ಶಾಪಗ್ರಸ್ಥ ಚಂಬಲ್‌ ತೀರದಲ್ಲಿ..

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಮಧ್ಯಾಹ್ನದ ರಣ ರಣ ಬಿಸಿಲು ಕಳೆದು ಸಂಜೆಯ ತಂಪಿನ್ನೂ ಆವರಿಸಲು ಹೊತ್ತಿದೆ ಅನ್ನುವ ಹೊತ್ತು. ಅದೆಲ್ಲಿಂದಲೋ ಹೊರಟು ಚಂಬಲ್‌ ದಾರಿಯಾಗಿ ಮರಳುತ್ತಿದ್ದೆವು. ಬೇಸಿಗೆ ಬೇರೆ. ಚಂಬಲ್‌ನ ಬೆಂಗಾಡು ಕಣಿವೆಗಳು, ಮಧ್ಯದಲ್ಲೊಂದು ಪ್ರಶಾಂತವಾಗಿ ಹರಿವ ನದಿ ನೋಡಿದರೆ ಎದೆಯೊಳಗೆ ಏನೋ ಕಲಕಿದ ಭಾವ. ಚಂಬಲ್‌ನ ರಕ್ತಸಿಕ್ತ ಅಧ್ಯಾಯಕ್ಕೂ ತನಗೂ ಸಂಬಂಧವೇನಿಲ್ಲ ಎಂಬ ನಿರ್ಲಿಪ್ತತೆಯೋ, ಅಥವಾ ಅದರಿಂದಾಗಿಯೇ ತಾನುಳಿದಿದ್ದೇನೆ ಎಂಬ ಭಾವವೋ ಗೊತ್ತಿಲ್ಲ, ನದಿ ಮಾತ್ರ ತಣ್ಣಗೆ ಹರಿಯುತ್ತಿತ್ತು.

ಹಿಂದೊಮ್ಮೆ ಇದೇ ದಾರಿಯಲ್ಲಿ ಹೋಗುತ್ತಿದ್ದಾಗ ನಾವು ನಿಲ್ಲಿಸಿರಲಿಲ್ಲ. ಆಗ ಕತ್ತಲಾಗಿತ್ತು. ಅದೂ ಚಂಬಲ್‌ ಕಣಿವೆಯ ಆ ದಾರಿಯನ್ನು ರಾತ್ರಿಯಲ್ಲಿ ದಾಟಿಕೊಂಡು ಹೋಗುವುದೆಂದರೆ ಅದರ ರುದ್ರಭೀಕರ  ಚರಿತ್ರೆಯನ್ನು ಕೇಳಿ ಗೊತ್ತಿದ್ದವರಿಗೆ ಮೈಯೆಲ್ಲ ಸಣ್ಣಗೆ ತಣ್ಣಗಾದಂತೆ ಆಗದೆ ಇರದು. ಹಿಂದೊಮ್ಮೆ ಈ ಜಾಗದ ಕಥೆ ಇಂಥದ್ದಾಗಿತ್ತು ಎಂದು ನೆನಪಿಸಿಕೊಳ್ಳುವುದೇ ಒಂದು ಬೇರೆಯ ಅನುಭವ. ಈ ಬಾರಿ ನಡು ಮಧ್ಯಾಹ್ನ.

ಒಂದರ್ಧ ಗಂಟೆ ನಿಲುಗಡೆ ಮಾಡಿಬಿಡುವ ಅಂತ ಕಾರು ನಿಲ್ಲಿಸಿ, ನದೀ ತೀರಕ್ಕೆ ಇಳಿದು ಹೊರಟು ಒಂದ್ಹತ್ತು ನಿಮಿಷ ಅಲ್ಲಿ ಸುಮ್ಮನೆ ನಿಂತು ಮತ್ತೆ ತಿರುಗಿದ್ದಷ್ಟೆ, ಅದೆಲ್ಲಿಂದಲೋ ಓಡಿ ಬಂದ ಇಬ್ಬರು ಮಕ್ಕಳು ನಮ್ಮ ಮುಂದೆ ಕೈಚಾಚಿ ನಿಂತಿದ್ದರು. ಅರೆ, ಈ ಮಕ್ಕಳೆಲ್ಲಿಂದ ಪ್ರತ್ಯಕ್ಷವಾದರು ಎಂದು ಆಶ್ಚರ್ಯಪಡುತ್ತಾ, ಮುಂದೆ ಹೊರಟರೆ, ಇವರು ನಮ್ಮನ್ನು ಬಿಡುವ ಲಕ್ಷಣ ಕಾಣಲಿಲ್ಲ.

ಮಗನ ಕೈಯಲ್ಲಿ ಪುಟಾಣಿ ಕಾರಿತ್ತು. ʻಪಾಪ, ಅವೂ ಸಣ್ಣ ಮಕ್ಕಳು, ನಿನ್ನ ಹಾಗೆ ಆಡಲು ಆಸೆಯಿರುತ್ತೆ, ಆ ಕಾರು ಕೊಟ್ಟುಬಿಡು, ಮನೆಯಲ್ಲಿ ಬೇಕಾದಷ್ಟು ಆಟಿಕೆಗಳಿವೆಯಲ್ವಾʼ ಎಂದೆ. ತನ್ನ ಬಹಳ ಇಷ್ಟದ ಆ ಕಾರನ್ನು ಕೊಡಲು ಮನಸ್ಸಾಗದೆ ಇದ್ದರೂ, ಅವನಿಗೂ ಪಾಪ ಎನಿಸಿರಬೇಕು, ಆ ಮಕ್ಕಳಿಬ್ಬರಲ್ಲಿ ಒಬ್ಬನ ಕೈಗೆ ಕಾರಿತ್ತ. ಇಬ್ಬರೂ ಸೇರಿ ಆಡಿಕೊಳ್ಳಿ ಎಂದೆ ನಾನು. ಖುಷಿಯಿಂದ ಕಾರೆತ್ತಿಕೊಂಡು ಮಾಯವಾದರು. ಅವರು ಮಾಯವಾಗಿ ನಿಮಿಷವೂ ಆಗಿಲ್ಲ, ನಾವು ಕಾರು ಹತ್ತಿ ಬಾಗಿಲು ಹಾಕಿದ್ದೆವಷ್ಟೆ. ಕಾರು ಪಡೆದ ಮಕ್ಕಳ ಹಿಂದಿಂದೆ ಬಂದ ಹತ್ತಿಪ್ಪತ್ತು ಮಕ್ಕಳ ದಂಡು ನಮ್ಮನ್ನು ಅಕ್ಷರಶಃ ಮುತ್ತಿಕೊಂಡಿತ್ತು. ಅವರ ಮುತ್ತಿಗೆಯಿಂದ ಕಾರು ಅಲುಗಾಡಿಸಲೂ ಕಷ್ಟವಾಗಿ ಹೇಗೋ ಅಲ್ಲಿಂದ ಕಾಲ್ಕೀಳಲಾಯ್ತು.

ಚಂಬಲ್‌ ನದಿಯಲ್ಲಿ ನೂರಾರು ಮೊಸಳೆಗಳು, ಘರಿಯಲ್‌ಗಳಿವೆಯಂತೆ. ಅದೃಷ್ಟವಿದ್ದರೆ ಡಾಲ್ಫಿನ್ನುಗಳೂ ಕಾಣಸಿಗುತ್ತವೆಯಂತೆ ಎಂಬುದು ಕೇಳಿ ಗೊತ್ತಿತ್ತು. ನದಿಯಲ್ಲಿ ದೋಣಿಯಲ್ಲಿ ಕುಳಿತು ಸ್ವಲ್ಪ ಅಡ್ಡಾಡಿದರೂ, ತೀರಕ್ಕೆ ಬಂದು ಬಿಸಿಲಿಗೆ ಮೈಚಾಚಿ ಬಾಯ್ಬಿಟ್ಟು ಬಿದ್ದುಕೊಂಡಿರುವ ಮೊಸಳೆ/ಘರಿಯಲ್ಗಳು ಕಾಣುತ್ತದೆಯಂತೆ, ಯಾವಾಗಲಾದರೂ ಪುಸೊತ್ತಲ್ಲಿ ಒಮ್ಮೆ ಹೋಗಬಹುದು ಆ ಕಡೆ ಎಂದು ಮಾತಿನ ನಡುವೆ ಯಾರಿಗೋ ಹೇಳಿಕೊಂಡಾಗ, ʻಚಂಬಲ್ಲಾ? ಅಲ್ಲೆಲ್ಲಾ ಹೋಗೋದು ಬಹಳ ಬಹಳ ಡೇಂಜರು. ಆ ಡಕಾಯಿತರ ಅಧ್ಯಾಯ ಮುಗಿದರೂ, ಇನ್ನೂ ಅಲ್ಲಿಯ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಹೇಳೋದು ಕೇಳಿ ಗೊತ್ತು. ನಿನಗೆ ಚಂಬಲ್‌ ಬಿಟ್ಟು ಬೇರೆ ಯಾವ್ದೂ ಸಿಗಲ್ವಾ? ಅದೂ ರಣರಣ ಬಿಸಿಲ ಜಾಗ. ಸುಮ್ಮನೆ ಇಂಥ ಜಾಗದ ಸಹವಾಸವಲ್ಲ ಮಹರಾಯ್ತಿʼ ಅಂತ ಸಹಸ್ರ ನಾಮಾರ್ಚನೆ ಮಾಡಿದ್ದಳು. ಅದೆಲ್ಲ ಬಹಳ ಕಾಲದ ಹಿಂದೆ ಎಂದರೂ, ಇಂದಿಗೂ ನಮ್ಮ ತಲೆಯಿಂದ ಆ ಚರಿತ್ರೆ ಮಾತ್ರ ಮಾಸುವುದೇ ಇಲ್ಲ.

ಚಂಬಲ್‌ ನದಿಯ ಸುಮಾರು ೨೫೦ ಮೈಲಿ ವ್ಯಾಪ್ತಿಯ ನದಿಯೂ ಒಳಗೊಂಡಂತೆ ಸುತ್ತಮುತ್ತಲ ೧೬೦೦ ಚದರ ಕಿಮೀ ವ್ಯಾಪ್ತಿ ಪ್ರದೇಶವನ್ನು ಚಂಬಲ್‌ ರಾಷ್ಟ್ರೀಯ ಉದ್ಯಾನವೆಂದು ಸುಮಾರು ೪೫ ವರ್ಷಗಳ ಹಿಂದೆಯೇ ಘೋಷಿಸಿದರೂ, ಅದೇನೇ ಆದರೂ ಈ ಪ್ರದೇಶದ ತಂಟೆಗೆ ಹೋದವರು ಕಡಿಮೆ. ಕಾರಣ ಸ್ಪಷ್ಟ. ಚಂಬಲ್‌ ಕಣಿವೆಯ ಡಕಾಯಿತರು. ಇಲ್ಲಿ ಹರಿದ ರಕ್ತ ಯಾವ ನದಿಗೂ ಕಡಿಮೆಯಿಲ್ಲ. ಇಂಥದ್ದೊಂದು ರಕ್ತ ಚರಿತ್ರೆಯ ಅಂತ್ಯವಾದರೂ ಇಂದಿಗೂ ಚಂಬಲ್‌ ಎಂದರೆ ಮೈ ನಡುಗುತ್ತದೆ. ಇಲ್ಲಿನ ಮೂಲ ನಿವಾಸಿಗಳೂ ಕೂಡಾ ವರ್ಷಗಟ್ಟಲೆ ಈ ಕಣಿವೆಗಳ ತಂಟೆಗೆ ಹೋಗಿಲ್ಲ.

ನದೀತೀರದ ಹಂಗೇಕೆ, ತಮ್ಮ ಸರಹದ್ದು ಮೀರಿ, ದನಕರುಗಳ ಮೇವು, ಸೌದೆ ಇತ್ಯಾದಿಗಳಿಗೂ ಅಡ್ಡಾಡಿದ್ದಿಲ್ಲ. ಈಗ್ಗೆ ಕೆಲವು ವರ್ಷಗಳಿಂದ ಹಳೆಯದನ್ನು ಮರೆತು, ಧೈರ್ಯದಿಂದ ಓಡಾಟ ಶುರುಮಾಡಿದ್ದಾರೆ. ಚಂಬಲ್‌ ಕಣಿವೆಯಿರುವ ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ತುಂಬ ಸಾಕಷ್ಟು ಪುರಾತನ ದೇವಾಲಯಗಳಿವೆ. ಕೋಟೆ ಕೊತ್ತಲಗಳಿವೆ. ಭಾರತದ ಅಂಗ್ಕೋರ್‌ವಾಟ್‌ ಎಂದೇ ಹೆಸರಾದ ಬಟೇಶ್ವರವಿದೆ. ಎಲ್ಲವೂ ಡಕಾಯಿತರ ಅವಸಾನದ ನಂತರ ನಿಧಾನವಾಗಿ ಈಗಷ್ಟೇ ತಲೆಯೆತ್ತುತ್ತಿದೆ.

ಹೌದು, ನಮಗೆ ಭಾರತೀಯರಿಗೆ ನದಿಗಳೆಂದರೆ ಭಾವನೆ. ಗಂಗಾ, ಯಮುನಾ, ಸಿಂಧು, ಸರಸ್ವತಿ, ನರ್ಮದಾ, ಗೋದಾವರಿ, ಕಾವೇರಿಗಳನ್ನು ಪವಿತ್ರ ನದಿಗಳೆಂದು ಪೂಜಿಸುತ್ತೇವೆ. ಕೇವಲ ಈ ನದಿಗಳು ಮಾತ್ರವಲ್ಲ, ನಮ್ಮೂರಿನ ಪುಟಾಣಿ ತೊರೆಯೂ ಕೂಡಾ ಆ ಊರಿಗೆ ಪೂಜ್ಯ. ಯಾವುದೇ ಜಲಮೂಲವನ್ನೂ ಶಾಪಗ್ರಸ್ಥವೆಂಬಂತೆ ನೋಡಿದ್ದು ಇಲ್ಲವೇ ಇಲ್ಲವೇನೋ! ಇದ್ದರೂ ಸಾವಿರದಲ್ಲೊಂದು. ಹೀಗಿದ್ದುಕೊಂಡೇ, ನಮ್ಮ ಇಂಥ ಪವಿತ್ರ ನದಿಗಳನ್ನು ಬೇಕಾಬಿಟ್ಟಿ ಬಳಸಿಕೊಂಡು ಬಿಟ್ಟಿದ್ದೇವೆ ಎಂಬುದೂ ಕೂಡಾ ಅಷ್ಟೇ ಸತ್ಯ.

ಒಂದಾದ ಮೇಲೊಂದು ಯೋಜನೆಗಳಿಂದ ಅಭಿವೃದ್ಧೀಯ ಹಿಂದೆ ಬಿದ್ದು ಅಧಃಪತನಕ್ಕೀಳಿಯುವುದೂ ಕೂಡಾ ನಡೆಯುತ್ತಲೇ ಇದೆ. ಇರಲಿ, ಇದೆಲ್ಲ ಎಂದೂ ಮುಗಿಯದ ಕಥೆಗಳು. ಈಗ ಇಲ್ಲಿ ಇಂಥ ಘಟಾನುಘಟಿ ಪವಿತ್ರ ನದಿಗಳ ಮಧ್ಯೆ ಈ ಚಂಬಲ್‌ ಎಂಬ ಈ ನದಿ ಯಮುನೆಯ ಉಪನದಿಯಾಗಿದ್ದುಕೊಂಡೂ, ಗಾತ್ರದಲ್ಲೂ ಈ ಯಾವ ನದಿಗಳಿಗಿಂತಲೂ ಹೇಳಿಕೊಳ್ಳುವಂಥ ವ್ಯತ್ಯಾಸವಿಲ್ಲದಿದ್ದರೂ(ಸಾವಿರ ಕಿಮೀ ಉದ್ದ, ಅಂದರೆ ನಮ್ಮ ಕಾವೇರಿಗಿಂತಲೂ ದೊಡ್ಡ ನದಿ) ಕಾಣದೆ ಕಳೆದುಹೋಗಲು ಕಾರಣವಾದರೂ ಏನು ಎಂದು ಅನಿಸದೆ ಇದ್ದೀತೇ?

ಹಾಗೆ ನೋಡಿದರೆ ಚಂಬಲ್‌ ಒಂದು ಶಾಪಗ್ರಸ್ಥ ನದಿ. ಕೇವಲ ಇತಿಹಾಸ ಮಾತ್ರವಲ್ಲ, ಪುರಾಣದಲ್ಲೂ ಕೂಡಾ ಈ ನದಿಯ ಸುತ್ತ ರಕ್ತಸಿಕ್ತ ಅಧ್ಯಾಯವೇ ಕಾಣುತ್ತದೆ. ಪುರಾಣದ ಪ್ರಕಾರ, ಚಂಬಲ್‌ ನದಿಯ ಮೂಲ ಹೆಸರು ಚರ್ಮನ್ವತಿ. ಅಂದರೆ, ಚರ್ಮದಂತೆ ಒಣಗಿದ ತೀರವುಳ್ಳವಳು. ಆರ್ಯ ದೊರೆ ರಂತಿದೇವನ ಕಾಲದಲ್ಲಿ ಯಜ್ನಕ್ಕೆ ಬಲಿಕೊಟ್ಟ ಸಾವಿರಾರು ಪ್ರಾಣಿಗಳ ರಕ್ತದಿಂದ ಉಗಮವಾಗಿ ನದಿಯಾಗಿ ಹರಿದವಳು. ಹಾಗಾಗಿಯೇ ಪವಿತ್ರಳಲ್ಲ. ಇದಲ್ಲದೆ, ಮಹಾಭಾರತದಲ್ಲೂ ಕೂಡಾ ಈ ಚರ್ಮನ್ವತಿಯ ಉಲ್ಲೇಖ ಬರುತ್ತದೆ.

ದ್ರೌಪದಿಯ ಅಪ್ಪ ದ್ರುಪದನ ಪಾಂಚಾಲ ದೇಶದ ದಕ್ಷಿಣದ ಗಡಿ ಇದೇ ಚರ್ಮನ್ವತಿ ನದಿ. ಹಾಗಾಗಿ ದ್ರೌಪದಿಗೆ ಈ ನದಿಯ ನಂಟು ಬಹಳ. ಕೌರವರು ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆಯೆಳೆದು ಅವಮಾನ ಮಾಡಿದಾಗ, ಮೂಕ ಪ್ರೇಕ್ಷಕಳಾದ ಚರ್ಮನ್ವತಿ ನದಿಯ ಮೇಲೆ ಬಂದ ಸಿಟ್ಟಿಗೆ ದ್ರೌಪದಿ ಈಕೆಗೆ, ನನಗಾದ ಅನ್ಯಾಯವನ್ನು ಮೌನವಾಗಿ ನೋಡುತ್ತಾ ನಿಂತ ನಿನ್ನ ನೀರನ್ನು ಮಾನವರಾರೂ ಮುಟ್ಟದಿರಲಿ. ಯಾರೇ ಈಕೆಯ ನೀರನ್ನು ಕುಡಿದರೂ ಅವರು ಸೇಡಿನ ಬಾಯಾರಿಕೆಯಲ್ಲಿ ನರಳುವಂತಾಗಲಿ ಎಂದು ಶಪಿಸಿದಳು. 

ಈ ಕಾರಣದಿಂದಾಗಿಯೇ, ಚರ್ಮನ್ವತಿ ನದಿ ಶಾಪಗ್ರಸ್ಥೆಯಾದಳು. ಅದೇ ಚರ್ಮನ್ವತಿ, ಈಗ ಚಂಬಲ್‌ ಆಗಿ ಬದಲಾದರೂ, ಇಂದಿಗೂ ಈ ನಂಬಿಕೆಯಿಂದಾಗಿ, ಈ ನದಿಯ ಮುಂದೆ ನಿಂತು ಯಾರೂ ಪ್ರಾರ್ಥಿಸುವುದಿಲ್ಲ. ಬಾಗಿನ ಅರ್ಪಿಸುವುದಿಲ್ಲ. ಪಿಂಡ ಬಿಡುವುದಿಲ್ಲ. ಮುಖ್ಯವಾಗಿ ಇವೆಲ್ಲವುಗಳ ಹೊರತಾಗಿ, ವರ್ಷಾನುಗಟ್ಟಲೆ ಈ ಭಾಗವನ್ನಾಳಿದ ಡಕಾಯಿತರ ಭಯದಿಂದಲೋ ಚಂಬಲ್‌ ಎಂಬ ನದಿಯ ತೀರದಲ್ಲಿ ಕಾರ್ಖಾನೆ ಕಟ್ಟುವ ತಂಟೆಗೂ ಕೂಡಾ ಮಾನವ ಎಂಬ ಪ್ರಾಣಿ ಹೋಗಿಲ್ಲ ಎಂಬಲ್ಲಿಗೆ ಚಂಬಲ್‌ ಪವಿತ್ರವಾಗಿ ಉಳಿದಿದ್ದಾಳೆ.

ಭಾರತದ ಕಲುಷಿತಗೊಳ್ಳದ ಟಾಪ್‌ ಐದು ಸ್ವಚ್ಛ ನದಿಗಳು ಯಾವುವುದ್ದೀತು ಎಂದು ಕುತೂಹಲಕ್ಕೆ ಹುಡುಕಿದರೆ, ಅವುಗಳ ಪೈಕಿ ಚಂಬಲ್‌ಗೆ ಪ್ರಮುಖ ಸ್ಥಾನವಿದೆ. ನೂರಾರು ಕಾರ್ಖಾನೆಗಳ ಕೊಳಚೆಗಳನ್ನೆಲ್ಲ ತುಂಬಿಕೊಂಡು ಕೊಳಚೆಯಂತೆ ನೊರೆನೊರೆಯಾಗಿ ಹರಿವ ಯಮುನೆಯನ್ನು ಸೇರಿದ ಮೇಲೆ ಯಮುನೆಯ ಕೊಳೆಯನ್ನೂ ತನ್ನದೆಂದೇ ಸ್ವೀಕರಿಸುವ ಮೂಲಕ ಕೊಂಚ ಮಟ್ಟಿಗೆ ಆಕೆಯ ಪಾಪವನ್ನು ತೊಳೆಯಲು ಸಹಾಯ ಮಾಡುತ್ತಾಳೇನೋ.

ಇದಕ್ಕೇ ಹೇಳುವುದು, ಕೆಲವೊಮ್ಮೆ ವರವೂ ಹೇಗೆ ಶಾಪವಾಗಿಬಿಡುತ್ತದೋ ಹಾಗೆಯೇ ಶಾಪವೂ ವರವೇ!

…ಚಂಬಲ್‌ ಶಾಪಗ್ರಸ್ಥೆಯಲ್ಲ, ಪವಿತ್ರೆ!

‍ಲೇಖಕರು Admin

June 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: