’ಕಲ್ಲುಮರಿಗೆ ತುಂಬಾ ಇತ್ತು ಅವಳ ಪ್ರೀತಿ’ – ಬಿ ವಿ ಭಾರತಿ

ಬಿ ವಿ ಭಾರತಿ

ಆಗಸ್ಟ್ ತಿಂಗಳ ಮೊದಲ ಭಾನುವಾರ ಸಹೋದರಿಯರ ದಿನ. ನಮ್ಮ ದೇಶದಲ್ಲಿ ಅಪ್ಪನಿಗೆ, ಅಮ್ಮನಿಗೆ, ಅಕ್ಕನಿಗೆ, ಅಣ್ಣನಿಗೆ ಅಂತೆಲ್ಲ ದಿನಗಳನ್ನು ಕೊಡೋ ಅಭ್ಯಾಸ ನಮಗೆ ಯಾವತ್ತೂ ಇರಲೇ ಇಲ್ಲ. ನಮ್ಮ ದೇಶದ ಸಂಸ್ಕೃತಿ ಅಲ್ಲ ಅದು, ನಮ್ಮಲ್ಲಿ ಎಲ್ಲ ದಿನವೂ ಇವರಿಗೆಲ್ಲ ಸೇರಿರೋ ದಿನವೇ ಅಂತೆಲ್ಲ ಕೆಲವರ ತಕರಾರು. ಆದರೂ ಅದನ್ನು ಹೀಗೂ ನೋಡಬಹುದು ಅಲ್ವಾ – ದೇವ್ರಿದ್ದಾನೆ ಅನ್ನೋ ನಂಬಿಕೆ ಸದಾ ಇರುವಾಗಲೂ ಗಣೇಶ ಚತುರ್ಥಿ ದಿನ ಗಣೇಶನ್ನ ಸ್ಪೆಷಲ್ಲಾಗಿ ನೆನಪಿಸಿಕೊಳ್ಳೋ ಹಾಗೆ, ಶಿವರಾತ್ರಿ ದಿನ ಗಣೇಶನ ಅಪ್ಪನನ್ನು ನೆನಪಿಸಿಕೊಳ್ಳೋ ಹಾಗೆ, ಗೌರಿ ಹಬ್ಬದ ದಿನ ಗಣೇಶನ ಅಮ್ಮನ್ನ ನೆನಪಿಸಿಕೊಳ್ಳೋ ಹಾಗೆ, ನಮ್ಮ ಈ ಇತರೇ ಮನುಷ್ಯ ಸಂಬಂಧಗಳನ್ನೂ ನೆನಪಿಸಿಕೊಂಡರೆ ಕಳ್ಕೊಳ್ಳೋದೇನು ಹೇಳಿ. ಹಾಗಾಗಿ ಈ ದಿನ ನನ್ನ ಅಕ್ಕನ ಬಗ್ಗೆ ಬರೆದೇ ಬಿಡೋಣ ಅಂತ ತೀರ್ಮಾನ ಮಾಡಿಬಿಟ್ಟಿದೀನಿ. ಅಕ್ಕನ ಬಗ್ಗೆ ಬರೀತೀನಿ ಅಂದಕೂಡಲೇ ‘ತಾಯಿಯ ಮಡಿಲಲ್ಲಿ’ ಅನ್ನೋ ಸಿನೆಮಾ ಥರ ಕರುಳು ಕುಯ್ಯೋ ತ್ಯಾಗದ, ಪ್ರೇಮದ ಕಥೆ ಹೇಳ್ತೀನಿ ಅಂದ್ಕೋಬೇಡಿ ಅನ್ನೋ ಪೀಠಿಕೆಯೊಂದಿಗೆ ಶುರು ….
ಅಕ್ಕ ನನಗಿಂತ ಎರಡೂ ಚಿಲ್ಲರೆ ವರ್ಷದಷ್ಟು ದೊಡ್ಡವಳು. ಆದರೆ ಆಕಾರದಲ್ಲಿ ನೋಡಿದರೆ ನಾನೇ ಯಾವತ್ತೂ ಅಕ್ಕನ ಥರ ಕಾಣ್ತೀನಿ. ಅವಳು ಮೊದಲಿನಿಂದ ತುಂಬ ಪೀಚು. ನಾನು ಹುಟ್ಟಿದಾಗಿನಿಂದಲೂ ದಷ್ಟ ಪುಷ್ಟವಾಗಿದ್ದೆ. ಬೆಳೆಯುತ್ತಾ ಹೋದ ಹಾಗೆ ಅವಳಿಗಿಂತ ಅರ್ಧ ಅಡಿ ಎತ್ತರವೂ ಬೆಳೆದೆ, ಹಾಗಾಗಿ ಅವಳ ಮೂರ್ತಿ ಯಾವತ್ತೂ ಚಿಕ್ಕದೇ … ಆದರೆ ಕೀರ್ತಿ ಅಲ್ಲ! ಪುಟ್ಟ ಪುಟ್ಟದಾಗಿ, ಬೆಳ್ಳಗೆ, ತೆಳ್ಳಗೆ ಮುದ್ದು ಮುದ್ದಾಗಿ ಅನಂತ್ ನಾಗ್ ಥರ ಇದ್ದರೆ, ನಾನು ಥೇಟ್ ಶಂಕರನ ಥರ ಒಡ್ಡೊಡ್ಡು, ಅಡಸಾ ಬಡಸಾ. ನೋಡಕ್ಕೆ ಬೊಂಬೆ ಥರ ಇದ್ದರೂ ಅಕ್ಕ ತುಂಬ ಸಾಧುವೇನೂ ಆಗಿರಲಿಲ್ಲ. ಶಕ್ತಿ ಮೀರಿ ನನಗೆ ಕಾಟ ಕೊಡುತ್ತಿದ್ದಳು. ವಯಸ್ಸಿಗೆ ತಕ್ಕಂತೆ ಕಾಟದ ವಿಧಾನ ಬದಲಾಗುತ್ತಿತ್ತು ಅಷ್ಟೇ! ಇನ್ನೂ ಒಂದಿಷ್ಟು ವೈರುಧ್ಯಗಳನ್ನು ಕಟ್ಟಿಕೊಡಬೇಕು ಅಂದರೆ, ಅವಳ ಮಾತು ತುಂಬ ಖಡಕ್ – ನಾನು ಜಗತ್ತಿಗೆಲ್ಲ explanation ಕೊಡುವ ಅಭ್ಯಾಸದವಳು … ಅವಳು ತುಂಬ ಭಾವಜೀವಿಯಲ್ಲ – ನಾನು ಸ್ವಲ್ಪ ಅತಿರೇಕವೆನ್ನಿಸುವಷ್ಟು ಭಾವಜೀವಿ … ಅವಳು ಮಾತಿಗಿಂತ ಕೃತಿಯಲ್ಲಿ ನಂಬಿಕೆ ಇಟ್ಟವಳು – ನಾನು ಮನುಷ್ಯರಿಗೆ ಜಾಸ್ತಿ ಬೆಲೆ ಕೊಟ್ಟು, ಕೃತಿಯನ್ನು ಬದಿಗಿಟ್ಟು ನೋವು ತಿನ್ನುವಂಥವಳು. ಇಷ್ಟೆಲ್ಲ ಸ್ವಭಾವ ವೈರುಧ್ಯವಿರುವ ನಾನು ಮತ್ತು ಅಕ್ಕನ ಬದುಕಿನ ಒಂದಿಷ್ಟು ತುಣುಕುಗಳು ಇವು …

ನಾವು ಆಗ KRS ನಲ್ಲಿದ್ದೆವು. ಮನೆಯ ಸುತ್ತ ಸಾಕಷ್ಟು ಖಾಲಿ ಜಾಗ ಇದ್ದು, ಮನೆ ಮನೆಗಳ ಮಧ್ಯೆ ಸುಮಾರು ದೂರವಿರುತ್ತಿತ್ತು. ಅಮ್ಮ ಅಕ್ಕ-ಪಕ್ಕದ ಗೆಳತಿಯರ ಜೊತೆ ಹರಟಲು ಮನೆಯಿಂದಾಚೆ ಹೋಗಿ, ನನ್ನ ಕೂಗು ಅವಳ ಕಿವಿಗೆ ಬೀಳದಷ್ಟು ದೂರದಲ್ಲಿದ್ದಾಳೆ ಅನ್ನುವಾಗ ಬೆಳಿಗ್ಗೆ-ಮಧ್ಯಾಹ್ನ-ಸಂಜೆ ಅನ್ನುವ ಹೊತ್ತುಗೊತ್ತಿಲ್ಲದೆ ಅಕ್ಕ ಪ್ರೀತಿಯಿಂದ ಬಂದು – ಬಾರೇ ಮುಖ ತೊಳೆಸ್ತೀನಿ ಅನ್ನುತ್ತಿದ್ದಳು. ನಾನೋ ಎರಡೂ ಮುಕ್ಕಾಲು ವರ್ಷಕ್ಕೆ ಮಾತು ಕಲಿತ ಶುದ್ಧ ಶುಂಠಿ … ಜೊತೆಗೆ ಅಸಾಧ್ಯ ಮೊದ್ದು ಬೇರೆ. ಯಾಕೆ ಹೊತ್ತಲ್ಲದ ಹೊತ್ತಲ್ಲಿ ಕರೆಯುತ್ತಿದ್ದಾಳೆ ಅಂತಲೂ ಯೋಚಿಸದೇ ಕುರಿಯಂತೆ ಅವಳ ಹಿಂದೆ ಹೋಗುತ್ತಿದ್ದೆ. ಮೂತಿಗಿಷ್ಟು ನೀರೆರೆಚಿ ಚೆನ್ನಾಗಿ ಸೋಪನ್ನು ಮುಖಕ್ಕೆ ಮೆತ್ತುತ್ತಿದ್ದಳು. ಕಣ್ಣು ಉರಿಯಲು ಶುರುವಾಗಿ ನಾನು ಇನ್ನು ಕಣ್ಣು ಬಿಡಲು ಸಾಧ್ಯವೇ ಇಲ್ಲ ಅನ್ನುವ ಸ್ಥಿತಿ ತಲುಪಿದಾಗ ಮೆಲ್ಲಗೆ ಬಚ್ಚಲಿನಿಂದ ಹೊರಗೆ ಹಾರುತ್ತಿದ್ದಳು. ನಾನು ಮಂಕ, ಮಡೆಯ, ಮುಠ್ಠಾಳಿಯ ಥರ ಕಾದು ನಿಂತೇ ಇರುತ್ತಿದ್ದೆ .. ಈಗ ಮುಖಕ್ಕೆ ನೀರು ಹಾಕ್ತಾಳೆ, ಆಗ ಹಾಕ್ತಾಳೆ ಅನ್ನುವ ಭರವಸೆಯಲ್ಲಿ. ಎಷ್ಟೋ ಹೊತ್ತಿನ ನಂತರ ಗೊತ್ತಾಗುತ್ತಿತ್ತು, ಅಕ್ಕ ಅಲ್ಲಿಂದ ಕಾಣೆಯಾಗಿದ್ದಾಳೆ ಅನ್ನುವುದು. ಉರಿ ತಡೆಯಲಾರದೇ ನಾನೇ ಮುಖಕ್ಕೆ ನೀರು ಹಾಕಿಕೊಳ್ಳೋಣ ಅಂದರೆ, ಬಚ್ಚಲಿನಲ್ಲಿದ್ದ ತೊಟ್ಟಿ ನನ್ನ ಕೈಗೆ ಎಟುಕದಷ್ಟು ಎತ್ತರವಿತ್ತು. ಕಣ್ಣು ಬಿಡಲು ಪ್ರಯತ್ನಿಸಿ, ಕಣ್ಣೆಲ್ಲ ಉರಿ ಕಿತ್ತುಕೊಂಡಾಗ ಅಮ್ಮಾಆಆಆಆಆಆ ಅಂತ ಬಾಯಿ ಬಡಿದುಕೊಳ್ಳಲು ಶುರು ಮಾಡುತ್ತಿದ್ದೆ. ಎಲ್ಲೋ ಇರುತ್ತಿದ್ದ ಅಮ್ಮನಿಗೆ ಅದು ಕೇಳದೇ ಹೋಗಿ, ಕೊನೆಗೆ ಅವಳು ತಾನಾಗಿ ವಾಪಸ್ಸಾಗುವ ತನಕ ನಾನು ಗಂಗಾಭವಾನಿ ಹರಿಸುತ್ತಾ ಅಲ್ಲೇ ನಿಂತಿರುತ್ತಿದ್ದೆ. ಆಮೇಲೆ ಅಮ್ಮ ಅಕ್ಕನಿಗೆ ತದುಕುತ್ತಿದ್ದಳು ಅನ್ನುವುದು ಬೇರೆಯದೇ ಮಾತಾದರೂ, ಒಂದು ವ್ಯಕ್ತಿ ಎಷ್ಟು ಸಲ ಮೋಸ ಹೋಗಬಹುದು? ಒಂದು ಸಲ??? ಎರಡು ಸಲ ??? ಮುಂದಿನ ಸಲ ಕರೆದಾಗಲಾದರೂ ನಿರಾಕರಿಸಬೇಕು ತಾನೇ? ಉಹೂಂ! ಮುಂದಿನ ಸಲ ಮಾತ್ರವಲ್ಲ, ಅದರ ಮುಂದಿನ ಸಲ, ಅದರ ಮುಂದಿನ ಸಲ, ಅದರದ್ದೂ ಮುಂದಿನ ಸಲವೂ ಕರೆದಾಗ ಮತ್ತೆ ಮತ್ತೆ ಹೋಗುತ್ತಿದ್ದೆನೆಂದರೆ ಇನ್ನೆಂಥ ಪೆದ್ದಲಾಷ್ಟಕ ನಾನಿರಬೇಕು ಲೆಕ್ಕ ಹಾಕಿ!

ಸಣ್ಣವಳಿರುವಾಗ ಅವಳು ಈ ರೀತಿ ಕಾಡಿಕೊಂಡರೆ ಸ್ವಲ್ಪ ಬೆಳೆದ ನಂತರ ನಾನು ಅವಳಿಗೆ ಕಂಟಕಳಾದೆ. ನಾನು ಸ್ಕೂಲಿಗೆ ಹೋಗಲು ಶುರು ಮಾಡಿದೆ. ಓದುವುದರಲ್ಲಿ ಅಸಾಧ್ಯ ಜಾಣೆಯರೇನೂ ಇರಲಿಲ್ಲ ನಾವು. ಅಕ್ಕ ನನಗಿಂತ ಸ್ವಲ್ಪ ಜಾಣೆ. ಪಾಪ ಕಂಠ ಹರಿದುಕೊಂಡು ಓದುತ್ತಿದ್ದಳು. ಸಿನೆಮಾ ಭಕ್ತೆಯಾದ ನಾನು ಓದಿನಲ್ಲಿ ಸ್ವಲ್ಪ ಹಿಂದು. ನೋಡಿಬಂದ ಸಿನೆಮಾದ ಸ್ಕ್ರೀನ್ ತೆಗೆದಾಗಿನ ‘ನಮೋ ವೆಂಕಟೇಶಾಆಆಆ’ ದಿಂದ ಹಿಡಿದು ‘ಕೊನೆಯ ಬಕ್ಕಮ್ಮ ಬಕ್ಕಮ್ಮ ಎಕ್ಕಡ ಪೋತಾವ್ರಾ …’ ವರೆಗೆ ಎಲ್ಲ ಹೇಳುತ್ತಿದ್ದ ನಾನು, ಕೈಲಿ ಪುಸ್ತಕ ಹಿಡಿದ ಕೂಡಲೇ ಆಕಳಿಕೆ ನುಗ್ಗಿ, ನಿದ್ದೆಯೇ ಬಂದುಬಿಡುತ್ತಿತ್ತು. ಅರ್ಧ ನಿದ್ದೆಯ ಸ್ಥಿತಿಯಲ್ಲಿ ತಿರುಕನೋರ್ವನೂರ ಮುಂದೆ ಅನ್ನುವಷ್ಟರಲ್ಲಿ, ರಾಜ್‌ಕುಮಾರ್ ಸಿನೆಮಾ ಮಂಡೆಯಲ್ಲಿ ಸುಳಿದಾಡಿ ಕನಸಿನ ಲೋಕದಲ್ಲಿ ತೇಲಿ ಹೋಗಿಬಿಟ್ಟಿರುತ್ತಿದ್ದೆ. ಅಕ್ಕ ಬಾರದ ಪಾಠವನ್ನು ಬಲವಂತವಾಗಿಯಾದರೂ ಅರ್ಥ ಮಾಡಿಕೊಳ್ಳುವ ಹಠಕ್ಕೆ ಬಿದ್ದು ಪ್ರಯತ್ನಿಸುತ್ತಲೇ ಇರುತ್ತಿದ್ದಳು. ಆ ಪ್ರಯತ್ನವೆಲ್ಲ ಮುಗಿಸಿ, ಒಂಚೂರು ರಿಲ್ಯಾಕ್ಸ್ ಆಗುವ ಸಮಯದಲ್ಲಿ ಅಪ್ಪ ಎಲ್ಲಿಂದಲೋ ಹಾಜರಾಗುತ್ತಿದ್ದರು. ಆಗ ತಾನೇ ಆರಾಮಕ್ಕೆ ಕೂತ ಅವಳನ್ನು ಬಯ್ಯಲು ಶುರು ಮಾಡುತ್ತಿದ್ದರು. ಅವಳು ಅಷ್ಟು ಹೊತ್ತಿನವರೆಗೂ ಓದುತ್ತಿದ್ದೆ ಅಣ್ಣಾ – ಅನ್ನುತ್ತಿದ್ದುದು ಅಪ್ಪನ ಕಿವಿಗೇ ಬೀಳದೇ ಅಕ್ಕನಿಗೆ ಹೊಡೆತ ಬೀಳಲು ಶುರುವಾಗುತ್ತಿತ್ತು. ರಾಜ್‌ಕುಮಾರ್ ಫೈಟ್ ಸೀನಿನ ಕನಸು ಕಾಣುತ್ತಿರುತ್ತಿದ್ದ ನಾನು, ರಿಯಲ್ ಲೈಫಿನ ಈ ಫೈಟ್ ಸೀನ್ ಕಿವಿಗೆ ಬಿದ್ದು ಧರೆಗಿಳಿಯುತ್ತಿದ್ದೆ. ಅಪ್ಪನ ಸಿಟ್ಟು ನೋಡಿದ ನಾನು ಎಚ್ಚೆತ್ತುಕೊಂಡು, ಜೋರು ದನಿಯಲ್ಲಿ ಅಶೋಕನು ಸಾಲು ಮರ ನೆಡಿಸುತ್ತಿದ್ದನು ಅಂತಲೋ, ಓಂದೊಂದ್ಲ ಓಂದು, ಓಂದೆರ್ಡ್ಲ ಏರ್ಡು ಅಂತಲೋ, ತಿರುಕನೋರ್ವನೂರ ಮುಂದೆ ಅಂತಲೋ ಶುರು ಮಾಡುತ್ತಿದ್ದೆ! ಅಪ್ಪ ಹೊಡೆಯುತ್ತಿದ್ದವರು ಒಂದರೆಕ್ಷಣ ನಿಲ್ಲಿಸಿ – ನೋಡು, ಚಿಕ್ಕೋಳಾದ್ರೂ ಎಷ್ಟು ಚೆನ್ನಾಗಿ ಓದ್ತಾಳೆ, ನೀನೂ ಇದೀಯ ಅಂತ ಅಕ್ಕನಿಗೆ ಇನ್ನಿಷ್ಟು ಉಗ್ರವಾಗಿ ಬಯ್ಯಲು ಶುರು ಮಾಡುತ್ತಿದ್ದರು ! ಮತ್ತಿಷ್ಟು ಬೈಗುಳ ತಿನ್ನುತ್ತಿದ್ದಳು … ಜಗತ್ತು ಹೀಗೆ ಅಲ್ಲವಾ? ‘ಮಾಡು’ವವರಿಗಿಂತ ‘ಮಾಡುವಂತೆ ಕಾಣಿಸುವ’ವರಿಗೇ ಜಾಸ್ತಿ ಬೆಲೆ.

ಪ್ರೀತಿ ಇದ್ದರೂ ತೋರ್ಪಡಿಸಿಕೊಳ್ಳದೇ, ಹೆಚ್ಚು ಮಾತಾಡದೇ ಇರುತ್ತಿದ್ದ ಅಕ್ಕ ಒಂಥರಾ ದಿಗಿಲು ಹುಟ್ಟಿಸುತ್ತಿದ್ದಳು. ಸಿಂಹ ರಾಶಿಯ ಅಕ್ಕ ಮಾತಾಡಿದರೆ ಸಿಂಹ ಘರ್ಜಿಸಿದ ಹಾಗೇ ಆಗುತ್ತಿತ್ತು ನನಗೆ! ಇದೊಂದು ಘಟನೆ ನೆನಪಾದರೆ ಈಗಲೂ ನಗು ನಗು. ಎಷ್ಟೇ ಕಷ್ಟ ಪಟ್ಟರೂ ಸೈಕಲ್ ತುಳಿಯಲು ಬಾರದ ನನಗೆ, ಸೈಕಲ್ ಕಲಿಸುವ ಪಣ ತೊಟ್ಟಳು ಅಕ್ಕ. ಆಗ ನಾನು ಎಂಟನೆಯ ಕ್ಲಾಸು. ಕಾರ್ಡ್ ರೋಡಿನ ಪಕ್ಕದ ಸರ್ವಿಸ್ ರೋಡಿಗೆ ಸೈಕಲ್ ತಳ್ಳಿಕೊಂಡು ಬಂದು – ಹೂಂ ಹತ್ತು, ಪೆಡಲ್ ತುಳಿ, ಬ್ಯಾಲೆನ್ಸ್ ಮಾಡು ಅಂತ ರಿಂಗ್ ಮಾಸ್ಟರ್ ಹಾಗೆ ಆರ್ಡರ್ ಮಾಡುತ್ತಿದ್ದಳು. ನನಗೋ ಬ್ಯಾಲೆನ್ಸ್ ಬಾರದೇ ಬಾರದು. ಇಡೀ ದೇಹದ ಭಾರ ಅವಳ ಮೇಲೆಯೆ ಬಿಟ್ಟು ಬಿಡುತ್ತಿದ್ದೆ. ಅವಳೋ ಸಣಕಲಿ. ನನ್ನ ಭಾರ ತಡೆಯಲಾಗದೇ ಸುಸ್ತಾಗುತ್ತಿದ್ದಳು. ಒಂದು ದಿನವಾಯ್ತು, ಎರಡಾಯ್ತು, ಮೂರಾಯ್ತು … ವಾರವಾದರೂ ನನ್ನದು ಅದೇ ರಾಗ, ಅದೇ ಹಾಡು. ಒಂದಿನ ನಯವಾಗಿ – ಸ್ವಲ್ಪ ಕೆಳಗಿಳಿ ಅಂದಳು. ಇಳಿದು ನಿಂತೆ. ಹಿಡಿದಿದ್ದ ಸೈಕಲ್ಲನ್ನು ರಪ್ಪಂತ ನೆಲಕ್ಕೆ ಬಿಸಾಕಿ – ಥೂ! ನಾಚ್ಕೆ ಆಗಲ್ವಾ ಎಮ್ಮೆ! ನಿನ್ಗೆ ಯಾವಳು ಕಲಿಸಕ್ಕಾಗತ್ತೆ. ಸೈಕಲ್ ತಳ್ಕೊಂಡು ಮನೆಗೆ ಬಂದು ಸಾಯಿ ಅಂತ ಬಿರಬಿರನೇ ಹೊರಟೇ ಹೋಗಿದ್ದಳು!
ಹಾಗಂತ ಅಕ್ಕ ಸದಾ ಸಿಡುಕು ಪ್ರಾಣಿಯಂತಲೂ ಅಲ್ಲ. ಮೂಡು ಬಂದರೆ ಅರಗಿಣಿ. ನನ್ನ ಪಕ್ಕದ ಮನೆಯಲ್ಲಿ ಗೀತಾ ಅನ್ನುವವಳಿದ್ದಳು, ಅಕ್ಕನ ಜೊತೆಯವಳು. ಅದರೆ ಅವಳಿಗಿಂತ ನನಗೇ ಹೆಚ್ಚು ಹತ್ತಿರವಾಗಿದ್ದಳು. ಯಾವತ್ತೋ ತಿಕ್ಕಲು ತಿರುಗಿದಾಗ ನಾವು ಮೂವರೂ ಕೂತು ಗೀತಳ ತಮ್ಮ ಬಾಬಿಯನ್ನು ಮಧ್ಯೆ ಕೂರಿಸಿಕೊಂಡು ‘Boney-M’ ಪಾಪ್ ಗ್ರೂಪಿನ ಸಿಂಗರ್‌ಗಳಾಗಿಬಿಡುತ್ತಿದ್ದೆವು. ನಾವು ಮೂರು ಹೆಣ್ಣು ದನಿಗಳಾದರೆ, ಮಧ್ಯೆ ಕೂತ ಅವನು ಆ ಗುಂಪಿನ ಏಕೈಕ ಮೇಲ್ ವಾಯ್ಸ್ ಆಗಿ – walking down the beaches ಅಂತಲೋ, golden sandy beaches ಅಂತಲೋ ಹೇಳು ಅಂತ ತಲೆ ಮೇಲೆ ಮೊಟಕಿ ಹಾಡುವಂತೆ ತಾಕೀತು ಮಾಡಿ, ನಾವು ಮೂವರೂ ಕೋರಸ್‌ನಲ್ಲಿ ಹಾಡುತ್ತಿದ್ದೆವು. ನೆಟ್ಟಗೆ 50 ಕೆಜಿ ಇರದ ನಾವು, ಥೂ! ಮೈ ಬಂದುಬಿಟ್ಟಿದೆ ಅಂತ ಮಿಸ್ ಇಂಡಿಯಾಗಳ ಪೋಸ್‌ನಲ್ಲಿ ಯೋಗ ಮಾಡುತ್ತಿದ್ದೆವು. ಮ್ಯಾಟಿನಿ ಶೋಗೆ ಬೆಳಿಗ್ಗೆಯೇ ನವರಂಗ್ ಥಿಯೇಟರ್ ಮುಂದೆ ನಿಂತು ‘ಆಪರೇಷನ್ ಡೈಮೆಂಡ್ ರಾಕೆಟ್’ ನ ಗುದ್ದಾಡಿ ಟಿಕೆಟ್ ಸಂಪಾದಿಸಿ ಸಿನೆಮಾ ನೋಡುತ್ತಿದ್ದೆವು. ಆದರೂ ಅವಳು ಒಂದಿಷ್ಟು ತರಲೆ ಮುಗಿದ ಮೇಲೆ, ನಮ್ಮಿಂದ ಡಿಟ್ಯಾಚ್ ಆಗಿಬಿಡುತ್ತಿದ್ದಳು. ನಾನು ಮತ್ತು ಗೀತಾ ಹಾಗಲ್ಲ. ಸದಾ ಒಟ್ಟಿಗೇ ಇರಬೇಕು ಅನ್ನುವಂಥ ಸ್ನೇಹ. ನಮ್ಮಿಬ್ಬರದ್ದೂ ಪರೀಕ್ಷೆ ಸಮಯದಲ್ಲಿ ಕಂಬೈನ್ಡ್ ಸ್ಟಡಿ ಸಂಭ್ರಮ. ಇಬ್ಬರೂ ರಾತ್ರಿಯೇ ನಮ್ಮೆಲ್ಲ ಓದು ಮುಗಿಸಿ ಮಲಗುತ್ತಿದ್ದೆವು. ಅಕ್ಕ ಮಾತ್ರ ರಾತ್ರಿ ಎದ್ದಿರಲು ಸಾಧ್ಯವೇ ಇಲ್ಲ ಅಂತ ಹೇಳಿ ಬೆಳಿಗ್ಗೆ ಎದ್ದು ಓದುತ್ತಿದ್ದಳು. ನಾನು, ಗೀತಾ ಮಧ್ಯ ರಾತ್ರಿಯವರೆಗೆ ಓದಿ, ಒಂದೇ ಹಾಸಿಗೆಯಲ್ಲಿ ಬಿದ್ದುಕೊಂಡು ಆ ನಡುರಾತ್ರಿಯಲ್ಲಿ ಗುಸುಗುಸು, ಪಿಸುಪಿಸು ಅನ್ನುತ್ತ ಮಾತಾಡಿ ಆಮೇಲೆ ಮಲಗುವ ಅಭ್ಯಾಸ. ಇದ್ದಕ್ಕಿದ್ದ ಹಾಗೆ ಗೀತಾ -ಬಾಜೀ ಗೆಜ್ಜೆ ಸದ್ದು ಕೇಳಿಸ್ತಿಲ್ವೇನೇ ಅಂತ ಶುರು ಮಾಡಿಬಿಡುತ್ತಿದ್ದಳು. ನಾನು -ಏನಿಲ್ಲ, ಸುಮ್ನೆ ಬಿದ್ಕೊಳ್ಳೇ ಅಂದರೂ ಬಿಡದೇ ನನ್ನ ಕೈಕಾಲು ನಡುಗಿಸಿ ಬಿಡುತ್ತಿದ್ದಳು. ಆಗೆಲ್ಲ ಪಕ್ಕದ ಮಂಚದಲ್ಲಿ ಮಲಗಿರುತ್ತಿದ್ದ ಸಿಂಹ – ಏನ್ರೇ ಇಬ್ರೂ ಹೊಡ್ಕೊಳ್ತೀರ. ಬಿದ್ಕೊಳ್ತೀರೋ, ಇಲ್ವೋ ಅಂತ ಘರ್ಜಿಸಿದರೆ ಸಾಕು, ಇಬ್ಬರೂ ಗಪ್ ಚುಪ್! ಒಂದೊಂದು ಸಲ ಓದುತ್ತಾ ಕೂತಿರುತ್ತಿದ್ದವರಿಗೆ ಪಕ್ಕದ ಮಂಚದಿಂದ – ನಮಸ್ಕಾರ !! ಅಂತ ದೊಡ್ಡ ದನಿ ಕೇಳಿಸಿ, ಆ ನಡುರಾತ್ರಿಯಲ್ಲಿ ಯಾರು, ಯಾರಿಗೆ ನಮಸ್ಕಾರ ಮಾಡ್ತಿದಾರೆ ಅಂತ ನೋಡಿದರೆ ಅಕ್ಕ ಮಲಗಿರುವಂತೆಯೇ ಎರಡೂ ಕೈ ಜೋಡಿಸಿ ಕನಸಿನಲ್ಲಿ ಕಂಡ ಯಾರಿಗೋ ನಮಸ್ಕಾರ ಹೇಳುತ್ತಿರುತ್ತಿದ್ದಳು! ನಮ್ಮಿಬ್ಬರಿಗೂ ನಗುವಂತೆಯೂ ಇಲ್ಲ. ನಗು ಕೇಳಿ, ಎಚ್ಚರವಾಗಿ ಬಿಟ್ಟರೆ ಟವಲ್ಲಿನಲ್ಲಿ ಒರೆಸಿಕೊಳ್ಳುವಂತೆ ಉಗಿಯುತ್ತಾಳೆ ಅನ್ನುವ ಭಯ! ಅಕ್ಕ ಒಂದೊಂದು ದಿನ ಮ್ಯಾಥ್ಸ್ ಫಾರ್ಮುಲಾಗಳನ್ನೆಲ್ಲ ಹೇಳಲು ಶುರು ಮಾಡುತ್ತಿದ್ದಳು. ಅವಳ ಬಡಬಡಿಕೆಯಲ್ಲಿ ನಮ್ಮಿಬ್ಬರಿಗೂ ಓದೇ ಮರೆತುಹೋಗಿ, ಆ ಸರಿರಾತ್ರಿಯಲ್ಲಿ ಯಾವುದೋ ನಿಗೂಢತೆ ಸೃಷ್ಟಿಯಾಗಿಹೋಗಿ ಒಂಥರಾ ಭಯ ಶುರುವಾಗಿ ಬಿಡುತ್ತಿತ್ತು. ಓದು ಅಲ್ಲಿಗೇ ನಿಲ್ಲಿಸಿ, ದೀಪ ಆರಿಸಿ ರಗ್ಗು ಕವುಚಿ ಮಲಗಿ ಬಿಡುತ್ತಿದ್ದೆವು. ಬೆಳಿಗ್ಗೆ ಎದ್ದು ನಾವಿಬ್ಬರೂ ರಾತ್ರಿಯ ಕಥೆ ಹೇಳಿದರೆ – ಅದೆಲ್ಲಾ ಏನಿಲ್ಲ. ನಿಮ್ಮಿಬ್ಬರಿಗೂ ತಲೆ ಕೆಟ್ಟಿದೆ ಅಷ್ಟೆ ಅಂದುಬಿಡುತ್ತಿದ್ದಳು ಅಕ್ಕ!
ಅಕ್ಕನಿಗಿಂತ ನನಗೆ ಯಾವಾಗಲೂ ಪರೀಕ್ಷೆ ಬೇಗನೇ ಮುಗಿಯುತ್ತಿತ್ತು. ನನ್ನ ಪರೀಕ್ಷೆ ಇರುವಾಗ ಆವರಿಸಿ ಬರುತ್ತಿತ್ತು ನಿದ್ದೆ. ಆದರೆ ಪರೀಕ್ಷೆ ಮುಗಿದ ಮರುದಿನದಿಂದ ಬೆಳಿಗ್ಗೆಯೇ ಅಲಾರ್ಮ್ ಇಟ್ಟು ಏಳುತ್ತಿದ್ದೆ … ಕಾದಂಬರಿ ಓದಲಿಕ್ಕೆ! ಸರಿ, ಈ ಅಕ್ಕನನ್ನು ನಿದ್ರೆಯಿಂದ ಎಬ್ಬಿಸುವ ಕೆಲಸವನ್ನು ನಾನೇ ಮೈಮೆಲೆ ಎಳೆದುಕೊಳ್ಳುತ್ತಿದ್ದೆ. ಬೆಳಿಗ್ಗೆ ಅಲಾರ್ಮ್ ಕೂಗಿದಾಗ ಎದ್ದು, ಸೂಪರ್ರಾದ ಫಿಲ್ಟರ್ ಕಾಫಿ ಮಾಡಿ, ಬೆರೆಸಿ, ಅಕ್ಕನಿಗೊಂದು ಮತ್ತು ನನಗೊಂದು ಲೋಟ ಬಿಸಿ ಬಿಸಿ ಕಾಫಿ ರೆಡಿ ಮಾಡಿ ಅಕ್ಕನನ್ನು ಎಬ್ಬಿಸುತ್ತಿದ್ದೆ. ಅಕ್ಕ ನೀಟಾಗಿ ಎದ್ದು ಬಚ್ಚಲಿಗೆ ಹೋಗಿ, ಮುಖ ತೊಳೆದು ಬಂದು ಕಾಫಿ ಹೀರಿ ಕೈಲಿ ಬುಕ್ ಹಿಡಿಯುತ್ತಿದ್ದಳು. ಮೊದಲಿಗೆ ಕೂತಿರುತ್ತಿದ್ದವಳು, ನಂತರ ದಿಂಬಿಗೆ ಒರಗುವ ಪೋಸ್‌ಗೆ ಬಂದು, ಆ ನಂತರ ಶಯನದ ಪೋಸ್‌ಗೆ ಬರುತ್ತಿದ್ದಳು. ಹಾಗೇ ಮೈಮೇಲೆ ಹೊದ್ದಿಕೆಯೂ ಬರುತ್ತಿತ್ತು ಮುಂದಿನ ಕಾಲು ಘಂಟೆಯಲ್ಲಿ. ನಾನು full concentration ನಿಂದ ಕಾದಂಬರಿಯಲ್ಲಿ ಮುಳುಗಿರುತ್ತಿದ್ದೆ! ಯಾವಾಗಲೋ ಪಕ್ಕ ತಿರುಗಿ ನೋಡಿದರೆ, ಮುಖದ ಮೇಲೆ ಪುಸ್ತಕ ಕವುಚಿಕೊಂಡ ಅಕ್ಕ ಕಾಣುತ್ತಿದ್ದಳು! ನನಗೆ ಸಿಟ್ಟು ನೆತ್ತಿಗೇರುತ್ತಿತ್ತು … ಅಲ್ಲಾ, ಈ ಸಂಭ್ರಮಕ್ಕೆ ಎಬ್ಬಿಸಿ, ಕಾಫಿ ಬೇರೆ ಕೊಡಬೇಕಿತ್ತಾ ಅನ್ನುವ ಸಿಟ್ಟಿನಲ್ಲಿ, ಕಾಫಿ ಕೊಟ್ಟಿದ್ದರಿಂದ ಅವಳನ್ನು ಬಯ್ಯುವ ಅಧಿಕಾರ ಸಿಕ್ಕಿಯೇ ಬಿಟ್ಟಿದೆ ಅನ್ನುವ ಭ್ರಮೆಯಲ್ಲಿ ಅವಳ ಹತ್ತಿರ ಮೆಲ್ಲಗೆ ಹೋಗಿ ಮುಖದ ಮೇಲಿನ ಪುಸ್ತಕ ಎಳೆಯುತ್ತಿದ್ದೆ. ಪಟಕ್ಕನೆ ಕಣ್ಣು ಬಿಟ್ಟ ಅವಳು – ಆಯ್ತು ! ಮುಗೀತು !! ನನ್ನ ಓದನ್ನ ಹಾಳು ಮಾಡಿಬಿಟ್ಯಲ್ಲೇ !!! ಎಷ್ಟು ಚೆನ್ನಾಗಿ ಓದಿದ್ದನ್ನ ರಿವೈಸ್ ಮಾಡ್ತಿದ್ದೆ … ನೀನು ಕನೆಕ್ಷನ್ ತಪ್ಪಿಸಿಬಿಟ್ಟೆ ಅಂತ ಬಯ್ಯಲು ಶುರು ಮಾಡುತ್ತಿದ್ದಳು. ನಾನು ಗಾಭರಿಯಿಂದ ಮೆತ್ತಗಾಗಿ ಹೋಗಿ, ಅವಳಿಗೆ ಸಾರಿ ಹೇಳಿ – ಮಲಗಿಬಿಟ್ಟೆಯೇನೋ ಅಂದುಕೊಂಡು ಎಬ್ಬಿಸಿಬಿಟ್ಟೆ ಕಣೇ ಅಂತ ಪಶ್ಚಾತ್ತಾಪದಲ್ಲಿ ಹೇಳುತ್ತಿದ್ದೆ. ಇನ್ನು ಮೇಲೇನಾದ್ರೂ ಹೀಗೆಲ್ಲ ಮಾಡಿದ್ಯೋ ಸುಮ್ಮನಿರಲ್ಲ ನೋಡು ಅಂತ ಎಚ್ಚರಿಕೆ ಕೊಡುತ್ತಿದ್ದಳು. ಆಮೇಲೆ ಎಷ್ಟೋ ವರ್ಷಗಳಾದ ನಂತರ ಹೇಳಿದಳು – ನೀನು ಆ ರೀತಿ ಎಬ್ಬಿಸಿದಾಗಲೆಲ್ಲ ನಾನು ನಿಜಕ್ಕೂ ನಿದ್ರೆ ಮಾಡಿರುತ್ತಿದ್ದೆ ಕಣೆ. ನೀನು ಎಬ್ಬಿಸಿದಾಗ್ಲೇ ಎಚ್ಚರ ಆಗ್ತಿದ್ದಿದ್ದು. ಅದಕ್ಕೇ ನಿನ್ನೇ ಬಯ್ದುಬಿಟ್ಟು ಬಾಯಿ ಮುಚ್ಚಿಸುತ್ತಿದ್ದೆ ಎಂದು !! ಅಂಥ ಗಾಢ ನಿದ್ರೆಯಲ್ಲಿದ್ದವಳು, ಎಬ್ಬಿಸಿದ ಕೂಡಲೇ ನಿಜಕ್ಕೂ ಓದುತ್ತಿದ್ದಳೇನೋ ಅನ್ನುವಂತೆ ನಮ್ಮನ್ನು ಗಿಲ್ಟಿಗೆ ಸಿಕ್ಕಿಸುವಷ್ಟು ಅವಳ ಮಿದುಳು ಹೇಗೆ alert ಆಗಿರುತ್ತಿತ್ತು ಅನ್ನುವುದೇ ಇವತ್ತಿಗೂ ನನಗೆ ಆಶ್ಚರ್ಯ!
ಇನ್ನು ನನ್ನ – ಅಕ್ಕನ ಜಗಳಗಳಂತೂ ಮುಗಿಯದ ಮಹಾಭಾರತದ ಹಾಗೆ…
ಆಗೆಲ್ಲ ಡೈನಿಂಗ್ ಟೇಬಲ್ ಸುತ್ತ ಕೂತೇ ಊಟ ಮಾಡುವ ಅಭ್ಯಾಸ. ನಾನು ಎಲ್ಲವನ್ನೂ ಅಡಿಗೆ ಮನೆಯಿಂದ ಟೇಬಲ್ಲಿಗೆ ಶಿಫ್ಟ್ ಮಾಡುವಾಗ – ನೀನು ಅದನ್ನ ಮಾಡು. ನಾನು ಊಟ ಮುಗಿದ ಮೇಲೆ ಒಳಗೆ ಎತ್ತಿಡ್ತೀನಿ ಅಂತ ರೂಮಿಂದಲೇ ಕೂಗು ಹಾಕುತ್ತಿದ್ದಳು. ಬೆಳಗ್ಗಿನಿಂದ ಸಿಕ್ಕಿರದ ಅಪ್ಪನ ಜೊತೆ ಮತ್ತು ಅಮ್ಮನ ಜೊತೆ ಹರಟುತ್ತಾ, ನಾವು ಊಟ ಮುಗಿದ ನಂತರವೂ ಏಳದೇ ಕೂತೇ ಇರುತ್ತಿದ್ದೆವು. ಇವಳು ಸರಿಯಾಗಿ ಮೂರು ನಿಮಿಷ ಕಾದವಳೇ – ಅಯ್ಯೋ ನೀವು ಈ ಜನ್ಮಕ್ಕೆ ಏಳೋ ಲಕ್ಷಣ ಕಾಣ್ತಿಲ್ಲ. ನಂಗೆ ನಿದ್ದೆ ಬರ್ತಿದೆ ಅಂತ ಎದ್ದು ಹೋಗಿ ಮಲಗೇ ಬಿಡುತ್ತಿದ್ದಳು. ನಾನು ವೀರಾವೇಶದಿಂದ – ಮೋಸಗಾತಿ, ಒಳಗೆ ಎತ್ತಿಡ್ತೀನಿ ಅಂದಿದ್ಯಲ್ಲೇ ಅಂತ ಕಿರುಚಿದರೆ ಅವಳಿಗೆಲ್ಲಿ ಕೇಳಬೇಕು? ಅಷ್ಟು ಹೊತ್ತಿಗಾಗಲೇ ಅವಳು ನಿದ್ರೆ ಮಾಡಿಯಾಗಿರುತ್ತಿತ್ತು. ಇನ್ನು ಜಗಳದ ಮತ್ತೊಂದು ವಿಷಯವೆಂದರೆ ನನ್ನ ಬಟ್ಟೆಗಳದ್ದು. ನಾನೋ ತುಂಬ ಪಿರ್ಕಿ ಸ್ವಭಾವದವಳು. ಬಸ್ಸಿನಲ್ಲಿ ಕೂತರೆ ಯೂನಿಫಾರ್ಮ್‌ನ ಇಸ್ತ್ರಿ ಹಾಳಾಗುತ್ತೆ ಅಂತ ನಡೆದು ಸ್ಕೂಲಿಗೆ ಹೋಗುತ್ತಿದ್ದಂತ ಪ್ರಾಣಿ! ಭಾನುವಾರ ಬಂತೆಂದರೆ ಒಗೆದ ಬಟ್ಟೆಗಳನ್ನೆಲ್ಲ ಒಂದೇ ಒಂದು ಸಣ್ಣ ಸುಕ್ಕೂ ಇಲ್ಲದಂತೆ ಐಯರ್ನ್ ಮಾಡಿ ಹ್ಯಾಂಗರಿಗೆ ಹಾಕುತ್ತಿದ್ದೆ. ನನ್ನದು ಸ್ಕೂಲ್ ಯೂನಿಫಾರ್ಮ್, ಅಕ್ಕ ಕಾಲೇಜಿಗೆ ಕಲರ್ ಡ್ರೆಸ್ ಹಾಕುವ ಅದೃಷ್ಟವಂತೆ. ಸೋಮವಾರ ಸ್ಕೂಲು ಮುಗಿಸಿ ಮನೆಗೆ ಬರುವಷ್ಟರಲ್ಲಿ ನನ್ನ ಮಂಚದ ಮೇಲೊಂದು ಮುದ್ದೆಯಾಗಿ ಬಿದ್ದ ಸುಕ್ಕು ಡ್ರೆಸ್! ಅಕ್ಕ ನನ್ನ ಡ್ರೆಸ್ ಹಾಕಿಕೊಂಡು ಹೋಗಿರುವುದಲ್ಲದೇ, ನನಗೇ ಕಾಣುವ ಹಾಗೆ ನಿರ್ಲಕ್ಷ್ಯದಿಂದ ಗುಪ್ಪೆ ಹಾಕಿರುವುದನ್ನು ಕಂಡಾಗ ಕರುಳು ಕಿವುಚಿ ಭೋರೆಂದು ಅತ್ತು ಕಿರುಚಾಡುತ್ತಿದ್ದೆ. ಒಳಗಾದರೂ ನೀಟಾಗಿ ಇಡೇ – ಅಂತ ದೈನೇಸಿಯಂತೆ ಬೇಡಿದರೆ, ಕಿವಿಗೇ ಬೀಳಲಿಲ್ಲ ಅನ್ನುವಂತೆ ಕೂತಿರುತ್ತಿದ್ದಳು! ನಾನು ಅಳುತ್ತಾ ಅಮ್ಮನಿಗೆ ಚಾಡಿ ಹೇಳುತ್ತಿದ್ದೆ. ಅಮ್ಮ ಬಂದು ಅವಳಿಗೆ ಉಪದೇಶ ಮಾಡುತ್ತಿದ್ದಳು. ಸರಿ, ಇನ್ನು ಮರುದಿನ ರಾಮರಾಜ್ಯ ಸೃಷ್ಟಿಯಾಗಿ ಹೋಯಿತಾ ಅಂದುಕೊಳ್ಳುತ್ತಿದ್ದೀರಾ? ಉಹೂಂ, ಮರುದಿನ ಮತ್ತೊಂದು ಬಟ್ಟೆ ಗುಪ್ಪೆಯಾಗಿ ಬಿದ್ದಿರುತ್ತಿತ್ತು !!
ಇಂಥ ಜಗಳಗಳು ಅಸಾಧ್ಯವಾಗಿ ಹೋದಾಗ, ಅಪ್ಪ ರೋಸಿ ಹೋಗಿ ಎರಡು ಚಾಕು ಕೊಡ್ತೀನಿ. ಇಬ್ರೂ ಬೀದಿ ಮಧ್ಯೆ ಜಗಳ ಕಾದು ಚುಚ್ಕೊಂಡು ಹೋಗಿ ಬಿಡಿ ಅತ್ಲಾಗೆ ಅನ್ನುವಷ್ಟರ ಅತಿರೇಕಕ್ಕೆ ಹೋಗಿಬಿಡುತ್ತಿತ್ತು. ಆದರೂ ನಾವಿಬ್ಬರೂ ಅಪ್ಪನಾಣೆ ಒಂದಿಷ್ಟೂ ಸುಧಾರಿಸಲಿಲ್ಲ. ಕಾಲೇಜಿಗೆ ಬಂದು ಹೆಚ್ಚೂ ಕಡಿಮೆ ಅವಳು ಕೊನೆ ವರ್ಷ ಡಿಗ್ರಿಯಲ್ಲಿದ್ದಾಗಲೂ ನಮ್ಮಿಬ್ಬರ ಜಗಳ ನಿಂತಿರಲಿಲ್ಲ. ಅವಳ ಡಿಗ್ರಿ ಮುಗಿಯುವಷ್ಟರಲ್ಲಿ ಅಮ್ಮ ಮನೆಯಲ್ಲಿ ಅವಳ ಮದುವೆಯ ಮಾತಾಡುತ್ತಿದ್ದಳು. ನನಗೆ ಒಳಗೊಳಗೇ ಖುಷಿ – ಅಬ್ಬಾ! ಇವಳಿನ್ನು ತೊಲಗಿ ಹೋಗುತ್ತಾಳೆ. ನಾನೊಬ್ಬಳೇ ಇವಳ ಕಾಟವಿಲ್ಲದೇ ರಾಣಿಯ ಹಾಗೆ ಇರಬಹುದು ಅಂತ! ಆ ನಂತರದ ಜಗಳಗಳಾಗುವಾಗ, ನಾನು ಕೊನೆಯಲ್ಲಿ – ಅಯ್ಯೋ ಏನಾದ್ರೂ ಹೆಳ್ಕೊಳ್ಳೇ .. ಇನ್ನೆಷ್ಟು ದಿನ ಇಲ್ಲಿರ್ತೀಯ ಪಾಪ. ಆಮೇಲೆ ತೊಲಗ್ತೀಯಲ್ಲ ಅನ್ನಲು ಶುರು ಮಾಡಿದೆ. ಅವಳು – ಹೂಂ, ಮದುವೆಯಾದ ಮೇಲೆ ನಂಗೂ ಅರಾಮ್. ನಿನ್ನ ಕಾಟವಿಲ್ಲದೇ. ನಿನ್ನ ಮೂತಿ ದಿನಾ ನೋಡೋ ಕರ್ಮ ಇಲ್ಲ ನನಗೆ. ಸಧ್ಯ! ಅನ್ನುತ್ತಿದ್ದಳು. ನಾನು ಇನ್ನಿಷ್ಟು ವೀರಾವೇಶದಿಂದ – ನನಗೂ ಸಧ್ಯ ಬಿಡುಗಡೆ. ನೀನು ಇಲ್ಲಿಗೆ ಬರದೇನೇ ಹೋದ್ರೆ ಇನ್ನೂ ನೆಮ್ಮದಿ. ನಾನಂತೂ ಹೇಗೂ ನಿಮ್ಮನೆಗೆ ಬರೋ ಐಡಿಯಾ ಇಲ್ಲ! ಅನ್ನುತ್ತಿದ್ದೆ. ಅವಳು ವ್ಯಂಗ್ಯವಾಗಿ – ಬಂದ್ರೂ ನಿನ್ನ ಸೇರಿಸೋರು ಯಾರು ಅನ್ನುತ್ತಿದ್ದಳು. ಇಬ್ಬರೂ ನಮ್ಮ ನಮ್ಮ ಮೂಗಿನ ನೇರಕ್ಕೆ ಚುಚ್ಚಿ, ವ್ಯಂಗ್ಯ ಮಾತಾಡಿ ‘ಈಗೋ’ ತಣಿಸಿಕೊಂಡು ತೆಪ್ಪಗಾಗುತ್ತಿದ್ದೆವು.
ಎಂ. ಕಾಮ್ ಮೊದಲ ವರ್ಷದಲ್ಲಿರುವಾಗ ಅವಳ ಮದುವೆಯಾಯಿತು. ಅವಳು ಗಂಡನ ಮನೆಗೆ ಹೋದ ದಿನ ರಾತ್ರಿ ನನಗೆ ಖುಷಿಯೋ ಖುಷಿ. ಬಿಡುಗಡೆ ಸಿಕ್ಕ ಭಾವ. ಅಬ್ಬಾ! ಇಡೀ ರೂಮು ನನ್ನದು ಅನ್ನುವ ಸಂಭ್ರಮ. ದೀಪವಾರಿತು. ಎಂದೂ ಮಾತನಾಡದೇ ಪಕ್ಕದ ಮಂಚದಲ್ಲಿ ಮಲಗಿರುತ್ತಿದ್ದ ಅಕ್ಕನಿಲ್ಲದೇ ರೂಮು ಭಣ ಭಣ ಅನ್ನಿಸಲು ಶುರುವಾಯಿತು. ಇನ್ನೊಂದು ಸ್ವಲ್ಪ ಹೊತ್ತು ಕಳೆದ ನಂತರ ಒಂಟಿತನ ಭಯವಾಗಿ, ನಿದ್ರೆ ಹಾರಿ ಹೋಯ್ತು! ಆಮೇಲಿನ ದಿನಗಳಲ್ಲಿ ಎಷ್ಟೋ ದಿನ ನಡುರಾತ್ರಿಯಲ್ಲಿ ಅಮ್ಮ, ಅಪ್ಪನ ಜೊತೆ ಬಂದು ಮಲಗಲು ಶುರು ಮಾಡಿದೆ. ಇಡೀ ರೂಮು ನನ್ನದೇ, ಜಗಳವಿಲ್ಲ, ಕದನವಿಲ್ಲ, ಬಟ್ಟೆ ಗುಪ್ಪೆ ಹಾಕುವವರಿಲ್ಲ!! ಈ ರಾಮರಾಜ್ಯದ ಕನಸನ್ನು ಕಾಣುತ್ತಿದ್ದ ನನಗೆ, ಈಗ ಅದ್ಯಾಕೋ ಯಾವುದೂ ರುಚಿ ಅನ್ನಿಸುತ್ತಲೇ ಇರಲಿಲ್ಲ. ಹಾಗಿರುವಾಗ ಒಂದು ದಿನ ಅಕ್ಕ ಮುಂದಿನ ವಾರ ನಮ್ಮ ಮನೆಗೆ ಬರುತ್ತಾಳಂತೆ ಅಂತ ಅಮ್ಮ ಹೇಳಿದಳು. ನಾನು ಖುಷಿಯಿಂದ ಹಲ್ಲುಕಿಸಿದೆ! ಅವಳು ಬಂದಾಗ – ರೇತಿ, ಈ ಡ್ರೆಸ್ ಬೇಕಿದ್ರೆ ತಗೊಂಡು ಹೋಗೇ, ಆ ಡ್ರೆಸ್ ಬೇಕಿದ್ರೆ ತಗೊಂಡು ಹೋಗೇ ಅಂತ ನಾನೇ ಮೇಲೆ ಬಿದ್ದು ಬಟ್ಟೆ ಕೊಟ್ಟೆ! ಅವಳು ಇದ್ದ ಎರಡು ದಿನ ನಾವೆಲ್ಲಾ ಒಟ್ಟಿಗೆ ನಕ್ಕಿದ್ದೇ ನಕ್ಕಿದ್ದು! ಹೋಗುವಾಗ – ಮನೆಗೆ ಬಾರೇ ಅಂದಳು! ನಾನು ಮಾರನೇ ದಿನವೇ ಜಯನಗರದ ಅವಳ ಮನೆಯಲ್ಲಿ ಟೆಂಟ್! ಇಬ್ಬರೂ ಎದ್ದೆದ್ದು, ಬಿದ್ಬಿದ್ದು ಹರಟಿದೆವು. ಅವಳ ವಾರ್ಡ್‌ರೋಬನ್ನೆಲ್ಲ ಕ್ಲೀನ್ ಮಾಡಿದೆ. ಇಬ್ಬರೂ ಸಿನೆಮಾಗೆ ಹೋದೆವು … ಇಬ್ಬರೂ ಸ್ವಾತಂತ್ರವನ್ನು ಅರೆದು ಕುಡಿಯುತ್ತೇವೆ ಅಂತ ಕನಸಿದ್ದು ನಮ್ಮಿಬ್ಬರಿಗೂ ಮರೆತೇ ಹೋಗಿತ್ತು !!
ವರ್ಷಗಳು ಮುಂದಕ್ಕೆ ಹೋದವು. ನನ್ನದೂ ಮದುವೆಯಾಯಿತು. ಮನೆಯಲ್ಲಿ ವಾಂಗಿಬಾತು-ಪಾಯಸ ಅಂತ ಮಾಡಿಕೊಂಡು ಸುಖವಾಗಿದ್ದ ನಾನು, ನಮ್ಮ ಹಣಕಾಸು ಪರಿಸ್ಥಿತಿ ಸರಿಯಿಲ್ಲ ಅಂತ ಅಕ್ಕನೆದುರು ಒಂದೊಂದು ಸಲ ಹೇಳುತ್ತಿದ್ದೆ. ಕೇಳಿ ಕೇಳಿ ಸಾಕಾದ ಅವಳು ಒಂದು ದಿನ ಸೊಂಟಕ್ಕೆ ಸೆರಗು ಬಿಗಿದು – ಹೂಂ ಹೀಗೇ ಅಡಿಗೆ ಮಾಡ್ಕೊಂಡು, ತಿಂದ್ಕೊಂಡು ಕೂತಿರು. ಅದು ಹೇಗೆ ಬಂದುಬಿಡತ್ತೆ ದುಡ್ಡು? ಎದ್ದು ಮನೆ ಬಿಟ್ಟು ಹೋಗಿ, ಆಫೀಸಲ್ಲಿ ಕೂತುಕೋ ಅಂತ ಬೆನ್ನು ಬಿದ್ದಳು. ಅವಳ ಕಾಟ ತಡೆಯಲಾರದೇ ಆಫೀಸಿಗೆ ಕಾಲಿಟ್ಟ ನಾನು, ಮುಂದೆ ನಮ್ಮ ಸ್ಥಿತಿ ಸುಧಾರಿಸುವವರೆಗೂ ಮತ್ತು ಸುಧಾರಿಸಿದ ನಂತರವೂ ಕೆಲಸ ಮಾಡಿದೆ. ಅವಳ ಆ ಬಲವಂತ ಇಲ್ಲದಿದ್ದರೆ ಇವತ್ತಿಗೂ ಸ್ಥಿತಿ ಸುಧಾರಣೆಯಾಗುತ್ತಿರಲಿಲ್ಲ ಅನ್ನುವುದು ಗ್ಯಾರಂಟಿ.
ನಂತರದ ದಿನಗಳಲ್ಲಿ ಸಂಪರ್ಕ ಕ್ರಾಂತಿಯಾಗಿ ಮನೆ ಮನೆಗೆ ಫೋನ್ ಬಂದ ಮೇಲಂತೂ ವಾರಕ್ಕೋ, 15 ದಿನಕ್ಕೋ ಒಂದು ಸಲ ಫೋನ್ ಹಿಡಿದರೆ ಎರಡು ಘಂಟೆಗೆ ಕಡಿಮೆ ಇಲ್ಲದಂತೆ ಮಾತಾಡುತ್ತೇವೆ. ಎಷ್ಟೋ ವಿಷಯಗಳು ನಮ್ಮಿಬ್ಬರ ಮಧ್ಯೆಯೇ ಹುಟ್ಟಿ, ಸತ್ತೂ ಹೋಗುತ್ತವೆ. ಇಬ್ಬರೂನಮ್ಮೆರಡು ಮನಸ್ಸುಗಳ ನಡುವೆ ಸಣ್ಣ ಕಿಟಕಿಯೊಂದನ್ನು ಮಾಡಿಕೊಂಡು, ಆ ಬದಿಯ ಲೋಕ ಪೂರ್ತಿ ಕಾಣದ ಹಾಗೆ – ಆದರೆ ಸ್ವಲ್ಪ ಮಾತ್ರ ಕಾಣುವ ಹಾಗೆ ಕೆಲವನ್ನು ಕಾಣುತ್ತೇವೆ. ಅದು ಜಗತ್ತಿನ ಬದಿಗೆ ಕಾಣುವ ಕಿಟಕಿಯಲ್ಲ, ನಮ್ಮಿಬ್ಬರ ಮಧ್ಯೆ ಮಾತ್ರ ಇರುವಂಥದ್ದು. ಕಿಟಕಿಯಾಚೆ ಬಗ್ಗಿ ನೋಡುವುದಿಲ್ಲ ಇಬ್ಬರೂ. ಕಾಣಿಸುವಷ್ಟನ್ನು ಮಾತ್ರ ನೋಡುತ್ತೇವೆ. ಮತ್ತೆ ಆ ಕಿಟಕಿ ಮುಚ್ಚಿದರೆ ಎಂದು ತೆರೆಯುತ್ತೇವೆ ಅನ್ನುವುದು ನಮಗೇ ಗೊತ್ತಿರುವುದಿಲ್ಲ …
ಮೊನ್ನೆ ಮೊನ್ನೆ ನನ್ನ – ಅವಳ ಮಧ್ಯೆ ಒಂದು ಆಸ್ತಿ ತಕರಾರು ಎದ್ದಿತು! ಹೊಸತಾಗಿ ಕಟ್ಟಿದ ಅವಳ ಮನೆಯ ತುಂಬ ನನ್ನ ಅಜ್ಜಿಯ ಮನೆಯ ಪಾತ್ರೆಗಳು, ಕಾಡೆಮ್ಮೆಯ ಕೊಂಬು ಎಲ್ಲವನ್ನೂ ಇಟ್ಟಿದ್ದಳು. Antique ಹುಚ್ಚಿರುವ ನಾನು ತಮಾಷೆಗೆ – ಅಯ್ಯೋ ಪಾಪಿ! ಇರೋ ಬರೋ ಆಸ್ತಿ ಎಲ್ಲ ನೀನೇ ಕಬಳಿಸಿ ಬಿಟ್ಯಲ್ಲೇ ಅಂತ ರೇಗಿಸಿದೆ. ನಗ್ತಾ ಕೂತಿದ್ದಳು. ವಾಪಸ್ಸು ಬಂದೆ, ಅದರ ವಿಷಯವೂ ಮರೆತು ಹೋಗಿತ್ತು ನನಗೆ. ಮೊನ್ನೆ ಇದ್ದಕ್ಕಿದ್ದ ಹಾಗೆ ಬಂದವಳ ಕೈಲೊಂದು ಅಜ್ಜಿ ಸಾರು ಮಾಡುತ್ತಿದ್ದ ಕಲ್ಲು ಮರಿಗೆ, ಜೊತೆಗೊಂದು ಅಜ್ಜಿಯ ಉಪ್ಪಿನಕಾಯಿ ಜಾಡಿ! ಊರಗಲ ಹಲ್ಲು ಬಿಟ್ಟ ನಾನು – ಇದೆಲ್ಲ ನನ್ಗೆ ನನ್ಗೇನಾ ಅಂದೆ ನಂಬಲಾಗದೇ. ಡೌಟೇ ಇಲ್ಲ, ನಿನಗೇನೇ. ಈ ಕಲ್ಲುಮರಿಗೇಲಿ ನೀರು ಹಾಕಿ ಶಾವಂತಿಗೆ ಹೂ ಹಾಕಿಡು, ಆಮೇಲೆ ಹೇಳು ಹೆಂಗೆ ಕಾಣತ್ತೆ ಅಂತ – ಎಂದು ಬ್ಯೂಟಿ ಟಿಪ್ಸ್ ಬೇರೆ ಕೊಟ್ಟಳು! ಕಲ್ಲುಮರಿಗೆ ಮತ್ತು ಜಾಡಿ ಒಳಗೆ ಬಗ್ಗಿ ನೋಡಿದಾಗ ಅದರ ತುಂಬ ಅವಳ ಪ್ರೀತಿ ತುಂಬಿದೆ ಅನ್ನಿಸಿದ್ದು ಭ್ರಮೆಯೋ … ನಿಜವೋ …..?!
 

‍ಲೇಖಕರು G

August 3, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. lakshmikanth itnal

    ಆಳ ಮನದ ಬಾಗಿಲು ತೆರೆದಾಗ, ತುಳುಕುತ್ತ, ನುಗ್ಗುತ್ತ ಹೊರಬರುವ ಸಂಗತಿಗಳು ಹೀಗಿರುತ್ತವೆ, ಮನದಲ್ಲಿ ಮಡುಗಟ್ಟಿದ ಭಾವಗಳ ಹೊಳೆಯ ಕಟ್ಟೆಯ ಹರಿಯಬಿಟ್ಟಾಗ ಜಲಪಾತವಾಗಿ ಹೊಮ್ಮಿದ ಭಾವನೆಗಳು. ಲೇಖನ ಮೆಚ್ಚುಗೆಯಾಯಿತು

    ಪ್ರತಿಕ್ರಿಯೆ
  2. ಅಪರ್ಣ ರಾವ್

    ಮತ್ತೆ ಮತ್ತೆ ನನ್ನವೇ ನೆನಪುಗಳು ಸ್ವಲ್ಪ ಆಚೀಚೆಯಾಗಿ ನಿನ್ನ ಬರಹದಲ್ಲಿ ಅಲಂಕರಿಸಿಕೊಂಡು ಮುಂದೆ ನಿಂತಾಗ..ನಾ ಹೇಗೆ ತಾನೇ ಮರೆಯಲಿ? ಸೂಪರ್ ಸಂಡೇ ಬರಹ. ನಿರಂತರವಾಗಿರಲಿ..

    ಪ್ರತಿಕ್ರಿಯೆ
  3. ಸುಮಂಗಲಾ

    ತುಂಬಾನೆ ಇಷ್ಟವಾಯ್ತು ಭಾರತಿ…

    ಪ್ರತಿಕ್ರಿಯೆ
  4. Anil Talikoti

    ಎಷ್ಟೊಂದು ಚೆನ್ನಾಗಿ ಬರಿಯುತ್ತಿರಿ ಭಾರತಿ ಅವರೆ. ಅಕ್ಕ-ತಂಗಿ, ಅಣ್ಣ- ತಮ್ಮಂದಿರ ನಡುವಿನ ನೆನಪಿನಂಗಳದ ಆ ಗುದ್ದಾಟಗಳು ಎಲ್ಲರ ಮನೆಯ ದೋಸೆಯಂತೆ ಮೊದಮೊದಲು ಮುರಿದಂತೆ ಕಂಡರೂ -ಕೊನೆಗೆ ರುಚಿಯಾಗಿರುವದು ಗ್ಯಾರಂಟಿ

    ಪ್ರತಿಕ್ರಿಯೆ
  5. viswa bagaloor

    ಮಾಸದ ನೆನಪುಗಳು .ಎಷ್ಟೋ ವಿಷಯಗಳು ಮರೆತು ಹೋಗಿತ್ತು .ಲೇಖನ ಸೂಪರ್ .ನ.ವಿಶ್ವನಾಥ

    ಪ್ರತಿಕ್ರಿಯೆ
  6. ಜಯಲಕ್ಷ್ಮಿ ಶೇಖರ್

    ತುಂಬಾ ಇಷ್ಟವಾಯಿತು 🙂

    ಪ್ರತಿಕ್ರಿಯೆ
  7. ಅಮರದೀಪ್ ಪಿ . ಎಸ್.

    ಭಾಳ ದಿನಗಳ ಮೇಲೆ ನಿಮ್ಮ ಬರಹ ಓದಿದೆ….. ತುಂಬಾ ಚೆನ್ನಾಗಿದೆ ಮೇಡಂ…

    ಪ್ರತಿಕ್ರಿಯೆ
  8. Vaanee Suresh.

    ಎಷ್ಟು ಚೆನ್ನಾಗಿ ಕಣ್ಣಿಗೆ ಕಟ್ಟೋ ತರಹ ಬರೀತೀರಾ ಭಾರತೀ! ತುಂಬಾ ಇಷ್ಟ ಆಯ್ತು.

    ಪ್ರತಿಕ್ರಿಯೆ
  9. umavallish

    Bharathi iththichegashte magala balavanthakke FACE BOOK seridavalu nanu eega ninna baravanigegalannu oduvudakkagiye hogi bandu LOG IN agthini nanage ninna lekanagala mele bahala mechchuge ALL THE VERY BEST

    ಪ್ರತಿಕ್ರಿಯೆ
  10. ಶಮ, ನಂದಿಬೆಟ್ಟ

    ಎರಡಲ್ಲ ಭಾರ್ತೀ ನಾಲ್ಕು ಕೈಗಳಿಂದ Hugggsssssss…
    “ಜಗತ್ತು ಹೀಗೆ ಅಲ್ಲವಾ? ‘ಮಾಡು’ವವರಿಗಿಂತ ‘ಮಾಡುವಂತೆ ಕಾಣಿಸುವ’ವರಿಗೇ ಜಾಸ್ತಿ ಬೆಲೆ.”
    ಕಲ್ಲುಮರಿಗೆ ಮತ್ತು ಜಾಡಿ ಒಳಗೆ ಬಗ್ಗಿ ನೋಡಿದಾಗ ಅದರ ತುಂಬ ಅವಳ ಪ್ರೀತಿ ತುಂಬಿದೆ ಅನ್ನಿಸಿದ್ದು ಭ್ರಮೆಯೋ … ನಿಜವೋ …..?!
    ಅದು ಜಗತ್ತಿನ ಬದಿಗೆ ಕಾಣುವ ಕಿಟಕಿಯಲ್ಲ, ನಮ್ಮಿಬ್ಬರ ಮಧ್ಯೆ ಮಾತ್ರ ಇರುವಂಥದ್ದು. ಕಿಟಕಿಯಾಚೆ ಬಗ್ಗಿ ನೋಡುವುದಿಲ್ಲ ಇಬ್ಬರೂ. ಕಾಣಿಸುವಷ್ಟನ್ನು ಮಾತ್ರ ನೋಡುತ್ತೇವೆ.
    ……. ನೀ ಹೀಗೆ ಬರಿಯೋದಕ್ಕೆ ನನಗಾಗೋ ಹೊಟ್ಟೆಕಿಚ್ಚು ಯಾರ ಹತ್ತಿರ ಹೇಳಿಕೊಳ್ಳಲೀಈಈಈಈಈ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: