ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕಾಕೂ ಇದಕ ಡ್ರೈ ಫ್ರೂಟ್ಸ್ ಖೀರ್ ಅನೂದ ಬ್ಯಾಡ. ಘೋಟಾಳಾ  ಖೀರ್ ಅಂತೇ ಅನೂಣು’

ಘೋಟಾಳಾ ಖೀರ್

ಸರೋಜಿನಿ ಪಡಸಲಗಿ

ಇದೇನ್ರೆಪಾ  ಇದು “ಘೋಟಾಳಾ ಖೀರ್” ಅಂದ್ರ ಅಂತೀರೇನು? ಸ್ವಲ್ಪ ತಡೀರಿ

ನಿಮಗs ಗೊತ್ತಾಗ್ತದ.

ಉತ್ತರ ಕರ್ನಾಟಕದವರು  ನಾವು. ನಮ್ಮ ಕಡೇ ಹಬ್ಬ -ಹರಿದಿನ ಆಚರಣೆ ಒಂಚೂರ  ಬ್ಯಾರೆ  ಥರಾ. ಈಗ ನೋಡ್ರಿ ದಸರಾ ದಿನ ನಮ್ಮ ಕಡೆ ಬನ್ನಿ ಬಂಗಾರ ವಿನಿಮಯ ಇರತದ. ಶಮೀಪತ್ರ ತಗೊಂಡು ಬಂದು ,ಪೂಜಿ- ಪುನಸ್ಕಾರ ಆದಮ್ಯಾಲ , ದೇವರಿಗೂ ಕೊಟ್ಟು, ಒಬ್ಬರಿಗೊಬ್ಬರು ಕೊಟ್ಟು ಭಂಗಾರದ್ಹಾಂಗ ಇರೂಣು ಅಂತ ಹೇಳೂ ರೂಢಿ. ಹಿರಿಯರ ಆಶೀರ್ವಾದ ತಗೊಳೂದು, ಕಿರಿಯರಿಗೆ ಆಶೀರ್ವಾದ ಮಾಡೋದು ಪದ್ಧತಿ. ಹಂಗs ಸಂಕ್ರಾಂತಿ ಹಬ್ಬಕ್ಕ ಎಳ್ಳು ಬೆಲ್ಲ ಕೊಟ್ಟು ಎಳ್ಳು ಬೆಲ್ಲದ್ಹಾಂಗ ಇರೂಣು ಅಂತ ಹೇಳೂ ರೂಢಿ.ಈಗ ನಮ್ಮೂರ ಬಿಟ್ಟು ಬೆಂಗಳೂರಿಗೆ ಬಂದ್ರೂ ಅದು ಅನೂಚಾನವಾಗಿ ನಡಕೊಂಡ ಬಂದದ. ನಾವೆಲ್ಲ ಅಂದ್ರ ನನ್ನ ಅಣ್ಣ ತಮ್ಮಂದಿರು, ಇಲ್ಲೇ. ಹಂಗs ನನ್ನ ಭಾವ ಮೈದ್ನಂದ್ರೂ ಇಲ್ಲೇ. ಹಿಂಗಾಗಿ ಹಬ್ಬ ಜೋರನs ಇರತದ.

ಏನಕೇನ ಕಾರಣೇನ ಈ ಸಲ ನಮ್ಮ ಭಾವ ನೆಗೆಣ್ಣಿಯವರ (ಓರಗಿತ್ತಿ) ಭೆಟ್ಟಿ ಆಗಲಿಕ್ಕ  ಜಮಾಸಲಿಲ್ಲ. ಹಬ್ಬದೂಟ ಮನ್ಯಾಗ ಮುಗಿಸಿ, ಸಂಜೀನ್ಯಾಗ ನಮ್ಮಣ್ಣನ ಮನ್ಯಾಗ  ನನ್ನ ತೌರಮನಿ ಮಂಡಳಿದು ಬೈಠಕ್ ಜಮಾಸ್ತು. ಹರಟಿ, ಹಾಡು, ನಗಿ, ಮಾತು ಕತೆ ಆದಮ್ಯಾಲ ಬನ್ನಿ ಬಂಗಾರ ಕೊಡೋದು ತಗೋಳೋದು ಆಗಿ ಅಷ್ಟ ಛಾ ಫರಾಳ ಮುಗಿಸಿಕೊಂಡ ಮನಿಗೆ ಬರೂದ್ರಾಗ,ಸುಸ್ತ ಹೊಡದಿತ್ತ. ಮಗಾ,ಸೊಸಿ, ಮೊಮ್ಮಗಾನೂ ಊರಾಗಿರಲಿಲ್ಲ. ಬಂದಾವ್ರ ಒಂಚೂರು ಟಿವಿ ನೋಡಿ, ಅಲ್ಲಿ ಇಲ್ಲಿ ಫೋನ್ ಮಾಡಿ  ಉರಳಿದ್ದಾತು.

ಯಾಕೋ ಮುಂಜಾನೆ ಕಣ್ಣs ತಗೀಲಿಕ್ಕ ಆಗವಲ್ತು. ಭಾರೀ ಸುಸ್ತು. “ಯಾಕs ಏನಾತು? ಜ್ವರಾ ಗಿರಾ ಬಂದೂ ಏನ ಮತ್ತ?” ನನ್ನ ಪತಿ ರಾಯರ ಉವಾಚ. ” ಏನಿಲ್ರೆಪಾ.ಖರೇ ಸುಸ್ತಂತೂ ಭಾಳ ಆಗೇದ. ಈ ಹೊತ್ತೇನ ಮನ್ಯಾಗ ಅಡಿಗಿ ಪಡಿಗಿ ಇಲ್ಲ ನೋಡ್ರಿ.ಮುಂಜಾನೆ ತಿಂಡಿ ಅಷ್ಟ ಮಾಡ್ತೀನಿ.ಊಟಕ್ಕ ಹೊರಗ ಹೋಗೂಣು” ಅಂತ ಸ್ಪಷ್ಟ ಹೇಳ್ಬಿಟ್ಟೆ. ಪಾಪ  ನಮ್ಮವರು ಹಂಗೆಲ್ಲಾ ಏನ ತಕರಾರ ಮಾಡೂ ಆಸಾಮಿ ಅಲ್ಲ. “ಆತು ಹಂಗs ಮಾಡೂಣಂತ.ಈಗೇನ ಹಾಸಿಗಿ ಬಿಟ್ಟ ಏಳ್ತಿ ಇಲ್ಲೋ” ಅಂದ್ರು. ‘ ಏಳದಿದ್ರ ನಡೀತದ ಎಲ್ಲೆ’ ಅಂತ ಜೋರಲೇನs ಹೇಳಿ ಎದ್ದು ಮುಂಜಾನೀದೆಲ್ಲಾ ಮುಗಿಸಿ , ಉಪ್ಪಿಟ್ಟು, ಕಾಫಿ ಆತು.ನಾ ಟಿವಿ ಮುಂದ , ಅವರು ಪೇಪರನ್ಯಾಗ.

“ಎಷ್ಟಕ್ಕ ಹನ್ನೊಂದರ ಸುಮಾರಿಗೆ ಹೊಂಟ್ರ ಆತಲಾ? ಅಷ್ಟ ಅಲ್ಲೆ ಇಲ್ಲೆ ತಿರಗ್ಯಾಡಿ ಊಟಾ ಮುಗಿಸಿ ಕೊಂಡು ಬರೂಣಂತ”  ಅಂದೆ. ನನ್ನ ಬೇತ ಬ್ಯಾರೇನs ಇತ್ತು. ಮೊನ್ನೆ ಗಾಂಧಿ ಬಜಾರ್ ಗೆ ಹೋದಾಗ KSIC ಶೋರೂಂ ನ್ಯಾಗ ಒಂದ ಸೀರಿ ನೋಡಿಟ್ಟಿದ್ದೆ. ಹಂಗs ಅದಿದ್ರ ಅದು, ಇದ್ದದ್ದಿಲ್ಲಾಂದ್ರ ಮತ್ಯಾವ್ದರೇ ತರೂ ವಿಚಾರ ನಂದು. ‘ ಹೂಂ ಏಳ ಮತ್ತ ‘ ಅಂದ್ರು ನನ್ನವರು. ಇನ್ನೇನ ಹಂಗಾರ ತಯಾರ ಆಗೂಣೇನ ಅಂತ ಗಡಿಯಾರ ನೋಡಿದ್ರ 10.15 ಆಗಿತ್ತು. ಏಳಬೇಕನೂದ್ರಾಗ ಫೋನ್ ಹೊಡ್ಕೊಂಡ್ತು. ‘ಹಲೋ’ ಅಂದೆ. ಆ ಕಡೆ ನನ್ನ ದೊಡ್ಡ ನೆಗೆಣ್ಣಿ.

ನಂದಷ್ಟ ಹಾಲಚಾಲ ಕೇಳಿ ‘ನಿಮ್ಮನಿಗೆ  ಬರಬೇಕಂತ ಮಾಡೀವಿ’ ಅಂದ್ರು. ‘ಅಯ್ಯ ಭಾಳ ಛಲೋ ಆತ್ರೆವಾ ವೈನಿ , ಬರ್ರಿ ಹಂಗಾರ ‘ ಅಂದೆ. ಮತ್ತೇನ ಬ್ಯಾಡ ನಾ ಹೊರಗ ಹೊಂಟೀನಿ ಅನೂದ? ಅದಕ ಅವರು ‘ಇನ್ನೊಮ್ಮೆ confirm ಮಾಡ್ತೀನ ಹಾಂ’ ಅಂದ್ರು. ಹೂಂ ಅಂದೆ.

ನಮ್ಮ ಮನೀಯವ್ರು ಕೇಳಸದವರ್ಹಾಂಗ ಪೇಪರನ್ಯಾಗ ತಲೀ ಹಾಕೊಂಡು ಕೂತಿದ್ರು. ನನ್ನ ತಲ್ಯಾಗ ನೂರಾ ಎಂಟು ವಿಚಾರ , ಅಡಿಗಿ ಏನ ಮಾಡೂದು ಅಂತ. ಯಾರರ s ಬರ್ತಾರೆ ಅಂದ್ರ ಹುಚ್ಚ ಖುಷಿ ನನಗ. ಕಡೀಕ 11.15ಕ್ಕ ಅವರ ಫೋನ್ ಬಂತು. ” ಈಗ ಸವಿತಾ ನಿಧಿ ನೂ ಬಂದ್ರು. (ಅವರ ಮಗಳು, ಮೊಮ್ಮಗಳು) ನಾಲ್ಕೂ ಮಂದಿ ಹನ್ನೆರಡು ವರೀತನಕಾ  ಬರ್ತೀವಿ. ನಿನಗ ಉಮೇದಿ ಭಾಳ. ಹೂಂ ಅಂತ ಏನೇನೋ ಮಾಡಕೋತ ಕೂಡ ಬ್ಯಾಡ” ಅಂದ್ರು ನನ್ನ ನೆಗೆಣ್ಣಿ. ‘ಹಂಗೇನಿಲ್ಲ ಬರ್ರಿ ವೈನಿ ’ ಅಂದೆ.

“ಏನ ಮಾಡೋದ್ರೆಪಾ ಈಗ’ ಅಂದೆ  ನನ್ನವ್ರಿಗೆ. ಅಗದೀ ಏನೂ ಗೊತ್ತs ಇಲ್ಲದವರ ಹಾಂಗ ,’ ಯಾಕ ಏನಾತು’ ಅಂದ್ರು. “ಯಾಕ , ಇಷ್ಟೊತ್ತೂ ಮಾತಾಡಿದ್ದು ಕೇಳಸಲಿಲ್ಲೇನು? ನಿಮ್ಮಣ್ಣ , ವೈನಿ, ಸವಿತಾ, ನಿಧಿ ಊಟಕ್ಕ ಬರತಾರಂತ’ ಅಂದೆ.”   ‘ಮತ್ತ  ಸುಸ್ತ ಅಂತಿದ್ದಿ. ಹೀಂಗಾs ತs ಒಂದ ಅನ್ನಾ ಸಾರು ಮಾಡಿ ಬಿಡು ‘ ಅಂದ್ರು.’ ನನಗ ತಿಳದ್ಹಾಂಗ ಮಾಡ್ತೀನಿ , ನಡೀರಿ ನೀವು’ ಅಂದೆ. ಅಲ್ಲೇ ನಿಂತ್ರ ಗೊತ್ತ ಅವ್ರಿಗೆ ಏನಾಗ್ತದಂತ. ಮುಸಿ ಮುಸಿ ನಕ್ಕೋತ ಹೋದ್ರು ಹೊರಗ.

ನಾ ಅಲ್ಲೇ ಕೂತು ಲೆಕ್ಕಾ ಹಾಕ್ದೆ, ಇನ್ನ ಒಂದೂವರಿ ತಾಸನ್ಯಾಗ ಬರತಾರ ಅವ್ರು. ಅಷ್ಪ್ರಾಗ ಅಡಿಗಿ ಆಗಬೇಕು. ವೆಜಿಟೇಬಲ್ ಬಿರಿಯಾನಿ, ರಾಯತಾ, ಮೊಸರನ್ನ, ಕಚ್ಚಾ ಟೊಮೆಟೊ ಚಟ್ನಿ, ಹೀರೇಕಾಯಿ ಭಜಿ ಮಾಡೋದು. ಸ್ವೀಟ ಏನು ಮಾಡಲಿ ಅಂತ ಯೋಚಿಸಿ, ಶ್ಯಾವಿಗೆ ಖೀರ್ ಅನ್ಕೊಂಡೆ. ಆದ್ರ ಶ್ಯಾವಿಗೆ ಖಾಲಿ ಆಗಿದ್ದು. ಏನ ಮಾಡಲೀಂತ ತಲಿ ಓಡಸಿ ಹೊಸಾ ಪ್ರಯೋಗ, ಎಲ್ಲಾ ಡ್ರೈ ಫ್ರೂಟ್ಸ್ ಹಾಕಿ ಅದರ ಖೀರ್ ಯಾಕ ಮಾಡಬಾರದು?

ನೋಡೇ ಬಿಡೋಣ ಅಂತ ಎದ್ದೆ.

ಸುರು ಆತ ನೋಡ್ರಿ ಮಜಾ.  ಪಟಾ ಪಟಾ ಕುಕ್ಕರ್ ತಗೊಂಡೆ.ಸಣ್ಣ ಮಿಸ್ ಮೇರಿ ಕುಕ್ಕರನ್ಯಾಗ ಡ್ರೈ ಫ್ರೂಟ್ಸ್ ಹಾಕಿ ಸ್ವಲ್ಪ ಹಾಲು ಹಾಕಿ ಬೇಯಲಿಕ್ಕಿಟ್ಟು ಇನ್ನೊಂದು ಕುಕ್ಕರ್ ನ್ಯಾಗ ಮೊಸರನ್ನ ಕಲಸಲಿಕ್ಕೆ ಅನ್ನಕ್ಕಿಟ್ಟೆ.ಒಂದ ಒಲೀಮ್ಯಾಲ ಖೀರ್ ಗೆ ಹಾಲು ಅಟ್ಟಸಲಿಕ್ಕಿಟ್ಟು, ಇನ್ನೊಂದ್ರ ಮ್ಯಾಲೆ ಚಟ್ನಿಗೆ ತಾಳಿಸಿ ಇಟ್ಟೆ.ಕುಕ್ಕರ್ ಆಗೂದ್ರಾಗ ಬಿರಿಯಾನಿ ತಯಾರೀನೂ ಆತು. ಹಂಗs  ಹಾಲು ಕೈಯಾಡಿಸಿಗೋತ ಡ್ರೈ ಫ್ರೂಟ್ಸ್ ಬೆಂದದ್ದು ಗ್ರೈಂಡ್ ಮಾಡೂಣನೂದ್ರಾಗ ಕರೆಂಟ್ gone!!  ಇದೇನಪಾ ಫಜೀತಿ ಅನಕೋತ ಸ್ಟೌವ್ ಆರಿಸಿ ನಾ ತಯಾರಾಗೋಣ ಅನೂದ್ರಾಗ, ಫೋನ್.

“ಅಯ್ಯs ಬಂದsಬಿಟ್ರೇನ ಮತ್ತ ? ಅಡ್ರೆಸ್ ಸಿಗವಲ್ಲತೇನ”  ಅನಕೋತ ,’ ಹಲೋ’ ಅಂದೆ.

ಆ ಕಡೆಯಿಂದ ಇನ್ನೊಬ್ಬ ಭಾವನವರ ಸೊಸೆ ವಿನೂ, “ಕಾಕೂ ಏನು ನಡಸೀರಿ? ಹೊರಗ ಹೋಗೂ ಪ್ಲಾನ್ ಅದ ಏನು? ನಾವು ಬನ್ನಿ ಕೊಡಲಿಕ್ಕೆ ಬರಲಿಕ್ಹತ್ತೀವಿ” ಅಂದ್ಲು. “ವಾವ್ ಭಾಳ ಛಲೋ ಆತು ಬರ್ರಿ. ದೊಡ್ಡ ಕಾಕಾ ಕಾಕು, ಸವಿತಾ ನಿಧಿನೂ ಬರಲಿಕ್ಹತ್ಯಾರ’ ಅಂದೆ. ‘ಹೌದ s ಹಂಗಾರ ಬಂದs ಬಿಡ್ತಿವಿ’ ಅಂದ್ಳು.’ ಊಟಕ್ಕಿಲ್ಲೇ ಬರ್ರಿ ‘ಅಂತ ಒತ್ತಾಯ ಮಾಡಿದ್ದಕ್ಕೆ ಹೂಂ ಅಂದ್ಲು.

ಈಗ ಒಟ್ಟು ಹತ್ತು ಮಂದಿ ಊಟಕ್ಕ. ಕರೆಂಟ ಪತ್ತೇನs ಇಲ್ಲ ..ರೆಡಿಯರs ಆಗೂಣ ಅಂತ ಭರಾ ಭರಾ ಒಂದು ರೇಶ್ಮಿ ಸೀರೆ ಉಟ್ಟು ಮಲ್ಲಿಗೆ ಮುಡಕೊಂಡು ಹೊರಗ ಬರೂದ್ರಾಗ ಕರೆಂಟ್ ಬಂತು.ಖುಷಿ ಉಕ್ಕಿ ಹಾಡು ಹರಿದು ಬಂತು.

ಗಡಬಡಿಸಿ ಮಿಕ್ಸಿ ಮಾಡಿ ಇನ್ನೊಂದು ಲೀಟರ್ ಹಾಲು ಪಾತೇಲಿಗ್ಯಿನ ಹಾಲಿಗೆ ಹಾಕಿ ಕುದೀಲಿಕ್ಕಿಟ್ಟು,ಸೌಟೀಲೇ ಜೋರ ಜೋರಾಗಿ ತಿರವಕೋತ, ‘ ಲಟ ಉಲಝೆ ಸುಲಝಾ ಜಾ ಬಾಲಮಾ’ ಅಂತ ಜೋರು ಹಾಡು ಸುರು ಆತು. ನಮ್ಮ ಮನಿಯವ್ರು ,’ ಹೂಂ ,ಹವುರಗ ಕೈಯಾಡ್ಸು. ಪಾತೇಲಿ ಹೊಳ್ಳೀತು ಎಲ್ಯರೆ’ ಅಂದು, ‘ಏನೋ ಅಂದ್ಯಲಾ ಲಟ ಉಲಝೆ ಸುಲಝಾ ಜಾ ಅಂತ ನಕ್ಕೋತ ಕೇಳಿದಾಗ, ಪಾತೇಲ್ಯಾಗಿನ ಸೌಟು ಕೈಯಾಗ ಬಂತು. ನಕ್ಕೋತ ಮೆತ್ತಗ ಅಡಿಗಿ ಮನಿ ಬಿಟ್ರು.  ನನ್ನ  ಹಾಡಿಗೆ ಇನ್ನೂ ರಂಗೇರಿತ್ತು ಈಗ. ‘ ಮಾಥೇ ಕಿ ಬಿಂದಿಯಾ ಬಿಖsರ ಗಯೀ ಹೈ’ ಅನಕೋತ  ರುಬ್ಬಿದ ಡ್ರೈ ಫ್ರೂಟ್ಸ್ ಮಿಶ್ರಣ ಹಾಲಿಗೆ ಸುರವಿ ಸ್ವಲ್ಪ ಸಕ್ಕರೆ ಬಾದಾಮ ಪೌಡರ್ ಹಾಕಿದೆ. ಈಗ ಆಲಾಪ ನಡದಿತ್ತು. ಯಾಕೋ ಬಾದಾಮ್ ಪೌಡರ್ ಕಡಮಿ ಆತು ಅನಿಸಿ, ಇನ್ನೊಂದು ಪ್ಯಾಕೆಟ್ ತಗೊಂಡು ಓಪನ್ ಮಾಡಿ, ಮಾಡಿ ಸುರುವಿದೆ, ಆತ ನೋಡ ಘೋಟಾಳಾ !! गडबड घोटाळा !!!

ಆಲಾಪ ತಾರಕ ಸಾ ಕ್ಕ ಹೋಗಿದ್ದು ಅಲ್ಲೇ ಸ್ಟಕ್ ಆತು!  ಈ MTR ದವರದೊಂದು ಎಲ್ಲಾ ಪ್ಯಾಕೆಟ್ ಒಂದೇ ಥರಾ ! ನಾ ಬಾದಾಮ ಪೌಡರ್ ಅಂತ್ಹೇಳಿ ಸುರುವಿದ್ದು ರಸಂ ಪೌಡರ್!! ಸ್ಟಕ್ ಆಗಿದ್ದ ಸ್ವರ ಹೊರಗ ಬರಲೇ ಇಲ್ಲ. ಒಂದ ನಿಮಿಷ ಥಕ್ ಆಗಿ ನಿಂತ ಬಿಟ್ಟೆ. ಅಷ್ಟ್ರಾಗ ನಮ್ಮ ದೊಡ್ಡ ನೆಗೆಣ್ಣಿ ಕುಟುಂಬ ಬಂದಿಳಿತು. ಖೀರ್ ಮ್ಯಾಲಿಂದ ರಸಂ ಪೌಡರ್ ಅದರ ಜೋಡಿ ಒಂದ ನಾಲ್ಕ ಸೌಟನಷ್ಟ ಖೀರ್ ತಗದು ಸಿಂಕ್ ಗೆ ಸುರುವಿ , ‘ ಬರ್ರಿ ವೈನಿ ಒಳಗ ಬರ್ರಿ’ಅಂದೆ. ಅವರು ಅಲ್ಲೇ  ಹೊರಗ ಸೋಫಾದ ಮ್ಯಾಲೆ  ಆಸೀನರಾದರು. ನನಗ ಹಣೀ ಮ್ಯಾಲೆ ಜೋರ ಬೆವರು, ಕಾಲು ನಡಗಲಿಕ್ಹತ್ತಿದ್ದು. ಅಲ್ಲಾ, ನೀವs ಹೇಳ್ರಿ, ಆಯತಾ ಹೊತ್ತಿಗೆ ಖೀರ್ ಒಡದ್ರ ಗತಿಯೇನು?ನುಗ್ಗಿಕೆರಿ  ಹಣಮಪ್ಪಾ

ನಿನಗ ಜೋಡ ಕಾಯಿ ಒಡಸ್ತೀನಪಾ. ಖೀರ್  ನ ಕಾಯು, ನನ್ನ ಮಾನಾ ಉಳಸು’ ಅಂತ ಬೇಡಕೊಂಡು ಖೀರ್ ಪಾತೇಲಿಗೆ ಇನ್ನೂ ಸ್ವಲ್ಪ ಹಾಲು ಕೆನೆ ಎಲ್ಲಾ ಹಾಕಿ ಹುಷಾರೀಲೇ ಬಾದಾಮ ಪೌಡರ್ ಅಂತ ಖಾತ್ರಿ ಮಾಡಕೊಂಡು ಅದನೂ ಹಾಕಿ ಗೋಟಾಯಿಸಕೋತ , ಪೆಚ್ಚ ನಗೀ ನಕ್ಕೋತ,   ‘ ಸವಿತಾ ಎಲ್ಲೆ’ ಅನೂದ್ರಾಗ, ‘ ಏನs ಕಾಕೂ ಖಮ್ಮಗ ವಾಸನಿ ಹೊರಗಿನ ತನಕಾ ಬರಲಿಕ್ಹತ್ತದ.ಏನ ಮೆನು?’  ಅಂತ ಕೇಳಕೋತ ಸವಿತಾ  ಬಂದ್ಲು.

“ಬಾರs ಸವಿತಾ ಬಾ ಇಲ್ಲೇ. ಒಂಚೂರು ಈ ಖೀರ್ ರುಚಿ ನೋಡs”  ಅಂದೆ. ‘ ನಿಂದೇನ ಕಾಕೂ , ನಿನ್ನ ಅಡಿಗಿ ,ತಿನಸಾ ಮಸ್ತ ಆಗಿರತದ ‘ ಅನಕೋತ,ಒಂದ ಚಮಚಾ  ಖೀರ್  ರುಚಿ ನೋಡಿ,  ‘ ಏನs‌ಕಾಕೂ ಇದು, ಎಂಥಾ ಮಸ್ತ ಆಗೇದ!! ನನಗೂ ರೆಸಿಪಿ ಬೇಕಾ ಮತ್ತ’ ಅಂದ್ಲು. ನನಗ  ಹೋದ ಜೀವ ಬಂದಹಾಂಗ ಆತು. ಹೊಸಾ ಪ್ರಯೋಗ ಬ್ಯಾರೆ,ಮ್ಯಾಲ ಈ ಘೋಟಾಳಾ ! ಇನ್ನೂ ಅಂತೂ ಖೀರ್ ಒಡದು ಪಡದು ಏನ  ಆಗಿದ್ದಿಲ್ಲಾ. ಇನ್ನ ಜಾಸ್ತಿ ಕುದಸೂದ ಬ್ಯಾಡ ಅಂತ  ಕೆಳಗಿಳಿಸಿ ಇಟ್ಟೆ ಪಾತೇಲಿ ಖೀರಿಂದು.

ಅಷ್ಟ್ರಾಗ ಇನ್ನೊಬ್ಬ ನೆಗೆಣ್ಣಿ ಫ್ಯಾಮಿಲಿ ಸಹಿತ ಬಿಜಯಂಗೈಸಿದ್ರು.ವಿನು, ” ಕಾಕೂ ಏನ್ರೀ ನಮಗ ಅಲ್ಲೇ ಧೋಬಿ ಅಂಗಡಿ ಹತ್ರನs ಖೀರ್ ನ  ವಾಸನಿ  ಬಂತು. ರುಚಿ ನೋಡೇ  ಬಿಡ್ತೀನಿ ” ಅಂತ  ಒಂಚೂರು ರುಚಿ ನೋಡ್ದಾಕೀನ, “ಕಾಕೂ  ಏನ ಖೀರ್ ಇದು! ಏನ  ಹಾಕೀರಿ, ಹೆಂಗ ಮಾಡೀರಿ ಹೇಳ್ರಿ” ಅಂತ ಬೆನ್ನs ಹತ್ತಿದ್ಲ ‌ನಾ ಹೇಳ್ದೆ, ” ಬರ್ರಿ  ಎಲ್ಲಾರೂ ಹೊರಗೀಗ. ಮೊದಲ ಬನ್ನಿ ಬಂಗಾರ ಕೊಡೋದು ತಗೋಳೋದು ಆಗಲಿ. ಆಮ್ಯಾಲ  ಸ್ವಲ್ಪ ಹರಟಿ  ಆಗಲಿ. ಅಷ್ಟ್ರಾಗ   ನಾ ಬಿಸಿ ಭಜಿ ಅಷ್ಟ ಭಡಕ್ಕನ ಕರಿತೀನಿ. ಊಟ ಆಗಲಿ. ಎಲ್ಲಾರೂ ಖೀರ್ ತಿನೂದಾಗಲಿ. ಆ ಮ್ಯಾಲ  ಯಾರ್ಯಾರಿಗೆ ರೆಸಿಪಿ ಬೇಕು ಹೇಳ್ರಿ ಕೊಡ್ತೀನಿ” ಅಂತ  ನಾ ಹೇಳಿದೆ.

ನನಗsರs  ಊಟಾ  ಲಗೂನ  ಮುಗಸೂ  ಗಡಿಬಿಡಿ. ಖೀರ್  ಏನಕೇನsರ ಆದ್ರ  ಮಾಡೂದೇನು? ಅವರರೇ  ಎಲ್ಲಾರೂ ನಾ ಹೇಳಿದ್ದs ತಪ್ಪಾತು  ಅನೂಹಾಂಗ  ಮಾತ ನ್ಯಾಗ ಮುಣಗ್ಯಾರ. ಅವರದರೇ ಏನ ತಪ್ಪು?

ಒಂದs  ಊರಾಗ ಇದ್ರೂ ಭೆಟ್ಟೀನs  ಅಪರೂಪ  ಈಗ. ನಮ್ಮ ಎರಡನೇ ನೆಗೆಣ್ಣಿ, ” ಅಡಿಗಿ  ಆರತದ ಇನ್ನ. ಏಳ್ರಿ, ಊಟಾ ಮುಗಿಸಿ ಮಾತಾಡಿಕೋತ ಕೂಡ್ರಿ. ಸವಿತಾ, ವಿನು ಬರ್ರಿ ತಾಟ ಹಾಕ ಬರ್ರಿ” ಅಂತ  ಹೇಳಿ  ಪುಣ್ಯಾ  ಕಟಗೊಂಡ್ರು. ಬಿಸಿ ಭಜೀನೂ ರೆಡಿ ಆದು ಅಷ್ಟ್ರಾಗ. ಆದ್ರೂ ಹೇಳ್ತೀನ  ಕೇಳ್ರಿ ಆ ಹೊತ್ತಿನ ಸ್ಟಾರ್ ಐಟಂಖೀರ್ ! ಎಲ್ಲಾರೂ 2-3 ಬಟ್ಲ  ಖೀರ್  ತಿಂದ್ರ  ಹಾಂ. ಮೂರು ಲೀಟರ್ ಹಾಲಿನ ಖೀರು ಖಾಲಿ.” ಹುಶ್ಯಪಾ ದೇವರs” ಅಂತ  ಕೂತೆ. “ಯಾಕs  ಸರೋಜಿನಿ  ಆರಾಮ ಅದ  ಇಲ್ಲೋ? ನೀ ಭಾಳ  ದಣಕೋತೀವಾ. ನಾವೇನ  ಹೊರಗಿನವರ? ಒಂದ  ಅನ್ನಾ ಸಾರು ಮಾಡಿದ್ರ ಆಗ್ತಿತ್ತವಾ”ಅಂದ್ರು. ನನ್ನ ನೆಗೆಣ್ಣಿ ಕಕಲಾತೀಲೆ. ನಾ ‘ ಅದೇನ ಇಲ್ರೆವಾ. ನಾ  ಏಕದಂ ಆರಾಮ ಇದ್ದೀನಿ.’ ಅಂತ ಹೇಳಿ, ‘ ಈಗ  ಹೇಳ್ರಿ , ಯಾರಿಗೆ ಬೇಕು ಖೀರ್  ರೆಸಿಪಿ’?’ ಅಂದೆ .ಕೂಡಲೇ ವಿನೂ ಸವಿತಾ ಟೈಪ್ ಮಾಡ್ಲಿಕ್ಕೆ ರೆಡೀನs.

ನಮ್ಮ ಭಾವಂತೂ, ‘ ಏ ನೋಡ, ನೀನೂ ಅಷ್ಟ ಕಲೀ ನಿಮ್ಮ ತಂಗಿ ಕಡೆ. ತಾಸ -ದೀಡತಾಸನ್ಯಾಗ ಎಂಥಾ ಉತ್ಕೃಷ್ಟ ಅಡಿಗಿ  ಮಾಡ್ಯಾಳ. ಖೀರ್ ಅಂತೂ ಅಮೃತ’ ಅಂದ್ರು. ನನ್ನ ಮಾರೀ ಮ್ಯಾಲೆ  ಒಂಚೂರು ನಗಿ.ವಿನು, ಸವಿತಾಂದು ಒಂದs‌  ಗಡಿಬಿಡಿ ಹೇಳ  ರೆಸಿಪಿ ಅಂತ. ಆಗ ನಾ ” ಏ ಬಾಳಾಗೋಳ್ರಾ , ಮೊದಲ ನಾ ಹೇಳೂದ  ಕೇಳ್ರಿ. ಆಮ್ಯಾಲ  ಬರಕೋರಿ” ಅಂತ    ಘೋಟಾಳಾದ ಕತಿ ಹೇಳ್ದೆ   ನೋಡ್ರಿ,  ಅಯ್ಯಪಾ ಏನ ಹೇಳಲಿ? ನಮ್ಮ ಮನೀ ಛತ್ತು ಹಾರಿ ಹೋಗಿಲ್ಲ ಇನ್ನೂ ಅದ. ನನ್ನ  ಪತಿ ಗೂ, ಗೊತ್ತಿರಲಿಲ್ಲ  ಹಕೀಕತ್ತು .

ಮಗಾ ಸೊಸಿ ಮೊಮ್ಮಗಾನೂ ಊರಾಗಿರಲಿಲ್ಲ. ” ಹೇಳ್ರಿ ಹೆಂಗದ  गडबड घोटाळा,,?” ಅಂದೆ. ಅದಕ್ಕ ಸವಿತಾ,

“ಕಾಕೂ ಇದಕ ಡ್ರೈ ಫ್ರೂಟ್ಸ್ ಖೀರ್  ಅನೂದ ಬ್ಯಾಡ. ಘೋಟಾಳಾ  ಖೀರ್ ಅಂತೇ ಅನೂಣು.”

ಅಂತ  ನಾಮಕರಣ ಮಾಡೇಬಿಟ್ಲು.

ಈ ಹೊತ್ತು ಮುಂಜಾನೆ ವಿನು ಫೋನಾಯಿಸಿ,” ಕಾಕೂ  ನಿನ್ನೆ ರಾತ್ರಿ ಘೋಟಾಳಾ ಖೀರ್  ಮಾಡಿದ್ದೆ. ಭಾರೀ ಛಲೋ ಆಗಿತ್ತು.ಆದರೂ ನೀವು ಮಾಡಿದ ಖೀರ್ ನಷ್ಟ ರುಚಿ ಬರ್ಲಿಲ್ಲ ನೋಡ್ರಿ’ ಅಂದ್ಲು.

“ಆಕೀ ರಸಂ ಪೌಡರ್ ಹಾಕಿ ತಗದ ಸಿಂಕ್ ನ್ಯಾಗ ಹಾಕಿಲ್ಲ ನೋಡು” ನನ್ನವರ  ನುಡಿ ಮುತ್ತು. ಆಗ ಈ ನೆನಪಿನ ಸುರುಳಿ ಬಿಚ್ಚಿಕೊಂಡು ಹುಚ್ಚು ನಗೀ ಬಂತ ನನಗ.

ಏನs ಹೇಳ್ರಿ ನನ್ನ ಖೀರ್ ಮಸ್ತ  ಹೆಸರು ಮಾಡ್ತು ಬಿಡ್ರಿ. ವಿನೂನ  ಅಕ್ಕನೂ ರೆಸಿಪಿ ತಗೊಂಡು ಹೋದ್ಲಂತ. ಈಗ ಹೇಳ್ರಿ ನೀವು

“ನಿಮಗ  ಬೇಕೇನ್ರೀ  ಘೋಟಾಳಾ ಖೀರ್ ರೆಸಿಪಿ ?”

‍ಲೇಖಕರು avadhi

3 November, 2019

2 Comments

  1. Sarojini Padasalgi

    ಧನ್ಯವಾದಗಳು ಅವಧಿ.

  2. T S SHRAVANA KUMARI

    ಬಲು ರುಚಿಯಾಗಿದೆ ಬಿಡ್ರಿ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading