆ ಒಳಿತಿನ ಬೀಜ ಮೊಳೆಯಲು ಎದೆಯ ಭೂಮಿ ಬಗೆದು ಹಸನಾಗುತಿದೆ. ಭಯಂಕರ ಆಡಂಬರವಿಲ್ಲದೆ. ಕರುಳ ಬಗೆವ ಅಕ್ರಂದನವಿಲ್ಲದೆ, ಕಿರುಚಾಟಗಳಿಲ್ಲದೆ ಹಿರಣ್ಯಕಶ್ಯಪು ನರಸಿಂಹನಲ್ಲೇ ಲೀನವಾಗಿತ್ತಾನೆ. ಪ್ರೀತಿಯ ಬೀಜ ಎದೆಯಲ್ಲಿ ಮೊಳೆಯುವ ಭಾವವನ್ನು ನಮ್ಮೆದೆಯಲ್ಲಿ ಉಳಿಸುತ್ತಾ….

ಸಾಕಷ್ಟು ಜನಜನಿತವಾದ ಪ್ರಹ್ಲಾದನ ಕಥೆಯನ್ನ ಪ್ರೀತಿಯ ಜಾಡು‌ ಹಿಡಿದು ಹೇಳಹೊರಡುತ್ತಾರೆ ಶ್ರೀಪಾದ ಭಟ್. ಬ್ಯಾಕ್ಡ್ರಾಪ್ ನಲ್ಲಿ ನವಿಲುಗರಿ ನೋಡಿದಾಗಲೇ ಇಂಥದೊಂದು ಸೂಚನೆ ಸಿಗುತ್ತದೆ. ಈ Signature step, signature tune ನಂತೆ ಈ ಶ್ರೀಪಾದರದೊಂದು signature image. ಈ ನವಿಲುಗರಿ. ‘ಕಂಸಾಯಣ’ದಿಂದ ಶುರುವಾಗಿ, ‘ಗಂಗೀಪರಸಂಗ’ದಿಂದ.. ‘ರಾಧಾ’ ಒಳಗೊಂಡು ಇಲ್ಲೂ ಕೂಡ. ಸಾಲದ್ದಕ್ಕೆ ಈ ಪ್ರಹ್ಲಾದನಿಗೂ ನವಿಲುಗರಿಯೇ ಅಲ್ಲವಾದರೂ ಅಂಥದೊಂದು ಪುಕ್ಕ.ಪ್ರೀತಿಯ ಜಾಡು ಹಿಡಿದು ಹೊರಟರೇ ಹೀಗೆ ಅಲ್ವಾ?

ಈ ರಂಗಪ್ರಯೋಗ ನೃತ್ಯ ಮತ್ತು ನಾಟಕಗಳ ಸಮಾಸ. ಎರಡೂ ಮಾಧ್ಯಮಗಳ ಗಟ್ಟಿಗುಣಗಳನ್ನ ಸೇರಿಸಿದ ಹದಾ ಪಾಕ. ಕಥಾನಕದಲ್ಲಿ ನಾಟಕದ ಪ್ರಭಾವವೇ ಜಾಸ್ತಿ ಎನಿಸಿದರೂ ಶಾಸ್ತ್ರೀಯವಾದ ಚೌಕಟ್ಟು ಕಟ್ಟುವಲ್ಲಿ, ಸಂಗೀತದಲ್ಲಿ ಒಟ್ಟಂದದ ಚೆಂದದಲ್ಲಿ ನೃತ್ಯವೇ ಪ್ರಧಾನ. ಸುಧೀರ್ ರ ಯಕ್ಷಗಾನ ಛಾಯೆಯ ಬಿಡುಬೀಸಾದ ಚಲನೆಗಳು ಶಾಸ್ತ್ರೀಯ ನೃತ್ಯದ ಪರಿಧಿಯಾಚೆಯೂ ವಿಸ್ತರಿಸುತ್ತ ಪಾತ್ರಕ್ಕೊಂದು ಗತ್ತು ತಂದುಕೊಟ್ಟರೆ ಮಾನಸಿ ಅಷ್ಟೇ ಸಮರ್ಥವಾದ ನೃತ್ಯದ ಲಯಗಳು, posture ಗಳೊಂದಿಗೆ ನೃತ್ಯದ ಗಮ್ಮತ್ ತೋರಿಸುತ್ತಾರೆ. ಅದರಲ್ಲೂ ನಾಟಕದ ಪ್ರಾರಂಭದ ಅವರಿಬ್ಬರ ಕೆಲವು ನಿಲುವುಗಳಂತೂ ಭಾರೀ ಸುಂದರ ಶಿಲ್ಪಗಳೇ.

ಇನ್ನು ಗುಂಪು ಇಡಿಯ ನೃತ್ಯನಾಟಕದ ಶಕ್ತಿ. ಇಲ್ಲಿ ನಾಟಕ ನ್ಯತ್ಯಗಳು ಬೆಸೆದುಕೊಳ್ಳುವ ರೀತಿ ಅಪರೂಪದ್ದು. ಚೆಂದ ಚೆಂದದ formation ಗಳು. ಅಷ್ಟೇ ಕಸುವು. ನಿಜ ಹೇಳ್ಬೇಕಂದ್ರೆ ನಾಟ್ಕ ಕಟ್ಟೋದು ಅವರೇ. ಸಹಜವಾಗಿಯೇ ಇಂಥ ನಾಟಕಗಳಲ್ಲಿ ಸಂಗೀತದ್ದು ‘ಹಿರೇ ವೇಷ’.
ಈ ಪ್ರಯೋಗದಲ್ಲಿ‌ ಅದು ಖರೇ ಹಿರೇ ವೇಷ ವೇ. ಶಾಸ್ತ್ರೀಯ ವಾದ್ಯಗಳು, ಸಂಗೀತದ ನಡುವೆಯೇ ವಿಶಿಷ್ಟವಾದ ಧ್ವನಿಗಳನ್ನೂ ಪ್ರಭಾವಶಾಲಿಯಾಗಿ ಬಳಸಿಕೊಳ್ಳೋ ಶ್ರೀಪಾದ ಗುರು ಶಿಷ್ಯರ ದೃಶ್ಯದಲ್ಲಿ ಛಕ್ಕಂತ ವೆಸ್ಟರ್ನ್ ಛಾಯೆಯೊಂದನ್ನು ತಂದು ಚಮಕ್ ಕೊಟ್ಟುಬಿಡುತ್ತಾರೆ.

ಸುಧಾ ನಿಜಕ್ಕೂ ಚೆಂದದ ಪದ್ಯಗಳನ್ನ ಬರೆದಿದ್ದಾರೆ. ರಾಜು ಮಣಿಪಾಲ fog, ಲೈಟುಗಳ ಜೊತೆ ಆಟವಾಡ್ತಾ ದೃಶ್ಯಗಳನ್ನ ಚೆಂದ ಮಾಡ್ತಾರೆ. ಪ್ರೀತಿಯ ಕಾಳು ಬಿತ್ತುತ್ತ ಹೋಗುವ ( ಆರ್.ವಿ.ಭಂಡಾರಿ) ಇಂಥ ಪ್ರಯೋಗಗಳು ಮತ್ತೆ ಮತ್ತೆ ಆಗಲಿ. ನಾಟಕ ನೋಡಿಸಿದ ‘ಲಾವಣ್ಯ’ ಬೈಂದೂರ್ ಗೆ ಥ್ಯಾಂಕ್ಸ್.

‍ಲೇಖಕರು Avadhi

March 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: