ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕರೋನಾ-ಪ್ರೇಮ

ಡಾ ಮುಮ್ತಾಜ್ ಬೇಗಂ

ನಾನು ಅವನನ್ನು ತುಂಬಾ ಪ್ರೇಮಿಸುತ್ತೇನೆ
ಅವನು ನನ್ನನ್ನು…!
ಇಬ್ಬರು ಭೇಟಿಯಾಗಲು
ಎಷ್ಟು ಸಂದರ್ಭಗಳು
ಒದಗಿದವು
ನೂರಾರು ಜನರ ನಡುವೆ
ಅವನು ನನ್ನನ್ನು, ನಾನು ಅವನನ್ನು
ಕಾಣಲು ಕಾತರಿಸಿದವು ಕಂಗಳು

ಜೀವನ ಸಾಗರದಲಿ
ಅನತಿ ದೂರದಲ್ಲಿ ಕೈಕಾಲು
ಬಡಿಯುತ್ತಲೇ ಇದ್ದೆವು, ಒಬ್ಬರ ಕೈ
ಮತ್ತೊಬ್ಬರಿಗೆ ಸಿಗಬಹುದೆಂಬ ನಿರೀಕ್ಷೆಯಲಿ
ಮುಖಾಮುಖಿ ಭೇಟಿ
ಆಗಲೇ ಬೇಕೆಂದು
ನಿಶ್ಚಯವಾದಾಗಲೊಮ್ಮೊಮ್ಮೆ
ಕರೋನಾ ಕಂಟಕ ಕಾಡುತ್ತಲೇ ಇತ್ತು.
ಬದುಕಿನ ಅನಿಶ್ಚಿತತೆಯ
ದೋಣಿ ತೇಲುತ್ತಲೇ ಸಾಗಿತ್ತು.

ಅವನನ್ನು ನೋಡಿ ಎಡಗಣ್ಣಿನ
ಕೆಳಗೆ ಗಲ್ಲದ ಮೇಲೆ ಮುತ್ತಿಟ್ಟು
ಭಾವ ತೀವ್ರತೆಯಲಿ ಅಪ್ಪಿಕೊಳ್ಳ
ಬಯಕೆ ಹತ್ತಿರವಾಗಿತ್ತು

ಅದರ, ನಾಭಿಯ ಮುದ್ದಿಸಿ
ಕುಚಗಳ ಬೊಗಸೆಯಲಿಡಿದು
ಭಾವ ಮಿಲನದಲೊಂದಾಗುವ
ಕೊಂಚವೇ ಆಸೆ ಅವನಲ್ಲೂ ಇತ್ತು
ನನ್ನದೊ ಅತೀವ ಪ್ರೀತಿ
ಅವನದ್ದೊ ನಿಷ್ಕಲ್ಮಷ ಕಾಳಜಿ

ಕಾಡುತ್ತಿರವ ಅವನು, ಅವನೊಳಗೆ ನಾನು
ಭುವಿ..ಭಾನು..
ಉಸಿರಿಗೆ ಉಸಿರಾಗಬೇಕು
ಅಂದುಕೊಂಡಾಗಲೇ
ಹೇಗೊ ನಾನು ಪಾಸಿಟಿವ್
ಉಸಿರಿಗಾಗಿ ಹೋರಾಡುತ್ತಲೇ
ಹೊರಟು ನಿಂತಿರುವೆ.

ನಾನಿಲ್ಲದಿರುವಾಗಲೂ
ಅವನ ಉಸಿರಲ್ಲಿ ಉಸಿರಾಗಿ
ಅವನಿರುವವರೆಗೆ  ಪ್ರೇಮ
ಜೀವಂತ ಉಸಿರಾಡುತ್ತಲೇ ಇರುತ್ತದೆ..!
ಏಕೆಂದರೆ
ನಾನು ಅವನನ್ನು ತುಂಬಾ ಪ್ರೇಮಿಸುತ್ತೇನೆ
ಅವನು ನನ್ನನ್ನು…!

‍ಲೇಖಕರು Avadhi

20 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading