ಅವಳಿಗೆ ಕೊಡುವ ಪರ್ಫೆಕ್ಟ್ ಗಿಫ್ಟ್…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ಅವಳಿಗೊಂದು ಪರ್ಫೆಕ್ಟ್ ಗಿಫ್ಟ್ ತರಬೇಕೆಂದು ಅವನು ಹೊರಡಲು ನಿರ್ಧರಿಸಿದ್ದು ಇನ್ನೇನು ಕೆಲಸಕ್ಕೆ ಹೋಗಲು ಕಾರು ಹತ್ತಿ ಹೊರಡಬೇಕೆನ್ನುವಷ್ಟರಲ್ಲಿ. ಇದ್ದಕ್ಕಿದ್ದಂತೆ ಆಫೀಸಿಗೆ ರಜೆ ತಿಳಿಸುವ ಈ ಮೇಲ್ ಕಳಿಸಿ ಹತ್ತಾರು ಅಂಗಡಿಗಳಿಗೆ ಅಲೆದ. ಏನೇನೋ ಗಿಫ್ಟ್ ಐಟಮ್ ಗಳನ್ನ ತಡಕಾಡಿದ. ಕಾಸ್ಟ್ಲಿ ಡ್ರೆಸ್? ವಾಚ್? ರಿಂಗ್? ಗ್ಯಾಡ್ಜೆಟ್? ಅಂತ ಏನೇನೋ ನೋಡಿ ಒಂದೊಂದು ಕಾರಣಕ್ಕೆ ಒಂದೊಂದನ್ನು ಬೇಡ ಎಂದುಕೊಂಡು ಹತ್ತೊಂಭತ್ತನೇ ಶಾಪ್ ನಿಂದಲೂ ಬರಿಗೈಯಲ್ಲಿ ಹೊರ ಬಂದವನಿಗೆ ವಿಪರೀತ ಹಸಿವಾಗಿತ್ತು. ಅಲ್ಲೇ ಹತ್ತಿರದಲ್ಲಿದ್ದ ಹೋಟೆಲ್ಲೊಂದರಲ್ಲಿ ಊಟ ಮಾಡಿ ಎದುರಿಗಿದ್ದ ಪಾರ್ಕಿನೊಳಗೆ ಕೆಲ ಹೊತ್ತು ವಿಶ್ರಾಂತಿ ಪಡೆಯೋಣವೆಂದು ಬೆಂಚೊಂದಕ್ಕೆ ಒರಗಿ ಕೂತ… ಆತನಿಗೆ ಅನತಿ ದೂರದಲ್ಲಿ ನವ ಜೋಡಿಯೊಂದು ಲಲ್ಲೆಗರೆಯುತ್ತ, ನಗು ಸೂಸುತ್ತ ಪರಿಮಳ ಬೀರುತ್ತಿತ್ತು. ಅವಳ ಒಡಲಲ್ಲಿ ತಲೆಯಿಟ್ಟು ಅಂಗಾತ ಮಲಗಿದ್ದ ಅವನ ತಲೆ ಕೂದಲು ನೇವರಿಸುತ್ತಾ ಆಕೆ ಕೇಳಿದಳು :

‘ಈ ವರ್ಷ ಆ್ಯನಿವರ್ಸರಿಗೆ ನನಗೇನು ಕೊಡಿಸುತ್ತೀಯಾ? ಕಳೆದ ವರ್ಷ ನೀನು ಕೊಡಿಸಿದ ಬಂಗಾರದ ಬಳೆ ಚೆನ್ನಾಗಿತ್ತು’ 
ಅದಕ್ಕವನು: ‘ ಈ ಬಾರಿ ಅದಕ್ಕಿಂತಲೂ ಚೆನ್ನಾಗಿರುವುದನ್ನೇ ಕೊಡುತ್ತೇನೆ’ ಎನ್ನುತ್ತಾ ಅವಳ ಕಿವಿಯನ್ನು ತನ್ನ ಮುಖದ ಹತ್ತಿರ ಎಳೆದುಕೊಂಡು ‘ತುಂಟನಂತೆ ಹೇಳಿದ. 

ಅವಳು ನಾಚಿಕೊಂಡಳು… ಅವನು ಆ ನಾಚಿಕೆಯ ಸಮಯವನ್ನು ಮತ್ತಷ್ಟು ವಿಸ್ತರಿಸುವಷ್ಟು ತುಂಟತನ ಮುಂದುವರೆಸಿದ. ಕಿವಿ ಕಚ್ಚಿ ಬಿಡುವ ಮುನ್ನ ಆಕೆಯೇ ತನ್ನ ಮುಖವನ್ನು ಮೇಲೆಳೆದುಕೊಂಡಳು. ಅವಸರವಸರವಾಗಿ ಅವನು ಎದ್ದು ಅವಳೆದರುಲ್ಲಿ ಕೂತ. ಇಬ್ಬರೂ ಒಬ್ಬರಿಗೊಬ್ಬರು ಚಿವುಟಿಕೊಂಡರು. ನಕ್ಕರು. ಮುನಿಸಿಕೊಂಡರು. ಮತ್ತೆ ಅವನು ಅವಳ ಮಡಿಲಿಗೆ ಜಾರಿಬಿದ್ದ. ಅವಳೂ ಬೀಳಿಸಿಕೊಂಡಳು… ಅವರ ಮಾತುಗಳು ಮುಂದುವರೆದವು. ಇವರಿಬ್ಬರನ್ನು ನೋಡುತ್ತಾ ಕೂತಾಗ ಈ ಹಿಂದೆ ನಡೆದ ಘಟನೆಯೊಂದು ಅವನಿಗೆ ನೆನಪಾಯಿತು. 
*    *      *      * 
ಬಹಳ ದಿನಗಳಿಂದ ಎಲ್ಲಾದರೂ ಹೋಗೋಣ ಎನ್ನುತ್ತಿದ್ದವಳನ್ನು ಊಟಿಗೆ ಕರೆದೊಯ್ಯಲು ನಿರ್ಧರಿಸಿದವನು ಅವಳಿಗೆ ಹಿಂದಿನ ದಿ‌ನ ಏನೂ ಹೇಳದೆ ಇದ್ದಕ್ಕಿದಂತೆ ಕಾರು ಹತ್ತಿಸಿಕೊಂಡು ಊಟಿ ರಸ್ತೆಯಲ್ಲಿ ಹೊರಟೇಬಿಟ್ಟಿದ್ದ.‌ ಬೆಳಗಿನ ಜಾವದಲ್ಲಿ ಅವನು ಹಾಗೆ ಎಬ್ಬಿಸಿ ಕರೆದುಕೊಂಡು ಬಂದದ್ದು ಸಿಟಿ ರೌಂಡ್ಸ್ ಗೆ ಇರ್ಬೇಕು ಅಥವಾ ಬರ್ತಡೆ ದಿನ ತಿಂಡಿ ತನ್ನ ಬಳಿ ಮಾಡಿಸುವುದು ಬೇಡ ಅಂತ ಎಲ್ಲಾದರು ತಿಂಡಿ ತಿಂದು ಬರೋಕೆ ಕರ್ಕೊಂಡ್ ಹೋಗ್ತಿರಬಹು ಅಂದುಕೊಂಡ ಅವಳು ಅರೆನಿದ್ದೆಯಲ್ಲಿ ಕಾರಿನ ಹಿಂದಿನ ಸೀಟಿನಲ್ಲಿ ಮಲಗಿಬಿಟ್ಟಿದ್ದಳು. ಅವಳಿಗೆ ಎಚ್ಚರವಾದಾಗ ಕಾರು ಊಟಿ ರಸ್ತೆಯ ತಿರುವುಗಳಲ್ಲಿ ಜೋಶ್ ನಲ್ಲಿ ಮುನ್ನುಗ್ಗುತ್ತಿತ್ತು.‌ ಅವಳು ಏನೂ ಮಾತನಾಡದೆ ಹಿಂಬದಿ ಎದ್ದು ಕೂತಳು. ‘How is the surprise ?’ ಎಂದನವನು. 

‘ನಿನ್ನೆ ರಾತ್ರಿ ಯಾಕೆ ಹೇಳಲಿಲ್ಲ ?’ ಅಂದಳವಳು. 
‘ನಿಗೂಢವಾದದ್ದನ್ನೆಲ್ಲ ನಿನ್ನೆ ರಾತ್ರಿ ಹೇಳೋಕ್ ಹೋಗಬಾರದು. ಏನಂತೀಯಾ?’ 
‘ಹೇಳಿದ್ರೆ ನಾನೂ ಪ್ರಿಪೇರ್ ಆಗ್ಬೋದಿತ್ತು’ ಅಂತ ಸಣ್ಣಗೆ ರಾಗ ಎಳೆದಳಾಕೆ. 
‘ನಿನ್ನ ಪ್ರಿಪರೇಶನ್ ಏನ್ ಇದೆಯೋ ಅದೆಲ್ಲ ಕಾರ್ ಡಿಕ್ಕಿನಲ್ಲಿದೆ ನೋಡು’ ಎಂದು ಕಾರ್ ನಿಲ್ಲಿಸಿದ. ಅವಳು ಸರಸರನೆ ಇಳಿದು ಬಂದು ಡಿಕ್ಕಿ ತೆಗೆದು ನೋಡಿದಳು.‌ ಅವಳ ಬಟ್ಟೆ ಮತ್ತು ಕಾಸ್ಮೆಟಿಕ್ಸ್ ಎಲ್ಲಾ ಇದ್ದ ಸೂಟ್ ಕೇಸ್ ಅಲ್ಲಿತ್ತು.’ ಅದನ್ನು ನೋಡಿ ಮುಗುಳ್ನಕ್ಕು ವಾಪಾಸ್ ಬಂದು ಕಾರಿನಲ್ಲಿ ಕೂತಳು. ಅವನು ಮತ್ತೆ ಕಾರು ಚಲಿಸಲಾರಂಭಿಸಿದ. ಅವಳಿನ್ನೂ ಮೌನಿಯಾಗೇ ಇದ್ದಳು. 

‘ಇನ್ನೇನು ಸ್ವಲ್ಪ ಹೊತ್ತಿನಲ್ಲಿ  ಊಟಿ ಬಂದೇ ಬಿಡುತ್ತೆ’ ಎಂದ. 
‘ನನಗೆ ನಿನ್ನ ಜೊತೆ ಊಟಿಗೆ ಬರಬೇಕು ಅಂತ ಯಾವತ್ತೂ ಅನ್ನಿಸಿರಲಿಲ್ಲ’ ಎನ್ನುವಾಗ ಅವಳ ಧ್ವನಿಯಲ್ಲಿದ್ದ ಕಠೋರತೆ ಬೆಳಗಿನ ಜಾವದಿಂದ ಅವನಲ್ಲಿದ್ದ ಹುರುಪನ್ನೆಲ್ಲ ಮಣ್ಣುಪಾಲು ಮಾಡುವಂಥದ್ದಾಗಿತ್ತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಅವನೇ ಪ್ರಯತ್ನಿಸಿದ:’ ಎಲ್ಲಾದರೂ ಹೋಗೋಣ ಎನ್ನುತ್ತಿದ್ದೆಯಲ್ಲ, ಹಾಗಾಗಿಯೇ ನಿನ್ನ ಬರ್ತಡೆ ದಿನ ಇಲ್ಲಿಗೆ ಬರೋಣ ಅಂತ ಪ್ಲಾನ್ ಮಾಡಿದೆ’ 
‘ನನ್ನ ಬರ್ತಡೆ ದಿನ ನಾನ್ ಪ್ಲಾನದ ಮಾಡಿದಲ್ಲಿಗೆ ಹೋಗಬೇಕೋ? ನೀನ್ ಕರಕೊಂಡ್ ಹೋದಲ್ಲಿಗೆ ಹೋಗಬೇಕೋ?’ 
‘ಹೇ…‌ದಿಸ್ ಇಸ್ ದ ಬೆಸ್ಟ್ ಸೀಸನ್ ಟು ವಿಸಿಟ್ ಊಟಿ’ ಎನ್ನುತ್ತಾ ಹೋಟೆಲ್ ಮುಂದೆ ಕಾರು ನಿಲ್ಲಿಸಿದ. ರೂಮಿನಲ್ಲಿ ಫ್ರೆಶ್ ಆಗಿ ಬಂದ ಮೇಲೆ ಅವಳ ಮೂಡ್ ಸರಿ ಹೋಗುತ್ತದೆ ಎಂದು ಭಾವಿಸಿದವನು ಅವಳನ್ನು ಹೆಚ್ಚೇನು ಪ್ರಶ್ನಿಸಲಿಲ್ಲ. ರೆಡಿಯಾಗಿ ಬಂದವಳು ಅವನೊಂದಿಗೆ ತಿಂಡಿ ತಿನ್ನುವಾಗ ಒಂದು ಸೆಲ್ಫಿ ತೆಗೆದುಕೊಂಡಾಗ ಇವನಿಗೆ ಬಹಳ ಖುಷಿಯಾಯಿತು. 

ಒಂದೆರೆಡು ತಾಸು ಸೈಟ್ ಸೀಯಿಂಗ್ ಮಾಡುತ್ತಿದ್ದಾಗಲೇ ಹೋಟೆಲ್ ರೂಮಿಗೆ ಹೋಗಿ ಬೇರೆ ಡ್ರೆಸ್ ಹಾಕ್ಕೊಂಡ್ ಬರ್ತೀನಿ ಇದ್ಯಾಕೋ ಕಂಫರ್ಟ್ ಆಗ್ತಿಲ್ಲ ಅಂದವಳು ಬಹಳ ಸಮಯದ ನಂತರವೂ ವಾಪಾಸ್ ಬರಲೇ ಇಲ್ಲ. ಆಮೇಲೆ ಅವಳ ನಂಬರ್ ನಿಂದ ಒಂದು ಮೆಸೇಜ್ ಬಂತು: ‘I am going back. ಈ ಥರ ನೀನು ಹೇಳದೆ ಕೇಳದೆ ಕರಕೊಂಡು ಬಂದಿದ್ದು ನನಗೆ ನಿಜವಾಗಲೂ ಇಷ್ಟ ಆಗಲಿಲ್ಲ.

ನಾನೂ ಹೇಗಾದರೂ ಮಾಡಿ ವಾಪಾಸ್ ಹೋಗ್ತೀನಿ. ಆದರೆ ನೀನು ಪ್ಲಾನ್ ಪ್ರಕಾರ ಇಲ್ಲಿ ಇವತ್ತು ಸ್ಟೇ ಮಾಡಿನೇ ಬರಬೇಕು. ಈ ಮೆಸೇಜ್ ಕಳಿಸಿದ ನಂತರ ನಾನು ಮೊಬೈಲ್ ಸ್ವಿಚ್ ಆಫ್ ಮಾಡ್ತೀನಿ. ಬೆಳಗ್ಗೆ ನೀನು ಸ್ನಾನಕ್ಕೆ ಹೋದಾಗ ನಿನ್ನ ಪರ್ಸಿಂದ ದುಡ್ಡು ತಗೊಂಡಿದ್ದೆ. But, I liked the way you packed my stuffs in the suit case. Thank you for that. See you day after tomorrow.’ 
ಅವನು, ಅವಳನ್ನು, ಆ ದಿನ ಮತ್ತೆ ಹುಡುಕಲು ಮುಂದಾಗಲಿಲ್ಲ. ಊಟಿಯ ಗಾರ್ಡನ್ ನಲ್ಲಿ ಅವಳಿಗೆ ಕೊಡಲೆಂದು ತಂದಿದ್ದ ಉಡುಗೊರೆಯನ್ನು ಭದ್ರವಾಗಿ ಬಚ್ಚಿಟ್ಟುಕೊಂಡ. 
*    *     *      *
ಇಲ್ಲಿ  ಪಾರ್ಕಿನ ಈ ಹುಲ್ಲು ಹಾಸಿನ ಮೇಲೆ ಸರಸದ ಮಾತುಗಳನ್ನಾಡುತ್ತಿರುವ ಜೋಡಿಯನ್ನು ಕಂಡಾಗ ಅವನಿಗೆ ಈ ಘಟನೆ ಮತ್ತೆ ನೆನಪಾಯಿತು. ಬೆಳಗ್ಗಿನಿಂದ ತಿರುಗಿ ರಿಜೆಕ್ಟ್ ಮಾಡಿ ಬಂದಿದ್ದ ಆ ಎಲ್ಲಾ ಗಿಫ್ಟ್ ಗಳನ್ನು ಮತ್ತೆ ಹೋಗಿ ಕೊಳ್ಳತೊಡಗಿದ. ನೂರಾರು ಗಿಫ್ಟ್ ಗಳಾದವು. ಎಲ್ಲವನ್ನೂ  ತಂದು ಎದುರಿಗಿಟ್ಟುಕೊಂಡು ಇವುಗಳಲ್ಲಿ ಒಂದಾದರೂ ಅವಳಿಗೆ ಇಷ್ಟವಾದರೆ ಸಾಕು ದೇವರೆ ಎನ್ನುತ್ತಾ ಕೂತಿದ್ದ… 
ಹಾಗೆ ಕೂತವನ ತಲೆಯಲ್ಲಿ ಬಂದ ಆಲೋಚನೆಗಳು… 

‘ನಾನು ಊಟಿಯಲ್ಲಿ ಆವತ್ತು ಸ್ನಾನಕ್ಕೆ ಹೋಗುವಾಗ ಪರ್ಸಲ್ಲಿ ದುಡ್ಡು ಇಟ್ಟಿರಲಿಲ್ಲ ಅಂದರೆ ಅವಳು ವಾಪಾಸ್ ಬರುವ ಪ್ರಯತ್ನ ಮಾಡ್ತಿರ್ಲಿಲ್ಲವೇನೋ’ 
‘ಆ ದಿನ ಊಟಿ ರಸ್ತೆಯಲ್ಲಿ ಆದ ಭೀಕರ ಅಪಘಾತದಲ್ಲಿ ಟ್ಯಾಕ್ಸಿ ಕಾರಿನಲ್ಲಿದ್ದ ಓರ್ವ ಪುರುಷ ಮತ್ತು ಮಹಿಳೆ ಸಾವನ್ನಪ್ಪಿದರು. ಅವರ ದೇಹಗಳು ಛಿದ್ರಛಿದ್ರವಾಗಿದ್ದ ಕಾರಣ ಗುರುತು ಕೂಡ ಸಿಕ್ಕಲಿಲ್ಲ’ ಎಂಬ ನ್ಯೂಸ್ ಪೇಪರ್ ನ ರಿಪೋರ್ಟ್ ಓದಿದ್ದು ನೆನಪಾಗಿ ಆ ದಿನ ಅವಳು ಡ್ರೆಸ್ ಚೇ‌ಂಜ್ ಮಾಡಲು ಹೋಟೆಲ್ ಗೆ ಹೋದಾಗ ಅವಳ ಜೊತೆ ಹೋಗದಿದ್ದದು ನನ್ನ ದೊಡ್ಡ ತಪ್ಪು’ 

‘ಅವಳನ್ನು ನಾನು ಆ ಸರ್ಪ್ರೈಸ್ ಪ್ಲಾನ್ ಅಂತ ಅಲ್ಲಿಗೆ ಕರೆದೊಯ್ಯದಿದ್ದರೆ ಇಂದು ನನ್ನ ಜೊತೆಯೇ ಇರುತ್ತಿದ್ದಳೆಂಬ ಪಶ್ಚಾತ್ತಾಪ ನನಗೆ’ 
‘ಆದರೂ I like the way you have packed my stuffs ಎಂದು ಆಕೆ ಹೇಳಿ ಸೂಟ್ ಕೇಸ್ ನ್ನು ಒಯ್ದದ್ದು ಯಾಕೆ? ಅದನ್ನೂ ‘ನನಗೆ ನಿನ್ನ ಜೊತೆ ಊಟಿಗೆ ಬರಬೇಕು ಅಂತ ಯಾವತ್ತೂ ಅನ್ನಿಸಿರಲಿಲ್ಲ’ ಎಂಬ ಮಾತನ್ನು ಒಟ್ಟಿಗೇ ಯೋಚಿಸಿದರೆ ಅವಳದ್ದೇನಾದರೂ ಬೇರೆಯದೇ ಆದ ಪ್ಲಾನ್ ಇತ್ತಾ?’ 
*        *        *      * 
ಹೀಗೆ ಏನೇನೋ ಯೋಚನೆ ಬಂದರೂ, ಅವನು ತನ್ನ ಪ್ರತಿ ವರ್ಷದ ಈ ಪರ್ಫೆಕ್ಟ್ ಗಿಫ್ಟ್ ಹಂಟ್ ಕೆಲಸವನ್ನಂತೂ ತಪ್ಪಿಸೋದಿಲ್ಲ. ಅವಳು ಜೊತೆಯಲ್ಲಿದ್ದಾಗಲೇ ( ಅಥವಾ ಬದುಕಿದ್ದಾಗಲೇ ) ಅವಳಿಗೆ ಕೊಡಬಹುದಾದ ಫರ್ಫೆಕ್ಟ್ ಗಿಫ್ಟ್ ಅವನರಿವಿಗೆ ಬರಲಿಲ್ಲ ಅಂದಮೇಲೆ ಅವಳು ‘ಇಲ್ಲ’ ದ ಹೊತ್ತಲ್ಲಿ ಯಾವ ಗಿಫ್ಟ್ ತರಬೇಕು ನೀವೇ ಹೇಳಿ.‌ ಅದಕ್ಕೇ ಇರಬೇಕು ಪಾಪ, ಆತ, ನೂರಾರು ಗಿಫ್ಟ್ ಗಳನ್ನು  ಪ್ರತೀ ವರ್ಷ ಅವಳ ಹುಟ್ಟು ಹಬ್ಬದ ದಿನ ತರುತ್ತಾನೆ. 

ಒಂದು ವೇಳೆ ಅವಳು ಭೂಮಿಯ ಮೇಲೆಯೇ  ಮತ್ತೆಲ್ಲಾದರೂ ಇದ್ದರೆ ಇದೆಲ್ಲ ಅವಳಿಗೆ ತಿಳಿಯದೇ ಹೋಗಬಹುದು ಅಲ್ಲದೆ ಅವಳ ಆತ್ಮಕ್ಕಂತೂ ಇದೆಲ್ಲ ಸುಳಿಯದೇ ಇರುತ್ತದೆಯೆ? ಅವಳೇ ಇಲ್ಲದ ಕಾಲದಲ್ಲೂ ಅವಳನ್ನು ಮೆಚ್ಚಿಸಲು ಅವಳಿಗಾಗಿ  ಒಂದಿಡೀ‌ ದಿನ ವ್ಯಯಿಸುತ್ತಾನಲ್ಲ, ಅದಕ್ಕಿಂತ ಪರ್ಫೆಕ್ಟ್ ಗಿಫ್ಟ್ ಮತ್ಯಾವುದಿರಲು ಸಾಧ್ಯ? ಎಂಬುದನ್ನು ಆ ಮೂರ್ಖನಿಗೆ ಯಾರಾದರೂ ಹೇಳಿಬಿಡಿ! ಹಾಗೆಯೇ ಮುಂದಿನ ವರ್ಷ ಗಿಫ್ಟ್ ತರಲು ಹೋದರೆ ಪಾರ್ಕಿಗೆ ಹೋಗಬಾರದೆಂಬ ಕಾಶನ್ ನನ್ನೂ ನೀವೇ ಕೊಟ್ಟುಬಿಡಿ. He is such a poor fellow! 

March 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: