ಕರ್ಫ್ಯೂ ಕ್ವಾಟ್ಲೆ ಮತ್ತು ಸೋಲಾರ್ ಕೀಟ್ಲೆ!

ತುರುವೇಕೆರೆ ಪ್ರಸಾದ್

ಲಾಕ್‌ಡೌನ್, ಕರ್ಫ್ಯೂ ಸಂದರ್ಭದಲ್ಲೇ ಇಲ್ಲದ ಸಲ್ಲದ ರ‍್ಲೆ ತಾಪತ್ರಯಗಳೆಲ್ಲಾ ಶುರುವಾಗುತ್ತೆ. ಇದನ್ನ ಅಗ್ನಿಪರೀಕ್ಷೆ ಅಂತೀರೋ, ಸತ್ವ ಪರೀಕ್ಷೆ ಅಂತೀರೋ ದಿನಾ ಅಳುವ ಕ’ರೋನಾ’ ಪರೀಕ್ಷೆ ಅಂತೀರೋ ನಿಮ್ಗೇ ಬಿಟ್ಟದ್ದು. ಇರೋ ಸವಲತ್ತೇ ಕಡಿಮೆ, ಅದ್ರಲ್ಲಿ ನೆಟ್‌ಗಿರೋವೂ ಕೈ ಕೊಟ್ರೆ ತಲೆಕೆಟ್ ಹೋಗುತ್ತೆ.

ಲಾಕ್‌ಡೌನ್ ಪಿರೀಡಲ್ಲಿ ಈಚೆ ತೆಗೆಯಕ್ಕಾಗದ ಮೂರು ರಾಯಲ್ ಕಾರ್‌ಗಳನ್ನ ಇಟ್ಕೊಂಡಿರೋಕಿಂತ ನಾಕ್ ಮಿಕ್ಷಿ, ಮೂರು ಕುಕ್ಕರ್, ಎರಡು ಸ್ಟವ್ವು, ೨ಗ್ರೈಂಡರ್, ಎರಡು ವಾಷಿಂಗ್ ಮಶೀನ್, ಮೂರು ಟಿವಿ, ಹೀಗೆ ಎಕ್ಸ್ಟ್ರಾಫಿಟಿಂಗ್ಸ್ ಇಟ್ಕೊಂಡಿರೋರೇ ಗ್ರೇಟ್. ಇರೋದು ಒಂದು ಮಿಕ್ಸಿನೋ, ಸ್ಟವ್ವೋ, ಗೀರ‍್ರೋ, ನನ್ ಕೈಲಾಗಲ್ಲ ಅಂತ ಲಾಕ್‌ಡೌನ್ ಮಾಡುದ್ರೆ ತಿಂಡಿ, ಊಟ, ಸ್ನಾನ ಎಲ್ಲಾ ಎಕ್ಕುಟ್ಟಿಹೋಗುತ್ತೆ. ನಾವ್ ರಿಪೇರಿ ಮಾಡುದ್ರೆ ಅದು ಯೂಸ್ ಅಂಡ್ ಥ್ರೋ ಆಗೋಗುತ್ತೆ.

ಇನ್ನು ಆ ಎಲೆಕ್ಟ್ರಿಶಿಯನ್ಸೋ, ಪ್ಲಂರ‍್ರೋ ನಮ್ ಕೈಗೆ ಸಿಗೋ  ಹಾಗಿಲ್ಲ. ನಾವು ಸುಮ್ನೆ ಇರೋ ಹಾಗಿಲ್ಲ. ಮನೆ ಕೆಲಸ ಮಾಡ್ಬೇಕಲ್ಲ ಅನ್ನೋ ಸಿಟ್ಟಿಗೆ ಸ್ವಲ್ಪ ಜೋರಾಗಿ ತಿರುಗಿಸಿದ ತಕ್ಷಣ ನಲ್ಲಿ ಟ್ಯಾಪೇ ಕೈಗೆ ಬಂದಿರುತ್ತೆ, ಅದೊಂತರಾ ಬ್ಲೀಡಿಂಗ್ ಐರನ್. ಒಂದೇ ಸಮ ನೀರು ಹೋಗ್ತಾನೇ ಇರುತ್ತೆ. ತಕ್ಷಣ ಅದರ ಬಾಯ್ ಮುಚ್ಚಿಸ್ಲಿಲ್ಲ ಅಂದ್ರೆ ಇಳಿದು ಬಾ ತಾಯಿ ಇಳಿದು ಬಾಅನ್ನೋ ಕರೆ ಕೇಳಿದೋಳ ಹಾಗೆ ದಡ ದಡ ಗಂಗೆ ಇಳಿದು ಚರಂಡಿ ಸೇರಿ ಬಿಡುತ್ತಾಳೆ. ಆಮೇಲ್ ನೀರು ಹೊರೋ ಕೆಲಸನೂ ನನ್ ಪಾಲಿಗೇ ಬರುತ್ತೆ. ಹಾಳಾದ್ದು, ನಮ್ ಮನೆ ಸೋಲರ‍್ದೂ ಅದೇ ಕೇಸು..

ಮೂರಂತಸ್ತಿನ ಟೆರೆಸ್ ಮೇಲೆ ಕೂತ್ಕೊಂಡು ಜನ ಲಾಕ್‌ಡೌನ್ ಅಂತ ಗೋಳಾಡೋದನ್ನ ನೋಡ್ತಾ? ಇಲ್ಲ ಪೋಲೀಸ್ನೋರು ಮನೆ ಬಿಟ್ ಬಂದೋರಿಗೆ ಜಡಿಯೋದನ್ ನೋಡ್ತೋ? ತನ್ನ ತಲೆ ಮೇಲೆ ವಿಮಾನ ಹರ‍್ತಿಲ್ಲ ಅಂತ ಬೇಜಾರಾಯ್ತೋ? ಏನ್ ನೋಡ್ತೋ? ಏನಾಯ್ತೋ? ಏನು ಕತೆಯೋ? ಒಂದೇ ಸಮ ಗಳಗಳ ಅಂತ ಕಣ್ಣೀರು ಹಾಕ್ಕೊಂಡು ಅಳಕ್ಕೆ ಶುರು ಮಾಡ್ತು. ಶುಗರ್ ಇರೋರ ತರ ಹೀಗ್ ತುಂಬಿಸಿದ ನೀರನ್ನ ಹಾಗ್ ಕಾಲಿ ಮಾಡ್ಕೊಳ್ತಾ ಇತ್ತು. ಲೆಟರಿನ್ ಗೆ ಕೂತಾಗ್ಲೋ, ಅರ್ಧ ಸ್ನಾನ ಆದಾಗಲೋ ತಟ್ಟಂತ ನೀರು ನಿಂತೋಗ್ತಿತ್ತು.. ಇದೊಳ್ಳೆ ಗ್ರಹಚಾರಕ್ಕೆ ಬಂತಲ್ಲ ಅಂತ ವಿಲವಿಲ ಒದ್ದಾಡೋ ಹಾಗಾಯ್ತು.

ಈ ಸಿಟ್ಟಲ್ಲಿ ಜೆಟ್ಟನ್ನ ಕುಟ್ಟಿದ್ದಕ್ಕೆ ಅದೂ ಲಳಕ್ಕಂತ ಕೈಗ್ ಬಂದು ಎಲ್ಲಾ  ಕೈಯ್ಯಲ್ಲೇ ತೊಳ್ಕಳೋ ಕರ್ಮ ಬೇರೆ ಬಂತು..! ಒಂದಷ್ಟು ದಿನ ಸ್ನಾನ ಮಾಡದಿದ್ರೆ ಏನ್ ಗಂಟು ಹೋಗೋದು? ಸ್ಯಾನಿಟೈಸರ್ ಪ್ರೋಕ್ಷಣೆ ಮಾಡ್ಕೊಂಡು ತೆಪ್ಪಗೆ ಇರ‍್ಬಾರ‍್ದಾ ಅಂತ ನೀವು ಕೇಳಬಹುದು. ನೀವು ಹೇಳೋದೂ ಸರಿನೇ! ಸ್ನಾನ ಮಾಡ್ಲೇಬೇಕು ಅನ್ನೋ ಆದಮ್ಯ ಹಂಬಲ ನಂಗೇನೂ ಇಲ್ಲ, ಇಂಗ್ಲೆಂಡಿನ ಸಾಮ್ರಾಟ ೬ನೇ ಹೆನ್ರಿ, ಯೂರೋಪಿನ ಸಂತ ಪೀಟರ್, ಫ್ರಾನ್ಸಿನ ದೊರೆ ಲೂಯಿ ಇವರೆಲ್ಲಾ ಜೀವಮಾನದಲ್ಲಿ ಒಮ್ಮೆಯೂ ಸ್ನಾನ ಮಾಡಿರಲಿಲ್ಲವಂತೆ, ಈ ಗಂಡಸರಿರಲಿ, ಅಪ್ರತಿಮ ಸುಂದರಿಯರಾದ ಸ್ಪೇನಿನ ಮಹಾರಾಣಿ ಇಸಬೆಲ್ಲಾ ಹಾಗೂ ಯೂರೂಪಿನ ಸುಂದರಿ ಮಾರ್ಗರೆಟ್‌ಗೆ ಕೂಡ ಸ್ನಾನದ ಬಗ್ಗೆ ಆಸಕ್ತಿ ಇರಲಿಲ್ಲವಂತೆ. 

ಇವರೆಲ್ಲಾ ನನಗೆ ಅನುಕರಣೀಯ ಮಾದರಿ. ಹಾಸ್ಟೆಲ್‌ನಲ್ಲಿದ್ದಾಗ ವಾರಕ್ಕೆ ಒಮ್ಮೆಯೋ, ಎರಡು ಬಾರಿಯೋ ಸ್ನಾನಮಾಡಿದ್ರೆ ಅಂದು ಗಂಗೆಯ ಪುಣ್ಯವೇ ಹೊರತು ನನ್ನದಲ್ಲ. ಆದ್ರೆ ಲಾಕ್‌ಡೌನ್ ಪಿರೀಡಲ್ಲಿ ಹಾಗಲ್ಲ, ನಮಗಿಂತ ಕೆಲವು ಜನ ಸಿಕ್ಕಾಪಟ್ಟೆ ಕ್ಲೀನ್ ಅನ್ನೋರು ಮನೇಲೇ ಇರ‍್ತಾರೆ. ಏನೇ ಸೋಶಿಯಲ್ ಡಿಸ್ಟೆನ್ಸ್ ಮೇಂಟೇನ್ ಮಾಡಿ ಮಾಸ್ಕ್ ಹಾಕ್ಕಂಡ್ರೂ ನಮ್ಮ ಮೈನ ಸುಗಂಧ ಘಂಅಂತ ವೈರಸ್‌ಗಿಂತ ಜೋರಾಗಿ ಹೋಗಿ ಅವರ ಮಾಸ್ಕನ್ನೂ ಮೀರಿ ನವರಂದ್ರಗಳಲ್ಲೂ ಆವರಿಸಿಕೊಂಡು ನಮಗೆ ಅವರು ಮಂಗಳಾರತಿ ಮಾಡಕ್ಕೆ ಶುರುಮಾಡ್ತಾರೆ. ಬಾಡಿ ಲೋಶನ್, ಡಿಯೋಡ್ರಂಟ್‌ಗಳು ಬೇರೆ ಎಲ್ಲಾ ಕಕ್ಕಿಕೊಂಡು ಕಾಲಿಯಾಗಿ ಕಣ್ ಕಣ್ ಬಿಡ್ತಾ ಕೂತಿವೆ.

ಹೀಗಾಗಿ ಸ್ನಾನ ಮಾಡೋದು ಅನಿವಾರ್ಯದಲ್ಲಿ ಅನಿವಾರ್ಯ ಆಗೋಗಿತ್ತು. ಜೊತೆಗೆ ಸ್ನಾನ ಮಾಡ್ತಾ ಒಂದಿಷ್ಟು ಹೊತ್ತು ಖಾಸಗಿತನನ ಅನುಭವಿಸ್ತಾ, ನಮಗೆ ಆಪ್ತವಾದವುಗಳ ಧ್ಯಾನ ಮಾಡಬಹುದಿತ್ತು. ಉದಾಹರಣೆಗೆ ಟಾಯ್ಲೆಟ್ ಕಮೋಡ್ ಮೇಲೇ ಕೂತು ಮೊಬೈಲ್ ಚಾಟ್ ಮಾಡೋದು, ಫೇಸ್ ಬುಕ್ ಪೋಸ್ಟ್ರ್‌ ಗಳಿಗೆ ಲೈಕ್ ಹಾಕೋದು, ಇನ್‌ಸ್ಟೋಗ್ರಾಂಗಳಿಗೆ ಅಪ್‌ಲೋಡ್ ಮಾಡೋದು ಇತ್ಯಾದಿ, ಲಾಕ್‌ಡೌನ್ ದಿನಗಳಲ್ಲಿ ಹಲವರಿಗೆ ನೆಮ್ಮದಿ, ದಿವ್ಯ ಶಾಂತಿ ಅಂತ ಏನಾದ್ರೂ ಉಳ್ಕೊಂಡಿದ್ರೆ ಅದು ಈ ತರ ಬಾತ್‌ರೂಂ ಮತ್ತು ಟಾಯ್ಲೆಟ್ಟಲ್ಲಿ ಮಾತ್ರ ಅನ್ನೋದು ನನ್ನ ಹಲವು ಮಿತ್ರರ ಅಂಬೋಣ. ಇನ್ನು ನಮ್ಮ ಸೋಲಾರ್ ಸಂಕಟಕ್ಕೆ ಇರ‍್ತೀನಿ.

ನಮ್ಮ ಮಾಮೂಲಿ ಪ್ಲಂಬರ್ ನಂಜುಂಡಂಗೆ ಫೋನ್ ಮಾಡಿ ವಿಷಯ ತಿಳುಸ್ದೆ. ‘ಲಾಕ್‌ಡೌನು ಸರ್, ಈಗ ಎಂಗ್ ಬರಕ್ಕಾಗುತ್ತೆ?’ ಅಂದ. ‘ಏನಾದ್ರೂ ಮಾಡು ನಂಜುಂಡ, ನಂಗೂ ಅರ್ಥ ಆಗುತ್ತೆ, ವಿಧಿ ಇಲ್ಲ, ಎಮರ್‌ ಜೆನ್ಸಿ ಆಪರೇಶನ್ ಆಗ್ಲೇಬೇಕುಎಂದು ಗೋಗರೆದೆ. ಅವನೂ ಸರಿ ಸಾರ್, ಏನಾರಾ ಮಾಡಣ ಬಿಡಿಎಂದು ಒಪ್ಕೊಂಡ. ಮಾರನೇ ದಿನ ಬಂದು ರೋಗಿನ ಚೆಕ್ ಮಾಡ್ದ, ‘ಸರ್, ವಾಟರ್ ಲೆವೆಲ್ ಡಬ್ಬ ಹೋಗ್ಬಿಟ್ಟಿದೆ.

ಈಗ ತರ‍್ಸಕ್ಕಾಗಕಿಲ್ಲ ಸರ್’ ಎಂದ. ಗಾಬರಿ ಆಗೋಯ್ತು,. ಇನ್ನೂ ೧೫ ದಿನ ಮನೆಮಂದಿಯೆಲ್ಲಾ ಸ್ನಾನ ಮಾಡ್ದೆ ಇರೋದಾ?ಶಿವ ಶಿವ ಎಂತ ಪರಿಸ್ಥಿತಿ ತಂದ್ಯಪ್ಪ ಎಂದು ಗೋಳಾಡಿದೆ. ‘ಇಲ್ಲ, ನಂಜುಂಡ, ಏನಾದ್ರೂ ಮಾಡ್ಲೇಬೇಕು? ಹಾಗೆಲ್ಲಾ ನಮ್ ಕೈ ಬಿಡ್ಬೇಡಎಂದೆ. ಅದಕ್ಕವನು ‘ಸಾರ್, ಒಂದ್ ಕೆಲ್ಸ ಮಾಡಣಈ ಡಬ್ಬ ಕಿತ್ತಾಕಿ ಏರ್ ಪೈಪ್ ಹಾಕ್ಬಿಡಾಣ, ಪ್ರಾಬ್ಲಮ್ಮೇ ಇರಾಕಿಲ್ಲಅಂತ ಹಳೆ ಹಾರ್ಟ್ ಕಿತ್ತು ಸೀದಾ ಸ್ಟಂಟ್ ಜೋಡ್ಸೋ ತರ ಮಾತಾಡ್ದ. ಹೂ, ಏನೋ ಒಂದು, ಹಂಗೇ ಮಾಡು, ಒಟ್ನಲ್ಲಿ ಇದು ಸೋರೋದು ನಿಂತ್ರೆ ಸಾಕುಅಂದೆ, ಅವನು ‘ಸರ್, ಇಲ್ಲೆಲ್ಲೂ ಜಿಐ ಪೈಪು ಸಿಗಾಕಿಲ್ಲ.

ಒಂದು ಹೊಸ ಮನೆ ಕೆಲ್ಸಕ್ಕೆ ಅಂತ ನಡುವಿನಹಳ್ಳಿತವ ಪೈಪ್ ತರ‍್ಸಾಕಿದ್ದೆ.. ಕತ್ಲ್ ಅದ್ಮೇಲೆ ಅದನ್ನ ತಗೊಂಡ್ ಬರಬೇಕು ಸರ್ಅಂದ. ‘ಸರಿ, ತಗಂಡ್ಬಾ? ಖರ್ಚು ಎಷ್ಟಾಗುತ್ತೋ ಕೊಡ್ತೀನಿ’ ಅಂದೆ. ‘ಏ, ತಗಂಡ್ ಬಾ ಅಂದ್ರೆ ಸೊಯ್ ಟಪಕ್ ಅಂತ ಆಂಜನೇಯನ ತರ ಹರ‍್ಕಂಡು ಬರಕ್ಕಾಗುತ್ತಾ? ನೀವು ಕರಕೊಂಡ್ ಹೋಗ್ ಬಿಡಿ. ಅಂಗೇ ಪೋಲೀಸಪ್ನೋರಿಗೆ ಯೋಳಿ. ನಾನು ಕತ್ಲಾದ್ಮೇಲೆ ಆ ಕಡೆಯಿಂದ ಪೈಪ್ ಎತ್ತಾಕ್ಕಂಡ್ ಬತ್ತೀನಿ’ ಅಂದ. ಬೇರೆ ದಾರಿ ಇರ‍್ಲಿಲ್ಲ, ಸರಿ ಅಂತ ಮಾಸ್ಕ್ ಧಾರಿಯಾಗಿ ನಂಜುಂಡನ್ನ ಗಾಡಿಲಿ ಕೂರಿಸ್ಕೊಂಡು ಹೊರಟೆ. ನನ್ ಗಾಡಿ ಮೇಲೆ ʼಪ್ರೆಸ್ʼ ಅಂತ ಸ್ಟಿಕರ್ ಇದ್ದಿದ್ರಿಂದ, ಪೋಲಿಸ್ನೋರಲ್ಲಿ ಹಲವರು ಪರಿಚಿತರಾದ್ರಿಂದ ಯಾವ ಸಮಸ್ಯೆನೂ ಇಲ್ದೆ ನಡುವಿನಹಳ್ಳಿಗೆ ಬಂದ್ವಿ. ಅಲ್ ಹೋಗಿ ಯಾವ್ದೋ ತೋಟದ್ ಮನೇಲಿ ಯರ‍್ದೋ ಜೊತೆ ಪಿಸಿಪಿಸಿ ಮಾತಡ್ಕಂಡ್ ಬಂದ.

‘ಸಾ, ಇನ್ನೊಂದು ಪ್ರಾಬ್ಲಂ ಅಗ್ಬುಟ್ಟೈತೆ?ʼ

ಹೌದಾ?ಏನದು ನಂಜುಂಡ?’

ನಾ ಒಬ್ನೇ ಕೆಲ್ಸ ಮಾಡಕ್ಕಾಗಕಿಲ್ಲ, ಅಲ್ಲಿ ನಿಂತವ್ನೆ ನೋಡಿ ಆ ಬಡ್ಡಿ ಐದ, ಅವನ್ನೂ ಎಳ್ಕಂಡು ಬರಬೇಕಲ್ಲ

ಸರಿ ಕರಕೊಂಡ್ ಬಾ, ಅದಕ್ಕೇನಂತೆ, ಅವನಿಗೂ ಕೂಲಿ ಕೊಟ್ರಾಯ್ತು!ಅಂದೆ.

‘ಅಂಗೆಲ್ಲಾ ಬರೀ ಕೂಲಿಗೆ ಬರೋ ಆಸಾಮಿ ಅಲ್ಲ ಸಾ ಅವನು!ʼ

‘ಮತ್ತೆ?

‘ಈ ಬಾಗ್ಲು ಕಿಟಕಿ ಗೊರ್, ಕಿರ್ ಅಂದ್ರೆ ಎಣ್ಣೆ ಬಿಡಾಕಿಲ್ವಾ, ಅಂಗೆ ಈ ನನ್ಮಗ ಕಮಕ್ ಗಿಮಕ್ ಅನ್ನದ ಹಾಗೆ ಕೆಲಸ ಮಾಡ್ಬೇಕು ಅಂದ್ರೆ ಇವನ ಬಾಯ್ಗೂ ಒಂದಿಷ್ಟು ಎಣ್ಣೆ ಬಿಡ್ಬೇಕು ಸಾಅಂದ.

ಅಯ್ಯಯ್ಯೋ, ಈಗ ಲಾಕ್‌ಡೌನ್. ಎಣ್ಣೆ ಅಂಗಡಿ ಓಪನ್ ಇಲ್ವಲ್ಲೋ? ‘

ಏಯ್! ನೀವ್ಯಾಕ್ ತಲೆ ಕೆಡುಸ್ಕೊತೀರಿಆ ಬಾರೆ ಮೇಲೆ ಐತಲ್ಲ, ಆನಂದನ ಪಾಳ್ಯ, ಅಲ್ಲಿಗೆ ನನ್ ಬುಡಿ, ಅಲ್ಲಿ ಕಳ್ಳು ಕಾಸ್ತಾರೆ , ಇಲ್ಲ, ಆ ಬೋರ ಮಡ್ಕೆ ಕಟ್ಟಿ ತೆಂಗಿನ್ ನೀರಾ ತೆಗೆದು ಮಡಿಗರ‍್ತಾನೆ. ಈಟೊತ್ಗೆ ಹುಳಿಬಿಟ್ಕಂಡು ಐ ಕ್ಲಾಸ್ ಸೇಂದಿ ಆಗರ‍್ತದೆ. ನಾನ್ ಇವನಿಗೆ ಎಲ್ಲಾ ಶೇವೆ ಮಾಡ್ಸಿ ರ‍್ಕೊಂಡು ಬತ್ತೀನಿ..ʼ

ಎಲ್ಲಾ ನನ್ ಪ್ರಾರಂಭದ ಕರ್ಮ, ಅಂತ ನನ್ನ ದುರದೃಷ್ಟ ಹಳಿದುಕೊಂಡು ಹೂ ಹತ್ತು ಎಂದು ಅವನ್ನ ಕರಕೊಂಡ್ ಪಾಳ್ಯಕ್ಕೆ ಹೊರಟೆ.ಅಲ್ ಹೋದ್ಮೇಲೆ ನಂಜುಂಡಸಾ, ನಾನ್ ಅಲ್ಕಾ ನನ್‌ಮಗ ಅಂದ್ಕಬೇಡಿ, ನಾನ್ ಎಣ್ಣೆ ಮುಟ್ದೋನೇ ಅಲ್ಲಎಲ್ಲಾ ಆ ಸುವರ್‌ನನ್ ಮಗಂಗೆ.. ಎಲ್ಲಿ ಒಂದಿಷ್ಟು ಕಾಸ್ ಕೊಡಿಅಂದ. ಐನೂರು ತೆಗೆದೆ. ಸಾ, ಪೂರಾ ಸಾವ್ರ ಕೊಟ್ಬಿಡಿ, ಇಬ್ರದ್ದು.. ಅಲ್ಲಿಗೆ ನಾಳೆ ಏನೂ ಕೊಡೋ ಅಂಗಿರಲ್ಲಅಂದ. ಇನ್ನೂ ಒಂದು ಐನೂರರ ನೋಟು ಕೈ ಬಿಡ್ತು. ರಾತ್ರಿನೆ ಪೈಪ್ ತಗೊಂಡು ಬಂದ್ ಬಿಡುಎಂದೆ. ನಿಮಗ್ಯಾಕ್ ಓಗಿ ಸ್ವಾಮಿ, ನಾಳೆ ನಿಮ್ ಸೋಲಾರ್‌ಗೆ ಗ್ಯಾಚಾರ ಬಿಡುಸ್ತೀನಿಎಂದು ಅಭಯ ಕೊಟ್ಟ. ನಾನು ಸದ್ಯ ಒಂದು ಕೆಲಸ ಆಯ್ತು ಎಂದು ನಿಟ್ಟುಸಿರಿಟ್ಟು ವಾಪಸ್ ಬಂದೆ.

ಮಾರನೇ ದಿನ ಬೆಳಿಗ್ಗೆ ಕಾದದ್ದೇ ಕಾದದ್ದು.. ಸೂರ್ಯ ನೆತ್ತಿ ಮೇಲ್ ಬಂದ್ರೂ ನಂಜುಂಡನ ಸುಳಿವೇ ಇಲ್ಲ. ಎರಡು ಮೂರು ಸಾರಿ ಫೋನ್ ಮಾಡುದ್ರೂ ಎತ್ಲೇ ಇಲ್ಲ. ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು ಅಂತ ಮತ್ತೆ ನಾಕು ಸಾರಿ ಕಾಲ್ ಮಾಡುದ್ಮೇಲೆ ಆ ಕಡೆ ಫೋನ್ ರಿಸೀವ್ ಆಯ್ತು ಏನ್ ನಂಜುಂಡ ಇದು, ಬೆಳಿಗ್ಗೆನೇ ಬರ‍್ತೀನಿ ಅಂದೆ.. ಇಷ್ಟೊತ್ತಾದ್ರೂ ನಿನ್ ಪತ್ತೆನೇ ಇಲ್ಲ, ಫೋನೂ ಎತ್ತುತಾ ಇಲ್ಲ ಅಂತ ಸ್ವಲ್ಪ ಕಟುವಾಗಿಯೇ ಆಕ್ಷೇಪಿಸಿದೆ. ‘ಸಾ, ನಂಜುಂಡ ಅಲ್ಲ ಸಾ, ನಾನು ಎಂಕಟ್ರಾಮ..

ನಂಜುಂಡ ಎಲ್ಲಿ?

ಚಿತ್ತಾಗಿ ದಬಾಕ್ಕಂಡು ಮಲಗವ್ನೆ ಸಾ..ಮೈ ಮ್ಯಾಗೆ ಗ್ಯಾನನೇ ಇಲ್ಲ..

ಅಯ್ಯೋ ಅವನ, ಮತ್ತೆ ಕುಡಿಯಲ್ಲ ಅಂದ್ನಲ್ಲ..

ಅಷ್ಟೊತ್ಗೇ ಒಂದ್ ಬಾಟ್ಳು ಹಾಕಿದ್ದ.. ಅಮಲಲ್ಲಿ ಅಂಗಂದವ್ನೆ.. ನೀವು ಮುಖಕ್ಕೆ ಬಟ್ಟೆ ಕಟ್ಕೊಂಡಿದ್ರಲ್ಲ, ಅದ್ಕೆ ಬಡ್ಡಿಮಗಂದು ವಾಸ್ನೆ ಬಂದಿಲ್ಲ..ʼ

ಅಯ್ಯೋ ದೇವರೇ, ಮತ್ತೆ ಕೆಲಸಕ್ಕೆ ಬರಲ್ಲವಂತಾ’?

ಅಯ್ಯೋ ಕೆಲಸಕ್ ಎಲ್ ಬತ್ತಾನೆ ಸಾ? ಏಳೋ ಸ್ಥಿತೀಲೇ ಇಲ್ಲ ಬಡೆತ್ತದ್ದು..

ಮತ್ತೆ ಊರಿಗೆ ಹೇಗ್  ಬರ‍್ತಾನಂತೆ?ʼ

ಯಾವ್ ಊರ‍್ಗೆ ಸಾ? ಇದೇ ಅವನ್ ಎಂಡ್ರು ಮನೆ.. ನಿಮ್ ಜೊತೆ ಬಂದ್ರೆ ಪೋಲಿಸ್ನೋರು ರುಬ್ಬಕಿಲ್ಲ ಅಂತ ಪಿಲಾನ್ ಮಾಡಿ ಬಂದವ್ನೆ..

‘ಅಯ್ಯೋ ಒಂದ್ಸಾವ್ರ ಕೊಟ್ನಲ್ಲೋ?’

‘ಯಾವ್ ಸಾವ್ರ ಸಾ? ಕೊಟ್ಟೋನು ಕೋಡಂಗಿ, ಇಸ್ಕಂಡಾನು ನಂಜುಂಡಿ, ಲಾಕ್‌ಡೌನಲ್ಲಿ ಕೊಟ್ ದುಡ್ಡು ಕೇಳಂಗಿಲ್ಲ ಅಂತ ಸರ್ಕಾರ ಯೊಳಿಲ್ವಾ? ಎಳ್ಳುನೀರು ಬುಟ್‌ಬುಡಿ.. ಕಣ್ ಎಳೀತೈತೆ.. ಮಡುಗ್ಲಾ ಸಾ.. ಆ ಕಡೆಯಿಂದ ಕಾಲ್ ಕಟ್ ಆಯಿತು. ಬಡ್ಡಿಮಗ ನನ್ನೇ ಏಮರ‍್ಸಿ ಹೆಂಡತಿ, ಹೆಂಡ ಎರಡೂ ಹತ್ರ ಸಿಗೋ ಹಂಗ್ ಮಾಡ್ಕಂಡ್ ಬಿಟ್ನಲ್ಲ ಅಂತ ಹಲ್ಕಡಿದೆ. ಸೋಲಾರ್ ನನ್ನ ಕಡೆ ನೋಡಿ ಒಂದೆರಡು ಲೀಟರ್ ಹೆಚ್ಚೇ ಕಣ್ಣೀರು ಸುರಿಸಿ ಯಜಮಾನನ ಋಣ ತೀರುಸ್ತು.

‍ಲೇಖಕರು Avadhi

May 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: