ಇಂತಿ, ನಿಮ್ಮ ಅಲೆಕ್ಸಾ..

ಪ್ರಿಯದರ್ಶಿನಿ ಹಲಸಿನಹಳ್ಳಿ

ಸಭಾಂಗಣ ಹೆಣ್ಣು ಮಕ್ಕಳಿಂದಲೇ ತುಂಬಿ ತುಳುಕುತ್ತಿತ್ತು. ಮೊಟ್ಟಮೊದಲ ಬಾರಿಗೆ ಮಹಿಳಾ ಸಾಹಿತಿಯೋರ್ವರಿಗೆ ಅಂತಲೇ ಮೀಸಲಿಟ್ಟ ಸಮಾರಂಭ ಅದು. ಹಾಗಾಗಿಯೇ ಮಹಿಳೆಯರ ಹಾಜರಾತಿ ಜಾಸ್ತಿಯಿತ್ತು. ಚಂದದ ಸೀರೆಯುಟ್ಟು selfie ತೊಗೊತಾ ಖುಷಿಯಾಗಿ ನಲಿದಾಡ್ತಾ ಇದ್ರು ಮಹಿಳಾ ಸಾಹಿತಿಗಳು. ಆದರೆ ಇನ್ನೇನು ಕಾರ್ಯಕ್ರಮ ಶುರುವಾಗಬೇಕು ಅನ್ನುವಷ್ಟರಲ್ಲಿ ಏನೋ ಸಣ್ಣ ಏರುಪೇರು ಶುರುವಾಯ್ತು.

ಕಾರ್ಯಕ್ರಮದ ಮುಖ್ಯ ಸಂಚಾಲಕರು ಆಕಡೆ ಈಕಡೆ ಅಂಡು ಸುಟ್ಟ ಬೆಕ್ಕಿನಂತೆ ಓಡಾಡಿಕೊಂಡು phonescreenನಲ್ಲಿದ್ದ ಯಾವುದೋ messageನ್ನು zoom ಮಾಡಿ ಓದಿಕೊಂಡು ಗಾಬರಿಯಿಂದ ಪ್ರಶಸ್ತಿ ಪುರಸ್ಕೃತೆಯ ಮಾಜಿ ಪತಿಯ ಹತ್ತಿರ ಹೋಗಿ ಏನೋ ಗುಸುಗುಡುತಿದ್ರು. ಅವರು ಇವರ ಕೈಹಿಸುಕುತ್ತಾ ಏನೋ ಅಂದರು. ಕೊನೆಗೂ ನಿರ್ವಾಹಕರು ಮೈಕ್ ಹಿಡಿದು ಅತಿಥಿಗಳನ್ನು ವೇದಿಕೆಗೆ ಕರೆಯಲಾರಂಭಿಸಿದರು. ಪುರಸಭಾ ಅಧ್ಯಕ್ಷರು, ಕಂದಾಯ ಇಲಾಖೆಯ ಮುಖ್ಯ ಅಧಿಕಾರಿ, ಮಠದ ಮೇಲುಸ್ತುವಾರರು, ಯಾವುದೋ ಸ್ತ್ರೀ ಸಂಘದ ಕಾರ್ಯದರ್ಶಿನಿ ಇತ್ಯಾದಿ.

ಆದರೆ ಮುಖ್ಯವಾಗಿ ಪ್ರಶಸ್ತಿ ಪಡೆದ ಕಥೆಗಾರ್ತಿಯನ್ನೇ ವೇದಿಕೆಗೆ ಕರೆಯದೇ ಬಹಳ ಮುಜುಗರದಿಂದ ಸಣ್ಣ ಧ್ವನಿಯಲ್ಲಿ, ‘ಪ್ರಶಸ್ತಿ ಪುರಸ್ಕೃತರು ಈಗಷ್ಟೇ ಅನಿವಾರ್ಯವಾಗಿ ಇಲ್ಲಿಂದ ಹೋಗಬೇಕಾಗಿ ಬಂತು, ಅದಕ್ಕಾಗಿ ಅವರ ಅಭಿಮಾನಿಗಳಾದ ನೀವು ಆ ಪುಸ್ತಕದ ಕೆಲ ಕಥೆಯ ಆಯ್ದ ಭಾಗಗಳನ್ನು ಮೇಲೆ ಬಂದು ಓದಬೇಕು’ ಅಂದುಬಿಟ್ಟರು. ಮೊದಲಿಗೆ ಇದನ್ನು ಕೇಳಿ ಇಡೀ ಸಭಾಂಗಣ ಸ್ಥಬ್ಧವಾಗಿ ಹೋಯ್ತು. ಆಮೇಲೆ ಅಲ್ಲಿ ಇಲ್ಲಿ ಒಬ್ಬೊಬ್ಬರಾಗಿ ನಡುವಯಸ್ಸಿನ ಹೆಣ್ಣುಮಕ್ಕಳು ಬಂದು, ಪುಸ್ತಕದ ತಮಗಿಷ್ಟವಾದ ಆಯ್ದ ಭಾಗಗಳನ್ನು ಓದಿದರು.

ಮೊದಲಿಗೆ ಒಬ್ಬರು ಓದಿದ ‘ಅನಾಥ ಗರ್ಭ’ ಎಂಬ ಕಥೆಯ ಕೆಲ ಸಾಲುಗಳು ಹೀಗಿವೆ- ‘ತಾಯಿಯಾಗುತ್ತಿದ್ದೇನೆ.. ಇದು ಬೇಕೆಂದು ಪಡೆದದ್ದಾ ಅಂತ ಕೇಳಿದರೆ ಉತ್ತರ ಖಂಡಿತವಾಗಿ ಇಲ್ಲ ಎಂದೇ ಹೇಳುತ್ತಿದ್ದೆ. ಯಾವ ಹೆಣ್ಣಿಗೂ ಕೂಡಾ ಈ ಗಂಡೆಂಬ ಅನಿಷ್ಟ ಆಕೆಯ ಒಪ್ಪಿಗೆ ಅಥವಾ ಸಮ್ಮತಿ ಕೇಳಿ ಸೇರುತ್ತಾನೆ? ಅದು ಆತನ ಹಕ್ಕು, ಆತ ಪಡೆಯುವದಿಲ್ಲ, ಕಿತ್ತುಕೊಳ್ಳುತ್ತಾನೆ. ಆತರಹ ನಿರಂತರ ಕಿತ್ತುಕೊಂಡಿದ್ದರಿಂದ ಈ ಗರ್ಭ.

ತವರುಮನೆಗೆ ಬಂದಾಗ ಅವಳ ದೈಹಿಕ ಬದಲಾವಣೆ ಮತ್ತು ದೇಹದಲ್ಲಾದ ಸುಸ್ತನ್ನು ಕಂಡು ಅವಳಮ್ಮ ಒಮ್ಮೆ ವೈದ್ಯರಲ್ಲಿ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿದಾಗ ಪ್ರೆಗ್ನೆಂಟ್ ಎಂದು ತಿಳಿಯಿತು. ಸಂಭ್ರಮ, ಎಲ್ಲೆಲ್ಲಿಯೂ ಸಂಭ್ರಮ. ಅದನ್ನು ಇವಳು ಮೊದಲು ತನ್ನ ಗಂಡನಿಗೆ ತಿಳಿಸಲು ಫೋನ್ ಮಾಡಿದರೆ ಆತ ಮಾತಿಗೆ ಸಿಗಲಿಲ್ಲ. ಅದಕ್ಕೆ ಖುಷಿಯಿಂದ ಅತ್ತೆ-ಮಾವನಿಗೆ ತಿಳಿಸಿದಳು. ಸಂಜೆ ಪತಿರಾಯ ಕಾಲ್ ಮಾಡಿದಾಗ ವಿಷಯ ತಿಳಿದು ವಿಷ ಕಾರುತ್ತ ಸಿಟ್ಟು, ಆಕ್ರೋಶದಲ್ಲಿ ಕೂಗಾಡಿದರು.

ಮರುದಿನ ಬೆಳ್ಳಂಬೆಳಿಗ್ಗೆ ಪತಿರಾಯ ಥಟ್ಟನೆ ತವರುಮನೆಯಲ್ಲಿ ಹಾಜರ್. ಬೇಡವೆಂದರೂ ಬಲವಂತವಾಗಿ ಕರೆದುಕೊಂಡು ಬಂದು, ಬೇಡ ಬೇಡ ಎಂದು ಅಂಗಲಾಚಿ ಕೈಮುಗಿದು ಕಾಲಿಗೆ ಬಿದ್ದರೂ ಕೇಳದೆ, ಅತೀ ಕ್ರೂರಿಯಾಗಿ ಆಸ್ಪತ್ರೆಯ ಹಾಸಿಗೆಯ ಮೇಲೆ ಅನಾಥ ಶವದಂತೆ ಮಲಗಿಸಿ, ದೇಹದ ಒಳಗೆ ಆಗಷ್ಟೆ ಹೆಪ್ಪುಗಟ್ಟಿದ ಸಣ್ಣ ಜೀವವನ್ನು ತುಂಡುತುಂಡು ಮಾಡಿ ತೆಗೆದು ಕಸದ ಬುಟ್ಟಿಗೆ ಒಗೆಸಿ, ಚೊಚ್ಚಲ ಬಸುರಿಯ ಘಟಶ್ರಾದ್ಧ ಮಾಡಿಬಿಟ್ಟ. ಅಲ್ಲಿಂದಲೇ ಅಲೆಕ್ಸಾಳ ಸುಂದರ ಬದುಕು ಮತ್ತು ಮನಸ್ಸು ಸತ್ತಿತ್ತು. ಇಷ್ಟಕ್ಕೂ ಬಿಡದೇ ಆತನ ಆಜ್ಞೆಯಂತೆ ದಿನಕಳೆದಂತೆ ಅಲೆಕ್ಸಾಳ ಬಾಯಿಂದಲೇ ಎಲ್ಲರಿಗೂ ಸಹಜವಾಗಿ ಗರ್ಭಪಾತವಾಯಿತೆಂದು ಮಗುವಿನ ಚರಮಗೀತೆಯನ್ನು ಹೇಳಿಸಿದ.. ಹೀಗೆ ಸಾಗಿತ್ತು ಆ ಕಥೆ.

ಇನ್ನೊಬ್ಬರು ಬಂದು ‘ದೂರುವ ತೀರದ ಯಾತ್ರೆ’ ಎಂಬ ಕಥೆಯ ಸಾಲುಗಳನ್ನು ಆರ್ದ್ರ ದನಿಯಲ್ಲಿ ಹೀಗೆ ಓದಲಾರಂಭಿಸಿದರು- ನನ್ನ ಪತಿರಾಯನಿಗೆ ಇರುವ ದೊಡ್ಡ ರೋಗವೆಂದರೆ ಈ ಭೂಮಿಯ ಎಲ್ಲರೂ ಅವನನ್ನು ಉಘೇ ಉಘೇ ಎನ್ನಬೇಕು. ಹಾಗೆ ಮಾಡದೇ ಇದ್ದ ಕಾರಣ ನನ್ನ ತವರೂರಿಗೆ ಕಾರಲ್ಲಿ ಕರೆದೊಯ್ದು, ಆದರೆ ಮನೆಯ ಒಳಗೆ ಹೋಗದಂತೆ, ಅವರಿಗೂ ತಿಳಿಯದಂತೆ ಯಾವುದೋ ಹೋಟೆಲ್ ನಲ್ಲಿ ಊಟ ಮಾಡಿಸಿ, ಮತ್ತೆ ಪುನಃ ವಾಪಸ್ ಕರೆದುಕೊಂಡು ಬಂದ. ಸುಮಾರು ೨೦೦ ಕಿಲೋಮೀಟರ್ ಜರ್ನಿಯ ಪೂರ್ತಿ ನನ್ನ ತವರುಮನೆಯವರನ್ನು ಹೀನಾಮಾನ ಬೈದು, ಅವನಿಗೆ ಸಾಕೆನ್ನುವಷ್ಟು ಏರಿದ ದನಿಯಲ್ಲಿ ಅಬ್ಬರಿಸಿ, ನನ್ನನ್ನು ಅಳಿಸಿ ಅತೀ sadist ಆಗಿ ನಡೆದುಕೊಂಡಿದ್ದ. ಅವತ್ತಿನ ದಿನ ನಾನು ಕಾರಿಳಿದು ಓಡಿ, ಅಪ್ಪ-ಅಮ್ಮನಲ್ಲಿ ಇದ್ದ ಸತ್ಯ ಹೇಳಿದ್ದರೆ ಕಳೆದ ಹತ್ತು ವರ್ಷ ಜೀವಂತವಾಗಿ ಬದುಕಬಹುದಿತ್ತು.

ಇನ್ನೊಬ್ಬರು ಬಂದು ಮತ್ತೆ ನಾಲ್ಕು ಸಾಲು ಓದಿದರು- ಗಂಡು ಎಂದ ಮೇಲೆ ಸಂಶಯದ ರೋಗವಿರದಿದ್ದರೆ ಗಂಡು ಗಂಡಾಗುವದು ಹೇಗೆ?ನನಗೂ ನನ್ನ ಗಂಡನಿಗೂ ತುಂಬ ಒಡನಾಟ-ಪರಿಚಯ ಇರುವ ಒಬ್ಬರು ನಾವಿಬ್ಬರೂ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಂದು, ‘ಎಲ್ಲಿಗೆ ಹೊರಟ್ರಿ ಮೇಡಮ್? ಬನ್ನಿ ಡ್ರಾಪ್ ಮಾಡ್ತೇನೆ’ ಎಂದರು. ಜೊತೆಯಲ್ಲಿಯೇ ಇದ್ದ ಇವರು ‘ಹೋಗು ಅವರ ಜೊತೆ, ಯಾಕೆ ನಡೆದುಕೊಂಡು ಹೋಗ್ತೀಯಾ’ ಎನ್ನುತ್ತ ಬಲವಂತದಿಂದ ಅವರ ಸ್ಕೂಟರ್ ಮೇಲೆ ಕುಳ್ಳಿಸಿ ಕಳುಹಿಸಿದರು. ಮನೆಗೆ ಬೇಕಾದ ಸಾಮಾನಿನ ಚೀಲ ಹೊತ್ತು ವಾಪಸ್ ಬಂದಾಗ ಇವರು ಕೆಂಡಾಮಂಡಲನಾಗಿ ‘ಯಾಕೆ ಕೂತೆ ನೀನು ಅವರ ಸ್ಕೂಟರ್ ಮೇಲೆ?’ ಅಂದರು. ‘ನೀವೇ ಹೋಗು ಅಂದಿರಲ್ಲಾ’ ಎಂದೆ. ‘ನಾನು ನಿನ್ನನ್ನು ಪರೀಕ್ಷೆ ಮಾಡಿದ್ದು’ ಎಂದು ನನ್ನದು questionable character ಅಂದಿದ್ದರು..

ಅದೊಂದು ದಿನ ಅವರ  ಸಂಬಂಧಿಕರೊಬ್ಬರು ತೀರಿಕೊಂಡಾಗ ಅವರ ಶವದೊಂದಿಗೆ ಆ ತೀರಿಕೊಂಡವರ ಮಗ, ನಾನು ಹಾಗೂ ಮಗಳು ಅಂಬುಲೆನ್ಸ್ ನಲ್ಲಿ ಹೊರಟಿದ್ದೆವು. ಆಗ ಪತಿರಾಯನ ಕಾಲ್ ಬಂತು. ನಾನಾದರೂ ಇವರು ತೀರಿಕೊಂಡ ಚಿಕ್ಕಪ್ಪನ ಬಗ್ಗೆಯೋ ಅಥವಾ ಅವರ ಮಗನ ಬಗ್ಗೆಯೋ, ಊಟ ಮಾಡದ ನಮ್ಮೆಲ್ಲರ ಬಗ್ಗೆಯೋ ಕಾಳಜಿಯಿಂದ ವಿಚಾರಿಸುತ್ತಾರೆ ಅಂದುಕೊಂಡರೆ ಪತಿರಾಯ ಕೇಳಿದ ಪ್ರಶ್ನೆ ‘ನೀನು ಯಾರ ಪಕ್ಕ ಕೂತಿದ್ದೀ?’ಎಂದು. ಮೊದಲಿಗೆ ಅರ್ಥವಾಗಲಿಲ್ಲ. ಇಲ್ಲಿ ಶವದ ಪಕ್ಕದಲ್ಲಿ ಕೂಡಾ ಆತನಿಗೆ ನನ್ನ ಬಗ್ಗೆ ಇರುವ ಸಂಶಯದ, ಅತಿಕಾಮದ ರೋಗ ನೆನೆದೊಡನೆ ಅಸಹ್ಯವಾಗುತ್ತದೆ…

ಇದು ಯಾಕೋ ಪೂರ್ತಿ ಪುಸ್ತಕವೇ ಓದಿ ಮುಗಿಸುವ ಹಾಗೆ ಕೈಮೀರಿ ಹೋಗುತ್ತಿದೆ ಅನಿಸಿ ಕಾರ್ಯಕ್ರಮದ ಅಧ್ಯಕ್ಷರು ಮೈಕ್ ಹತ್ರ ಬಂದು ‘ಪೂರ್ತಿ ಪುಸ್ತಕ ಇಲ್ಲಿಯೇ ಓದುವದು ಸರಿಯಲ್ಲ. ಕೊನೆಯದಾಗಿ ಬಂದು ಯಾರಾದರೂ ನಾಲ್ಕು ಸಾಲುಗಳನ್ನು ಓದಿ’ ಎಂದು ತಮ್ಮ ಅಧ್ಯಕ್ಷೀಯ ಭಾಷಣದ ಹಾಳೆಗಳನ್ನು ಭದ್ರವಾಗಿ ಹಿಡಿದುಕೊಳ್ಳುತ್ತ ತಮ್ಮ ಆಸನದಲ್ಲಿ ಹೋಗಿ ಕುಳಿತರು.

ಕೊನೆಯ ಕಥೆಯ ನಾಲ್ಕು ಸಾಲುಗಳು ಹೀಗಿದ್ದವು-ಇಷ್ಟೊಂದು ಹಿಂಸೆಯ ನಡುವೆಯೂ ಅವಳಿಗೆ ಇದ್ದ ಸಣ್ಣ ಆಸೆಯೆಂದರೆ ಸೀರೆಯುಟ್ಟು ಮುಡಿತುಂಬ ಹೂವು ಮುಡಿಯುವದು. ಅದು ಅವಳ ಇಷ್ಟದ ಧಿರಿಸು. ಅಂದು ಗಂಡನ ಹತ್ತಿರ ಸಂಬಂಧಿಯ ಮದುವೆ. ಬೆಳಿಗ್ಗೆ ಬೇಗ ಎದ್ದು ಕೆಲಸವೆಲ್ಲ ಮುಗಿಸಿ ಚಂದದ ಸೀರೆ ಉಟ್ಟು ಮುಡಿ ತುಂಬಾ ಹೂವನ್ನು ಮುಡಿದುಕೊಂಡು ಇನ್ನೇನು ಅಲೆಕ್ಸಾ ಹೊರಡಬೇಕು ಅನ್ನುವಷ್ಟರಲ್ಲಿ ಪತಿರಾಯನ ಆರ್ಡರ್, ‘ಸೀರೆ ಬಿಚ್ಚು, ಯಾವುದಾದರೂ  ಚೂಡಿದಾರ ಹಾಕಿಕೊ, ಇಲ್ಲದಿದ್ದರೆ ಹೋಗೋದೇ ಬೇಡ’ಎಂದುಬಿಟ್ಟ. ಆಯ್ತು, ಸೀರೆ ಬಿಚ್ಚಿಟ್ಟು ಆತ ಹೇಳಿದ್ದನ್ನು ತೊಟ್ಟು ಹೊರಟಾಯ್ತು. ಆದರೆ ಇಲ್ಲಿ ಸೀರೆ ತೊಡದಿದ್ದ ನೋವಿಗಿಂತಲೂ ಮದುವೆಮನೆಯಲ್ಲಿ ಎಲ್ಲರ ಹತ್ರ ಯಾಕೆ ಸೀರೆ ಉಟ್ಟಿಲ್ಲ ಅಂದಾಗ ಏನೇನೊ ಸುಳ್ಳು ಹೇಳಬೇಕಾದ ಪರಿಸ್ಥಿತಿಗೆ ತುಂಬ ಯಾತನೆಪಟ್ಟಿದ್ದಳು ಅಲೆಕ್ಸಾ…

ಕಥೆಯೆಂಬ ಸಾಹಿತ್ಯ ರೂಪಕ್ಕೇನಾದರೂ ಜೀವ ಇದ್ದಿದ್ದರೆ ಬಹುಶಃ ಈ ಜೀವ ಪ್ರಪಂಚದಲ್ಲಿ ಅತೀ ನೋವು ಕಂಡ ಜೀವಿ ಈ ಕಥೆ. ಪಾಪ ಈ ಬಡಪಾಯಿ ಕಥೆಯ ಹೆಸರಲ್ಲಿ ಅದೆಷ್ಟು ಪಾತ್ರಗಳು ಜೀವ ಪಡೆದು, ನರಳಾಡಿ, ಉರಿದು, ಬೆಂದು ಹೋಗಿವೆ. ಮತ್ತೆ ಮತ್ತೆ ಹುಟ್ಟಿ ಅದಾವುದೋ ಪುಸ್ತಕದ ಗರ್ಭ ಸೇರಿ ನೂರಾರು ಜನರ ನಾಲಿಗೆ, ಬುದ್ಧಿ ಹೊಕ್ಕು ಮತ್ತೆ ಅರೆಬೆಂದು ಮರುಹುಟ್ಟು ಪಡೆದು ಪಾತ್ರ-ಹೊಸಪಾತ್ರಗಳಾಗಿ ಮತ್ತೆ ಹೊಸ ಸೃಷ್ಟಿಯಾಗಿವೆ. ಆದರೆ ಈ ಕಥೆ ಎನ್ನುವ ಜೀವಿ ಮಾತ್ರ ಆ ಎಲ್ಲಾ ಪಾತ್ರದ ನೋವನ್ನು, ಸಂತೋಷವನ್ನು ತನ್ನ ಸೆರಗಿನಲ್ಲೋ ಕರವಸ್ತ್ರ ದಲ್ಲೋ ಸುತ್ತಿಟ್ಟುಕೊಂಡು ಆ ಪಾತ್ರದಷ್ಟೇ ತೀವ್ರವಾಗಿ ಬದುಕಿರುತ್ತದೆ. ಈ ಪ್ರಶಸ್ತಿ ಬಂದಿದ್ದ, ಅವರುಗಳು ಮೇಲೆ ಓದಿದ ಎಲ್ಲಾ ಕಥೆಯ ಹೆಣ್ಣಿನ ಪಾತ್ರಕ್ಕೆ ನಾನು ‘ಅಲೆಕ್ಸಾ’ ಎಂದೇ ಹೆಸರಿಟ್ಟಿದ್ದೇನೆ.

ಹೆಸರು ನಾವು ಬದುಕಿದ ರೀತಿಯಿಂದ ಅನ್ವರ್ಥವಾಗಬೇಕು. ಇಲ್ಲಿ ಅದಾಗಲು ಸಾಧ್ಯವಿರದ ಕಾರಣ ಈ ಹೆಸರು ನನ್ನ ಪಾತ್ರಗಳಿಗೆ ಸರಿಯಾಗಿಯೇ ಇದೆ. ಈ ನಾಮಕರಣ ಆದದ್ದು ಒಂದು ವಿಶೇಷವೆ. ಆವತ್ತು ರಾತ್ರಿ ಟಿವಿ ನೋಡ್ತಾ ಇದ್ದಾಗ ಅಮೇಜಾನ್‌ನ smart speakerನ ಜಾಹೀರಾತು ತೋರಿಸ್ತಾ ಇದ್ರು. ಅದನ್ನು ನೋಡಿ ನನಗೆ- ಇದಕ್ಕೊಂದು ಜೀವ ಇದ್ದಿದ್ದರೆ, ಇದು  ಭೂಮಿಯ ಮೇಲಿನ ಹೆಣ್ಣಿನ ಪ್ರತಿರೂಪವೋ, ಯಾವುದೋ ಕಾಲದ ಶಾಪಗ್ರಸ್ಥ ಅಪ್ಸರೆಯೋ, ಅನ್ನಿಸಿಬಿಡ್ತು. ಅದರ switch ಒತ್ತಿ –ಅಲೆಕ್ಸಾ ಆ ಹಾಡು ಹಾಡು, ಈ message ಅವರಿಗೆ ತಿಳಿಸು, ನನಗೆ ಸಿಟ್ಟು ಬಂದಿದೆ ಅಂತ ಹೇಳು, ಆ recipe ತಿಳಿಸು ಅಂತೆಲ್ಲಾ command ಕೊಟ್ಟಕೂಡಲೇ ಚಾಚುತಪ್ಪದೆ ತನ್ನ ಕೆಲಸಗಳನ್ನು ಮಾಡುತ್ತದೆ ಈ ಅಲೆಕ್ಸಾ. ಇದೇ ರೀತಿ ಅಲ್ವಾ ಹಿಂದಿನಿಂದಲೂ ಹೆಣ್ಣನ್ನು ನಡೆಸಿಕೊಂಡ (ಬಳಸಿಕೊಂಡ) ರೀತಿ. ಹಾಗಾಗಿಯೇ ಆವತ್ತೇ ಈ ನನ್ನ ಪಾತ್ರಗಳಿಗೆ ಅಲೆಕ್ಸಾ ಎಂದು ನಾಮಕರಣ ಮಾಡಿಬಿಟ್ಟೆ.

ಅಲೆಕ್ಸಾಳ ಹಿಂದಿರುವ ಕಥೆಯ ಕಥೆಗೆ ಬರುವದಾದರೆ ಅಲ್ಲಿಯೂ ಹೆಣ್ಣಿದ್ದಾಳೆ. ಅವಳಿಗೂ ಅಲೆಕ್ಸಾ ಎಂದೇ ಕರೆಯುತ್ತೇನೆ. ಆಕೆ ಸುಂದರ ಹಳ್ಳಿಯ ಶಿಕ್ಷಿತ ತಂದೆ-ತಾಯಿಯ ಹಿರಿಯ ಮಗಳು. ಮಳೆ, ಛಳಿ, ಕಾಡು, ಉಂಬಳ, ಝರಿ, ತೊರೆಗಳನ್ನು ತುಂಬಿಕೊಂಡಿರುವ ಮಲೆನಾಡಿನ ಪುಟ್ಟಹಳ್ಳಿಯ ಮಗಳು. ಹೆತ್ತಿದ್ದು ಹೆಣ್ಣಾದ ಅಮ್ಮ, ಯಾಕಂದ್ರೆ ಅಮ್ಮ ಹೆಣ್ಣು, ಹೆಣ್ಣು ಹೆರಬೇಕು. ಆದರೆ ಅಲೆಕ್ಸಾಳನ್ನು ಹೆಣ್ಣಾಗಿ ಹೆತ್ತಿದ್ದಕ್ಕೆ ಮನೆಮಂದಿಯ ಒಗರು ಮಾತು. ಅದಕ್ಕೆ ನಮ್ಮ ಅಲೆಕ್ಸಾ ಏನು ತಾನೇ ಮಾಡಬಹುದು? ಯಾರಾದರೂ ನನ್ನ ಈ ಬಣ್ಣ, ಈ ರೂಪ, ಇಂಥಾ ದಿನ, ಇಂಥಾ ಗಳಿಗೆ, ಇಂಥವರ ಮನೆಯಲ್ಲಿ ಗಂಡಾಗಿಯೋ-ಹೆಣ್ಣಾಗಿಯೋ ಹುಟ್ಟಬೇಕು ಎಂದು ಅರ್ಜಿ ಹಾಕಿ ಪರೀಕ್ಷೆ ಬರೆದು interviewನು ಕೊಟ್ಟು ಭೂಮಿಗೆ ಬರಲು ಸಾಧ್ಯವಾ?

ನಮ್ಮೆಲ್ಲರಂತೆ ಸಹಜ, ಸುಂದರ ಬಾಲ್ಯ ಆಕೆಯದ್ದು. ಮಾರ್ಕೆಟ್‌ನಲ್ಲಿ ಸಿಗುವ ಬಣ್ಣದ ಸೇಬು, ಚಿಕ್ಕು, ದ್ರಾಕ್ಷಿ ಹಣ್ಣುಗಳನ್ನು ತಿಂದಿದ್ದರೂ ಕಾಡು-ಮೇಡು ಅಲೆದು ಬಿಕ್ಕೆ, ಸಳ್ಳೆ, ನೇರಳೆ, ಪಿಳ್ಳೆ, ಅರ್ಚಳೆ, ಕೌಳಿ, ಮುಳ್ಳೇ ಇಂಥ ಮುಂತಾದ ಹಣ್ಣುಗಳನ್ನು ಮರ-ಗಿಡ ಹತ್ತಿ, ಕೊಯ್ದು, ತಿಂದು ಗಂಡು-ಹೆಣ್ಣು ಅನ್ನೊ ಯಾವ ಭೇದ ಭಾವವಿಲ್ಲದ, ಆಡಿ ನಲಿದು ಬೆಳೆದ ಹುಡುಗಿ. ಅಲ್ಲಿ ಇಲ್ಲಿ ಬಣ್ಣ ಕಪ್ಪು, ರೂಪ ಸುಮಾರು ಅಂದಿದ್ದ ಮಾತು ಮನಸ್ಸಿನಲ್ಲಿ ಕುಳಿತುಬಿಟ್ಟಿತು.

ಇನ್ನು ಬೆಳೆಯುತ್ತಾ-ಬೆಳೆಯುತ್ತಾ ಶಾಲೆ, ಆಟ-ಪಾಠಗಳಲ್ಲಿ ತನ್ನನ್ನು ಚನ್ನಾಗಿ ತೊಡಗಿಸಿಕೊಂಡು ಅಮೀರ್‌ಖಾನ್,  ಮಾಧುರಿ ದೀಕ್ಷಿತ್, ಮಧುಬಾಲಾ, ಶಮ್ಮಿಕಪೂರ್‌ರಿಂದ ಶಾರುಖ್‌ಖಾನರ ಎಲ್ಲ ಸಿನಿಮಾಗಳನ್ನು ನೋಡುತ್ತಾ ಚಿತ್ರಗೀತೆಗಳಲ್ಲಿ ಮೈಮರೆಯೋ ಜೀವ ನಮ್ಮ ಅಲೆಕ್ಸಾ. ಇಂಥದ್ದು ಬೇಕು, ಹೀಗೇ ಆಗಬೇಕು ಅಂತೆಲ್ಲಾ ಯಾವ ನಿರ್ಬಂಧವೂ ಇರದೆ ಸಿಕ್ಕಿದ್ದರಲ್ಲಿ, ಕೊಟ್ಟಿದ್ದರಲ್ಲಿ ಖುಷಿಯಾಗಿ ಸ್ನಾತಕೋತ್ತರ ಪದವಿವರೆಗೂ ಓದಿ ನಂತರ ತನ್ನ ಇಷ್ಟದ teaching professionಗೂ ಬಂದು ನಿಂತಳು. ಇಲ್ಲಿಂದ ಮುಂದೆ ಬದುಕು ಅವಳ ಕೈ ತಪ್ಪಿ ನೂರಾರು ಮೈಲಿ ದೂರದ, ಯಾಕೆ ಈ ಸಮಾರಂಭಕ್ಕೂ ತಂದು ನಿಲ್ಲಿಸಿದೆ.

ಹುಟ್ಟಿದ್ದು ಹೆಣ್ಣು, ಯಾವತ್ತಿದ್ದರೂ ಖಾಲಿ ಮಾಡಲೇಬೇಕಾದ ವಸ್ತು. ಆದಷ್ಟು ಬೇಗ ಖಾಲಿ ಮಾಡಿದರೆ ಹೆತ್ತವರಿಗೆ ಒಂದು ನಿರಾಳ ಅಂತ ಅಲೆಕ್ಸಾಳ ಅಪ್ಪ ೨೨ ವರ್ಷಕ್ಕೆ ಕನ್ಯಾಸೆರೆ ಬಿಡಿಸುವ ಮಹಾನ್ ನಾಟಕಕ್ಕೆ ನಾಂದಿ ಹಾಡಿ, ಮಾಡುತ್ತಿದ್ದ ಕೆಲಸವನ್ನೂ ಬಿಡಿಸಿ, ಸುರಸುಂದರನಾದ ಅಳಿಯನನ್ನು ಆಯ್ಕೆಮಾಡಿ ನಿಜಾರ್ಥದಲ್ಲಿ ಮಗಳನ್ನು ಕೈತೊಳೆದುಕೊಂಡ. ಅಲ್ಲಿಂದ ಮುಂದೆ ಅಲೆಕ್ಸಾಳ ಬದುಕು ಹೀಗಿದ್ದರೂ ಯಾರಿಗೂ ತೀರ ಆಪ್ತವಾಗಿ ಗೊತ್ತಾಗದ ಹಾಗೆ ಎಲ್ಲವೂ ಸರಿಯಿರುವ ಥರ ಶೋಕೇಸ್‌ನಲ್ಲಿ ಇಟ್ಟು ನಿಟ್ಟುಸಿರು ಬಿಟ್ಟರು. ಆದರೆ ಅವಳ ಗಂಡನ ಮನೆ ಹೊರನೋಟಕ್ಕೆ ಎಲ್ಲಾ ಮನೆಯ ತರಹವೇ ಇದ್ದರೂ ಅಲ್ಲಿಯ ಮನುಷ್ಯರು ಮಾತ್ರ ಒಳಗಡೆಯಿಂದ ತುಂಬಾನೇ ಬೇರೆ ತಳಿಯ ಮನುಷ್ಯರು.

ಅವರ ಮನೆಯಲ್ಲಿ ಯಾವಾಗಲೂ ಜಗಳ. ದೊಡ್ಡ ಧ್ವನಿಯಲ್ಲಿ ಕಿರುಚಾಟ, ಒಬ್ಬರು ಗೋಡೆಗೆ ಹಣೆ ಬಡಿದುಕೊಂಡು ಸಾಯುತ್ತೇನೆ ಎಂದರೆ, ಇನ್ನೊಬ್ಬರು ತನಗೆ ಜೀವನವೇ ಸಾಕಾಗಿದೆ ಅಂತ ಆತ್ಮಹತ್ಯೆಯ ಬೆದರಿಕೆ ಮತ್ತು ಸಂಜೆ ಊಟದ ಹೊತ್ತಿಗೆ ಏನೂ ಆಗಿಲ್ಲವೆಂಬಂಥ ನೀರವ ಮೌನ. ಇಂಥ ವಿಚಿತ್ರ ಜೀವಿಗಳ ಮಧ್ಯೆ ಅಲೆಕ್ಸಾ ಮಾತ್ರ ಹೆದರಿ, ಬಾಯಿ ಕಟ್ಟಿ ತೋಟ ಸೇರಿ ನೆಲಕ್ಕೆ ಕುಸಿದು ಯಾರಿಗೂ ಕೇಳದಂತೆ ಅಳುತ್ತಿದ್ದಳು. ಅವರಿಗೆ ಜಗಳವಾಡದಿರುವದು ಮುಖ್ಯವಲ್ಲ. ಆದರೆ ಜಗಳ ಅಕ್ಕಪಕ್ಕದ ಮನೆಯವರಿಗೆ ಕೇಳಬಾರದು ಅಷ್ಟೆ.

ಪಾಪ, ನಮ್ಮ ಅಲೆಕ್ಸಾ ಬಾಲ್ಯದಿಂದ ಪೆಟ್ಟು ತಿನ್ನದ ಯಾರಿಂದಲೂ ಕೆಟ್ಟದಾಗಿ ಬೈಸಿಕೊಳ್ಳದ ಹುಡುಗಿ. ಆದರೆ ಈಗ ತಾನುಡುವ ಬಟ್ಟೆ, ಊಟ, ತಿಂಡಿ, ನಿದ್ರೆ ಎಲ್ಲವನ್ನೂ ಪತಿರಾಯನ ಆಜ್ನೆಯಂತೆ ನಡೆಯಬೇಕಲ್ಲ.ಹಾಗೇ ನಡೆದುಕೊಂಡಳು ಕೂಡಾ. ಈ ಹುಚ್ಚು ಹುಡುಗಿಗೆ ಎಲ್ಲರ ತರಹನೇ ಆಸೆ-ಕಲ್ಪನೆ ಇತ್ತು ತನ್ನ ಮನದೊಡೆಯ ಹಾಗಿರಬೇಕು, ಹೀಗಿರಬೇಕು ಎಂದೆಲ್ಲ. ಸ್ವಲ್ಪವಾದರೂ ಓದುವ ಹವ್ಯಾಸವಿರಬೇಕು, ಜೊತೆಯಾಗಿ ಸಿನೆಮಾ ನೋಡಬೇಕು, ಆಗಾಗ ಪ್ರವಾಸವಿರಬೇಕು, ಬದುಕಲ್ಲಿ ಒಟ್ಟಾರೆ ಸಣ್ಣ-ಪುಟ್ಟ ಖುಷಿಗಳ ಅರಮನೆ ಕಟ್ಟಿ ಅಲ್ಲಿಯ ರಾಜ-ರಾಣಿ ಆಗುವ ಆಸೆ.

ಆದರೆ ಪತಿರಾಯರಿಗೆ ಪುಸ್ತಕ, ಸಿನೆಮಾ ಪ್ರವಾಸವೆಲ್ಲವೂ unproductive ಆದ, ಸುಸಂಸ್ಕೃತರಲ್ಲದವರು ಮಾಡುವ ಕೆಲಸ. ಅವರ ಪ್ರಕಾರ ಈ ಸುಸಂಸ್ಕೃತರು ಅಂದರೆ ಅಮಾವಾಸ್ಯೆ-ಹುಣ್ಣಿಮೆ ದಿನ ಉಪವಾಸ, ಸೋಮವಾರ-ಶುಕ್ರವಾರ ಈರುಳ್ಳಿ ತಿನ್ನಬಾರದು, ಮಡಿ-ಮೈಲಿಗೆಗಳನ್ನು ಪಾಲಿಸುವ, ಬೆಳಿಗ್ಗೆ ಸ್ನಾನ ಮಾಡಿ ಗಂಟೆ ಅಲುಗಾಡಿಸಿ ಮಡಿಯಲ್ಲಿ ಪೂಜೆ ಮಾಡಿ ನಂತರ ದಿನವಿಡೀ ಎಲ್ಲರನ್ನು ಬೈಯುತ್ತ, ಎಲ್ಲರೊಟ್ಟಿಗೂ ಜಗಳವಾಡುತ್ತ, ಕಂಡಕಂಡ ಹೆಣ್ಣುಮಕ್ಕಳ ಉಬ್ಬುತಗ್ಗುಗಳನ್ನು ನೋಡಿ ಹಿಂಬದಿಯಿಂದ ಅವರ ಚಾರಿತ್ರ್ಯದ ಸರ್ಟಿಫಿಕೇಟನ್ನು ಫ್ರೀಯಾಗಿ distribute ಮಾಡುತ್ತ, ತನ್ನಿಂದಲೇ ಲೋಕದ ಮಳೆ-ಬೆಳೆ ಎಂದು ಊರೆಲ್ಲ ಹೇಳಿಕೊಳ್ಳುತ್ತ, ಅದನ್ನು ಪ್ರಶ್ನಿಸಿದವರನ್ನು ದ್ವೇಷಿಸುತ್ತಾ ಇರಬೇಕು.

ನೂರಾ ಎಂಟು ಗಾಯತ್ರಿ ಮಾಡಿ ಅನಂತರ ಬೋ-ಮಗ ಸೂ-ಮಗ ಬಳಸದೇ ಹೋದರೆ ಮಾಡಿದ ಜಪಕ್ಕಾದರೂ ಮರ್ಯಾದೆ ಬೇಡವೇ?ಎಂದು ತಣ್ಣಗೆ ತೀರ್ಥ ಕುಡಿದು, ಪ್ರಸಾದ ತಿಂದು ಮಲಗಿಬಿಡಬೇಕು. ಆದರೆ ಅಲೆಕ್ಸಾಗೆ ಗೊತ್ತಿದ್ದುದು ಸಂಸ್ಕಾರ ಎಂಬುದು ನಡತೆಗೆ, ಅಂತರಂಗದ ಸೌಂದರ್ಯಕ್ಕೆ, ಸತ್ಯವಾದ ಮಾತಿಗೆ, ಶುದ್ಧ ಮನಸ್ಸಿಗೆ, ನಿಷ್ಕಲ್ಮಶ ಪ್ರೀತಿಗೆ ಸಂಬಂಧಿಸಿದ ವಿಷಯ. ಉಪವಾಸ, ಪೂಜೆ, ಪುನಸ್ಕಾರಗಳೇನಿದ್ದರೂ ಆಚರಣೆ.

Ritual is not a culture. ಆದರೆ ಇದನ್ನು ಹೇಳಹೊರಟರೆ ಮಾಂಸದಂಗಡಿಯಲ್ಲಿ ಪೂಜಾಸಾಮಗ್ರಿ ಕೇಳಿದರೆ ಆಗುವ ಆಭಾಸದಷ್ಟೇ ಸಹಜವಾಗಿ ಜಗಳ ಆಡುತ್ತಿದ್ದರು ಮನೆಮಂದಿ. ಕಾವಿ, ಮಡಿ ಬಟ್ಟೆ, ಬಾಯಲ್ಲಿ ಸಂಸ್ಕೃತ, ಕಿವಿಯಲ್ಲಿ ಹೂವು, ಹಣೆಯಲ್ಲಿ ಗಂಧ ಇಟ್ಟು ಎದೆಗೊಂದು ನಾವು ಮರ್ಯಾದಸ್ಥರು, ಸುಸಂಸ್ಕೃತರು, ಮಾನಕ್ಕಾಗಿ ಅಂಜುವವರು, ಸ್ವಲ್ಪ ನಾಗರೀಕರು ಎಂಬ ಬೋರ್ಡ ತೂಗು ಹಾಕಿಕೊಂಡು ನಾವು ಶ್ರೇಷ್ಠರು ಎಂಬ ಬಿರುದನ್ನು ಸ್ವತಃ ನೀಡಿಕೊಂಡ ಪರಂಪರೆ ಅವರದ್ದು.

ಇಷ್ಟೆಲ್ಲಾ ಹುಚ್ಚಾಟದ ನಡುವೆ ಅಲೆಕ್ಸಾಳ ಎಲ್ಲ ಆಸೆ-ಕನಸಿಗೂ ಪತಿರಾಯರು ತುಳಸಿನೀರು ಬಿಡಿಸಿ, ಸಿಕ್ಕಿದ ಕೆಲಸವನ್ನೂ ಬಿಡಿಸಿ ಕಾಯಾ-ವಾಚಾ-ಮನಸಾ ತನ್ನ ದೇಹ, ಮನಸ್ಸಿಗೆ ಬೇಕಾದ ಒಂಡು commodityಯಾಗಿ ಮಾಡಿಕೊಂಡ. ಅಷ್ಟೇ ಯಾಕೆ ಅವಳ facebookನ್ನೂ ತಾನೇ ಹ್ಯಾಂಡಲ್ ಮಾಡುತ್ತ, ಯಾರಿಗೆ ಕಾಲ್ ಮಾಡಬೇಕು, ಯಾರಿಗೆ ಮಾಡಬಾರದು, ಮಾಡಿದರೆ ಯಾರ ಹತ್ತಿರ ಯಾವ ಮಾತು ಆಡಬೇಕು, ಎಷ್ಟು ಬೈಯಬೇಕು, ಎಷ್ಟು ನೋಯಿಸಬೇಕು ಎಂಬುದರಾದಿಯಾಗಿ ಹಿಡಿದು ನಿದ್ರೆ ಬಾರದಿದ್ದರೂ, ಹಸಿವಾಗದಿದ್ದರೂ, ದೇಹ ಸ್ಪಂದಿಸದಿದ್ದರೂ, ತಾನು ಹೇಳಿದಂತೆ ಕೇಳಬೇಕು, ಇಲ್ಲವಾದರೆ ತಾನು ನಿನ್ನ ಬಿಟ್ಟೆ ಎಂಬುದಾಗಿ ಹೆದರಿಸಿ ಸಂಪೂರ್ಣವಾಗಿ ತನ್ನ ತೆಕ್ಕೆಗೆ ಪಡೆದು, ಅವಳ ಕಣ್ಣುಗಳಿಗೆ ಬಟ್ಟೆ ಕಟ್ಟಿ, ಬುದ್ಧಿಗೆ ಬೀಗ ಹಾಕಿ, ಚಾವಿಯನ್ನು ತನ್ನ ಲಾಡಿಗೆ ಕಟ್ಟಿ, ಸಂಸಾರ ಎಂಬ ಬಾವಿಯಲ್ಲಿ ಈಜಲು ಬಿಟ್ಟ.

ಮದುವೆಯಾದಂದಿನಿಂದ ಅಲೆಕ್ಸಾಳ ಗಂಡ ಆಕೆಯನ್ನು ತನ್ನ ಅಂಕೆಯಲ್ಲಿರುವ ಒಂದು ಪ್ರಾಣಿಯಂತೆ ಕೈ, ಕಾಲು, ಮನಸ್ಸು, ಬುದ್ಧಿಗೆ ಸರಪಳಿ ಕಟ್ಟಿ, ಆಕೆ ಎಂದಿಗೂ ತನ್ನತನ ತೋರದಂತೆ, ಅವನ ಅಂಕುಶ ಆಡಿಸಿದಂತೆ ಇರಬೇಕೆಂದು ಬಂಧಿಸಿದ್ದ. ಹಾಗಾಗಿ ಅಲೆಕ್ಸಾಳ ಹೊರಪ್ರಪಂಚದ ಎಲ್ಲ ಸಂಪರ್ಕದ ಕೊಂಡಿಯನ್ನು ಮುರಿದುಬಿಟ್ಟಿದ್ದ.

ನಮ್ಮ ಅಲೆಕ್ಸಾ ಬಾಲ್ಯದಿಂದಲೇ ಅಲ್ಪ-ಸ್ವಲ್ಪ ಓದಿನ ಅಭ್ಯಾಸವಿದ್ದವಳು. ಹೀಗಾಗಿ ಕನ್ನಡ ಅವಳ ಆಸ್ಥೆ. ಮುಂದೆ ಮದುವೆಯಾಗಿ ಗಂಡನ ಮನೆಸೇರಿ ಇದ್ದ ಒಂದು ಕೆಲಸವನ್ನೂ ಬಿಟ್ಟು ಪತಿರಾಯ ಮತ್ತು ಅವನ ಮನೆಯವರ ಪರಮಸೇವೆಗೆ ಟೊಂಕಕಟ್ಟಿ ನಿಂತಮೇಲೆ ಉಳಿದ ಬಿಡುವಿನ ಸಮಯದಲ್ಲಿ ಪತ್ರಿಕೆಗಳಿಗೆ ಅಂಕಣ ಬರೆಯಲು ಪ್ರಾರಂಭಿಸಿದಳು. ಅಂಕಣ ಅಂದರೇನು? ಪತಿರಾಯನ ಕೃಪಾಪೋಷಿತೆಯಾಗಿ ಆತ ಹೇಳಿದ ವಿಷಯದ ಬಗ್ಗೆ ಬರೆದು ಸಾಹಿತ್ಯದ ಗಂಧಗಾಳಿಯೂ ಇರದ ಆ ಕಪಿರಾಯನ ಕೈಯಿಂದ ಅಂಕಣವನ್ನು ಮತ್ತೆ ತಿದ್ದಿಸಿ ಯಾವುದಾದರೂ newspaperಗೆ ಕಳುಹಿಸಿಬಿಡೋದು.

ಮುಂದೆ ಅಲೆಕ್ಸಾ regular ಅಂಕಣಕಾರ್ತಿಯಾದಾಗ ಮತ್ತೆ ನಮ್ಮ ಕಪಿರಾಯನಿಗೆ ಸರ್ವಾಂಗ ಉರಿ ಶುರುವಾಯ್ತು. ತನ್ನ ಹೆಂಡತಿ ಫೇಮಸ್ ಆಗ್ತಾ ಇದ್ದಾಳಲ್ಲಾ ಅಂತ. ಹಾಗಾಗಿ ಆಕೆ ತನ್ನ ಅಂಕಣದ ಜೊತೆಗೆ ಪತಿರಾಯ ಹೇಳಿದ subjectನ ಕುರಿತು ಆತನ ಹೆಸರಿನಲ್ಲಿ ತಾನೇ ಲೇಖನ ಬರೆದು ಅವನ ಹೆಸರಲ್ಲಿ ಪ್ರಕಟಿಸುತ್ತಿದ್ದಳು. ಅಷ್ಟೇ ಅಲ್ಲದೆ ಅತನೇ ಆಕೆಯ ಅಂಕಣದಲ್ಲಿ ಆಕೆಯ ಹೆಸರಿನ ಜೊತೆಗೆ ಅವನ ಹುಟ್ಟೂರಿನ ಹೆಸರೂ ಸೇರಿಸಿ ತನ್ನ ಊರಿನ ಕೀರ್ತಿ ಪತಾಕೆ ಬಾನೆತ್ತರಕ್ಕೆ ಹಾರಿಸಿದೆ ಎಂದು ಬೀಗಿದ್ದ.

ಒಂದು ವೇಳೆ ಅಲೆಕ್ಸಾಳಲ್ಲಿ ಬರೆಯುವ ಕಲೆ ಬಂದಿದ್ದು ಅವಳಿಗೆ ಓದುವ ಅಭ್ಯಾಸ ಚಿಕ್ಕಂದಿನಲ್ಲೇ ಬೆಳೆಸಿದ್ದ ಆಕೆಯ ತಂದೆಯಿಂದ ಮತ್ತು ಅವಳಲ್ಲಿ ಭಾವಸಂಚಾರದ ಏರಿಳಿತವನ್ನು ನಿಯಮಿತವಾಗಿ ಸೃಜಿಸಿದ ಆಕೆಯ ಹುಟ್ಟೂರು ಮತ್ತು ಬೆಳೆದ ವಾತಾವರಣದಿಂದ. ಯತಾರ್ಥದಲ್ಲಿ ಆಕೆಯ ಅಂಕಣದಲ್ಲಿ ಹೆಸರನ್ನು ಸೇರಿಸಬೇಕು ಎಂದಾದರೆ ಆಕೆಯ ಹುಟ್ಟೂರಿನ ಹೆಸರು ಸೇರಬೇಕು.

ಈ ನಡುವೆ ಮಕ್ಕಳಾಗುವದು ಬೇಡ ಎಂದು ಐದು ವರ್ಷ ಆಕೆಗೆ ಗರ್ಭನಿರೋದಕವನ್ನು ನುಂಗಿಸಿ, ಮನೆಯವರು ಮಕ್ಕಳಾಗಲಿಲ್ಲವಲ್ಲ ಎಂದು ಕೇಳಿದಾಗ ತನಗೆ ಏನೂ ತಿಳಿಯದು ಎಂಬಂತಿರುತ್ತಿದ್ದ ಪತಿರಾಯ. ಕಂಡಕಂಡ ಮಠಕ್ಕೆ, ದೇವರಿಗೆ ಹರಕೆ ಮಾಡಿಸಿ, ಅದ್ಯಾವುದೋ ಡಾಕ್ಟರ್ ಮುಂದೆ ಕುಳ್ಳಿಸಿ ಏನು ನಿಮ್ಮಲ್ಲಿ ತೊಂದರೆ ಎಂದು ತನ್ನಲ್ಲಿಯೇ ಏನೋ ತೊಂದರೆಯಿದೆ ಎಂಬಂತೆ counseling ಕೂಡಾ ಮಾಡಿಸಿದ್ರು ಅತ್ತೆ-ಮಾವ. ಇದರಾಚೆ ನಡೆಯುತ್ತಿದ್ದ ನಿತ್ಯದ ಜಗಳ, ಮಾಡಿದಷ್ಟು ಮುಗಿಯದ ಮನೆಗೆಲಸ, ಅತ್ತೆ-ಮಾವಂದಿರ ಸೇವೆ, ಮನೆಯಲ್ಲಾಗುವ ಹಬ್ಬ-ಶ್ರಾದ್ಧದಂತ ಕಾರ್ಯಕ್ರಮ ಸಾಂಗವಾಗಿ ಸಾಗಿತ್ತು. ಆದರೆ ಇಷ್ಟೆಲ್ಲಾ ಮಾಡಿಯೂ ಅಲೆಕ್ಸಾ ಒಳಗಡೆಯಿಂದ ಹಂತಹಂತವಾಗಿ ಜೀವ ಕಳೆದುಕೊಂಡು ಸೊರಗುತ್ತಿದ್ದಳು.

ಇನ್ನು, ಅವಳ ಅನಾರೋಗ್ಯ, ಅವಳ ಆಸೆ, ಗರ್ಭನಿರೋಧಕ ಗುಳಿಗೆಯ ಪಂಚವಾರ್ಷಿಕ ಯೋಜನೆಯ ನಂತರ ಕಾಡಿಬೇಡಿ ಪಡೆದ ಮಗುವಿನ ಬೇಕು-ಬೇಡಗಳು ಕೂಡ ಯಾವತ್ತಿಗೂ ಗಂಡನಿಗೆ ಸಂಬಂಧಪಡದ ವಿಷಯವೇ ಆಗಿತ್ತು. ಹೀಗೆ ಹನ್ನೆರಡು ವರ್ಷ ಸಂಸಾರವೆಂಬ ಅತೀ ಘೋರವಾದ ನರಕಸದೃಶ commitmentನ್ನು ನಿಲ್ಲಿಸಿ ಒಂದು ಬೆಳಿಗ್ಗೆ ತವರಿಗೆ ಬಂದುಬಿಟ್ಳು. ಹನ್ನೆರಡು ವರ್ಷದ ಹಿಂದೆ ನಡೆದ ಮದುವೆಯ ಮೊದಲ ದಿನದಿಂದ ಇಂದು ತೌರಿಗೆ ಬಂದ ದಿನದವರೆಗಿನ ಎಲ್ಲ ಘಟನೆಗಳನ್ನು ಬರೆದಿಟ್ಟಳು. ಅದು ಹತ್ತು ಸಂಪುಟಕ್ಕಾಗುವಷ್ಟು ಬೆಳೆದಿತ್ತು. ಅದರ ಆಯ್ದ ಹತ್ತನ್ನೆರಡು ಘಟನೆಗಳನ್ನು ಕಥೆಯಾಗಿಸಿ ಕಳಿಸಿದ್ದಕ್ಕೆ ಈ ಪ್ರಶಸ್ತಿ ಬಂದಿದೆ.

ಅದಕ್ಕೇ ಅಂದೆ, ಕಥೆಗೇನಾದರೂ ಜೀವವಿದ್ದಿದ್ದರೆ ಅದರ ಪಾಡು ಯಾರಿಗೂ ಬೇಡವಾದದ್ದು. ಇವತ್ತು ಈ ಸಮಾರಂಭಕ್ಕೆ ಅಲೆಕ್ಸಾ ಕಪ್ಪು ಬಣ್ಣದ ಕೆಂಪು ಬಾರ್ಡರಿನ ಸಣ್ಣ ಚೆಕ್ಸ್ ನ ಸೀರೆಯುಟ್ಟು ಅರ್ಧ ಮೊಳ ಮಲ್ಲಿಗೆ ಮುಡಿದು ಬಂದಿದ್ದಳು. ಒಳಗಡೆ ಹೇಳಲಾಗದ ಭಯ. ಅಷ್ಟೊಂದು ಜನರ ಮುಂದೆ ನಿಂತು ಮಾತನಾಡಬೇಕು. ಕಾಲೇಜಿನಲ್ಲಿ ಪಾಠ ಮಾಡಿದ್ದರೂ ಇಲ್ಲಿ ಮಾತನಾಡುವದಕ್ಕೆ ಧೈರ್ಯ ಮಾತ್ರವಲ್ಲ, ಸತ್ಯ ಹೇಳಬೇಕಾದ ಬದ್ಧತೆ, ಅದು ಬದುಕಿಗೆ ಕೊಡಬೇಕಾದ ಗೌರವ. ಆದರೆ ದೌರ್ಭಾಗ್ಯವೇನೆಂದರೆ ಅವಳ ಈ ಕಥೆಗಳು ಯಾಕಿಷ್ಟು ಕೊಳೆತ ಬದುಕಿನ ಕಥೆಯಾಯಿತು, ಅದಕ್ಕೆ ಯಾರೆಲ್ಲ ಕಾರಣೀಭೂತರೋ ಅವರೆಲ್ಲ ಮುಂದಿನ ಸಾಲಿನಲ್ಲಿಯೇ ಕೂತಿದ್ದಾರೆ.

ಹೀಗೆ ಕಾರ್ಯಕ್ರಮ ಸಾಗುತ್ತಿತ್ತು. ಕಾರ್ಯಕ್ರಮದ ಕೊನೆಯಲ್ಲಿ ವಿಚಿತ್ರವಾದ ಘಟನೆಯೊಂದು ಘಟಿಸಬಹುದಾದ ಯಾವ ಸೂಚನೆಯೂ ಇಲ್ಲದೇ ಎಲ್ಲರೂ ಆಕಳಿಸುತ್ತಾ, ತೂಕಡಿಸುತ್ತ ಬೋರಾದ ಭಾಷಣ, ಆತ್ಮರತಿ, ಸ್ವಯಂವಿಮರ್ಶೆಗಳನ್ನು ಕೇಳುತ್ತಾ ಕುಳಿತಿದ್ದರು. ಆದರೆ ಅಲ್ಲಿ ನಡೆದದ್ದು ಬೇರೆಯೇ. ಆ ಕಥೆಗಾರ್ತಿ ಅಲ್ಲಿದ್ದ ಎಲ್ಲವನ್ನು ಎಲ್ಲರನ್ನು ಬಿಟ್ಟು ಭವದ ಹಂಗಿಗೆ ಒಮ್ಮೆ ಮುಗುಳ್ನಕ್ಕು ತನ್ನ ಮಗಳ ಕೈಹಿಡಿದು ಸಮುದ್ರಗುಂಟ ಅಲೆಯನ್ನು ನೋಡುತ್ತ ದೂರ ದೂರ ಹೊರಟುಬಿಟ್ಟಳು. ಹೋಗಿದ್ದಕ್ಕೆ ಕಾರಣವೇ ಇವತ್ತು ಆಕೆ ಕಥೆಗಾರ್ತಿಯಾಗಿ ಪ್ರಶಸ್ತಿ ಪಡೆದುಕೊಳ್ಳುತ್ತಿರುವ ಈ ಪುಸ್ತಕದ ಕಥಾವಸ್ತು.

ಸಮಾರಂಭದ ಕೊನೆಯ ಘಟ್ಟದಲ್ಲಿ ಕಾರ್ಯಕ್ರಮದ ಸಂಚಾಲಕ ಮೈಕ್‌ನಲ್ಲಿ ಬಂದು ದೊಡ್ಡ ಬಾಂಬ್ ಒಂದನ್ನು ಎಸೆದುಬಿಟ್ಟರು. ‘ಪ್ರಶಸ್ತಿ ಪುರಸ್ಕೃತರು ಕಾರ್ಯಕ್ರಮಕ್ಕೆ ಬಂದು ಏನೋ ಕೆಲಸ ಅಂತ ಹೊರಟಿದ್ದು, ತಮ್ಮ ಭಾಷಣದ ಚಿಕ್ಕ ರೂಪವನ್ನು ನಮಗೆ ವಾಟ್ಸಾಪ್‌ನಲ್ಲಿ ಕಳಿಸಿದ್ದಾರೆ. ಅದನ್ನು ಅವರ ಅನುಪಸ್ಥಿತಿಯಲ್ಲಿ ಅವರ ಪತಿ ಓದಿಹೇಳುತ್ತಾರೆ’ ಎಂದರು.

ಇದಾವುದನ್ನೂ ನಿರೀಕ್ಷಿಸದ ಮತ್ತು messageನ್ನು ಅವರ whatsappನಲ್ಲೇ ಓದಿ ದಂಗಾಗಿ ಅದನ್ನು delete ಮಾಡು ಎಂದು ಕೇಳಿಕೊಂಡರೂ ಕೂಡಾ ಈಗ ತಾನು ಓದಬೇಕೆಂದರಲ್ಲ ಆತ ಎಂದು ಕಂಗಾಲಾಗಿ ಹೋಗಿದ್ದ. ಹೇಗೋ ಬೆವರುತ್ತ, ಸಾವರಿಸಿಕೊಂಡು ನಡುಗುವ ಧ್ವನಿಯಲ್ಲಿ ಓದಿದ- ‘ಎಲ್ಲರಿಗೂ ನಮಸ್ಕಾರ, ನನ್ನ ಕಥೆಗಳನ್ನು ಓದಿ ಪ್ರೀತಿಸಿದ್ದಕ್ಕೆ ನಾನು ಆಭಾರಿ. ಈಗ ನಾನು ನಿಮ್ಮ ಮುಂದೆ ಮಾತನಾಡಲು ಬಯಸುವದಿಲ್ಲ. ಕಾರಣ ನಿಮಗೆ ನಾನು ಕಥೆಗಾರ್ತಿಯಾದ ಬಗ್ಗೆ ಮತ್ತು ನನ್ನ ಕಥಾವಸ್ತುವಿನ ಕುರಿತು ಅರಿಯುವ ಇರಾದೆ. ಅದು ಬೇಡ, ಇದು ಕೇವಲ ನನ್ನ ಕಥೆ ಅಂದರೆ ಅದು ಅಷ್ಟು ಸರಿಯಲ್ಲ.

ಯಾಕೆಂದರೆ ಈ ಕಥೆಯ ಉಳಿದ ಪಾತ್ರಗಳು ಇಲ್ಲೇ ಕೂತಿವೆ. ಬಹುಶಃ ನಾನೊಬ್ಬಳೇ ಇದ್ದಿದ್ದರೆ ಈ ಕಥೆ ಹುಟ್ಟುತ್ತಿರಲಿಲ್ಲ. ನನಗಿಂತ ಜಾಸ್ತಿ ಇಲ್ಲಿ ಕುಳಿತಿರುವ ಪಾತ್ರಗಳೇ ಹೆಚ್ಚು ಈ ಕಥೆಗೆ. ಹಾಗಾಗಿ ಅವರದ್ದೇ ಕಥೆಯನ್ನು ಅವರ ಮುಂದೆ ನಾನು ಹೇಳುವದು ಪಾಪ ಅವರಿಗೂ ತುಂಬ ಮುಜುಗರ ತರಿಸಬಹುದು. ಯಾಕೆಂದರೆ ನನ್ನ ಮಾಜಿ ಪತಿ, ಅತ್ತೆ-ಮಾವ ಎಲ್ಲರೂ ತುಂಬ ಸಭ್ಯರು, ಸುಸಂಸ್ಕೃತರು, ಸಂಸ್ಕಾರವಂತರು.

ಹಾಗಾಗಿ ಅವರೇ ಅವರ ಕಥೆಗಳನ್ನು ಓದಲಿ. ಇನ್ನೂ ಒಂದು ಮುಖ್ಯ ವಿಚಾರ ಹೇಳಬೇಕು ನನಗೆ. ನನ್ನ ಹೆಸರು ಅಲೆಕ್ಸಾ ಅಲ್ಲ, ಆದರೆ ನನ್ನನ್ನು button ಒತ್ತಿ, command ಕೊಟ್ಟು, ಬೇಕೆಂದ ಕೆಲಸ ಮಾಡಿಸಿಕೊಳ್ಳುವ smart speaker with a sex organ sorry reproductive organ ಆಗಿ ಬದಲಾಯಿಸಿ ಬಳಸಿಕೊಂಡಿದೆ ಈ ಸಮಾಜ. ಹಾಗಾಗಿ ನನ್ನನ್ನು ಇನ್ನು ಎಲ್ಲಿಯೂ ಹುಡುಕುವ ಪ್ರಯತ್ನ ಬೇಡ. ನೀವು ಪುಸ್ತಕ ಓದಿ ಮುಗಿಸಿದ ಮೇಲೆ ನಿಮ್ಮ ಸುತ್ತ ನೂರಾರು ಅಲೆಕ್ಸಾರನ್ನು ಕಾಣುತ್ತಿರುವ ಅನುಭವ ಆದರೆ ನಿಮ್ಮಲ್ಲಿ ಮನುಷ್ಯತ್ವ ಇದೆ ಮತ್ತು ನೀವು ಮಾನವರಿಂದ ಮನುಷ್ಯರಾಗುತ್ತಿದ್ದೀರಿ ಎಂದು ತಿಳಿದುಕೊಳ್ಳಿ.– ಇಂತಿ ನಿಮ್ಮ ಇಳಾ’

‍ಲೇಖಕರು Avadhi

May 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. anamika

    Really heart-touching story. This shouldn’t happen to anyone in real life. If this happens, such a sadist husband should be punished ruthlessly. After reading this story we need to change our mindset and have to support those who are suffering. A man should understand the feeling of women, who believed him and gave everything to him.

    ಪ್ರತಿಕ್ರಿಯೆ
  2. Raghav

    This is amazing writing with the reality in society.. waiting for more of your writings.. keep up the good work

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: