ಮೂಲ: ರಮೇಶ್ ಕಾರ್ತಿಕ್ ನಾಯಕ್
ರಮೇಶ್ ಕಾರ್ತಿಕ್ ನಾಯಕ್ ತೆಲುಗು ಹಾಗೂ ಇಂಗ್ಲಿಷಿನಲ್ಲಿ ಕತೆ,ಕವನಗಳನ್ನು ಬರೆಯುತ್ತಿರುವ ಯುವ ಕವಿ.
ಹೈದರಾಬಾದಿನಲ್ಲಿ ನೆಲಸಿದ್ದಾರೆ.ಇವರು ಬಂಜಾರ ಬದುಕಿನ ತಲ್ಲಣ, ಸಂಭ್ರಮಗಳಿಗೆ ತಮ್ಮ ಕೃತಿಗಳಲ್ಲಿ ಮಾತುಕೊಟ್ಟಿದ್ದಾರೆ.
ಇವರ “ಧಾವಲೋ ” ತೆಲುಗು ಕೃತಿಗೆ ೨೦೨೪ ರ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ್ ದೊರಕಿದೆ.
ಇವರ ‘ಕಾಗದದ ಮೇಲಿನ ಬದುಕು’ ಕವನವನ್ನು ಇಂಗ್ಲೀಷಿನಿಂದ ಕನ್ನಡ ಅನುವಾದ ಇಲ್ಲಿದೆ.
ಕನ್ನಡಕ್ಕೆ -ಸಿ ಎಚ್ ಭಾಗ್ಯ
ಕಾಗದದ ಮೇಲಿನ ಬದುಕು.
ಕಾಗದದ ಮೇಲಿನ ಪೊಳ್ಳು ಕನಸುಗಳ
ನಡುವೆ ನನಗೆ ಎಚ್ಚರವಾಗುವ ಕನಸು
ನನ್ನ ಕನಸಿನೊಳಗೊಂದು ಕಣಸಿನಲಿ.
ಎಚ್ಚರಾದೆ.
ನನ್ನ ಕಾಲಡಿಯಲಿ
ಕೊನೆಯಿಲ್ಲದ ಕಾಗದವಿದೆ.
ಅದರ ಮಧ್ಯದಲ್ಲಿ ನಿಂತಿದ್ದೆ
ಒ೦ದು ಬಿಳಿ ಅಮೃತ ಶಿಲೆಯ ಮೂರ್ತಿ ನಾನು
ಕಳೆದುಕೊಂಡ ನೋಟವನ್ನರಸುತ್ತಾ.
ಬಿಳಿಯು ಕಾಗದದ ಮೇಲೆ ನದಿಯಂತೆ ಹರಿಯಿತು.
ಅದರ ಪ್ರವಾಹದಲ್ಲಿ
ಲಕ್ಷಾಂತರ ವಿಳಾಸಗಳು ಮೀನಿನಂತೆ ಚಿಮ್ಮಿದವು.
ನನ್ನ ಹೃದಯವು ಕಂಡ ನೋಟಗಳೆಡೆಗೆ
ನನ್ನ ಇರವನ್ನು ಒಯ್ಯಲು
ನಾನವನ್ನು ಬೇಡಿಕೊಂಡೆ.
ನನ್ನ ಕಾಲುಗಳು ನೋಯತೊಡಗಿದಾಗ
ಕಣ್ಣುಗಳು ತುಂಬಿಬ೦ದವು.
ನಾನು ಎರಡು ಬಾರಿ ಕಣ್ಣು ಪಿಳುಕಿಸಿದೆ
ಬಿಳಿ ನವಿಲಿನ ಹಿಂಡು ಗೋಚರಿಸಿದವು,
ಹಾಳೆಯ ತುಂಬಾ ಅಲೆಯುತ್ತಾ
ಅವು, ಕಳೆದುಕೊಂಡ ತಮ್ಮ ಬಣ್ಣಗಳನ್ನು ಹುಡುಕುತ್ತಿರುವುವೆ?
ನನಗೆ ಚಲಿಸಲಾಗುತ್ತಿಲ್ಲ
ಕಾಗದವನ್ನೂ ತೊರೆಯಲಾಗುತ್ತಿಲ್ಲ
ಒಬ್ಬ ಬುದ್ಧಿಜೀವಿಯಂತೆ ನಾನು ಮರಗಟ್ಟಿ ನಿಂತಿದ್ದೆ
ಬರೆಯುವ ಹಪಾಹಪಿಯು ನನ್ನನ್ನು ಉಸಿರುಗಟ್ಟಿಸಿತು
ನನ್ನ ಚರ್ಮವನ್ನು ಕತ್ತರಿಸಿಕೊಂಡೆ,ಪದಗಳನ್ನು ಪದಹೊರಚೆಲ್ಲಲು
ಆದರೆ ನನ್ನ ರಕ್ತವೂ ಬೆಳ್ಳಗಿತ್ತು.
ನಾನು ಬಗ್ಗಿ ಕಾಗದವನ್ನು ಮುಟ್ಟಿದೆ
ಅದರಡಿ ಇನ್ನೊಂದು ಲೋಕವು ಕಂಡಿತು.
ಯಾರವರು?
ಅವರಾವ ಬಣ್ಣ?
ಬಹುಶಃ ಅವರು ನನ್ನಂತಿಲ್ಲ
ಪೆನ್ನು, ಕಾಗದಕ್ಕೆ ಹಾತೊರೆಯುತ್ತಿಲ್ಲ.
ಹಾಗೆಂದೇ ನಾನು ಕನಸಿನ ಲೋಕದಲಿ ಏಕಾಂಗಿಯಾಗಿ ನಿಂತಿದ್ದೆ.
ತೀವ್ರಏಕಾAತದಿAದ
ಪದಗಳು ಒಳಗಿಂದ ಒದ್ದುಕೊಂಡು ಬಂದವು
ನನಗದರ ಭಾರ ಅರಿವಾಯ್ತು
ನನಗದರ ಖಾಲಿತನ ಅರಿವಾಯ್ತು.
ಕಾಗದದ ಕೆಳಗೆ,
ನಗು, ಅಳು, ಚೀತ್ಕಾರಗಳು
ನನಗವು ತಟ್ಟುತ್ತಿದ್ದರೂ
ಅಸ್ಪಷ್ಟವಾಗಿದ್ದವು.
ಅರಿವಾಗುವ ಮೊದಲೇ ಮಸುಕಾಗುತ್ತಿದ್ದವು.
ದಿನಗಳು ಕಳೆದಂತೆ,
ನಾನು ಚಲಿಸದೆ ಉಳಿದೆ.
ಬಿಳಿ ಛಾವಣಿ
ವರ್ತುಲ ವರ್ತುಲವಾಗಿ ಅವರಿಸಿತು.
ನನ್ನ ಮೇಲೆ,
ಅಕಾಶವು ಹತ್ತಿಯ ಮೋಡಗಳಿಂದ ಸುತ್ತಿಕೊಂಡು ದಟ್ಟವಾಯಿತು
ಹಗಲೂ ಅಲ್ಲ, ರಾತ್ರಿಯೂ ಅಲ್ಲ.
ದೂರದಲಿ ದನಿಯೊಂದು ಹುಟ್ಟಿ,
ಮರುಕ್ಷಣವೇ ಮೌನಕ್ಕೆ ಜಾರಿತು.
ನಾಲ್ಕು ದೃಶ್ಯಗಳು
ಕಾಗದದ ನಾಲ್ಕು ದಿಕ್ಕಿನಲಿ ಬಿಚ್ಚಿಕೊಂಡವು.
ದೃಶ್ಯ ಒಂದು:
ಬಿಳಿ ಹೊಗೆಯು ಆಕಾಶದುದ್ದಕ್ಕೂ ರಿಂಗಣಗುಣಿದಿದೆ
ಬಹುಶಃ ಹಸಿವಿನಿಂದ ಸತ್ತವರ
ಹೊಟ್ಟೆಯಿಂದೆದ್ದಿರಬೇಕು.
ದೃಶ್ಯ ಎರಡು:
ಮೂಲನಿವಾಸಿಗಳು ನಿಂತಿದ್ದಾರೆ.
ಆಕಾಶದೆಡೆಗೆ ಬಾಣ ಬಿಡುತ್ತಾ
ಮೋಡಗಳನ್ನು ಜಗ್ಗಲು.
ದೃಶ್ಯ ಮೂರು:
ಬೆಟ್ಟಗಳು ತೆರೆತೆರೆಯಾಗಿ ಮೇಲೆದ್ದಿವೆ
ದೇವತೆಗಳು ಅದರ ಮೇಲೆ ನಿಂತು
ರೆಕ್ಕೆಗಳನ್ನು ಕತ್ತರಿಸುತ್ತಿದ್ದಾರೆ.
ದೃಶ್ಯ ನಾಲ್ಕು:
ಏನೇನೂ ಗೋಚರಿಸುತ್ತಿಲ್ಲ.
ನನಗರಿವಿಲ್ಲದೆ ನನ್ನ ಕಾಲುಗಳು ಚಲಿಸತೊಡಗಿದವು.
ನನ್ನನ್ನು ನಾಲ್ಕನೇ ಮಗ್ಗುಲಿಗೆ ಒಯ್ಯಲು.
ಅಲ್ಲಿ ಬಿಳಿ ಬಟ್ಟೆಯಲಿ ಸುತ್ತಿದ್ದ
ಹೆಣಗಳು ಕಂಡವು,
ಕವಿಗಳು,ಬರಹಗಾರರು, ಪತ್ರಕರ್ತರು.
ಕಾಗದದ ಮೇಲಿನ ಬದುಕು ಕಾಗದದಂತೆಯೇ ಇತ್ತು,
ಸೂಕ್ಷö್ಮ ಕ್ಷಣಿಕ ಸುಲಭವಾಗಿ ಹರಿಯುವಂಥದು
ಯಾರಾದರೂ ಇದರ ತಾತ್ವಿಕತೆಯನ್ನು ವಿವರಿಸಬಹುದೇನೋ
ನಾನು ದೃಷ್ಟಿ ಕಳೆದುಕೊಳ್ಳುವ ಮೊದಲು.






0 Comments