‘ಕವಿತೆ ಬಂಚ್’ನಲ್ಲಿ ಅನಘ ನರಸಿಂಹ ಸಿ ಎನ್

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅನಘ ನರಸಿಂಹ ಸಿ ಎನ್

ನನ್ನ ಹೆಸರು ಅನಘ ನರಸಿಂಹ ಸಿ.ಎನ್. ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವನು. ಕ್ರೈಸ್ಟ್ ಪಡೆದು ಪ್ರಸ್ತುತ KLE Society’s Law College ನಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದೇನೆ.

ಹೈ-ಸ್ಕೂಲ್ ನಲ್ಲಿ ನನಗೆ ಸಾಹಿತ್ಯದ ಪಾಠ ಹೇಳಿಕೊಡುತ್ತಿದ್ದವರು ನನ್ನ ಮೇಲೆ ಬೀರಿದ ಪ್ರಭಾವದಿಂದ ಸಾಹಿತ್ಯದಲ್ಲಿ ಆಸಕ್ತಿ ಮೂಡಿ ಪದ್ಯಗಳನ್ನು ಬರೆಯಲು ಶುರು ಮಾಡಿದೆ. ತದನಂತರ ಕಾಲೇಜಿನಲ್ಲಿ ನಾಟಕಗಳನ್ನು ಬರೆಯಲು ಶುರು ಮಾಡಿದೆ. ನನ್ನ ಕೆಲವು ಇಂಗ್ಲಿಷ್ ಕವನಗಳು ಇತ್ತೀಚೆಗಷ್ಟೇ ಪ್ರಕಟವಾದವು.

ರಸ್ತೆ ಮೇಲೆ ಯಾರಿಗಾಗಿ ಪಾರಿಜಾತ ಕಾದಿದೆ?

ರಾತ್ರಿ ಮುಗಿಯುವ ಹೊತ್ತು
ಬೆಳಕು ಹರಿಯುವ ಹೊತ್ತು
ರಸ್ತೆ ಮೇಲೆ ಯಾರಿಗಾಗಿ
ಪಾರಿಜಾತ ಕಾದಿದೆ?

ಹಸಿರ ಹಂಗು ಬೇಡವಾಗಿ
ತೂಗುವ ಗಾಳಿಯ ಜೊತೆಗೂಡಿ
ಭುವಿಯ ಮಡಿಲಿಗೆ ಜಾರಿ ಬಿದ್ದು
ತೇಲಿ ಹೋಗುವ ಚಂದಿರನ ನೋಡುತ್ತಾ

ರಸ್ತೆ ಮೇಲೆ ಯಾರಿಗಾಗಿ
ಪಾರಿಜಾತ ಕಾದಿದೆ ?

ಹಾಲು ಕೊಡುವವಗೆ ಸೈಕಲ್
ಬ್ರೇಕ್ ಒತ್ತಲು ಸಮಯವಿಲ್ಲ
ವಾಕಿಂಗ್ ಮಾಡುವ ಮಂದಿಗೆ
ಮಾತಿನ ಮಧ್ಯೆ ಬಿಡುವಿಲ್ಲ
ನಿದ್ರಾದೇವಿಗೆ ಶರಣಾಗಿರುವ
ಭಕ್ತರಿಗೆ ಏಳುವ ಮನಸಿಲ್ಲ

ಗುಡಿಯ ಪೂಜಾರಿಗೆ ನೆಲದಿ
ಬಿದ್ದ ಹೂವು ಮೈಲಿಗೆಯಾಗಿದೆ
ಹೂ ಮಾರುವವಳ ದಾರಕ್ಕೆ
ಮಲ್ಲಿಗೆ ನೇಣು ಬಿದ್ದಾಗಿದೆ

ರಸ್ತೆ ಮೇಲೆ ಯಾರಿಗಾಗಿ
ಪಾರಿಜಾತ ಕಾದಿದೆ?

ಗಡಿಯಾರ ನಿಂತಿದೆ

ಗಡಿಯಾರ ನಿಂತಿದೆ
ಪುರಾತತ್ವ ಇಲಾಖೆಗೆ
ಸೇರಬೇಕಿರುವಂತಿರುವ
ನಮ್ಮ ಮನೆಯ ಗೋಡೆಯ
ಮೇಲೆ ಗಟ್ಟಿಯಾಗಿ
ಮೊಳೆಹೊಡೆದು ನೇಣಿಗೆ
ಬಿಗಿದಿರುವ
ಗಡಿಯಾರ ನಿಂತಿದೆ

ಅಡುಗೆ ಮನೆಯ
ಮಿಕ್ಸಿ ಗ್ರೈಂಡರ್ಗಳು
ಒಂದೇ ಶ್ರುತಿ ಹಿಡಿದು
ಕಛೇರಿಯನ್ನಾರಂಭಿಸಿವೆ
ಗ್ಯಾರಾಜಿನಲ್ಲಿರುವ ಗಾಡಿಗಳು
ಒಂದಾದ ಮೇಲೊಂದು
ಮೋಡದಿಂದಿಳಿದ ಮಳೆಹನಿಗಳಂತೆ
ಟ್ರಾಫಿಕ್ ಸಮುದ್ರವ ಸೇರಿತ್ತಿವೆ
ಗೋಡೆ ಮೇಲಿನ ಗಡಿಯಾರ
ನಿಂತಲ್ಲೇ ನಿಂತಿದೆ

ಕಣ್ಣಲ್ಲಿ ಕನ್ನಡಕ
ಕೈಗೊಂದು ಕೀಬೋರ್ಡು
ದಿನವಿಡೀ ಕುಳಿತಲ್ಲೇ
ದೇಹದಂಡಿಸಿಯಾಗಿದೆ
ಪೂರ್ವ ದಿಕ್ಕಿನಿಂದ
ಹೊರೆಟ ಸೂರ್ಯ
ಪಶ್ಚಿಮ ತಲುಪುವಷ್ಟರಲ್ಲೇ
ಮನೆಯೆಡೆಗೆ ಕಾಲು ಕಿತ್ತಾಗಿದೆ
ಗೋಡೆ ಮೇಲಿನ ಗಡಿಯಾರ
ನಿಂತಲ್ಲೇ ನಿಂತಿದೆ

ಸಮಯದ ಭಾರಕ್ಕೂ
ಗಡಿಯಾರದ ಮುಳ್ಳುಗಳು
ಕೆಳಗಿಳಿಯುತ್ತಿಲ್ಲ
ರಿಪೇರಿ ಮಾಡಿಸಲು
ಪುರುಸೊತ್ತಿಲ್ಲ
ಒಟ್ಟಿನಲ್ಲಿ
ನಿಂತರೂ ಕೂಡ
ದಿನಕ್ಕೆರಡು ಬಾರಿ
ಸಮಯಸೂಚಿಯಾಗಿ
ಗಡಿಯಾರ ನಿಂತಿದೆ

ಮಾರುಕಟ್ಟೆ ತೆರೆದಿದೆ

ಮುಚ್ಚಿದ ಮನಗಳ ನಡುವೆ
ಮಾರುಕಟ್ಟೆ ತೆರೆದಿದೆ

ಸ್ವತಂತ್ರ ಬಂದರೂ ಕಳಚದ
ಜಾತಿ ಮತದ ಸಂಕೋಲೆ
ಮತ್ತಷ್ಟು ಬಿಗಿಯಾಗಿರುವ ಹಿನ್ನಲೆ
ಅದ ಮೆಟ್ಟಿ ನಿಲ್ಲಲ್ಲೆಂದೋ ಏನೋ
ಮಾರುಕಟ್ಟೆ ತೆರೆದಿದೆ

ಅಯ್ಯಂಗಾರ್ ಪುಳಿಯೋಗರೆ
ಕರೀಂ ಭಾಯ್ ಬಿರಿಯಾನಿ
ಎಲ್ಲವೂ ಒಂದೆಡೆ ಇರುವ
ಎಲ್ಲರೂ ಒಂದೆಡೆ ಸೇರುವ
ಮಾರುಕಟ್ಟೆ ತೆರೆದಿದೆ

‘ಭಾವ ಧಕ್ಕೆ’ಯಂಬ ಭಯಕೆ
ಮಾತು ಸೋತು ಮೂಕನಾಗಿ
ಕವಿ ಮೂಲೆ ಸೇರೆ, ಚೌಕಾಸಿ
ಮಾಡಲೆಳಸಿ ಪದವ ಕಟ್ಟಿಸುವ
ಮಾರುಕಟ್ಟೆ ತೆರೆದಿದೆ

‘ಓಹೋ!
ಎರಡು ದಶಕ ಗಳಿಂದ ನಿನಗಾಗಿ
ಕಾದಿರುವೆ
ಕಡೆಗೂ ಬಂದೆಯೋ ?
ನಿನ್ನ ಉಡುಪ ನೋಡಿ
ಧರ್ಮ ಅಳೆಯುವುದಿಲ್ಲ
ನಿನ್ನ ಹೆಸರಲ್ಲಡಗಿರುವ
ಜಾತಿ ನನಗೆ ಬೇಕಿಲ್ಲ
ಮನುಷ್ಯರಲ್ಲೀಗ ಎರಡೇ ಜಾತಿ
ಮಾರುವವ
ಕೊಳ್ಳುವವ
ಗತ ಕಾಲದ ತೊಡಗುಗಳಿಗೆ
ತಲೆಕೊಡದ ಮಾರುಕಟ್ಟೆಯಲ್ಲಿ
ಸರ್ವರಿಗೂ ಸ್ವಾಗತ’

‘ಏನು?
ಹಣದ ಕೊರತೆಯೇ?
ನೀನ್ಯಾಕಯ್ಯ ಇಲ್ಲಿಗೆ ಬಂದೆ?
ಛೇ! ಹೋಗಾಚೆ!
ಕೊಳ್ಳಲು ಅನರ್ಹ
ಮಾರಲು ಅನರ್ಹ
ನಿನ್ನಂಥವರಿಗೆ ತೆರಯದೀ
ಮಾರುಕಟ್ಟೆ’

ಯಾನ

ನೆನಪುಗಳ ಅರಮನೆ
-ಯಲ್ಲಿ ಸಾಗುತ್ತಾ
ಬಹುದೂರ ಬಂದಿರುವೆ

ಧೂಳು ಹಿಡಿದ ಬೀರೂ
ಒರೆಸಿ ಡ್ರಾಯರ್ ತೆರೆದರೆ
ಅರಿವಿನ ಪರದೆಯಲ್ಲಿ
ಅಮೂರ್ತವಾದಂತ
ಹೊಸ ಲೋಕ ಅವಿತಿದೆ
ಯಾವುದೆಂದು ಕೆದಕಿದರೆ
ಕಾಣ ಸಿಗುವುದು ನನ್ನದೇ
ಆದ ಮೂರ್ತ ರೂಪ

ಪುಸ್ತಕದ ಮಧ್ಯದಲ್ಲಿಟ್ಟ
ನವಿಲುಗರಿ ಹಾಗೇ ಇದೆ
ಬಾಲ್ಯದ ಎಲ್ಲ
ನಗೆಪಾಟಲುಗಳನ್ನು
ಸೆರೆ ಹಿಡಿದ ಕೊಡ್ಯಾಕ್
ಕ್ಯಾಮೆರಾ ನೋಡಿದರೆ
ತನ್ನಷ್ಟಕ್ಕೆ ತಾನೇ ತುಟಿ
ಅಗಲವಾಗಿ ಮಂದಹಾಸಕ್ಕೆ
ದಾರಿ ಮಾಡಿಕೊಡುತ್ತದೆ
ಮೂಲೆಯಲ್ಲಿ ಬಿದ್ದಿರುವ
ಸೈಕಲ್ ನ ಕಳೆದು ಹೋದ
ಕೀ ಕೈಗೆ ಸಿಕ್ಕಾಗ ಮನಸ್ಸಿಗೆ
ರೆಕ್ಕೆ ಬಂದಂತೆನಿಸುತ್ತದೆ

ತಾತನ ಜೊತೆಗಿನ
ಕ್ಷಣವನ್ನು ಬಂಧಿಸಿಟ್ಟ
ಫೋಟೋ ನೋಡಿದಾಗ
ಅನಿಸಿತು
ಬಾಲ್ಯವನ್ನು ಅದೇ ರೀತಿ
ಬೀರೂವಿನಲ್ಲಿ ಬಂಧಿಸಿಟ್ಟು
ಅದರ ಅರಿವೇ ಇರದೇ
ದೂರ ಸಾಗಿರುವೆನಲ್ಲಾ
ಎಂದು

ದೇವನಿರುವನಂತೆ

ದೇವನಿರುವನಂತೆ…
ವಿವಿಧಾಕಾರದ ಮೋಡಗಳ
ಚಿತ್ತಾರವಿರುವ ಆಕಾಶದ
ಪರದೆಯ ಹಿಂದೆ
ನೊರೆಹಾಲ ಸಾಗರದಿ
ವಿಹರಿಸುತ್ತ
ಕಮಲದಳದ ಮೇಲೆ
ಪದ್ಮಾಸನದಲ್ಲಿ
ಮಂದಹಾಸ ಬೀರುತ
ಜಾರಿ ಬೀಳದಂತೆ ಕುಳಿತಿರುವ
ದೇವನಿರುವನಂತೆ

ಇರಲಿ ಬಿಡಿ…
ಸೂರ್ಯನೇ ಎದ್ದಿರದೆ
ಗಾಢನಿದ್ರೆಯಲ್ಲಿರುವ
ಯಾವುದೋ ಕಲ್ಪಿತ
ಮುಹೂರ್ತದಲ್ಲಿ
ಮಂತ್ರಘೋಷಗಳ
ಅಲಾರಂನಿಂದೇಕೆ
ಅವನನೆಬ್ಬಿಸಿ ಗೋಳಾಡುವಿರಿ?
ಕಣ್ಣುಜ್ಜಿಕೊಂಡು
ಎಚ್ಚರಗೊಳ್ಳುವಷ್ಟರಲ್ಲೇನು ಆತುರ?
ಶಿರದಿಂದ ಪಾದದವರೆಗೆ
ನೀರು ಹಾಲು ಸುರಿದು
ಸ್ನಾನ ಮುಗಿಸಿ
ವಸ್ತ್ರ ಧರಿಸಿ
ತಿಂಡಿ ತೀರ್ಥಗಳ
ಮುಂದಿಡುವಿರಿ

ದೇವನಿರುವನಂತೆ…
ಪರಾಗಕ್ಕೂ ದುಂಬಿಗೂ
ನಂಟ ಬಿಗಿದು
ಸೃಷ್ಟಿ ಕಾರ್ಯಕ್ಕೆ
ಕಿಚ್ಚು ಹಚ್ಚಿ
ಕಣ್ಣು ಮುಚ್ಚಿ ತಪಸ್ಸಿಗೆ
ಕೂತಿರುವ
ಕರ್ತೃ
ಕಾರಣಪುರುಷ
ಕಾಲಾತೀತ
ದೇವನಿರುವನಂತೆ

ಇರಲಿ ಬಿಡಿ…
ಗಂಗೆಯೇ ಜಟೆಯಲ್ಲಿರುವವಗೆ
ಯಾವ ಮಡಿ?
ಯಾವ ಮೈಲಿಗೆ?
ಸ್ಮಶಾಣವಾಸಿಗೆ
ಎಲ್ಲಿಯ ಅಸ್ಪೃಷ್ಯತೆ ?
ಅರ್ಧನಾರೀಶ್ವರಗೆ
ಹೆಣ್ಣು ಗಂಡು ಬೇಧವೆಲ್ಲಿ?
ದೇವನಿರುವನಂತೆ
ಇರಲಿ ಬಿಡಿ…
ಸರ್ವಶಕ್ತ ಸ್ವತಂತ್ರನನ್ನೇಕೆ
ಶಾಸ್ತ್ರಗಳಲ್ಲಿ ಬಂಧಿಸುವಿರಿ?

ಮಳೆ

ಶಾಲೆಯ ಘಂಟೆ
ಢಣ ಢಣ ಬಾರಿಸಲು
ಬಂಧ ಮುಕ್ತ ಶಿಶುವಾಗಿ
ಮೇಷ್ಟ್ರಿನ ವಕ್ರದೃಷ್ಠಿಯ
ರೇಡಾರ್ ನಿಂದ ತಪ್ಪಿಸಿಕೊಂಡು
ಮೆಟ್ಟಿಲುಗಳ ಜಿಗಿದು
ಮೈದಾನದೆಡೆಗೆ ಓಟ ಕಿತ್ತರೆ
ಹಸಿದು ಸೂರ್ಯನನ್ನೇ
ಮುದ್ದೆ ಎಂಬಂತೆ ಉಂಡ
ಕಪ್ಪು ಮೋಡ ನಮಗಾಗಿ ಕಾದಿತ್ತು

ಟೈ ಗಂಟು ಕಿತ್ತು ಬಂದಿದೆ
ಅರ್ಧ ಇನ್ ಶರ್ಟ್ ಅರ್ಧ ಔಟ್ ಶರ್ಟ್
ಬ್ಯಾಗ್ ನ ಅರಿವೇ ಇಲ್ಲ
ಪೆನ್ ಹಿಡಿದು ಸೋತುಹೋಗಿದ್ದ
ಕೈ ಕ್ರಿಕೆಟ್ ಬ್ಯಾಟ್ ಗಾಗಿ ಹಾತೊರೆಯುತ್ತಿದೆ

ಆಚೆ ಕಾಲಿಡುತ್ತಲೇ ಹಣೆಯ ಮೇಲೆ
ಟಪ್ ಎಂದು ಒಂದು ಹನಿ
ಟಾಸ್ ನೊಂದಿಗೇ ಮುಗಿದಿತ್ತು
ಅಂದಿನ ಕ್ರಿಕೆಟ್ ಕಹಾನಿ

ಕಾಯುತ್ತಾ ಕುಳಿತೆವು
ಮೈದಾನ ಕೆಸರಿನ ಈಜುಕೊಳವಾಗಿತ್ತು
ಕುದುರೆಯ ಮುಂದೆ ಕ್ಯಾರೆಟ್
ಕಟ್ಟಿದಂತೆ ಶಾಲೆಗೆ ಕ್ರಿಕೆಟ್
ಆಸೆಗಳ ಮೇಲ್ಛಾವಣಿ
ಸೋರ ತೊಡಗಿತು
ಆಟವಾಡುವ ಕಿಡಿ
ನೆನೆದು ನಂದಿಹೋಗಿತ್ತು
ಮುಖದ ಛಾಯೆ
ಕಾರ್ಮೋಡಕ್ಕೆ ಕನ್ನಡಿ
ಹಿಡಿದಂತಿತ್ತು

ರಭಸ ಕಡಿಮೆಯಾದರೂ
ತುಂತುರುವಿನ ತಂಬೂರಿ ತಂತಿ
ಹದವಾಗಿ ಮೀಟುತ್ತಲೇ ಇತ್ತು
ನಡೆದೆವು ಸೈಕಲ್ ಏರಿ
ತುಳಿದೆವು ಮನೆಯ ದಾರಿ
ನಿಂತ ನೀರಿನ ಕೊಚ್ಚೆ
ಪೆಡಲ್ ನಿಂದ ಕಾಲು
ಕೆಳಗಿಡುವಂತಿಲ್ಲ
ಸರ್ಕಸ್ ನ ಜೋಕರ್ ನಂತೆ
ಸೈಕಲ್ ತುಳಿದು
ಮನೆ ತಲುಪಿದೆ
ಸಮವಸ್ತ್ರ ಒದ್ದೆಯಾಗಿದೆ
ಸೈಕಲ್ ಪೂರಾ ಕೊಚ್ಚೆಯಾಗಿದೆ
ಮನೆ ಮುಂಗಣ ಹೂ
ಗಿಡಗಳಿಗೆ ಅಭ್ಯಂಜನವಾಗಿದೆ

ಮೊದಲ ಮಳೆಯ
ಮಣ್ಣಿನ ಘಮದ
ಅಲೆಯಲ್ಲಿ ಮನೆಯೊಳಗೆ
ಕಾಲಿಡಲು
ಬೇರೊಂದು ಪರಿಮಳ ಸ್ವಾಗತಿಸಿತು
ಝಳ್ ಎನ್ನುವ ಶಬ್ದ
ಕಿವಿಗೆ ಕಚಗುಳಿ ಇಟ್ಟಿತು
ಅಮ್ಮ ಅಡುಗೆಮನೆಯಲ್ಲಿ
ಬಜ್ಜಿ ಕರಿಯುವುದ
ಕಂಡಾಗ ನಾಲಿಗೆ ತುದಿ
ಚಪಲತೆಯ ಅಮಲಲ್ಲಿ ಜಿಗಿಯಿತು
ಕ್ರಿಕೆಟ್ ಕೆಡಿಸಿದ ಮಳೆ
ಬಜ್ಜಿ ಬಡಿಸಿತು
ಮಳೆಯಲ್ಲಿ ನೆನೆದ ಮೇಲೆ
ಬಜ್ಜಿಯ ಬಿಸಿ ಬಾಯ್ ಸುಟ್ಟಿತು

ನಾನೊಬ್ಬ ಕವಿ

ನಾನೊಬ್ಬ ಕವಿ
ಅವಳೊಂದು ಕವಿತೆ
ಮೌನದಲ್ಲಿ ಅಡಗಿ ಕುಳಿತವಳ
ಪದಗಳಲ್ಲಿ ಹುಡುಕುತ್ತ ನಿಂತೆ

ಬಚ್ಚಿಟ್ಟೆ ನನ್ನ ಭಾವನೆಗಳ
ಅವಳ ಮನದ ಗೂಡಲ್ಲಿ
ನೆನಪುಗಳ ಕಟ್ಟುತಾ ಸಾಗಿದೆ
ಅವಳೆದೆಯ ಜೋಪಡಿಯಲ್ಲಿ

ಏಕಾಂತವೇ ಸಂಗಾತಿ
ಭಾವಗಳೇ ಸಂಗತಿ
ನಾನೊಬ್ಬ ಕವಿ
ನನ್ನವಳೊಂದು ಕವಿತೆ

‍ಲೇಖಕರು Admin

June 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Narendra shivanagere

    Yuva kavige swaagatha. Kavithegalu chennagive. Innu nimma mundina jeevanaanubhavadha mooseyinda hosa hosa kaavya hommali. Preethiyinda.

    ಪ್ರತಿಕ್ರಿಯೆ
  2. Shanthakumar

    Parijata – Very nice.
    A beautiful flower mostly wasted and poetry on that is what I liked most.

    ಪ್ರತಿಕ್ರಿಯೆ
  3. Narasimha Prasad

    All the poems are very nice. Though the poet is young, the thought process behind the creation of these poems indicates he is a champion. Keep it up. My best wishes for a bright future.

    ಪ್ರತಿಕ್ರಿಯೆ
  4. Rashmi

    Very nicely constructed poems. Has deep philosophical meaning to the things around. Appreciate the professional approach and style at an young age. Best wishes for a bright future.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: