-ಗೊರೂರು ಶಿವೇಶ್
ಪ್ರಸಿದ್ಧ ನಾಟಕಕಾರ್ತಿ ಅನುಪಮಾ ಚಂದ್ರಶೇಖರ್ ಅವರ ಚರ್ಚಿತ ಇಂಗ್ಲಿಷ್ ನಾಟಕ ‘ವೆನ್ ದಿ ಕ್ರೋಸ್ ವಿಸಿಟ್’ (Wheಟಿ ಣhe ಅಡಿoತಿs ಗಿisiಣ) ಕೃತಿಯನ್ನು ನಿರ್ದೇಶಕ ವೆಂಕಟೇಶ್ ಪ್ರಸಾದ್ ಅವರು ಕನ್ನಡದ ನೆಲಕ್ಕೆ ತಕ್ಕಂತೆ ಒಗ್ಗಿಸಿ ‘ಕಾಕದೋಷ’ ಹೆಸರಿನಲ್ಲಿ ರಂಗರೂಪಕ್ಕಿಳಿಸಿದ್ದಾರೆ. ‘ಬೆಂಗಳೂರು ಥಿಯೇಟರ್ ಕಲೆಕ್ಟಿವ್’ ತಂಡವು ರಂಗಶಂಕರದಲ್ಲಿ ಪ್ರಸ್ತುತಪಡಿಸಿದ ಈ ನಾಟಕವು, ಮೂರು ತಲೆಮಾರುಗಳ ಕೌಟುಂಬಿಕ ಚೌಕಟ್ಟಿನಲ್ಲಿ ಪಿತೃಪ್ರಧಾನ ವ್ಯವಸ್ಥೆಯ ಬೇರುಗಳು, ತಲೆಮಾರಿನಿಂದ ತಲೆಮಾರಿಗೆ ಹರಿದುಬರುವ ಹಿಂಸೆ ಮತ್ತು ಅಸಹಾಯಕತೆಯನ್ನು ಅತ್ಯಂತ ತೀವ್ರವಾಗಿ ಕಟ್ಟಿಕೊಡುತ್ತದೆ
ಶಿಥಿಲಾವಸ್ಥೆಯಲ್ಲಿರುವ ಹಳೆಯ ಕಾಲದ ಮನೆಯೊಂದರಲ್ಲಿ ಹಾಸಿಗೆ ಹಿಡಿದಿರುವ ಅಜ್ಜಿ ಸೀತಮ್ಮ, ಆಕೆಯನ್ನು ಉಪಚರಿಸುವ ಹೋಂ ನರ್ಸ್ ಮತ್ತು ಇಡೀ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿರುವ ವಿಧವೆ ಶಾರದಾ—ಇವರ ಸುತ್ತ ಕಥೆ ಬಿಚ್ಚಿಕೊಳ್ಳುತ್ತದೆ. ಬಾಯಿ ಚಪಲ ಹಾಗೂ ವಾಚಾಳತ್ವದಿಂದಲೇ ಇಡೀ ಮನೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಯತ್ನಿಸುವ ಗಯ್ಯಾಳಿ ಅತ್ತೆಯ ದರ್ಪ ಒಂದೆಡೆಯಾದರೆ, ಗಂಡನಿಂದ ಸತತ ಶೋಷಣೆಗೆ ಒಳಗಾಗಿಯೂ ಸಂಪ್ರದಾಯ ಹಾಗೂ ಮಗನಿಗಾಗಿ ಎಲ್ಲವನ್ನೂ ಮೌನವಾಗಿ ನುಂಗಿಕೊಂಡ ಶಾರದೆಯ ನಿಸ್ಸಹಾಯಕತೆ ಇನ್ನೊಂದೆಡೆ.
ಈ ಇಬ್ಬರಿಗೂ ಜೀವನದ ಏಕೈಕ ಭರವಸೆಯಾಗಿ ಕಾಣುವುದು ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಮಗ ಅಕ್ಷಯ್. ಕೊನೆಗೂ ಮನೆಗೆ ಅನಿರೀಕ್ಷಿತವಾಗಿ ಮರಳುವ ಅಕ್ಷಯ್‌ನ ಆಗಮನ ಯಾವುದೇ ಸಂಭ್ರಮವನ್ನು ತರುವುದಿಲ್ಲ; ಬದಲಿಗೆ ಭೀಕರ ಆತಂಕವನ್ನು ಹೊತ್ತು ತರುತ್ತದೆ. ಮುಂಬೈನಲ್ಲಿ ನಡೆದ ಬರ್ಬರ ಲೈಂಗಿಕ ದೌರ್ಜನ್ಯದ ಅಪರಾಧದಿಂದ ತಪ್ಪಿಸಿಕೊಳ್ಳಲು ಆತ ಓಡಿಬಂದಿರುತ್ತಾನೆ. ಪೊಲೀಸರ ಬೆಂಬಿಡದ ಬೆನ್ನಟ್ಟುವಿಕೆ, ತಾನು ನಿರಪರಾಧಿ ಎಂದು ಸಮರ್ಥಿಸಿಕೊಳ್ಳುವ ಮಗ, ವಂಶದ ಕುಡಿಯನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಹಠಹಿಡಿಯುವ ಅಜ್ಜಿ ಮತ್ತು ಮಗನ ಮೇಲಿನ ಅಂಧ ವಾತ್ಸಲ್ಯ ಹಾಗೂ ಆತನ ಅಪರಾಧಿ ಮುಖದ ನಡುವೆ ಸಿಲುಕಿ ತೊಳಲಾಡುವ ತಾಯಿಯ ತಳಮಳ ನಾಟಕವನ್ನು ಉಸಿರುಕಟ್ಟಿಸುವ ತಿರುವಿಗೆ ಕೊಂಡೊಯ್ಯುತ್ತದೆ.

ದಕ್ಷಿಣ ಭಾರತೀಯ ನಂಬಿಕೆಗಳಲ್ಲಿ ಕಾಗೆಗಳನ್ನು ಪೂರ್ವಜರ ಆತ್ಮಗಳು ಮತ್ತು ಶಕುನದ ಸಂಕೇತವೆಂದು ಕಾಣಲಾಗುತ್ತದೆ. ನಾಟಕದಲ್ಲಿ ಬರುವ ‘ಕಾಕದೋಷ’ ಕೇವಲ ಶಕುನವಲ್ಲ; ಅದು ಪುರುಷ ಪ್ರಧಾನ ವ್ಯವಸ್ಥೆಯ ಮುಂದುವರಿಕೆ, ಮಾಡಿದ ಪಾಪದ ಫಲ ಮತ್ತು ಪೂರ್ವಜರ ಹಿಂಸಾತ್ಮಕ ಮನಸ್ಥಿತಿಯ ಪ್ರತೀಕ. ತಾನು ಸಾಯುವ ತನಕ ಅನುಭವಿಸಿದ ಗಂಡನ ಕ್ರೌರ್ಯವೇ ಇಂದು ಮಗನಲ್ಲೂ ರಕ್ತಗತವಾಗಿ ಬೆಳೆದುನಿಂತಿದೆ ಎಂಬುದನ್ನು ಶಾರದಾ ಅರಿತಾಗ, ಪಿತೃಪ್ರಧಾನ ಮೌಲ್ಯಗಳ ಕರಾಳತೆ ಬಯಲಾಗುತ್ತದೆ. ಬದಲಾವಣೆ ಬಯಸಿದರೂ ಜಾರಿಕೊಳ್ಳಲಾಗದ ಅಸಹಾಯಕತೆ, ಮನೆತನದ ಪ್ರತಿಷ್ಠೆ ಮತ್ತು ಮನುಷ್ಯತ್ವದ ನಡುವಿನ ಘರ್ಷಣೆಯನ್ನು ನಾಟಕ ಪ್ರಖರವಾಗಿ ಪ್ರಶ್ನಿಸುತ್ತದೆ. ಸಾಂಪ್ರದಾಯಿಕ ಹಾಗೂ ಸ್ವಾತಂತ್ರ್ಯತೆಯ ಪ್ರತೀಕವಾದ ಇಬ್ಬರು ಸಹೋದರಿಯರ ಮುಖಾಮುಖಿಯಾದ ಸಂದರ್ಭದಲ್ಲಿನ ಸಂಭಾಷಣೆ, ಮುನಿಸು ಕೋಪ ಪ್ರೀತಿ,ಕರುಣೆಯನ್ನು ಬಿಂಬಿಸುವ ಸಣ್ಣ ಸಣ್ಣ ಘಟನೆಗಳು ( ತಂಗಿ ಅಕ್ಕನ ನೈಟಿಗೆ ಸೇಫ್ಟಿ ಪಿನ್ ಹಾಕುವ..) ಇಡೀ ನಾಟಕದಲ್ಲಿ ಹೈಲೈಟ್ ಆಗಿ ಮೂಡಿ ಬಂದಿದ್ದು ನೋಡುಗರನ್ನು ಭಾವ ಪರವಶಗೊಳಿಸುತ್ತದೆ.
ನಾಟಕದ ಜೀವಾಳವಾಗಿರುವುದು ಕಲಾವಿದರ ನಟನೆ. ಶೃಂಗಾ ಬಿ.ವಿ., ನಂದಿನಿ ಪಟವರ್ಧನ್, ಮಾಲತೇಶ್, ಮರಿಯೊ ಜೆರೋಮ್, ಸುನೀಲ್ ಕುಮಾರ್ ವಿ., ವಿದ್ಯಾ ಉಳಿತ್ತಾಯ, ಗೌರಿ ದತ್ತು ಮತ್ತು ದಿವ್ಯಶ್ರೀ ಜಯರಾಮ್ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅಜ್ಜಿ, ಸೊಸೆ ಮತ್ತು ಮೊಮ್ಮಗನ ಪಾತ್ರಧಾರಿಗಳ ಸಹಜ ಹಾಗೂ ಸಂಯಮದ ಅಭಿನಯ ಇಡೀ ನಾಟಕದ ತೂಕವನ್ನು ಹೆಚ್ಚಿಸಿದೆ.

ತಾಂತ್ರಿಕವಾಗಿ ಬೆಳಕಿನ ವಿನ್ಯಾಸವು ಸನ್ನಿವೇಶಗಳ ಭಾವತೀವ್ರತೆಯನ್ನು ಎತ್ತಿಹಿಡಿಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಆದರೆ, ಹಿನ್ನೆಲೆಯಲ್ಲಿ ಬರುವ ಕಾಗೆಗಳ ಕರ್ಕಶ ಧ್ವನಿ ಹಾಗೂ ನಾಯಿಗಳ ಬೊಗಳುವಿಕೆಯ ಧ್ವನಿಗ್ರಹಣ (Souಟಿಜ ಜesigಟಿ) ಅಷ್ಟೊಂದು ಸಮರ್ಪಕವಾಗಿರದೆ ಕಿರಿಕಿರಿ ಉಂಟುಮಾಡುತ್ತದೆ. ಜೊತೆಗೆ ಪಾತ್ರಗಳ ವಸ್ತ್ರವಿನ್ಯಾಸವೂ ತೀರಾ ಸಾಧಾರಣವಾಗಿದ್ದು, ರಂಗಭೂಮಿಯ ದೃಶ್ಯ ವೈಭವಕ್ಕೆ ಹೆಚ್ಚಿನ ಶಕ್ತಿ ತುಂಬಿಲ್ಲ ಎಂಬುದು ಸಣ್ಣ ಕೊರತೆಯಾಗಿ ಉಳಿಯುತ್ತದೆ.
ಈ ಮಿತಿಗಳ ನಡುವೆಯೂ, ‘ಕಾಕದೋಷ’ ಇಂದಿಗೂ ಸಮಾಜದಲ್ಲಿ ಗಟ್ಟಿಯಾಗಿ ಬೇರೂರಿರುವ ಗಂಡು ಮಕ್ಕಳ ಮೇಲಿನ ಅಂಧ ವ್ಯಾಮೋಹ ಮತ್ತು ಕುಟುಂಬಗಳು ಮುಚ್ಚಿಡಲು ಯತ್ನಿಸುವ ಕೌಟುಂಬಿಕ ಹಿಂಸೆಯ ಮುಖವಾಡವನ್ನು ಸೀಳಿ ತೋರಿಸುವಲ್ಲಿ ಯಶಸ್ವಿಯಾದ ಪ್ರಬಲ ರಂಗಪ್ರಯೋಗ.






0 Comments